ಮುಖಪುಟ ಲೇಖನ-1
- ಡಾ. ಎಂ.ಆರ್. ವೆಂಕಟೇಶ್, ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ
2026ರ ಏಪ್ರಿಲ್ 2. ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಕೇಂದ್ರ ಚುನಾವಣಾ ಆಯೋಗದ ವಿಶೇಷ ಸಮಗ್ರ ಪರಿಷ್ಕರಣೆಗಾಗಿ (ಎಸ್ಐಆರ್) ತೆರಳಿದ್ದ ಏಳು ನ್ಯಾಯಾಂಗ ಅಧಿಕಾರಿಗಳನ್ನು ಅಲ್ಲಿನ ಜನರು ಒಂಬತ್ತು ಗಂಟೆಗಳಿಗೂ ಹೆಚ್ಚುಕಾಲ ಒತ್ತೆಯಾಳುಗಳಾಗಿ ಇರಿಸಿದ್ದರು. ಮತಪತ್ರದಿಂದ ತಮ್ಮ ಹೆಸರುಗಳನ್ನು ಅಳಿಸಿಹಾಕಲಾಗಿದೆ ಎಂದು ಪ್ರತಿಭಟಿಸಿದ ಜನರು ಅಧಿಕಾರಿಗಳಿಗೆ ಘೆರಾವ್ ಹಾಕಿದ್ದರು. ಅಧಿಕಾರಿಗಳನ್ನು ಕರೆದೊಯ್ಯಲು ಬಂದ ಭದ್ರತಾಪಡೆಗಳ ವಾಹನಗಳ ಮೇಲೂ ದಾಳಿ ಮಾಡಲಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್, ಇಂತಹ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿತ್ತು.
ಇದು ಎಸ್ಐಆರ್ ಕುರಿತು ಪಶ್ಚಿಮ ಬಂಗಾಳದ ಘಟನೆಯಾದರೆ, ಇದೀಗ ಕರ್ನಾಟಕದಲ್ಲಿ ಬೇರೊಂದು ಸ್ವರೂಪದಲ್ಲಿ ಎಸ್ಐಆರ್ ಕದನ ಅನಾವರಣಗೊಳ್ಳುತ್ತಿದೆ. ಭಾರತೀಯ ಚುನಾವಣಾ ಆಯೋಗವು ಕರ್ನಾಟಕದಲ್ಲಿ ಆರಂಭಿಸಿರುವ ಮತದಾರರ ಪಟ್ಟಿಯ ಪರಿಷ್ಕರಣೆ, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಮೂಲಭೂತ ಹಕ್ಕಲ್ಲ, ಕಾನೂನಾತ್ಮಕ ಅವಕಾಶ
ಕರ್ನಾಟಕದ ಎಸ್ಐಆರ್ ಪ್ರಕ್ರಿಯೆಯ ಆಳಕ್ಕೆ ಇಳಿಯುವ ಮುನ್ನ, ಮತದಾನದ ಹಕ್ಕಿನ ಕುರಿತಾದ ಒಂದು ಪ್ರಮುಖ ತಪ್ಪು ಕಲ್ಪನೆಯನ್ನು ನಿವಾರಿಸಬೇಕಿದೆ. ಸಾರ್ವಜನಿಕ ವಲಯದಲ್ಲಿ ಹಾಗೂ ಕೆಲವೊಮ್ಮೆ ರಾಜಕೀಯ ವೇದಿಕೆಗಳಲ್ಲಿ ‘ಮತದಾನ ಮಾಡುವುದು ನನ್ನ ಮೂಲಭೂತ ಹಕ್ಕು’ (Fundamental Right) ಎಂದು ಪ್ರತಿಪಾದಿಸುವುದನ್ನು ಕೇಳಿರುತ್ತೇವೆ. ಭಾವನಾತ್ಮಕವಾಗಿ ಈ ಮಾತನ್ನು ಸ್ವೀಕರಿಸಲು ಅಡ್ಡಿಯಿಲ್ಲ. ಆದರೆ, ಸಾಂವಿಧಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ಇದು ಸಂಪೂರ್ಣ ತಪ್ಪು.
ಭಾರತೀಯ ಸಂವಿಧಾನದ ‘ಭಾಗ-3’ರಲ್ಲಿ ಉಲ್ಲೇಖಿಸಿರುವ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಮತದಾನದ ಹಕ್ಕು ಬರುವುದಿಲ್ಲ. ಬದಲಾಗಿ, ಇದು ಸಂವಿಧಾನದ 326ನೇ ವಿಧಿಯ ಅಡಿಯಲ್ಲಿ ಹಾಗೂ ‘ಪ್ರಜಾಪ್ರತಿನಿಧಿ ಕಾಯ್ದೆ 1950 ಮತ್ತು 1951’ರ ಅನ್ವಯ ನೀಡಲಾದ ‘ಶಾಸನಬದ್ಧ ಹಕ್ಕು’ ಅಥವಾ ‘ಕಾನೂನಾತ್ಮಕ ಹಕ್ಕು’. 18 ವರ್ಷ ಮೇಲ್ಪಟ್ಟ, ಕಾನೂನಿನಿಂದ ಅನರ್ಹಗೊಳ್ಳದ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಚುನಾವಣಾ ಆಯೋಗವು ನೀಡುವ ಅವಕಾಶವಿದು.
ಸಂವಿಧಾನ ರಚನಾಸಭೆಯಲ್ಲಿ ಈ ಕುರಿತು ಅತ್ಯಂತ ಗಂಭೀರ ಚರ್ಚೆಗಳು ನಡೆದಿದ್ದವು. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ನೇತೃತ್ವದ ಮೂಲಭೂತ ಹಕ್ಕುಗಳ ಸಲಹಾ ಸಮಿತಿಯು, ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು (Universal Adult Suffrage) ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಸೇರಿಸಲು ನಿರಾಕರಿಸಿತು. ಸಮಿತಿಯ ಪ್ರಮುಖ ಸದಸ್ಯರಾಗಿದ್ದ ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಮತ್ತು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರು, “ಮತದಾನ ಎನ್ನುವುದು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸುವ ಒಂದು ನಿಯಂತ್ರಿತ ಹಕ್ಕಾಗಬೇಕೇ ಹೊರತು, ಅದನ್ನು ನ್ಯಾಯಾಲಯದಲ್ಲಿ ಮೂಲಭೂತ ಹಕ್ಕೆಂದು ಸಾರ್ವಕಾಲಿಕವಾಗಿ ಪ್ರಶ್ನಿಸುವಂತಾಗಬಾರದು” ಎಂದು ವಾದಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾರ್ವತ್ರಿಕ ಮತದಾನದ ಹಕ್ಕನ್ನು ಬಲವಾಗಿ ಪ್ರತಿಪಾದಿಸಿದರಾದರೂ, ಅದನ್ನು ನಿಯಂತ್ರಿಸುವ ಅಧಿಕಾರ ಸಂಸತ್ತಿನ ಕಾನೂನುಗಳಿಗೆ ಒಳಪಟ್ಟಿರಬೇಕು ಎಂಬುದನ್ನು ಒಪ್ಪಿಕೊಂಡಿದ್ದರು. ಹೀಗಾಗಿಯೇ, ಮತದಾನದ ಹಕ್ಕು ಅರ್ಹರಿಗೆ ಮಾತ್ರ ಸಿಗಬೇಕಾದ ಶಾಸನಬದ್ಧ ಹಕ್ಕಾಗಿ ಉಳಿಯಿತು.
ಅನ್ಯರಾಜ್ಯಗಳಲ್ಲಿ ಎಸ್ಐಆರ್
ಕರ್ನಾಟಕದ ರಾಜಕೀಯ ಪಕ್ಷಗಳು ಎಸ್ಐಆರ್ ಪ್ರಕ್ರಿಯೆಯನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಲು ಇತರೆ ರಾಜ್ಯಗಳಲ್ಲಿ ನಡೆದಿರುವ ಬೆಳವಣಿಗೆಗಳೇ ಕಾರಣ. ಅಲ್ಲಿ ನಡೆದ ರಾಜಕೀಯ ಮೇಲಾಟಗಳು, ಗೊಂದಲಗಳು ಒಂದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯನ್ನು ಭಾರೀ ರಾಜಕೀಯ ಚರ್ಚೆಯ ವಿಷಯವಾಗಿಸಿದೆ.
ಕೇರಳದ ‘ನಕಲಿ ಮತದಾರರ’ ಬಿರುಗಾಳಿ: ಇತ್ತೀಚೆಗೆ ಕೇರಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ತೀವ್ರ ರಾಜಕೀಯ ವಿವಾದ ಮತ್ತು ಬಿಕ್ಕಟ್ಟುಗಳಿಗೆ ಕಾರಣವಾಗಿತ್ತು. ಚುನಾವಣಾ ಆಯೋಗವು ಕರಡುಪಟ್ಟಿಯಿಂದ ಸುಮಾರು 24 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟಾಗ ವಿವಾದ ಸೃಷ್ಟಿಯಾಯಿತು. ಅಂತಿಮವಾಗಿ 8.57 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಅಂತಿಮ ಪಟ್ಟಿಯಿಂದ ಜನಾಂಗೀಯವಾಗಿ ಅಳಿಸಿಹಾಕಲಾಯಿತು. ಹೆಸರುಗಳ ಸಾಮೂಹಿಕ ಅಳಿಸುವಿಕೆಯ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಯಿತು. ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡುವಂತೆ ಮತ್ತು ಕೈಬಿಟ್ಟವರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು. ಮತ್ತೊಂದೆಡೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು SIR ಒಟ್ಟಿಗೆ ನಡೆಸಿದ್ದರಿಂದ ತೀವ್ರ ಕೆಲಸದ ಒತ್ತಡ ಉಂಟಾಗಿತ್ತು. ಕಣ್ಣೂರಿನಲ್ಲಿ ಅನಿಶ್ ಜಾರ್ಜ್ ಎಂಬ ಮತಗಟ್ಟೆ ಅಧಿಕಾರಿ (BLO) ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಯಿತು. ಇದರಿಂದ ಆಕ್ರೋಶಗೊಂಡ ಅಧಿಕಾರಿಗಳ ಸಂಘಟನೆಗಳು ಕೆಲಸ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದವು. ಚುನಾವಣೆಯಲ್ಲಿ ಎಲ್ಡಿಎಫ್ ಸೋತು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೇರಿತು.
