ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು
- ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ
ಅದು 50-60ರ ದಶಕ. ಆರ್ಎಸ್ಎಸ್ ವಿರುದ್ಧ ಗಾಂಧಿಹತ್ಯೆಯ ಆರೋಪ ದೇಶದೆಲ್ಲೆಡೆ ಜೋರಾಗಿ ಕೇಳಿ ಬರುತ್ತಿದ್ದ ದಿನಗಳು. ಆ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗದಿದ್ದರೂ ಮುಗ್ಧ ಜನರು ಮಾತ್ರ ಅದು ನಿಜವೆಂದೇ ನಂಬಿದ್ದ ಕಾಲವದು. ಹೀಗಾಗಿ ಆರ್ಎಸ್ಎಸ್ ಸ್ವಯಂಸೇವಕನೆಂದು ಯಾರೇ ಪರಿಚಯ ಮಾಡಿಕೊಂಡರೂ ಆತ ಗಾಂಧಿ ಕೊಂದವರಲ್ಲಿ ಒಬ್ಬನಾಗಿರಬೇಕು ಎಂದೇ ಭಾವಿಸುತ್ತಿದ್ದರು ಜನರು.
ಇಂತಹ ದುರಿತಕಾಲದಲ್ಲಿ ಸರ್ಕಾರಿ ಶಾಲೆಯ ಒಬ್ಬ ಮೇಷ್ಟ್ರು ಶಾಲೆಯ ಕೆಲಸದ ಜೊತೆ ಸಂಘದ ಶಾಖೆಯ ಕೆಲಸವನ್ನೂ ಧೈರ್ಯವಾಗಿ ನಿರ್ವಹಿಸಿ ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದರು. ಆದರೆ, ಇದೇ ಕಾರಣಕ್ಕೆ ಆ ಮೇಷ್ಟ್ರಿಗೆ ಪದೇ ಪದೇ ಊರಿಂದ ಊರಿಗೆ ವರ್ಗಾವಣೆಯ ‘ಶಿಕ್ಷೆ’ ಕಾದಿರುತ್ತಿತ್ತು. ಆ ಶಿಕ್ಷೆಗೇನೂ ಅವರು ಅಂಜಲಿಲ್ಲ. ಯಾವ ಊರಿಗೇ ವರ್ಗಾವಣೆ ಆಗಲಿ, ಅಲ್ಲಿ ಸಂಘಕಾರ್ಯದ ವಿಸ್ತಾರ, ಶಾಖೆ ಆರಂಭ ಅವರ ಜಾಯಮಾನವಾಗಿತ್ತು. ಹೀಗೆ ಎಲ್ಲರಿಗೂ ಪ್ರಿಯರಾದ ಆ ಮೇಷ್ಟ್ರು ಎಲ್ಲೆಡೆ ಶಾಖೆ ಬೆಳೆಸಿ, ನೂರಾರು ತರುಣರನ್ನು ಸಂಘದ ಸ್ವಯಂಸೇವಕರಾಗಿ, ಕಾರ್ಯಕರ್ತರಾಗಿ ರೂಪಿಸಿದರು. ಪ್ರಸಿದ್ಧಿ, ಪ್ರಚಾರಗಳಿಗೆ ಬೆನ್ನು ತಿರುಗಿಸಿದ ಆ ವ್ಯಕ್ತಿಯೇ ಹೆಚ್.ಜಿ. ನಂಜುಂಡಯ್ಯ (ಜನನ: ಮೇ 9, 1931 – ನಿಧನ: ಜುಲೈ 27, 2004).
ನಂಜುಂಡಯ್ಯ ಮೇಷ್ಟ್ರು ಎಂದೇ ಜನಪ್ರಿಯರಾಗಿದ್ದ ನಂಜುಂಡಯ್ಯ ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರಿನಲ್ಲಿ. ತಂದೆ ಶ್ಯಾನುಭೋಗ ಗುಂಡಪ್ಪ ಹಾಗೂ ತಾಯಿ ಕೃಷ್ಣವೇಣಿ ದಂಪತಿಯ ಪುತ್ರನಾಗಿ ಜನಿಸಿ ಬೆಳೆದಿದ್ದು ಮಾತ್ರ ಕಡುಕಷ್ಟದಲ್ಲೇ. ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರಿಸಲಾಗದೆ ಮೈಸೂರಿನ ಹೋಟೆಲ್ ಒಂದರಲ್ಲಿ ತರುಣ ನಂಜುಂಡಯ್ಯ ಕೆಲಸಕ್ಕೆ ಸೇರಿದ್ದರು. ಆಗ ಸಂಘದ ಸಂಪರ್ಕಕ್ಕೆ ಬಂದ ನಂಜುಂಡಯ್ಯನವರ ಬದುಕೇ ಬದಲಾಯಿತು. ಮೈಸೂರಿನ ಸ್ವಯಂಸೇವಕರಾಗಿದ್ದ (ಮುಂದೆ ಪ್ರಚಾರಕರಾಗಿ ಬದುಕು ಸಮರ್ಪಿಸಿದ) ನ. ಕೃಷ್ಣಪ್ಪ, ತಿಮ್ಮಯ್ಯ, ಕೆ.ಎಸ್ ನಾಗರಾಜ್ ಮುಂತಾದವರ ಜೊತೆ ಬೆಳೆದ ನಂಜುಂಡಯ್ಯನವರಿಗೆ ಕೃಷ್ಣಪ್ಪನವರೇ ಒತ್ತಡ ಹೇರಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಪಾಠ ಹೇಳಿಸಿ, ಅದರಲ್ಲಿ ತೇರ್ಗಡೆಯಾಗುವಂತೆ ನೋಡಿಕೊಂಡಿದ್ದರು. ಮುಂದೆ ಕಾಲೇಜಿಗೆ ಹೋಗದೆ ಟಿಸಿಎಚ್ ಸೇರಿ ಅದರಲ್ಲೂ ತೇರ್ಗಡೆಯಾದರು. ಶಾಖೆಯಲ್ಲಿ ಎಲ್ಲರಿಗಿಂತ ಅವರೇ ಹಿರಿಯರು. ಹಾಗಾಗಿ ಎಲ್ಲರೂ ಅವರನ್ನು ಕರೆಯುತ್ತಿದ್ದುದು ಅಣ್ಣಯ್ಯ ಎಂದೇ.
ಹೊಟೇಲ್ನಲ್ಲಿ ಕೆಲಸ ಮಾಡುತ್ತಲೇ ನಂಜುಂಡಯ್ಯ ಮೇಷ್ಟ್ರು ಕೆಲಸಕ್ಕೆ ಪ್ರಯತ್ನಿಸುತ್ತಿದ್ದರು. ಅವರ ಪ್ರಯತ್ನಕ್ಕೆ ಫಲವೂ ಸಿಕ್ಕಿತು. ದೂರದ ಮಲೆನಾಡಿನ ಶಾಲೆಗೆ ಅಧ್ಯಾಪಕರಾಗಿ ನೇಮಿಸಿದ ಸರ್ಕಾರಿ ಆದೇಶ ಬಂತು. ಆಗೆಲ್ಲ ಮಲೆನಾಡಿನಲ್ಲಿ ಕೆಲಸವೆಂದರೆ ಬೇಡವೇ ಬೇಡ ಎನ್ನುವವರೇ ಹೆಚ್ಚಿದ್ದರು. ಕಾರಣ ಆಗಿನ ಮಲೆನಾಡಿನ ಸ್ಥಿತಿ. ಸದಾ ಮಳೆ, ಮಲೇರಿಯಾ, ಜಿಗಣೆ ಕಾಟ, ಓಡಾಡಲು ಸಾಧನ ಸೌಕರ್ಯಗಳಿರಲಿಲ್ಲ. ಕಾಲ್ನಡಿಗೆಯಲ್ಲೇ ತೆರಳಬೇಕಾದ ಸ್ಥಿತಿ. ಗದ್ದೆ, ತೋಟ, ಕಾಡು, ಹಳ್ಳ, ಗುಡ್ಡ ದಾಟಿ ಊರನ್ನು ತಲುಪಬೇಕಿತ್ತು. “ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು” ಎಂಬ ಗಾದೆಮಾತು ಆಗ ಜನಜನಿತವಾಗಿತ್ತು.
