ಅಂಕಣ – ನಗಾರಿ
- ಸಿಂಚನ ಎಂ.ಕೆ. ಮಂಡ್ಯ, ಲೇಖಕಿ
ಯಾರೇ ಆಗಲಿ, ತಾವು ಎಲ್ಲಿಗೆ ಹೋಗಬೇಕು ಎಂಬ ಅರಿವನ್ನು ಹೊಂದಿದ್ದರೆ, ಅವರು ನಡೆಯುತ್ತಿರುವ ದಾರಿಯ ಕಷ್ಟ ಅರ್ಧ ಕಳೆದಂತೆ. ಆದರೆ ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯದೆ ಎಲ್ಲೆಂದರಲ್ಲಿ, ಸಿಕ್ಕಸಿಕ್ಕಲ್ಲಿ ಕಾಲಿಡುತ್ತಿದ್ದರೆ ಕಾಲುಗಳೇ ಸೋತು ಬೀಳುವ ಪ್ರಸಂಗಗಳು ಬರುತ್ತವೆ. ಭೂಮಿಗೆ ಕಾಲಿಟ್ಟ ಮೇಲೆ ನಡೆಯಲೇಬೇಕು, ಒಂದೆಡೆ ಕೂತರೆ ಜೀವನ ಸಾಗದು ಎಂಬುದು ನಿಜವೇ ಸರಿ. ಎಲ್ಲಿಗೆ ಹೋಗಬೇಕೆಂದು ತಿಳಿದಿರುವವರು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಆತ್ಮವಿಶ್ವಾಸದಿಂದ, ಧೃಡತೆಯಿಂದ ಮುಂದೆ ಸಾಗುತ್ತಾರೆ. ಆದರೆ ಇದರ ಅರಿವಿಲ್ಲದವರ ಒಂದೊಂದು ಹೆಜ್ಜೆಯೂ ಬಲು ಭಾರ, ಮುಂದೆ ಏನು ಬರುವುದೋ, ಎಲ್ಲಿ ಎಡವುವೆನೋ ಎಂಬ ಭಯ. ಸಹಾಯ ಕೇಳಲೂ ಕೆಲವರು ಹಿಂಜರಿಯುತ್ತಾರೆ. ಯಾಕೆಂದರೆ ನಂತರದ ಪ್ರತಿಕ್ರಿಯೆ ಹೇಗಿರಬಹುದೆಂದು ಮೊದಲೇ ತಿಳಿದಿರುವುದಿಲ್ಲ ಅಲ್ಲವೇ? ಜೀವನದಲ್ಲಿ ಗೆದ್ದಾಗ ಎಲ್ಲರೂ ಜೊತೆಯಾಗುತ್ತಾರೆ, ಹಾಡಿ ಹೊಗಳುತ್ತಾರೆ. ಆದರೆ ಸೋತಾಗ ಧೈರ್ಯ ತುಂಬಲು ಬರುವವರು, ಜೊತೆಗೆ ನಿಲ್ಲುವವರು, ಮಾರ್ಗದರ್ಶನ ಮಾಡುವವರು ವಿರಳ. ಭೂಮಿಯ ಮೇಲೆ ಹುಟ್ಟಿರುವ ಬಹುಪಾಲು ಮಂದಿಗೆ ನೋಡುವ, ನಡೆಯುವ, ಮಾತನಾಡುವ, ಕೆಲಸ ಮಾಡುವ ಹೀಗೆ ದೈನಂದಿನ ಚಟುವಟಿಕೆಗಳಲ್ಲಿ ಎಲ್ಲವನ್ನೂ ನಿಭಾಯಿಸುವ ಶಕ್ತಿಯಿದೆ. ಆದರೆ ಹೀಗೇ ನಡೆಯುವ ದಾರಿಯಲ್ಲಿ ಎತ್ತ ಸಾಗಬೇಕು ಎಂಬುದರ ಅರಿವು ಕೆಲವರಿಗೆ ಮಾತ್ರವಿರುತ್ತದೆ. ಆದ್ದರಿಂದಲೇ ಎಲ್ಲರೂ ಯಶಸ್ಸನ್ನು ಗಳಿಸುವುದಿಲ್ಲ ಎನ್ನಬಹುದು.
