ಅಂಕಣ – ದೃಶ್ಯ
- ಅನುಭವ ಹಂಚಿಕೊಂಡು ಚಿತ್ರ, ಶಿಲ್ಪರಚಿಸಿದ 44 ವೃತ್ತಿಪರ ಕಲಾವಿದರು
- ಹೊಸ ದಾಖಲೆ ಬರೆಯುವತ್ತ ಹೆಜ್ಜೆ ಇಟ್ಟ ಎಸ್.ಜಿ. ವಾಸುದೇವ್ ಕನಸು
- ಗಣಪತಿ ಅಗ್ನಿಹೋತ್ರಿ, ದೃಶ್ಯ ಕಲಾವಿದ, ಕಲಾವಿಮರ್ಶಕ, ಪತ್ರಕರ್ತ
“A gathering of artists transforms the solitary creative process into a shared experience, providing the inspiration, networking, and validation that are essential for the art community to thrive”.
ಯಾವುದೇ ಪ್ರಕಾರದ ಕಲಾವಿದರು ಒಂದು ಕಡೆ ಸೇರಿಕೊಳ್ಳುವ ದೃಶ್ಯ ಕಣ್ಣೆದುರು ಕಂಡಾಗ ಬಹಳ ಮಂದಿ ಖುಷಿಯಾಗುತ್ತಾರೆ. ಅಂತಹ ಖುಷಿ ಪರಿಣಾಮಕಾರಿ ಮಾತುಗಳ ನೆನಪಿಗೂ ಕಾರಣವಾಗುತ್ತವೆ. ಸಾಮಾನ್ಯವಾಗಿ ಅನುಭವಿಗಳು ಇಂತಹ ಸಾರಾಂಶಗಳಿಂದ ಕೂಡಿರುವ ಮಾತುಗಳನ್ನು ಸಮುದಾಯಕ್ಕೆ ತಿಳಿಸುವ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಕಲಾವಿದರೆಲ್ಲರೂ ಒಂದು ಕಡೆ ಸೇರಿಕೊಳ್ಳುವುದರಿಂದ ಸೃಜನಶೀಲ ಪ್ರಕ್ರಿಯೆ (creative process) ಪರಸ್ಪರ ಹಂಚಿಕೊಳ್ಳಲು ಸಹಕಾರಿ. ಅಲ್ಲದೆ, ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ ಸ್ಫೂರ್ತಿ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಕಲಾವಿದರ ನಡುವಿನ ಸಂಪರ್ಕ ವೃದ್ಧಿಸಲಿದೆ. ಜೊತೆ ಜೊತೆಗೆ ಸ್ವಸಾಮರ್ಥ್ಯವನ್ನೂ ಒರಗೆ ಹಚ್ಚಿ ಪರೀಕ್ಷಿಸಿಕೊಳ್ಳುವ ಪ್ರಕ್ರಿಯೆಗೆ ವೇದಿಕೆಯಾಗಲಿದೆ. ಹೀಗಾಗಿ ಕಲಾ ಸಮುದಾಯಕ್ಕೆ ಇವೆಲ್ಲವೂ ಅಗತ್ಯ ಎನ್ನುವ ಸತ್ಯವನ್ನು ಗೊತ್ತು ಮಾಡುವಂತಹ ಚಟುವಟಿಕೆಗಳು ಮಹತ್ವ ಪಡೆದುಕೊಳ್ಳಬೇಕಿದೆ.
