ಪುಸ್ತಕ: ಹನುಕೀಯಾ
ಲೇಖಕರು: ವಿಠಲ್ ಶೆಣೈ
ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಶನ್
ಮುದ್ರಣ: 2023
ಬೆಲೆ: ರೂ.495
ಪುಟಗಳು: 400
ಮಾನವನ ಇತಿಹಾಸಕ್ಕೆ ಯುದ್ಧ ಮತ್ತು ರಕ್ತಪಾತಗಳು ಹೊಸದೇನಲ್ಲ. ಜಗತ್ತನ್ನೇ ನಡುಗಿಸಿದ ಎರಡು ಭೀಕರ ಮಹಾಯುದ್ಧಗಳು ತಂದೊಡ್ಡಿದ ದುರಂತಗಳ ಪರಿಣಾಮಗಳು ಇಂದಿಗೂ ಒಂದಲ್ಲ ಒಂದು ರೀತಿಯಲ್ಲಿ ಮನುಕುಲವನ್ನು ಕಾಡುತ್ತಲೇ ಇವೆ. ೧೯೩೯ರಿಂದ ೧೯೪೫ರವರೆಗಿನ ಎರಡನೇ ಮಹಾಯುದ್ಧ, ಹಿಟ್ಲರ್ನ ದುರಾಡಳಿತ, ಸಾಮ್ರಾಜ್ಯಶಾಹಿ ವಿಸ್ತರಣೆ, ಯಹೂದಿಗಳ ಹತ್ಯಾಕಾಂಡ, ಗ್ಯಾಸ್ ಚೇಂಬರ್ಗಳಲ್ಲಿ ಜನರನ್ನು ಅಮಾನುಷವಾಗಿ ಕೊಂದ ಘೋರ ಕೃತ್ಯಗಳ ಹಿನ್ನೆಲೆಯಲ್ಲಿ ಮೂಡಿಬಂದಿರುವ ಒಂದು ಅನೂಹ್ಯ ಹಾಗೂ ಅಪರೂಪದ ಕೃತಿಯೇ ವಿಠಲ್ ಶೆಣೈ ಅವರು ರಚಿಸಿರುವ ‘ಹನುಕಿಯಾ’ ಕಾದಂಬರಿ. ಇದೊಂದು ಯಹೂದಿ ಪರಿವಾರದ ಅತ್ಯಂತ ಆರ್ದ್ರವಾದ ಕಥಾನಕ.
‘ಹನುಕಿಯಾ’ ಎಂಬುದು ಒಂಬತ್ತು ಸ್ತಂಭಗಳುಳ್ಳ ಯಹೂದ್ಯರ ಪವಿತ್ರ ದೀಪಸ್ತಂಭ; ಜ್ಯೋತಿ ಬೆಳಗಿಸಿ ನಮನ ಸಲ್ಲಿಸುವ ಅವರ ಪಾಲಿನ ಅತ್ಯಂತ ಪವಿತ್ರ ಸಂಕೇತವಿದು. ಯಹೂದ್ಯರ ಅಪಾರ ಸಂಪತ್ತನ್ನು ದೋಚಿದ್ದ ನಾಜಿಗಳು, ಎರಡನೇ ಮಹಾಯುದ್ಧದ ಕೊನೆಯಲ್ಲಿ ಜರ್ಮನಿ ಪತನವಾಗುವ ಹೊತ್ತಿಗೆ ಆ ಸಂಪತ್ತನ್ನು ರೈಲಿನ ಬೋಗಿಗಳಲ್ಲಿ ಸಾಗಿಸಿ ಪೋಲೆಂಡ್ನ ಯಾವುದೋ ಪರ್ವತ ಪ್ರದೇಶದಲ್ಲಿ ಹೂತಿಟ್ಟಿದ್ದಾರೆ ಎನ್ನಲಾದ ನಿಧಿಯೊಂದರ ಶೋಧನೆಯೊಂದಿಗೆ ಈ ಕಾದಂಬರಿ ತೆರೆದುಕೊಳ್ಳುತ್ತದೆ. ಮ್ಯಾಟ್ ಮತ್ತು ಹಿಲರಿ ಎಂಬುವವರು ಈ ನಿಧಿಯ ಶೋಧನೆಗೆ ಇಳಿದಾಗ, ೯೦ ವರ್ಷದ ವೃದ್ಧೆ ಮೀರಾ ಹಾಗೂ ಆಕೆಯ ಮೊಮ್ಮಗ ಆನಂದ್ ಅವರೊಡನೆ ಕೈಜೋಡಿಸುತ್ತಾರೆ. ಹಿಲರಿ ಮತ್ತು ಮ್ಯಾಟ್ ಬಳಿಯಿದ್ದ ನಕ್ಷೆಯ ಜೊತೆಗೆ, ತನ್ನ ಬಳಿಯಿದ್ದ ಮತ್ತೊಂದು ನಕ್ಷೆಯ ಪ್ರತಿಯನ್ನು ಮೀರಾ ನೀಡಿದಾಗ ಕಥೆಯು ರೋಚಕ ಪಥದತ್ತ ಹೊರಳುತ್ತದೆ.
