ಅಂಕಣ – ಸಂಘ ಸೌರಭ 45
- ಬಿ. ವಿ. ಶ್ರೀಧರಸ್ವಾಮಿ, ನಿವೃತ್ತ ಪ್ರಾಧ್ಯಾಪಕ
ಈಶಾನ್ಯ ಭಾರತ ಬ್ರಹ್ಮಪುತ್ರ ನದಿಯ ಪಾವನ ಹರಿವಿನೊಂದಿಗೆ ಪುನೀತವಾದ ಪ್ರದೇಶ. ಇಲ್ಲಿನ ಪ್ರಾದೇಶಿಕ ವಿಶೇಷತೆಗಳು ಈ ಪ್ರದೇಶವನ್ನು ಅತ್ಯಂತ ರಮಣೀಯವನ್ನಾಗಿಸಿವೆ. ಹಾಗೆಯೇ ಇದು ಭಾರತದ ಅತ್ಯಂತ ಸಂವೇದನಶೀಲ ಪ್ರದೇಶವೂ ಆಗಿದೆ. ಏಳು ರಾಜ್ಯಗಳ ಮಾಲಿಕೆಯಾದ ಈಶಾನ್ಯ ರಾಜ್ಯಗಳನ್ನು ಸಪ್ತ ಸೋದರಿಯರು ಎಂದೇ ಬಣ್ಣಿಸಲಾಗುತ್ತದೆ. ಅವುಗಳ ಪೈಕಿ ಉತ್ತರದ ತುದಿಯಲ್ಲಿ ಇರುವ ಪ್ರದೇಶವೇ ಅರುಣಾಚಲ ಪ್ರದೇಶ. ಪ್ರಸಿದ್ಧವಾದ ಪರಶುರಾಮ ಕುಂಡ ಇರುವುದು ಈ ರಾಜ್ಯದಲ್ಲಿಯೇ. ಇಲ್ಲಿನ ಬ್ರಹ್ಮಪುತ್ರನದಿಯ ಭಾಗವಾದ ಲೋಹಿತ್ ನದಿಯ ಪವಿತ್ರ ಜಲಧಾರೆಯು ಭಗವಾನ್ ಪರಶುರಾಮರ ಮಾತೃಹತ್ಯಾ ದೋಷವನ್ನು ನಿವಾರಿಸಿತು. ಈ ದೇಶವನ್ನು ಆಳಿದ ಬ್ರಿಟಿಷರು ಅತ್ಯಂತ ಧೂರ್ತತನದ ಯೋಜನೆಯನ್ನು ಜಾರಿಗೊಳಿಸಿ ಇಲ್ಲಿಯ ಜನರ ಮಾನಸಿಕತೆಯನ್ನೇ ಬದಲಿಸುವ ಪ್ರಯತ್ನ ನಡೆಸಿದರು ಮತ್ತು ಭಾಗಶಃ ಯಶಸ್ವಿಯೂ ಆದರು. ಅವರು ಜನರ ನಂಬಿಕೆಗಳನ್ನು ಬದಲಿಸಿದರು. ಮತಾಂತರದೊಂದಿಗೆ ಜನರ ಮನಸ್ಸಿನಲ್ಲಿ ನಾವು ಭಾರತದಿಂದ ಬೇರೆ ಎನ್ನುವ ಮನೋಭಾವವನ್ನು ಬೆಳೆಸಿದರು, ಮಾನಸಿಕವಾಗಿ ಭಾರತದಿಂದ ಬೇರೆಯಾಗುವಂತೆ ಮಾಡಿದರು.
