ಅಂಕಣ – Xಫ್ಯಾಕ್ಟರ್
- ಪರಪ್ಪ ಶಾನವಾಡ, ಸಾಮಾಜಿಕ ಜಾಲತಾಣ ವಿಶ್ಲೇಷಕ
ದೇಶದ ಮುಕುಟಮಣಿ ಜಮ್ಮು ಮತ್ತು ಕಾಶ್ಮೀರ ಶತಮಾನಗಳಿಂದಲೂ ಭಾರತದ ಅವಿಭಾಜ್ಯ ಅಂಗವಾಗಿದ್ದರೂ, ಬ್ರಿಟಿಷರಿಂದ ಮುಕ್ತಿಪಡೆದು ದೇಶ ಸ್ವತಂತ್ರಗೊಳ್ಳುವ ಸಂದರ್ಭದಲ್ಲಿ ದೇಶದ ದುರ್ಬಲ ನಾಯಕತ್ವದಿಂದಾಗಿ ದೇಶ ವಿಭಜನೆ ಜೊತೆಗೆ ಹಲವು ಸಮಸ್ಯೆಗಳನ್ನು ಸಹ ತನ್ನದಾಗಿಸಿಕೊಂಡಿತು, ಬಂಗಾಳ, ಪಂಜಾಬ್ ಜೊತೆ ಕಾಶ್ಮೀರವೂ ಹಲವು ಭಾಗಗಳಾಗಿ ಹರಿದು ಹಂಚಿಹೋಯಿತು. ಪಾಕ್ ಆಕ್ರಮಿತ ಕಾಶ್ಮೀರ (PoK) ಜಾಗಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ದಶಕಗಳಿಂದಲೂ ವಿವಾದ ಮುಂದುವರಿದಿದೆ. ಈ ಗಡಿ ಸಂಘರ್ಷಕ್ಕಾಗಿ ಉಭಯ ದೇಶಗಳ ನಡುವೆ ಹಲವು ಯುದ್ಧಗಳು ನಡೆದಿವೆ ಮತ್ತು ಸಾವಿರಾರು ಯೋಧರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಈಗ POK ಪ್ರದೇಶದಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳು ಕೇವಲ ಸ್ಥಳೀಯ ಆರ್ಥಿಕ ಅಸಮಾಧಾನದ ಪ್ರತಿಫಲವಾಗಿಲ್ಲ. ಇವು ಆಡಳಿತ ವೈಫಲ್ಯ, ಜನರ ಜೀವನಮಟ್ಟ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ಜಾಲತಾಣದ ಪ್ರಭಾವದ ಕುರಿತ ವಿಶಾಲ ಚರ್ಚೆಗೆ ಕಾರಣವಾಗಿವೆ. ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (JAAC) ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗಳ ಹಿಂದೆ ವಿದ್ಯುತ್ ದರಗಳ ಏರಿಕೆ, ಗೋಧಿ ಹಿಟ್ಟಿನ ಸಹಾಯಧನ ಕಡಿತ, ನಿರಂತರ ಹಣದುಬ್ಬರ, ನಿರುದ್ಯೋಗ ಮತ್ತು ಆಡಳಿತದ ಮೇಲಿನ ವಿಶ್ವಾಸದ ಕೊರತೆ ಪ್ರಮುಖ ಕಾರಣಗಳಾಗಿವೆ ಎಂಬುದು ಜಾಲತಾಣ ಜಗಲಿಯ ವಿಶ್ಲೇಷಣೆಯಾಗಿದೆ.

ಜಾಲತಾಣದಲ್ಲಿ ನಡೆದ ಚರ್ಚೆಗಳ ವಿಶ್ಲೇಷಣೆಯು ಈ ದಂಗೆಯನ್ನು 6 ಪ್ರಮುಖ ಆಯಾಮಗಳಲ್ಲಿ ತೋರಿಸುತ್ತದೆ. 1) ಆರ್ಥಿಕ ಸಂಕಷ್ಟ. 2) ಇಸ್ಲಾಮಾಬಾದ್ನ ಆಡಳಿತಾತ್ಮಕ ನೀತಿಗಳ ವಿರುದ್ಧ ಅಸಮಾಧಾನ. 3) ಪ್ರತಿಭಟನಾಕಾರರ ಬಂಧನ, ಪೊಲೀಸ್ ಕ್ರಮ ಮತ್ತು ಮಾನವ ಹಕ್ಕುಗಳ ಪ್ರಶ್ನೆ. 4) ವಿದೇಶದಲ್ಲಿರುವ ಕಾಶ್ಮೀರಿ ಸಮುದಾಯದ ಬೆಂಬಲ. 5) ಭಾರತ ಮತ್ತು ಪಾಕಿಸ್ತಾನದ ಕುರಿತು ಮೂಡಿದ ಪರಸ್ಪರ ವಿರುದ್ಧದ ರಾಜಕೀಯ ನಿರೂಪಣೆಗಳು. 6) ತಪ್ಪು ಮಾಹಿತಿ, ಸಂಪಾದಿತ ವಿಡಿಯೋಗಳು ಮತ್ತು ಪರಿಶೀಲಿಸದ ಸುದ್ದಿಗಳ ವೇಗದ ಪ್ರಸಾರ. X, ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ನಲ್ಲಿ #PoK, #POJK, #JAAC, #StandWithPoK, #JusticeForPoK, #PakistanOccupiedKashmir, #HumanRights ಮತ್ತು #Muzaffarabad ಮೊದಲಾದ ಹ್ಯಾಶ್ಟ್ಯಾಗ್ಗಳು ವ್ಯಾಪಕವಾಗಿ ಬಳಕೆಯಾದವು. ಪ್ರತಿಭಟನೆಯ ದೃಶ್ಯಗಳು, ರಸ್ತೆ ತಡೆಗಳು, ಸಾರ್ವಜನಿಕ ಸಭೆಗಳು, ಬಂಧನಗಳ ವಿಡಿಯೋಗಳು ಮತ್ತು ವಿಶ್ಲೇಷಣಾತ್ಮಕ ಕಾರ್ಯಕ್ರಮಗಳು ಲಕ್ಷಾಂತರ ಜನರನ್ನು ತಲುಪಿದವು. ವಿದೇಶಿ ಕಾಶ್ಮೀರಿ ಸಂಘಟನೆಗಳು ಸಹ ಈ ಬೆಳವಣಿಗೆಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆಗೆ ತರುವ ಪ್ರಯತ್ನ ನಡೆಸಿದವು.
