ಇಂದ್ರಪ್ರಸ್ಥದಿಂದ ಅಂಕಣ
- ಡಾ. ಎ. ಸೂರ್ಯ ಪ್ರಕಾಶ್, ಹಿರಿಯ ಪತ್ರಕರ್ತ, ಪ್ರಧಾನ ಮಂತ್ರಿಗಳ ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಸದಸ್ಯ, ನವದೆಹಲಿ
ಧಾರ್ನಲ್ಲಿರುವ ಭೋಜಶಾಲಾ – ಕಮಲ್ ಮೌಲಾ ಸಂಕೀರ್ಣವು ವಾಸ್ತವವಾಗಿ ವಾಗ್ದೇವಿ ದೇವಿಯ ದೇವಸ್ಥಾನವಾಗಿದ್ದು, ಪರಮಾರ ವಂಶದ ರಾಜನಾದ ಭೋಜನಿಗೆ ಸಂಬಂಧಿಸಿದ ಸಂಸ್ಕೃತ ಅಧ್ಯಯನ ಕೇಂದ್ರವಾಗಿತ್ತು ಎಂದು ಘೋಷಿಸುವ ಮೂಲಕ ಮಧ್ಯಪ್ರದೇಶ ಹೈಕೋರ್ಟ್ ಶತಮಾನಗಳಿಂದ ಹಿಂದೂಗಳಿಗೆ ಆಗಿದ್ದ ಅನ್ಯಾಯವನ್ನು ಸರಿಪಡಿಸಿದೆ.
ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳು ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಸ್ಥಳದಲ್ಲಿ ಉತ್ಖನನ ನಡೆಸಿದ ಭಾರತೀಯ ಪುರಾತತ್ತ್ವ ಸಮೀಕ್ಷೆ (ASI) ಒದಗಿಸಿದ ನಿರ್ಣಾಯಕ ಸಾಕ್ಷ್ಯಗಳ ಆಧಾರದ ಮೇಲೆ, ಭೋಜಶಾಲಾ ಮೂಲತಃ ಕ್ರಿ.ಶ. 1034ರ ಸುಮಾರಿಗೆ ನಿರ್ಮಿಸಲಾದ ದೇವಸ್ಥಾನವಾಗಿತ್ತು ಮತ್ತು ನಂತರದ ಶತಮಾನಗಳಲ್ಲಿ ಮುಸ್ಲಿಂ ಆಕ್ರಮಣಗಳ ಬಳಿಕ ಅದನ್ನು ಮಸೀದಿಯನ್ನಾಗಿ ಪರಿವರ್ತಿಸಲು ಪ್ರಯತ್ನಗಳು ನಡೆದವು ಎಂದು ನ್ಯಾಯಾಲಯ ತೀರ್ಮಾನಿಸಿದೆ.
ನ್ಯಾಯಾಲಯವು ಮನಗಂಡ ಪ್ರಮುಖ ಅಂಶಗಳು
ಈ ಸ್ಥಳದಲ್ಲಿ ದೇವಿಯ ಆರಾಧನೆಯನ್ನು ಹಿಂದೂಗಳು ನಿರಂತರವಾಗಿ ನಡೆಸುತ್ತಿದ್ದು, ದೇವಸ್ಥಾನದ ಸಂಕೀರ್ಣವನ್ನು ಕಬಳಿಸಲು ನಡೆದ ದಾಳಿಗಳ ಪ್ರಯತ್ನಗಳ ನಡುವೆಯೂ ಅವರ ನಂಬಿಕೆ ಅಚಲವಾಗಿತ್ತು. 1991ರ ಪೂಜಾಸ್ಥಳಗಳ ಕಾಯ್ದೆ ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ, ಏಕೆಂದರೆ ಭೋಜಶಾಲಾ ASI ಆಡಳಿತ ವ್ಯಾಪ್ತಿಯಲ್ಲಿದೆ. ಸಂವಿಧಾನದ 25 ಮತ್ತು 26 ನೇ ವಿಧಿಗಳು ಹಿಂದೂಗಳು ತಮ್ಮ ಧರ್ಮವನ್ನು ಪ್ರತಿಪಾದಿಸುವ ಮತ್ತು ಆಚರಿಸುವ ಮತ್ತು ಅದಕ್ಕಾಗಿ ಪೂಜಾ ಸ್ಥಳಗಳನ್ನು ನಿರ್ವಹಿಸುವ ಹಕ್ಕನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ರಾಜ್ಯಕ್ಕೆ ನೀಡುತ್ತದೆ. ಅಲ್ಲದೆ, ರಾಮ ಜನ್ಮಭೂಮಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ನ ತೀರ್ಪಿನ ಪ್ರಮುಖ ಅಂಶಗಳು ಸಹ ಭೋಜಶಾಲೆಯ ಮೇಲಿನ ಹಿಂದೂಗಳ ಹಕ್ಕನ್ನು ಬೆಂಬಲಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.