ಇದೆಲ್ಲವೂ ವಿದ್ಯಾರ್ಥಿ ಜೀವನಕ್ಕೆ ಕಾಲಿಟ್ಟಾಗಿನಿಂದಲೇ ನಿಧಾನವಾಗಿ ಅನುಭವಕ್ಕೆ ಬರಲಾರಂಭಿಸುತ್ತದೆ. ಎಳವೆಯಲ್ಲಿ ಗೆಳೆತನದಲ್ಲಿ ಕಾಣುವ ಸಂತೋಷ ಹಾಗೂ ವಿರಸ ಒಂದೆಡೆಯಾದರೆ ಕಾಲೇಜು ಜೀವನವನ್ನು ಹೊಕ್ಕ ನಂತರದ ಅನುಭವ ಇನ್ನೊಂದು ರೀತಿಯದ್ದು. ಇದೆಲ್ಲವನ್ನೂ ಮುಗಿಸಿ ಸಮಾಜದೊಳಕ್ಕೆ ಪೂರ್ತಿಯಾಗಿ ಹೊಕ್ಕಾಗ ಅನುಭವಿಸಬೇಕಾದ ಏರಿಳಿತಗಳು ಇನ್ನೊಂದು ತೆರನಾದದ್ದು. ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿ ಅಗ್ನಿಪರೀಕ್ಷೆಯನ್ನು ಎದುರಿಸಿರುತ್ತಾನೆ. ಇದರೊಂದಿಗೆ ಇಂದಿನ ವಿದ್ಯಾರ್ಥಿ ಜೀವನ ಅಥವಾ ಶಿಕ್ಷಣ ವ್ಯವಸ್ಥೆ ಒಂದು ಬಲೆಯಂತೆ ಹಲವರನ್ನು ಅಡಕತ್ತರಿಯಲ್ಲಿ ಸಿಲುಕಿಸುತ್ತಿದೆ. ಯಾವುದೇ ಉದ್ಯೋಗದ ಸಂದರ್ಶನಗಳಿಗೆ ಹೋದರೆ ಅಥವಾ ಉದ್ಯೋಗದ ಅಪ್ಲಿಕೇಶನ್ಗಳನ್ನು ಸರ್ಚ್ ಮಾಡಿದರೆ ಅಲ್ಲೆಲ್ಲಾ ನಾಲ್ಕೈದು ವರ್ಷಗಳ ಹಿಂದೆಯೇ ಪ್ರೊಫೆಶನಲ್ ಕೋರ್ಸ್ ಮಾಡಿರುವ ವಿದ್ಯಾರ್ಥಿಗಳು, ಮಾಸ್ಟರ್ ಡಿಗ್ರಿ ಮಾಡಿರುವ ವಿದ್ಯಾರ್ಥಿಗಳು ಕೂಡ ಅಲ್ಲಿರುತ್ತಾರೆ. ಅವರೆಲ್ಲರೂ ಇಂದಿಗೂ ಉದ್ಯೋಗವನ್ನು ಅರಸುತ್ತಿರುವವರು. ಇದಕ್ಕೆ ಕಾರಣಗಳು ಹಲವಾರು ಸಿಗಬಹುದು. ಆದರೆ ವಿದ್ಯಾರ್ಥಿಗಳಿಗೆ ಅವರು ಓದಿರುವ ವಿಷಯದಲ್ಲಿ ಪರಿಣಿತಿ ಇಲ್ಲದ್ದು ಒಂದೆಡೆ ಎದ್ದು ಕಂಡರೆ ಇನ್ನು ಕೆಲವು ಬಾರಿ ಆಸಕ್ತಿಯಿಲ್ಲದ ವಿಷಯಗಳಲ್ಲಿ ಪಡೆದ ಪದವಿ ಯಾವುದನ್ನೂ ಆರಿಸಲಾಗದ ಸ್ಥಿತಿಗೆ ತಂದು ನಿಲ್ಲಿಸಿರುತ್ತದೆ. ಅಲ್ಲದೇ ವಿದ್ಯಾರ್ಥಿಗಳಲ್ಲಿ ಹಲವರು ಕಲಿಕೆಯ ಸಮಯದಲ್ಲಿ ತೋರುವ ಅಸಡ್ಡೆಯೂ ಸಮಸ್ಯೆಗಳನ್ನು ಭವಿಷ್ಯದಲ್ಲಿ ಕಣ್ಣಮುಂದೆ ತಂದು ನಿಲ್ಲಿಸುತ್ತದೆ.
