ಭಾಗ್ಯನಗರ: ನವರಾತ್ರಿ ದಸರಾ ಮಹೋತ್ಸವದ ಭಾಗವಾಗಿ ಆಯೋಜಿಸಲಾಗುವ ದಾಂಡಿಯಾ ಕಾರ್ಯಕ್ರಮಗಳಲ್ಲಿ ಇಸ್ಲಾಂ ಮತ್ತು ಇತರ ಧರ್ಮಗಳಿಗೆ ಸೇರಿದವರು ಭಾಗವಹಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತೆಲಂಗಾಣ ರಾಜ್ಯ ಭಜರಂಗದಳದ ಸಂಚಾಲಕ ಕೊಂಡ ಶ್ರೀಕಾಂತ್ ಎಚ್ಚರಿಸಿದ್ದಾರೆ.
ಅಕ್ಟೋಬರ್ 7 ರಂದು ಭಾಗ್ಯನಗರದಲ್ಲಿ (ಹೈದರಾಬಾದ್) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಕಾಂತ್, ದಾಂಡಿಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ತಮ್ಮ ಆಧಾರ್ ವಿವರಗಳನ್ನು ತಿದ್ದುಪಡಿ ಮಾಡಿಕೊಂಡು, ಸುಳ್ಳು ಹಿಂದೂ ಹೆಸರುಗಳನ್ನು ಹೇಳಿಕೊಂಡು ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಹಿಂದೂ ಹುಡುಗಿಯರು ಮತ್ತು ಮಹಿಳೆಯರನ್ನು ಪ್ರೀತಿಯ ಹೆಸರಿನಲ್ಲಿ ದಾರಿ ತಪ್ಪಿಸಿ, ಅಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇಸ್ಲಾಮಿಕ್ ಧಾರ್ಮಿಕ ಗ್ರಂಥಗಳಲ್ಲಿ ಹೇಳಿರುವಂತೆ ಹಿಂದೂಗಳನ್ನು ‘ಕಾಫಿರ್’ ಎಂದು ಕರೆಯಲಾಗುತ್ತದೆ; ಅವರೊಂದಿಗೆ ಸ್ನೇಹ ಬೆಳೆಸುವುದು, ಅವರ ದೇವತೆಗಳನ್ನು ಪೂಜಿಸುವುದು ಮತ್ತು ಅವರು ನೀಡುವ ಆಹಾರವನ್ನು ಸೇವಿಸುವುದು ಇಸ್ಲಾಂಗೆ ವಿರುದ್ಧವೆಂದು ಪರಿಗಣಿಸಲಾಗಿದೆ ಎಂದು ಅವರು ನೆನಪಿಸಿದರು. ಇಂತಹ ತತ್ವಗಳನ್ನು ಬೋಧಿಸುವವರು ಹಿಂದೂಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಏತಕ್ಕಾಗಿ ಭಾಗವಹಿಸುತ್ತಿದ್ದಾರೆ? “ಅವರ ಗುರಿ ಏನು?” ಎಂದು ಅವರು ಪ್ರಶ್ನಿಸಿದರು.
ಹಿಂದೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಷ್ಟೊಂದು ಆಸಕ್ತಿ ಇರುವವರು, ಮೊದಲು ತಮ್ಮ ಸಹೋದರ ಮತ್ತು ಸಹೋದರಿಯರನ್ನು ಈ ಕಾರ್ಯಕ್ರಮಕ್ಕೆ ಕರೆತರಲಿ ಎಂದು ಅವರು ಸಲಹೆ ನೀಡಿದರು. ಅವರೊಂದಿಗೆ ಹಿಂದೂ ಯುವಕರು ಸಹ ದಾಂಡಿಯಾ ನೃತ್ಯ ಮಾಡುತ್ತಾರೆ ಎಂದರು. ಒಂದು ವೇಳೆ ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಅವರು ‘ಘರ್ ವಾಪಸಿ’ ಮೂಲಕ ಮತ್ತೆ ಹಿಂದೂ ಧರ್ಮಕ್ಕೆ ಮರಳಿ, ಯಾವುದೇ ಅಭ್ಯಂತರವಿಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರ ಆಧಾರ್ ಕಾರ್ಡ್ಗಳನ್ನು ಮತ್ತು ಅವರ ಉಡುಪು ಹಾಗೂ ನೋಟವನ್ನು ಆಯೋಜಕರು ಕೂಲಂಕುಷವಾಗಿ ಪರಿಶೀಲಿಸಬೇಕು ಎಂದು ಶ್ರೀಕಾಂತ್ ಸಲಹೆ ನೀಡಿದರು. ಭಾಗವಹಿಸಿದವರಲ್ಲಿ ಯಾರಾದರೂ ಅಹಿಂದೂಗಳು ಕಂಡುಬಂದರೆ, ತಕ್ಷಣ ಪೊಲೀಸರಿಗೆ ಅಥವಾ ಭಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡುವಂತೆ ಅವರು ಕೇಳಿಕೊಂಡರು.