2003ರ ಏಪ್ರಿಲ್ನಲ್ಲಿ ಮುಸ್ಲಿಮರಿಗೆ ಪ್ರತಿ ಶುಕ್ರವಾರ ನಮಾಜ್ ಸಲ್ಲಿಸಲು ಅವಕಾಶ ನೀಡಿದ್ದ ASI ಆದೇಶವನ್ನು ಸಹ ಈ ತೀರ್ಪಿನಲ್ಲಿ ಹೈಕೋರ್ಟ್ ರದ್ದುಗೊಳಿಸಿದೆ. ವಿವಾದಿತ ಪ್ರದೇಶವಾದ ಭೋಜಶಾಲಾ ಮತ್ತು ಕಮಲ್ ಮೌಲಾ ಮಸೀದಿಯ ಮಾಲೀಕತ್ವಕ್ಕಾಗಿ ಅರ್ಜಿಯನ್ನು ಹಾಕಿರುವುದಲ್ಲ ಎನ್ನುವುದನ್ನು ಅರ್ಜಿದಾರರು ಸ್ಪಷ್ಟಪಡಿಸಿದ್ದಾರೆ. ಭೋಜಶಾಲಾದಲ್ಲಿ ಪೂಜೆಯ ವಿಶೇಷ ಹಕ್ಕು ನೀಡಬೇಕು ಹಾಗೂ ಮುಸ್ಲಿಂ ಸಮುದಾಯವು ಈ ಆಸ್ತಿಯ ಯಾವುದೇ ಭಾಗವನ್ನು ಧಾರ್ಮಿಕ ಉದ್ದೇಶಗಳಿಗೆ ಬಳಸುವ ಹಕ್ಕನ್ನು ಹೊಂದಿಲ್ಲ ಎಂದು ಘೋಷಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.
ಭಾರತದ ಸಂವಿಧಾನದ 25ನೇ ವಿಧಿಯಡಿಯಲ್ಲಿ ನೀಡಲಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಮತ್ತು 29ನೇ ವಿಧಿಯಡಿಯಲ್ಲಿ ಹೇಳಲಾದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಹಕ್ಕನ್ನು ಜಾರಿಗೊಳಿಸುವಂತೆ ಅರ್ಜಿದಾರರು ಕೋರಿಕೆಯನ್ನು ಸಲ್ಲಿಸಿದ್ದರು. ಸಂಸ್ಕೃತ, ಸಾಹಿತ್ಯ, ವ್ಯಾಕರಣ, ಜ್ಯೋತಿಷ್ಯ, ಖಗೋಳಶಾಸ್ತ್ರ, ವೇದಗಳು ಮತ್ತು ಶಾಸ್ತ್ರಗಳ ಶಿಕ್ಷಣವನ್ನು ನೀಡುವ ಉದ್ದೇಶಕ್ಕಾಗಿ ಕ್ರಿ.ಶ. 1034ರಲ್ಲಿ ರಾಜನಾದ ಭೋಜನು ಸ್ಥಾಪಿಸಿದ ಈ ಆವರಣದಲ್ಲಿ ಸರಸ್ವತಿ (ವಾಗ್ದೇವಿ) ವಿಗ್ರಹವನ್ನು ಪುನಃ ಸ್ಥಾಪಿಸುವಂತೆ ಅರ್ಜಿದಾರರು ವಿನಂತಿಸಿದರು.
