ಅಂಕಣ – ಸಂಘ ಸೌರಭ – 43
- ಎಸ್.ಎಸ್. ನರೇಂದ್ರಕುಮಾರ್, ಲೇಖಕ
1948ರ ಜನವರಿ ತಿಂಗಳು. ಸ್ವಾತಂತ್ರ್ಯ ಬಂದು ಕೆಲವು ತಿಂಗಳುಗಳಾಗಿದ್ದವು ಅಷ್ಟೇ. ದೇಶ ವಿಭಜನೆಯ ಸಮಯದಲ್ಲಿ ಸಂಘದ ಸ್ವಯಂಸೇವಕರು ಮಾಡಿದ ರಾಷ್ಟ್ರರಕ್ಷಣಾ ಕಾರ್ಯದಿಂದ ಯುವಕರು ಸಂಘದೆಡೆಗೆ ಆಕರ್ಷಿತರಾಗಿದ್ದರು. ಮುಂಬರುವ ದಿನಗಳಲ್ಲಿ ಸಂಘಕಾರ್ಯವು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಬೃಹತ್ ಶಿಬಿರವೊಂದನ್ನು ಸಂಘದ ಹಿರಿಯರು ಆಯೋಜಿಸಿದರು.
ಮೂರು ದಿನಗಳ ಆ ಶಿಬಿರದಲ್ಲಿ ಹತ್ತು ಸಾವಿರ ತರುಣರನ್ನು ಸೇರಿಸಬೇಕೆಂಬ ಗುರಿ. ಶಿಬಿರ ಸ್ಥಾನ: ಬೆಂಗಳೂರಿನ ಯಶವಂತಪುರದ ಟಾಟಾ ಇನ್ಸ್ ಟಿಟ್ಯೂಟ್ನ ಮೈದಾನ. ಎರಡು ಇಳಿಜಾರುಗಳ ನಡುವಣ ಕಣಿವೆಯಂಥ ಆ ಪ್ರದೇಶವನ್ನು ಸಮತಟ್ಟುಗೊಳಿಸುವ ಕೆಲಸವನ್ನೂ ಸ್ವಯಂಸೇವಕರೇ ಮಾಡಬೇಕಿತ್ತು.
ಬೆಂಗಳೂರಿನ ಸುಮಾರು ಇನ್ನೂರು ಸ್ವಯಂಸೇವಕರು ಕಾರ್ಯಕ್ಕೆ ಟೊಂಕಕಟ್ಟಿ ನಿಂತರು. ಪ್ರತಿದಿನ ಬೆಳಿಗ್ಗೆ ಮನೆಯಿಂದ ಹೊರಟು ಕಾಲ್ನಡಿಗೆಯಲ್ಲಿ ಅಥವಾ ಸೈಕಲ್ಲಿನಲ್ಲಿ 5:30ಕ್ಕೆ ಶಿಬಿರ ಸ್ಥಾನ ತಲುಪಿ 7:30ರವರೆಗೆ ಮತ್ತು ಸಂಜೆ ಮತ್ತೆ 5ರಿಂದ 7 ಗಂಟೆಯವರೆಗೂ ಕೆಲಸ ಮಾಡಿ ಮನೆಗಳಿಗೆ ತೆರಳುತ್ತಿದ್ದರು. ಊಟ-ಉಪಾಹಾರಗಳೆಲ್ಲ ಮನೆಗೆ ತೆರಳಿದ ನಂತರವೇ. ಈ ರೀತಿ ಹಗಲೂ-ರಾತ್ರಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತರಿಗೆ ಒಂದು ಕಪ್ ಚಹಾ ನೀಡಲೂ ಅನುಕೂಲವಿರದಿದ್ದ ಕಷ್ಟಕರ ದಿನಗಳವು!.
ಶಿಬಿರ ನಿರ್ಮಾಣದ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದೇ ಒಂದು ಕುತೂಹಲಕಾರಿ ಕಥೆ – 1945ರ ದ್ವಿತೀಯ ಮಹಾಯುದ್ಧ ಮುಕ್ತಾಯಗೊಂಡ ನಂತರದಲ್ಲಿ ಸೈನ್ಯವು ತನ್ನ ಅನೇಕ ವಸ್ತುಗಳನ್ನು ಹರಾಜು ಹಾಕಿತ್ತು. ನಗರದ ಹಲವು ವ್ಯಾಪಾರಿಗಳು ಅವುಗಳನ್ನು ಹರಾಜಿನಲ್ಲಿ ಕೊಂಡು ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದರು. ಸಂಘದ ಕಾರ್ಯಕರ್ತರು ಈ ವ್ಯಾಪಾರಿಗಳನ್ನು ಸಂಪರ್ಕಿಸಿ, ಡೇರೆ ಗುಡಾರಗಳಿಗೆ ಬೇಕಾದ ಸಾಮಾಗ್ರಿಗಳ ಜೊತೆಗೆ ಅಗತ್ಯದ ಅನೇಕ ಸಾಮಾಗ್ರಿಗಳನ್ನು ಅಲ್ಲಿಂದ ಕೊಂಡರು. ಇದಕ್ಕೆ ತಗುಲಿದ ಒಟ್ಟು ವೆಚ್ಚ 60,000 ರೂಪಾಯಿಗಳು. ಶಿಬಿರಕ್ಕೆ ಸರಸಂಘಚಾಲಕರು ಮತ್ತು ಸರಕಾರ್ಯವಾಹರು ಭೇಟಿ ನೀಡಲಿದ್ದುದರಿಂದ ಅವರಿಗಾಗಿ ಬಾಗಿಲು-ಕಿಟಕಿಗಳಿದ್ದ ಸ್ವಲ್ಪ ಉತ್ತಮವಾದ ಡೇರೆಗಳನ್ನು 80 ರೂಪಾಯಿಗಳಿಗೆ ಕೊಳ್ಳಲಾಯಿತು.
ಅಡುಗೆಗೆ ಬೇಕಾಗಿದ್ದ ದೊಡ್ಡಗಾತ್ರದ ಪಾತ್ರೆ ಮುಂತಾದ ಸಾಮಾನುಗಳು ತುಮಕೂರಿನ ಸಿದ್ಧಗಂಗಾ ಮಠದಿಂದ ದೊರಕುವ ಭರವಸೆ ಸಿಕ್ಕಿತ್ತು. 40 ಬಾಣಸಿಗರ ತಂಡವೂ ಸಿದ್ಧವಾಗಿತ್ತು. ಆದರೆ, ಅಕ್ಕಿ ಸಂಗ್ರಹಣೆಯದ್ದೇ ದೊಡ್ಡ ಸಮಸ್ಯೆಯಾಗಿತ್ತು. 5ಕೆ.ಜಿಗಿಂತ ಹೆಚ್ಚು ಅಕ್ಕಿಯನ್ನು ಹೊರಗಿನಿಂದ ಬೆಂಗಳೂರಿನೊಳಗೆ ತರುವಂತಿರಲಿಲ್ಲ. ಶಿವಮೊಗ್ಗದಿಂದ ನೂರು ಚೀಲ ಅಕ್ಕಿ ಸಾಗಿಸಲು ಅಲ್ಲಿನ ಜಿಲ್ಲಾಧಿಕಾರಿ ಪರವಾನಗಿ ನೀಡಿದರು. ಬೆಂಗಳೂರಿನಿಂದ ಹೊರಹೋಗಿ ಬರುವ ಎಲ್ಲಾ ಬಸ್ ಚಾಲಕರನ್ನೂ ಮಾತನಾಡಿಸಲಾಯಿತು. ಅವರು ಪ್ರತಿದಿನ ಹೊರ ಊರುಗಳಿಂದ ಅಲ್ಲಿನ ಕಾರ್ಯಕರ್ತರು ಕಳುಹಿಸಿಕೊಡುವ ಅಕ್ಕಿಯನ್ನು ಶಿಬಿರಸ್ಥಾನದ ಬಳಿ ಇಳಿಸಿ ಹೋಗುತ್ತಿದ್ದರು. ರೈಲ್ವೇ ಗಾರ್ಡುಗಳಿಂದಲೂ ಸಹಕಾರ ದೊರಕಿತು. ಒಟ್ಟಿನಲ್ಲಿ ಶಿಬಿರ ಆರಂಭದ ಹೊತ್ತಿಗೆ ಅಗತ್ಯವಿದ್ದಷ್ಟು ಅಕ್ಕಿ ಸಂಗ್ರಹವಾಯಿತು.
ಅನಿರೀಕ್ಷಿತವಾಗಿ ಮತ್ತೊಂದು ಸಮಸ್ಯೆ ಉದ್ಭವವಾಯಿತು – ಬೆಂಗಳೂರಿನಲ್ಲಿ ಮುಸಲ್ಮಾನರ ದಂಗೆಗಳು ಭುಗಿಲೆದ್ದವು, ಸರ್ಕಾರ 144ನೇ ವಿಧಿಯನ್ನು ಘೋಷಿಸಿತು. ಶಿಬಿರದ ಜವಾಬ್ದಾರಿಯನ್ನು ಹೊತ್ತಿದ್ದ ಮಾನ್ಯ ಕೃ. ಸೂರ್ಯನಾರಾಯಣರಾಯರು ನೇರ ಗೃಹಮಂತ್ರಿಗಳನ್ನು ಭೇಟಿ ಮಾಡಿ, ಶಿಬಿರವನ್ನು ನಡೆಸಲು ಅನುಮತಿ ಕೇಳಿದರು. ಗೃಹಮಂತ್ರಿಗಳು ಶಿಬಿರದ ದಿನಾಂಕಗಳನ್ನು ಬದಲಿಸುವಂತೆ ಸೂಚಿಸಿದರು. ಆ ಪ್ರಕಾರ, 1948ರ ಜನವರಿ 19, 20, 21ರಂದು ತರುಣ ಶಿಬಿರ ಮತ್ತು 23, 24ರಂದು ಬಾಲಕರ ಸಮಾವೇಶ ನಿಶ್ಚಯವಾಯಿತು. ದೂರವಾಣಿ ಇಲ್ಲದ ಅಂದಿನ ದಿನಗಳಲ್ಲಿ, ರಾಜ್ಯದ ಎಲ್ಲ ಶಾಖೆಗಳಿಗೂ ದಿನಾಂಕ ಬದಲಾವಣೆ ತಿಳಿಸುವುದೂ ಸಾಕಷ್ಟು ಪರಿಶ್ರಮದ ಕೆಲಸವೇ ಆಗಿತ್ತು.
