ಅಂತಾರಾಷ್ಟ್ರೀಯ ಯೋಗ ದಿನಾಚರಣೆ- ಜೂನ್ 21
- ಶಿವನಗೌಡ ಪೊಲೀಸ್ ಪಾಟೀಲ್, ಉಪನ್ಯಾಸಕ
ಜೂನ್ 21 ವರ್ಷದ ಅತಿ ಉದ್ದದ ದಿನ ಮತ್ತು ಉತ್ತರಾಯಣದ ಪರಮಾವಧಿ. ಸೂರ್ಯ ಭೂಮಿಗೆ ಅತಿ ಹತ್ತಿರವಾಗಿ ಬೆಳಕು, ಶಕ್ತಿ, ಚೈತನ್ಯ ನೀಡುವ ದಿನ. ಭಾರತದ ಋಷಿಗಳು ಯೋಗದ ಆರಂಭಕ್ಕೆ ಈ ದಿನವನ್ನೇ ಆಯ್ಕೆ ಮಾಡಿದರು. ಅಲ್ಲಿಂದ ಆರಂಭವಾಗಿ ಸೂರ್ಯನಿಗೆ ನಮಸ್ಕರಿಸುವ ಭಾರತಕ್ಕೆ ಇಂದು ವಿಶ್ವವೇ ಯೋಗವಿಷಯದಲ್ಲಿ ನಮಸ್ಕರಿಸುತ್ತಿದೆ. 2014ರ ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು “ಯೋಗ ಭಾರತದ ಪ್ರಾಚೀನ ಪರಂಪರೆಯ ಅಮೂಲ್ಯ ಕೊಡುಗೆ. ಇದು ದೇಹ – ಮನಸ್ಸು – ಆತ್ಮಗಳನ್ನು ಒಂದುಗೂಡಿಸುತ್ತದೆ” ಎಂದು ಹೇಳಿದ್ದರು. 2014ರ ಡಿಸೆಂಬರ್ 11ರಂದು ವಿಶ್ವಸಂಸ್ಥೆಯ 193 ದೇಶಗಳ ಪೈಕಿ 177 ದೇಶಗಳ ಸಹ ಪ್ರಾಯೋಜಕತ್ವ ದೊರೆತು ಜೂನ್ 21 ಅನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ ಎಂದು ಘೋಷಿಸಲಾಯಿತು. ದಾಖಲೆಯ 90 ದಿನಗಳಲ್ಲಿ ನಿರ್ಣಯ ಪಾಸ್ ಆಗಿ ವಿಶ್ವಸಂಸ್ಥೆಯ ಇತಿಹಾಸದಲ್ಲೇ ಅತಿ ವೇಗದ ನಿರ್ಣಯವಾಗಿ ಇದು ದಾಖಲಾಯಿತು. ಅದಾದ ನಂತರ 2015ರ ಜೂನ್ 21ರಂದು ದೆಹಲಿಯ ರಾಜಪಥದಲ್ಲಿ 35,985 ಜನರು, 84 ದೇಶಗಳ ಪ್ರತಿನಿಧಿಗಳು ಜೊತೆಯಾಗಿ ಯೋಗ ಮಾಡಿ ಗಿನ್ನೆಸ್ ದಾಖಲೆ ಬರೆದರು. ಅಂದಿನಿಂದ ಇಂದಿನವರೆಗೆ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ನಿಂದ ಹಿಡಿದು ಪ್ಯಾರಿಸ್ನ ಐಫೆಲ್ ಟವರ್ವರೆಗೆ, ಲಡಾಖ್ನ ಸಿಯಾಚಿನ್ನಿಂದ ಕನ್ಯಾಕುಮಾರಿಯವರೆಗೆ ವಿಶ್ವವೇ ಯೋಗ ಮಾಡುತ್ತಿದೆ.
ಯೋಗ ಈಗ ಕೇವಲ ವ್ಯಾಯಾಮವಾಗಿ ಉಳಿದಿಲ್ಲ, ಬದಲಾಗಿ ವಿಶ್ವಭಾಷೆಯಾಗಿದೆ.