ಇಲ್ಲಿಂದಲೇ ಮೀರಾಳ ಗತಕಾಲದ ಕರಾಳ ಪುಟಗಳು ತೆರೆದುಕೊಳ್ಳುತ್ತವೆ. ಮೀರಾ ಮೂಲತಃ ಪೋಲೆಂಡ್ನ ನಿವಾಸಿ ‘ಮಿರಿಯಂ’. ಆಕೆಯ ತಾಯಿ ಇಸಬೆಲ್, ತಂದೆ ಬೆಂಜಮಿನ್ ಹಾಗೂ ಅಣ್ಣ ನೇಥನ್ ಅವರನ್ನೊಳಗೊಂಡ ಸುಂದರ ಕುಟುಂಬವದು. ಆದರೆ, ಹಿಟ್ಲರ್ನ ದುರಾಕ್ರಮಣದ ಕಾಲದಲ್ಲಿ ಮಿರಿಯಂನ ಸ್ವಂತ ಸೋದರಮಾವ ವಾಲ್ಟರ್ ನಾಜಿ ಅಧಿಕಾರಿಯಾಗಿ ಬದಲಾಗುತ್ತಾನೆ. ಪುನರ್ವಸತಿ ಕೇಂದ್ರದ ನೆಪದಲ್ಲಿ ತನ್ನದೇ ರಕ್ತಸಂಬಂಧಿಗಳನ್ನು ಮನೆಯಿಂದ ಒಕ್ಕಲೆಬ್ಬಿಸಿ ಆಶ್ವಿಟ್ಜ್ನಂತಹ ಘೋರ ಯಾತನಾ ಶಿಬಿರಗಳಿಗೆ ಕಳುಹಿಸುವ ಆತನ ದ್ರೋಹ ಓದುಗರನ್ನು ಬೆಚ್ಚಿಬೀಳಿಸುತ್ತದೆ.
ಎರಡನೇ ಮಹಾಯುದ್ಧದ ಆ ಅಮಾನುಷ ಹಾಗೂ ಭಯಾನಕ ಮುಖ ಇಲ್ಲಿಯೇ ಅನಾವರಣಗೊಳ್ಳುವುದು. ಯಹೂದಿಗಳನ್ನು ಹಿಂಡುಹಿಂಡಾಗಿ ಒಕ್ಕಲೆಬ್ಬಿಸಿ, ಯಾತನಾ ಶಿಬಿರಗಳಲ್ಲಿ ಶ್ರಮದಾಯಕ ಕೆಲಸಗಳಿಗೆ ದೂಡಿ, ಕೊನೆಗೆ ಗ್ಯಾಸ್ ಚೇಂಬರ್ಗಳಿಗೆ ಅಟ್ಟಿ ಲಕ್ಷಾಂತರ ಸಂಖ್ಯೆಯಲ್ಲಿ ಯಹೂದಿ ಜನಾಂಗವನ್ನೇ ನಿರ್ನಾಮ ಮಾಡಲು ಹೊರಟ ಹಿಟ್ಲರ್ನ ದುರುಳ ಕೃತ್ಯಗಳ ಕರಾಳ ಸತ್ಯವನ್ನು ಮಿರಿಯಂ ಬಿಚ್ಚಿಡುತ್ತಾಳೆ. ತನ್ನ ತಂದೆ, ತಾಯಿ, ಚಿಕ್ಕಮ್ಮ ಹೀಗೆ ಎಲ್ಲರನ್ನೂ ನಾಜಿ ಪಕ್ಷದ ಮೇಲಿನ ನಿಯತ್ತು ಹಾಗೂ ಯಹೂದಿ ದ್ವೇಷಕ್ಕೆ ಬಲಿತೆಗೆದುಕೊಂಡ ಸೋದರಮಾವ ವಾಲ್ಟರ್ನ ಕ್ರೌರ್ಯದ ನಡುವೆಯೂ, ಮಿರಿಯಂ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿ ನದಿಗೆ ಹಾರುತ್ತಾಳೆ.