ಉದ್ಯೋಗ ಸೃಷ್ಟಿ ಒಂದು ತೆರನಾದ ಗಂಭೀರ ಸಮಸ್ಯೆಯಾದರೆ ಸೃಷ್ಟಿಯಾಗುವ ಉದ್ಯೋಗದಲ್ಲಿ ಬದುಕು ಕಟ್ಟಿಕೊಳ್ಳುವ ದೃಢತೆ ಇಲ್ಲದಿರುವುದು ಇನ್ನೊಂದು ತೆರನಾದ ಸಮಸ್ಯೆ. ವಿದ್ಯಾರ್ಥಿಗಳು ಯಾವುದೇ ಕಂಪನಿಗಳಿಗೆ ಸೇರಿದರೂ ಹೊಸದಾಗಿ ತರಬೇತಿ ನೀಡುತ್ತಾರೆ, ಸಂಬಂಧವಿಲ್ಲದ ಕೋರ್ಸ್ ಮಾಡಿರುವವರಿಗೂ ತರಬೇತಿ ನೀಡುತ್ತಾರೆ. ಹಾಗಾದರೆ ಕಾಲೇಜಿನ ಅವಧಿಯಲ್ಲಿ ವ್ಯಯಿಸಿದ ಸಮಯ ವ್ಯರ್ಥವಾದ ಹಾಗೆಯೇ? ಜೊತೆಗೆ ವೃತ್ತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಕೋರ್ಸ್ ಅನ್ನು ಮಾಡುವುದು ವ್ಯರ್ಥವಾದಂತೆಯೇ? ಕಾಲೇಜಿನ ಕೊನೆಯಲ್ಲಿ ನೀಡುವ ಡಿಗ್ರಿ ಸರ್ಟಿಫಿಕೇಟ್, ಮಾರ್ಕ್ಸ್ ಕಾರ್ಡ್ ಗಳು ಇಂದಿನ ಕಂಪನಿಗಳಿಗೆ ಅರ್ಹತಾ ಪತ್ರಗಳಾಗಿವೆ ಎಂಬ ಒಂದೇ ಒಂದು ಕಾರಣದಿಂದ ಮುಂದೆ ಯಾವುದಕ್ಕೂ ಉಪಯೋಗಕ್ಕೆ ಬಾರದ ವಿಷಯಗಳನ್ನು ಓದಿ, ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಕೇ?
ಈಗ ಕಂಪನಿಗಳಲ್ಲಿ ಸಂದರ್ಶನಗಳನ್ನು ಪಾಸ್ ಮಾಡಲು ಕಾಲೇಜಿನ ನಂತರವೂ ಹೊಸದೊಂದು ಕೋರ್ಸ್ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಆ ಕೋರ್ಸ್ʼಗಳ ಶುಲ್ಕಕ್ಕೂ ಕಾಲೇಜಿಗೆ ಕಟ್ಟುವ ಶುಲ್ಕಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ ಎಂದು ಹೇಳಬಹುದು. ಹಾಗಿರುವಾಗ ತಂದೆ- ತಾಯಿ ಬೆವರು ಸುರಿಸಿ, ತಮ್ಮ ಆದಾಯದ ಬಹುಪಾಲು ಮೊತ್ತವನ್ನು ಮಕ್ಕಳ ಕಾಲೇಜಿಗೆ ಕಟ್ಟುತ್ತಿರುವುದು ವ್ಯರ್ಥವೆಂಬ ಯೋಚನೆ ಬರುವುದಿಲ್ಲವೇ? ಕೆಲವು