ಭೋಜಶಾಲಾ ದೇವಸ್ಥಾನ ಮತ್ತು ಸಂಸ್ಕೃತ ಶಿಕ್ಷಣದ ಆಡಳಿತ ಮತ್ತು ನಿರ್ವಹಣೆಯ ಉದ್ದೇಶಕ್ಕಾಗಿ ಟ್ರಸ್ಟ್ ಅನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ತ್ವ ಸ್ಥಳಗಳ ಕಾಯ್ದೆ, 1958ರ ನಿಬಂಧನೆಗಳಿಗೆ ಅನುಗುಣವಾಗಿ ಆಸ್ತಿಯ ಒಟ್ಟಾರೆ ಆಡಳಿತ ಮತ್ತು ನಿರ್ವಹಣೆಯನ್ನು ಮುಂದುವರಿಸಲು ಎಎಸ್ಐಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಹಿಂದೂಗಳ ವಾದದ ಪ್ರಮುಖಾಂಶಗಳು :
ವಾಗ್ದೇವಿಯ ರೂಪದಲ್ಲಿರುವ ಸರಸ್ವತಿ ಮಾತೆಯ ದೇವಾಲಯದ ನಾಶವು ಭಕ್ತರಲ್ಲಿ ಅಪಾರ ನೋವು ಮತ್ತು ಅವಮಾನವನ್ನು ಉಂಟುಮಾಡಿದೆ. ಇಂತಹ ಅನ್ಯಾಯವನ್ನು ಸಂವಿಧಾನದ 13(1) ನೇ ವಿಧಿಯ ಅಡಿಯಲ್ಲಿ ಸರಿಪಡಿಸಬೇಕಾಗಿದೆ ಹಾಗೂ ಸಂವಿಧಾನದ 21 ಮತ್ತು 25ನೇ ವಿಧಿಗಳ ಅಡಿಯಲ್ಲಿ ನೀಡಲಾದ ಜೀವನ ಮತ್ತು ಧಾರ್ಮಿಕ ರಕ್ಷಣೆಯ ಹಕ್ಕುಗಳನ್ನು ರಕ್ಷಿಸಬೇಕಾಗಿದೆ. ಮೂರ್ತಿಪೂಜೆಯನ್ನು ವಿರೋಧಿಸಿದ್ದ ಮುಸ್ಲಿಂ ಆಕ್ರಮಣಕಾರರು ದೇವಸ್ಥಾನವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಪ್ರಯತ್ನಿಸಿ ವಿಫಲರಾಗಿದ್ದರು. ಅಂದಿನಿಂದ ಇಲ್ಲಿಯವರೆಗೆ ಸರಿ ಸುಮಾರು 700 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಹಿಂದೂಗಳು ಈ ನೋವನ್ನು ಅನುಭವಿಸುತ್ತಿದ್ದಾರೆ. ಆದಾಗ್ಯೂ, ಸರ್ಕಾರವು ಅವರ ಬೇಡಿಕೆಗೆ ಮಣಿದು ಶುಕ್ರವಾರದಂದು ನಮಾಜ್ ಮಾಡಲು ಕಾನೂನುಬಾಹಿರವಾಗಿ ಅವಕಾಶ ಮಾಡಿಕೊಟ್ಟಿತು.
