”ಮಾತಾ ಭೂಮಿಃ ಪುತ್ರೋ ಅಹಂ ಪೃಥಿವ್ಯಾಃ”
(ಅಥರ್ವೇದ 12.1.12)
(ಭೂಮಿಯೇ ನನ್ನ ತಾಯಿ, ನಾನು ಈ ಪೃಥ್ವಿಯ ಪುತ್ರ).
ಭಾರತ ಎನ್ನುವುದು ಕೇವಲ ಒಂದು ನಿರ್ದಿಷ್ಟ ಭೌಗೋಳಿಕ ಗಡಿರೇಖೆಯುಳ್ಳ ಭೂಪ್ರದೇಶವಲ್ಲ; ಅದೊಂದು ಮಹಾನಿಧಿ, ಜಾಗೃತ ಚೇತನ! ಈ ಭರತವರ್ಷದಲ್ಲಿ ಹುಟ್ಟಿದ ಪ್ರತಿಯೊಬ್ಬ ಜೀವಿಯೂ ಆ ಜಗನ್ಮಾತೆ ಭಾರತಾಂಬೆಯ ಅಂಕದಲ್ಲಿ ಬೆಳೆಯುತ್ತಿರುವ ಸಂತಾನವೇ ಆಗಿದ್ದಾನೆ. ಈ ನೆಲದ ಸಂಸ್ಕೃತಿ ಎನ್ನುವುದು ನಮಗೆ ಎಲ್ಲೋ ಹೊರಗಿನಿಂದ ಬಂದು ಅಂಟಿಕೊಂಡಿದ್ದಲ್ಲ; ಅದು ನಮ್ಮ ರಕ್ತದ ಕಣಕಣದಲ್ಲೂ, ಉಸಿರು ಉಸಿರಿನಲ್ಲೂ ಹರಿಯುತ್ತಿರುವ ಜೀವಕೋಶ.
ಆದರೆ ಶತಶತಮಾನಗಳ ಕಾಲ ನಮ್ಮನ್ನಾಳಿದ ವಿದೇಶಿ ಆಕ್ರಮಣಕಾರರು ತಮ್ಮತನದ ಕಲ್ಮಷವನ್ನು ಇಲ್ಲೇ ಬಿಟ್ಟು ಹೋದರು. ನಮ್ಮ ಶ್ರೇಷ್ಠ ಪರಂಪರೆಯ ಮೂಲಬೇರನ್ನು ದುರ್ಬಲಗೊಳಿಸಿ, ನಮ್ಮ ಸತ್ವವನ್ನೇ ಕಲುಷಿತಗೊಳಿಸಿದರು. ಇಂದಿನ ದುರಂತವೆಂದರೆ, ಅವರು ಬಿಟ್ಟುಹೋದ ತಲೆಬುಡವಿಲ್ಲದ ಸಂಸ್ಕೃತಿಯನ್ನೇ ಶ್ರೇಷ್ಠವೆಂದು ಅಪ್ಪಿಕೊಳ್ಳುತ್ತಾ, ಪರಕೀಯ ಚಿಂತನೆಗಳಿಗೆ ಜೋತುಬಿದ್ದು ನಮ್ಮ ತಾಯಿನಾಡಿನ ಭವ್ಯ ಇತಿಹಾಸವನ್ನು ನಾವು ಮರೆಯುತ್ತಿದ್ದೇವೆ!