ಅಲ್ಲಿಂದ ಪವಾಡಸದೃಶ ರೀತಿಯಲ್ಲಿ ಪೋಲೆಂಡ್ನ ಅನಾಥ ಮಕ್ಕಳನ್ನು ಸಾಗಿಸುವ ಟ್ರಕ್ ಒಂದರ ಮೂಲಕ ಹಡಗನ್ನೇರಿ ಭಾರತದ ಜಾಮ್ನಗರವನ್ನು ತಲುಪುವ ಮಿರಿಯಂನ ಕಥೆ ಮತ್ತೊಂದು ಮಾನವೀಯ ಆಯಾಮವನ್ನು ಪಡೆಯುತ್ತದೆ. ಜಾಮ್ನಗರದ ಮಹಾರಾಜರ ಉದಾರತೆ, ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ನಿಯೋಜನೆಗೊಳ್ಳುವ ಮಿರಿಯಂ, ಅಲ್ಲಿ ಪರಿಚಯವಾಗುವ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಹೃದಯಿ ಚಂದ್ರಕಾಂತ್ನೊಡನೆ ಬೆಸೆಯುವ ಅವಿನಾಭಾವ ಸಂಬಂಧ, ಬಳಿಕ ಭಾರತದಲ್ಲಿಯೇ ಬದುಕು ಕಟ್ಟಿಕೊಳ್ಳುವ ಪರಿ—ಇವೆಲ್ಲವೂ ಕಾದಂಬರಿಯ ಭರವಸೆಯ ಘಟ್ಟಗಳು.
ಯುದ್ಧದ ನಂತರ ಪವಾಡಸದೃಶವಾಗಿ ಬದುಕುಳಿದಿದ್ದ ಅಣ್ಣ ನೇಥನ್ನೊಂದಿಗೆ ಮಿರಿಯಂ ಮತ್ತೆ ಪೋಲೆಂಡ್ಗೆ ಮರಳಿ, ಮಹಾಯುದ್ಧದ ಅನ್ಯಾಯಗಳ ಹಾಗೂ ನಾಜಿ ಅಧಿಕಾರಿಯಾಗಿದ್ದ ಸೋದರಮಾವನ ವಿರುದ್ಧ ಸಾಕ್ಷಿ ನುಡಿಯುತ್ತಾಳೆ. ಶ್ರಮದಾಯಕ ಶಿಬಿರದಲ್ಲಿದ್ದಾಗ ಆಕೆಗೆ ಸಿಕ್ಕಿದ್ದ ನಾಜಿಗಳ ಸಂಪತ್ತಿನ ರೈಲಿನ ನಕ್ಷೆ, ಅಲ್ಲಿರಬಹುದಾದ ಪವಿತ್ರ ‘ಹನುಕಿಯಾ’ ಹಾಗೂ ಬೆಲೆಬಾಳುವ ಪೇಂಟಿಂಗ್ಗಳನ್ನು ತನ್ನ ಜೀವಿತಾವಧಿಯಲ್ಲಿ ಪಡೆಯಲೇಬೇಕು ಎಂಬ ಆಕೆಯ ಅದಮ್ಯ ಬಯಕೆಯೇ ಅವಳನ್ನು ಮತ್ತೆ ಈ ನಿಧಿ ಶೋಧನೆಗೆ ಕರೆತಂದಿರುತ್ತದೆ. ಕೊನೆಗೆ ಮಿರಿಯಂ ಆ ಹನುಕಿಯಾವನ್ನು ಪಡೆಯುವಲ್ಲಿ ಸಫಲಳಾದಳೇ? ಎಂಬ ರೋಚಕ ಕಥಾನಕವು ಓದುಗರನ್ನು ಕುರ್ಚಿಯ ಅಂಚಿನಲ್ಲಿ ಕೂರಿಸುತ್ತದೆ.
