ವೇದ ಶಿಕ್ಷಣ, ಸಾಮಾಜಿಕ ಸುಧಾರಣೆ ಮತ್ತು ರಾಷ್ಟ್ರೀಯ ಏಕತೆಗಾಗಿ ಸ್ವಾಮಿ ಶ್ರದ್ಧಾನಂದ್ ಅವರ ಕೊಡುಗೆ ಸ್ಮರಿಸಿದ ರಾಷ್ಟ್ರಪತಿ; ಅವರ 100ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗೌರವ ನಮನ
ಕುರುಕ್ಷೇತ್ರ: ಸ್ವಾಮಿ ಶ್ರದ್ಧಾನಂದ್ ಅವರು ಗುರುಕುಲ ಶಿಕ್ಷಣ ಪದ್ಧತಿಯನ್ನು ಮತ್ತೆ ಮುನ್ನೆಲೆಗೆ ತಂದು, ಅದನ್ನು ಬಲಪಡಿಸುವ ಮೂಲಕ ಹೊಸ ಜೀವ ನೀಡಿದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ನವೆಂಬರ್ 1ರಂದು ಹರಿಯಾಣದ ಕುರುಕ್ಷೇತ್ರದಲ್ಲಿರುವ ಗುರುಕುಲದಲ್ಲಿ ನಡೆದ ಸ್ವಾಮಿ ಶ್ರದ್ಧಾನಂದ್ ಅವರ 100ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಭಾಗವಹಿಸಿ ಅವರಿಗೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುನ್ಷಿರಾಮ್ ಅವರಿಂದ ಮಹಾತ್ಮ ಮುನ್ಷಿರಾಮ್ ಆಗಿ, ನಂತರ ಸ್ವಾಮಿ ಶ್ರದ್ಧಾನಂದ್ ಆಗಿ ಬೆಳೆದ ಅವರ ಜೀವನ ಪಯಣ ಅತ್ಯಂತ ಪ್ರೇರಣಾದಾಯಕವಾಗಿದೆ ಎಂದರು.
ಸ್ವಾಮಿ ಶ್ರದ್ಧಾನಂದ್ ಅವರು ವೇದಗಳ ಸೇವೆ ಮತ್ತು ಸಮಾಜದ ಉನ್ನತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಜೀವನ ಮತ್ತು ತ್ಯಾಗ ಇಂದಿಗೂ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
ಸಾಮಾಜಿಕ ಸಾಮರಸ್ಯದ ಪ್ರತಿಪಾದಕರಾಗಿದ್ದ ಸ್ವಾಮಿ ಶ್ರದ್ಧಾನಂದ್ ಅವರು ದೆಹಲಿಯ ಜಾಮಾ ಮಸೀದಿಯ ಭಾಷಣ ವೇದಿಕೆಯಿಂದ ಪರಸ್ಪರ ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆಯ ಸಂದೇಶ ಸಾರಿದ್ದರು ಎಂದು ಅವರು ಸ್ಮರಿಸಿದರು.
ಅಸ್ಪೃಶ್ಯತೆಯನ್ನು ಹೋಗಲಾಡಿಸುವುದು ಮತ್ತು ದಲಿತರ ಏಳಿಗೆಗೆ ಶ್ರಮಿಸುವುದು ಭಾರತದ ಪ್ರಗತಿಗೆ ಅಗತ್ಯ ಎಂದು ಸ್ವಾಮಿ ಶ್ರದ್ಧಾನಂದ್ ನಂಬಿದ್ದರು. ಅಸ್ಪೃಶ್ಯತೆಯು ವೇದ ಧರ್ಮದ ಮೂಲ ತತ್ವಗಳಿಗೆ ವಿರುದ್ಧವಾದ ಸಾಮಾಜಿಕ ಪಿಡುಗು ಎಂದು ಅವರು ಪರಿಗಣಿಸಿದ್ದರು ಎಂದು ರಾಷ್ಟ್ರಪತಿ ತಿಳಿಸಿದರು.
ಗುರುಕುಲ ಶಿಕ್ಷಣ ಪದ್ಧತಿಗೆ ಪುನಶ್ಚೇತನ
ಸ್ವಾಮಿ ಶ್ರದ್ಧಾನಂದ್ ಅವರು ಗುರುಕುಲ ಶಿಕ್ಷಣ ಪದ್ಧತಿಯನ್ನು ಪುನರುಜ್ಜೀವನಗೊಳಿಸಿ, ಬಲಪಡಿಸುವ ಮೂಲಕ ಭಾರತದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಹೊಸ ಜೀವ ನೀಡಿದರು ಎಂದು ರಾಷ್ಟ್ರಪತಿ ಹೇಳಿದರು.
ಆರ್ಯ ಸಮಾಜದ ಸಂಸ್ಥಾಪಕರಾದ ಮಹರ್ಷಿ ದಯಾನಂದ ಸರಸ್ವತಿ ಅವರು ಪ್ರತಿಪಾದಿಸಿದ್ದ ಪ್ರಾಚೀನ ಆರ್ಯ ಶಿಕ್ಷಣ ಪದ್ಧತಿಯನ್ನು ಮತ್ತೆ ಬೆಳೆಸಲು ಸ್ವಾಮಿ ಶ್ರದ್ಧಾನಂದ್ ನಿರಂತರ ಪ್ರಯತ್ನ ನಡೆಸಿದ್ದರು ಎಂದು ಅವರು ತಿಳಿಸಿದರು.
2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಗುರಿಯತ್ತ ದೇಶ ಸಾಗುತ್ತಿರುವ ಸಂದರ್ಭದಲ್ಲಿ, ನಾಗರಿಕರು ತಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಹೆಮ್ಮೆ ಹೊಂದಬೇಕು. ಅದೇ ಸಮಯದಲ್ಲಿ ಆಧುನಿಕ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಹೊಸ ಆವಿಷ್ಕಾರಗಳು ಮತ್ತು ಉದ್ಯಮಶೀಲತೆಯನ್ನೂ ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರಪತಿ ಹೇಳಿದರು.
ಯುವ ಪೀಳಿಗೆಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಸ್ವಾಮಿ ಶ್ರದ್ಧಾನಂದ್ ಅವರ ಜೀವನದಿಂದ ಸ್ಫೂರ್ತಿ ಪಡೆದು ಯುವಕರು ವಿದ್ಯಾವಂತ, ಸ್ವಾವಲಂಬಿ, ಸಾಮರಸ್ಯದ ಮತ್ತು ಸಶಕ್ತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಲಿದ್ದಾರೆ ಎಂಬ ಭರವಸೆ ಇದೆ ಎಂದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