ಒಮ್ಮೆ ಆಲೋಚಿಸಿ ನೋಡಿದರೆ, ನಮ್ಮ ಈ ಭಾರತೀಯ ಸಂಸ್ಕೃತಿಗಿಂತ ಪವಿತ್ರವಾದದ್ದು ಜಗತ್ತಿನಲ್ಲಿ ಇನ್ನೊಂದಿಲ್ಲ. ಈ ನಾಡಿನ ಪ್ರತಿಯೊಂದು ಧೂಳಿನ ಕಣವೂ ನಮಗೆ ಪಾವನ. ಇಲ್ಲಿನ ಕಲ್ಲು, ಮರ ಗಿಡ, ಸಾಗರ ಹಾಗೂ ಹರಿಯುವ ನದಿ ಜಡವೋ ಚೇತನವೋ, ಆದರೆ ಪ್ರತಿಯೊಂದರಲ್ಲೂ ಆ ಪರಾಶಕ್ತಿಯನ್ನೇ ಕಾಣುವುದು ಈ ಮಣ್ಣಿನ ವೈಶಿಷ್ಟ್ಯ. ಪ್ರತಿಯೊಂದು ಮಗುವಿನ ಹೃದಯದಲ್ಲೂ ಈ ಗಾಢವಾದ ರಾಷ್ಟ್ರಭಕ್ತಿಯನ್ನು ಹಾಗೂ ದೈವಿಕ ಭಾವವನ್ನು ನಿತ್ಯ ಜಾಗೃತವಾಗಿಡಲೆಂದೇ ನಮ್ಮ ಪೂರ್ವಾಜರು ಅನೇಕ ಆಚಾರ-ವಿಚಾರಗಳನ್ನು ರೂಪಿಸಿದರು. ನಾವು ಮಾಡುವ ಪ್ರತಿಯೊಂದು ಧಾರ್ಮಿಕ ವಿಧಿಯಲ್ಲೂ ಈ ವಿಶಾಲ ಭರತವರ್ಷದ ಹಾಗೂ ಆಯಾ ಪುಣ್ಯಕ್ಷೇತ್ರಗಳ ವರ್ಣನೆ ಇದ್ದೇ ಇರುತ್ತದೆ.
ಶ್ರೀರಾಮಾಯಣದ ಮಹೋನ್ನತ ಪ್ರಸಂಗವೊಂದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಮಹಾಬಲಿಷ್ಠ ಲಂಕೆಯನ್ನು ಗೆದ್ದ ನಂತರ, ಸುವರ್ಣಮಯವಾದ ಆ ನಗರದ ವೈಭವವನ್ನು ಕಂಡು ಮೈಮರೆತ ಲಕ್ಷ್ಮಣನು, “ಅಣ್ಣಾ, ಈ ಸುವರ್ಣ ಲಂಕೆ ಎಷ್ಟೊಂದು ಸುಂದರವಾಗಿದೆ! ನಾವೇಕೆ ಆ ಅಯೋಧ್ಯೆಗೆ ಮರಳುವ ಬದಲು ಇಲ್ಲೇ ನೆಲೆಸಬಾರದು?” ಎಂದು ಕೇಳುತ್ತಾನೆ. ಆಗ ಶ್ರೀರಾಮಚಂದ್ರನು ನೀಡಿದ ಉತ್ತರ ಸಾರ್ವಕಾಲಿಕವಾದದ್ದು:
”ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ||”
(ಎಲೈ ಲಕ್ಷ್ಮಣ, ಈ ಸುವರ್ಣ ಲಂಕೆಯ ವೈಭವವೂ ನನಗೆ ಇಷ್ಟವಾಗುತ್ತಿಲ್ಲ. ಏಕೆಂದರೆ ಹೆತ್ತ ತಾಯಿ ಮತ್ತು ಹುಟ್ಟಿದ ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದವು). ಸಂಪತ್ತು ಮತ್ತು ಸುಖ-ಭೋಗಗಳಿಗಿಂತ ಜನ್ಮ ನೀಡಿದ ನೆಲದ ವಾತ್ಸಲ್ಯವೇ ಶ್ರೇಷ್ಠವೆಂಬ ಈ ಒಂದೇ ಸಾಲು, ಭಾರತೀಯ ಪ್ರಜ್ಞೆಯ ಮೂಲಬೇರಾಗಿದೆ.
