ಅಂಕಣ – Xಫ್ಯಾಕ್ಟರ್
- ಪರಪ್ಪ ಶಾನವಾಡ, ಸಾಮಾಜಿಕ ಜಾಲತಾಣ ವಿಶ್ಲೇಷಕ
ಹಲವು ಸಂಪನ್ಮೂಲಗಳಿಂದ ಸಂಪದ್ಭರಿತವಾದ ಭಾರತವು ಒಂದು ವಿಶೇಷ ದೇಶ. ಒಂದೆಡೆ ನಮ್ಮ ಜನಸಂಖ್ಯೆಯೇ ಶಕ್ತಿ ಎಂದರೆ, ಮತ್ತೊಂದೆಡೆ ಜನಸಂಖ್ಯೆಯೇ ಅಭಿವೃದ್ಧಿಯ ಹಿನ್ನಡೆಗೂ ಕಾರಣ. ನಮ್ಮಲ್ಲಿರದ ವಸ್ತುಗಳನ್ನು ಆಮದು ಮಾಡುತ್ತಾ, ನಮ್ಮ ವಸ್ತುಗಳನ್ನು ರಫ್ತು ಮಾಡುತ್ತಾ ಇತರ ದೇಶಗಳೊಂದಿಗೆ ಶತಮಾನಗಳಿಂದಲೂ ಕೊಡುಕೊಳ್ಳುವಿಕೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿರುವ ಭಾರತ, ಜಗತ್ತಿನ ಆಗು-ಹೋಗುಗಳ ಪ್ರಮುಖ ಪಾಲುದಾರ. ಆಧುನಿಕತೆಯ ಯುಗದಲ್ಲಿ ಕಚ್ಚಾತೈಲ ಅವಶ್ಯಕತೆಗಳಲ್ಲೊಂದಾಗಿದ್ದು, ಭಾರತ ತನ್ನ ಬಹುತೇಕ ಸಮಯ, ಹಣ ಮತ್ತು ಪ್ರಯತ್ನವನ್ನು ತೈಲದ ಆಮದಿನಲ್ಲಿ ವ್ಯಯಿಸುತ್ತಿದೆ. ಇದಕ್ಕೆ ತಕ್ಷಣದ ಪರ್ಯಾಯ ಇಲ್ಲದಿದ್ದರೂ ಹಂತ ಹಂತವಾಗಿ ಇದರ ಅವಲಂಬನೆಯನ್ನು ಕಡಿಮೆಗೊಳಿಸುವುದು ಇಂದಿನ ಅಗತ್ಯವಾಗಿದೆ. ಇದಕ್ಕಾಗಿ ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ನವೀಕರಿಸಬಹುದಾದ ಮೂಲಗಳತ್ತ ಸಂಶೋಧನೆ ನಡೆಸುತ್ತಿವೆ. ಹಾಗೆಯೇ ಗಾಳಿಯಿಂದ, ಸೌರ ಶಕ್ತಿಯಿಂದ, ಜಲದಿಂದ, ಪರಮಾಣುವಿನಿಂದ ಶಕ್ತಿ ಉತ್ಪಾದನೆಯ ದಾರಿಗಳನ್ನು ಕಂಡುಕೊಂಡಿದೆ. ಇದರ ಮುಂದುವರಿದ ಭಾಗವಾಗಿ ಕಳೆದ 5-6 ವರ್ಷಗಳಿಂದ ಭಾರತವು ಪೆಟ್ರೋಲ್ನಲ್ಲಿ ಶೇ.5ರಿಂದ ಶೇ.20 ಎಥೆನಾಲ್ ಬಳಸುವ ಮೂಲಕ ಇಂಧನದ ಅಗತ್ಯಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸುವಲ್ಲಿ ಮಹತ್ತರ ಸಾಧನೆ ಮಾಡಿತ್ತು. ಈಗ ಪೆಟ್ರೋಲ್ನಲ್ಲಿ ಬರೋಬ್ಬರಿ ಶೇ.85 ಎಥೆನಾಲ್ ಬಳಸಿ ವಾಹನ ಚಾಲನೆಗೆ ಹೊಸ ಮಾರ್ಗವನ್ನು ಕಂಡುಕೊಂಡಿದ್ದು, ಇಂಧನ ವಿಭಾಗದಲ್ಲಿ ಇಂದೊಂದು ಮಹತ್ತರ ಮೈಲುಗಲ್ಲಾಗಿದೆ ಎಂಬುದು ಜಾಲತಾಣ ಪ್ರಬುದ್ಧರ ಆಶಯವಾಗಿದೆ.