‘ಯುಜ್’ ಧಾತುವಿನಿಂದ ‘ಯೋಗ’ ಪದ ಬಂದಿದೆ. ಇದರ ಅರ್ಥ ಕೂಡುವುದು ಅಥವಾ ಒಂದುಗೂಡುವುದು ಎಂದಾಗಿದೆ.
ದೇಹ + ಉಸಿರು + ಮನಸ್ಸು + ಆತ್ಮ + ಪ್ರಕೃತಿ ಒಂದಾಗುವ ಯಾನ. ಪತಂಜಲಿ ಮಹರ್ಷಿ 2500 ವರ್ಷಗಳ ಹಿಂದೆ ‘ಯೋಗಸೂತ್ರ’ ಗ್ರಂಥವನ್ನು ಬರೆದರು. 196 ಸೂತ್ರಗಳಿರುವ ಗ್ರಂಥದಲ್ಲಿ ಮೊದಲ ಸೂತ್ರವೇ ‘ಅಥ ಯೋಗಾನುಶಾಸನಮ್’ ಅಂದರೆ ಯೋಗದ ಶಿಸ್ತಿನ ಆರಂಭ. ಎರಡನೇ ಸೂತ್ರ: ‘ಯೋಗಃ ಚಿತ್ತವೃತ್ತಿ ನಿರೋಧಃ’- ಮನಸ್ಸಿನ ಚಂಚಲತೆಯನ್ನು ನಿಲ್ಲಿಸುವುದೇ ಯೋಗ. ಪತಂಜಲಿಯ ಯೋಗಸೂತ್ರ ಯೋಗದ 8 ಮೆಟ್ಟಿಲುಗಳ ಕುರಿತಂತೆ ವಿವರಿಸುತ್ತದೆ. ಮೊದಲನೆಯದಾದ ಯಮವು-ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹದ ಬಗ್ಗೆ ವಿವರಿಸುತ್ತದೆ. ನಂತರದ ನಿಯಮ-ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನದ ಬಗ್ಗೆ ತಿಳಿಸಿದರೆ ಮೂರನೆಯದಾದ ಆಸನ ದೇಹವನ್ನು ಸ್ಥಿರ-ಸುಖವಾಗಿಡುವುದರ ಬಗ್ಗೆ ಹೇಳುತ್ತದೆ. ಪ್ರಾಣಾಯಾಮವು ಉಸಿರಾಟದ ನಿಯಂತ್ರಣದ ಸಾಧನೆಗೆ ಸಹಕಾರಿಯಾದರೆ ಪ್ರತ್ಯಾಹಾರವು ಇಂದ್ರಿಯಗಳನ್ನು ಒಳಮುಖ ಮಾಡುವುದರ ಕುರಿತಿದೆ. ಧಾರಣಾ ಎಂಬುದು ಏಕಾಗ್ರತೆಯೆಡೆಗೆ ಇರುವುದಾದರೆ ಏಳನೆಯದಾದ ಧ್ಯಾನ ನಿರಂತರ ಏಕಾಗ್ರತೆಯನ್ನು ಸಾಧಿಸಲು ಸಹಕಾರಿ. ಕೊನೆಯದಾದ ಸಮಾಧಿಯು ಆತ್ಮ-ಪರಮಾತ್ಮನ ಐಕ್ಯವನ್ನು ಸಾರುತ್ತದೆ. ಇವತ್ತು ನಾವು ಉಪಯೋಗಿಸುವ ಜಿಮ್ನಲ್ಲಿ ಯೋಗವೆಂದರೆ ಆಸನ ಮಾತ್ರ, ಅದು ಪತಂಜಲಿಯ ಯೋಗಸೂತ್ರದ 3ನೇ ಮೆಟ್ಟಿಲು. ಆದರೆ ಪೂರ್ತಿಯಾಗಿ ಯೋಗವೆಂದರೆ ಅದೊಂದು ಜೀವನ ವಿಧಾನ, ಬದುಕಿನ ದಾರಿ.
