ಅಂಕಣ – ಕಡೆಗೋಲು
- ನಾರಾಯಣ ಶೇವಿರೆ, ಸಂಘಟನಾ ಕಾರ್ಯದರ್ಶಿ, ಅಖಿಲ ಭಾರತೀಯ ಸಾಹಿತ್ಯ, ಪರಿಷದ್, ಕರ್ನಾಟಕ
ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಬೇಸಿಗೆ ರಜಾಕಾಲದಲ್ಲಿ ಪಾಲ್ಗೊಂಡ ಒಂದು ತರಬೇತಿಯ ಕುರಿತು ಪ್ರಸ್ತಾಪಿಸುತ್ತ ತಮ್ಮ ದುಗುಡವನ್ನು ಹೇಳಿಕೊಂಡರು. ಹಲವು ಮುಖಗಳಿದ್ದವು ಅವರೀ ದುಗುಡಕ್ಕೆ.
ಅದು ರಾಜ್ಯ ಸರ್ಕಾರವು ಆಯೋಜಿಸಿದ್ದ ತರಬೇತಿ ವರ್ಗವಾಗಿತ್ತು. ಆಂಗ್ಲಮಾಧ್ಯಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಬೋಧನೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ತರಬೇತಿಯನ್ನು ನೀಡಲಾಗಿತ್ತು. ಅಸಲಿಗೆ ಅವರಿಗೆ ಆಂಗ್ಲಭಾಷೆಯು ಮಾಧ್ಯಮವಾಗಿ ಸಿದ್ಧಿಸಿದ್ದೇ ಇಲ್ಲ. ಅವರೆಲ್ಲ ಓದಿದ್ದೂ ಕನ್ನಡದಲ್ಲೇ, ಪಾಠ ಮಾಡುತ್ತಿರುವುದೂ ಕನ್ನಡದಲ್ಲೇ. ಒಂದು ಭಾಷೆಯಾಗಿ ಇಂಗ್ಲಿಷನ್ನು ಓದಿದ್ದು ಬಿಟ್ಟರೆ ಅದರಲ್ಲಿ ಓದುವ, ಬರೆಯುವ ಸಾಮರ್ಥ್ಯವನ್ನು ಹೊಂದಿದ ಶಿಕ್ಷಕರಿರುವುದು ವಿರಳ. ಎಲ್ಲೋ ಕೆಲವರು ಸ್ವಪ್ರಯತ್ನದಿಂದಲೋ ಇಲ್ಲವೇ ಪ್ರೌಢಶಾಲಾ ಹಂತದಲ್ಲಿಯೇ ಆಂಗ್ಲಮಾಧ್ಯಮವನ್ನು ಆಯ್ಕೆಮಾಡಿಕೊಂಡೋ ಒಂದಷ್ಟು ತಮ್ಮ ಆಂಗ್ಲಭಾಷಾಸಾಮರ್ಥ್ಯವನ್ನು ವರ್ಧಿಸಿಕೊಂಡಿರಬಹುದು. ಹೆಚ್ಚಿನವರ ಸಾಮರ್ಥ್ಯವು ಕನ್ನಡಮಾಧ್ಯಮ ಬೋಧನೆಗೆ ಸೀಮಿತ. ಅಂಥವರೀಗ ಒಂದರಿಂದ ಐದನೆಯ ತರಗತಿಯವರೆಗೆ ಆಂಗ್ಲಭಾಷೆಯಲ್ಲಿ ಪಾಠಮಾಡಬೇಕಾಗಿದೆ. ಹಾಗೆ ಪಾಠಮಾಡಲು ಸಾಧ್ಯವಾಗುವಂತೆ ಅವರಿಗೆ ಈ ತರಬೇತಿಯನ್ನು ನೀಡಲಾಗಿದೆ.
ಇಲ್ಲೀಗ ಅವರ ದುಗುಡವನ್ನು ಒಂದೊಂದಾಗಿ ಈ ರೀತಿಯಲ್ಲಿ ಒಕ್ಕಣಿಸಬಹುದೇನೋ;
ದುಗುಡ – ಒಂದು
ಕನ್ನಡದಲ್ಲಿ ಮಾತ್ರ ಪಾಠಮಾಡಲು ಗೊತ್ತಿರುವವರಿಗೆ ಆಂಗ್ಲಭಾಷೆಯಲ್ಲಿ ಪಾಠಮಾಡಲು ತರಬೇತಿ!.
ಸರಿ, ತರಬೇತಿಯ ದಿನಗಳು ಎಷ್ಟು? ‘ಬರೋಬ್ಬರಿ’ ಐದು ದಿನಗಳು!. ಕೇವಲ ಕನ್ನಡ ಮಾಧ್ಯಮದಲ್ಲಿ ಪಾಠಮಾಡಬಲ್ಲವರು, ಆಂಗ್ಲಭಾಷೆಯನ್ನು ದ್ವಿತೀಯ ಭಾಷೆಯಾಗಿಯಷ್ಟೆ ಓದಿಕೊಂಡವರು, ಐದು ದಿನಗಳ ತರಬೇತಿಯಲ್ಲಿ ಆಂಗ್ಲಮಾಧ್ಯಮದಲ್ಲಿ ಪಾಠಮಾಡುವಷ್ಟು ತಯಾರಾಗುತ್ತಾರಾ?.
