ನಾಗಪುರದಲ್ಲಿ ನಡೆದ ಸಂಘ ಶಿಕ್ಷಾವರ್ಗದ ಸಮಾರೋಪದ ಸಿಂಹಾವಲೋಕನ
ಮೇ 11ರಿಂದ ಜೂನ್ 4ರವರೆಗೆ ನಾಗಪುರದಲ್ಲಿ ನಡೆದ ಆರ್ಎಸ್ಎಸ್ ಸಂಘ ಶಿಕ್ಷಾವರ್ಗ(ಕಾರ್ಯಕರ್ತ ವಿಕಾಸ ವರ್ಗ)ದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಮಾಡಿದ ಭಾಷಣದ ಸಮಗ್ರ ಅವಲೋಕನವನ್ನು ಇಲ್ಲಿ ನೀಡಲಾಗಿದೆ.
ಸುಖ, ಶಾಂತಿ ಮತ್ತು ಪರಿಸರ ಸಂರಕ್ಷಣೆಯನ್ನು ಒಂದೇ ಸಮಯದಲ್ಲಿ ಖಾತ್ರಿಪಡಿಸುವ ತತ್ತ್ವದ ಕೊರತೆ ವಿಶ್ವದಲ್ಲಿದೆ. ಭಾರತೀಯ ಪರಂಪರೆ ಮತ್ತು ಜ್ಞಾನ ವ್ಯವಸ್ಥೆಗಳಲ್ಲಿ ಇಂತಹ ಪರಿಹಾರಗಳ ಸುಳಿವುಗಳಿದ್ದರೂ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಸವಾಲಿನ ಕೆಲಸವಾಗಿದೆ. ವಿಶ್ವವು ಸಂಘರ್ಷ ಮತ್ತು ಸ್ವಾರ್ಥಾಧಾರಿತ ಅಭಿವೃದ್ಧಿ ಮಾದರಿಗಳಿಗೆ ಪರ್ಯಾಯವನ್ನು ಹುಡುಕುತ್ತಿರುವ ಈ ಸಂದರ್ಭದಲ್ಲಿ ಭಾರತದ ಕಾಲ ಬಂದಿದೆ. ಭಾರತ ಮುನ್ನಡೆಯಲು ಪೂರಕ ವಾತಾವರಣ ಜನಮಾನಸದಲ್ಲಿ ಸೃಷ್ಟಿಯಾಗುತ್ತಿದೆ.
ಮತ್ತೆ ಸನ್ನದ್ಧರಾಗಬೇಕಿದೆ
ಒಂದು ಕಾಲದಲ್ಲಿ ಭಾರತ ವಿಶ್ವಗುರುವಾಗಿತ್ತು ಎಂಬುದನ್ನು ಕೇಳಿದ್ದೇವೆ. ಕೇವಲ ಆಧ್ಯಾತ್ಮಿಕತೆಯಲ್ಲಿ ಮಾತ್ರವಲ್ಲದೆ, ಕ್ರಿಸ್ತಶಕ 1ರಿಂದ ಕ್ರಿಸ್ತಶಕ 1600ರವರೆಗೆ ಆರ್ಥಿಕ ದೃಷ್ಟಿಯಿಂದಲೂ ವಿಶ್ವದ ಮೊದಲ ದೇಶ ಭಾರತವಾಗಿತ್ತು. ಜ್ಞಾನ-ವಿಜ್ಞಾನದಲ್ಲೂ ನಾವೇ ಅತ್ಯುನ್ನತರಾಗಿದ್ದೆವು. ಇಂದಿನ ವಿಶ್ವದ ಭೌತಿಕ ಜ್ಞಾನದ ಮೂಲವನ್ನು ಅರಸುತ್ತಾ ಸಾಗಿದರೆ ಮತ್ತೆ ನಾವು ಭಾರತದ ಬಳಿಯೇ ತಲುಪುತ್ತೇವೆ. ಭಾರತೀಯ ಜ್ಞಾನ ಸಂಪತ್ತಿನ ಬಗ್ಗೆ ಚರ್ಚೆಯಾಗುತ್ತಿದೆ, ಅದನ್ನು ಅಧ್ಯಯನ ಮಾಡಿದರೆ ನಮಗೇ ಅರ್ಥವಾಗುತ್ತದೆ. ಸಂಸ್ಕೃತಿ, ನಾಗರಿಕತೆ, ಅಧ್ಯಾತ್ಮದ ಜೊತೆಗೆ ಅರ್ಥವಿದ್ಯೆ, ಭೌತಿಕ ವಿದ್ಯೆ, ಆಯುರ್ವೇದ, ಗಣಿತ ಇವೆಲ್ಲವೂ ಜಗತ್ತಿನಾದ್ಯಂತ ಪಸರಿಸಿದೆ.
ನಮ್ಮನ್ನು ಗುಲಾಮರನ್ನಾಗಿ ಮಾಡಿದವರು ನಮಗಿಂತ ಶ್ರೇಷ್ಠರೇನೂ ಆಗಿರಲಿಲ್ಲ, ಅವರ ಸಂಖ್ಯೆಯೂ ಹೆಚ್ಚಿರಲಿಲ್ಲ. ಬಹಳ ದೂರದಿಂದ ಬಂದು ಅವರು ನಮ್ಮನ್ನು ಗೆದ್ದರು. ಯಾವುದೇ ವಿಷಯದಲ್ಲೂ ಅವರು ನಮಗಿಂತ ಮೇಲಿದ್ದವರೇನಲ್ಲ. ಇದಕ್ಕೆ ಮುಖ್ಯಕಾರಣ ನಮ್ಮ ಕೆಲವು ವಿಚಾರಗಳನ್ನು ನಾವು ಉಳಿಸಿಕೊಳ್ಳದೇ ಮರೆತುಬಿಟ್ಟದ್ದು. ಅಗತ್ಯವಿದ್ದ ಸಿದ್ಧತೆಯನ್ನು ಕಳೆದುಕೊಂಡೆವು. ಆ ಸಿದ್ಧತೆಯನ್ನು ನಾವೀಗ ಮತ್ತೊಮ್ಮೆ ಮಾಡಿಕೊಳ್ಳಬೇಕಾಗಿದೆ.