ಸಿಂಧೂ ನಾಗರಿಕತೆಗೆ ಸಂಬಂಧಿಸಿದ 3000 BCಯ ಮೊಹೆಂಜೊದಾರೊ ಮುದ್ರೆಯಲ್ಲಿ ಪಶುಪತಿ ಭಂಗಿಯ ಪದ್ಮಾಸನ ಸಿಕ್ಕಿತ್ತು. ಅಂದರೆ 5000 ವರ್ಷದ ಹಿಂದೆ ಯೋಗ ಇತ್ತು ಎಂದು ಹೇಳಬಹುದು. ಸ್ವಾಮಿ ವಿವೇಕಾನಂದರು ತಮ್ಮ 1893ರ ಚಿಕಾಗೊ ಭಾಷಣದಲ್ಲಿ ಯೋಗವನ್ನು ಪಶ್ಚಿಮಕ್ಕೆ ಪರಿಚಯಿಸಿದರು. ‘ಆಧುನಿಕ ಯೋಗದ ಪಿತಾಮಹ’ರಾದ ತಿರುಮಲೈ ಕೃಷ್ಣಮಾಚಾರ್ಯರು, ಅವರ ಶಿಷ್ಯರಾದ ಬಿ.ಕೆ.ಎಸ್. ಅಯ್ಯಂಗಾರ್, ಕೆ. ಪಟ್ಟಾಭಿ ಜೋಯಿಸ್, ಇಂದ್ರಾ ದೇವಿ, ಟಿ.ಕೆ.ವಿ. ದೇಶಿಕಾಚಾರ್ ಮುಂತಾದವರು ಯೋಗವನ್ನು ಮನೆಮನೆಗೆ ತಲುಪಿಸುವಲ್ಲಿ ಪ್ರಧಾನ ಪಾತ್ರವಹಿಸಿದರು.
ವಿಜ್ಞಾನ ಮತ್ತು ಅಧ್ಯಾತ್ಮ
ಜೂನ್ 21 ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನ. ಸೂರ್ಯನ ಕಿರಣ ನೇರವಾಗಿ ಕರ್ಕಾಟಕ ವೃತ್ತದ ಮೇಲೆ ಬೀಳುತ್ತದೆ. ಪೌರಾಣಿಕ ಹಿನ್ನೆಲೆಯನ್ನು ಗಮನಿಸುವಾಗ ಶಿವನನ್ನು ‘ಆದಿಯೋಗಿ’ ಎನ್ನುತ್ತೇವೆ. ಪುರಾಣದ ಪ್ರಕಾರ, ಶಿವ ಮೊದಲ ಬಾರಿ ಸಪ್ತಋಷಿಗಳಿಗೆ ಯೋಗವನ್ನು ಬೋಧಿಸಿದ್ದು ಈ ಅವಧಿಯಲ್ಲೇ ಎಂಬ ನಂಬಿಕೆಯಿದೆ. ಹೀಗಾಗಿ ಜೂನ್ 21 ಅನ್ನು ‘ಆದಿಯೋಗಿ ದಿನ’ ಎಂದೂ ಕರೆಯುತ್ತಾರೆ. ಆಯುರ್ವೇದದ ದೃಷ್ಟಿಯಿಂದ ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಸಮಯ. ದೇಹದಲ್ಲಿ ಪಿತ್ತ-ವಾತ ಹೆಚ್ಚಾಗಿ ಕಂಡುಬರುವ ಈ ಸಮಯದಲ್ಲಿ ಯೋಗ-ಪ್ರಾಣಾಯಾಮದಿಂದ ದೇಹವನ್ನು ಸಮತೋಲನದಲ್ಲಿಡಬಹುದು. ಹೀಗಾಗಿ ವಿಶ್ವಸಂಸ್ಥೆ ಭಾರತದ ಪ್ರಸ್ತಾಪವನ್ನು ಒಪ್ಪಿ ಜೂನ್ 21 ಅನ್ನು ಆಯ್ಕೆ ಮಾಡಿತು. 