ಇಂತಹ ಅನೇಕ ಉದ್ದೇಶಗಳೊಂದಿಗೆ ಬೆಂಗಳೂರಿನಲ್ಲಿ ಆರಂಭವಾದ ಆರ್ಟ್ ಪಾರ್ಕ್ ಇಂದು ತನ್ನ ವ್ಯಾಪ್ತಿ ವಿಸ್ತರಿಸಿರುವುದು ಕರ್ನಾಟಕದ ಅನೇಕ ಕಲಾವಿದರಲ್ಲಿ ಸಂತಸ ಮೂಡಿಸಿದೆ. ಮೇ 17ರಂದು ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣ ‘ಕಲಾಗಂಗೋತ್ರಿ’ಯಲ್ಲಿ 93ನೇ ಆರ್ಟ್ ಪಾರ್ಕ್ ನಡೆಯಿತು. ಈ ಮೊದಲು ಬೆಂಗಳೂರಿನ ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತಿದ್ದ ಆರ್ಟ್ ಪಾರ್ಕ್ ನ 81ನೇ ಆವೃತ್ತಿಯನ್ನು ಬಾಗಲಕೋಟೆಯಲ್ಲಿ ನಡೆಸಲಾಯಿತು. ಸ್ಥಳೀಯ ಕಲಾವಿದರು, ಕಲಾಪ್ರಿಯರಿಂದ ಒಂದೊಳ್ಳೆಯ ಸ್ಪಂದನೆ ಸಿಕ್ಕ ಹಿನ್ನೆಲೆಯಲ್ಲಿ ತದನಂತರ ಮೈಸೂರಿನಲ್ಲೂ, ಇದೀಗ ದಾವಣಗೆರೆಯಲ್ಲೂ ನಡೆಸಲಾಯಿತು. ದಾವಣಗೆರೆಯಲ್ಲಿ ನಡೆದ ಆರ್ಟ್ ಪಾರ್ಕ್ ನಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ, ಬೇರೆ ಬೇರೆ ಪ್ರಕಾರದ ಕಲಾಕೃತಿಗಳನ್ನು ರಚಿಸಬಲ್ಲ 44 ವೃತ್ತಿಪರ ಕಲಾವಿದರು ಪಾಲ್ಗೊಂಡಿದ್ದರು.
ಕಲೆಯನ್ನು ಜನಸಾಮಾನ್ಯರ ಹತ್ತಿರಕ್ಕೆ ಕೊಂಡೊಯ್ಯುವ ಪ್ರಯತ್ನಗಳಲ್ಲಿ ಆರ್ಟ್ ಪಾರ್ಕ್ ಅಗ್ರಪಂಕ್ತಿಯಲ್ಲಿ ನಿಲ್ಲಲಿದೆ. ಕರ್ನಾಟಕ ಕಲಾ ಇತಿಹಾಸದಲ್ಲಿ ದಾಖಲಾಗಲೇಬೇಕಾದ ಪ್ರಯತ್ನ ಇದು ಎನ್ನುವುದರಲ್ಲಿ ಯಾವ ಸಂದೇಹವಿಲ್ಲ. ಇಂತಹದ್ದೊಂದು ಪರಿಕಲ್ಪನೆಯನ್ನು ಹುಟ್ಟು ಹಾಕಿ, ತಮ್ಮ ಇಳಿ ವಯಸ್ಸಿನಲ್ಲೂ ಇಡೀ ತಂಡದ ಜೊತೆ ನಿಂತು ಮುನ್ನಡೆಸುತ್ತಿರುವ ರಾಜ್ಯದ ಹಿರಿಯ ಕಲಾವಿದ ಎಸ್.ಜಿ. ವಾಸುದೇವ್ ಅವರ ಬದ್ಧತೆ ಅನನ್ಯ. ಸಾಕಷ್ಟು ಮಂದಿ ಯುವ, ಉತ್ಸಾಹಿ ಕಲಾವಿದರು ಜೊತೆಯಾಗಿ ನಿಂತಿದ್ದರಿಂದ ಇಂದು ಆರ್ಟ್ ಪಾರ್ಕ್ ಮಗದೊಂದು ಇತಿಹಾಸ ಸೃಷ್ಟಿಸುವಲ್ಲಿ ದಾಪುಗಾಲಿಟ್ಟಿದೆ. ದಾವಣಗೆರೆಯಲ್ಲಿ ನಡೆದ ಆರ್ಟ್ಪಾರ್ಕ್ ಒಂದರ್ಥದಲ್ಲಿ ಬಹಳ ಅಪರೂಪದ್ದಾಗಿತ್ತು. ಮೂರ್ನಾಲ್ಕು ತಲೆಮಾರಿನ ಕಲಾವಿದರು ಪಾಲ್ಗೊಂಡಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ಕರ್ನಾಟಕದ ಹಿರಿಯ ಕಲಾವಿದರಾದ ಎಸ್.