ಮರಳಿ ಕೊಡು ದೇಶಕ್ಕಾಗಿ
‘ಮಾತೃವತ್ ಪರದಾರೇಷು, ಪರದ್ರವ್ಯೇಷು ಲೋಷ್ಠವತ್, ಆತ್ಮವತ್ ಸರ್ವಭೂತಾನಿ’ ಎಂಬ ಜೀವನಶೈಲಿ ಇಂದಿಗೂ ಹಿಂದೂ ಸಮಾಜದಲ್ಲಿ ಯಥೇಚ್ಛವಾಗಿ ಕಾಣಸಿಗುತ್ತದೆ. ನಾವು ಯಾವುದರಿಂದ ಹೀಗೆ ರೂಪುಗೊಂಡೆವು ಎಂದು ಜಗತ್ತು ಆಲೋಚಿಸುತ್ತದೆ. ಆ ಮಾರ್ಗ ನಮಗೆ ಎಲ್ಲಿಂದ ಲಭಿಸಿತು ಎಂಬುದನ್ನು ನೋಡುವುದಾದರೆ ಪರಂಪರೆಯಿಂದ ಸಿಕ್ಕಿತು. ಈ ದೇಶದ ಅನ್ನ, ನೀರು, ಗಾಳಿಯಿಂದ ನನ್ನ ಪೋಷಣೆಯಾಗಿದೆ. ಈ ದೇಶದ ಸಮೃದ್ಧಿ ಮತ್ತು ಭದ್ರತೆಯು ನಮ್ಮ ಪೂರ್ವಜರಿಗೆ ನೀಡಿದ ಸಂಸ್ಕಾರಗಳಿಂದ ನನ್ನ ಸಂಸ್ಕಾರ ರೂಪುಗೊಂಡಿದೆ. ಅದರ ಆಧಾರದ ಮೇಲೆ ನಾನು ಜಗತ್ತಿನಲ್ಲಿ ಮಾಡುವ ಕಾರ್ಯದ ಶ್ರೇಯಸ್ಸು ನನಗೆ ಸಿಗುತ್ತದೆ. ಆದರೆ ಇದೆಲ್ಲಾ ಯಾರದ್ದು? ಇದು ಈ ರಾಷ್ಟ್ರದ್ದು. ಸಮಾಜ, ಭೂಮಿ, ಅದರ ಮೇಲಿನ ಸೃಷ್ಟಿ, ಅರಣ್ಯ, ಪ್ರಾಣಿ, ನೀರು ಮತ್ತು ಅದರಲ್ಲಿ ವಾಸಿಸುವ ಸಮಾಜ, ಜನಪದ ಇವೆಲ್ಲದರ ಕಾರಣದಿಂದ ನನಗೆ ಇದೆಲ್ಲ ಸಿಕ್ಕಿದೆ. ಹಾಗಾಗಿ ನಾನು ಮರಳಿ ಕೊಡಬೇಕು.
ಮರಳಿ ಕೊಡುವ ಮಾತನ್ನೂ ನನ್ನ ಪರಂಪರೆಯೇ ನನಗೆ ಕಲಿಸುತ್ತದೆ. ʼಸೃಷ್ಟಿಯನ್ನು ಗೆಲ್ಲಿ, ಸೃಷ್ಟಿಯನ್ನು ಲೂಟಿ ಮಾಡಿ, ಸೃಷ್ಟಿ ಇರುವುದು ನಿಮ್ಮ ಬಳಕೆಗಾಗಿ’ ಎಂದು ನಮ್ಮ ಪರಂಪರೆ ಹೇಳಲಿಲ್ಲ. ಬದಲಾಗಿ “ನೀನೂ ಸೃಷ್ಟಿಯ ಒಂದು ಭಾಗ ಮತ್ತು ಇವೆಲ್ಲವೂ ನಿನ್ನ ಪೋಷಕರು” ಎಂಬುದನ್ನು ಈ ಪರಂಪರೆ ತಿಳಿಸಿಕೊಟ್ಟಿದೆ. ಹಾಗಾಗಿ ತುಳಸಿ ಗಿಡವೂ ನಮಗೆ ಮಾತೆ, ಹಸು ಎಂಬ ಪ್ರಾಣಿಯೂ ನಮಗೆ ಮಾತೆ ಮತ್ತು ಹರಿಯುವ ನದಿಯೂ ಮಾತೆ. ಈ ಕೃತಜ್ಞತೆಯನ್ನು ಇಟ್ಟುಕೊಂಡು ನಾವು ಜೀವನ ನಡೆಸಬೇಕು. ಎರಡೂ ಕೈಗಳಿಂದ ಸಂಪಾದಿಸಿ ಸಾವಿರ ಕೈಗಳಿಂದ ಹಂಚಬೇಕು. ನಮಗೆ ಸಿಕ್ಕ ಈ ಜೀವನದ ಅಭ್ಯಾಸ, ಪೀಳಿಗೆಯಿಂದ ಪೀಳಿಗೆಗೆ ನಮ್ಮ ಸಂಸ್ಕಾರಗಳ ಮೂಲಕ ನಮ್ಮ ಸಂಸ್ಕೃತಿಯಿಂದ ನಮಗೆ ಸಿಕ್ಕಿದೆ. ಆ ಅಭ್ಯಾಸ ಪ್ರಪಂಚದ ಬಳಿ ಇಲ್ಲ.
ಅದಕ್ಕಾಗಿಯೇ ಇದೆಲ್ಲವನ್ನೂ ಅರ್ಥಮಾಡಿಕೊಂಡು, ಓದಿ, ಕೇಳಿ ಜಗತ್ತು ಹೇಳುತ್ತದೆ- “ಈ ಜಗತ್ತಿಗೆ ಒಂದು ಹೊಸ ದಾರಿಯ ಅಗತ್ಯವಿದೆ. ಆ ದಾರಿಯನ್ನು ಭಾರತ ಮಾತ್ರ ನೀಡಬಲ್ಲದು” ಎಂದು. ಆದ್ದರಿಂದಲೇ ಭಾರತದ ಸಮಯ ಬಂದಿದೆ. ಆದರೆ ಕೇವಲ ಸಮಯ ಬಂದರೆ ಸಾಲದು, ಆ ಸಮಯಕ್ಕಾಗಿ ಸಿದ್ಧರಾಗಬೇಕಾಗುತ್ತದೆ. ನಿಯತಿಯು ನಮ್ಮ ಸಿದ್ಧತೆಗಾಗಿ ಕಾಯುತ್ತಿದೆ. “ಭಾರತ ವಿಶ್ವಗುರುವಾಗುತ್ತದೆ” ಎಂದು ಬಹಳ ದಿನಗಳಿಂದ ಹೇಳುತ್ತಿದ್ದೇವೆ. ಹಾಗಾದರೆ ನಿಂತಿರುವುದಾದರೂ ಎಲ್ಲಿ? ಅಲ್ಲಿಯೇ ನಿಂತಿದ್ದೇವೆ, ನಮ್ಮ ಸಿದ್ಧತೆ ಬಾಕಿ ಇದೆ.
