2026–27ನೇ ಸಾಲಿನಲ್ಲಿ 2.23 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ; ಮಹಿಳೆಯರ ಪಾಲ್ಗೊಳ್ಳುವಿಕೆ ಶೇ. 61.65. ಯೋಜನೆಗೆ ₹93,841 ಕೋಟಿ ಹಂಚಿಕೆ
ನವದೆಹಲಿ, ಅಕ್ಟೋಬರ್ 28: ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿರುವ ಕೇಂದ್ರ ಸರ್ಕಾರದ VB-G RAM G ಯೋಜನೆಯಡಿ 31.69 ಕೋಟಿ ಮಾನವ ಉದ್ಯೋಗ ದಿನಗಳನ್ನು ಸೃಷ್ಟಿಸಲಾಗಿದೆ. 2026ರ ಸೆಪ್ಟೆಂಬರ್ 24ರ ಅಂಕಿಅಂಶಗಳ ಪ್ರಕಾರ, ಯೋಜನೆಯಡಿ 2.23 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳ ಸುಮಾರು 2.81 ಕೋಟಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗಿದೆ. ಉದ್ಯೋಗ ಪಡೆದವರಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ. 61.65ರಷ್ಟಿದೆ.
125 ದಿನಗಳ ಉದ್ಯೋಗ ಖಾತರಿ
VB-G RAM G ಕಾಯ್ದೆ, 2025ರ ಅಡಿಯಲ್ಲಿ ಅರ್ಹ ಗ್ರಾಮೀಣ ಕುಟುಂಬಗಳಿಗೆ ಪ್ರತಿ ಹಣಕಾಸು ವರ್ಷದಲ್ಲಿ ವಯಸ್ಕ ಸದಸ್ಯರು ಕೌಶಲರಹಿತ ದೈಹಿಕ ಕೆಲಸ ಮಾಡಲು ಮುಂದೆ ಬಂದಾಗ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿ ನೀಡಲಾಗಿದೆ. ಈ ಕಾಯ್ದೆ 2026ರ ಜುಲೈ 1ರಿಂದ ಜಾರಿಗೆ ಬಂದಿದೆ. ಇದು ಈ ಹಿಂದೆ ಜಾರಿಯಲ್ಲಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಬದಲಿಗೆ ಜಾರಿಗೆ ಬಂದಿದೆ.
ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ
ಯೋಜನೆಯಡಿ ಇದುವರೆಗೆ 2.83 ಲಕ್ಷ ಆಸ್ತಿಗಳನ್ನು ನಿರ್ಮಿಸಲಾಗಿದೆ. 97.17 ಲಕ್ಷ ಕಾಮಗಾರಿಗಳು ಪ್ರಗತಿಯಲ್ಲಿದ್ದು, 73.24 ಲಕ್ಷ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ದೇಶದ 2.31 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ.
ನೀರಿನ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯಕ್ಕೆ ನೆರವಾಗುವ ಆಸ್ತಿಗಳ ನಿರ್ಮಾಣ ಹಾಗೂ ತೀವ್ರ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸುವುದು ಸೇರಿದಂತೆ ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿ 318 ವಿಧದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ.
₹93,841 ಕೋಟಿ ಹಂಚಿಕೆ
2026–27ನೇ ಹಣಕಾಸು ವರ್ಷಕ್ಕೆ ಯೋಜನೆಗಾಗಿ ₹93,841 ಕೋಟಿ ಮಧ್ಯಂತರ ಅನುದಾನವನ್ನು ಮೀಸಲಿಡಲಾಗಿದೆ. ಇದರಲ್ಲಿ ಮೊದಲ ಕಂತಿನ ಅನುಮೋದಿತ ಅನುದಾನವಾಗಿ ₹25,880 ಕೋಟಿ ನೀಡಲಾಗಿದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು (VGPP) ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯಗೊಳಿಸಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಉದ್ಯೋಗ ಸೃಷ್ಟಿಯೊಂದಿಗೆ ದೀರ್ಘಕಾಲಿಕ ಗ್ರಾಮೀಣ ಆಸ್ತಿಗಳನ್ನು ನಿರ್ಮಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಡಿಜಿಟಲ್ ತಂತ್ರಜ್ಞಾನದ ಬಳಕೆ
ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಇ-ಕೆವೈಸಿ, ಮುಖಚಹರೆ ಮತ್ತು ಬಯೋಮೆಟ್ರಿಕ್ ದೃಢೀಕರಣ, ಕಾಮಗಾರಿಗಳ ಜಿಯೊ-ಟ್ಯಾಗಿಂಗ್, ಡಿಜಿಟಲ್ ಅಳತೆ ದಾಖಲೆಗಳು ಹಾಗೂ ನೇರ ನಗದು ವರ್ಗಾವಣೆ (DBT) ಸೇರಿದಂತೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ಬಳಸಲಾಗುತ್ತಿದೆ.
ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದರ ಜೊತೆಗೆ ಸುಸ್ಥಿರ ಮೂಲಸೌಕರ್ಯವನ್ನು ನಿರ್ಮಿಸಿ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು 2047ರ ವಿಕಸಿತ ಭಾರತ ಗುರಿಗೆ ಕೊಡುಗೆ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