ಜನವರಿ 18ರಿಂದಲೇ ಶಿಬಿರಾರ್ಥಿಗಳು ಬಂದು ಸೇರಲಾರಂಭಿಸಿದರು. 19ರ ಬೆಳಗಿನ ಹೊತ್ತಿಗೆ ಸಂಖ್ಯೆ ಹತ್ತುಸಾವಿರ ದಾಟಿತ್ತು. ಪೂಜನೀಯ ಗುರೂಜಿ ಮತ್ತು ಮಾನನೀಯ ಬಾಳಾಸಾಹೇಬ ದೇವರಸರು ಶಿಬಿರಪೂರ್ತಿ ಇದ್ದು ಮಾರ್ಗದರ್ಶನ ಮಾಡಿದರು. ರಾಜ್ಯದ ಅಂದಿನ ಕಾನೂನುಮಂತ್ರಿಯಾಗಿದ್ದ ಕೆ.ಟಿ. ಭಾಷ್ಯಂ ಅವರು ಶಿಬಿರಕ್ಕೆ ಭೇಟಿ ನೀಡಿದ್ದರು. ಪಾಕಶಾಲೆ, ಭೋಜನ ವಿತರಣೆ, ವಸತಿ ವ್ಯವಸ್ಥೆ, ಅಷ್ಟು ಪ್ರಮಾಣದ ಅಕ್ಕಿ ಸಂಗ್ರಹಿಸಿದ ರೀತಿ ಇತ್ಯಾದಿ ಅಚ್ಚುಕಟ್ಟಾದ ಏರ್ಪಾಡುಗಳನ್ನು ಕಂಡು ಮೂಕವಿಸ್ಮಿತರಾದರು. ಸಂಘದ ಪ್ರಪ್ರಥಮ ಬೃಹತ್ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯಿತು. ಶಿಬಿರಕ್ಕಾಗಿ ಟೆಂಟ್ ಸಾಮಾಗ್ರಿಗಳನ್ನು ಮಾರಾಟ ಮಾಡಿದ್ದ ವ್ಯಾಪಾರಿಗಳೂ ಶಿಬಿರ ಸಂದರ್ಶಿಸಲು ಬಂದಿದ್ದರು. ಆ ವ್ಯವಸ್ಥೆಯನ್ನು ನೋಡಿದಾಗಲೇ ಅವರಿಗೆ ಆ ಸಾಮಾಗ್ರಿಗಳ ಮಹತ್ವ ಅರ್ಥವಾದದ್ದು. ಹಾಗಾಗಿ ಅವನ್ನೆಲ್ಲ ಮರಳಿ ಕೊಂಡುಕೊಳ್ಳುವುದಾಗಿ ಅವರು ಇಚ್ಚೆ ವ್ಯಕ್ತಪಡಿಸಿದರು. ಆದರೆ, ಸಂಘದ ಮುಂದಿನ ಕಾರ್ಯಕ್ರಮಗಳಿಗೆ ಸಾಮಾಗ್ರಿಗಳ ಅಗತ್ಯವಿದ್ದುದರಿಂದ ವ್ಯಾಪಾರಿಗಳ ಕೋರಿಕೆಯನ್ನು ನಿರಾಕರಿಸಲಾಯಿತು. ಆದರೆ ದುರ್ದೈವ. ಜನವರಿ 30ರಂದು ನಡೆದ ಗಾಂಧಿಹತ್ಯೆಯ ಮಿಥ್ಯಾರೋಪದ ಮೇಲೆ ಸಂಘವನ್ನು ನಿಷೇಧಿಸಿ, ಸಂಘದ ಪ್ರಮುಖರನ್ನೆಲ್ಲಾ ಬಂಧಿಸಿ, ಈ ವಸ್ತುಗಳನ್ನೆಲ್ಲಾ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತು. ಆ ವಸ್ತುಗಳು ಸೂಕ್ತ ರಕ್ಷಣೆಯಿಲ್ಲದೇ ಕ್ರಮೇಣ ನಾಶವಾದುದು ಇತಿಹಾಸ!!.