2026ರ ಯೋಗದಿನದ ಧ್ಯೇಯವಾಕ್ಯ- ‘Yoga for Self and Society’ ಎಂದಾಗಿದೆ. ಯೋಗ ಸ್ವಯಂ ತನಗೆ ಮತ್ತು ಸಮಾಜಕ್ಕಾಗಿ ಎಂಬುದನ್ನು ಇದುವೇ ಸ್ವಯಂ ಸಾರುತ್ತದೆ. ವೈಯಕ್ತಿಕ ಸ್ವಾಸ್ಥ್ಯದಿಂದ ಸಮಾಜದ ಸ್ವಾಸ್ಥ್ಯವೃದ್ಧಿಯಾಗುತ್ತದೆ ಎಂಬುದನ್ನು ನಾವು ಮೊದಲು ಮನಗಾಣಬೇಕಿದೆ. ತಾನು ಆರೋಗ್ಯವಾಗಿದ್ದರೆ ಮನೆ ಆರೋಗ್ಯವಾಗಿರುತ್ತದೆ, ಮನೆ ಆರೋಗ್ಯವಾಗಿದ್ದರೆ ಸಮಾಜದ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ. ಸ್ವಸ್ಥ ವ್ಯಕ್ತಿ ಸ್ವಸ್ಥ ಸಮಾಜ ಮತ್ತು ಸ್ವಸ್ಥ ರಾಷ್ಟ್ರದ ಆಧಾರ ಎಂಬುದರಲ್ಲಿ ಸಂಶಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ವಿಶ್ವದಲ್ಲಿ ಕಂಡುಬರುವ ಶೇ. 80 ಹೃದಯ ರೋಗ, ಶೇ. 90 ಟೈಪ್-2 ಮಧುಮೇಹ, ಶೇ.30ರಷ್ಟು ಕ್ಯಾನ್ಸರ್ ಕಡಿಮೆ ಮಾಡಲು ನಮ್ಮ ಜೀವನಶೈಲಿಯಿಂದ ಸಾಧ್ಯವಿದೆ. ಯೋಗ ಇದಕ್ಕೆಲ್ಲಾ ಔಷಧಿಯಾಗಿ ಪರಿಣಾಮ ಬೀರುವಷ್ಟು ಶಕ್ತಿಯುತವಾಗಿದೆ.

ಯೂಟ್ಯೂಬ್ ನೋಡಿ ಕಷ್ಟದ ಆಸನಗಳನ್ನು ಮಾಡುವ ಬದಲು ಯೋಗ ಗುರುಗಳ ಬಳಿ ಕಲಿಯಬಹುದು. ಗರ್ಭಿಣಿ, ಹೃದ್ರೋಗಿ, ಬೆನ್ನು ಶಸ್ತ್ರಚಿಕಿತ್ಸೆ ಆದವರು ಡಾಕ್ಟರ್ ಸಲಹೆ ತೆಗೆದುಕೊಂಡು ಮಾಡುವುದು ಉತ್ತಮ.
ಯೋಗದ ಬಗ್ಗೆ 3 ರೀತಿಯ ತಪ್ಪು ಕಲ್ಪನೆಯಿದೆ. ಮೊದಲನೆಯದು “ಯೋಗ ಹಿಂದೂ ಧರ್ಮಕ್ಕೆ ಮಾತ್ರವೇ ಸೇರಿದ್ದು” ಎಂಬುದು. ಯೋಗಕ್ಕೆ ಯಾವುದೇ ಜಾತಿ-ಧರ್ಮ-ದೇಶವಾಗಲೀ ಇಲ್ಲ. ಸೌದಿ ಅರೇಬಿಯಾ, ಇರಾನ್, UAEನಲ್ಲೂ ಯೋಗ ದಿನವನ್ನು ಆಚರಿಸುತ್ತಾರೆ. ಯೋಗ ವೈಜ್ಞಾನಿಕವಾಗಿಯೂ ತನ್ನ ಮಹತ್ವವನ್ನು ಸಾಬೀತುಪಡಿಸಿದೆ. ಎರಡನೆಯದ್ದು “ಸಮಸ್ಯೆ ಬಂದ ಮೇಲೆ ಯೋಗ ಮಾಡಿದರಾಯಿತು ಅಥವಾ ವಯಸ್ಸಾದವರಿಗೆ ಮಾತ್ರ ಮುಖ್ಯವಾಗಿ ವ್ಯಾಯಾಮ ಬೇಕು” ಎನ್ನುವುದು. ಯೋಗಕ್ಕೆ ವಯಸ್ಸಿನ ಮಿತಿಯಿಲ್ಲ ಮತ್ತು ಸಣ್ಣ ವಯಸ್ಸಿನಿಂದ ಆರಂಭಿಸಿದಷ್ಟೂ ಪರಿಣಾಮ ಹೆಚ್ಚು. ಮೂರನೆಯದ್ದು “ಯೋಗವೆಂದರೆ ಜಿಮ್” ಎನ್ನುವ ಮಾತು. ಆದರೆ ಜಿಮ್ ಯೋಗದ ಒಂದು ಭಾಗವಷ್ಟೇ. ಯೋಗವೆನ್ನುವುದು ವಿಶಾಲವಾದದ್ದು.