ಆರ್ಟಿಕಲ್ 25ರ ಅಡಿಯಲ್ಲಿ ಹಿಂದೂಗಳ ಪೂಜೆಯ ಹಕ್ಕು, ಜೊತೆಗೆ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ರಕ್ಷಿಸುವಲ್ಲಿ ರಾಜ್ಯದ ಅರ್ಥಾತ್ ಆಡಳಿತ ವ್ಯವಸ್ಥೆಯ ಬಾಧ್ಯತೆಯನ್ನು (ಆರ್ಟಿಕಲ್ 51 ಎ) ಕೂಡ ರಿಟ್ ಅರ್ಜಿಯು ಉಲ್ಲೇಖಿಸುತ್ತದೆ. ಅದರೊಂದಿಗೆ, 1903ರಿಂದ ಲಂಡನ್ ಮ್ಯೂಸಿಯಂನಲ್ಲಿ ಇರುವ ಸರಸ್ವತಿ ದೇವಿಯ ಪ್ರತಿಮೆಯನ್ನು ಭಾರತಕ್ಕೆ ಮರಳಿ ತಂದು ಭೋಜಶಾಲಾದಲ್ಲಿ ಮರುಪ್ರತಿಷ್ಠಾಪಿಸಲು ಪ್ರಯತ್ನಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೂಡ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಉಪಖಂಡದ ಸಾವಿರಾರು ಹಿಂದೂ ದೇವಾಲಯಗಳು ಎದುರಿಸಿದ ಪರಿಸ್ಥಿತಿಯಯನ್ನೇ ಭೋಜಶಾಲಾ ಮತ್ತು ಸರಸ್ವತಿ ದೇವಾಲಯವೂ ಎದುರಿಸಿತು. ಮೊದಲ ದಾಳಿ ಅಲ್ಲಾವುದ್ದೀನ್ ಖಿಲ್ಜಿಯಿಂದ ನಡೆಯಿತು. ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ನಿರಾಕರಿಸಿದ್ದ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹತ್ಯೆಗೀಡಾದರು ಎಂದು ಅರ್ಜಿದಾರರು ಹೇಳುತ್ತಾರೆ. ಹಿಂದೂ ರಾಜ ಮಹಲ್ ದೇವ್ ಧೈರ್ಯದಿಂದ ಹೋರಾಡಿ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದನು. ನಂತರ ಭೋಜಶಾಲಾದ ಒಂದು ಭಾಗವನ್ನು ಧ್ವಂಸಗೊಳಿಸಲಾಯಿತು ಹಾಗೂ ದೇವ-ದೇವಿಯರ ಮೂರ್ತಿಗಳಿಗೆ ಹಾನಿ ಮಾಡಲಾಯಿತು. 1401ರಲ್ಲಿ ದಿಲಾವರ್ ಖಾನ್ ಸರಸ್ವತಿ ದೇವಾಲಯದ ಒಂದು ಭಾಗವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಪ್ರಯತ್ನಿಸಿ ವಿಫಲನಾದನು. 1514ರಲ್ಲಿ ಮತ್ತೊಮ್ಮೆ ದಾಳಿ ನಡೆದಾಗ ದೇವಾಲಯದ ಭೂಮಿಯ ಒಂದು ಭಾಗದಲ್ಲಿ ಮಕ್ಬರಾ ನಿರ್ಮಿಸಲಾಯಿತು.
1875ರಲ್ಲಿ ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಮೇಜರ್ ಜನರಲ್ ವಿಲಿಯಂ ಕಿಂಕೇಡ್ ದೇವಸ್ಥಾನ ಸಂಕೀರ್ಣವನ್ನು ಉತ್ಖನನ ಮಾಡಿ, ಮುಸ್ಲಿಂ ಆಕ್ರಮಣಕಾರರು ಹೂತುಹಾಕಿದ್ದ ವಾಗ್ದೇವಿ (ಸರಸ್ವತಿ) ದೇವಿಯ ಮೂರ್ತಿಯನ್ನು ಹೊರತೆಗೆದನು. 1903ರಲ್ಲಿ ಲಾರ್ಡ್ ಕರ್ಝನ್ ಆ ಮೂರ್ತಿಯನ್ನು ಇಂಗ್ಲೆಂಡ್ಗೆ ಕೊಂಡೊಯ್ದನು. ಅದು ಈಗ ಇಂಗ್ಲೆಂಡ್ನ ಮ್ಯೂಸಿಯಂನಲ್ಲಿ ಇದೆ. ಅದೇ ಮ್ಯೂಸಿಯಂನಲ್ಲಿ ಭೋಜಶಾಲಾದಿಂದ ತೆಗೆದುಕೊಂಡಹೋದ ಸರಸ್ವತಿ ದೇವಿಯ ಪ್ರತಿರೂಪವಾದ ಅಂಬಾ ದೇವಿಯ ಪ್ರತಿಮೆಯೂ ಇದೆ.