ಸಂಘ ಶಕ್ತಿ ನಿರಂತರ
ಸಂಘದ ಸಂಸ್ಥಾಪಕರಾದ ಡಾ. ಹೆಡಗೆವಾರ್ ಅವರು, ಸಮಾಜದ ಉದ್ಧಾರಕ್ಕಾಗಿ ಅವರ ಕಾಲದಲ್ಲಿ ನಡೆಯುತ್ತಿದ್ದ ಎಲ್ಲಾ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು, ಅನುಭವ ಪಡೆದರು, ನಾಯಕರೊಂದಿಗೆ ಚರ್ಚಿಸಿದರು. ಕೊನೆಗೆ ಒಂದು ತೀರ್ಮಾನಕ್ಕೆ ಬಂದು, ಇವೆಲ್ಲವೂ ಆಗಬೇಕು, ಆದರೆ ಇದಕ್ಕೆ ಸಮಾಜದ ಸಿದ್ಧತೆಯ ಅಗತ್ಯವಿದೆ. ಆ ಸಿದ್ಧತೆಯ ಕಾರಣದಿಂದಾಗಿ, ಈ ಎಲ್ಲಾ ಕಾರ್ಯಗಳನ್ನು ಮಾಡಲು ಸಿದ್ಧರಾದ ವ್ಯಕ್ತಿಗಳು ಸಿಗುತ್ತಾರೆ. ಎಲ್ಲರ ಕೆಲಸಗಳನ್ನು ಪೂರ್ಣಗೊಳಿಸುವ ಈ ಕೆಲಸವನ್ನು ಅವರು 100 ವರ್ಷಗಳ ಹಿಂದೆ ಪ್ರಾರಂಭಿಸಿದರು. ಇದು ಅತ್ಯಂತ ಶ್ರದ್ಧೆಯಿಂದ ಮಾಡಬೇಕಾದ ಕೆಲಸ. ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಸಮಯ ವಿನಿಯೋಗಿಸಬೇಕಾಗುತ್ತದೆ. ವರ್ಷಗಳ ಕಾಲ ಶ್ರಮಿಸಿದಾಗ ಒಬ್ಬ ವ್ಯಕ್ತಿ ಸ್ವಲ್ಪ ಮಟ್ಟಿಗೆ ಸಿದ್ಧನಾಗುತ್ತಾನೆ. ಹೀಗಾಗಿ, ಉಳಿದೆಲ್ಲಾ ಕೆಲಸಗಳಿಂದ ದೂರ ಸರಿದು ಈ ಕಾರ್ಯದ ಮೇಲೆಯೇ ಅವರು ಗಮನ ಹರಿಸಿದರು. ಅದರ ಪ್ರತಿಫಲವನ್ನು ನೀವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಂದಿನ ಸ್ವರೂಪದಲ್ಲಿ ನೋಡುತ್ತಿದ್ದೀರಿ.
ಸಂಘವು ಇದೆಲ್ಲವನ್ನೂ ಏಕೆ ಮಾಡಬೇಕು? ತಮಗಾಗಿ ಅಂತೂ ಮಾಡುತ್ತಿಲ್ಲ. ಇದೆಲ್ಲವೂ ರಾಷ್ಟ್ರಕ್ಕಾಗಿ. ನಮ್ಮ ಹೆಸರನ್ನು ಇತಿಹಾಸ ತೆಗೆದುಕೊಳ್ಳದಿದ್ದರೂ ಅದು ಅತ್ಯಂತ ಒಳ್ಳೆಯದೇ, ಸಂಪೂರ್ಣ ಶ್ರೇಯಸ್ಸು ಸಮಾಜಕ್ಕೇ ಸಲ್ಲಬೇಕು. ಏಕೆಂದರೆ ಸಮಾಜದ ಸಂಘಟಿತ ಶಕ್ತಿಯಿಂದಲೇ ರಾಷ್ಟ್ರದ ಉದ್ಧಾರವಾಗುತ್ತದೆ. ಹಿಂದೂ ಭಾರತಕ್ಕಾಗಿ ಜವಾಬ್ದಾರನಾಗಿದ್ದಾನೆ. ಸಂಘಟಿತ ಹಿಂದೂ ಸಮಾಜದ ಶಕ್ತಿಯು ಎಲ್ಲರನ್ನೂ ಬೆಸೆಯುವ, ಎಲ್ಲರನ್ನೂ ಮುನ್ನಡೆಸುವ, ಎಲ್ಲರನ್ನೂ ಉನ್ನತೀಕರಿಸುವ ಧ್ಯೇಯವನ್ನು ಹೊಂದಿದೆ. ದೇಹ, ಮನಸ್ಸು, ಬುದ್ಧಿಯನ್ನು ಜೋಡಿಸುವ ಅಂಶವು ‘ಆತ್ಮ’ ಎಂದು ಕರೆಯಲ್ಪಡುತ್ತದೆ. ವ್ಯಕ್ತಿ, ಸಮಾಜ ಮತ್ತು ಸೃಷ್ಟಿಯನ್ನು ಬೆಸೆಯುವ ಅಂಶವು ‘ಪರಮಾತ್ಮ’ ಎಂದು ಕರೆಯಲ್ಪಡುತ್ತದೆ. ಅದೇ ರೀತಿ, ಅರ್ಥ ಮತ್ತು ಕಾಮಗಳನ್ನು ಬಂಧಿಸಿ ಮೋಕ್ಷದ ಕಡೆಗೆ ಕೊಂಡೊಯ್ಯುವ ಅಂಶವು ‘ಧರ್ಮ’ ಎಂದು ಕರೆಯಲ್ಪಡುತ್ತದೆ. ನಮ್ಮ ದೇಶ ಧರ್ಮಪ್ರಾಣಯುತವಾದದ್ದು. ನಮ್ಮ ಧರ್ಮವನ್ನು ರಕ್ಷಿಸುತ್ತಾ, ನಮ್ಮ ರಾಷ್ಟ್ರವನ್ನು ಪರಮ ವೈಭವ ಸಂಪನ್ನವಾಗಿ ಮಾಡಬೇಕಾಗಿದೆ.
