ನಿಗದಿತ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಲು ಅವಕಾಶ; ನವೆಂಬರ್ 9ರಿಂದ ಸಂಪೂರ್ಣ ನಿಷೇಧ ಮತ್ತೆ ಜಾರಿ
ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ (ಎನ್ಸಿಆರ್) ನವೆಂಬರ್ 7 ಮತ್ತು 8ರಂದು ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದರೆ, ನಿಗದಿತ ಸಮಯದಲ್ಲಿ ಮತ್ತು ನ್ಯಾಯಾಲಯ ವಿಧಿಸಿರುವ ನಿಯಮಗಳ ಪ್ರಕಾರ ಮಾತ್ರ ಪಟಾಕಿ ಸಿಡಿಸಬೇಕು ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 29ರಂದು ಈ ಆದೇಶ ನೀಡಿದೆ. ಇದರ ಪ್ರಕಾರ, ನವೆಂಬರ್ 7 ಮತ್ತು 8ರಂದು ಬೆಳಗ್ಗೆ 6ರಿಂದ 7ರವರೆಗೆ ಹಾಗೂ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ. ನವೆಂಬರ್ 9ರಿಂದ ಪಟಾಕಿಗಳ ಮೇಲಿನ ಸಂಪೂರ್ಣ ನಿಷೇಧ ಮತ್ತೆ ಜಾರಿಗೆ ಬರಲಿದೆ.
ಪ್ರಮಾಣೀಕೃತ ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ-ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (CSIR-NEERI) ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ಪ್ರಮಾಣೀಕರಿಸಿದ ಹಸಿರು ಪಟಾಕಿಗಳನ್ನು ಮಾತ್ರ ತಯಾರಿಸಲು ಮತ್ತು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಪಟಾಕಿಗಳ ಪೆಟ್ಟಿಗೆಗಳು ಮುಚ್ಚಿದ ಸ್ಥಿತಿಯಲ್ಲಿರಬೇಕು. ಪ್ರತಿಯೊಂದು ಪೆಟ್ಟಿಗೆಯ ಮೇಲೂ ಉತ್ಪನ್ನಕ್ಕೆ ಸಂಬಂಧಿಸಿದ ಕ್ಯೂಆರ್ ಕೋಡ್ (QR Code) ಕಡ್ಡಾಯವಾಗಿರಬೇಕು. ಕ್ಯೂಆರ್ ಕೋಡ್ ಮೂಲಕ ತಯಾರಕರು ಮತ್ತು ಉತ್ಪನ್ನದ ಪ್ರಮಾಣೀಕರಣದ ವಿವರಗಳನ್ನು ಪರಿಶೀಲಿಸಬಹುದು.
ಸರಣಿಯಾಗಿ ಜೋಡಿಸಲಾದ ಪಟಾಕಿಗಳು (ಲಾಡಿ), ಬೇರಿಯಂ ಬಳಸಿದ ಪಟಾಕಿಗಳು ಹಾಗೂ ಅನುಮೋದನೆ ಪಡೆಯದ ಪಟಾಕಿಗಳ ತಯಾರಿಕೆ ಮತ್ತು ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಆನ್ಲೈನ್ ಮೂಲಕ ಪಟಾಕಿ ಮಾರಾಟಕ್ಕೂ ಅನುಮತಿ ಇಲ್ಲ. ಜಿಲ್ಲಾಡಳಿತ ಗುರುತಿಸಿದ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡಬೇಕು.
ಆಸ್ಪತ್ರೆಗಳ ಸುತ್ತ 300 ಮೀಟರ್ ವ್ಯಾಪ್ತಿಯಲ್ಲಿ ನಿಷೇಧ
ಆಸ್ಪತ್ರೆಗಳು, ನರ್ಸಿಂಗ್ ಹೋಮ್ಗಳು, ಆರೋಗ್ಯ ಕೇಂದ್ರಗಳು, ವೃದ್ಧಾಶ್ರಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ಅಧಿಸೂಚಿತ ಮೌನ ವಲಯಗಳ 300 ಮೀಟರ್ ವ್ಯಾಪ್ತಿಯಲ್ಲಿ ಪಟಾಕಿ ಸಿಡಿಸುವಂತಿಲ್ಲ. ಈ ಪ್ರದೇಶಗಳನ್ನು ಪಟಾಕಿ ನಿಷೇಧಿತ ವಲಯಗಳೆಂದು ಗುರುತಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ನಿಯಮಗಳ ಪಾಲನೆಗಾಗಿ ಪೊಲೀಸರು ವಿಶೇಷ ಗಸ್ತು ತಂಡಗಳನ್ನು ರಚಿಸಿ, ಪಟಾಕಿ ಮಾರಾಟದ ಸ್ಥಳಗಳಲ್ಲಿ ಪರಿಶೀಲನೆ ನಡೆಸಬೇಕು. ಅಕ್ರಮ ಅಥವಾ ಸಾಂಪ್ರದಾಯಿಕ ಪಟಾಕಿಗಳು ಕಂಡುಬಂದರೆ ಅವುಗಳನ್ನು ವಶಪಡಿಸಿಕೊಂಡು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ.
ಪಟಾಕಿಗಳ ಬಳಕೆಯಿಂದ ವಾಯು ಗುಣಮಟ್ಟದ ಮೇಲೆ ಉಂಟಾಗುವ ಪರಿಣಾಮವನ್ನು ನವೆಂಬರ್ 30ರವರೆಗೆ ಮೇಲ್ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆಯೂ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕ್ರಮಗಳ ವರದಿಯನ್ನು ಡಿಸೆಂಬರ್ 14ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