ಅಂದಹಾಗೆ ಇವರಿಗೆಲ್ಲ ಐದು ದಿನಗಳ ತರಬೇತಿಯನ್ನು ನೀಡಿದವರು ಇವರಂತೆಯೇ ಇರುವವರು!. ಆ ತರಬೇತಿದಾರರು ಈ ತರಬೇತಿಯನ್ನು ನೀಡುವುದಕ್ಕಾಗಿ ಇಂಥದ್ದೇ ಐದು ದಿನಗಳ ಒಂದು ತರಬೇತಿಯಲ್ಲಿ ಪಾಲ್ಗೊಂಡು ಬಂದವರು. ಅದರಲ್ಲಿ ಪಾಲ್ಗೊಳ್ಳಲು ಕನ್ನಡ ಮಾಧ್ಯಮದಲ್ಲಿ ಪಾಠಮಾಡುವ ಶಿಕ್ಷಕರನ್ನೇ ಕಳುಹಿಕೊಡಲಾಗಿತ್ತು. ಆ ಅಲ್ಪಾವಧಿಯಲ್ಲಿ ತರಬೇತಿ ಪಡೆದುದೇ ಈ ತರಬೇತಿಯನ್ನು ನೀಡಲು ಅವರಿಗೆ ಒದಗಿದ ಅರ್ಹತೆ. ಹೆಚ್ಚಿನ ಈ ಆಂಗ್ಲ ತರಬೇತುದಾರರಿಗೆ ಮೋರ್ನ ವಿರೋಧಪದ ಲೆಸ್ ಎಂಬುದೇ ತಿಳಿದಿಲ್ಲ!. ‘ಅರ್ಹತೆ’ ಪಡೆದ ಈ ಆಂಗ್ಲಮಾಧ್ಯಮ ತರಬೇತುದಾರರು ಕನ್ನಡದ ಮಟ್ಟಿಗೆ ಯೋಗ್ಯತೆಯುಳ್ಳವರೇ ಅನ್ನಿ. ಆದರೆ ಅದು ಆಂಗ್ಲಮಾಧ್ಯಮದ ಮಟ್ಟಿಗೆ ಸುತರಾಂ ಅಲ್ಲ. ಅದನ್ನು ಕೊರತೆಯೆಂದು ಭಾವಿಸಬೇಕಿಲ್ಲ. ಸಮಸ್ಯೆಯಿರುವುದು ಸೂಕ್ತವಲ್ಲದ ಯೋಜನೆಯಲ್ಲಿ. ಈಗ ಕನ್ನಡಮಾಧ್ಯಮ ಬೋಧಕ ಶಿಕ್ಷಕರು ಐದು ದಿನಗಳ ತರಬೇತಿಯ ಮೂಲಕ ಆಂಗ್ಲಮಾಧ್ಯಮ ಬೋಧಕರಾಗಿ ಅರ್ಹತೆಯನ್ನು ಗಳಿಸಿದ್ದಾರೆ. ಈ ಬಾರಿಯ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದ್ದಾರೆ. ಅರ್ಹತೆ ಪಡೆದ ಶಿಕ್ಷಕರಿಂದ ಆಂಗ್ಲಮಾಧ್ಯಮದ ಬೋಧನೆಯನ್ನು ಪ್ರಾರಂಭಿಸಲಾಗಿದೆ.
ದುಗುಡ – ಎರಡು
ಆಂಗ್ಲಭಾಷೆಯಲ್ಲಿ ಹಿಡಿತವಿಲ್ಲದ ಶಿಕ್ಷಕರಿಂದ ಮಕ್ಕಳು ಆಂಗ್ಲಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆಯಬೇಕು. ಹಿಡಿತವಿಲ್ಲದ ಭಾಷೆಯಲ್ಲಿ ಒಂದು ವಿಷಯವನ್ನು ಪಾಠಮಾಡಬೇಕಾಗಿ ಬರುವುದು ಹಿಂಸೆ. ಗೊತ್ತಿಲ್ಲದ ಭಾಷೆಯಲ್ಲಿ ಕಲಿಯಬೇಕಾಗಿ ಬರುವುದು ಕ್ರೌರ್ಯ. ಶಿಕ್ಷಕರು ಮತ್ತು ಮಕ್ಕಳು ಈ ಹಿಂಸೆ – ಕ್ರೌರ್ಯಗಳ ವರ್ತುಲದೊಳಗಿದ್ದುಕೊಂಡು ಇಡಿಯ ಶೈಕ್ಷಣಿಕ ವರ್ಷವನ್ನು ಸಾಗಹಾಕಬೇಕು.