ಕಂಪನಿಗಳು ಹೇಳುವ ಪ್ರಕಾರ- ಕಾಲೇಜುಗಳಲ್ಲಿ ಕೌಶಲ್ಯದ ಶಿಕ್ಷಣ ಸಿಗುತ್ತಿಲ್ಲ, ಆದ್ದರಿಂದ ಕೆಲಸಕ್ಕೆ ಅನುಗುಣವಾದ ಕೌಶಲ್ಯದ ತರಬೇತಿಯನ್ನು ಕಂಪನಿಯೇ ನೀಡುತ್ತದೆ ಎಂದು. ಕೌಶಲ್ಯಾಧಾರಿತ ತರಬೇತಿಗಳು ಕಾಲೇಜುಗಳಲ್ಲಿ ನಿಜವಾಗಿಯೂ ಸಿಗುತ್ತಿಲ್ಲವೇ ಎಂದರೆ ಇದು ಅರ್ಧ ಸತ್ಯ ಮತ್ತು ಅರ್ಧ ಸುಳ್ಳು ಎನ್ನಬೇಕಾಗುತ್ತದೆ. ಇಂದು ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳೂ ನಮ್ಮ ನಡುವೆ ಇವೆ. ಕೆಲವು ಶಿಕ್ಷಣವನ್ನೇ ಧ್ಯೇಯವಾಗಿಸಿ ಸ್ಥಾಪಿತವಾದರೆ ಇನ್ನು ಕೆಲವು ಹಣವನ್ನು ಹೆಚ್ಚಿನ ಮೊತ್ತದಲ್ಲಿ ಪಡೆದು ಅಷ್ಟೇ ಉತ್ತಮವಾಗಿ ಶಿಕ್ಷಣವನ್ನೂ ನೀಡುತ್ತವೆ. ಆದರೆ ಇವುಗಳನ್ನು ಹೊರತುಪಡಿಸಿ ದುಡ್ಡು ಕೊಟ್ಟರೂ ಶಿಕ್ಷಣ ಉತ್ತಮವಿಲ್ಲದ ಸಂಸ್ಥೆಗಳು ಮತ್ತು ಹಣ ಮತ್ತು ಶಿಕ್ಷಣ ಎರಡೂ ಇಲ್ಲದ ಸಂಸ್ಥೆಗಳೂ ಇವೆ. ಇವು ಸಮಾಜಕ್ಕೆ ಮಾರಕವೇ ಸರಿ.
ಇಂದಿನ ಪರಿಸ್ಥಿತಿಯಲ್ಲಿ ಕೆಲವರು ಇದ್ಯಾವುದರ ಸಹವಾಸವೂ ಬೇಡ ಎಂದು ಕಾಲೇಜಿನ ಓದು ಬಿಟ್ಟು, ಪ್ರಪಂಚವನ್ನು ನೋಡಿ, ಅರ್ಥ ಮಾಡಿಕೊಂಡು ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಅಲೆದಾಡಿ, ಹುಡುಕಾಡಿ ಜೀವನ ಕಟ್ಟಿಕೊಂಡು ಯಶಸ್ಸು ಪಡೆದಿದ್ದಾರೆ. ಆದರೆ ಎಲ್ಲರಿಗೂ ಇದು ಸಾಧ್ಯವೇ? ಬಹುಪಾಲು ವಿದ್ಯಾರ್ಥಿಗಳಿಗೆ ಜೀವನ ರೂಪಿಸಿಕೊಳ್ಳಲು ಒಂದು ವ್ಯವಸ್ಥೆಯ ಅವಶ್ಯಕತೆಯಿದೆ. ಆ ವ್ಯವಸ್ಥೆಯು ಸ್ಪಷ್ಟವಾಗಿ ಕಾರ್ಯ ನಿರ್ವಹಿಸುವುದನ್ನು ಸಮಾಜ ಬಯಸುತ್ತದೆ. ಮಕ್ಕಳಿಗೆ ಹೊಲಿಗೆಯಂತ್ರದ ತರಬೇತಿ, ಮೇಣದ ಬತ್ತಿ, ಗಂಧದ ಕಡ್ಡಿಯಂತಹ ಸಣ್ಣವಸ್ತುಗಳ ತಯಾರಿಕೆಯ ತರಬೇತಿ, ಮೆಕಾನಿಕಲ್, ಎಲೆಕ್ಟ್ರಿಕಲ್ ಉಪಕರಣಗಳ ಕೆಲಸ ತರಬೇತಿ, ಜೊತೆಗೆ ಎಲ್ಲರಿಗೂ ಈಗ ಉದ್ಯೋಗ ಸೃಷ್ಟಿಸಿರುವ ಟೆಸ್ಟಿಂಗ್, ಸಿಮ್ಯುಲೇಶನ್ನಂತಹ ಸಾಫ್ಟ್ ವೇರ್ ತರಬೇತಿ ಹೀಗೆ ಆಸಕ್ತ ಕ್ಷೇತ್ರದಲ್ಲಿ ಕೌಶಲ್ಯವನ್ನು ಬೆಳೆಸಿಕೊಳ್ಳುವ ಅವಕಾಶ ಕಾಲೇಜಿನಲ್ಲೇ ಸಿಕ್ಕರೆ ಎಷ್ಟೊಂದು ಪ್ರಯೋಜನವಲ್ಲವೇ?. ವಿದ್ಯೆ ಎಂದರೆ ಕೇವಲ ಪಾಠ್ಯ ತರಬೇತಿಯಲ್ಲ, ಜೀವನವನ್ನು ಕಟ್ಟಿಕೊಳ್ಳಲು ದಾರಿಯಾಗಬೇಕಾದ ಕುಶಲತೆ. ಕಾಲೇಜಿನಲ್ಲಿ ಕೇವಲ ಓದುವುದರಲ್ಲಿ ಸಮಯ ವ್ಯರ್ಥವಾಗುವ ಬದಲು ಕೌಶಲ್ಯಗಳ ತರಬೇತಿಯನ್ನು ಆರಂಭಿಸಿದರೆ, ವಿದ್ಯಾರ್ಥಿಗಳಿಗೆ ತಾವು ಓದಿರುವ ಕ್ಷೇತ್ರದಲ್ಲಿ ಯಶಸ್ಸು ಗಳಿಸಲಾಗದಿದ್ದರೆ ಕೌಶಲ್ಯದ ತರಬೇತಿ ಪಡೆದ ಕ್ಷೇತ್ರದಲ್ಲಾದರೂ ಮುಂದುವರಿ ಯುವ ಅವಕಾಶವಿರುತ್ತದೆ. ಮುಂದೆ ಎಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸಲು ಕಾಲೇಜಿನ ಹಂತದಲ್ಲೇ ಸಕಲ ಪೂರಕ ಸಾಧನಗಳು ದೊರೆಯಬೇಕಾಗಿದೆ.
ನಮ್ಮ ಪೀಳಿಗೆಯವರು ಕೇಳಿರುವುದರಲ್ಲಿ ಆಪಲ್ ಕಂಪನಿ ತುಂಬಾ ಪ್ರಸಿದ್ಧವಾದುದು. ಅದನ್ನು ಕಟ್ಟಿ ಬೆಳೆಸಿದ ಸ್ಟೀವ್ ಜಾಬ್ಸ್ ತನ್ನ ತಂದೆ- ತಾಯಿ ಬೆವರು ಸುರಿಸಿ, ದುಡಿದು ಕಾಲೇಜಿಗೆ ದುಡ್ಡು ಕಟ್ಟುತ್ತಿರುವುದನ್ನು ನೋಡಿ ಓದನ್ನು ನಿಲ್ಲಿಸಿದರು. ಆದರೆ ಓದಲಾಗಲಿಲ್ಲ ಎಂದ ಮಾತ್ರಕ್ಕೆ ಜೀವನ ನಿಂತು ಹೋಯಿತೇ ಎಂದರೆ ಖಂಡಿತ ಇಲ್ಲ, ಆಮೇಲಿನದ್ದೆಲ್ಲಾ ಇತಿಹಾಸ. ಕೇವಲ ಓದುವುದರಿಂದ ಮಾತ್ರ ಒಳ್ಳೆಯ ಜೀವನ ಕಟ್ಟಿಕೊಳ್ಳಬಹುದು ಎಂಬ ಸಮಾಜ ಸೃಷ್ಟಿಸಿರುವ ಭ್ರಮೆಯ ಒತ್ತಡದಿಂದ ಮಕ್ಕಳನ್ನು ಹೊರಗಿಡಬೇಕು. ಆಗ ಮಾತ್ರವೇ ಮಕ್ಕಳು ತಮ್ಮ ಇಚ್ಛೆಗೆ ಅನುಗುಣವಾದ ವೃತ್ತಿಯನ್ನು ಮಾಡುತ್ತಾ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಾರೆ. ಒಂದು ವೇಳೆ ಮಕ್ಕಳು ಓದಲಾಗದೆ ಎಲ್ಲಾ ವಿಷಯಗಳಲ್ಲಿ ಫೇಲ್ ಆಗಿ ಸಂಪೂರ್ಣವಾಗಿ ಬಿದ್ದರೂ, ಶೈಕ್ಷಣಿಕ ಕ್ಷೇತ್ರ ಹೊರತುಪಡಿಸಿ ಬೇರೆಕಡೆ ಮುಖಮಾಡಿ ಅದರಲ್ಲೇ ಉದ್ಯೋಗವನ್ನು ಅರಸಿಕೊಂಡು ಹೋಗಬಹುದು. ಆದರೆ ಹಲವಾರು ಮಕ್ಕಳು ಅವರಿಗೆ ಇಷ್ಟವಿಲ್ಲದ ವಿಷಯವನ್ನು ಹಾಗೋ ಹೀಗೋ ಕಷ್ಟಪಟ್ಟು ಓದಿ ಪಾಸ್ ಮಾಡಿದರೆ, ಮುಂದಿನ ಹಾದಿಯಲ್ಲೂ ಅದರ ನಡುವಲ್ಲೇ ಸಿಲುಕಿಕೊಳ್ಳುತ್ತಾರೆ. ಸಂಪೂರ್ಣವಾಗಿ ಕೆಳಗೆ ಬಿದ್ದು ಹೋದರೂ ಮೇಲೇಳಬಹುದು. ಆದರೆ ಅಡಕತ್ತರಿಯಲ್ಲಿ ಸಿಲುಕಿಕೊಂಡರೆ ಮಾತ್ರ ಮೇಲೇಳುವುದು ತುಂಬಾ ಕಠಿಣ.
ವಿಪರ್ಯಾಸವೆಂದರೆ ಈ ಸಮಾಜದಲ್ಲಿ ಫೇಲ್ ಆದವರ ಬಗ್ಗೆ ಸಹಾನುಭೂತಿಯಿಂದ ಮಾತನಾಡುತ್ತಾರೆ, ಅವರಿಗಾಗಿ ಉದ್ಯೋಗದ ತರಬೇತಿಗಳನ್ನು ನಡೆಸುತ್ತಾರೆ. ಆದರೆ ಹೀಗೆ ಮುಂದೆಯೂ ಹೋಗಲಾಗದೆ ಹಿಂದೆಯೂ ಬರಲಾರದೆ ಸಿಲುಕಿಕೊಂಡಿರುವವರ ಬಗ್ಗೆ ಮಾತ್ರ ಯಾರೂ ಕನಿಕರ ತೋರಿಸುವುದಿಲ್ಲ. ಯಾರೇ ಎಷ್ಟೇ ಒತ್ತಡ ಹಾಕಿದರೂ ಇಷ್ಟವಿಲ್ಲದ ಕ್ಷೇತ್ರದಲ್ಲಿ ಮುಂದುವರಿಯುವುದು ಜೀವನಕ್ಕೆ ಆಘಾತಕಾರಿಯಾಗಬಹುದು, ಹಾಗೆಂದು ನಮ್ಮ ಸಾಮರ್ಥ್ಯದ ಅವಲೋಕನವೂ ಅಷ್ಟೇ ಅಗತ್ಯ. ನಿಧಾನವಾಗಿಯಾದರೂ ಸರಿ ಯಾದ ಹೆಜ್ಜೆಯಿಡುವ ಆಯ್ಕೆ ನಾವೇ ಮಾಡಿಕೊಳ್ಳಬೇಕಿದೆ.