ಮಾರ್ಚ್ 2024ರಲ್ಲಿ ಹೈಕೋರ್ಟಿನ ಆದೇಶದಂತೆ, ಎಎಸ್ಐ ಭೋಜಶಾಲಾ ದೇವಾಲಯ ಸಂಕೀರ್ಣದಲ್ಲಿ ವೈಜ್ಞಾನಿಕ ತನಿಖೆ, ಸಮೀಕ್ಷೆ ಮತ್ತು ಉತ್ಖನನಗಳನ್ನು ನಡೆಸಿತು. ಎಎಸ್ಐ ವರದಿಯಂತೆ ವೈಜ್ಞಾನಿಕ ಮತ್ತು ಪುರಾತತ್ತ್ವ ಶಾಸ್ತ್ರದ ತನಿಖೆಗಳು ಸ್ಥಳದಲ್ಲಿ ಮೂರು ವಿಭಿನ್ನ ವಾಸ್ತುಶಿಲ್ಪದ ಹಂತಗಳನ್ನು ತೆರೆದಿಟ್ಟಿವೆ. ಪ್ರಸ್ತುತ ಇರುವ ಮೂರನೇ ಹಂತದ ರಚನೆಯನ್ನು ಹಾನಿಗೊಂಡ ಹಳೆಯ ರಚನೆಯ ಮೇಲೆ ನಿರ್ಮಿಸಲಾಗಿದೆ. ಆರಂಭಿಕ ರಚನೆಗಳ ಅವಶೇಷಗಳು ಈಗಲೂ ಅಲ್ಲಿವೆ. ಅಲ್ಲಿನ ದಪ್ಪವಾದ ನೆಲದ ನಿರ್ಮಾಣದಲ್ಲಿ ಬಸಾಲ್ಟ್ ನ ದಪ್ಪವಾದ ಹಾಗೂ ಭಾರವಾದ ಚಪ್ಪಡಿಗಳನ್ನು ಕಾಣಬಹುದಾಗಿದೆ. ತನಿಖೆಯ ಸಮಯದಲ್ಲಿ ಕಂಡುಬಂದ ಕಲಾಕೃತಿಗಳ ಆಧಾರದ ಮೇಲೆ, ಈ ಇಟ್ಟಿಗೆಯ ರಚನೆಗಳನ್ನು ಪರಮಾರ ಅವಧಿಯಲ್ಲಿ ಅಂದರೆ ಅಂದಾಜು 10-11ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದೆಂದು ಹೇಳಿದ್ದಾರೆ.
ASI ವರದಿಯು ತಿಳಿಸಿದಂತೆ ಅಲ್ಲಿನ ಕಂಬಗಳು ಹಾಗೂ ಸ್ತಂಭಗಳ ಮೇಲಿನ ಅಲಂಕಾರಿಕ ರಚನೆಗಳ ಕಲಾ ವೈಶಿಷ್ಟ್ಯಗಳು ಅವು ಮೂಲತಃ ದೇವಾಲಯದ ಭಾಗವಾಗಿದ್ದವು ಎಂಬುದನ್ನು ಸೂಚಿಸುತ್ತವೆ. ಅವುಗಳ ಮರುಬಳಕೆ ಮಾಡುವಾಗ ಅವುಗಳ ಮೇಲಿದ್ದ ದೇವತೆಗಳು, ಮಾನವರು ಮತ್ತು ಪ್ರಾಣಿಗಳ ಚಿತ್ರಗಳನ್ನು ಹಾನಿಗೊಳಿಸಲಾಗಿದೆ. ಅವುಗಳ ಮೇಲೆ ಕೆತ್ತಿದ ಚಿತ್ರಗಳಲ್ಲಿ ಗಣೇಶ, ಬ್ರಹ್ಮ, ಪತ್ನಿಯೊಂದಿಗಿರುವ ದೇವತೆಗಳ ಚಿತ್ರಗಳು, ನರಸಿಂಹ, ಭೈರವ, ಅನೇಕ ದೇವತೆಗಳು, ಮಾನವರು ಹಾಗೂ ಪ್ರಾಣಿಗಳ ಪ್ರತಿಮೆಗಳು ಸೇರಿವೆ. ವಿವಿಧ ರೀತಿಯಲ್ಲಿರುವ ಪ್ರಾಣಿಗಳ ಚಿತ್ರಗಳಲ್ಲಿ ಸಿಂಹ, ಆನೆ, ಕುದುರೆ, ನಾಯಿ, ಮಂಗ, ಹಾವು, ಆಮೆ, ಹಂಸ ಮತ್ತು ಪಕ್ಷಿಗಳೂ ಕೆತ್ತನೆಯಲ್ಲಿ ಸೇರಿವೆ. ಪೌರಾಣಿಕ ಮತ್ತು