ಅಂಕಣ – ಸಂಚಾರ
- ವೃಷಾಂಕ ಭಟ್ ನಿವಣೆ, ಸಂಪಾದಕರು, ಸಂವಾದ
ಬೆಂಗಳೂರಿನ ಒಂದು ಮನೆ. ಮನೆಗೆ ಬಂದು ಸೇರಿಕೊಂಡ ಬೆಕ್ಕಿಗೆ ಆ ಮನೆಯೇ ತನ್ನ ಮನೆಯಾಯಿತು. ಅದಕ್ಕೆ ಪ್ರಿಯವಾದ ಮೊಸರನ್ನು ಕೇಳಿದಾಗಲೆಲ್ಲ ಮನೆಯವರು ಯಥೇಚ್ಛವಾಗಿ ಬಡಿಸುತ್ತಿದ್ದ ಕಾರಣದಿಂದ ಮನೆ ಬಿಡುವ ಅಥವಾ ಊಟಕ್ಕೆ ಬೇರೆ ಮನೆಗೆ ಹೋಗುವ ಪ್ರಸಂಗ ಆ ಬೆಕ್ಕಿಗೆ ಬರಲಿಲ್ಲ. ಮನೆಯವರ ಪ್ರೀತಿ ಹಾಲು ಮೊಸರಿನ ಮೂಲಕ ವ್ಯಕ್ತವಾಗುತ್ತಿದ್ದ ಕಾರಣಕ್ಕೆ ದೈಹಿಕವಾಗಿಯೂ ಬಲಿಷ್ಠವಾಗಿ ಬೆಳೆದಿತ್ತು.
ಮನೆಯವರು ಬೆಕ್ಕನ್ನು ಪ್ರೀತಿಸುತ್ತಿದ್ದರಾದರೂ, ಅದು ವರ್ಷಕ್ಕೆ ಎರಡರಿಂದ ಮೂರುಬಾರಿ ಮರಿ ಇಡುತ್ತಿದ್ದುದು ಕಿರಿಕಿರಿಯ ವಿಷಯ. ಪ್ರತಿಬಾರಿ ಅದರ ಬಾಣಂತನ ಮಾಡುವ ಹೊತ್ತಿಗೆ ಸಾಕುಸಾಕಾಗುತ್ತಿತ್ತು. ಜೊತೆಗೆ ಬೆಕ್ಕಿಗೂ ವಯಸ್ಸಾಗುತ್ತಿದ್ದರಿಂದ ವರ್ಷಕ್ಕೆ ಮೂರು ಬಾರಿ ಮರಿ ಇಡುವುದು, ಅದಕ್ಕೆ ಹಾಲುಣಿಸುವುದು ಅದಕ್ಕೂ ಕಷ್ಟ ಎಂದೆನಿಸಿತು ಮನೆಯವರಿಗೆ. ಇದಕ್ಕೊಂದು ಪರಿಹಾರ ಹುಡುಕುತ್ತಿದ್ದರು. ಆಗ ಹೊಳೆದದ್ದೇ ಸಂತಾನಹರಣ ಶಸ್ತ್ರಚಿಕಿತ್ಸೆ. ಉಪಾಯ ಹೊಳೆದದ್ದಾಯಿತು, ಸೂಕ್ತ ಪಶುವೈದ್ಯರನ್ನು ಸಂಪರ್ಕಿಸಿ ಅವರ ಸಮಯ ಪಡೆದದ್ದಾಯಿತು.