ನಮ್ಮ ಒಬ್ಬ ಕಾರ್ಯಕರ್ತರು ವಿದೇಶದಲ್ಲಿ ವಾಸಿಸುವ ಹಿಂದೂ ನವ ಪೀಳಿಗೆಯ ಮುಂದೆ ಈ ಮಾತನ್ನು ಹೇಳಿದ್ದರು, “ನೀವು ಹಿಂದೂ ಸ್ವಯಂಸೇವಕ ಸಂಘದ ಕೆಲಸವನ್ನು ಎಷ್ಟರಮಟ್ಟಿಗೆ ಮಾಡಬೇಕೆಂದರೆ, ಅದನ್ನು ನೋಡಿ ಅಲ್ಲಿನ ಜನರು ತಮಗೂ ಒಂದು ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ಇರಬೇಕು ಎಂದು ಬಯಸುವಂತಾಗಬೇಕು. ಇಡೀ ಜಗತ್ತು ನಮ್ಮನ್ನು ನೋಡಿ, ಯಾವ ಬುನಾದಿಯ ಮೇಲೆ ಇವರು ತಮ್ಮ ದೇಶವನ್ನು ಕಟ್ಟಿದ್ದಾರೋ, ಅದೇ ಬುನಾದಿಯ ಮೇಲೆ ನಾವು ನಮ್ಮ ದೇಶವನ್ನು ನಮ್ಮ ಪ್ರಕೃತಿಗೆ ತಕ್ಕಂತೆ ಕಟ್ಟುತ್ತೇವೆ ಎಂದು ಹೇಳುವ ರೀತಿಯಲ್ಲಿ ಭಾರತ ತನ್ನ ಮಾರ್ಗದೊಂದಿಗೆ ನಿಲ್ಲಬೇಕು” ಎಂದು. ಆಗ ಸೃಷ್ಟಿಯಾಗುವ ಎಲ್ಲ ರಾಷ್ಟ್ರಗಳ ನಿರ್ಮಾಣದ ತಳಪಾಯವೂ ‘ವಿಶ್ವ ಬಂಧುತ್ವ’ದ್ದಾಗಿರುತ್ತದೆ, ‘ವಸುಧೈವ ಕುಟುಂಬಕಂ’ ಎಂಬುದು ನಿಜವಾಗುತ್ತದೆ. ಎಲ್ಲರಲ್ಲೂ ಒಂದೇ ಅಂಶವನ್ನು ಕಾಣುವ ದೃಷ್ಟಿಯಿರುತ್ತದೆ. ಅದರ ಆಧಾರದ ಮೇಲೆ ಪ್ರಪಂಚದ ದೇಶಗಳು ನಿರ್ಮಾಣವಾದಾಗ, ಜಗತ್ತಿನ ಎಲ್ಲಾ ರಾಷ್ಟ್ರಗಳು ತಮ್ಮ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಲೇ, ಇಡೀ ವಿಶ್ವದ ನಿರ್ವಹಣೆಯಲ್ಲಿ ತಮ್ಮ ಕೊಡುಗೆಯನ್ನು ಪರಸ್ಪರ ಮೈತ್ರಿ ಭಾವದಿಂದ ಒಟ್ಟಾಗಿ ನೀಡುತ್ತಿರುತ್ತವೆ. ಅಂತಹ ಒಂದು ಕನಸಿನಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೆಲಸ ಶುರುವಾಯಿತು. ಈಗ ಸಂಘ ಎಲ್ಲೆಡೆ ಪರಿಚಿತವಾಗಿದೆ. ಸಮಾಜದ ಪ್ರೀತಿಯೂ ಸಿಗುತ್ತಿದೆ, ನಂಬಿಕೆಯೂ ಇದೆ.
ದೇಶಕಟ್ಟುವ ಕಾರ್ಯಕ್ಕೆ ಬೇಕಾದ ಗುಣಮಟ್ಟವನ್ನು ಸೃಷ್ಟಿಸುವ ತರಬೇತಿ ಸಂಘ ಶಿಕ್ಷಾವರ್ಗದಲ್ಲಿ ನಡೆಯುತ್ತದೆ. ಶಿಬಿರಾರ್ಥಿಗಳು ಮಾಡಿದ ಕಾರ್ಯಕ್ರಮಗಳನ್ನು ನೀವು ನೋಡಿದ್ದೀರಿ. ನೋಡಲು ಅವು ಬಹಳ ಸರಳ ಮತ್ತು ನೇರವಾಗಿವೆ. ಇಷ್ಟು ದೊಡ್ಡ ವ್ಯಾಪಕ ಗುರಿಗೂ ಅದಕ್ಕೂ ಏನು ಸಂಬಂಧ? ಎಂದು ಹೊರಗಿನಿಂದ ನೋಡಿದರೆ ಅರ್ಥವಾಗುವುದಿಲ್ಲ. ಒಳಗೆ ಬಂದು ನೋಡಬೇಕು, ಆಗ ಅದು ಅರಿವಾಗುತ್ತದೆ. ಅದನ್ನು ಪದಗಳಲ್ಲಿ ಹೇಳಲಾಗದು, ಪುಸ್ತಕಗಳಲ್ಲಿ ಬರೆಯಲಾಗದು, ಅದನ್ನು ಅನುಭವಿಸಿಯೇ ತಿಳಿಯಬೇಕು. ಅದಕ್ಕಾಗಿಯೇ ನಾವು ಈ ವರ್ಗಕ್ಕೆ ಸಂಘವನ್ನು ಒಳಗಿನಿಂದ ನೋಡಲು ಆಹ್ವಾನಿತರನ್ನು ಕರೆಯುತ್ತೇವೆ.
ಸಂಘಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆದರೆ ವಾಸ್ತವವಾಗಿ ಇದು ಕೇವಲ ಸಂಘದ ಪ್ರಯತ್ನವಲ್ಲ. ನಾವೆಲ್ಲರೂ ಈ ಪ್ರಯತ್ನವನ್ನು ಮಾಡಬೇಕು, ಏಕೆಂದರೆ ಭಾರತದ ಸಮಯ ಬಂದಿದೆ. ಭಾರತವೀಗ ಉನ್ನತಿಯತ್ತ ಸಾಗಬೇಕಿದೆ. ಸಾಗಬೇಕೆಂಬ ಇಚ್ಛೆಯೂ ಎಲ್ಲರಿಗೂ ಇದೆ. ಆದರೆ ಅಡೆತಡೆಗಳೂ ಇವೆ. ನಮ್ಮಲ್ಲಿ ಒಡಕು ಮೂಡಿಸುವವರೂ ಇದ್ದಾರೆ. ಭಾರತ ದೊಡ್ಡದಾಗುವುದನ್ನು ಸಹಿಸದ ಶಕ್ತಿಗಳು, ಸಣ್ಣ-ಪುಟ್ಟ ನೆಪಗಳನ್ನು ಹುಡುಕಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ತುದಿಗಾಲಲ್ಲಿ ನಿಂತಿವೆ. ಅವರ ಷಡ್ಯಂತ್ರಗಳೂ ನಡೆಯುತ್ತಿವೆ. ಈ ಸಂಸ್ಕಾರಗಳು ಪ್ರಬಲವಾದರೆ ಜಗತ್ತಿನಲ್ಲಿ ತಮ್ಮ ಆಟ ನಡೆಯುವುದಿಲ್ಲ ಎಂದು ಯೋಚಿಸಿ, ಹಲವು ಶಕ್ತಿಗಳು ನಮ್ಮ ಸಂಸ್ಕಾರಗಳ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರಲು ಸಿದ್ಧವಾಗಿವೆ. ನಾನು ಹೆಚ್ಚು ವಿವರಣೆಗೆ ಹೋಗುವುದಿಲ್ಲ, ಪರಿಸ್ಥಿತಿ ನಿಮ್ಮ ಮುಂದಿದೆ.
ನಿಮ್ಮಲ್ಲಿ ನನ್ನ ವಿನಂತಿ ಇಷ್ಟೇ, ಕೇವಲ ಪ್ರೇಕ್ಷಕರಾಗಿ ಉಳಿಯಬೇಡಿ. ಸಂಘಕ್ಕೆ ಬನ್ನಿ, ಸಂಘವನ್ನು ನೋಡಿ, ಅರ್ಥಮಾಡಿಕೊಳ್ಳಿ. ನಂತರ ಪ್ರತ್ಯಕ್ಷವಾಗಿ ಸಂಘದ ಕಾರ್ಯದಲ್ಲಿ ಪಾಲ್ಗೊಳ್ಳಿ, ಸಮವಸ್ತ್ರಧರಿಸಿ ಕಾರ್ಯಕ್ರಮಗಳಿಗೆ, ಶಾಖೆಗೆ ಬನ್ನಿ. ಇದು ಕಷ್ಟವೆನಿಸಿದರೆ, ಸಂಘದ ಸ್ವಯಂಸೇವಕರು ಹಲವಾರು ಕೆಲಸಗಳನ್ನು ಮಾಡುತ್ತಿದ್ದಾರೆ. ವಿವಿಧ ಸಂಘಟನೆಗಳಿವೆ, ಚಟುವಟಿಕೆಗಳಿವೆ, ಸೇವಾಕಾರ್ಯಗಳು ನಡೆಯುತ್ತಿವೆ. ಅವುಗಳಲ್ಲಿ ನೀವು ಹಿತೈಷಿಯಾಗಿ ಸಹಕರಿಸಬಹುದು, ಅಲ್ಲಿ ಕಾರ್ಯಕರ್ತರಾಗಬಹುದು, ಅಥವಾ ಆಗಾಗ್ಗೆ ಈ ಕೆಲಸಗಳಲ್ಲಿ ಸಹಾಯ ಮಾಡಬಹುದು ಅಥವಾ ಈ ಭಾವನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ, ನಿಸ್ವಾರ್ಥ ಬುದ್ಧಿಯಿಂದ ನೀವು ನಿಮ್ಮಿಚ್ಛೆಯಂತೆ ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡಿದರೆ ಸಾಕು. ನಾವು ಸಂಪರ್ಕ ಇಟ್ಟುಕೊಳ್ಳುತ್ತೇವೆ. ನೀವು ಸಂಘಕ್ಕೆ ಕಾಲಿಡದಿದ್ದರೂ, ದೇಶಕ್ಕಾಗಿ ಈ ಕೆಲಸವನ್ನು ಮಾಡುತ್ತಿದ್ದರೆ ನೀವು ಸಂಘದ ಸ್ವಯಂಸೇವಕರೇ ಎಂದು ನಾವು ಭಾವಿಸುತ್ತೇವೆ. ಆದರೆ ಈಗ ಸಮಯ ಬಂದಿದೆ. ಇಡೀ ಸಮಾಜವು ‘ಸ್ವ’ದ ಬಗೆಗಿನ ಈ ಸ್ಪಷ್ಟ ಕಲ್ಪನೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ತನ್ನ ರಾಷ್ಟ್ರದ ಒಳಿತಿಗಾಗಿ, ಜಗತ್ತಿನ ಹಿತಕ್ಕಾಗಿ ಸಕ್ರಿಯವಾಗಲೇಬೇಕಿದೆ. ಹೀಗಾದರೆ, ಮುಂದಿನ ಎರಡು-ಮೂರು ದಶಕಗಳಲ್ಲಿ ಆ ಭವ್ಯ ಭಾರತವನ್ನು ನಾವು ನೋಡಲಿದ್ದೇವೆ.
