ಅಂಕಣ – ಜ್ಞಾನ ಭಂಡಾರ
- ಅಶ್ವಿನಿ ಕುಲಕರ್ಣಿ, ಅಭಾಸಾಪ ಜಿಲ್ಲಾ ಕಾರ್ಯದರ್ಶಿ ಧಾರವಾಡ
ಇಸ್ರೇಲ್ನ ಆಂತರಿಕ ಬೇಹುಗಾರಿಕಾ ಸಂಸ್ಥೆ ಶಿನ್ಬೆಟ್ ಹಾಗೂ ರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆ ಮೋಸಾದ್ನ ರಣರೋಚಕ ಬೇಹುಗಾರಿಕಾ ಕಥೆಗಳು ಜಗತ್ಪ್ರಸಿದ್ಧ. ಇಸ್ರೇಲ್ ಅನ್ನು ಹುರಿದು ಮುಕ್ಕಲೆಂದೇ ಹುಟ್ಟಿದ ಹಮಾಸ್ ಎಂಬ ಭಯೋತ್ಪಾದಕ ಸಂಘಟನೆ ಹಾಗೂ ಇಸ್ರೇಲಿನ ಸಂಘರ್ಷಗಳು ದಿನ ಬೆಳಗಾದರೆ ಬಿತ್ತರವಾಗುವ ಸುದ್ದಿಗಳು. ಇಂತಹ ಸಂಘಟನೆಯನ್ನು ಹುಟ್ಟು ಹಾಕಿದ ನೇತಾರನ ಮಗನನ್ನೇ ತಮ್ಮ ಬೇಹುಗಾರನನ್ನಾಗಿ ಮಾಡಿಕೊಂಡ ಮಹಾಪ್ರಚಂಡ ಇಸ್ರೇಲ್ನ ಬೇಹುಗಾರಿಕಾ ಸಂಸ್ಥೆಗಳ ರಣರೋಚಕ ಸತ್ಯಘಟನೆಯ ಕುರಿತಾದ ಪುಸ್ತಕವೇ ‘ಸನ್ ಆಫ್ ಹಮಾಸ್’. ಇಸ್ರೇಲ್ನ ಯಹೂದಿಗಳು ತಾವು ಬದುಕಬೇಕೆಂದರೆ ಹೋರಾಡಲೇಬೇಕು, ಮೈಯೆಲ್ಲ ಕಣ್ಣಾಗಿದ್ದುಕೊಂಡು ಬದುಕಬೇಕು. ಪಕ್ಕದ ಅರಬ್ ರಾಷ್ಟ್ರಗಳ ಖಟ್ಟರ್ ಸಂಘಟನೆಗಳು ಹಾಗೂ ಮೂಲಭೂತವಾದಿಗಳೊಂದಿಗೆ ಅವರದು ನಿತ್ಯ ಸಂಘರ್ಷ. ಅಂತಹ ಹಲವು ಸಂಘಟನೆಗಳ ಪೈಕಿ ‘ಹಮಾಸ್’ ಕೂಡ ಒಂದು.
ಹಮಾಸ್ ಸಂಘಟನೆ ಹುಟ್ಟಿದ ಬಗೆ, ಕಾರಣ, ಅದು ಬೆಳೆದ ರೀತಿ, ಅದರ ಉದ್ದೇಶ ಮತ್ತು ಗುರಿ, ಅವರ ಕಾರ್ಯಾಚರಣೆ, ಹೋರಾಟಗಳು, ನಾಯಕರು, ಹೀಗೆ ಎಲ್ಲ ರೀತಿಯ ಮಾಹಿತಿಯೂ ಈ ಪುಸ್ತಕದಲ್ಲಿ ಲಭ್ಯ. ಹೀಗೆ ಹಮಾಸ್ನ ಕುರಿತಾದ ಪರಿಚಯ ಮಾಡಿಸಿಕೊಡುವುದು ಬೇರೆ ಯಾರೂ ಅಲ್ಲದೆ ಸ್ವತಃ ಈ ಸಂಘಟನೆಯ ಏಳು ಜನ ಸಂಸ್ಥಾಪಕರಲ್ಲಿ ಒಬ್ಬನಾದ ಶೇಕ್ ಹಸನ್ ಯೂಸಫ್ನ ಹಿರಿಯ ಮಗ ಹಾಗೂ ಈ ಪುಸ್ತಕದ ಲೇಖಕ ಮೋಸಾಬ್ ಹಸನ್ ಯೂಸಫ್. ವೆಸ್ಟ್ ಬ್ಯಾಂಕ್ನ ಅತ್ಯಂತ ಧಾರ್ಮಿಕ ಕುಟುಂಬವೊಂದರಲ್ಲಿ ಹುಟ್ಟಿ ಧರ್ಮವನ್ನು, ತನ್ನ ಜನತೆಯನ್ನು ಪ್ರೀತಿಸುತ್ತಾ ಅವರಿಗಾಗಿ ಚಿಕ್ಕ ವಯಸ್ಸಿನಲ್ಲಿ ಕೈಯಲ್ಲಿ ಕಲ್ಲು ಹಿಡಿದು ಸಿಕ್ಕ ಸಿಕ್ಕ ಇಸ್ರೇಲಿಗಳ ಮೇಲೆ ತೂರುತ್ತ, ತಾನೂ ತನ್ನ ತಂದೆಯಂತೆ ಆಗಬೇಕು, ಪ್ಯಾಲೆಸ್ತೀನ್ ಜನತೆಯ ಪಾಲಿನ ಹೀರೋ ಆಗಬೇಕು, ಹಮಾಸ್ ಎಂಬ ಸಂಘಟನೆಯ ಅವಿಭಾಜ್ಯ ಅಂಗವಾಗಬೇಕು ಎಂದುಕೊಳ್ಳುತ್ತಲೇ ಅದೇ ಹಮಾಸ್ ಸಂಘಟನೆಯ ಗುಪ್ತ ಮಾಹಿತಿಗಳನ್ನು ಶತ್ರು ರಾಷ್ಟ್ರವಾದ ಇಸ್ರೇಲ್ನ ಬೇಹುಗಾರಿಕಾ ಸಂಸ್ಥೆಗೆ ಕೊಡುವ ಬೇಹುಗಾರನಾಗಿ ಶತ್ರುಗಳು ಎಂದುಕೊಂಡಿದ್ದ ಇಸ್ರೇಲಿನ ಜೊತೆಗೂಡಿ ತನ್ನ ಅಪ್ಪನೇ ನಾಯಕನಾಗಿರುವ ಹಮಾಸ್ ಎಂಬ ಸಂಘಟನೆಯ ಅನೇಕ ಭಯೋತ್ಪಾದಕರನ್ನು ಹಿಡಿದುಕೊಡುತ್ತಾನೆ. ಹಮಾಸ್ನ ಎಷ್ಟೋ ದಾಳಿಗಳನ್ನು ವಿಫಲಗೊಳಿಸುತ್ತಾನೆ. ಅಷ್ಟೆಲ್ಲಾ ಯಾಕೆ, ಕೊನೆಗೆ ತಾನು ಅಷ್ಟೊಂದು ಪ್ರೀತಿಸುತ್ತಿದ್ದ ದೇಶ-ಧರ್ಮ-ಜನತೆಯನ್ನು ಬಿಟ್ಟು ಅಮೆರಿಕಕ್ಕೆ ವಲಸೆ ಹೋಗಿ ಶರಣಾರ್ಥಿಯಾಗಿ ನಿಲ್ಲುತ್ತಾನೆ. ಈ ಬಗ್ಗೆ ಮೂಡುವ ಕುತೂಹಲಭರಿತ ಪ್ರಶ್ನೆಗಳನ್ನು ಪುಸ್ತಕ ಓದಿಯೇ ತಣಿಸಿಕೊಳ್ಳುವುದು ಉತ್ತಮ.
ಇಸ್ರೇಲಿನ ಬೇಹುಗಾರಿಕಾ ಸಂಸ್ಥೆಗಳು, ಅವರ ಕಾರ್ಯಾಚರಣೆಯ ರೀತಿ-ನೀತಿ, ಮೈ ನವಿರೇಳಿಸುವ ಕುತೂಹಲಕಾರಿ ಆಪರೇಷನ್ಗಳು, ಇಸ್ರೇಲ್, ಪಾಲೆಸ್ತೀನ್, ಗಾಜಾಪಟ್ಟಿ, ಜೆರುಸಲೆಂ, ವೆಸ್ಟ್ ಬ್ಯಾಂಕ್, ರಾಮಲ್ಹಾ ಮೊದಲಾದ ನಗರಗಳಲ್ಲಿ ಹೆಚ್ಚು ಕಡಿಮೆ ದಿನನಿತ್ಯವು ಕಂಡುಬರುವ ದಾಳಿ, ಹೋರಾಟ, ಸಾವು-ನೋವು, ಮೊದಲಾದವುಗಳ ಮಾಹಿತಿ ಜೊತೆಗೆ ಪರಸ್ಪರ ಶತ್ರು ನೆಲಗಳಲ್ಲಿ ಹುಟ್ಟಿ, ಶತ್ರುಗಳಾಗಿದ್ದ ಮೋಸಾಬ್ ಹಾಗೂ ಇಸ್ರೇಲ್ನ ಬೇಹುಗಾರಿಕಾ ಸಂಸ್ಥೆ ಶಿನ್ಬೆಟ್ನ ಅಧಿಕಾರಿ ಕ್ಯಾಪ್ಟನ್ ಲಾಯ್ ಅವರ ನಡುವೆ ತೀರಾ ಅನಿರೀಕ್ಷಿತವಾಗಿ ಹುಟ್ಟಿ ಅತ್ಯಂತ ಗಟ್ಟಿಯಾಗಿ ನೆಲೆಗೊಳ್ಳುವ ಸ್ನೇಹದ ಕಥೆಯೂ ಓದುಗರನ್ನು ಅಚ್ಚರಿಗೊಸುತ್ತದೆ. ಮೂಲ ಪುಸ್ತಕವನ್ನು ಕನ್ನಡದ ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ತುಂಬಾ ಚಂದವಾಗಿ, ಅಚ್ಚುಕಟ್ಟಾಗಿ ಕನ್ನಡಕ್ಕೆ ತಂದಿದ್ದಾರೆ.
ಕೃ: ಸನ್ ಆಫ್ ಹಮಾಸ್ ಮೂಲ ಲೇಖಕರು: ಮೋಸಾಬ್
ಕನ್ನಡ ಅನುವಾದ: ಅಜಿತ್ ಹನುಮಕ್ಕನವರ್ ಪು: 332
ಬೆ: 325 ರೂ. ಪ್ರ: ಜೈಕೋ ಪಬ್ಲಿಶಿಂಗ್ ಹೌಸ್