ಶಸ್ತ್ರಚಿಕಿತ್ಸೆ ನಡೆಸುವ ದಿನ ಮತ್ತು ಸಮಯ ಬಂದಾಯಿತು. ಆದರೆ ಬೆಕ್ಕು ಸಿಗಬೇಕಲ್ಲ. ಅದೇನೋ ಅಂದು ಮಾತ್ರ ಬೆಕ್ಕು ಮನೆಯವರ ಬಳಿ ಬರಲೇ ಇಲ್ಲ! ಎತ್ತಿ ಮುದ್ದಾಡುತ್ತಿದ್ದ ಮನೆಯವರ ಕೈಗೆ ಸಿಕ್ಕದೆ ನುಸುಳಿಕೊಂಡು ಓಡಾಡುತ್ತಿತ್ತು! ಪ್ರೀತಿಯ ಮಾತುಗಳಾವುವೂ ಉಪಯೋಗಕ್ಕೆ ಬರಲಿಲ್ಲ. ಆ ಕಡೆ ವೈದ್ಯರು ಕೊಟ್ಟ ಸಮಯ ಮೀರಿಹೋಗಬಾರದೆಂಬ ಗಡಿಬಿಡಿಯಾದರೆ ಇತ್ತ ಬೆಕ್ಕು ಕೈಗೆ ಸಿಗದೆ ಪರದಾಡುವ ಸ್ಥಿತಿ! ಆಗ ಹೊಳೆದದ್ದೇ ಮೊಸರು! ಯಾವುದಕ್ಕೂ ಸಿಗದ ಬೆಕ್ಕು ಮೊಸರಿಗೆ ಸಿಗಬಹುದೆಂದು ಎಣಿಸಿ ಅದರ ಬಟ್ಟಲಿಗೆ ಮೊಸರು ಸುರಿದರು. ಕೊಂಚ ದೂರದಲ್ಲಿ ಸಂದಿಯಲ್ಲಿ ಕುಳಿತು ತನ್ನ ಬಟ್ಟಲಿಗೆ ಮೊಸರು ಸುರಿದದ್ದನ್ನು ನೋಡಿದ ಬೆಕ್ಕು ಗುಡುಗುಡನೆ ಬಂದು ಬಟ್ಟಲಿಗೆ ನಾಲಿಗೆ ಅದ್ದಿತು; ಕಣ್ಣ ಮುಚ್ಚಿ! ಬಟ್ಟಲಿನಲ್ಲಿದ್ದ ಮೊಸರು ಇನ್ನೇನು ಮುಗಿಯಿತು ಎನ್ನುವ ಹೊತ್ತಿಗೆ ಮನೆಯವರು ಬೆಕ್ಕನ್ನು ಎತ್ತಿಕೊಂಡು ಪಶುವೈದ್ಯರ ಬಳಿ ಹೊರಟರು. ಮುಂದೇನಾಯಿತೆಂದು ಊಹಿಸಬಹುದು.
ಮನಷ್ಯರಾದ ನಮ್ಮ ಸ್ಥಿತಿಯೂ ಈ ಬೆಕ್ಕಿಗಿಂತ ಭಿನ್ನವಾಗಿಲ್ಲ. ನಮ್ಮನ್ನು ಕಾಡಿರುವ ಸಮಸ್ಯೆಗಳಿಗೂ ‘ಮೊಸರೇ’ ಕಾರಣ. ಆಸೆ ಮನುಷ್ಯನನ್ನು ಕುರುಡು ಮಾಡುತ್ತದೆ. ಆಸೆಯೇ ದುಃಖಕ್ಕೆ ಕಾರಣ ಎಂದು ಬುದ್ಧ ಹೇಳಿರುವುದೂ ಈ ಹಿನ್ನೆಲೆಯಲ್ಲಿಯೇ. ಇಚ್ಛೆಯಿಲ್ಲದೆ ಯಾವುದೇ ಕ್ರಿಯೆ ನಡೆಯುವುದಿಲ್ಲ ಎಂದು ಹಿಂದಿನ ಲೇಖನದಲ್ಲಿ ನೋಡಿದ್ದೆವು. ಎಲ್ಲ ಕ್ರಿಯೆಗಳಿಗೂ ಇಚ್ಛೆಯೇ ಕಾರಣವಾಗಿರುವಾಗ ಇಚ್ಛೆಯಿಲ್ಲದೇ ಬದುಕುವುದು ಸಾಧ್ಯವಿಲ್ಲ. ಆದರೆ ಇಚ್ಛೆಯುಂಟಾದಾಗ ಮನುಷ್ಯ ಮಾತ್ರರಿಗೆ ಲಭ್ಯವಿರುವ ವಿವೇಕದಿಂದ ಅದನ್ನು ನೋಡಬೇಕು. ಬೆಕ್ಕಿನ ದೃಷ್ಠಿಯಿಂದ ನೋಡುವುದಾದರೆ ಮೊಸರನ್ನು ನಿರಾಕರಿಸುವುದು ಅದಕ್ಕೆ ಸಾಧ್ಯವಿಲ್ಲ. ಪ್ರಾಣಿ ಸಹಜ ಕ್ರಿಯೆಗಳನ್ನು ಅವು ಮಾಡಿಯೇ ಮಾಡುತ್ತವೆ. ಪೆಟ್ಟಾದ ಹುಲಿಗೆ ನೀವು ಚಿಕಿತ್ಸೆ ಮಾಡಬಹುದು. ಹಾಗೆಂದ ಮಾತ್ರಕ್ಕೆ ನೀವದರ ಬಳಿ ಹೋದರೆ ತಿನ್ನದೇ ಬಿಡುವುದೇ? ನಾಯಿಯನ್ನು ಎಷ್ಟೇ ಪ್ರೀತಿಯಿಂದ ಸಾಕಿದರೂ ಅದರ ಪಕ್ಕದಲ್ಲಿ ನೀವು ಊಟಕ್ಕೆ ಕೂತರೆ ತಟ್ಟೆಗೆ ಬಾಯಿ ಹಾಕುವುದಿಲ್ಲವೇ. ಹಾಗೆಯೇ ಎಲ್ಲಾ ಪ್ರಾಣಿ, ಪಕ್ಷಿಗಳೂ ತಮ್ಮ ಜನ್ಮಸಹಜವಾದ ಜೀವನ ಪದ್ಧತಿಯನ್ನು ಅನುಸರಿಸುತ್ತವೆಯೇ ಹೊರತು ವಿವೇಕದಿಂದ ಬದುಕದು. ಆದರೆ ಮನುಷ್ಯನ ವಿಷಯ ಹಾಗಲ್ಲ. ಸರಿ ತಪ್ಪುಗಳನ್ನು ಅಳೆಯುವ ವಿವೇಕ ಅವನಿಗಿದೆ. ಪ್ರಾಣಿಗಳಿಗೆ ಹೊಟ್ಟೆ ಹಾಳಾದರೆ ಎಲ್ಲಿದೆಯೋ ಅಲ್ಲಿಯೇ ವಾಂತಿ ಮಾಡಿಕೊಳ್ಳುತ್ತವೆ. ಆದರೆ ಮನುಷ್ಯ ರಸ್ತೆಯಲ್ಲಿ ನಡೆಯುವಾಗ ಅವನಿಗೆ ಕಫ ಬಂದರೆ ಸರಿಯಾದ, ಜನರು ಓಡಾಡದ ಜಾಗ ನೋಡಿ ಉಗಿಯುತ್ತಾನೆ. ಇದು ವಿವೇಕ. ವಿವೇಕಹೀನರು ಕಂಡಕಂಡಲ್ಲಿ ಉಗುಳುತ್ತಾರೆ. ಆದರೆ ವಿವೇಕವನ್ನು ಉಪಯೋಗಿಸುವ ಅವಕಾಶ ಮನುಷ್ಯರಿಗಿದೆ.
ನಾವು ಮಾಡಿಕೊಳ್ಳುವ ಬಹಳಷ್ಟು ಸಾಲ, ಅನಾರೋಗ್ಯ ಎಲ್ಲವೂ ವಿವೇಕವನ್ನು ಉಪಯೋಗಿಸದೆ ಆಸೆಯ ಹಿಂದೆ ಹೋದ ಕಾರಣವೇ ಆಗಿದೆ. “ಮೇಡಂ, ಈ ಸೀರೆ ನಿಮಗೆ ಚೆನ್ನಾಗಿ ಕಾಣುತ್ತದೆ” ಎನ್ನುವ ಸೀರೆ ಮಾರುವವರು, “ಸರ್, ಈ ಬೈಕ್ ಮೇಲೆ ಕುಳಿತಾಗ ಚೆನ್ನಾಗಿ ಕಾಣುತ್ತೀರಿ” ಎನ್ನುವ ಶೋರೂಮಿನವರು ನಮ್ಮನ್ನು ಬೆಕ್ಕಿನ ಸ್ಥಾನದಲ್ಲಿ ನೋಡುತ್ತಿರುತ್ತಾರೆ. ಜಾಹಿರಾತುಗಳು, ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುವ ಸ್ವಭಾವ ಎಲ್ಲವೂ ನಮ್ಮನ್ನು ವಿವೇಕಶೂನ್ಯರನ್ನಾಗಿಸುತ್ತದೆ. ಆಹಾರ, ಅಂತಸ್ತು, ಅಧಿಕಾರ, ಹೆಸರು ಏನೇ ಇರಲಿ, ನಾವು ಬಯಸುವ ಎಲ್ಲವನ್ನೂ ವಿವೇಕದಿಂದಲೇ ಗ್ರಹಿಸಬೇಕು. ಇಲ್ಲದಿದ್ದರೆ ಮೊಸರಿನ ಆಸೆಗೆ ಬಿದ್ದ ಬೆಕ್ಕಿನಂತಾಗುತ್ತೇವೆ!.