ಐದು ತರಗತಿಗಳಿರುವ ಶಾಲೆಯಲ್ಲಿ ಎರಡೋ ಮೂರೋ ಸಂಖ್ಯೆಯಲ್ಲಿರುವ ಶಿಕ್ಷಕರಿಗೆ ಸಾಮಾನ್ಯವಾಗಿ ಬೆಳಗ್ಗಿನಿಂದ ಸಂಜೆಯವರೆಗೆ ನಿರಂತರ ಪಾಠಮಾಡಬೇಕಾದ ಸ್ಥಿತಿಯಿರುತ್ತದೆ. ಹೆಚ್ಚು ಶಿಕ್ಷಕರಿರುವಲ್ಲಿ ಒಂದೋ ಎರಡೋ ಅವಧಿಗಳ ಬಿಡುವು ಸಿಕ್ಕೀತು. ಅದು ತೀರಾ ಅಪರೂಪದಲ್ಲಿ ಅಪರೂಪ. ತುಂಬಾ ಚೆನ್ನಾಗಿ ಹಿಡಿತವಿರುವ ಭಾಷೆಯಲ್ಲಿಯೇ ಹೀಗೆ ನಿರಂತರವಾಗಿ ಪಾಠಮಾಡುವುದು ಕಷ್ಟ. ಮಾಡಿದ ಪಾಠದಲ್ಲಿ ಜೀವಂತಿಕೆಯನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ. ಇನ್ನು ಹಿಡಿತವಿಲ್ಲದ ಭಾಷೆಯಲ್ಲಿ ಬೋಧನೆಯ ನಿರಂತರತೆಯನ್ನು ಕಾಪಾಡುವುದೆಂತು? ಜೀವಂತಿಕೆಯನ್ನು ಉಳಿಸಿಕೊಳ್ಳುವುದೆಂತು?.
ನಿರಂತರ ಪಾಠವನ್ನು ಕೇಳಿಸಿಕೊಳ್ಳಬೇಕಾದುದು ಮಕ್ಕಳ ಪಾಡು. ಆ ಪಾಡನ್ನು ಪಡಲೇಬೇಕು. ಹಾಗಿರುವಾಗ ಪಾಠದಲ್ಲಿ ಅವರು ಮುದನೀಡಬಲ್ಲ ಇನ್ನೇನನ್ನೋ ನಿರೀಕ್ಷಿಸುತ್ತಾರೆ. ಮೂಲ ಪಾಠ್ಯದ ವಿಷಯ ಬಿಟ್ಟು ಕಥೆ ಮತ್ತಿತರ ರೋಚಕ – ರಂಜಕ ಮಾಹಿತಿಯನ್ನು ನೀಡುವ ಶಿಕ್ಷಕರು ಅವರಿಗೆ ಆಪ್ತರಾಗುತ್ತಾರೆ. ನಿರಂತರತೆಯ ನಡುವೆಯೂ ಜೀವಂತಿಕೆಯನ್ನು ಉಳ್ಳ ಪಾಠವನ್ನು ಅವರು ತುಸುವಾದರೂ ಸಹಿಸಿಯಾರು. ಅದಿಲ್ಲದ ಪಾಠಗಳ ಅವಧಿಗಳೆಂದರೆ ಅವರಿಗೆ ಅತಿಬೇಸರದ ಅವಧಿ. ಇಂಥ ಸನ್ನಿವೇಶಗಳು ಅಲ್ಲೊಂದು ಇಲ್ಲೊಂದು ಇದ್ದಾಗ ಅವರಿಗೆ ಶಾಲೆಯೊಂದು ಸೆರೆಮನೆಯಾಗುವುದು. ಇನ್ನು ಗೊತ್ತಿಲ್ಲದ ಭಾಷೆಯಲ್ಲಿ ಕಲಿಯಬೇಕಾಗಿ ಬಂದರೆ?.
ನಿಜಕ್ಕಾದರೆ ಸೆರೆಮನೆಯು ಶಾಲೆಯಂತಾಗಬೇಕು. ಅದು ಶಿಕ್ಷೆಯಲ್ಲವೇ! ಶಿಕ್ಷೆಯೆಂದರೆ ಶಿಕ್ಷಣ, ಎಂದರೆ ತಿದ್ದುಪಾಟು ಮಾಡಿಕೊಳ್ಳುವ ಜಾಗ. ದಂಡನೆಯು ನಿಜ ಶಿಕ್ಷೆಯ ಎತ್ತರಕ್ಕೆ ಏರಿದಾಗ ಸೆರೆಮನೆಯು ಶಾಲೆಯಾದೀತು. ಅಂಥಲ್ಲಿ ಶಾಲೆಯೇ ಸೆರೆಮನೆಯಾದರೆ?.
ದುಗುಡ – ಮೂರು
ಹೀಗೆ ‘ಸೆರೆಮನೆ’ಯಲ್ಲಿ ಓದುವ ಕ್ರೌರ್ಯದಲ್ಲಿ ಚಿತ್ರ – ವಿಚಿತ್ರವಾದ ಸರ್ಕಾರೀ ನಿರ್ದೇಶವಿವರಗಳಿವೆ, ಫಲಿತಾಂಶ ನಿರ್ಣಯಗಳಿವೆ. ಪ್ರಸ್ತುತ ವರ್ಷದಲ್ಲಿ ಕರ್ನಾಟಕ ಸರ್ಕಾರವು 15 ಜಿಲ್ಲೆಗಳ 4,134ಕ್ಕಿಂತ ಹೆಚ್ಚು ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಹೆಸರಿನಲ್ಲಿ ಆಂಗ್ಲಮಾಧ್ಯಮದ ಕಲಿಕೆಯನ್ನು ಪ್ರಾರಂಭಿಸಲು ನಿರ್ಧರಿಸಿ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡಿದೆ. ತಯಾರಿಯ ಒಂದು ಉಪಕ್ರಮವಾದ ಶಿಕ್ಷಕರ ತರಬೇತಿಯಲ್ಲಿ ಸರ್ಕಾರ ನೀಡಿದ ನಿರ್ದೇಶದಲ್ಲಿರುವ ಸ್ಪಷ್ಟನೆಯಿರುವುದೇನೆಂದರೆ; ‘ದ್ವಿಭಾಷಾ ಬೋಧನೆ’ಯೆಂದರೆ ಆಂಗ್ಲಮಾಧ್ಯಮದಲ್ಲಿ ಬೋಧನೆ!.