ಬ್ರಿಟಿಷರ ನಂತರ ಚೀನಾ ಇದನ್ನು ಪಡೆಯುವ ಸಲುವಾಗಿ ಹಲವು ರೀತಿಯ ಪ್ರಯತ್ನಗಳ ಮೂಲಕ ತನ್ನ ಅಧಿಪತ್ಯ ಸಾಧಿಸಲು ಯತ್ನಿಸಿತು. ಬಲಪ್ರಯೋಗದ ಮೂಲಕವೂ ಈ ಪ್ರದೇಶವನ್ನು ಅತಿಕ್ರಮಿಸುವ ಪ್ರಯತ್ನ ನಡೆಸಿತ್ತು. ಈಗಲೂ ಅದು ತನ್ನ ಪ್ರಯತ್ನಗಳನ್ನು ನಿಲ್ಲಿಸಿದೆ ಎನ್ನಲಾಗದು. ಆದರೆ ಅಲ್ಲಿನ ಜನಮಾನಸದಲ್ಲಿ ನಾವು ಭಾರತಕ್ಕೆ ಸೇರಿದವರು, ನಾವೆಲ್ಲ ಭಾರತೀಯರು ಎನ್ನುವ ರಾಷ್ಟ್ರೀಯತೆಯ ಭಾವವನ್ನು ಮತ್ತೆ ಜಾಗೃತಗೊಳಿಸುವಲ್ಲಿ ಸಂಘದ ಸ್ವಯಂಸೇವಕರ ಸಾಹಸದ ಪ್ರಯತ್ನ ಅನನ್ಯವಾದುದು. 1925ರಲ್ಲಿ ಸಂಘ ಆರಂಭವಾದರೂ ಅದು ಪೂರ್ವೋತ್ತರ ಪ್ರದೇಶಕ್ಕೆ ತಲುಪಿದ್ದು 1946ರಲ್ಲಿ. ಸಂಘಸ್ಥಾಪಕರಾದ ಡಾಕ್ಟರ್ ಜಿಯವರ ನಿಧನದ ನಂತರ ದೇಶದೆಲ್ಲೆಡೆ ತಲುಪಿದ ನಾಗಪುರದ ಕಾರ್ಯಕರ್ತರು ಕ್ರಮೇಣ ಅಸ್ಸಾಂಗೆ ಸಂಘವನ್ನು ಕೊಂಡೊಯ್ದರು. ಆದರೆ ಇಲ್ಲಿ ಸಂಘಕಾರ್ಯ ನಡೆಸುವುದು ಅಷ್ಟು ಸುಲಭವಾಗಿರಲಿಲ್ಲ. ಅನೇಕ ದಶಕಗಳ ಪರಿಶ್ರಮದ ಕಾರಣದಿಂದಾಗಿ ವಿವಿಧ ರೀತಿಯ ಸೇವಾಕಾರ್ಯಗಳಿಗೆ ಜನಸ್ಪಂದನ ಸಿಗಲಾರಂಭವಾಯಿತು.
90ರ ದಶಕದಲ್ಲಿ ಈ ಕಾರ್ಯಕ್ಕೆ ವೇಗ ದೊರೆಯಿತೆಂದೇ ಹೇಳಬಹುದು. ಭಾರತ ನನ್ನ ಮನೆ (My home India)ಯ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರತಿವರ್ಷ ನೂರಾರು ಯುವ ಶಿಕ್ಷಕರು ಪಾಲ್ಗೊಳ್ಳಲಾರಂಭಿಸಿದರು. 2013ರಲ್ಲಿ ಆರಂಭವಾದ ಈ ಯೋಜನೆಯ ಮೊದಲ ವರ್ಷದಲ್ಲಿ ಭಾಗವಹಿಸಿದವರು ಅರುಣಾಚಲದ 9 ಜಿಲ್ಲೆಗಳ 23 ಅಧ್ಯಾಪಕರು. ಮಹಾರಾಷ್ಟ್ರದ ವಿವಿಧ ಊರುಗಳಲ್ಲಿ ಪ್ರವಾಸ ಮಾಡಿ ಅಲ್ಲಿಯ ಜನಜೀವನದೊಂದಿಗೆ ಬೆರೆತ ಅವರಿಗೆ ಆದ ಅನುಭೂತಿ ಅಪೂರ್ವ. ಮೊದಲ ಬಾರಿಗೆ ಅವರೆಲ್ಲ ತಮಗೆ ತೀರಾ ಅಪರಿಚಿತ ಮನೆಗಳಲ್ಲಿ ಉಳಿದುಕೊಂಡಿದ್ದು. ಅಲ್ಲವರಿಗೆ ದೊರೆತ ಆತಿಥ್ಯ ಅವರನ್ನು ಭಾವುಕರನ್ನಾಗಿಸಿತು. ಅಪರಿಚಿತ ಮನೆಯ ಜನರು ಪರಿಚಿತರಂತೆ ವರ್ತಿಸುವ ಹೊಸ ಅನುಭವ ಅವರಿಗಾಯಿತು. ಭಾರತವೇ ನಮ್ಮ ವಿಶಾಲ ಮನೆಯೆಂಬ ಕಲ್ಪನೆಯನ್ನು ಅವರ ಮನಸ್ಸಿನಲ್ಲಿ ಅಂಕಿತಗೊಳಿಸಿತು.