ಕರ್ನಾಟಕದಲ್ಲಿ ಮೈಸೂರು ಅರಮನೆ ಆವರಣ, ಲಾಲ್ಬಾಗ್, ಕಬ್ಬನ್ ಪಾರ್ಕ್ ಮುಂತಾದೆಡೆಗಳಲ್ಲಿ ಪ್ರತಿವರ್ಷ ಲಕ್ಷಾಂತರ ಜನ ಜೊತೆಯಾಗಿ ಯೋಗ ಮಾಡುವುದನ್ನು ಕಂಡಿದ್ದೇವೆ. ಯೋಗ ಪ್ರದರ್ಶನವಾಗಿ ಉಳಿಯದೆ ಜೀವನದ ಅವಿಭಾಜ್ಯ ಅಂಗವಾಗಿ ಸೇರಿದರೆ ಮಾತ್ರ ನಿಜವಾದ ಪರಿಣಾಮ ಕಾಣಬಲ್ಲದು. ದೈನಂದಿನ ನನ್ನ ದಿನಚರಿಯಲ್ಲಿ ಕನಿಷ್ಠ 20 ನಿಮಿಷವನ್ನಾದರೂ ಯೋಗಕ್ಕಾಗಿ ಮೀಸಲಿಡುವ ಮನಸ್ಥಿತಿ ನಮ್ಮಲ್ಲಿ ಬರುವಂತಾಗಬೇಕು. ‘ವಸುಧೈವ ಕುಟುಂಬಕಮ್’ ಎನ್ನುವ ಮಾತನಂತೆ ಜಗತ್ತನ್ನು ಒಂದು ಯೋಗಮಂದಿರವಾಗಿ ಭಾರತ ಕಾಣುತ್ತದೆ. 177 ದೇಶಗಳು ಜೊತೆಯಾಗಿ ಕೈ ಮುಗಿದು ‘ಓಂ’ ಎನ್ನುವಲ್ಲಿ ಭಾರತದ ಸಾಫ್ಟ್ ಪವರ್ ವ್ಯಕ್ತವಾಗುತ್ತದೆ. ಸ್ವಾಮಿ ವಿವೇಕಾನಂದರು “ಪ್ರತಿ ಆತ್ಮವೂ ದೈವೀಶಕ್ತಿಯನ್ನು ಹೊಂದಿರುತ್ತದೆ. ಹೊರ ಮತ್ತು ಒಳ ಪ್ರಕೃತಿಯನ್ನು ಹತೋಟಿಗೆ ತಂದು ಈ ದೈವತ್ವವನ್ನು ಪ್ರಕಟಿಸುವುದೇ ಯೋಗ” ಎಂದಿದ್ದರು. ಒಂದು ದಿನ ಮ್ಯಾಟ್ ಹಾಸಿ ಯೋಗ ಮಾಡಿ ಫೊಟೋ ಹಾಕಿ ಸುಮ್ಮನಾಗುವುದು ನಮ್ಮ ಕಾರ್ಯವಾಗದಿರಲಿ. ಬದಲಾಗಿ ಯೋಗವನ್ನು ಜೀವನ ಮಾಡಿಕೊಳ್ಳುವಂತಾಗಲಿ. ಮೊಬೈಲ್ಗೆ ಚಾರ್ಜ್ ಹಾಕುವಂತೆ ದೇಹ ಮತ್ತು ಮನಸ್ಸಿಗೆ ಯೋಗವೇ ಚಾರ್ಜರ್.