ದ್ವಿಭಾಷಾ ಮಾಧ್ಯಮ ಬೋಧನೆಯ ಘೋಷಣೆಯಲ್ಲಿರುವುದು ಕನ್ನಡದಲ್ಲಿ ಬೋಧನೆ ಇರುತ್ತದೆ ಮತ್ತು ಮಕ್ಕಳು ಕನ್ನಡವನ್ನೂ ಕಲಿಯುತ್ತಾರೆ ಎಂಬ ಧ್ವನಿ. ಸ್ವಲ್ಪ ಕಾಲ ಕನ್ನಡದಲ್ಲಿಯೂ ಬೋಧನೆ ಇದ್ದೀತು, ಯಾಕೆಂದರೆ ಆಂಗ್ಲಭಾಷೆಯಲ್ಲಿ ಹಿಡಿತವಿಲ್ಲದ ಶಿಕ್ಷಕರಿಗದು ಅನಿವಾರ್ಯ. ಅದೇ ಕಾರಣಕ್ಕಾಗಿ ಮಕ್ಕಳ ಕಲಿಕೆಯಲ್ಲಿಯೂ ಕೆಲಕಾಲ ಕನ್ನಡವು ನುಸುಳಿಕೊಂಡೀತು. ಆದರೆ ಸರ್ಕಾರದ ನಿರ್ದೇಶ ಹಾಗೂ ಉಪಕ್ರಮದ ಉದ್ದೇಶದಲ್ಲಿ ಕನ್ನಡದ ಕಾಳಜಿ ಇನಿತೂ ಇಲ್ಲವೆಂಬುದು ಅಂಗೈಹುಣ್ಣಿನಷ್ಟು ಸ್ಪಷ್ಟ. ಇಲ್ಲಿ ಮಕ್ಕಳ ಅನುಕೂಲಕ್ಕಾಗಿ ಇಂಗ್ಲಿಷ್ ಪಾಠವನ್ನು ಕನ್ನಡದಲ್ಲಿ ಅನುವಾದದ ರೀತಿ ಕೊಟ್ಟಿದ್ದಾರೆಯೇ ಹೊರತು ಮಕ್ಕಳ ಅಭಿವ್ಯಕ್ತಿ ಪೂರ್ಣವಾಗಿ ಇಂಗ್ಲೀಷ್ನಲ್ಲಿಯೇ ಆಗಬೇಕೆಂಬ ಹಠವಿದೆ. ನೋಡಿ ಇದೀಗ ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಿರುವ ಎಲ್ಕೆಜಿಯಿಂದ ಐದನೇ ತರಗತಿಯವರೆಗೆ ಮಕ್ಕಳೆಲ್ಲರ ಓದು – ಬರೆವಣಿಗೆ ಇಂಗ್ಲಿಷ್ ಮಾಧ್ಯಮದಲ್ಲಿಯೇ ಆಗಬೇಕೆಂಬ ಸರ್ಕಾರದ ಉದ್ದೇಶಕ್ಕೆ ಪೂರಕವಾಗಿ ಪರೀಕ್ಷಾಸಂಬಂಧಿತ ಸೂಚನೆಗಳನ್ನೂ ತರಬೇತಿಯ ಸಂದರ್ಭದಲ್ಲಿ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದ ಒಂದು ಉದಾಹರಣೆಯನ್ನು ಉಲ್ಲೇಖಿಸುವುದಾದರೆ; 4 ಮತ್ತು 5ನೇ ತರಗತಿಯ ಪೂರ್ವಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿದ್ದರೂ ಇಂಗ್ಲಿಷ್ನಲ್ಲಿ ಬರೆದ ಉತ್ತರಕ್ಕೆ ‘ಎ’ (ಅಚೀವ್ಡ್/ಸಾಧಿಸಿದ) ಎಂದೂ ಕನ್ನಡದಲ್ಲಿ ಬರೆದ ಇಲ್ಲವೇ ತಪ್ಪಾಗಿ ಬರೆದ ಉತ್ತರಕ್ಕೆ ‘ಬಿ’ (ಸಾಧಿಸದ) ಎಂದೂ ಗ್ರೇಡ್ ನೀಡಲು ತರಬೇತಿಯ ಸಮಯದಲ್ಲಿ ಮಾರ್ಗದರ್ಶನ ನೀಡಲಾಗಿದೆ. ಅಂದರೆ; ಕನ್ನಡದ ಸರಿಯಾದ ಉತ್ತರಕ್ಕೆ ಇಂಗ್ಲಿಷ್ನ ತಪ್ಪಾದ ಉತ್ತರವು ಸಮ.