2012ರಲ್ಲಿ ನಡೆದ ‘ಸರಹದ್ ಕೊ ಪ್ರಣಾಮ್’ ಕಾರ್ಯಕ್ರಮಕ್ಕಾಗಿ ದೇಶದ ವಿವಿಧ ಭಾಗಗಳಿಂದ ಜನ ಅರುಣಾಚಲ ಪ್ರದೇಶ ತಲುಪಿದರು. ಗಡಿಪ್ರದೇಶದ ಹಳ್ಳಿಗಳಿಗೆ ಅವರ ಭೇಟಿ, ಕೆಲವು ಕಡೆಗಳಲ್ಲಂತೂ ದಿನವಿಡೀ ನಡೆದೇ ತಲುಪಬೇಕಾದ ಗ್ರಾಮಗಳು. ಭಾಗವಹಿಸಿದ ಯುವಕರ ಉತ್ಸಾಹ, ಅಲ್ಲಿಯ ಸುರಕ್ಷಾ ಬಲದ ಸೈನಿಕರೊಂದಿಗೆ ಸಂವಾದ, ಜನರೊಂದಿಗೆ ಬೆರೆಯುವ ಸಂದರ್ಭ ಇವೆಲ್ಲವೂ ಅರುಣಾಚಲದ ಜನರನ್ನು ಉಳಿದ ಭಾರತದೊಂದಿಗೆ ಭಾವನಾತ್ಮಕವಾಗಿ ಬೆಸೆಯಿತು. ವಿದ್ಯಾಭಾರತಿ ನಡೆಸುತ್ತಿರುವ 33 ಶಾಲೆಗಳು, ವಿವೇಕಾನಂದ ಕೇಂದ್ರದ ಮೂಲಕ ನಡೆದಿರುವ 44 ಶಾಲೆ ಮತ್ತು ವಸತಿಗೃಹಗಳು, ವನವಾಸಿ ಕಲ್ಯಾಣ ಆಶ್ರಮ ನಡೆಸುವ ವಿವಿಧ ಪ್ರಕಲ್ಪಗಳು ಅರುಣಾಚಲದ ಜನಜೀವನದಲ್ಲಿ ರಾಷ್ಟ್ರೀಯತೆಯ ಅರುಣೋದಯವನ್ನು ಸಾಕಾರಗೊಳಿಸಿದೆ. ಅಲ್ಲಿನ ಭಾವೀ ಪೀಳಿಗೆಗೆ ರಾಷ್ಟ್ರೀಯತೆಯ ಮಹತ್ವವನ್ನು ಮತ್ತು ನಮ್ಮ ಸಂಸ್ಕೃತಿಯ ಮೂಲಸಂಗತಿಗಳನ್ನು ನೆನಪು ಮಾಡುವ ಕೆಲಸವನ್ನು ನಡೆಸಿದೆ. ಇತ್ತೀಚೆಗೆ ಇಟಾನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಕಂಠಗಳಿಂದ ಮೂಡಿದ ಭಾರತ್ ಮಾತಾ ಕಿ ಜಯ್, ವಂದೇಮಾತರಂ ಜಯಘೋಷಗಳು ಬದಲಾದ ಪರಿಸ್ಥಿತಿಯನ್ನು ಜಗತ್ತಿಗೆ ಸಾರುತ್ತಿದ್ದವು. ಇಂದು ಈಶಾನ್ಯ ರಾಜ್ಯಗಳಲ್ಲಿ ಭಾರತ ಭಕ್ತಿಯನ್ನು, ರಾಷ್ಟ್ರೀಯ ಭಾವೈಕ್ಯತೆಯನ್ನು ಗಟ್ಟಿಗೊಳಿಸುವಲ್ಲಿ ಸಂಘ ಯಶಸ್ವಿಯಾಗಿದೆ ಮಾತ್ರವಲ್ಲದೇ ಪೂರ್ವೋತ್ತರ ಭಾಗವನ್ನು ಭಾರತದಿಂದ ಬೇರ್ಪಡಿಸುವ ಭಾರತ ವಿರೋಧಿ ಶಕ್ತಿಗಳ ತಂತ್ರವನ್ನು ದುರ್ಬಲಗೊಳಿಸಿದೆ. ಅರುಣಾಚಲದಲ್ಲಿ ರಾಷ್ಟ್ರೀಯ ಭಾವಜಾಗರಣದ ಅರುಣೋದಯದ ಬೆಳಕು ಮತ್ತಷ್ಟು ಪ್ರಖರವಾಗುತ್ತಿದೆ.