ಆದರೆ ನಂಜುಂಡಯ್ಯ ತಮ್ಮ ತಾಯಿಯನ್ನು ಒಪ್ಪಿಸಿ, ತೀರ್ಥಹಳ್ಳಿ ತಾಲೂಕಿನ ಕೇಶವಾಪುರಕ್ಕೆ ಸರ್ಕಾರಿ ಶಾಲೆಯ ಶಿಕ್ಷಕನಾಗಿ ಹೊರಟೇಬಿಟ್ಟರು. ಕೋಣಂದೂರಿನವರೆಗೆ ಬಸ್ಸು. ಅಲ್ಲಿಂದ ಐದಾರು ಕಿಲೋಮೀಟರ್ ನಡೆದು ಗದ್ದೆ, ಗುಡ್ಡ, ಕಾಡು, ತೋಟ ಎಲ್ಲ ದಾಟಿದರೆ ಸಿಗುವ ಹಳ್ಳಿಯೇ ಕೇಶವಾಪುರ. ಅಲ್ಲೊಂದು ಗುಡಿಸಿಲಿನಲ್ಲಿ ವಾಸ. ಬಾವಿ ನೀರು. ತೀರ್ಥಹಳ್ಳಿಗೇ ಆಗ ವಿದ್ಯುತ್ ಬಂದಿರಲಿಲ್ಲ. ಇನ್ನು ಹಳ್ಳಿಗಳ ಪಾಡೇನು? ಸೀಮೆಎಣ್ಣೆ ದೀಪವೇ ಬೆಳಕಿನ ಆಗರ! ನಂಜುಂಡಯ್ಯ ಹೆದರಲಿಲ್ಲ. ಗುಡಿಸಲನ್ನು ಸ್ವಚ್ಛಗೊಳಿಸಿ ಅದನ್ನೇ ‘ಅರಮನೆ’ ಮಾಡಿಕೊಂಡರು. ಪ್ರೀತಿಯಿಂದ ಮಕ್ಕಳಿಗೆ ಪಾಠ ಹೇಳಿದರು. ಸಂಘದ ಶಾಖೆ ಆರಂಭಿಸಿ, ಊರಿನ ತರುಣರನ್ನು ಸೆಳೆದರು. ಕ್ರಮೇಣ ಇಡೀ ಊರಿನವರ ಪ್ರೀತಿ, ವಿಶ್ವಾಸ ಗಳಿಸಿದರು. ಮಕ್ಕಳಿಗೆ ಹಾಡು, ಆಟ, ಶ್ಲೋಕ, ಮಗ್ಗಿ, ನಾಟಕ ಇತ್ಯಾದಿಗಳನ್ನು ಕಲಿಸಿದರು. ಅವೆಲ್ಲವನ್ನು ಮೊದಲು ತಾನು ಕಲಿತು, ಆನಂತರ ಉಳಿದವರಿಗೆ ಕಲಿಸಿದರು. ಸುಂದರವಾದ ಕೈಬರೆಹ, ರಾಗವಾಗಿ ಪದ್ಯ ಹೇಳುವುದು, ಹಾರ್ಮೋನಿಯಂ ನುಡಿಸುವುದು, ನಾಟಕ ಬರೆದು ಆಡಿಸುವುದು, ಕಾವ್ಯ ವಾಚನ, ತೋಟಗಾರಿಕೆ, ಅಡುಗೆ – ಹೀಗೆ ಅವರು ಕಲಿಯದ ವಿದ್ಯೆಗಳೇ ಇರಲಿಲ್ಲ.
ಅವೆಲ್ಲವನ್ನೂ ಅವರು ಕಲಿತಿದ್ದು ಶಾಲೆಯಲ್ಲಿ ಮಕ್ಕಳಿಗೆ ಹಾಗೂ ಶಾಖೆಯಲ್ಲಿ ಸ್ವಯಂಸೇವಕರಿಗೆ ಕಲಿಸುವುದಕ್ಕೆ. ಶನಿವಾರ ಶಾಲೆ ಮುಗಿಸಿ ಊಟ ಮಾಡಿ, ಹೆಗಲಿಗೊಂದು ಚೀಲವೇರಿಸಿ ಹೊರಟರೆಂದರೆ ಮತ್ತೆ ಮನೆಗೆ ಬರುತ್ತಿದ್ದುದು ಸೋಮವಾರ ಮಧ್ಯಾಹ್ನ ಶಾಲೆ ಮುಗಿದ ಬಳಿಕವೇ. ಅಲ್ಲಿಯವರೆಗೆ ಸುತ್ತಮುತ್ತ ಊರುಗಳಿಗೆ ಪ್ರವಾಸ, ಶಾಖೆ, ಸಂಪರ್ಕ, ಬೈಠಕ್ ಇತ್ಯಾದಿಗಳಲ್ಲಿ ಮಗ್ನ. ತೀರ್ಥಹಳ್ಳಿಯ ತಾಲೂಕು ಕಾರ್ಯವಾಹರಾಗಿ ಕೇಶವಾಪುರ, ಸರು, ಕೋಣಂದೂರು, ಚಕ್ಕೋಡಬೈಲು, ಗುಡ್ಡೆಕೊಪ್ಪ, ದರಲಗೋಡು, ಆರಗ, ಮೇಗರವಳ್ಳಿ ಇತ್ಯಾದಿ ಊರುಗಳಲ್ಲಿ ಸಂಘದ ಸಸಿಗೆ ನೀರೆದವರು ಅವರೇ.