ರ್ವಪರೀಕ್ಷೆಯಲ್ಲಿ ಅತ್ಯಂತ ಸರಿಯಾದ ಉತ್ತರವನ್ನೇ ಆದರೂ ಅದನ್ನು ಕನ್ನಡದಲ್ಲಿ ಬರೆದ ಮಗುವಿನ ಪ್ರಗತಿಪತ್ರದಲ್ಲಿ ನಮೂದಾಗುವುದೇನೆಂದರೆ ‘ಸಾಧಿಸದ ಮಗು’ ಎಂಬ ಫಲಿತಾಂಶವೇ. ಈ ಮಾರ್ಗನಿರ್ದೇಶನದ ಪ್ರಕಾರ ಕನ್ನಡದಲ್ಲಿ ಬರೆದ ಉತ್ತರವು ಉತ್ತರವೇ ಅಲ್ಲ ಮಾತ್ರವಲ್ಲ, ಅದು ಅತ್ಯಂತ ತಪ್ಪಾದ ಉತ್ತರ ಕೂಡ! ಕನ್ನಡವು ‘ತಪ್ಪು ಭಾಷೆ’ ಎಂಬ ಸಂದೇಶವನ್ನು ಮುಗ್ಧಮಗುವಿನ ಮಸ್ತಿಷ್ಕದಲ್ಲಿ ಎಷ್ಟು ಚೆನ್ನಾಗಿ ಬಿತ್ತಲಾಗುತ್ತಿದೆ ನೋಡಿ!.
ಕರ್ನಾಟಕದ ಶಿಕ್ಷಣ ಇಲಾಖೆಯ ನಿರ್ಣಾಯಕ ಸ್ಥಾನಗಳನ್ನು ತುಘಲಕ್ ಬುರುಡೆಗಳೇ ಬಂದು ಆವರಿಸಿಕೊಂಡಿವೆಯೇ ಎಂಬ ಸಂದೇಹವನ್ನು ಮೂಡಿಸುತ್ತಿವೆ ಈ ಸರ್ಕಾರೀ ನಿರ್ದೇಶಗಳು. ಸರ್ಕಾರದ ಈ ಹೊಸ ಶಿಕ್ಷಣಕ್ರಮವು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿ ಅಬಾಧಿತವಾಗಿ ಮುಂದುವರಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ನಾವು ಆಯ್ಕೆ ಮಾಡುವ ಶಾಸಕರು, ತನ್ಮೂಲಕ ನಮ್ಮನ್ನಾಳುವವರು ಸದನಗಳಲ್ಲಿ ಇಂಗ್ಲಿಷ್ನಲ್ಲಿಯೇ ಚರ್ಚೆ ನಡೆಸುವಂತಾಗುತ್ತದೆ. ಸಾಮಾನ್ಯರಿಗೂ ಆಂಗ್ಲಭಾಷೆಯೇ ಅನುಕೂಲಿಯೆನಿಸಲಿದೆ. ಭಾಷಾವಾರು ವಿಂಗಡಣೆಗನುಗುಣವಾಗಿ ರಚನೆಯಾದ ಕರ್ನಾಟಕವು ಎಪ್ಪತ್ತಕ್ಕೆ ಕಾಲಿಡುವ ಸಂದರ್ಭದಲ್ಲಿ ಈ ವಿಂಗಡಣೆಯ ಆಧಾರವನ್ನು ಅಪ್ರಸ್ತುತಗೊಳಿಸುವ ನಿರ್ಣಯವನ್ನು ಸರ್ಕಾರವು ಮಾಡಹೊರಟಿದೆ.
ದುಗುಡ – ನಾಲ್ಕು
ಮಕ್ಕಳಿಗೆ ಆಂಗ್ಲಭಾಷೆಯಲ್ಲಿ ಕಲಿಯುವ ಹಂಬಲ ಇದ್ದೇ ಇರುತ್ತದೆ ಎನ್ನಲಾಗದು. ಅವರ ಪಾಲಕರಿಗೆ ಅದು ಇದ್ದೇ ಇರುತ್ತದೆ. ಮಗು ಸಹಜವಾಗಿ ಇಷ್ಟಪಡುವುದು ಮಾತೃಭಾಷೆಯನ್ನು, ಮಾತೃಭಾಷಾ ಮಾಧ್ಯಮವನ್ನು. ಕಲಿಕೆಯು ಸಮರ್ಥವಾಗಿ ಸಾಧ್ಯವಾಗುವುದೂ ಮಾತೃಭಾಷಾ ಮಾಧ್ಯಮದಲ್ಲಿಯೇ. ಇದಕ್ಕೆ ಯಾವ ಸಾಕ್ಷಿಯೂ ಬೇಕಿಲ್ಲ, ಯಾವುದೇ ಸಂಸ್ಥೆ ಇಲ್ಲವೇ ದಾರ್ಶನಿಕ – ಚಿಂತಕರ ಹೇಳಿಕೆಯ ಅಗತ್ಯವೂ ಇಲ್ಲ. ಎಲ್ಲರ ಅನುಭವಕ್ಕೆ ದಕ್ಕುವ ಸತ್ಯವದು. ಈಗ ಈ ಸಹಜತೆಗೆ ಧಕ್ಕೆಯೊದಗಿಸುವ ಕೆಲಸವನ್ನು ಮಾಡಲಾಗುತ್ತಿದೆ. ಧಕ್ಕೆಯ ಈ ಕೆಲಸಕ್ಕೆ ಹಲವು ರೀತಿಯ ಒತ್ತಡಗಳಿರಬಹುದು, ಸೂಕ್ತ ಕಾರಣಗಳನ್ನೂ ನೀಡಬಹುದು. ಅವು ಯಾವುವೂ ಧಕ್ಕೆಗೆ ಸಮರ್ಥನೆಗಳಾಗಲಾರವು. ಆಂಗ್ಲಮಾಧ್ಯಮಕ್ಕಾಗಿ ಪಾಲಕರ ಕಡೆಯಿಂದ ಒತ್ತಡವಿದ್ದೇ ಇರುತ್ತದೆ. ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದುವ ಮಕ್ಕಳೊಂದಿಗೆ ಬೆರೆಯಲು ಕಷ್ಟವಾಗುತ್ತದೆ, ಕೀಳರಿಮೆಯನ್ನು ಹೊಂದಬೇಕಾಗುತ್ತದೆ. ಉದ್ಯೋಗದ ಕಾರಣವಂತೂ ಪ್ರಬಲವಾದುದೇ. ಅಂತಾರಾಷ್ಟ್ರೀಯ ಭಾಷೆಯೆಂಬ ಪ್ರತಿಷ್ಠೆ ಬೇರೆ ಇಂಗ್ಲಿಷ್ಗಿದೆ. ಒತ್ತಡಗಳು, ಕಾರಣಗಳು ಒಂದೆರಡಲ್ಲ. ಅವು ತಳ್ಳಿಹಾಕುವಂಥವೂ ಅಲ್ಲ.
ಕಷ್ಟಸಾಧ್ಯವಾದ ಸಾಧನೆಯೊಂದು ಸಾಧ್ಯವಾಗುವುದು ಪ್ರವಾಹದ ವಿರುದ್ಧ ಈಜುವ ಸಾಹಸವನ್ನು ತೋರಿದಾಗಲೇ. ಇಂಥ ಸಾಹಸವನ್ನು ಸಂಘಟಿತ ಸಮಾಜವು ತೋರಬಲ್ಲದು. ಕನ್ನಡದ ವಿಷಯದಲ್ಲಿ ಯಾಕೋ ಸಮಾಜವು ಸಂಘಟಿತ ಸ್ವರೂಪವನ್ನು ಹೊಂದಿಲ್ಲ. ಹೋರಾಟಗಾರರಿಗೆ ಅಂಥ ಸಾಹಸದ ಸಾಮರ್ಥ್ಯ ಇರುತ್ತದೆ. ಆದರೆ ನಮ್ಮ ಬಹುತೇಕ ಹೋರಾಟಗಾರರಿಗೆ ಹಿಂದಿಯನ್ನು ವಿರೋಧಿಸುವಲ್ಲಿ ಇರುವ ಉತ್ಸಾಹ ಕನ್ನಡವನ್ನು ಉಳಿಸಿಕೊಳ್ಳುವಲ್ಲಿ ಇಲ್ಲ. ಇನ್ನು ಸರ್ಕಾರಕ್ಕೆ ಇಚ್ಛಾಶಕ್ತಿಯಿದ್ದರೆ ಎಂಥದ್ದೇ ಕಷ್ಟಸಾಧ್ಯವಾದುದೂ ಹೂವಿನಷ್ಟು ಹಗುರಾಗಿಬಿಡುತ್ತದೆ. ಆದರೆ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕಾದ ಸರ್ಕಾರವೇ ಇದೀಗ ಆಂಗ್ಲಮಾಧ್ಯಮಕ್ಕೆ ಶರಣಾಗಿಬಿಟ್ಟಿದೆ.
ಆಂಗ್ಲಭಾಷೆಯ ಇನಿತು ಸಹವಾಸವೂ ಇಲ್ಲದ ದೇಶಗಳ ದೊಡ್ಡ ಪಟ್ಟಿಯೇ ಇದೆ. ಮತ್ತವುಗಳಲ್ಲಿ ಪ್ರಗತಿಯನ್ನು ಸಾಧಿಸಿದ ದೇಶಗಳ ಸಂಖ್ಯೆಯೂ ಕಡಮೆಯೇನಿಲ್ಲ. ಉದ್ಯೋಗ, ಅಂತಾರಾಷ್ಟ್ರೀಯ ಸಂಪರ್ಕ ಇತ್ಯಾದಿಗಳನ್ನು ಸಾಧಿಸಲು ಶಿಕ್ಷಣದ ಮಾಧ್ಯಮವನ್ನೇ ಬಲಿಗೊಡಬೇಕಿಲ್ಲ. ಅವುಗಳಿಗೆಲ್ಲ ಕೆಲವೇ ತಿಂಗಳುಗಳ ಭಾಷಾ ತರಬೇತಿ ಸಾಕಾಗುತ್ತದೆ. ಅದನ್ನು ರಜಾದಿನಗಳಲ್ಲಿ ಕೂಡ ಪೂರೈಸಿಕೊಳ್ಳಬಹುದು. ಕನ್ನಡವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂಥ ಮಾರ್ಗೋಪಾಯಗಳನ್ನು ನೀಡುವ ತಜ್ಞರನ್ನು ತಯಾರುಮಾಡಿ ಪಾಲಕರಲ್ಲಿ ಭರವಸೆ ತುಂಬುವ ಕಾರ್ಯವನ್ನು ಸರ್ಕಾರವೇ ಮಾಡಬೇಕಿತ್ತು. ಈ ನಿಟ್ಟಿನಲ್ಲಿ ತುಸುವೂ ಪರಿಶ್ರಮಿಸದೆ ದ್ವಿಭಾಷಾ ಬೋಧನೆಯೆಂಬ ಜಾಣ್ಮೆಯ ಪದಪ್ರಯೋಗದ ಮೂಲಕ ಕನ್ನಡವನ್ನೇ ಬಲಿಗೊಡಹೊರಟಿದೆ ‘ನಮ್ಮ’ ಸರ್ಕಾರ.
ಎಚ್ಚೆತ್ತುಕೊಳ್ಳುವ ಅವಕಾಶ
ಸರ್ಕಾರದ ಈ ಸಲ್ಲದ ಉಪಕ್ರಮದಿಂದಾಗಿ ಈಗ ನಮ್ಮ ಮುಂದೆ ಕನ್ನಡವನ್ನು ಉಳಿಸಿಕೊಳ್ಳುವ ಬಲುದೊಡ್ಡ ಸವಾಲು ಎದುರಾಗಿದೆ. ಕನ್ನಡವನ್ನು ಉಳಿಸಿಕೊಳ್ಳಬೇಕಾದುದು ಕನ್ನಡಕ್ಕಾಗಿ ಅಲ್ಲ. ನಮಗಾಗಿ. ಅದು ನಮ್ಮ ಮಾತೃಭಾಷೆ ಇಲ್ಲವೇ ಪರಿಸರದ ಭಾಷೆ. ಅದು ನಮ್ಮ ಮಾತೃಭಾಷೆಯಲ್ಲವಾದರೂ ಮಾತೃಭಾಷೆಯೊಂದಿಗೆ ನೈಕಟ್ಯವಿರುವ ಭಾಷೆ. ಸಂಬಂಧವಿರುವ ಭಾಷೆ. ನಮ್ಮ ಮಾತೃಭಾಷೆ ಇಲ್ಲಿಯದೇ ತುಳುವಿರಬಹುದು, ಕೊಡವ ಇರಬಹುದು, ಇಲ್ಲವೇ ರಾಜ್ಯದ ಹೊರಗಿನ ತಮಿಳೋ, ತೆಲುಗೋ, ಕೊಂಕಣಿಯೋ, ಹಿಂದಿಯೋ, ಮಣಿಪುರಿಯೋ ಇರಬಹುದು. ಯಾವುದೋ ಕಾಲಘಟ್ಟದಲ್ಲಿ ನಮ್ಮ ಪ್ರಾಚೀನರು ಇಲ್ಲಿಗೆ ಬಂದು ನೆಲೆಯಾಗಿರಬಹುದು ಇಲ್ಲವೇ ನಿನ್ನೆ ಮೊನ್ನೆಯಷ್ಟೇ ನಾವಿಲ್ಲಿ ಬಂದಿರಬಹುದು. ನಾವಿಲ್ಲಿ ನೆಲೆಯಾದ ಈ ಕಾಲವದೆಷ್ಟೇ ಹ್ರಸ್ವವಿದ್ದರೂ ದೀರ್ಘವಿದ್ದರೂ ನಮ್ಮ ಮಾತೃಭಾಷೆಗೂ ಕನ್ನಡಕ್ಕೂ ಸಂಬಂಧವಿದ್ದೇ ಇದೆ. ಯಾಕೆಂದರೆ ನಮ್ಮ ಮಾತೃಭಾಷೆಯೂ ಒಂದು ಭಾರತೀಯ ಭಾಷೆಯೇ, ಕನ್ನಡವೂ ಒಂದು ಭಾರತೀಯ ಭಾಷೆಯೇ. ವ್ಯಾಕರಣದ ವಿನ್ಯಾಸ, ಸಾಂಸ್ಕೃತಿಕ ಧಾತು, ಸಾಹಿತ್ಯಕ ಮೀಮಾಂಸೆ ಇತ್ಯಾದಿ ಹತ್ತು ಹಲವು ನಿಟ್ಟುಗಳಲ್ಲಿ ಭಾರತೀಯ ಭಾಷೆಗಳೆಲ್ಲವೂ ಪರಸ್ಪರ ಅಕ್ಕತಂಗಿಯರೇ. ನಮಗೆಲ್ಲರಿಗೂ ಅವೆಲ್ಲ ಭಾಷೆಗಳೂ ತಾಯಿಸಮಾನ.