ಪಶ್ಚಿಮ ಬಂಗಾಳದ ಅಸ್ತಿತ್ವದ ಹೋರಾಟ: ಲೇಖನದ ಆರಂಭದಲ್ಲಿ ಉಲ್ಲೇಖಿಸಿದಂತೆ, ಬಂಗಾಳದಲ್ಲಿ ಪ್ರತಿಬಾರಿಯ ಎಸ್ಐಆರ್ ಕೂಡ ಒಂದು ಮಿನಿ – ಚುನಾವಣೆಯಂತೆಯೇ ನಡೆಯುತ್ತದೆ. ಈ ಮೊದಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಮತ್ತು ವಿರೋಧ ಪಕ್ಷ ಬಿಜೆಪಿಗಳ ನಡುವೆ ಮತದಾರರ ಸೇರ್ಪಡೆ – ಕಡಿತದ ವಿಚಾರದಲ್ಲಿ ರಕ್ತಪಾತಗಳೇ ನಡೆದಿದ್ದವು. ಬಾಂಗ್ಲಾದೇಶಿ ವಲಸಿಗರನ್ನು ಅಕ್ರಮವಾಗಿ ಪಟ್ಟಿಗೆ ಸೇರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದರೆ, ಕೇಂದ್ರಪಡೆಯನ್ನು ಬಳಸಿ ಅಲ್ಪಸಂಖ್ಯಾತರ ಹೆಸರು ತೆಗೆಯಲಾಗುತ್ತಿದೆ ಎಂದು ಟಿಎಂಸಿ ಆರೋಪಿಸಿತು. ಅಲ್ಲಿ ಆಯೋಗದ ಎಸ್ಐಆರ್ ಪ್ರಕ್ರಿಯೆಯು ನೂರಾರು ರಾಜಕೀಯ ಸಂಘರ್ಷಗಳಿಗೆ ಸಾಕ್ಷಿಯಾಯಿತು. ಇಲ್ಲಿ ಆಡಳಿತಾರೂಢ ಟಿಎಂಸಿ ಸೋಲುಂಡರೆ, ಆಶ್ಚರ್ಯಕರವೆಂಬಂತೆ ಬಿಜೆಪಿಯು ಸರಳ ಬಹುಮತದೊಂದಿಗೆ ಸರ್ಕಾರ ರಚಿಸಿತು.
ಬಿಹಾರದ ತಾಂತ್ರಿಕ ಶುದ್ಧೀಕರಣ: ಬಿಹಾರದಲ್ಲಿ ಎಸ್ಐಆರ್ ತುಸು ಭಿನ್ನವಾಗಿ ನಡೆಯಿತು. ಚುನಾವಣಾ ಆಯೋಗವು ಡಿಎಸ್ಇ (Demographically Similar Entries) ತಂತ್ರಾಂಶವನ್ನು ಬಳಸಿ, ರಾಜ್ಯಾದ್ಯಂತ ಇದ್ದ ಲಕ್ಷಾಂತರ ನಕಲಿ ಮತದಾರರನ್ನು ಪತ್ತೆಹಚ್ಚಿ ಡಿಲೀಟ್ ಮಾಡಿತು. ಆರಂಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ವೋಟ್ ಬ್ಯಾಂಕ್ ಕರಗುತ್ತಿದೆ ಎಂದು ಬೊಬ್ಬೆ ಹೊಡೆದರೂ, ಅಂತಿಮವಾಗಿ ಬಿಹಾರವು ದೇಶದಲ್ಲೇ ಅತ್ಯಂತ ಶುದ್ಧ ಮತದಾರರ ಪಟ್ಟಿಯನ್ನು ಹೊಂದುವಲ್ಲಿ ಯಶಸ್ವಿಯಾಯಿತು.
ಕರ್ನಾಟಕದಲ್ಲಿ ಎಸ್ಐಆರ್
ಎಸ್ಐಆರ್ನಲ್ಲಿ ಈಗ ಕರ್ನಾಟಕದ ಸರದಿ. ಚುನಾವಣಾ ಆಯೋಗವು ಕರ್ನಾಟಕದಲ್ಲಿ ಕೈಗೊಂಡಿರುವ ಎಸ್ಐಆರ್ ಪ್ರಕ್ರಿಯೆಯು ಕೇವಲ ಕಾಗದದ ಮೇಲಿನ ತಿದ್ದುಪಡಿಯಾಗಿ ಉಳಿದಿಲ್ಲ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಬಿಡುಗಡೆ ಮಾಡಿರುವ ಇತ್ತೀಚಿನ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯ ಅಂಕಿ – ಅಂಶಗಳು ಈ ಪ್ರಕ್ರಿಯೆಯ ಬೃಹತ್ ಸ್ವರೂಪವನ್ನು ತೆರೆದಿಡುತ್ತವೆ.
ಕರ್ನಾಟಕದಲ್ಲಿ ಪ್ರಸ್ತುತ ಅಂದಾಜು 5.52 ಕೋಟಿ (5,54,32,314) ಅರ್ಹ ಮತದಾರರಿದ್ದಾರೆ. ಇವರೆಲ್ಲರೂ ಎಸ್ಐಆರ್ ಪ್ರಕ್ರಿಯೆಗೆ ಒಳಪಡುತ್ತಿದ್ದಾರೆ. ಈಗಾಗಲೇ ಚುನಾವಣಾ ಆಯೋಗವು 59,050 ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ ಅವರಿಗೆ ತರಬೇತಿ ನೀಡಿದೆ. ಮತದಾರರ ಪಟ್ಟಿಯಲ್ಲಿರುವ ಎಲ್ಲ ಮತದಾರರೂ ಗಣತಿ ನಮೂನೆಯನ್ನು ಭರ್ತಿ ಮಾಡಿಕೊಡಬೇಕು. ಜೂನ್ 30ರಿಂದ ಆರಂಭವಾಗಿರುವ ಈ ಪ್ರಕ್ರಿಯೆ ಜುಲೈ 29ರವರೆಗೆ ಅಂದರೆ ಸರಿಯಾಗಿ ಒಂದು ತಿಂಗಳು ನಡೆಯುತ್ತದೆ. ಅಂದರೆ ಈ ಕಾರ್ಯ ಎಷ್ಟು ದೊಡ್ಡ ಮಟ್ಟದ್ದು ಮತ್ತು ಎಷ್ಟು ಸಂಕೀರ್ಣವಾದದ್ದು ಎನ್ನುವುದನ್ನು ನೋಡಬಹುದು.