ಜಿ. ವಾಸುದೇವ್, ಶಿಲ್ಪಿ ವೆಂಕಟಾಚಲಪತಿ, ವಿ. ಹರಿರಾಮ್, ಚಿ.ಸು. ಕೃಷ್ಣಸೆಟ್ಟಿ, ರೇಣುಕಾ ಕೆಸರಮಡು, ವೇಣುಗೋಪಾಲ್ ಎಚ್.ಎಸ್, ಎ.ಎಂ. ಪ್ರಕಾಶ್, ಎಂ.ಸಿ. ರಮೇಶ್, ಬಿ.ಜಿ. ಗುಜ್ಜಾರಪ್ಪಾ, ಮಕಾಳಿ ಕೆ.ಕೆ, ಎಸ್.ಕೆ. ಪತ್ತಾರ್ ಸೇರಿದಂತೆ ಇನ್ನು ಕೆಲ ಕಲಾವಿದರು ಒಂದು ತಲೆಮಾರಿನ ಕಲಾವಿದರಾದರೆ, ಅವರ ನಂತರದ ಅಂದರೆ 50-60 ವರ್ಷ ವಯೋಮಾನದ, 40-50 ವರ್ಷ ವಯೋಮಾನದ ಹಾಗೂ 30ರಿಂದ 40 ವರ್ಷ ವಯೋಮಾನದ ವೃತ್ತಿಪರ ಕಲಾವಿದರು ಆರ್ಟ್ ಪಾರ್ಕ್ ನಲ್ಲಿ ಪಾಲ್ಗೊಂಡಿದ್ದರು. ಕಲಾಕ್ಷೇತ್ರದಲ್ಲಿ ಆರು ದಶಕದ ಅನುಭವ ಹೊಂದಿರುವ ಕಲಾವಿದರ ಜೊತೆ ಅವರಿಗಿಂತ ಕಿರಿಯ ಕಲಾವಿದರು ಪರಸ್ಪರ ಅನುಭವ ಹಂಚಿಕೊಳ್ಳುವ ಅಪರೂಪದ ವೇದಿಕೆ ಇದಾಗಿತ್ತು.
ಕಲಾಶಾಲೆಗಳು ವಿದ್ಯಾರ್ಥಿಗಳ ನೋಂದಣಿ ಇಲ್ಲದೆ ಬಾಗಿಲು ಮುಚ್ಚುವ ಹಂತಕ್ಕೆ ತಲುಪುತ್ತಿರುವ ಸಂದರ್ಭದಲ್ಲಿ ಆರ್ಟ್ ಪಾರ್ಕ್ ರಾಜ್ಯದ ಜಿಲ್ಲಾಕೇಂದ್ರಗಳನ್ನು ತಲುಪುವುದರಿಂದ ಸಾಕಷ್ಟು ಬದಲಾವಣೆ ನಿರೀಕ್ಷಿಸಬಹುದಾಗಿದೆ. ಚಿತ್ರ, ಶಿಲ್ಪಗಳಂತಹ ದೃಶ್ಯ ಮಾಧ್ಯಮಗಳಿಂದಾಗುವ ಪ್ರಯೋಜನಗಳನ್ನು ಗ್ರಾಮೀಣ ಮಟ್ಟದ ಜನರಿಗೆ ತಲುಪಿಸುವಲ್ಲಿ ಆರ್ಟ್ ಪಾರ್ಕ್ ನಂತಹ ಕಾರ್ಯಕ್ರಮಗಳು ಸಾಕಷ್ಟು ರೀತಿಯಿಂದ ನೆರವಾಗಲಿದೆ. ಅನೇಕ ವಿದ್ಯಾರ್ಥಿಗಳು ಕಲೆಯನ್ನು ವೃತ್ತಿಯಾಗಿಸಿಕೊಳ್ಳುವುದು ಹೇಗೆ ಎನ್ನುವುದರ ಬಗೆಗಿನ ಮಾಹಿತಿಯನ್ನೂ ಇಂತಹ ಆರ್ಟ್ ಪಾರ್ಕ್ ಕಾರ್ಯಕ್ರಮಗಳಲ್ಲಿ ಪಡೆದುಕೊಳ್ಳಲು ಅವಕಾಶವಿದೆ. ಇನ್ನೊಂದು ಮುಖ್ಯವಾದ ಸಂಗತಿ ಏನೆಂದರೆ ಸಾಂಸ್ಕೃತಿಕವಾಗಿ, ಸಂಘಟನೆಯ ದೃಷ್ಟಿಯಿಂದ, ಒಗ್ಗಟ್ಟು ಪ್ರದರ್ಶಿಸುವ ದೃಷ್ಟಿಯಿಂದಲೂ ಆರ್ಟ್ ಪಾರ್ಕ್ ಪ್ರಮುಖವೆನಿಸುತ್ತದೆ. ಜನಸಾಮಾನ್ಯರಲ್ಲಿ ಕಲೆ, ಕಲಾವಿದರನ್ನು ಬೆಂಬಲಿಸೋಣ ಎನ್ನುವ ಮನಸ್ಥಿತಿ ಬೆಳೆಯಲಿಕ್ಕೂ ಆರ್ಟ್ಪಾರ್ಕ್ ಸಹಕಾರಿಯಾಗಲಿದೆ.
