ಅಂಕಣ – ಜ್ಞಾನಭಂಡಾರ
- ಪ್ರೊ. ಕೆ.ಆರ್. ರವಿಕುಮಾರ್, ನಿವೃತ್ತ ಪ್ರಾಂಶುಪಾಲ
ಪರಿಸರ ಸಂರಕ್ಷಣೆಯು ಭೂಮಿಯ ಮೇಲಿನ ಜೀವಸಂಕುಲದ ಅಸ್ತಿತ್ವಕ್ಕೆ ಅತ್ಯಗತ್ಯವಾಗಿದೆ. ಮಾನವನು ಆರೋಗ್ಯವಾಗಿರಬೇಕಾದರೆ ಶುದ್ಧವಾದ ಪರಿಸರ ಬೇಕು. ಜೀವವೈವಿಧ್ಯ ಸಂರಕ್ಷಣೆಗೂ ಈ ಭೂಮಿ ಪರಿಶುದ್ಧವಾಗಿರಬೇಕು. ಇದರಲ್ಲಿ ಪರಿಸರ ವ್ಯವಸ್ಥೆ ತನ್ನದೇ ಆದ ಪಾತ್ರವನ್ನು ಹೊಂದಿದೆ. ಲಕ್ಷಾಂತರ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳಿಗೆ ಭೂಮಿಯು ನೆಲೆಯಾಗಿದೆ. ಪರಿಸರ ಉಳಿದರೆ ಮಾತ್ರ ನೈಸರ್ಗಿಕ ಸಂಪನ್ಮೂಲಗಳು ನಮಗೆ ಲಭ್ಯವಿರುತ್ತವೆ.
ಅರಣ್ಯಗಳ ನಾಶದಿಂದ ಶುದ್ಧ ಗಾಳಿ, ಆಮ್ಲಜನಕ ದುರ್ಲಭವಾಗಿದೆ. ಕೈಗಾರಿಕಾ ತ್ಯಾಜ್ಯದಿಂದ ನದಿಗಳು ಕಲುಷಿತವಾಗಿ ಕುಡಿಯುವ ನೀರು ರಾಸಾಯನಿಕ ಮಾಲಿನ್ಯದಿಂದ ತುಂಬಿದೆ. ಕೆರೆಗಳ ನಿರ್ಮೂಲನೆ, ನಗರೀಕರಣದಿಂದ ಪರಿಸರದ ವ್ಯವಸ್ಥೆ ಹಾಳಾಗಿದೆ, ವಾತಾವರಣದ ತಾಪಮಾನ ಹೆಚ್ಚಾಗಿದೆ. ಹೀಗಾಗಿ ಇತ್ತೀಚೆಗೆ ಮಾನವನು ಆರೋಗ್ಯಕರ ಬದುಕನ್ನು ಸಾಗಿಸುವುದು ದುಸ್ತರವಾಗಿದೆ.
ಈ ಎಲ್ಲ ಅಂಶಗಳನ್ನು ಒಳಗೊಂಡಂತೆ ನಾರಾಯಣ ಶೇವಿರೆಯವರು ಹತ್ತಾರು ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಅವೆಲ್ಲದರ ಸಂಕಲನವೇ ‘ಪರಿಸರಪರ’ ಕೃತಿ. ಈ ಕೃತಿಯಲ್ಲಿ ಪರಿಸರ ಸಂಬಂಧಿ ಚಿಂತನೆಗಳ ಹನ್ನೊಂದು ಲೇಖನಗಳಿವೆ. ಪ್ರಕೃತಿಯ ಔಚಿತ್ಯ, ಜೀವಿಗಳಿಗಿರುವ ಸಂಬಂಧ, ಸೃಷ್ಠಿವೈಚಿತ್ರ್ಯ ಹಾಗೂ ಪಂಚಭೂತಗಳ ಪ್ರಭಾವದ ಬಗ್ಗೆ ಚರ್ಚಿಸಿದ್ದಾರೆ. ಪಂಚಭೂತಗಳಿಂದಾದ ಶರೀರವು ಪರಿಸರ (ಅಂದರೆ ಪ್ರಕೃತಿ) ಕೆಟ್ಟರೆ ಕೆಡುವುದು ನಿಶ್ಚಿತ. ಹಾಗಾಗಿ ಪ್ರಕೃತಿ ಸಂರಕ್ಷಣೆ ಅನಿವಾರ್ಯ ಎಂದಿದ್ದಾರೆ. ಕಾಡಿನ ರಕ್ಷಣೆ ಬಗ್ಗೆ ತಿಳಿಸಿ, ನಿಸರ್ಗ ವಿರೋಧಿ ವೃಕ್ಷಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ.