ನಮ್ಮ ಪ್ರತಿಯೊಂದು ಮಂಗಳ ಕಾರ್ಯವೂ ಶುರುವಾಗುವುದೇ ಭೂಮಿತಾಯಿಯ ಪೂಜೆಯಿಂದ. ಒಬ್ಬ ನಿಜವಾದ ಭಾರತೀಯನಿಗೆ, ಬೆಳಿಗ್ಗೆ ಕಣ್ಣು ತೆರೆದು ಹಾಸಿಗೆಯಿಂದ ಏಳುತ್ತಿದ್ದಂತೆಯೇ ಕಾಲನ್ನು ಭೂಮಿತಾಯಿಯ ಮೇಲೆ ಇಡುವ ಮುನ್ನ ಕೃತಜ್ಞತಾ ಭಾವ ಮೂಡುತ್ತದೆ. ದಿನವಿಡೀ ಅನಿವಾರ್ಯವಾಗಿ ತನ್ನ ಪಾದಗಳು ಈ ನೆಲಕ್ಕೆ ತಾಗುತ್ತವೆಯಲ್ಲ ಎಂಬ ಅಪರಾಧ ಪ್ರಜ್ಞೆಯಿಂದ, ಆತನ ಆಂತರ್ಯದಲ್ಲಿ ಈ ಪ್ರಾರ್ಥನೆ ಹೊರಹೊಮ್ಮುತ್ತದೆ:
ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ |
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ||
”ಓ ತಾಯೇ! ಸಾಗರವೇ ನಿನಗೆ ಉಡುವ ಸೀರೆ, ಪರ್ವತಗಳೇ ನಿನ್ನ ಸೌಂದರ್ಯದ ಸಂಕೇತ. ಆ ಶ್ರೀವಿಷ್ಣುವಿನ ಧರ್ಮಪತ್ನಿಯಾದ ನಿನಗೆ ನಮಸ್ಕರಿಸುತ್ತೇನೆ. ನನ್ನ ಪಾದಗಳು ನಿನ್ನನ್ನು ಸ್ಪರ್ಶಿಸುವುದಕ್ಕೆ ಕ್ಷಮಿಸು!” ಎಂದು ಪ್ರಾರ್ಥಿಸುತ್ತಾನೆ.
ಇದರ ಹಿಂದೆ ಇರುವ ಭಾವನೆ ಎಷ್ಟು ಉದಾತ್ತವಾದದ್ದು? ತಾಯ್ನಾಡಿನ ಮೇಲಿನ ಭಕ್ತಿಯು ಜಗನ್ಮಾತೆಯ ಮೇಲಿನ ಭಕ್ತಿಯಾಗಿಯೇ ರೂಪಾಂತರಗೊಳ್ಳುತ್ತದೆ ಎಂಬುದನ್ನು ಈ ಒಂದು ಶ್ಲೋಕ ಪ್ರತಿದಿನ ನಮಗೆ ನೆನಪಿಸುತ್ತದೆ. ಈ ಸಂಸ್ಕಾರವು ನಮ್ಮ ರಕ್ತದಲ್ಲಿ ಎಷ್ಟು ಆಳವಾಗಿ ಇಳಿದಿದೆಯೆಂದರೆ, ನಿತ್ಯಜೀವನದಲ್ಲೂ ನಮ್ಮ ಮಕ್ಕಳಿಗೆ ಭೂಮಿ ತಾಯಿಯನ್ನು ಪೂಜ್ಯಭಾವದಿಂದ ಕಾಣುವುದನ್ನು ಹೇಳಿಕೊಡುತ್ತೇವೆ. ನಮ್ಮ ಹಳ್ಳಿಗಳಲ್ಲಿ ಸಾಮಾನ್ಯ ರೈತನೂ ನೇಗಿಲ ತುದಿಯನ್ನು ಮಣ್ಣಿಗೆ ಮುಟ್ಟಿಸುವ ಮುನ್ನ ತಾಯಿಯ ಕ್ಷಮೆ ಕೇಳುತ್ತಾನೆ. ಇದಲ್ಲವೇ ಜೀವಂತ ಸಂಪ್ರದಾಯ?