ಅಮೆರಿಕದ ಖ್ಯಾತ ಉದ್ಯಮಿ, ಫೋರ್ಡ್ ಮೋಟರ್ಸ್ ಕಂಪನಿಯ ಸಂಸ್ಥಾಪಕ ಹೆನ್ರಿ ಫೋರ್ಡ್ (Henry Ford) ಸೇರಿದಂತೆ ಅನೇಕ ಯಶಸ್ವಿ ಉದ್ಯಮಿಗಳು “Coming together is a beginning, staying together is progress, and working together is success” ಎನ್ನುವ ಮೂಲಕವೇ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಕಂಡುಕೊAಡಿದ್ದಾರೆ. “Great things are not done by impulse, but by a series of small things brought together” ಎಂದಿರುವ ವಿಶ್ವಖ್ಯಾತ ಕಲಾವಿದ ವಿನ್ಸೆಂಟ್ ವ್ಯಾನ್ ಗೋ (Vincent van Gogh) ಮಾತಿನಂತೆ ಆರ್ಟ್ ಪಾರ್ಕ್ ಅಗತ್ಯತೆ, ಪ್ರಾಮುಖ್ಯತೆ, ಪರಿಣಾಮ ಇನ್ನೊಂದು ದಶಕದ ಬಳಿಕ ಇಡೀ ಸಮುದಾಯಕ್ಕೆ ಗೊತ್ತಾಗಲಿದೆ. ಈ ಕ್ಷಣದಲ್ಲಿ ಇದೊಂದು ಸಣ್ಣ ಚಟುವಟಿಕೆಯಾಗಿಯೇ ಕಾಣಿಸಿರಬಹುದು ಆದರೆ, ವ್ಯಾನ್ ಗೋ ಹೇಳುವಂತೆ ದೊಡ್ಡದೊಂದು ಕಾರ್ಯ ಪ್ರಚೋದನೆಗಳಿಂದ ಆಗುವುದಲ್ಲ, ಆರ್ಟ್ ಪಾರ್ಕ್ ನಂತಹ ಸರಣಿ ಚಟುವಟಿಕೆಗಳಿಂದ ಸಾಧಿಸಲು ಸಾಧ್ಯವಿದೆ. ಕಲಾಸಮುದಾಯಕ್ಕೆ ಅಗತ್ಯವಿರುವ ಇಂತಹ ಕಾರ್ಯ ಆರ್ಟ್ ಪಾರ್ಕ್ ನಿಂದ ಸಾಧ್ಯವಾಗಲಿದೆ ಎನ್ನುವುದನ್ನು ಮುಂದೊಂದು ದಿನ ಇತಿಹಾಸವೇ ಉತ್ತರವಾಗಲಿದೆ. ಇನ್ನೇನು ನೂರರ ಗಡಿಗೆ ಹತ್ತಿರದಲ್ಲಿರುವ ಆರ್ಟ್ ಪಾರ್ಕ್ ಹೊಸದೊಂದು ಅಧ್ಯಾಯ ಬರೆಯಲಿದೆ, ಹೊಸದೊಂದು ದಾಖಲೆ ಸೃಷ್ಟಿಸಲಿದೆ. ಇದಕ್ಕೆ ಕಲಾಸಮುದಾಯ, ಕಲಾಭಿಮಾನಿಗಳ ಪ್ರೋತ್ಸಾಹ ಬಹಳ ಮುಖ್ಯವಾಗಿದೆ.