ಜಗತ್ತು ಗೊಂದಲದಲ್ಲಿದೆ
ವ್ಯಕ್ತಿಯ ಹಿತಾಸಕ್ತಿ, ಸಮಾಜದ ಕಲ್ಯಾಣ ಹಾಗೂ ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸಿ ಸಮಗ್ರ ಅಭಿವೃದ್ಧಿ ಸಾಧಿಸುವ ಮಾರ್ಗಸೂಚಿ ತತ್ತ್ವವನ್ನು ವಿಶ್ವ ಇನ್ನೂ ಕಂಡುಕೊಂಡಿಲ್ಲ. ಮಾನವನ ದೇಹ, ಮನಸ್ಸು ಮತ್ತು ಬುದ್ಧಿಯ ಬೆಳವಣಿಗೆಯನ್ನು ಪ್ರತ್ಯೇಕವಾಗಿ ಅರ್ಥಮಾಡಿಕೊಂಡಿರುವ ಜಗತ್ತು, ಈ ಮೂರರ ಸಮಗ್ರ ಪ್ರಗತಿಗೆ ಬೇಕಾದ ಮಾರ್ಗವನ್ನು ಇನ್ನೂ ಕಂಡುಕೊಂಡಿಲ್ಲ. ಒಂದು ದೇಶದಲ್ಲಿ ನಡೆಯುವ ಸಂಘರ್ಷದ ಪರಿಣಾಮಗಳು ವಿಶ್ವದಾದ್ಯಂತ ಕಂಡುಬರುತ್ತಿವೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಪರಿಣಾಮವಾಗಿ ಭಾರತದಲ್ಲೂ ತೈಲದ ಬೆಲೆ ಏರುತ್ತಿದೆ. ಜಗತ್ತಿನ ಸ್ವಾರ್ಥದ ಸಂಘರ್ಷಗಳಲ್ಲಿ, ಆ ಸಂಘರ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದ ದೇಶಗಳೂ ಸಂಕಷ್ಟಕ್ಕೀಡಾಗಿವೆ. ಜಗತ್ತು ಪರಸ್ಪರ ಅವಲಂಬಿತವಾಗಿರುವುದಕ್ಕೆ ಇದು ಸಾಕ್ಷಿ.
● ಭಾರತ ಮುನ್ನಡೆಯುವ ಪೂರಕ ವಾತಾವರಣ ಜನಮಾನಸದಲ್ಲಿ ಸೃಷ್ಟಿಯಾಗುತ್ತಿದೆ.
● ಜಗತ್ತಿನ ಸ್ವಾರ್ಥದ ಸಂಘರ್ಷಗಳಲ್ಲಿ, ಆ ಸಂಘರ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದ ದೇಶಗಳೂ ಸಂಕಷ್ಟಕ್ಕೀಡಾಗಿವೆ. ಜಗತ್ತು ಪರಸ್ಪರ ಅವಲಂಬಿತವಾಗಿರುವುದಕ್ಕೆ ಇದು ಸಾಕ್ಷಿ.
● ರಾ.ಸ್ವ.ಸಂಘದ ಹೆಸರನ್ನುರಾಷ್ಟ್ರ ನಿರ್ಮಾಣದ ಇತಿಹಾಸ ತೆಗೆದುಕೊಳ್ಳದಿದ್ದರೂ ಅದು ಅತ್ಯಂತ ಒಳ್ಳೆಯದೇ, ಸಂಪೂರ್ಣ ಶ್ರೇಯಸ್ಸು ಸಮಾಜಕ್ಕೇ ಸಲ್ಲಬೇಕು.
● ರಾ.ಸ್ವ.ಸಂಘದ ಆಂತರ್ಯ ಅರಿವಾಗಲು ಅದರ ಒಳಹೊಕ್ಕು ನೋಡಬೇಕು.
● ಭಾರತ ವಿಶ್ವಗುರುವಾಗಲು ತಯಾರಿ ನಮ್ಮಿಂದ ಆರಂಭವಾಗಬೇಕು.
ಸಮಾಜಮುಖಿ ಆರ್ಎಸ್ಎಸ್
ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಅವರು ನಾಗಪುರದಲ್ಲಿ ನಡೆದ ಆರ್ಎಸ್ಎಸ್ ಸಂಘ ಶಿಕ್ಷಾವರ್ಗ (ಕಾರ್ಯಕರ್ತ ವಿಕಾಸ ವರ್ಗ)ದ ಸಮಾರೋಪ ಸಮಾರಂಭದಲ್ಲಿ ಮಾಡಿದ ಭಾಷಣದ ಸಾರಾಂಶ ಇಲ್ಲಿದೆ:
ಸ್ವಾತಂತ್ರ್ಯಪೂರ್ವ ಭಾರತದಿಂದ ಹಿಡಿದು ದೇಶದಲ್ಲಿ ಸಂಭವಿಸಿದ ಭೂಕಂಪಗಳು, ತ್ಸುನಾಮಿ, ಪ್ರವಾಹಗಳು, ಯುದ್ಧಗಳು, ಸಾಂಕ್ರಾಮಿಕ ರೋಗಗಳು ಮತ್ತು ಇನ್ನೆಷ್ಟೋ ಸವಾಲುಗಳ ಸಂದರ್ಭದಲ್ಲಿ ಆರ್ಎಸ್ಎಸ್ ಸದಾ ರಾಷ್ಟ್ರ ಮತ್ತು ಸಮಾಜದ ಜೊತೆಗೆ ನಿಂತಿದೆ.
ನನಗೆ ಹಲವು ಸಂದರ್ಭಗಳಲ್ಲಿ ಆರ್ಎಸ್ಎಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರನ್ನು ಭೇಟಿಯಾಗುವ ಮತ್ತು ಅವರೊಂದಿಗೆ ಸಂವಾದ ನಡೆಸುವ ಸೌಭಾಗ್ಯ ದೊರೆತಿದೆ. ಪ್ರತಿ ಭೇಟಿಯಲ್ಲೂ ಅವರ ಸರಳತೆ, ವಿನಮ್ರತೆ ಮತ್ತು ರಾಷ್ಟ್ರ ನಿರ್ಮಾಣದ ಬಗೆಗಿನ ಅಚಲವಾದ ಸಮರ್ಪಣಾ ಭಾವ ನನ್ನನ್ನು ಪ್ರೇರೇಪಿಸಿದೆ. ಕಳೆದ ವರ್ಷ 2025ರಲ್ಲಿ ಸಂಘವು 100 ವರ್ಷಗಳನ್ನು ಪೂರೈಸಿದೆ. 100 ವರ್ಷಗಳೆಂದರೆ ಸಣ್ಣ ಮಾತಲ್ಲ. 1925ರಲ್ಲಿ ಭಾರತವು ಇಂದಿನ ನಮ್ಮ ಜನಸಂಖ್ಯೆಯ ಕೇವಲ ಐದನೇ ಒಂದು ಭಾಗವನ್ನು ಹೊಂದಿತ್ತು. ಶತಮಾನಗಳ ಗುಲಾಮಗಿರಿ ನಮ್ಮ ಆತ್ಮವಿಶ್ವಾಸವನ್ನು ಬಹುಶಃ ದುರ್ಬಲಗೊಳಿಸಿತ್ತು. ಆದರೆ ಇಂದು ಭಾರತವು ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿದೆ.
