- ಮಂಜುನಾಥ ಅಜ್ಜಂಪುರ, ಗೌರವ ಸಂಪಾದಕ, “ವಾಯ್ಸ್ ಆಫ್ ಇಂಡಿಯಾ” ಕನ್ನಡ ಸರಣಿ
1960 – 1970ರ ದಶಕಗಳಲ್ಲಿ ನನಗೆ (ನನ್ನಂತಹವರಿಗೆ) ಪರಿಚಯವಾದ ಸಂಘದ ಪ್ರಚಾರಕರು ಬಹಳ ದೊಡ್ಡವರು. ಅವರ ಬದ್ಧತೆ, ಅಧ್ಯಯನ, ಅನುಭವ, ಆದರ್ಶ, ಮಾರ್ಗದರ್ಶನಗಳು ಅದ್ವಿತೀಯ. ನಮಗೆಲ್ಲಾ ಸಿದ್ಧಾಂತಕ್ಕಿಂತ ಹೆಚ್ಚು ಪ್ರಭಾವ ಬೀರಿದುದು ಅವರ ವೈಯಕ್ತಿಕ ಜೀವನವೇ. ಆಗ ಅವರ ಮಾತುಗಳಲ್ಲಿ ‘ಕರ್ಣಾವತಿ’ ಎಂಬ ನಗರದ ಉಲ್ಲೇಖವಾಗುತ್ತಿತ್ತು. ಸಂಘದ ಅನೇಕ ಕಿರುಹೊತ್ತಿಗೆಗಳಲ್ಲಿಯೂ ಆಗ ‘ಕರ್ಣಾವತಿ’ ಬಳಕೆಯಾಗುತ್ತಿತ್ತು. ಅನಂತರ ಯಾವುದಿದು ಎಂದು ಕೇಳಿದಾಗ, ಅದು ಅಹಮದಾಬಾದ್ ಎಂಬುದು ಗೊತ್ತಾಯಿತು. ಭಾಗ್ಯನಗರವೇ ಇಂದಿನ ಹೈದರಾಬಾದ್ ಎಂಬುದೂ ತಿಳಿಯಿತು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾದುದು 1973ರಲ್ಲಿ. ಆದರೆ, ಆ ಮೊದಲೇ ಸಂಘದ ಅನೇಕ ಪ್ರಕಟಣೆಗಳಲ್ಲಿ ಕರ್ನಾಟಕ ಎಂದು ಹಲವೆಡೆ ಅಚ್ಚಾಗಿತ್ತು. ವಾಸ್ತವ ಜಗತ್ತು ಬಹಳ ವಿಚಿತ್ರವಾಗಿರುತ್ತದೆ. 1995ರಿಂದ ಗುಜರಾತ್ ರಾಜ್ಯದಲ್ಲಿ ನಿರಂತರವಾಗಿ ಭಾಜಪ ಅಧಿಕಾರದಲ್ಲಿದ್ದರೂ, ಅಂತೆಯೇ ಕೇಂದ್ರದಲ್ಲಿ 2014ರಿಂದ ಅಧಿಕಾರದಲ್ಲಿದ್ದರೂ ಈವರೆಗೆ ‘ಕರ್ಣಾವತಿ’ ಪುನರ್ನಾಮಕರಣಕ್ಕೆ ‘ಕಾಲ ಕೂಡಿಬಂದಿಲ್ಲ!’ ಇನ್ನು ಹಿಂದೂ – ಹಂತಕರಾದ, ಲೂಟಿಕೋರರೂ ಆದ ಬಾಬರ್, ಲೋದಿ, ತುಘಲಕ್ ಮೊದಲಾದವರ ಹೆಸರಿನ ರಸ್ತೆಗಳು, ಪ್ರದೇಶಗಳು ಈಗಲೂ ರಾಜಧಾನಿ ದೆಹಲಿಯಲ್ಲಿ ರಾರಾಜಿಸುತ್ತಿವೆ. ನಾವೆಲ್ಲರೂ ಈಗಲೂ ತಲೆತಗ್ಗಿಸುವ ಸ್ಥಿತಿಯಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದ, ಅಧ್ಯಕ್ಷರೂ ಆಗಿದ್ದ ಜಿಯಾ ಉಲ್ ಹಖ್ ಅತಿರೇಕದ ಜಿಹಾದೀ ಮತ್ತು ಭಾರತದ ಕಟ್ಟಾ ವಿರೋಧಿ. ಜಿಯಾ ಅಧಿಕಾರಾವಧಿಯಲ್ಲಿ ಅನೇಕ ಕಡೆ ರಸ್ತೆಗಳಿಗೆ, ಪ್ರದೇಶಗಳಿಗೆ, ಊರುಗಳಿಗೆ ಹಿಂದಿದ್ದ ಹೆಸರುಗಳನ್ನು ತೆಗೆದು ಬಲವಂತವಾಗಿ ಇಸ್ಲಾಮೀ ಹೆಸರುಗಳನ್ನು ನೀಡಲಾಗಿತ್ತು. ಲಾಹೋರಿನಲ್ಲೂ ಇಂತಹ ಬದಲಾವಣೆಗಳಾಗಿದ್ದವು. ಜನ ಬದಲಾದ ಈ ಹೆಸರುಗಳನ್ನು ಬಳಸದಿದ್ದರೂ, ಎಲ್ಲ ಸರ್ಕಾರೀ ದಾಖಲೆಗಳಲ್ಲಿ ಹೊಸ ಇಸ್ಲಾಮೀ ಹೆಸರುಗಳು ರಾರಾಜಿಸುತ್ತಿದ್ದವು. ಜಿಯಾ ಅದೆಂತಹ ಭಯಂಕರ ಜಿಹಾದೀ ಎಂದರೆ ಭವನವೊಂದರಲ್ಲಿ ಪಾಕಿಸ್ತಾನದ ನಿರ್ಮಾತೃಗಳಲ್ಲೊಬ್ಬರಾದ ಅಲ್ಲಾಮಾ ಮೊಹಮ್ಮದ್ ಇಕ್ಬಾಲರ ಚಿತ್ರವಿತ್ತು. ಅದರಲ್ಲಿ ಅವರು ಪ್ಯಾಂಟ್ – ಕೋಟ್ ಧರಿಸಿದ್ದರಂತೆ. ಜಿಯಾ ವಿರೋಧ ಮತ್ತು ಕಿರುಚಾಟಕ್ಕೆ ಹೆದರಿದ ಅಲ್ಲಿನ ಸಿಬ್ಬಂದಿ ರಾತ್ರೋರಾತ್ರಿ ಶೇರ್ವಾನಿ ಮತ್ತು ಟೋಪಿ ಧರಿಸಿದ ಇಕ್ಬಾಲರ ಬೇರೆಯೇ ಚಿತ್ರ ತಂದಿಟ್ಟರಂತೆ. ಹಾಲಿವುಡ್ ತಾರೆ ಸೋಫಿಯಾ ಲಾರೆನ್ ನಟಿಸಿದ ಚಲನಚಿತ್ರವೊಂದು ಪ್ರದರ್ಶನವಾಗುತ್ತಿತ್ತು. ಪೋಸ್ಟರ್ನಲ್ಲಿ ಅವಳ ಅರೆನಗ್ನ ಚಿತ್ರವಿತ್ತು. ಜಿಯಾ ಕಿರುಚಾಟಕ್ಕೆ ಹೆದರಿದ ಚಿತ್ರಮಂದಿರದವರು ಸಲ್ವಾರ್ ಹಾಕಿದ ಅದೇ ಸೋಫಿಯಾಳ ಹೊಸ ಪೋಸ್ಟರ್ ಒಂದನ್ನು ಅಚ್ಚು ಮಾಡಿಸಿ ಹಾಕಿದರಂತೆ. ಪೋಸ್ಟರ್ ಏನೋ ಬದಲಾಯಿತು, ಚಲನಚಿತ್ರದಲ್ಲಿ ಏನಾದರೂ ಬದಲಾವಣೆ ಸಾಧ್ಯವೇ? ಎಂದು ಪಾಕಿಸ್ತಾನದ ಜನರೇ ನಗಲಾರಂಭಿಸಿದರಂತೆ.