E85 ಇಂಧನವು ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರು, ರಾಜಕೀಯ ಮುಖಂಡರು, ಕೈಗಾರಿಕಾ ತಜ್ಞರು, ರೈತ ಸಂಘಟನೆಗಳು ಹಾಗೂ ವಾಹನಪ್ರಿಯರು ಈ ಹೊಸ ಇಂಧನದ ಆರ್ಥಿಕ, ಸಾಮಾಜಿಕ ಮತ್ತು ಪರಿಸರದ ಪರಿಣಾಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಭಾರತದ ಇಂಧನ ಭದ್ರತೆಯತ್ತ ಒಂದು ದೀರ್ಘಕಾಲೀನ ಕಾರ್ಯತಂತ್ರವಾಗಿ, E85 ಆತ್ಮನಿರ್ಭರ ಭಾರತ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿ ಅನೇಕರು ಸ್ವಾಗತಿಸುತ್ತಿದ್ದಾರೆ. ಜಾಲತಾಣ ವಿಶ್ಲೇಷಣೆಯ ಪ್ರಕಾರ, X, ಇನ್ಸ್ಟಾಗ್ರಾಂ, ಯೂಟ್ಯೂಬ್, ಫೇಸ್ಬುಕ್ ಹಾಗೂ ವಿವಿಧ ಸುದ್ದಿ ವೇದಿಕೆಗಳಲ್ಲಿ ನಡೆದ ಚರ್ಚೆಗಳಲ್ಲಿ ʼʼಎಥೆನಾಲ್ ಆಧಾರಿತ ಇಂಧನ ಬಳಕೆ ಹೆಚ್ಚುವುದರಿಂದ ದೇಶದ ವಿದೇಶಿ ವಿನಿಮಯ ವೆಚ್ಚ ಕಡಿಮೆಯಾಗಲಿದೆ. ಇಂಧನ ಆಮದಿನ ಅವಲಂಬನೆ ತಗ್ಗಲಿದೆ ಹಾಗೂ ಭಾರತದ ಆರ್ಥಿಕ ಸ್ವಾವಲಂಬನೆಗೆ ಬಲ ಸಿಗಲಿದೆ. ಜೊತೆಗೆ ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳು ಮತ್ತು ದೇಶೀಯ ಕೈಗಾರಿಕೆಗಳಿಗೆ ಹೊಸ ಬೆಳವಣಿಗೆಯ ಅವಕಾಶಗಳು ದೊರೆಯಲಿವೆʼʼ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಎಥೆನಾಲ್ ಆಧಾರಿತ ಇಂಧನವು ಗ್ರಾಮೀಣ ಉದ್ಯೋಗ ಸೃಷ್ಟಿಗೆ, ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ. ಕೈಗಾರಿಕಾ ವಲಯದ ಪ್ರತಿನಿಧಿಗಳಿಗೆ ಎಥೆನಾಲ್ ಉತ್ಪಾದನೆ, ಸಂಗ್ರಹಣೆ, ಸಾಗಣೆ ಹಾಗೂ ಸಂಬಂಧಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಅವಕಾಶಗಳು ಹೆಚ್ಚಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. #E85Fuel, #AtmanirbharBharat, #EthanolEconomy, #EnergySecurity, #MakeInIndia, #FarmersFirst ಮತ್ತು #VocalForLocal ಮೊದಲಾದ ಹ್ಯಾಶ್ಟ್ಯಾಗ್ಗಳು ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು, ಜನರಲ್ಲಿ ಈ ವಿಷಯದ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರತಿಬಿಂಬಿಸಿವೆ.
ಈ ವಿಷಯವಾಗಿ ಕೆಲವರು ಆತಂಕ ವ್ಯಕ್ತಪಡಿಸಿದ್ದು, ವಾಹನಗಳ ಹೊಂದಾಣಿಕೆ, ಮೈಲೇಜ್, ನಿರ್ವಹಣಾ ವೆಚ್ಚ ಹಾಗೂ ಇಂಧನ ದಕ್ಷತೆ ಕುರಿತಂತೆ ಸ್ಪಷ್ಟನೆಗಳನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಜ್ಞರು E85 ಇಂಧನವನ್ನು ಮುಖ್ಯವಾಗಿ ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಸಾಮಾನ್ಯ ಪೆಟ್ರೋಲ್ ವಾಹನಗಳಿಗೆ ನೇರವಾಗಿ ಬಳಸುವ ಉದ್ದೇಶವಿಲ್ಲ ಎಂದಿದ್ದಾರೆ. ಒಟ್ಟಾರೆ, E85 ಇಂಧನವು ಭಾರತದ ಇಂಧನ ನೀತಿಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ ಎಂದು ಹೇಳಬಹುದು. ‘ಇಂಧನ ಸ್ವಾವಲಂಬನೆ, ರೈತರ ಸಬಲೀಕರಣ, ಪರಿಸರ ಸಂರಕ್ಷಣೆ ಹಾಗೂ ದೇಶೀಯ ಕೈಗಾರಿಕೆಗಳ ಬೆಳವಣಿಗೆ’ ಎಂಬ 4 ಪ್ರಮುಖ ಉದ್ದೇಶಗಳನ್ನು ಒಂದೇ ಸಮಯದಲ್ಲಿ ಸಾಧಿಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಅನೇಕರು ನಂಬಿದ್ದಾರೆ. E85 ಕೇವಲ ಒಂದು ಇಂಧನವಲ್ಲ; ಇದು ಸ್ವಾವಲಂಬಿ, ಶಕ್ತಿಶಾಲಿ ಮತ್ತು ಅಭಿವೃದ್ಧಿಶೀಲ ಭಾರತದ ಕನಸಿಗೆ ಇಂಧನ ತುಂಬುವ ಹೊಸ ಶಕ್ತಿ.