ಪ್ರಧಾನಿ ಮೋದಿ ಅವರು ಆಗಾಗ ಮುಂಬರುವ ‘ಅಮೃತಕಾಲ’ದ ಬಗ್ಗೆ ಮಾತನಾಡುತ್ತಾರೆ. ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಯುಗವಿದು. ಜನಸಂಖ್ಯಾ ಲಾಭಾಂಶ, ಪೂರಕ ವಾತಾವರಣ, ಮೂಲಸೌಕರ್ಯ, ಡಿಜಿಟಲ್ ವ್ಯವಸ್ಥೆಗಳು ಮತ್ತು ಹಣಕಾಸು ಸೇವೆಗಳ ಈ ವಿಶಿಷ್ಟ ಸಂಗಮವು, ರಾಷ್ಟ್ರಜೀವನದಲ್ಲಿ ಒಮ್ಮೆ ಮಾತ್ರ ಬರುವ ಅವಕಾಶವನ್ನು ನಮಗೆ ಒದಗಿಸುತ್ತದೆ. ಇದು ನಿಸ್ಸಂಶಯವಾಗಿ ಭಾರತದ ಸಮಯ. ಜಗತ್ತು ಮಹಾಸತ್ತೆಗಳ ಪೈಪೋಟಿಯ ಮಹತ್ವಾಕಾಂಕ್ಷೆಗಳ ನಡುವೆ ಸಿಲುಕಿಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ, ಕಚ್ಚಾತೈಲದ ಬೆಲೆಯು ಯುದ್ಧಗಳ ಕಾರಣದಿಂದಾಗಿ ಒಮ್ಮೆ ಗಗನಕ್ಕೇರಿತು, ಮತ್ತೊಮ್ಮೆ ದಿಢೀರನೆ ಕುಸಿದು ಮತ್ತೆ ಹೊಸ ಎತ್ತರವನ್ನು ತಲುಪಿತು. ಪೂರೈಕೆ ಸರಪಳಿಗಳು ಈ ದಶಕದಲ್ಲಿ ಮೂರನೇ ಬಾರಿಗೆ ಒತ್ತಡಕ್ಕೆ ಸಿಲುಕಿವೆ ಮತ್ತು ಅಂತಿಮವಾಗಿ ಎಐ (ಕೃತಕ ಬುದ್ಧಿಮತ್ತೆ) ನಮ್ಮ ಬಾಗಿಲಿಗೆ ಬಂದು ನಿಂತಿದೆ.
ಹಲವರಿಗೆ ಬಹುಶಃ ತಿಳಿದಿರಲಿಕ್ಕಿಲ್ಲ, ಆದಿತ್ಯ ಬಿರ್ಲಾ ಗ್ರೂಪ್ನ ಪ್ರಮುಖ ಕಂಪನಿಯಾದ ‘ಗ್ರಾಸಿಮ್’ ನಮ್ಮ ಸ್ವಾತಂತ್ರ್ಯದ ಕೇವಲ 10 ದಿನಗಳ ನಂತರ ಸ್ಥಾಪನೆಯಾಯಿತು. ಆಗ ಹತ್ತಿ ಬೆಳೆಯುತ್ತಿದ್ದ ಹೊಲಗಳು ಪಾಕ್ನಲ್ಲಿ ಉಳಿದವು. ಆದರೆ ನನ್ನ ಮುತ್ತಜ್ಜ ಜಿ.ಡಿ. ಬಿರ್ಲಾ ಅವರು ಕೃತಕ ನಾರುಗಳ ಉತ್ಪಾದನೆ ಆರಂಭಿಸಿದರು. ಇದು ಹೊಸದೇಶದ ಹೊಸ ಚಿಂತನೆ. ಅಂದು ತೆಗೆದುಕೊಂಡ ನಿರ್ಧಾರದಿಂದಾಗಿ, 80 ವರ್ಷಗಳ ನಂತರ ಇಂದು ಗ್ರಾಸಿಮ್ ಕಟ್ಟಡ ಸಾಮಗ್ರಿಗಳು, ರಾಸಾಯನಿಕಗಳು ಮತ್ತು ಫೈಬರ್ಗಳಲ್ಲಿ ಜಾಗತಿಕ ನಾಯಕನಾಗಿದೆ, ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ ಮತ್ತು ಭಾರತದ ಕೈಗಾರಿಕಾ ಶಕ್ತಿಗೆ ಕೊಡುಗೆ ನೀಡುತ್ತಿದೆ. ನೀರಿನ ನಂತರ ಜಗತ್ತಿನಲ್ಲಿ ಅತಿಹೆಚ್ಚು ಬಳಕೆಯಾಗುವ ವಸ್ತು ಸಿಮೆಂಟ್ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಈ ಅಂಕಿ ಅಂಶವೇ ಸಿಮೆಂಟ್ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಹೇಳುತ್ತದೆ. ಇಂದು ವಾರ್ಷಿಕವಾಗಿ ಸುಮಾರು 500 ಮಿಲಿಯನ್ ಟನ್ಗಳ ಸಿಮೆಂಟ್ ಉತ್ಪಾದನೆಯೊಂದಿಗೆ ಭಾರತವು ವಿಶ್ವದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕ ರಾಷ್ಟ್ರವಾಗಿದೆ. ಕಳೆದ ದಶಕವು ವಿಶೇಷವಾಗಿ ಪರಿವರ್ತನೆಗೆ ತೆರೆದುಕೊಂಡಿದೆ. ಭಾರತದ ಹೆದ್ದಾರಿ ಜಾಲವೂ ಸುಮಾರು ಶೇ. 60ರಷ್ಟು ವಿಸ್ತರಿಸಿದೆ, ಮೆಟ್ರೋ ರೈಲು ಜಾಲ ಶೇ. 350ರಷ್ಟು ಹೆಚ್ಚಾಗಿದೆ. ದೇಶವೊಂದು ಇಷ್ಟೊಂದು ದೊಡ್ಡಮಟ್ಟದಲ್ಲಿ ರಾಷ್ಟ್ರನಿರ್ಮಾಣ ಕಾರ್ಯ ಕೈಗೊಂಡಾಗ, ಸಿಮೆಂಟ್ ಕೇವಲ ಒಂದು ವಸ್ತುವಾಗಿ ಉಳಿಯುವುದಿಲ್ಲ. ಅದೊಂದು ರಾಷ್ಟ್ರೀಯ ಅಭಿವೃದ್ಧಿಯ ಆಸ್ತಿಯೆಂದು ಪರಿಗಣಿಸಲ್ಪಡುತ್ತದೆ. ನಮ್ಮ ಸ್ವಂತ ಸಿಮೆಂಟ್ ಕಂಪನಿ ಅಲ್ಟ್ರಾಟೆಕ್ ಸಿಮೆಂಟ್ ಮೂಲಕ ಈ ಪರಿವರ್ತನೆಯನ್ನು ನೋಡುವ ಸೌಭಾಗ್ಯ ನನ್ನದಾಗಿದೆ. ಕಳೆದ ದಶಕದಲ್ಲಿ, ಅಲ್ಟ್ರಾಟೆಕ್ ಸಿಮೆಂಟ್ನ ಸಾಮರ್ಥ್ಯವು 60 ಮಿಲಿಯನ್ ಟನ್ಗಳಿಂದ ಇಂದು 200 ಮಿಲಿಯನ್ ಟನ್ಗಳಿಗೆ ಏರಿದೆ ಮತ್ತು ಇಂದು ಅಲ್ಟ್ರಾಟೆಕ್ ಸಿಮೆಂಟ್ ವಿಶ್ವದ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ.