‘ಪಂಚಾಂಗವಾಗಿರುವ ಪಂಚಭೂತ’, ‘ಧರೆ ಕುಸಿದು ಜರಿದೊಡೆ’, ‘ವಿಕೃತಿರಹಿತ ಪ್ರಕೃತಿವಂದನೆಯೆಂತು?’, ‘ತಾಯ್ತನಕ್ಕೆ ಕೊಳ್ಳಿಯಿಡುವ ಮಗುತನ’ ಮುಂತಾದ ಲೇಖನಗಳ ಶೀರ್ಷಿಕೆಗಳೇ ಓದುವಂತೆ ಪ್ರೇರೇಪಿಸುತ್ತವೆ. ಲೇಖಕರು ಬಳಸಿರುವ ಸುಲಲಿತ ಕನ್ನಡ ಪದಬಳಕೆ ಕೃತಿಗೆ ಮತ್ತಷ್ಟು ಮೆರುಗು ನೀಡಿದೆ.
ಕೈಗಾರಿಕೆಗಳ ಸ್ಥಾಪನೆ ಕುರಿತು ತಿಳಿಸುವ ಅವರು, ಗಾಡ್ಗೀಳ್ ವರದಿಯನ್ನೂ ವಿವರಿಸಿದ್ದಾರೆ. ಕೈಗಾರಿಕೆಗಳ ತ್ಯಾಜ್ಯದಿಂದ ನದಿ ನೀರು ಹೇಗೆ ಕಲುಷಿತವಾಗುತ್ತಿದೆ, ಅತಿವೃಷ್ಠಿಯಿಂದಾದ ಭೂಕುಸಿತದ ಬಗ್ಗೆ ಹೇಳುತ್ತಾ ಇತ್ತೀಚೆಗೆ ಕೊಡಗು ಹಾಗೂ ಕೇರಳಗಳ ಪ್ರಸಂಗಗಳನ್ನು ಉದಾಹರಿಸಿದ್ದಾರೆ. ಹೆಚ್ಚುತ್ತಿರುವ ತಾಪಮಾನದಿಂದ, ವಿಷ ಅನಿಲಗಳಿಂದ ಜೀವಿಗಳ ಉಸಿರಾಟಕ್ಕೆ ಶುದ್ಧ ಆಮ್ಲಜನಕ ಸಿಗುತ್ತಿಲ್ಲ. ಓಕ್ಸಿಜನ್ ಪದರಕ್ಕೆ ಹಾನಿಯಾಗುತ್ತಿದೆ. ಇವೆಲ್ಲ ಪರಿಸರ ಮಾಲಿನ್ಯಗಳು ಸಕಲ ಜೀವ ಜಂತುಗಳನ್ನು ವಿನಾಶದ ಹತ್ತಿರ ಹೇಗೆ ಕರೆದೊಯ್ಯುತ್ತಿವೆ ಎಂದು ಲೇಖಕರು ಸೋದಾಹರಣೆಯಾಗಿ ಈ ಲೇಖನಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ ಪ್ರತಿಪಾದಿಸಿದ್ದಾರೆ. ವಿಕಾಸವು ವಿನಾಶದೆಡೆಗೆ ಸಾಗುತ್ತಿರುವುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
ಪರಿಸರದ ಕುರಿತಂತೆ ಹಲವಾರು ಕೃತಿಗಳು ಪ್ರಕಟವಾಗುತ್ತಿರುವ ಕಾಲವಿದು. ಪರಿಸರ ಸಂರಕ್ಷಣಾ ವೇದಿಕೆ ಇತ್ಯಾದಿಗಳೂ ನಮ್ಮ ನಡುವೆ ಬದಲಾವಣೆಗಾಗಿ ಶ್ರಮಿಸುತ್ತಿವೆ. ಆದರೆ ಪರಿಸರದ ಬಗೆಗಿನ ಕಾಳಜಿ ನಮ್ಮಿಂದಲೇ ಆರಂಭವಾಗಬೇಕು. ಶೇವಿರೆಯವರ ‘ಪರಿಸರ ಪರ’ ಕೃತಿಯು ನಮ್ಮನ್ನು ಆತ್ಮಾವಲೋಕನದ ಒರೆಗೆ ಹಚ್ಚುತ್ತದೆ. ಚಿಕ್ಕದಾಗಿ, ಚೊಕ್ಕದಾಗಿ ಕಾಣುವ ಈ ಪುಸ್ತಕ ಇಂದಿಗೆ ಅಗತ್ಯವಾದ ತಿಳಿವಳಿಕೆಯನ್ನು ಅನಾಯಾಸವಾಗಿ ನೀಡುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಸರಳವೂ ಸುಂದರವೂ ಆದ ಕನ್ನಡಭಾಷೆಯಲ್ಲಿರುವ ಈ ಪುಸ್ತಕವು ಸರ್ವರಿಗೂ ಉಪಾದೇಯವಾಗಿದೆ.
ಕೃ: ಪರಿಸರ ಪರ ಲೇ: ನಾರಾಯಣ ಶೇವಿರೆ ಪ್ರ: ರಾಷ್ಟ್ರೋತ್ಥಾನ ಸಾಹಿತ್ಯ ಪು: 106 ಬೆ: 120 ರೂ. ಸಂ: 7204314448