ಸಂಯುಕ್ತ ಪ್ರತಿಮೆಗಳಲ್ಲಿ ವಿವಿಧ ಕೀರ್ತಿಮುಖಗಳು, ಮಾನವ ಮುಖ, ಸಿಂಹ ಮುಖ, ಸಂಯೋಜಿತ ಮುಖ ಹಾಗೂ ವಿವಿಧ ಆಕಾರಗಳ ವ್ಯಾಲ ಇತ್ಯಾದಿ ಸೇರಿವೆ. ಈ ಎಲ್ಲ ರೀತಿಯ ಮಾನವರು ಹಾಗೂ ಪ್ರಾಣಿಗಳ ಪ್ರತಿಮೆಗಳ ಕೆತ್ತನೆಗೆ ಮಸೀದಿಗಳಲ್ಲಿ ಅನುಮತಿಯಿಲ್ಲದ ಕಾರಣದಿಂದ ಈ ಕಂಬಗಳನ್ನು, ಕೆತ್ತನೆಗಳನ್ನು ವಿರೂಪಗೊಳಿಸಲಾಗಿದೆ. ಪಶ್ಚಿಮ ಹಾಗೂ ಪೂರ್ವಭಾಗದ ಕಂಬಗಳು ಹಾಗೂ ಸ್ತಂಭಗಳ ಮೇಲೆ ಅಂತಹ ಪ್ರಯತ್ನಗಳನ್ನು ಕಾಣಬಹುದು.
ಪೂರ್ವದ ಕಂಬಮಂಟಪದಲ್ಲಿ ಪ್ರಾಕೃತ ಭಾಷೆಯ ಎರಡು ಕಾವ್ಯಗಳಿರುವ ದೊಡ್ಡ ಶಾಸನ ಕಂಡುಬಂದಿದ್ದು, ಪ್ರತಿಯೊಂದು 109 ಚರಣಗಳನ್ನು ಒಳಗೊಂಡಿದೆ. ಇವು ರಾಜ ಭೋಜನು ಸ್ಥಾಪಿಸಿದ ಶಿಕ್ಷಣ ಕೇಂದ್ರದ ಕಲಿಕಾ ಪರಂಪರೆಯ ಅಸ್ತಿತ್ವವನ್ನು ಸೂಚಿಸುತ್ತವೆ.
ASI ಸಮೀಕ್ಷೆ ಮತ್ತು ತನಿಖೆಗಳು ವೈಜ್ಞಾನಿಕ ಹಾಗೂ ಪಕ್ಷಪಾತರಹಿತವಾಗಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತನ್ನ ಅಂತಿಮ ಹೇಳಿಕೆಯಲ್ಲಿ ಕೋರ್ಟ್, “ವಿವಾದಿತ ಪ್ರದೇಶವು ಸರಸ್ವತಿ ದೇವಿಯ ದೇವಸ್ಥಾನವಿದ್ದ ಭೋಜಶಾಲಾ ಎಂಬುದನ್ನು ನಂಬದಿರಲು ಯಾವುದೇ ಕಾರಣವಿಲ್ಲ” ಎಂದು ಹೇಳಿದೆ. ಪ್ರಾಣ ಪ್ರತಿಷ್ಠೆಯ ನಂತರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ದೇವತೆಯು ದೇವಾಲಯ ಧ್ವಂಸವಾದರೂ ಶಾಶ್ವತವಾಗಿಯೇ ಇರುತ್ತದೆ ಎಂಬ ಅರ್ಜಿದಾರರ ವಾದವನ್ನೂ ನ್ಯಾಯಾಲಯ ಒಪ್ಪಿಕೊಂಡಿದೆ. ಹಿಂದೂ ಸಂಪ್ರದಾಯಗಳ ಪ್ರಕಾರ ‘ಪ್ರಾಣ ಪ್ರತಿಷ್ಠಾಪನೆ’ಯು ದೇವರ ವಿಗ್ರಹದ ಪ್ರತಿಷ್ಠಾಪನೆಯಲ್ಲಿ ಅತ್ಯಂತ ಪ್ರಮುಖವಾದ ಅಂಶ ಎಂಬುದನ್ನು ಕೋರ್ಟ್ ಉಲ್ಲೇಖಿಸಿದೆ. ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳುವಂತೆ ಪುರಾತತ್ತ್ವ, ಐತಿಹಾಸಿಕ ದಾಖಲೆಗಳು, ASI ಅಧಿಸೂಚನೆಗಳು ಹಾಗೂ ಸಮೀಕ್ಷಾ ವರದಿಗಳನ್ನು ASI ಕಾಯ್ದೆಯ ನಿಯಮಗಳು ಮತ್ತು ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ಧರಿಸಿದ ತತ್ತ್ವಗಳ ಆಧಾರದ ಮೇಲೆ ಪರಿಶೀಲಿಸಲಾಗಿದೆ. ಪುರಾತತ್ತ್ವಶಾಸ್ತ್ರವು ವೈಜ್ಞಾನಿಕ ಅಧ್ಯಯನವಾಗಿರುವುದರಿಂದ ASI ತೀರ್ಮಾನಗಳ ಮೇಲೆ ನ್ಯಾಯಾಲಯ ವಿಶ್ವಾಸವಿಡಬಹುದು ಎಂದು ಹೇಳಿದೆ. ಪುರಾತತ್ತ್ವ ಅಧ್ಯಯನವು ಪಾರ್ದರ್ಶಕವಾದ ವಿಜ್ಞಾನವಾಗಿದೆ. ಆದ್ದರಿಂದ ನ್ಯಾಯಾಲಯವು ASIನ ವರದಿಯನ್ನು ಹಾಗೂ ಭಾರತದ ಸಂವಿಧಾನದ 25 ಮತ್ತು 26ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಆಧರಿಸಿ ನಂಬಬಹುದಾಗಿದೆ. ಪುರಾತತ್ತ್ವ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ದೇವಾಲಯಗಳು ಸೇರಿದಂತೆ ಪ್ರಾಚೀನ ಸ್ಮಾರಕಗಳು ಮತ್ತು ರಚನೆಗಳ ಸಂರಕ್ಷಣೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಸಾಂವಿಧಾನಿಕ ಬಾಧ್ಯತೆಯನ್ನು ಪ್ರತಿಯೊಂದು ಸರ್ಕಾರವೂ ಹೊಂದಿರುವಂತೆ ಗರ್ಭಗುಡಿ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯ ದೇವತೆಗಳ ಸಂರಕ್ಷಣೆಯ ಜವಾಬ್ದಾರಿಯನ್ನೂ ಹೊಂದಿದೆ. ಯಾತ್ರಿಕರಿಗೆ ಮೂಲಸೌಕರ್ಯ, ಆಶ್ರಯ, ಕಾನೂನು ಸುವ್ಯವಸ್ಥೆ ಮತ್ತು ಸ್ಥಳಗಳ ಪವಿತ್ರತೆಯ ಸಂರಕ್ಷಣೆಗಾಗಿ ನಿಧಿ ಒದಗಿಸುವುದೂ ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ನಾವು ಪುರಾತತ್ತ್ವ ಶಾಸ್ತ್ರ, ಐತಿಹಾಸಿಕ ಸಂಗತಿಗಳು, ಎಎಸ್ಐ ಅಧಿಸೂಚನೆಗಳು ಮತ್ತು ಸಮೀಕ್ಷಾ ವರದಿಗಳ ಆಧಾರದ ಮೇಲೆ ಮತ್ತು ಅಯೋಧ್ಯೆಯ ಪ್ರಕರಣದಲ್ಲಿ ನಿಗದಿಪಡಿಸಲಾದ ತತ್ತ್ವಗಳ ಆಧಾರದ ಮೇಲೆ ಪರಿಗಣಿಸಿದ್ದೇವೆ ಎಂಬುದನ್ನು ಕೋರ್ಟ್ ಹೇಳಿದೆ.