ಆರ್ಎಸ್ಎಸ್ ಶಾಖೆ ನಡೆಸುತ್ತಾರೆ ಎಂಬ ಕಾರಣಕ್ಕೆ ನಂಜುಂಡಯ್ಯನವರಿಗೆ ಪದೇಪದೇ ವರ್ಗಾವಣೆ. ಕೇಶವಾಪುರದಿಂದ ಗುಡ್ಡೆಕೊಪ್ಪ, ಅಲ್ಲಿಂದ ಮತ್ತೊಂದು ಊರಿಗೆ. ಶಿಕಾರಿಪುರ ತಾಲೂಕಿನ ಈಸೂರಿನಲ್ಲೂ ಕೆಲವು ವರ್ಷ ಸೇವೆ. ಕೊನೆಗೆ ನಿವೃತ್ತಿ ವೇಳೆಗೆ ಬಸವಾನಿ ಹೈಸ್ಕೂಲ್ ಕನ್ನಡ ಅಧ್ಯಾಪಕರು. ಮೇಷ್ಟರಾಗಿದ್ದಾಗಲೇ ಬಿಎ, ಬಿಎಡ್ ಪರೀಕ್ಷೆ ಕಟ್ಟಿ ಪಾಸ್ ಆಗಿದ್ದರು. ಹಾಗಾಗಿ ಪ್ರೈಮರಿ ಶಾಲೆಯಿಂದ ಹೈಸ್ಕೂಲಿಗೆ ಬಡ್ತಿ ದೊರಕಿತ್ತು.
ಸಂಘದಲ್ಲೂ ಬಡ್ತಿ ದೊರಕಿತ್ತು. ಶಿವಮೊಗ್ಗ ಜಿಲ್ಲಾ ಸಹಕಾರ್ಯವಾಹರಾಗಿ ನಿಯುಕ್ತಿ. ಇಡೀ ಜಿಲ್ಲೆಯಲ್ಲಿ ನಂಜುಂಡಯ್ಯ ಮೇಷ್ಟ್ರ ಮಾತು, ಹರಟೆ, ರಾಗವಾಗಿ ಹಾಡು ಹೇಳುವ ರೀತಿ ಎಲ್ಲರನ್ನೂ ಸೆಳೆದಿತ್ತು. ಅವರ ಮಾತು, ಧ್ವನಿ, ನಡಿಗೆ ಎಲ್ಲವೂ ಬಲು ನಿಧಾನ. ಆದರೆ ಅವರೊಳಗಿನ ಮನಸ್ಸು ಮಾತ್ರ ಬಲು ಬಿಗಿ. ಅತ್ಯಂತ ದೃಢ. ಹಿಡಿದ ಕಾರ್ಯ ನೆರವೇರುವವರೆಗೆ ಹಿಂದೆ ಸರಿಯುತ್ತಿರಲಿಲ್ಲ.