ಮತ್ತಷ್ಟು ಮುಂದುವರಿದು ಮಾತನಾಡಿದ ಅವರು, ಕಾರ್ಯಕ್ರಮಗಳ ಭದ್ರತೆಗಾಗಿ ಹಿಂದೂಗಳನ್ನು ಮಾತ್ರ ಬೌನ್ಸರ್ಗಳಾಗಿ ನೇಮಿಸಿಕೊಳ್ಳುವುದನ್ನು ಆಯೋಜಕರು ಖಚಿತಪಡಿಸಿಕೊಳ್ಳಬೇಕು ಎಂದರು. ಅಹಿಂದೂಗಳನ್ನು ಬೌನ್ಸರ್ಗಳಾಗಿ ನೇಮಿಸಿದರೆ, ಭಜರಂಗದಳವು ಖಂಡಿತವಾಗಿಯೂ ಕಾರ್ಯಕ್ರಮ ನಡೆಯದಂತೆ ತಡೆಯುತ್ತದೆ ಎಂದು ಅವರು ಎಚ್ಚರಿಸಿದರು.
ಸೆಂಟ್ರಲ್ ಮಂದಿರ ಪ್ರಬಂಧ ಸಮಿತಿ ಸದಸ್ಯ ಮೂಸಾ ಪೇಟೆ ರಾಮರಾಜು ಮಾತನಾಡಿ, ದುರ್ಗಾ ನವರಾತ್ರಿಯ ಸಂದರ್ಭದಲ್ಲಿ ಭಕ್ತರು ದೇವಿಯನ್ನು ಅತ್ಯಂತ ವಿಜೃಂಭಣೆ ಮತ್ತು ಭಕ್ತಿಯಿಂದ ಪೂಜಿಸುತ್ತಾರೆ, ಇದರಿಂದಾಗಿ ಆಚರಣೆಗಳು ಕಣ್ಣಿಗೆ ಹಬ್ಬವಾಗಿರುತ್ತವೆ. ಇದರ ಜೊತೆಗೆ ಹಲವು ಕಡೆ ದಾಂಡಿಯಾ ಮತ್ತು ಗರ್ಬಾ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ ಎಂದರು.
ಆದರೆ, ಇತರ ಧರ್ಮಗಳಿಗೆ ಸೇರಿದವರು ಆಧಾರ್ ಕಾರ್ಡ್ಗಳಲ್ಲಿ ತಮ್ಮ ಹೆಸರುಗಳನ್ನು ಹಿಂದೂ ಹೆಸರುಗಳಾಗಿ ಬದಲಾಯಿಸಿಕೊಂಡು, ತಮ್ಮ ಉಡುಪು ಮತ್ತು ನೋಟವನ್ನು ಹಿಂದೂಗಳಂತೆ ಮಾರ್ಪಡಿಸಿಕೊಂಡು ಇಂತಹ ಕಾರ್ಯಕ್ರಮಗಳಿಗೆ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಅಂತಹ ವ್ಯಕ್ತಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಿಂದೂ ಮಹಿಳೆಯರು ಮತ್ತು ಹುಡುಗಿಯರನ್ನು ಗುರಿಯಾಗಿಸಿಕೊಂಡು “ಲವ್ ಜಿಹಾದ್”ಗೆ ಒಳಪಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಇಂತಹ ಕೃತ್ಯಗಳನ್ನು ವಿಶ್ವ ಹಿಂದೂ ಪರಿಷತ್ ಎಂದಿಗೂ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಭಾಗ್ಯಲಕ್ಷ್ಮಿ ವಿಭಾಗದ ಭಜರಂಗದಳ ಸಂಚಾಲಕ ಅಖಿಲ್ ಹಾಗೂ ಇತರ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