ಭಾರತದ ಅಧಿಕೃತ ನಿಲುವು ಹಲವು ದಶಕಗಳಿಂದ ಬದಲಾಗಿಲ್ಲ. ನಮ್ಮ ಸಂಸತ್ತು ಅಂಗೀಕರಿಸಿರುವ ನಿರ್ಣಯ ಮತ್ತು ವಿದೇಶಾಂಗ ನೀತಿಯ ಪ್ರಕಾರ, ಸಂಪೂರ್ಣ ಜಮ್ಮು & ಕಾಶ್ಮೀರ, ಅದರಲ್ಲೂ POK ಪ್ರದೇಶವೂ ಭಾರತದ ಅವಿಭಾಜ್ಯ ಅಂಗವಾಗಿದೆ. ಈ ಹಿನ್ನೆಲೆಗಳಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳನ್ನು ಅನೇಕ ಭಾರತೀಯ ವಿಶ್ಲೇಷಕರು ಆಡಳಿತ, ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಗಳ ಗುಣಮಟ್ಟದ ದೃಷ್ಟಿಯಿಂದ ಪರಿಶೀಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಇದೇ ರೀತಿಯ ಹೋಲಿಕೆಗಳು ವ್ಯಾಪಕವಾಗಿ ಕಂಡುಬಂದಿವೆ. ಈ ಬೆಳವಣಿಗೆಗಳು ಜಾಲತಾಣಗಳ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿವೆ. ಸ್ಥಳೀಯ ಪ್ರತಿಭಟನೆಯನ್ನು ಕೆಲವೇ ಗಂಟೆಗಳಲ್ಲಿ ಜಾಗತಿಕ ಚರ್ಚೆಯನ್ನಾಗಿ ರೂಪಿಸುವ ಸಾಮರ್ಥ್ಯ ಡಿಜಿಟಲ್ ವೇದಿಕೆಗಳಿಗೆ ಇದೆ. ಒಟ್ಟಿನಲ್ಲಿ, POKಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಚಿಕ್ಕಪುಟ್ಟ ವಿಚಾರಕ್ಕೆ ಸೀಮಿತವಾಗಿಲ್ಲ. ಅವು ಆಡಳಿತದ ಪರಿಣಾಮಕಾರಿತ್ವ, ಆರ್ಥಿಕ ಸ್ಥಿರತೆ, ಸಾರ್ವಜನಿಕ ವಿಶ್ವಾಸ, ಮಾನವ ಹಕ್ಕುಗಳು ಪ್ರತಿಬಿಂಬಿಸುವ ಮಹತ್ವದ ಬೆಳವಣಿಗೆಯಾಗಿವೆ. ಭಾರತ ಈಗ ಬಲಿಷ್ಟವಾಗಿದೆ. ನಮ್ಮ ತಂಟೆಗೆ ಬಂದಾಗ ಪಾಕಿಸ್ತಾನದ ಹೊಳಹೊಕ್ಕು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಮರೆಯಲಸಾಧ್ಯ. ಜಾಲತಾಣಿಗರ ಪ್ರಕಾರ POKಯನ್ನು ಮತ್ತೆ ಭಾರತಕ್ಕೆ ಸೇರಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಆದರೆ POK ಪ್ರದೇಶದ ಜೊತೆಗೆ ಮತಾಂಧತೆಯ ಜಾಲದಲ್ಲಿ ಸಿಲುಕಿರುವ POK ಜನರನ್ನು ಭಾರತಕ್ಕೆ ಸೇರಿಸಿದರೆ ಆಗುವ ಅನಾಹುತಗಳ ಬಗ್ಗೆ ಎಚ್ಚರವಿರಲಿ. ಒಳಿತು – ಕೆಡಕುಗಳ ಬಗ್ಗೆ ಯೋಚಿಸಿ ನಿರ್ಣಯ ತೆಗೆದುಕೊಳ್ಳುವುದು ಸೂಕ್ತ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.