ನಂಜುಂಡಯ್ಯ ಜಿಲ್ಲಾ ಸಹಕಾರ್ಯವಾಹರಾಗಿದ್ದಾಗ ನಾನು ಶಿವಮೊಗ್ಗದಲ್ಲಿ ಕಾಲೇಜು ವಿದ್ಯಾರ್ಥಿ. ಕಾಲೇಜಿನ ರಜಾದಿನಗಳಲ್ಲಿ ವಿದ್ಯಾರ್ಥಿ ವಿಸ್ತಾರಕರಾಗಿ ತೆರಳುವ ಯೋಜನೆ ಆಗ ರಭಸ ಪಡೆದಿತ್ತು. ನನ್ನನ್ನು ವಿಸ್ತಾರಕನಾಗಿ 15 ದಿನ ಹೊನ್ನಾಳಿ ತಾಲೂಕಿನ ನ್ಯಾಮತಿ ಎಂಬ ಅಪ್ಪಟ ಬಯಲು ಸೀಮೆ ಊರಿಗೆ ಕಳಿಸಲಾಗಿತ್ತು. ನ್ಯಾಮತಿಗೆ ನನ್ನನ್ನು ಬಸ್ಸಿನಲ್ಲಿ ಕರೆದುಕೊಂಡು ಹೋದವರು ಇದೇ ನಂಜುಂಡಯ್ಯ. ಅಲ್ಲಿ ನನ್ನ ವಸತಿ, ಊಟದ ವ್ಯವಸ್ಥೆ ಮಾಡಿ, ಒಂದೆರಡು ಹಿತವಚನ ಅವರು ಹೇಳಿದ್ದು ಈಗಲೂ ಹಸಿರಾಗಿದೆ. ಅಲ್ಲಿ ಶಾಖೆ ಪ್ರಾರಂಭಿಸಿದಾಗ, ನೂರಕ್ಕೂ ಮಿಕ್ಕಿ ತರುಣರು, ಬಾಲಕರು ಕಿಂದರಿ ಜೋಗಿಯ ಹಿಂದೆ ಇಲಿಗಳು ಬಂದಂತೆ ಬರತೊಡಗಿದಾಗ ಒಂದೆರಡು ದಿನ ದಿಕ್ಕೇ ತೋಚದೆ ಕಂಗಾಲಾಗಿದ್ದೆ! ಅನಂತರ ಹುಡುಗರನ್ನೆಲ್ಲ ಹೇಗೆ ಸಂಭಾಳಿಸಬೇಕೆನ್ನುವುದನ್ನು ಕ್ರಮೇಣ ಕಲಿತುಕೊಂಡಿದ್ದೆ.
ನಿವೃತ್ತಿಯ ನಂತರವೂ ಸುಮ್ಮನೆ ಕೂರುವ ಜಾಯಮಾನ ಅವರದಾಗಿರಲಿಲ್ಲ. ತೀರ್ಥಹಳ್ಳಿಯ ಸೇವಾ ಭಾರತಿ ಶಾಲೆಯಲ್ಲಿ ಸ್ವಲ್ಪಕಾಲ ಸೇವೆ. ಹರಿಹರಪುರದ ಪ್ರಬೋಧಿನಿ ಗುರುಕುಲದಲ್ಲಿ ಮೂರು ವರ್ಷ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡುವ ಕೆಲಸದಲ್ಲಿ ನಿರತ. ಇಂದು ಆ ಗುರುಕುಲ ಬೆಳೆದು ಕರ್ನಾಟಕದ ಹೆಮ್ಮೆಯ ಶಿಕ್ಷಣ ಕೇಂದ್ರವಾಗಿದೆ. ಆ ಬೆಳವಣಿಗೆಯಲ್ಲಿ ನಂಜುಂಡಯ್ಯನವರ ಪಾತ್ರ ಸ್ಮರಣೀಯ.
“ಶಾಲೆಗೆ ಬರುವುದು, ತರಗತಿಯಲ್ಲಿ ಪಾಠ ಕೇಳುವುದೆಂದರೆ ನನಗೆ ಒಂದು ತರಹದ ಭಯ, ಬೇಜಾರಿನ ಸಂಗತಿಯಾಗಿತ್ತು. ಆದರೆ ನಂಜುಂಡಯ್ಯ ಮೇಷ್ಟ್ರು ನನ್ನನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದ ರೀತಿ, ಕಥೆಗಳನ್ನು, ವಚನಗಳನ್ನು ಕಲಿಸುತ್ತಿದ್ದ ಪರಿ ನನಗೆ ಶಾಲೆಗೆ ಹೋಗುವ, ಪಾಠ ಕೇಳುವ ಭಾವನೆಯನ್ನೇ ಬದಲಿಸಿತು. ಅವರು ನಮ್ಮ ಶಾಲೆಯಲ್ಲಿ ಇರುವವರೆಗೂ ರಜೆ ಬಂದರೆ ಬೇಜಾರು ಆಗುವ ಹಾಗೆ ನಮ್ಮಲ್ಲಿ ಪರಿವರ್ತನೆ ಆಯಿತು. ನಾನು ಚಿಕ್ಕ ವಯಸ್ಸಿನಲ್ಲೇ ಶಾಸಕನಾಗಿದ್ದು, ಆ ಅವಧಿಯಲ್ಲಿ ನನ್ನ ಆತ್ಮಕ್ಕೆ ಮತ್ತು ದೇವರಿಗೆ ತೃಪ್ತಿಯಾಗುವ ರೀತಿ ಕೆಲಸ ಮಾಡಿದ್ದರೆ ಅದಕ್ಕೆ ನನ್ನ ಗುರುವರ್ಯರಾದ ನಂಜುಂಡಯ್ಯನವರ ಪ್ರೋತ್ಸಾಹ, ಪ್ರೇರಣೆಯೇ ಕಾರಣ” ಎಂದು ಸ್ಮರಿಸಿಕೊಂಡವರು 1978ರಲ್ಲಿ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಕಡಿದಾಳ್ ದಿವಾಕರ ಅವರು.
ಅವರು ನಾಟಕಕಾರರಲ್ಲ. ಆದರೆ ನಾಟಕ ಬರೆದರು. ನಾಟಕ ಆಡಿಸಿದರು. ಚಿತ್ರಕಾರರಲ್ಲ. ಆದರೆ ಚಿತ್ರಗಳನ್ನು ರಚಿಸಿದರು. ಹಾಡುಗಾರರಲ್ಲ. ಆದರೆ ಶಾಲೆ, ಶಾಖೆಗಳಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಕಾವ್ಯವಾಚನ ಮಾಡುತ್ತಿದ್ದರು. ಇಳಿ ವಯಸ್ಸಿನಲ್ಲಿ ಬಲಗಾಲು, ಬಲಗೈ ಪಾರ್ಶ್ವವಾಯು ಕಾಯಿಲೆಗೆ ತುತ್ತಾದಾಗ ಎಡಗೈಯಲ್ಲೇ ಪತ್ರ ಬರೆದ ಧೀಮಂತ ಅವರು. ಅದು ಬಲಗೈ ಬಳಸಿ ಬರೆದಷ್ಟೇ ಸುಂದರವಾಗಿರುತ್ತಿತ್ತು. Difficulties are opportunities provided by God ಎಂಬ ಮಾತನ್ನು ನಿಜಗೊಳಿಸಿದ ಸ್ವಯಂಭೂ ವ್ಯಕ್ತಿತ್ವ ಅವರದು. ಬಿಳಿಯ ಕಚ್ಚೆ ಪಂಚೆ, ಮೇಲೊಂದು ಜುಬ್ಬ, ಕಾಲಿಗೆ ಚಪ್ಪಲಿ, ಹಣೆಗೊಂದು ತಿಲಕ ಧರಿಸಿ ಅವರು ಶಾಲೆಗೆ ಬರುತ್ತಿದ್ದರೆ ಎಂಥವರಿಗಾದರೂ ಗೌರವ ಕೊಡಬೇಕೆನಿಸುತ್ತಿತ್ತು.
ನಂಜುಂಡಯ್ಯ ಜೀವನದಲ್ಲಿ ಸ್ವೀಕರಿಸಿದ್ದು ಸಂಘ ವ್ರತವನ್ನು. ತ್ರಿಕರಣ ಪೂರ್ವಕವಾಗಿ ಅದನ್ನು ಪಾಲಿಸಿದ್ದರು. ಅವಿರತ, ಸ್ವಪ್ರೇರಿತ ಪರಿಶ್ರಮದಿಂದ ಅವರು ಧ್ಯೇಯದಾರಾಧನೆ ಮಾಡಿದರು. ಅಧ್ಯಾಪಕ ವೃತ್ತಿ ಅವರ ಗೃಹಸ್ಥ ಜೀವನಕ್ಕೆ ಅನಿವಾರ್ಯವಾಗಿತ್ತು. ಆದರೆ ಪ್ರವೃತ್ತಿಯಲ್ಲಿ ಅವರೊಬ್ಬ ಸಂನ್ಯಸ್ತ ಮನೋಭಾವದ ಸಾಮಾಜಿಕ ಕಾರ್ಯಕರ್ತರಾಗಿದ್ದರು. ತಾವು ಬೆಳೆದು ಹಲವರನ್ನು ಬೆಳೆಸಿದರು. ಸಾರ್ಥಕ ಬದುಕೆಂದರೆ ಇದೇ ಅಲ್ಲವೇ?