ಈಗಾಗಲೇ ವಿವಿಧ ರಾಜ್ಯಗಳಲ್ಲಿನ ಅನುಭವದ ಆಧಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಎಸ್ಐಆರ್ ಅನ್ನು ಟೀಕಿಸಿದೆ. ಯಾವುದೇ ಮುನ್ಸೂಚನೆ ಇಲ್ಲದೆ, ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರು, ದಲಿತರು ಮತ್ತು ಬಡವರ್ಗದ ಜನವಸತಿ ಪ್ರದೇಶಗಳಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿದೆ; ಇದು ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಸಂಸ್ಥೆಗಳ ಪಿತೂರಿ ಎಂಬುದು ಕಾಂಗ್ರೆಸ್ ನಾಯಕರ ಆರೋಪ. ಬಿಎಲ್ಒಗಳು ಮನೆಮನೆಗೆ ಬರುವಾಗ ಆಡಳಿತ ಪಕ್ಷದ ಬೆಂಬಲಿಗರನ್ನು ಗುರುತಿಸಿ, ಸಣ್ಣಪುಟ್ಟ ತಾಂತ್ರಿಕ ಕಾರಣ ನೀಡಿ ಅವರನ್ನು ಪಟ್ಟಿಯಿಂದ ಹೊರಗಿಡಲಾಗುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಎಂದಿನಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ಎಸ್ಐಆರ್ ಅನ್ನು ಬೆಂಬಲಿಸಿದೆ. ಕಾಂಗ್ರೆಸ್ನ ಆರೋಪಗಳನ್ನು ತಳ್ಳಿಹಾಕಿರುವ ಮೈತ್ರಿಕೂಟ, ಕಾಂಗ್ರೆಸ್ ಪಕ್ಷವು ದಶಕಗಳಿಂದ ಅಕ್ರಮ ವಲಸಿಗರು ಮತ್ತು ನಕಲಿ ಮತದಾರರನ್ನು ಸೃಷ್ಟಿಸಿ ತನ್ನ ವೋಟ್ ಬ್ಯಾಂಕ್ ಭದ್ರಪಡಿಸಿಕೊಂಡಿತ್ತು; ಈಗ ಚುನಾವಣಾ ಆಯೋಗ ಪಟ್ಟಿಯನ್ನು ಶುದ್ಧೀಕರಿಸುತ್ತಿರುವಾಗ ಅವರಿಗೆ ನಡುಕ ಶುರುವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಮತದಾರರನ್ನು ಉಳಿಸಿಕೊಳ್ಳುವ ಕಸರತ್ತು: ಎಸ್ಐಆರ್ ಅನ್ನು ಬೆಂಬಲಿಸಿರುವ ಬಿಜೆಪಿ – ಜೆಡಿಎಸ್ ಮೈತ್ರಿಕೂಟವು ಸಹಜವಾಗಿಯೇ ಬೂತ್ ಮಟ್ಟದ ಏಜೆಂಟರನ್ನು (ಬಿಎಲ್ಎ) ನೇಮಿಸಿದೆ. ಎಸ್ಐಆರ್ ಅನ್ನು ದೂಷಿಸುತ್ತಿರುವ ಕಾಂಗ್ರೆಸ್ ಸಹ ಅನಿವಾರ್ಯವಾಗಿ ಈ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಚುನಾವಣಾ ಆಯೋಗದ ಬಿಎಲ್ಒಗಳು ಭೇಟಿ ನೀಡುವಾಗ ಪಕ್ಷದ ಬಿಎಲ್ಎಗಳು ಕಡ್ಡಾಯವಾಗಿ ಜೊತೆಗಿರಬೇಕು ಎಂದು ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ತಮ್ಮ ಬೆಂಬಲಿಗರ ಹೆಸರು ಡಿಲೀಟ್ ಆಗಿದ್ದರೆ, ತಕ್ಷಣವೇ ನಿಗದಿತ ನಮೂನೆ ಭರ್ತಿ ಮಾಡಿ ಮರುಸೇರ್ಪಡೆ ಮಾಡಲು ಶಾಸಕರು ವಿಶೇಷ ದಳಗಳನ್ನು ರಚಿಸಿಕೊಂಡಿದ್ದಾರೆ.