ಕಾಲಕ್ರಮೇಣ ಪೂಜೆ ನಿಯಂತ್ರಿಸಲ್ಪಟ್ಟಿದ್ದರೂ ಸ್ಥಳದಲ್ಲಿ ದೇವರ ಪೂಜೆ ಎಂದಿಗೂ ಸಂಪೂರ್ಣ ನಿಂತಿಲ್ಲ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಐತಿಹಾಸಿಕ ಸಾಹಿತ್ಯವು ಈ ಪ್ರದೇಶವು ಪರಮಾರ ವಂಶದ ರಾಜ ಭೋಜನೊಂದಿಗೆ ಸಂಬಂಧಿಸಿದ ಸಂಸ್ಕೃತ ಶಿಕ್ಷಣ ಕೇಂದ್ರವಾಗಿದ್ದ ಭೋಜಶಾಲಾ ಎಂಬುದನ್ನು ದೃಢೀಕರಿಸುತ್ತದೆ ಎಂದು ಹೇಳಿದೆ. ಆದ್ದರಿಂದ ಹಿಂದು ಫ್ರಂಟ್ ಫಾರ್ ಜಸ್ಟಿಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಅನುಮೋದಿಸಿ, ಸಂಕೀರ್ಣವನ್ನು ವಾಗ್ದೇವಿ ದೇವಿಯ ದೇವಸ್ಥಾನವಿರುವ ಭೋಜಶಾಲಾ ಎಂದು ಘೋಷಿಸಿ, ಹಿಂದೂಗಳ ಪ್ರವೇಶವನ್ನು ನಿರ್ಬಂಧಿಸಿದ್ದ ASI ಆದೇಶವನ್ನು ರದ್ದುಗೊಳಿಸಿದೆ. 1958ರ ಕಾಯ್ದೆಯ ಪ್ರಕಾರ ASI ಆಡಳಿತ ಮತ್ತು ನಿರ್ವಹಣೆಯನ್ನು ಮುಂದುವರಿಸಲಿದೆ. ಲಂಡನ್ ಮ್ಯೂಸಿಯಂನಲ್ಲಿರುವ ಸರಸ್ವತಿ ದೇವಿಯ ಪ್ರತಿಮೆಯನ್ನು ಮರಳಿ ತರಲು ಹಾಗೂ ಸಂಕೀರ್ಣದಲ್ಲಿ ಮರುಪ್ರತಿಷ್ಠಾಪಿಸಲು ಕೇಂದ್ರ ಸರ್ಕಾರವು ಮನವಿಯನ್ನು ಪರಿಗಣಿಸಬಹುದು ಎಂದು ನ್ಯಾಯಾಲಯ ಸೂಚಿಸಿದೆ. ಮುಸ್ಲಿಮರಿಗೆ ಮಸೀದಿ ನಿರ್ಮಿಸಲು ಸೂಕ್ತ ಭೂಮಿಯನ್ನು ನೀಡಬಹುದು ಎಂದೂ ಹೇಳಿದೆ.
ರಾಮ ಜನ್ಮಭೂಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರೂಪಿಸಿದ ಹತ್ತು ತತ್ವಗಳ ಆಧಾರದ ಮೇಲೆ ಹೈಕೋರ್ಟ್ ತನ್ನ ತೀರ್ಪನ್ನು ನೀಡಿದೆ. ಈ ತೀರ್ಪಿನ ವಿರುದ್ಧ ಮುಸ್ಲಿಮರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅಂತಿಮವಾಗಿ ಸುಪ್ರೀಂ ಕೋರ್ಟ್ ಏನು ತೀರ್ಮಾನಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ವಿಕ್ರಮಕ್ಕಾಗಿ ಬರೆದ ಇಂಗ್ಲಿಷ್ ಲೇಖನದ ಕನ್ನಡಾನುವಾದ – ಸಂಧ್ಯಾ ಶಾಸ್ತ್ರಿ
