ಅಂಕಣ – ಸಂಚಾರ
- ವೃಷಾಂಕ ಭಟ್, ಸಂಪಾದಕ, ಸಂವಾದ
ಪ್ರಪಂಚದಲ್ಲಿ ಇಷ್ಟೆಲ್ಲ ಏಕೆ ನಡೆಯುತ್ತಿದೆ ಮತ್ತು ಹೇಗೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಒಂದಲ್ಲಾ ಒಂದು ಸಮಯದಲ್ಲಿ ಅನಿಸಿಯೇ ಅನಿಸುತ್ತದೆ. ಅನಿರೀಕ್ಷಿತ ನಷ್ಟ ಹಾಗೂ ಲಾಭಗಳು ನಮ್ಮಲ್ಲಿ ಆಶ್ಚರ್ಯ ಮೂಡಿಸುತ್ತವೆಯಾದರೂ ಇಲ್ಲಿ ಯಾವುದೂ ಅನಿರೀಕ್ಷಿತವೂ ಅಲ್ಲ, ಚಮತ್ಕಾರವಂತೂ ಇಲ್ಲವೇ ಇಲ್ಲ!
ಈ ಜನ್ಮದಲ್ಲಿ ಮಾಡಿದ್ದರಿಂದ, ಹಿಂದಿನ ಜನ್ಮದಲ್ಲಿ ಮಾಡಿದ್ದರಿಂದ ನಮಗೆ ಫಲಗಳು ಸಿಗುತ್ತವೆ ಎನ್ನುತ್ತಾರೆ. ಹಿಂದಿನ ಜನ್ಮದ್ದನ್ನು ಕಂಡವರಿಗೆ ಇದು ಸತ್ಯವೇ ಇರಬಹುದು. ಸದ್ಯಕ್ಕೆ ಈ ಜನ್ಮದ್ದನ್ನು ಮಾತ್ರ ನೋಡಲು ಸಾಧ್ಯವಾದವರು ಈಗಿನದ್ದಷ್ಟನ್ನೇ ನೋಡೋಣ. ಮನುಷ್ಯನನ್ನು ಇಷ್ಟೆಲ್ಲ ಚಟುವಟಿಕೆಯಿಂದ ಇಟ್ಟದ್ದು ಯಾವುದು? ಘಟನೆಗಳು ಏಕೆ ಘಟಿಸುತ್ತಿವೆ? ನಮ್ಮನ್ನೂ ಸೇರಿದಂತೆ ಪ್ರತಿಯೊಬ್ಬನೂ ತನ್ನ ಜೀವಿತಾವಧಿಯಲ್ಲಿ ಮಾಡುವುದು ಅತ್ಯಂತ ಕಡಿಮೆ ಕೆಲಸಗಳನ್ನಾದರೂ ವಿಶ್ವದಲ್ಲಿ ಇಷ್ಟೊಂದು ಕೆಲಸಗಳು ಹೇಗೆ ನಡೆಯುತ್ತವೆ ಎಂಬುದನ್ನು ನೋಡೋಣ.