ಎಸ್ಐಆರ್ ನಡೆಯುವ ಇತರೆ ರಾಜ್ಯಗಳು
ಕರ್ನಾಟಕದೊಂದಿಗೆ ಜೂನ್ 30ರಿಂದಲೇ ನಿಖರವಾಗಿ ಒಟ್ಟಿಗೆ ಎಸ್ಐಆರ್ ಪ್ರಕ್ರಿಯೆಯನ್ನು ಆರಂಭಿಸಿರುವ ರಾಜ್ಯಗಳೆಂದರೆ ಮಹಾರಾಷ್ಟ್ರ, ಜಾರ್ಖಂಡ್, ಮೇಘಾಲಯ ಮತ್ತು ಕೇಂದ್ರಾಡಳಿತ ಪ್ರದೇಶವಾದ ದೆಹಲಿ (NCT). ಈ ಎಲ್ಲಾ ಐದು ಪ್ರದೇಶಗಳಲ್ಲಿ ಒಂದೇ ರೀತಿಯ ಚುನಾವಣಾ ವೇಳಾಪಟ್ಟಿಯನ್ನು ಜಾರಿಗೊಳಿಸಲಾಗಿದೆ. ಇದನ್ನು ಹೊರತುಪಡಿಸಿ ಇಡೀ ವರ್ಷ ದೇಶಾದ್ಯಂತ ವಿವಿಧ ಹಂತಗಳಲ್ಲಿ ಎಸ್ಐಆರ್ ಜಾರಿಯಾಗುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ, ಉತ್ತರದ ಪಂಜಾಬ್, ಹರಿಯಾಣ ಮತ್ತು ಉತ್ತರಾಖಂಡ ಹಾಗೂ ಪೂರ್ವದ ಒಡಿಶಾ ರಾಜ್ಯಗಳು ಈ ಜಂಟಿ ಅಭಿಯಾನದಲ್ಲಿ ಭಾಗಿಯಾಗಿವೆ. ಈಶಾನ್ಯ ಭಾರತದ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಾ ರಾಜ್ಯಗಳಲ್ಲೂ ಈ ಪರಿಷ್ಕರಣೆ ಚಾಲ್ತಿಯಲ್ಲಿದೆ. ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಕೂಡ ಈ ವ್ಯಾಪ್ತಿಗೆ ಒಳಪಟ್ಟಿವೆ. ಆದರೆ ಹವಾಮಾನ ವೈಪರೀತ್ಯ ಹಾಗೂ ಜನಗಣತಿಯ ಕಾರಣಗಳಿಂದಾಗಿ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳನ್ನು ಮಾತ್ರ ಸದ್ಯಕ್ಕೆ ಈ ಹಂತದಿಂದ ಹೊರಗಿಡಲಾಗಿದೆ.
ರಾಜಕೀಯ ಪಕ್ಷಗಳ ಆಶ್ರಯ ನಷ್ಟ
ಎಸ್ಐಆರ್ ಎನ್ನುವುದು ಪ್ರಜಾಪ್ರಭುತ್ವದಲ್ಲಿ ಅತಿ ಅವಶ್ಯಕ ಹೆಜ್ಜೆ. ಆದರೆ ಇದರಿಂದ ಅನೇಕ ಲಾಭಗಳೂ ಇವೆ. ಎಸ್ಐಆರ್ನಿಂದ ಮತಪತ್ರ ಶುದ್ಧವಾಗುತ್ತದೆ. ಅಂದರೆ ಅನೇಕ ರೀತಿಯ ಲೋಪಗಳು ಸರಿಯಾಗುತ್ತವೆ. ಮುಖ್ಯವಾಗಿ, ಹೊರದೇಶಗಳಿಂದ ಗಡಿ ನುಸುಳಿ ಆಗಮಿಸಿರುವವರೂ ಮತದಾನದ ಗುರುತಿನ ಚೀಟಿ ಪಡೆದಿರುವುದು ದೊಡ್ಡ ದೋಷ. ಪಶ್ಚಿಮ ಬಂಗಾಳವೂ ಸೇರಿದಂತೆ ಅನೇಕ ರಾಜ್ಯಗಳ ರಾಜಕೀಯ ಪಕ್ಷಗಳು ಗೆಲ್ಲಲು ಶತಾಯಗತಾಯ ಪ್ರಯತ್ನಿಸುತ್ತಿರುತ್ತವೆ. ಈ ಸಂದರ್ಭದಲ್ಲಿ ಕೆಲವು ಕ್ಷೇತ್ರಗಳಲ್ಲಿ ಐದಾರು ಸಾವಿರ ಮತಗಳ ಕೊರತೆ ಆಗುವುದಿದ್ದರೆ ಅಷ್ಟರ ಮಟ್ಟಿಗೆ ಅಕ್ರಮ ನುಸುಳುಕೋರರಿಗೂ ಮತದಾರರ ಗುರುತಿನ ಚೀಟಿ ನೀಡಿರುತ್ತವೆ. ತಮ್ಮ ಪಕ್ಷದವರ ಮಾಲೀಕತ್ವದ ಮನೆಯೊಂದರ ವಿಳಾಸವನ್ನೇ ನೀಡಿ ನೂರಾರು ಹೆಸರುಗಳನ್ನು ಸೇರಿಸಿದ ಉದಾಹರಣೆಯಿದೆ. ಈ ‘ಉಪಕಾರ’ ಒಂದೇ ಚುನಾವಣೆಗೆ ಮುಗಿದರೆ ಏನೂ ತೊಂದರೆ ಇಲ್ಲ. ಆದರೆ ಹೀಗೆ ಸಗಟು ಪ್ರಮಾಣದಲ್ಲಿ ಸಿಗುವ ಮತಗಳನ್ನು ಕಳೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಇಂತಹ ಮತದಾರರನ್ನು ತಮ್ಮ ಕ್ಷೇತ್ರದಲ್ಲೇ ಅಕ್ರಮ ಗುಡಿಸಲು, ಶೆಡ್ ನಿರ್ಮಿಸಿಕೊಂಡು ವಾಸಿಸಲು ಅವಕಾಶ ನೀಡಲಾಗುತ್ತದೆ. ಹೀಗೆಯೇ ಆ ಗುಂಪಿನ ಜನಸಂಖ್ಯೆ ಹೆಚ್ಚಾಗುತ್ತಾ ಅದೊಂದು ಪ್ರಬಲ ಸಮುದಾಯವಾಗುತ್ತದೆ. ಈ ಗುಂಪನ್ನು ಸಮಾಧಾನಪಡಿಸಲು ರಾಜಕಾರಣಿಗಳು ಮುಂದಾಗಬೇಕಾಗುತ್ತದೆ. ಅವರ ಬೇಕುಬೇಡಗಳನ್ನು ನೋಡಿಕೊಳ್ಳುವುದರಲ್ಲೇ ಮುಳುಗಿ ನಿಜವಾದ ಅಭಿವೃದ್ಧಿ ಮರೀಚಿಕೆಯಾಗುತ್ತದೆ. ಎಸ್ಐಆರ್ ಕಾರಣಕ್ಕೆ ಇಂತಹ ಅಕ್ರಮ ವಲಸಿಗರು ಮತದಾನದಿಂದ ವಂಚಿತರಾದರೆ, ಮೊದಲನೆಯದಾಗಿ ದೇಶದ ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಗುರುತಿಸಿ ಹೊರಗಟ್ಟಲು ಒಂದು ಸಾಧನವಾಗುತ್ತದೆ. ಎರಡನೆಯದಾಗಿ, ಅವರಿಂದ ಯಾವುದೇ ಚುನಾವಣಾ ಲಾಭವಿಲ್ಲ ಎನ್ನುವುದು ತಿಳಿದರೆ ರಾಜಕೀಯ ಪಕ್ಷಗಳು ಅವರನ್ನು ಬೆಂಬಲಿಸುವುದನ್ನು ಕಡಿಮೆ ಮಾಡುತ್ತವೆ.
ಮತಪ್ರಮಾಣ ಏರಿಕೆ ಖಚಿತ
ಎಸ್ಐಆರ್ನಿಂದ ಉಂಟಾಗಿರುವ ಗೋಚರಯುತ ಪರಿಣಾಮವೆಂದರೆ ಮತದಾನ ಪ್ರಮಾಣದ ಏರಿಕೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಮತದಾನ, ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನ ಎನ್ನುವುದು ಪ್ರತಿ ಚುನಾವಣೆಯಲ್ಲೂ ಕೇಳಿಬರುವ ಮಾತು. ನಗರ ಪ್ರದೇಶದಲ್ಲಿರುವವರಿಗೆ ಜವಾಬ್ದಾರಿ ಇಲ್ಲ, ಅವರೆಲ್ಲ ಪ್ರವಾಸ ಹೋಗುತ್ತಾರೆ, ಮತಗಟ್ಟೆಗೆ ಬರುವುದಿಲ್ಲ… ಹೀಗೆ ಹೇಳಲಾಗುತ್ತದೆ. ಇವುಗಳಲ್ಲಿ ಕೆಲವು ಸತ್ಯಾಂಶ ಇದೆಯಾದರೂ ಅದೇ ಸತ್ಯವಲ್ಲ. ನಗರ ಪ್ರದೇಶಗಳಿಗೆ ಆಗಮಿಸಿರುವ ಬಹುತೇಕರು ಯಾವುದಾದರೂ ಗ್ರಾಮದಿಂದಲೇ ಬಂದವರಾಗಿರುತ್ತಾರೆ. ಅವರಿಗೆ ಗ್ರಾಮದಲ್ಲೂ ಮತ ಇರುತ್ತದೆ. ನಗರದಲ್ಲಿದ್ದಾಗ ವಿಳಾಸ ದಾಖಲೆಗೆ, ಸ್ಥಳೀಯ ರಾಜಕಾರಣಿಗಳು ಗೌರವ ಕೊಡಲಿ ಎಂಬ ಕಾರಣಕ್ಕೆ, ಸರ್ಕಾರದ ಸೌಲಭ್ಯ ಪಡೆಯಲು ನಗರದಲ್ಲೂ ಮತದಾರರ ಚೀಟಿ ಹೊಂದಿರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಆಗಮಿಸಿ ಮತ ಚಲಾಯಿಸುವಂತೆ ಗ್ರಾಮಗಳಿಂದ ಒತ್ತಡ ಹೆಚ್ಚಾಗುತ್ತದೆ. ಅನೇಕ ರಾಜಕೀಯ ಪಕ್ಷಗಳು ಗ್ರಾಮಗಳಿಗೆ ತೆರಳಲು ‘ಪ್ರಯಾಣ ಭತ್ಯೆ’ ಜೊತೆಗೆ ವಾಹನಗಳನ್ನೇ ಕಳಿಸುತ್ತಾರೆ. ಹೀಗೆ ಅವರೆಲ್ಲರೂ ಗ್ರಾಮಗಳಿಗೆ ತೆರಳಿ ಮತ ಚಲಾಯಿಸುವುದರಿಂದ ನಗರ ಪ್ರದೇಶದಲ್ಲಿರುವ ಅವರ ಹೆಸರಿನ ಮತ ಚಲಾವಣೆ ಆಗದೆ ಉಳಿಯುತ್ತದೆ, ನಗರ ಪ್ರದೇಶದ ಮತಪ್ರಮಾಣ ಕುಸಿಯಲು ಕಾರಣವಾಗುತ್ತದೆ. ಎಸ್ಐಆರ್ನಿಂದ ಈ ರೀತಿ ನಕಲಿ ಹೆಸರುಗಳು ಅಳಿಸಲ್ಪಡುತ್ತವೆ. ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ಚುನಾವಣೆಯೇ ಇದಕ್ಕೆ ಜ್ವಲಂತ ಸಾಕ್ಷಿ. 