ಈ ನಾಡಿನ ಕೊನೆಯ ಪ್ರಜೆಯಿಂದ ಹಿಡಿದು ಶ್ರೇಷ್ಠ ಜ್ಞಾನಿಯವರೆಗೆ, ಈ ತಾಯಿ ಭೂಮಿ ಎಂದೂ ಜೀವರಹಿತ ‘ಜಡ’ವಾಗಿ ಕಾಣಿಸಲೇ ಇಲ್ಲ. ಇವಳು ನಮಗೆ ಸದಾ ಜಾಗೃತವಾಗಿರುವ, ಕರುಣೆ ಹರಿಸುವ ‘ಮಹಾಮಾತೆಯೇ’.
ಇಲ್ಲಿಗೊಂದು ಸುಂದರ ನಿದರ್ಶನ ನೆನಪಾಗುತ್ತದೆ:
ಸ್ವಾಮಿ ವಿವೇಕಾನಂದರು ಇಂಗ್ಲೆಂಡಿನಲ್ಲಿದ್ದಾಗ, ಭಾರತಕ್ಕೆ ಮರಳುವ ಮುನ್ನ ಯಾರೋ ಅವರನ್ನು ಹೀಗೆ ಕೇಳಿದರಂತೆ — “ಅಮೆರಿಕ, ಇಂಗ್ಲೆಂಡಿನಂತಹ ಶ್ರೀಮಂತ ವೈಭವೋಪೇತ ದೇಶಗಳನ್ನು ನೋಡಿದ ಮೇಲೆಯೂ ನಿಮಗೆ ನಿಮ್ಮ ದರಿದ್ರ ಮಾತೃಭೂಮಿಯ ಬಗ್ಗೆ ಏನು ಅನಿಸುತ್ತದೆ?”
ಅದಕ್ಕೆ ಸ್ವಾಮೀಜಿ ನೀಡಿದ ಉತ್ತರ:
“ನಾನು ಈ ಹಿಂದೆ ಭಾರತವನ್ನು ಪ್ರೀತಿಸುತ್ತಿದ್ದೆ. ಆದರೆ ಈಗ? ಈ ಭಾರತದ ಪ್ರತಿ ಧೂಳಿನ ಕಣವೂ ನನಗೆ ಪಾವನವಾದದ್ದು! ಅದೀಗ ನನಗೆ ಕೇವಲ ಮಣ್ಣಲ್ಲ, ಪರಮ ಪಾವನ ಯಾತ್ರಾಸ್ಥಳ!”
ಇನ್ನೊಂದು ಹೃದಯಸ್ಪರ್ಶಿ ಪ್ರಸಂಗವಿದೆ. ವಿವೇಕಾನಂದರು ಪಾಶ್ಚಿಮಾತ್ಯ ದೇಶಗಳಲ್ಲಿ ಜಯಭೇರಿ ಬಾರಿಸಿ ಸ್ವದೇಶದ ತೀರಕ್ಕೆ ಮರಳಿದಾಗ, ಜನಸಾಗರವೇ ಅವರನ್ನು ಸ್ವಾಗತಿಸಲು ಕಾಯುತ್ತಿತ್ತು. ಸ್ವಾಮೀಜಿ ಹಡಗಿನಿಂದ ಕೆಳಗಿಳಿದು ದಕ್ಷಿಣದ ಕರಾವಳಿಯ ಮಣ್ಣಿನ ಮೇಲೆ ಕಾಲಿಟ್ಟ ತಕ್ಷಣ ಜನ ಜಯಘೋಷ ಮಾಡಿದರು. ಆದರೆ ಮರುಕ್ಷಣವೇ ಎಲ್ಲರೂ ಬೆರಗಾಗಿ ನೋಡಿದರು! ಸ್ವಾಮೀಜಿ ಆ ನೆಲದ ಮೇಲೆ ಸಾಷ್ಟಾಂಗ ನಮಸ್ಕಾರ ಮಾಡಿ, ಮರಳನ್ನು ತಲೆಯ ಮೇಲೆ ಹಾಗೂ ಶರೀರದ ಮೇಲೆ ಚೆಲ್ಲಿಕೊಳ್ಳುತ್ತಿದ್ದರು.