ಆದಿತ್ಯ ಬಿರ್ಲಾ ಗ್ರೂಪ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನೇಕ ಚಟುವಟಿಕೆಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ನಾವೂ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ, ಆರೋಗ್ಯ ಸೇವೆ, ಸಾಮಾಜಿಕ ಉನ್ನತಿ, ಮಹಿಳಾ ಸಬಲೀಕರಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಅತ್ಯಂತ ಮಹತ್ವ ನೀಡುತ್ತೇವೆ. ಆರ್ಎಸ್ಎಸ್ನಂತಹ ಶಾಶ್ವತ ಸಂಸ್ಥೆಗಳ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣವು ನಾವು ಊಹಿಸುವುದಕ್ಕಿಂತ ಹೆಚ್ಚು ನಿಕಟವಾಗಿ ಹೆಣೆದುಕೊಂಡಿವೆ ಎಂಬ ಸರಳ ನಂಬಿಕೆಯನ್ನು ನಮ್ಮ ಅನುಭವಗಳು ಬಲಪಡಿಸಿವೆ. ಬಲವಾದ ಉದ್ಯಮಗಳ ಅಡಿಪಾಯದ ಮೇಲೆ ಭವಿಷ್ಯವು ರೂಪುಗೊಳ್ಳುತ್ತದೆ. ಸಂಘ ಶಿಕ್ಷಾವರ್ಗಕ್ಕೆ ಭೇಟಿ ನೀಡಿದ ನಂತರ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಆರ್ಎಸ್ಎಸ್ನ ಪ್ರಭಾವದ ಬಗ್ಗೆ ನನಗೆ ಇನ್ನಷ್ಟು ವಿಶ್ವಾಸ ಮೂಡಿದೆ. ಒಂದು ದಿನ ಪೂರ್ತಿ ಇಲ್ಲಿ ಸೇರಿರುವವರೆಲ್ಲರೂ ಯಾವೆಲ್ಲಾ ವಿಭಿನ್ನ ಚಟುವಟಿಕೆಗಳನ್ನು ಮಾಡುತ್ತಿದ್ದೀರಿ ಎಂಬುದನ್ನು ನೋಡುವ ಅವಕಾಶ ಸಿಕ್ಕಿತು.
ಈ ಯುಗ ಭಾರತದ ಯುಗ. ಯುವ ಭಾರತೀಯನಾಗಿ ಭಾರತದಲ್ಲಿರಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ. ನೀವು ಯುವಕರಾಗಿದ್ದು, ಭಾರತದಲ್ಲಿದ್ದುಕೊಂಡು, ನಿಮ್ಮದೇ ಆದ ದೊಡ್ಡ ಉದ್ಯಮವನ್ನು ನಿರ್ಮಿಸಲು ಈ ಹಿಂದಿಗಿಂತಲೂ ಇದು ಅತ್ಯುತ್ತಮ ಸಮಯವಾಗಿದೆ. ಜಗತ್ತು 100 ವರ್ಷಗಳಲ್ಲಿ ಎಷ್ಟು ಪ್ರಗತಿ ಸಾಧಿಸಿದೆಯೋ, ಅಷ್ಟೇ ಪ್ರಗತಿಯನ್ನು ಮುಂದಿನ 10 ವರ್ಷಗಳಲ್ಲಿ ಜಗತ್ತು ಕಾಣಲಿದೆ. ನಮ್ಮ ಮುಂದಿರುವ ಪ್ರಶ್ನೆಯೆಂದರೆ ಭವಿಷ್ಯವು ಬರುತ್ತದೆಯೇ ಎಂಬುದಲ್ಲ, ಅದು ಈಗಾಗಲೇ ಬಂದಾಗಿದೆ. ಸಂಸ್ಕೃತದಲ್ಲಿ ಒಂದು ವಾಕ್ಯವಿದೆ, ಅದು ನನಗೆ ಜೀವನ ಮಂತ್ರದಂತೆ. ‘ಚರೈವೇತಿ ಚರೈವೇತಿ’- ಅಂದರೆ ನಡೆಯುತ್ತಲೇ ಇರಿ, ಮುನ್ನಡೆಯುತ್ತಲೇ ಇರಿ ಎಂಬುದು ಇದರ ಅರ್ಥ. ಆದ್ದರಿಂದ ಈ ಅಮೃತಕಾಲವು ರಾಷ್ಟ್ರ ನಿರ್ಮಾಣದಿಂದ ವ್ಯಾಖ್ಯಾನಿಸಲ್ಪಡಲಿ.