2021ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಶೇ.73.63 ಮತದಾನವಾಗಿತ್ತು. ಆದರೆ ಈ ಬಾರಿ ಎಸ್ಐಆರ್ ನಂತರ 2026ರಲ್ಲಿ ನಡೆದ ಚುನಾವಣೆಯಲ್ಲಿ 81.15 ಮತದಾನವಾಯಿತು. ಒಟ್ಟು ಮತ ಚಲಾಯಿಸಿದವರ ಪ್ರಮಾಣದಲ್ಲೇನೂ ಭಾರೀ ಏರಿಕೆ ಆಗಿರಲಿಲ್ಲ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ ಕೇವಲ 21.67 ಲಕ್ಷ (ಶೇ.3.7) ಹೆಚ್ಚಾಗಿತ್ತು. ಆದರೆ 2021ರ ಮತದಾರರ ಪಟ್ಟಿಯಲ್ಲಿದ್ದ 57 ಲಕ್ಷ ಹೆಸರುಗಳು ಎಸ್ಐಆರ್ನಲ್ಲಿ ಡಿಲೀಟ್ ಆಗಿದ್ದವು. ಎರಡು ಕಡೆ ಇದ್ದ ಹೆಸರುಗಳಲ್ಲಿ ಒಂದು ಡಿಲೀಟ್ ಆಗಿದ್ದರಿಂದ ಈ ಪ್ರಮಾಣದ ಏರಿಕೆ ಕಂಡಿತು. ಕರ್ನಾಟಕದಲ್ಲೂ ಸರಿಯಾದ ರೀತಿಯಲ್ಲಿ ಎಸ್ಐಆರ್ ನಡೆದರೆ ಮುಂಬರುವ 2028ರ ಚುನಾವಣೆಯಲ್ಲಿ ಮತಪ್ರಮಾಣ ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ತಂತ್ರಜ್ಞಾನ ಅಡ್ಡಿಯಾಗದಿರಲಿ
ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಮತ್ತು ಜನಸ್ನೇಹಿಯಾಗಿಸಲು ಸತತ ಪ್ರಯತ್ನಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಆಯೋಗವು ಆನ್ಲೈನ್ ಅರ್ಜಿಗಳು ಮತ್ತು ಆಪ್ಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ, ನಮ್ಮ ಸಮಾಜದಲ್ಲಿನ ಗ್ರಾಮೀಣ ಜನತೆ, ಅಲೆಮಾರಿ ಸಮುದಾಯಗಳು, ಹಿಂದುಳಿದ ವರ್ಗದವರು, ಅನಕ್ಷರಸ್ಥರು ಹಾಗೂ ಹಿರಿಯ ನಾಗರಿಕರು ಸಂಪೂರ್ಣವಾಗಿ ತಂತ್ರಜ್ಞಾನ ಸ್ನೇಹಿಯಾಗಿರುವುದಿಲ್ಲ ಎನ್ನುವ ವಾಸ್ತವವನ್ನು ವ್ಯವಸ್ಥೆ ಮರೆಯಬಾರದು.
ಕೇವಲ ತಂತ್ರಜ್ಞಾನದ ಅರಿವಿಲ್ಲ ಅಥವಾ ಸ್ಮಾರ್ಟ್ ಫೋನ್ ಬಳಸಲು ಬರುವುದಿಲ್ಲ ಎಂಬ ಕಾರಣಕ್ಕೆ ಯಾವುದೇ ಅರ್ಹ ಪ್ರಜೆ ಮತದಾನದ ಅವಕಾಶದಿಂದ ಹೊರಗುಳಿಯುವಂತಾಗಬಾರದು. ಹೀಗಾಗಿ, ತಂತ್ರಜ್ಞಾನದಿಂದ ದೂರವಿರುವ ಈ ಜನರಿಗೆ ನೇರವಾಗಿ ಮತ್ತು ತಾಳ್ಮೆಯಿಂದ ಸ್ಪಂದಿಸಲು ಬೂತ್ ಮಟ್ಟದ ಅಧಿಕಾರಿಗಳಿಗೆ ಹಾಗೂ ಇತರೆ ಚುನಾವಣಾ ಸಿಬ್ಬಂದಿಗೆ ಆಯೋಗವು ವಿಶೇಷ ತರಬೇತಿ ನೀಡುವ ಅಗತ್ಯವಿದೆ. ಪಂಚಾಯತಿ, ವಾರ್ಡ್ ಮಟ್ಟದಲ್ಲಿ 49,320 ಸಹಾಯಕ ಕೇಂದ್ರಗಳ, ಸಹಾಯವಾಣಿಗಳ ಸ್ಥಾಪನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದರು. ಈ ವ್ಯವಸ್ಥೆ ಪೂರ್ಣರೂಪದಲ್ಲಿ ಕಾರ್ಯರೂಪಕ್ಕೆ ಬರಬೇಕಿದೆ. ಡಿಜಿಟಲ್ ಜ್ಞಾನವಿಲ್ಲದ ಸಾಮಾನ್ಯ ಜನರನ್ನು ಖುದ್ದಾಗಿ ಭೇಟಿಯಾಗಿ, ನಮೂನೆಗಳನ್ನು ಭರ್ತಿ ಮಾಡಲು ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಲು ಬಿಎಲ್ಒಗಳು ಸಂಪೂರ್ಣ ಸಹಕಾರ ನೀಡಬೇಕು. ಕಟ್ಟಕಡೆಯ ವ್ಯಕ್ತಿಯೂ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಒಳಗೊಂಡಾಗ ಮಾತ್ರ ಆಯೋಗದ ಪರಿಷ್ಕರಣಾ ಉದ್ದೇಶ ನೂರಕ್ಕೆ ನೂರರಷ್ಟು ಯಶಸ್ವಿಯಾಗುತ್ತದೆ.