ಜನರ ಕುತೂಹಲಕ್ಕೆ ಸ್ವಾಮೀಜಿ ನಸುನಗುತ್ತಾ ಹೇಳಿದರು: “ಬರಿ ಭೌತಿಕತೆಯಲ್ಲೇ ಮುಳುಗಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ಇಷ್ಟು ಕಾಲ ನನ್ನ ಶರೀರವಿತ್ತು. ಆ ವಾತಾವರಣದಿಂದ ನನ್ನ ಶರೀರ ಕಲುಷಿತಗೊಂಡಿತ್ತು. ಆ ಕಲ್ಮಷವನ್ನು ತೊಳೆದು, ನನ್ನನ್ನು ನಾನು ಶುದ್ಧಗೊಳಿಸಿಕೊಳ್ಳಲು ಈ ಪವಿತ್ರ ಮಾತೃಭೂಮಿಯ ಧೂಳಿನಿಂದ ಅಭಿಷೇಕ ಮಾಡಿಕೊಳ್ಳುತ್ತಿದ್ದೇನೆ!” ಎಂತಹ ದಿವ್ಯ ಭಾವನೆ!
ಇನ್ನು ವಿವೇಕಾನಂದರ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರ ಮಾತನ್ನೇ ನೋಡಿ. ಒಮ್ಮೆ ಶಿಷ್ಯನೊಬ್ಬ ಪ್ರಕೃತಿ ಬಾಧೆ ತೀರಿಸಿಕೊಂಡು, ಶುಚಿ ಮಾಡಿಕೊಳ್ಳಲು ನೇರವಾಗಿ ಗಂಗಾನದಿಗೆ ಹೋಗುತ್ತಿದ್ದ. ಅದನ್ನು ಕಂಡ ಪರಮಹಂಸರು ಛೀಮಾರಿ ಹಾಕುತ್ತಾ ಹೇಳಿದರು: “ಲೇಯ್, ‘ಗಂಗಾವಾರಿ ಎಂದರೆ ಬ್ರಹ್ಮವಾರಿ’ (ಬ್ರಹ್ಮಸ್ವರೂಪ ನೀರು). ಅಂತಹ ದೇವಜಲವನ್ನು ನಿನ್ನ ದೇಹದ ಕೊಳೆಯಿಂದ ಮಲಿನಗೊಳಿಸಲು ಹೋಗುತ್ತಿದ್ದೀಯಲ್ಲ, ಎಂತಹ ಅಯೋಗ್ಯ ಕೆಲಸ ಇದು!”
ನೋಡಿ, ಈ ನಾಡಿನ ಮಹಾಪುರುಷರು ಬೆಳೆಸಿದ, ನಮ್ಮ ಜನಜೀವನದ ಪ್ರತಿಯೊಂದು ಸ್ತರದಲ್ಲೂ ಹಾಸುಹೊಕ್ಕಾಗಿರುವ ದಿವ್ಯ ಜಾಗೃತ ಪ್ರಜ್ಞೆ ಇಂಥದ್ದು!
ವಾಸ್ತವದಲ್ಲಿ, ಸದಾಕಾಲಕ್ಕೂ ನಮ್ಮ ರಾಷ್ಟ್ರೀಯ ಜೀವನದ ಕೇಂದ್ರಬಿಂದುವೇ ಈ ದೇಶಮಾತೆ. ನಮಗೆ ಉಸಿರಾಡಲು ಗಾಳಿ, ಕುಡಿಯಲು ನೀರು, ಉಣ್ಣಲು ಅನ್ನ ಕೊಟ್ಟು ತಾಯಿಯಂತೆ ಪೊರೆದಿದ್ದಾಳೆ. ಉತ್ತರದಲ್ಲಿ ಭೇದಿಸಲಾಗದ ಹಿಮಾಲಯ, ದಕ್ಷಿಣ-ಪಶ್ಚಿಮಗಳಲ್ಲಿ ಸ್ವಾತಂತ್ರ್ಯ ಯೋಧರಿಗೆ ಆಶ್ರಯ ನೀಡಿದ ವಿಂಧ್ಯ, ಸಹ್ಯಾದ್ರಿ ಪರ್ವತಶ್ರೇಣಿಗಳು ಹಾಗೂ ಕರಾವಳಿ — ಇವೆಲ್ಲವೂ ತಂದೆಯಂತೆ ನಿಂತು ನಮ್ಮನ್ನು ಕಾಯುತ್ತಿವೆ. ಇನ್ನು ಇದು ಧರ್ಮಭೂಮಿ, ಮೋಕ್ಷಭೂಮಿಯಾಗಿ ನಮಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುವ ‘ಗುರು’ವೂ ಆಗಿದ್ದಾಳೆ.