ಲೇಖಕ ವಿಠಲ್ ಶೆಣೈ ಅವರು ಕೇವಲ ಮಹಾಯುದ್ಧದ ಕಥೆಯನ್ನು ಮಾತ್ರವಲ್ಲದೆ; ಜನಾಂಗೀಯ ದ್ವೇಷ, ರಕ್ತಪಾತಗಳ ನಡುವೆಯೂ ಅರಳಿ ನಿಲ್ಲುವ ಪ್ರೀತಿ, ಮಾನವೀಯತೆ, ಸೌಹಾರ್ದತೆ, ಭಾರತೀಯ ಸಂಸ್ಕೃತಿಯ ಉದಾತ್ತತೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹಿನ್ನೆಲೆ—ಹೀಗೆ ಹತ್ತು-ಹಲವು ವಿಷಯಗಳನ್ನು ಒಪ್ಪವಾಗಿ ಬೆಸೆದು ಈ ಅಮೋಘ ಕಾದಂಬರಿಯನ್ನು ಉಣಬಡಿಸಿದ್ದಾರೆ. ಈ ಕಥೆಯು ಇತಿಹಾಸದ ಒಂದು ತುಣುಕಾದರೂ, ಇದು ನಡೆದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆ ದಾರುಣ ಮಹಾಯುದ್ಧದಲ್ಲಿ ಅದೆಷ್ಟೋ ಮಿರಿಯಂನಂತಹ ಜೀವಗಳು ನಲುಗಿಹೋಗಿವೆ, ಅದೆಷ್ಟೋ ಯಹೂದಿ ಮನೆಗಳ ದೀಪಗಳು ಶಾಶ್ವತವಾಗಿ ಆರಿಹೋಗಿವೆ. ಆದರೆ, ಯುದ್ಧದ ಬಿಸಿಯಲ್ಲೂ ‘ಮಾನವೀಯತೆ ಮತ್ತು ಪ್ರೀತಿ’ ಎಂಬ ಆರದ ದೀಪ ಇಂದಿಗೂ ಉರಿಯುತ್ತಿದೆ ಎಂಬುದು ಶಾಂತಿಯ ಗುಲಾಬಿಯಂತೆ ಭಾಸವಾಗುತ್ತದೆ.
ಇಂತಹ ಅದ್ಭುತ ಕಾದಂಬರಿಯನ್ನು ಓದಿದ ಮೇಲೂ ಅದರ ಗುಂಗು ಹಲವಾರು ದಿನಗಳ ಕಾಲ ಕಾಡುವುದು ಅತಿಶಯೋಕ್ತಿಯೇನಲ್ಲ. ಸದಾ ಯುದ್ಧ, ರಕ್ತಪಾತ, ಹಣದ ದಾಹ, ಆಮಿಷಗಳಂತಹ ವೈರುಧ್ಯಗಳಲ್ಲೇ ಬದುಕುತ್ತಿರುವ ಇಂದಿನ ಜಗತ್ತಿನಲ್ಲಿ ‘ಹನುಕಿಯಾ’ದ ರೀತಿಯಲ್ಲಿಯೇ ಮಾನವೀಯತೆಯ ದೀಪ ಆರದೆ ಬೆಳಗುತ್ತಿರಲಿ ಎಂಬುದೇ ಈ ಕಾದಂಬರಿಯ ಹಾಗೂ ಓದುಗರ ಪ್ರಮುಖ ಆಶಯ. ಇದೊಂದು ಕೇವಲ ಕಾದಂಬರಿಯಲ್ಲ, ಬದಲಾಗಿ ಆರದ ಮಾನವೀಯತೆ, ಪ್ರೀತಿ, ಶಾಂತಿ ಹಾಗೂ ಭ್ರಾತೃತ್ವದ ಶಾಶ್ವತ ಪ್ರತೀಕ. ಲೇಖಕರಿಂದ ಇಂತಹ ಹತ್ತು-ಹಲವು ಶ್ರೇಷ್ಠ ಕೃತಿಗಳು ಇನ್ನಷ್ಟು ಮೂಡಿಬರಲಿ ಎಂದು ಹಾರೈಸುತ್ತೇನೆ.
– ಚೇತನ ಭಾರ್ಗವ, ಅರಮನೆತೋಟ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