ಪ್ರಜಾಪ್ರಭುತ್ವದ ಶುದ್ಧೀಕರಣ
ರಾಜಕೀಯ ಪಕ್ಷಗಳು ತಮ್ಮ ವೋಟ್ ಬ್ಯಾಂಕ್ ದೃಷ್ಟಿಯಿಂದ ಎಸ್ಐಆರ್ ಅನ್ನು ಟೀಕಿಸಬಹುದು ಅಥವಾ ಸ್ವಾಗತಿಸಬಹುದು. ಆದರೆ ಒಂದು ವಿಶಾಲ ದೃಷ್ಟಿಕೋನದಲ್ಲಿ ನೋಡಿದಾಗ, ಎಸ್ಐಆರ್ ಎನ್ನುವುದು ಕೇವಲ ಹೆಸರುಗಳ ಸೇರ್ಪಡೆ ಅಥವಾ ಅಳಿಸುವಿಕೆಯ ಪ್ರಕ್ರಿಯೆಯಲ್ಲ; ಅದೊಂದು ಪ್ರಜಾಪ್ರಭುತ್ವದ ಶುದ್ಧೀಕರಣ ಯಜ್ಞ.
ಪ್ರಜಾಪ್ರಭುತ್ವದ ಉಳಿವು ಮತ್ತು ಅಸ್ತಿತ್ವಕ್ಕೆ ‘ಚುನಾವಣೆ’ಯೇ ಅಂತಿಮ ಆಧಾರ. ಆ ಚುನಾವಣೆಯು ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯಬೇಕಾದರೆ ‘ಮತದಾರರ ಪಟ್ಟಿ’ಯೇ ಅದರ ಬುನಾದಿ. ತಳಪಾಯವಾದ ಮತದಾರರ ಪಟ್ಟಿಯೇ ಅಶುದ್ಧವಾಗಿದ್ದರೆ, ನಕಲಿ ಹೆಸರುಗಳಿಂದ, ಮೃತರ ಹೆಸರುಗಳಿಂದ ತುಂಬಿಹೋಗಿದ್ದರೆ ಅದರ ಆಧಾರದ ಮೇಲೆ ನಡೆಯುವ ಚುನಾವಣೆ ಎಂದಿಗೂ ನ್ಯಾಯಸಮ್ಮತವಾಗಿರಲು ಸಾಧ್ಯವಿಲ್ಲ. ಅಶುದ್ಧ ಚುನಾವಣೆಯಿಂದ ಆಯ್ಕೆಯಾಗುವ ಸರ್ಕಾರ ಮತ್ತು ಆ ಮೂಲಕ ರೂಪುಗೊಳ್ಳುವ ಪ್ರಜಾಪ್ರಭುತ್ವವೂ ಶುದ್ಧವಾಗಿರಲು ಸಾಧ್ಯವಿಲ್ಲ.
ಮತದಾನ ಎನ್ನುವುದು 18 ವರ್ಷ ತುಂಬಿದ, ದೇಶದ ಏಳಿಗೆಯ ಬಗ್ಗೆ ಕಾಳಜಿ ಇರುವ ನೈಜ ಪ್ರಜೆಗೆ ಸಂವಿಧಾನ ಮತ್ತು ಕಾನೂನು ನೀಡಿರುವ ಪವಿತ್ರ ಅವಕಾಶ. ಆ ಅವಕಾಶವನ್ನು ಅರ್ಹರಿಗೆ ಮಾತ್ರ ನಿಖರವಾಗಿ ತಲುಪಿಸುವ ಮತ್ತು ಅನರ್ಹರನ್ನು ವ್ಯವಸ್ಥೆಯಿಂದ ಹೊರಗಿಡುವ ಎಸ್ಐಆರ್ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಆರೋಗ್ಯವನ್ನು ಕಾಪಾಡುವ ಸಂಜೀವಿನಿಯಾಗಿದೆ. ಪಕ್ಷಗಳ ರಾಜಕೀಯ ಲೆಕ್ಕಾಚಾರಗಳು ಏನೇ ಇರಲಿ, ದೋಷಪೂರಿತ ಹೆಸರುಗಳನ್ನು ಅಳಿಸಿಹಾಕುವ ಕರ್ನಾಟಕದ ಪ್ರಕ್ರಿಯೆಯು, ದೋಷಮುಕ್ತ ಮತದಾರರ ಪಟ್ಟಿಯೇ ಬಲಿಷ್ಠ ಭಾರತದ ನಿಜವಾದ ಶಕ್ತಿ ಎಂಬುದನ್ನು ನಿರೂಪಿಸಲಿದೆ. ಇದಕ್ಕಾಗಿ ಹೆಚ್ಚೆಚ್ಚು ಮತದಾರರು ಸಕ್ರಿಯವಾಗಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಗಿದೆ.