ಒಂದು ಸಣ್ಣ ಉದಾಹರಣೆ. ನಿಮಗೆ ಪ್ರತಿದಿನ ಬೆಳಗ್ಗೆ ತಿಂಡಿಯ ನಂತರ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸವಿದೆ ಎಂದಿಟ್ಟುಕೊಳ್ಳಿ. ಕಳೆದ ಹತ್ತು ವರ್ಷದಲ್ಲಿ ಒಂದು ದಿನವೂ ನೀವದನ್ನು ತಪ್ಪಿಸಿಲ್ಲ. ನೀವು ಕಾಫಿ ಕುಡಿಯುವುದು ನಿಮ್ಮ ಪಾಲಿಗೆ ಅತ್ಯಂತ ಸಣ್ಣ ಮತ್ತು ವೈಯಕ್ತಿಕ ವಿಷಯ. ನಿಮ್ಮ ಊರಿನಲ್ಲಿ ಸಾವಿರ ಮನೆಯಿದ್ದು ಆ ಮನೆಗಳಲ್ಲೂ ಪ್ರತಿದಿನ ಕಾಫಿ/ಟೀ ಕುಡಿಯುತ್ತಾರೆ. ಎಲ್ಲರಿಗೂ ಅದೊಂದು ಸಣ್ಣ ವಿಷಯ. ಆದರೆ ಸಾವಿರ ಮನೆಯವರು ಕಾಫಿ ಕುಡಿಯಲು ಮುನ್ನೂರು ಲೀಟರ್ ಹಾಲು ಬೇಕಾಗುತ್ತದೆ. ಮುನ್ನೂರು ಲೀಟರ್ ಹಾಲಿಗಾಗಿ 50 ಜನ ರೈತರು ಆಕಳನ್ನು ಸಾಕಿ ದಿನಕ್ಕೆ ಆರು ಲೀಟರಿನಂತೆ ಹಾಲು ಕೊಡುತ್ತಿದ್ದಾರೆ. ಆ ಹಾಲು ಮಾರಿ ಆ ಮುನ್ನೂರು ಮನೆಯವರು ತಮ್ಮ ಮನೆಗೆ ಅಕ್ಕಿ, ಬೇಳೆ ತರುತ್ತಾರೆ. ಆ ಮನೆ ಅದರಿಂದ ನಡೆಯುತ್ತದೆ. ಹಾಲು ಕೊಡುವ ಆ ದನಗಳಿಗೆ ಹಿಂಡಿ ಬೇಕು. ಹಿಂಡಿ (ದನಗಳಿಗಾಗಿ ತಯಾರಿಸುವ ಪೌಷ್ಠಿಕ ಆಹಾರ) ತಯಾರಿಸುವ ಫ್ಯಾಕ್ಟರಿಗಳು ನೂರಾರು ಜನ ಕಾರ್ಮಿಕರನ್ನು ಇಟ್ಟುಕೊಂಡು ಕೆಲಸ ಮಾಡುತ್ತವೆ. ಆ ಕಾರ್ಖಾನೆಗಳಿಗೆ ಬೇಕಾಗುವ ಯಂತ್ರಗಳನ್ನು ತಯಾರಿಸುವ ಕಾರ್ಖಾನೆಗಳು ಬೇರೆಯೇ ಇರುತ್ತವೆ. ಅಲ್ಲಿ ಇನ್ನೊಂದಿಷ್ಟು ಕಾರ್ಮಿಕರು. ಅಲ್ಲಿಯ ಆದಾಯದ ಮೇಲೆ ಸರ್ಕಾರ ಹಾಕುವ ತೆರಿಗೆ. ಹೀಗೆ ಒಂದಕ್ಕೊಂದನ್ನು ಸೇರಿಸಿದರೆ ಮುಗಿಯುವುದಿಲ್ಲ. ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನಿಗೆ ನೀವು ಕುಡಿಯುವ ಕಾಫಿಯ ಕಾರಣಕ್ಕೆ ಇದೆಲ್ಲ ನಡೆಯುತ್ತಿದೆ ಎಂಬುದು ಗೊತ್ತಿರುವುದಿಲ್ಲ. ಏಕೆಂದರೆ ಕಾಫಿ ಕುಡಿಯುವುದು ಅಷ್ಟೊಂದು ಸಣ್ಣ ಕೆಲಸ ಎಂದು ಆತನೂ ಭಾವಿಸಿರುತ್ತಾನೆ!.