ಕಳೆದ ಶತಮಾನದ ಲಾಹೋರಿನ ಇತಿಹಾಸವೇ ವಿಚಿತ್ರವಾದುದು, ಸಂಕೀರ್ಣವಾದುದು. ಅದೊಂದು ಬಹು ಸಂಸ್ಕೃತಿಯ ಐತಿಹಾಸಿಕ ನಗರ. ದೇಶವಿಭಜನೆಗೆ ಮುನ್ನ ಅಲ್ಲಿನ ಆಸ್ತಿ, ವ್ಯಾಪಾರ, ಬ್ಯಾಂಕುಗಳು, ಕಾಲೇಜುಗಳು, ಭೂಮಿ ಇತ್ಯಾದಿಗಳಲ್ಲಿ ಪ್ರತಿಶತ 80 ಭಾಗ ಹಿಂದೂಗಳ ಮತ್ತು ಸಿಖ್ಖರ ನಿಯಂತ್ರಣದಲ್ಲಿಯೇ ಇತ್ತು. ಆದರೆ, ಹಿಂದೂ ಮತ್ತು ಸಿಖ್ ಎರಡೂ ಸಮುದಾಯಗಳ ಒಟ್ಟು ಪ್ರಜಾಸಂಖ್ಯೆ ಪ್ರತಿಶತ 35ರಷ್ಟಿತ್ತು. ಮುಸ್ಲಿಮರ ಪ್ರಜಾಸಂಖ್ಯೆ 65 ಪ್ರತಿಶತ ಇತ್ತು.
ಇಸ್ಲಾಂ ಪ್ರಣೀತ ಜಿಹಾದ್ ಎಂದಿಗೂ ಎಂದೆಂದಿಗೂ ಮುಗಿಯದ ಕಥೆ. 20ನೆಯ ಶತಮಾನದ ಆರಂಭಿಕ ದಶಕಗಳ ಕರಾಚಿಯ ಹಿಂದೂಗಳಂತೆ, ಕಾಶ್ಮೀರದ ಹಿಂದೂಗಳಂತೆ ಲಾಹೋರಿನ ಹಿಂದೂಗಳೂ “ಈ ಎಲ್ಲ ಜಿಹಾದಿಗಳೂ ನಮ್ಮ ಸೋದರರು” ಎಂಬ ಭ್ರಮೆಯಲ್ಲಿದ್ದರು. 1947ರ ದೇಶವಿಭಜನೆಯ ಅತಿಭೀಷಣ ಪರ್ವದಲ್ಲಿ ಲಾಹೋರಿನಲ್ಲಿ ಆಗಬಾರದ್ದು ಆಯಿತು. ‘ಸೋಕಾಲ್ಡ್’ ಸೋದರರೇ ಲಕ್ಷಾಂತರ ಹಿಂದೂಗಳ ಮತ್ತು ಸಿಖ್ಖರ ಮಾರಣಹೋಮ ನಡೆಸಿದರು. ಇಲ್ಲಿ ಬರೆಯಲಾಗದಷ್ಟು ಪ್ರಮಾಣದ ಭಯಾನಕ ಅತ್ಯಾಚಾರಗಳಿಗೆ ಹೆಣ್ಣುಮಕ್ಕಳು ಸಿಲುಕಿದರು. ಎಲ್ಲ ಆಸ್ತಿಪಾಸ್ತಿ, ಮನೆ – ಮಠ, ಶಾಲೆ – ಕಾಲೇಜುಗಳು, ಅಂಗಡಿಗಳು ಜಿಹಾದಿಗಳ ಕೈವಶವಾದವು, ಇಡೀ ಲಾಹೋರ್ ನಗರ ಹತ್ತಿ ಉರಿಯಿತು. ಕನಿಷ್ಠ ಜೀವ ಉಳಿದರೆ ಸಾಕು ಎನ್ನುತ್ತಾ ಲಕ್ಷಾವಧಿ ಹಿಂದೂಗಳು ಮತ್ತು ಸಿಖ್ಖರು ಭಾರತಕ್ಕೆ ಬರಬೇಕಾಯಿತು.

ಲಾಹೋರಿನ ಹಿಂದೂಗಳು ಮತ್ತು ಸಿಖ್ಖರು ಅದೆಷ್ಟು ಮುಗ್ಧರು ಎಂದರೆ, ಹತ್ಯಾಕಾಂಡದ ಬೀಭತ್ಸ ವಿವರಗಳು ಬರುತ್ತಿದ್ದಾಗಲೂ ಕೆಲವೇ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ, ನಾವು ಲಾಹೋರಿಗೆ ಹಿಂದಿರುಗಬಹುದು ಎಂದೇ ಪರಿಭಾವಿಸಿದ್ದರು. ಲಾಹೋರ್ ನಗರದ ಪ್ರಜಾಸಂಖ್ಯೆಯಲ್ಲಿ ವಿಭಜನೆಗೆ ಮೊದಲು ಮೂರನೇ ಒಂದು ಭಾಗದಷ್ಟಿದ್ದ ಹಿಂದೂಗಳ ಮತ್ತು ಸಿಖ್ಖರ ಸಂಖ್ಯೆಯು ಅನಂತರದ ಪಾಕಿಸ್ತಾನದ 1951ರ ಜನಗಣತಿಯಲ್ಲಿ 2,700ಕ್ಕಿಂತ ಕಡಿಮೆಯಾಯಿತೆಂದರೆ ಹತ್ಯಾಕಾಂಡದ ಪ್ರಮಾಣವನ್ನು ಊಹಿಸಬಹುದು. ಪಾಕಿಸ್ತಾನದ ಜಿಹಾದೀ ಆವೇಶ ಅದೆಷ್ಟು ಭಯಂಕರ ಎಂದರೆ ಅಲ್ಲಿದ್ದ ಕ್ರೈಸ್ತ, ಪಾರ್ಸಿ, ಜೈನ ಸಮುದಾಯಗಳಲ್ಲದೇ ಅಹಮದೀಯರೂ ದಾಳಿಗೆ ತುತ್ತಾಗಬೇಕಾಯಿತು, ನಾಶವಾಗಬೇಕಾಯಿತು.
ಪಾಕಿಸ್ತಾನದಲ್ಲಿಯೂ ಪಠ್ಯಕ್ರಮದಲ್ಲಿ ಬದಲಾವಣೆಗಳಾಗಬೇಕು, ಘಜನಿ ಮೊಹಮ್ಮದನು ಸೋಮನಾಥ ದೇವಾಲಯವನ್ನು ಧ್ವಂಸ ಮಾಡಿದ್ದು ಕೇವಲ ಐಶ್ವರ್ಯದ ಕಾರಣಕ್ಕೆ ಅಲ್ಲ; ಅಲ್ಲಿ ಇಸ್ಲಾಮೀ ಜಿಹಾದ್ ಪಾತ್ರವಿದೆ ಎನ್ನುವವರಿದ್ದಾರೆ. ಆದರೆ, ಬಹಳ ಸಣ್ಣ ಪ್ರಮಾಣದಲ್ಲಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದಿಂದ ಬಂದ ಸುದ್ದಿ ಮೈ ನವಿರೇಳಿಸುತ್ತದೆ. ಇದು ನಿಜವೇ ಎಂದು ಎರಡೆರಡು ಬಾರಿ ಮರುಪರಿಶೀಲನೆ ಮಾಡುವಂತಹ ವಿಶೇಷ ಸುದ್ದಿಯಿದು. ಪಾಕಿಸ್ತಾನದ ಪಶ್ಚಿಮ ಪಂಜಾಬ್ ಪ್ರಾಂತದ ಮುಖ್ಯಮಂತ್ರಿ ಮರಿಯಮ್ ನವಾಜ್ (ಅವರು ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಮಗಳು ಎಂಬುದನ್ನೂ ಇಲ್ಲಿ ಸ್ಮರಿಸಬಹುದು) ಅಧಿಕೃತ ಸುತ್ತೋಲೆ ಹೊರಡಿಸಿ ಲಾಹೋರಿನ ಅನೇಕ ಪ್ರದೇಶ ಮತ್ತು ರಸ್ತೆಗಳಿಗೆ ದೇಶ-ವಿಭಜನೆ ಪೂರ್ವದ ಪಾರಂಪರಿಕ ಹೆಸರುಗಳ ಪುನರ್ನಾಮಕರಣ ಮಾಡಿದ್ದಾರೆ. ಈ ನಿರ್ಧಾರದ ಹಿಂದೆ ನವಾಜ್ ಷರೀಫ್ ಅವರ ಬೆಂಬಲವೂ ಇದೆ. ಹಾಗೆಂದ ಮಾತ್ರಕ್ಕೆ ಈ ನವಾಜ್ ಮತ್ತು ಮರಿಯಮ್ ಸಜ್ಜನರೇನೂ ಅಲ್ಲ. ತಮಗೆ ಸೆಕ್ಯುಲರ್ ಇಮೇಜ್ ಬೇಕು, ಆಧುನಿಕ ಮನೋಭಾವ ತಮ್ಮದು, ತಾವು ಉದಾರವಾದಿಗಳು ಎಂದು ಬಿಂಬಿಸಿಕೊಂಡರೆ ವಿದೇಶೀ ಮುಸ್ಲಿಮೇತರರ ಬೆಂಬಲ ಮತ್ತು ಹೂಡಿಕೆ ಸಿಕ್ಕಬಹುದು; ಎಂದೆಂದೂ ಮುಗಿಯದ ಈ ಜಿಹಾದ್ನಿಂದ ತಮಗೆ ವಿದೇಶೀ ಬೆಂಬಲ ಸಿಕ್ಕುವುದಿಲ್ಲ ಎಂಬೆಲ್ಲಾ ಕುತಂತ್ರಗಳಿವೆ. ಜಿಯಾ ಉಲ್ ಹಖ್ ಮತ್ತು ಇನ್ನಿತರ ಘೋಷಿತ ಜಿಹಾದಿಗಳ ಕಾರಣದಿಂದ ಲಾಹೋರಿನ ಅನೇಕ ರಸ್ತೆಗಳ ಮತ್ತು ಪ್ರದೇಶಗಳ ಹೆಸರುಗಳು ಹಿಂದೆಯೇ ಬದಲಾಗಿದ್ದವು. ಲಾಹೋರಿನಲ್ಲಿ ಮುಸ್ಲಿಮೇತರರು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದರೂ ಸಾಮಾನ್ಯ ಜನರು ಕೃಷ್ಣನಗರ, ಲಕ್ಷ್ಮೀ ಚೌಕ, ರಾಮ್ ಗಲೀ ಎಂಬ ಹಳೆಯ ಹೆಸರುಗಳನ್ನೇ ಬಳಸುತ್ತಿದ್ದಾರೆ, ಇಂದಿಗೂ. ಪರಂಪರೆ ಸುಲಭವಾಗಿ ಬಿಟ್ಟುಹೋಗುವಂತಹುದಲ್ಲ.
ಇದೇ ಮಾರ್ಚ್ 2026ರಲ್ಲಿ ಮರಿಯಮ್ ಒಂದು ಆದೇಶ ಹೊರಡಿಸಿ ಹಳೆಯ ಹೆಸರುಗಳನ್ನೇ ಪುನರ್ಸ್ಥಾಪಿಸಲು ಪ್ರಯತ್ನಿಸಿದರು. ಪಾಕಿಸ್ತಾನದ ಪಂಜಾಬಿನ ಮುಖ್ಯಮಂತ್ರಿಯಾಗಿ ಅವರು ಮಂತ್ರಿಮಂಡಲದಲ್ಲಿ ಇಂತಹ ಅಭೂತಪೂರ್ವ ನಿರ್ಧಾರವನ್ನೇ ಪ್ರಕಟಿಸಿದರು. ಆದರೆ, ಪಾಕಿಸ್ತಾನ ಪಾಕಿಸ್ತಾನವೇ. ಇಸ್ಲಾಮೀ ಪ್ರಭುತ್ವದಲ್ಲಿ ಇಸ್ಲಾಮೇತರ ಹಿಂದೂ ಮತ್ತು ಸಿಖ್ ಪರಂಪರೆಗಳನ್ನು ಮತ್ತೆ ಸ್ಥಾಪಿಸುವ ಇಂತಹ ಸರ್ಕಾರೀ ನಿರ್ಧಾರಗಳನ್ನು ಅಲ್ಲಿನ ಮುಲ್ಲಾಶಾಹಿ ವಿರೋಧಿಸುತ್ತಿದೆ. ಹಾಗಾಗಿ ಅನುಷ್ಠಾನದ ಮುಂದಿನ ಹೆಜ್ಜೆ ಇಡಲು ಮರಿಯಮ್ ಸರ್ಕಾರ ಹಿಂದೇಟು ಹಾಕುತ್ತಿದೆ. ಅದಿರಲಿ, ‘ನಮ್ಮ’ ಸರ್ಕಾರಗಳು ನಮ್ಮ ಸಂಸ್ಕೃತಿಯನ್ನು ನೆನಪಿಸುವ – ನಮ್ಮ ಪರಂಪರೆಯನ್ನು ಪ್ರತಿನಿಧಿಸುವ ಹಳೆಯ ಹೆಸರುಗಳನ್ನೇಕೆ ಪುನರ್ಸ್ಥಾಪಿಸುತ್ತಿಲ್ಲ?