ಕರುಳಬಳ್ಳಿಯ ಸಂಬಂಧವನ್ನು ತೊಡೆದುಕೊಂಡ ಯಾವ ಮಗುವೂ ನಿಜ ವಿಕಾಸವನ್ನು ಕಾಣದು. ಪರಕೀಯವಾದ ಆಕರ್ಷಕವೆನಿಸಿದ ತಾಯ ಹಿಂದೋಡುವವನು ಸಾಧಿಸುವುದು ವಿಕಾಸದ ಭ್ರಮೆಯನ್ನು, ಕಾಣುವುದು ಹಳ್ಳಹಿಡಿದ ಸ್ಥಿತಿಯನ್ನು. ಆರ್ಥಿಕತೆಯ ನಿಟ್ಟಿನಲ್ಲಿ ಅಲ್ಲೊಂದು ಸುಖ ಸಿಕ್ಕೀತು. ಆದರೆ ಸಾಂಸ್ಕೃತಿಕ ನೆಮ್ಮದಿ ಮರೀಚಿಕೆಯೇ ಸರಿ.
ನಾವು ತುಳುವರಿರಲಿ, ಕೊಡವರಿರಲಿ ಇಲ್ಲವೇ ಹಿಂದಿಗರೇ ಇರಲಿ; ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿರುವ ನಮಗೆಲ್ಲರಿಗೂ ಬೇಕಾದುದು ಕನ್ನಡವೇ. ಕನ್ನಡದ ಮೂಲಕ ನಾವು ನಮ್ಮ ತುಳುವನ್ನೂ ಕೊಂಕಣಿಯನ್ನೂ ಹಿಂದಿಯನ್ನೂ ಉಳಿಸಿಕೊಳ್ಳಲು ಸಾಧ್ಯ. ಅಂದರೆ; ಕನ್ನಡಪ್ರೀತಿ ಬೇರೆಯಲ್ಲ, ಕೊಡವಪ್ರೀತಿ ಬೇರೆಯಲ್ಲ, ಮರಾಠಿಪ್ರೀತಿ ಬೇರೆಯಲ್ಲ.. ಕನ್ನಡಭಾಷಿಗ ಕುವೆಂಪು, ಮರಾಠಿಭಾಷಿಗ ಬೇಂದ್ರೆ, ತಮಿಳುಭಾಷಿಗ ಮಾಸ್ತಿ, ತೆಲುಗುಭಾಷಿಗ ಡಿವಿಜಿ ಮುಂತಾದವರ ಮೂಲಕ ನಾವೆಲ್ಲ ಕನ್ನಡಪ್ರೀತಿಯನ್ನು ಕಲಿತಿದ್ದೇವೆ. ಅಂಥ ಕನ್ನಡಪ್ರೀತಿಯ ಮೂಲಕ ನಮ್ಮ ನಮ್ಮ ಖಾಸಗಿಯೆನಿಸಿದ ತುಳುಪ್ರೀತಿಯನ್ನೋ, ತಮಿಳುಪ್ರೀತಿಯನ್ನೋ ವರ್ಧಿಸಿಕೊಂಡಿದ್ದೇವೆ. ಇಂಥ ಸಾಹೋದರ್ಯದ ಭಾಷಾಸಾಹಚರ್ಯಕ್ಕೆ ಆರ್ಯ- ದ್ರಾವಿಡ, ಉತ್ತರ – ದಕ್ಷಿಣ ಇತ್ಯಾದಿ ಭೇದಸಿದ್ಧಾಂತಗಳ ಮೂಲಕ ಮೊದಲು ಆಂಗ್ಲರೂ ನಂತರ ಅಂಥ ಪರಕೀಯ ಸಿದ್ಧಾಂತಗಳ ಬೆನ್ನುಹತ್ತಿದ ಬುದ್ಧಿಜೀವಿಗಳೂ ಹುಳಿಹಿಂಡಿದರು. ಇದೀಗ ಆ ಕೆಲಸವನ್ನು ಸದ್ದಿಲ್ಲದೆ ಸರ್ಕಾರವೇ ಮಾಡಹೊರಟಿದೆ.
ಆಂಗ್ಲರ ಭೇದಸಿದ್ಧಾಂತಕ್ಕೂ ಬುದ್ಧಿಜೀವಿಗಳ ಪರಕೀಯ ಸಿದ್ಧಾಂತಕ್ಕೂ ಈಗಿನ ಸರ್ಕಾರದ ಉಪಕ್ರಮಕ್ಕೂ ಪರಸ್ಪರ ಸಂಬಂಧ ಇರಬಹುದು ಅಥವಾ ಇಲ್ಲದಿರಬಹುದು. ಆದರೆ ಪರಿಣಾಮದಲ್ಲಿ ನಾವೆಲ್ಲರೂ ನಿಚ್ಚಳವಾಗಿ ಕಾಣಬಹುದಾದುದು ಒಂದೇ ಪರಿಣಾಮವನ್ನು. ಅದು – ನಮಗೆ ನಾವೇ ಪರಕೀಯರಾಗುವ ಪರಿಣಾಮವನ್ನು. ಈಗ ನಾವು ಎಚ್ಚೆತ್ತುಕೊಳ್ಳದೇ ಹೋದರೆ ಮುಂದೆ ಎಚ್ಚೆತ್ತುಕೊಳ್ಳುವ ಅವಕಾಶವೇ ಇಲ್ಲದಾಗುವುದು ನಿಶ್ಚಿತ.