ಇದೇ ಕಾರಣಕ್ಕೆ ತಿಳಿದವರು “ಏನಾದರೊಂದು ಕೆಲಸ ಮಾಡಬೇಕಾದರೆ ನೂರು ಸಲ ಯೋಚಿಸಿ” ಎನ್ನುತ್ತಿದ್ದರು. ಆಧುನಿಕರು ಇದನ್ನು ‘ಬಟರ್ಫ್ಲೈ ಎಫೆಕ್ಟ್’ ಎನ್ನುತ್ತಾರೆ. ವಿಶ್ವದ ಯಾವುದೋ ಮೂಲೆಯಲ್ಲಿ ಸಣ್ಣ ಚಿಟ್ಟೆಯೊಂದು ರೆಕ್ಕೆ ಬಡಿದರೆ ಆಗ ಉತ್ಪನ್ನವಾದ ಗಾಳಿಯ ವೇಗ ಕ್ರಮೇಣವಾಗಿ ಹೆಚ್ಚಾಗಿ ಇನ್ನೆಲ್ಲೋ ಬಿರುಗಾಳಿಯಾಗುವುದನ್ನು ಬಟರ್ಪ್ಲೈ ಎಫೆಕ್ಟ್ ಎನ್ನುತ್ತಾರೆ. ಇನ್ನೊಂದು ಉದಾಹರಣೆಯನ್ನು ನೋಡೋಣ. ಹಕ್ಕಿಯೊಂದು ತಾನು ತಿಂದು ಮಲದಲ್ಲಿ ವಿಸರ್ಜಿಸಿದ ಆಲದ ಹಣ್ಣಿನ ಬೀಜ ನೋಡಲು ಎಷ್ಟು ಸಣ್ಣದು. ಆದರೆ ಅದು ಮರವಾಗಿ ಬೆಳೆದು ನಾಲ್ಕೈದು ನೂರು ವರ್ಷಗಳ ಕಾಲ ಸ್ಥಿರವಾಗಿ ನಿಂತು ಕೋಟ್ಯಂತರ ಹಕ್ಕಿಗಳಿಗೆ ಹಣ್ಣು ನೀಡುತ್ತದೆ. ನಾನು ಹಾಕುವ ಹಿಕ್ಕೆಯಿಂದ ಮುಂದೆ ಕೋಟ್ಯಂತರ ಹಕ್ಕಿಗಳಿಗೆ ಆಹಾರ ಸಿಗುತ್ತದೆಂದು ಆ ಹಕ್ಕಿ ಯೋಚಿಸಿರುತ್ತದೆಯೇ? ಖಂಡಿತಾ ಇಲ್ಲ. ಒಳ್ಳೆಯದಾಗಲೀ ಕೆಟ್ಟದ್ದಾಗಲೀ, ಇಂತಹ ಪರಿಣಾಮಗಳು ಇದ್ದೇ ಇರುತ್ತವೆ. ಕ್ರಿಯೆ ಎಂಬುದು ಕೆಳಮುಖವಾದ ಪಿರಮಿಡ್ ಇದ್ದಂತೆ. ಶಾಂತವಾದ ಕೆರೆಗೆ ಎಸೆದ ಸಣ್ಣ ಕಲ್ಲು ಕೆರೆಯ ಎಲ್ಲಾ ಮೂಲೆಗಳಿಗೂ ತರಂಗಗಳನ್ನು ತಳ್ಳುವಂತೆ. ವಿವೇಕಾನಂದರು ಬರೆದ ‘ಸಾಂಗ್ ಆಫ್ ಸನ್ಯಾಸಿ’ಯಲ್ಲಿ ಈ ರೀತಿಯ ಸಾಲುಗಳಿವೆ.
“ಬೆಳೆಯ ಕೊಯ್ವನು ಬಿತ್ತಿದಾತನು;
ಪಾಪ ಪಾಪಕೆ ಕಾರಣ;
ವೃಕ್ಷಕಾರ್ಯಕೆ ಬೀಜ ಕಾರಣ; ಪುಣ್ಯ ಪುಣ್ಯಕೆ ಕಾರಣ”
(ಚಾಗಿಯ ಹಾಡು ಅನುವಾದ: ಕುವೆಂಪು)
ಇವೆಲ್ಲಾ ನಿಲ್ಲಬೇಕು ಎಂದು ಯಾರಿಗಾದರೂ ಅನಿಸುತ್ತಿದ್ದರೆ ಆತ ನಿಲ್ಲಬೇಕು. ಆತ ನಿಲ್ಲದಿದ್ದರೆ ಯಾವುದೂ ನಿಲ್ಲುವುದಿಲ್ಲ.