ಇಂದಿನ ತಾಂತ್ರಿಕ ಹಾಗೂ ಆಧುನಿಕ ಯುಗದಲ್ಲಿ ನಾವೆಷ್ಟೇ ಜಾಗತಿಕವಾಗಿ ಬೆಳೆದರೂ, ನಮ್ಮ ಈ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಬೇರುಗಳನ್ನು ಮರೆಯಬಾರದು. ನಾವು ಗಳಿಸುವ ಜ್ಞಾನ, ತಂತ್ರಜ್ಞಾನ ಮತ್ತು ಸಂಪನ್ಮೂಲಗಳು ಈ ಪವಿತ್ರ ಮಾತೃಭೂಮಿಯ ಪುನರುತ್ಥಾನಕ್ಕೆ ವಿನಿಯೋಗವಾದಾಗ ಮಾತ್ರ ನಮಗೊಂದು ಸಾರ್ಥಕತೆ ಸಿಗುತ್ತದೆ. ವಿಜ್ಞಾನಿಯಾಗಿ, ರೈತನಾಗಿ, ಶಿಕ್ಷಕನಾಗಿ, ಯೋಧನಾಗಿ ಅಥವಾ ಜವಾಬ್ದಾರಿಯುತ ಪ್ರಜೆಯಾಗಿ ನಾವು ಮಾಡುವ ಪ್ರತಿಯೊಂದು ದೈನಂದಿನ ಕೆಲಸವೂ ಈ ಮಾತೃಭೂಮಿಗೆ ಸಲ್ಲಿಸುವ ಪೂಜೆಯಾಗಬೇಕು. ಪರಿಸರವನ್ನು ರಕ್ಷಿಸುವುದು, ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು — ಇವೆಲ್ಲವೂ ಇಂದು ನಾವು ತಾಯಿನಾಡಿಗೆ ತೀರಿಸಬೇಕಾದ ಋಣಗಳು.
ಹಾಗಾಗಿಯೇ ನಮ್ಮ ಜನ್ಮಭೂಮಿಯೇ ನಮಗೆ ಮಾತೃ, ಪಿತೃ ಮತ್ತು ಗುರು! ಪ್ರತಿಯೊಂದೂ ಈ ಮಣ್ಣೇ ಆಗಿದೆ. ನಮ್ಮ ಮನಸ್ಸಿನಿಂದ ಆಂತರಿಕ ಅಂಧಕಾರವನ್ನು, ಪರಕೀಯ ದಾಸ್ಯದ ಭಾವನೆಯನ್ನು ಕಿತ್ತೊಗೆದು, ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಿಕೊಳ್ಳಬೇಕಿದೆ. ಇಂತಹ ಪುಣ್ಯಭೂಮಿಯಲ್ಲಿ ಜನ್ಮ ತಳೆದ ನಾವೇ ಧನ್ಯರು, ನಾವೇ ಪರಮ ಪುಣ್ಯವಂತರು!
(ಪ್ರೇರಣೆ:ಚಿಂತನ ಗಂಗಾ ಗ್ರಂಥ)
- ಅಗ್ನಿಹೋತ್ರಿ ಲೋಕೇಶ್ ಶರ್ಮಾ, ಬೆಂಗಳೂರು
9964056027
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
