ಮೌಲ್ಯಗಳ ಪುನರುತ್ಥಾನದಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ
- ಡಾ. ರೂಪಾ ರಾವ್, ಸೈಕಾಲಜಿಸ್ಟ್, ಕೋಚ್ ಮತ್ತು ಕೌನ್ಸೆಲರ್
ಕಳೆದ ಒಂದಷ್ಟು ವರ್ಷಗಳಿಂದ ಹೆಣ್ಣು ವಿಧವಿಧವಾದ ವಿಷಯಗಳಿಗೆ ಮತ್ತೆ ಗಮನ ಸೆಳೆಯುತ್ತಿದ್ದಾಳೆ, ಎಲ್ಲೆಡೆ ಚರ್ಚೆಯಾಗುತ್ತಿದ್ದಾಳೆ. ಮದುವೆಯಾಗುವ ಹುಡುಗನನ್ನು ಕೊಂದ ಸಿಯಾ, ಲಿವ್ ಇನ್ ಹುಡುಗನಿಗಾಗಿ ತಂದೆ – ತಾಯಿ, ತಂಗಿಯನ್ನು ಕೊಂದ ಶ್ವೇತಾ, ಪ್ರಿಯಕರನಿಗಾಗಿ ಅವನು ಕೊಂದ ಸ್ವಂತ ಮಗಳ ಕೊಲೆಯನ್ನು ಮುಚ್ಚಿಟ್ಟ ಪ್ರಿಯಾ ಅಥವಾ ಕದ್ದು ಮುಚ್ಚಿ ಬರುತ್ತಿದ್ದ ಪ್ರಿಯಕರನಿಗಾಗಿ ಸ್ವಂತ ಮಗನನ್ನೇ ಕೊಂದ ಇನ್ನೊಬ್ಬ ಮಹಿಳೆ… ಕುಡಿತದ ಮದದಲ್ಲಿ ಪೊಲೀಸ್ ಅಧಿಕಾರಿಗೆ ಒದ್ದ ದಾವಣಗೆರೆಯ ಹುಡುಗಿಯೂ… ಇವೆಲ್ಲಾ ಇತ್ತೀಚೆಗಿನ ಒಂದು ತಿಂಗಳಲ್ಲಿ ಕೇಳಿಬಂದ ವಿಷಯಗಳಷ್ಟೇ… ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ವಿಷಯಗಳು ಭಯ ಹುಟ್ಟಿಸುವ, ಅಪಾಯಕಾರಿ ಸಾಮಾಜಿಕ ಟ್ರೆಂಡ್ಗಳಾಗಿ ಬದಲಾಗುತ್ತಿವೆ.
ಈ ಎಲ್ಲಾ ಸುದ್ದಿಗಳನ್ನು ಓದುವಾಗಲೂ ಪ್ರತೀ ಪ್ರಕರಣದ ಮೇಲ್ನೋಟಕ್ಕೆ ಕಾಣುವ ಕಾರಣಗಳಿಗಿಂತ ಹೆಚ್ಚಾಗಿ ಕಾಡುವ ಪ್ರಶ್ನೆ, ಹೆಣ್ಣುಮಕ್ಕಳು ಇಂಥಾ ಕ್ರೌರ್ಯವನ್ನು ತಮ್ಮೊಳಗೆ ಹೇಗೆ ಬರಗೊಡುತ್ತಿದ್ದಾರೆ ಮತ್ತು ಅಲ್ಲೋ ಇಲ್ಲೋ ಒಂದೆರೆಡು ಹೆಂಗಸರಲ್ಲಿ ಕಾಣುತ್ತಿದ್ದ ಕ್ರೌರ್ಯದ ಸ್ವಭಾವ ಈಗ ಹೆಚ್ಚಾಗುತ್ತಿದೆಯೇ ಎಂಬುದು. ಒಮ್ಮೆ ಫೂಲನ್ ದೇವಿ, ಇನ್ನೊಮ್ಮೆ ಜಾಲಿ ಜೋಸೆಫ್, ರಿಂಗ್ ರೋಡ್ ಶುಭಾ, ಸಯನೈಡ್ ಮಲ್ಲಿಕಾ ಹೀಗೇ ಒಂದಷ್ಟು ಮಹಿಳೆಯರು ಇಂತಹ ಪ್ರಕರಣಗಳಲ್ಲಿ ಕಂಡು ಮರೆಯಾಗಿದ್ದರು. ಆದರೆ ಕಳೆದ ಒಂದು ತಿಂಗಳಲ್ಲೇ ಆರಕ್ಕೂ ಮೇಲ್ಪಟ್ಟ ಘಟನೆಗಳು ನಡೆದಿದ್ದು, ಡಿಜಿಟಲ್ ಯುಗ ತಂದಿಟ್ಟ ಹೊಸ ಬಗೆಯ ಆತಂಕಕಾರಿ ಮನೋಭಾವದೆಡೆಗೆ ಬೊಟ್ಟು ಮಾಡುತ್ತಿದೆ. ಒಂದು ಹೆಣ್ಣಾಗಿ ಅವಳು ಹೀಗೆಲ್ಲಾ ಮಾಡಬಹುದೇ ಎಂಬ ಪ್ರಶ್ನೆ ಮೊದಲು ಎಲ್ಲರಲ್ಲಿಯೂ ಕಾಡುತ್ತದೆ. ಯಾಕೆಂದರೆ ಹೆಣ್ಣನ್ನು ಮಾನವೀಯತೆ, ಸಹನೆ, ತಾಳ್ಮೆ, ತ್ಯಾಗ ಇತ್ಯಾದಿಗಳ ಸಂಕೇತವಾಗಿ ಕಾಣುತ್ತೇವೆ. ಆದರೆ ನೈತಿಕತೆಯನ್ನು ಸ್ವಲ್ಪ ಪಕ್ಕಕ್ಕಿಟ್ಟು ಘಟನೆಗಳ ಕಾರಣ, ಪರಿಣಾಮಗಳ ಕುರಿತು ಅವಲೋಕಿಸುವುದು ಸಮಯೋಚಿತ.
ಹಿಂದಿದ್ದ ಸಹಾನುಭೂತಿಯುಕ್ತ ಜೀವನದ ತೇರು ನಿಧಾನವಾಗಿ ಬದಲಾಗುತ್ತಿದೆ. ಹೊಸ ಕಾಲಘಟ್ಟಕ್ಕೆ ಎಲ್ಲರೂ ತೆರೆದುಕೊಳ್ಳುತ್ತಿರುವಾಗ ಹೆಣ್ಣಿನ ಜೀವನದಲ್ಲೂ ಮಹತ್ತರ ಏರಿಳಿತಗಳಾಗುತ್ತಿವೆ. ಕ್ರೂರಿ ಗಂಡನನ್ನು ಕಟ್ಟಿಕೊಂಡು ಬದುಕಿಡೀ ಒದ್ದಾಟ ನಡೆಸುತ್ತಿದ್ದ ಹೆಣ್ಣಿನಲ್ಲಿದ್ದ ಸಹನೆ ಇಂದೇಕೆ ಕ್ರೌರ್ಯ, ಲಾಲಸೆ, ಅಸಹನೆಗಳ ಆಗರವಾಗುತ್ತಿದೆ ಎಂಬುದು ಉತ್ತರ ಹುಡುಕಲಾಗದ ಪ್ರಶ್ನೆಯೇನಲ್ಲ. ಆ ಕಾಲದಲ್ಲಿದ್ದ ಅತಿಯಾದ ತಾಳ್ಮೆಯ ಅವಶ್ಯಕತೆ ಇಂದಿಗಿಲ್ಲ. ಆದರೆ ಎಲ್ಲೆ ಮೀರಿದ ತಪ್ಪಿಗೂ ಸ್ತ್ರೀ ಕಾರಣವಾಗಬಾರದೆಂಬ ಪ್ರಜ್ಞೆ ಜಾಗೃತವಾಗಬೇಕಿದೆ.
ಒಂದೆಡೆ, ಸ್ತ್ರೀ ಸಂಪಾದನೆ ಮಾಡಲಾರಂಭಿಸಿದ್ದಾಳೆ, ಅವಳಿಗೆ ಹೆಚ್ಚು ಸ್ವಾತಂತ್ರ್ಯ ಸಿಕ್ಕಿದೆ, ಕಲಿಕೆಯ ಅವಕಾಶ ಲಭಿಸುತ್ತಿದೆ, ಆದ್ದರಿಂದ ಅವಳು ಯಾರನ್ನೂ ಏನನ್ನೂ ಲೆಕ್ಕಿಸುತ್ತಿಲ್ಲ, ಹೆಚ್ಚುತ್ತಿರುವ ಸಮಾನತೆ ಇದಕ್ಕೆಲ್ಲಾ ಕಾರಣ ಎನ್ನುತ್ತಾರೆ. ಆದರೆ ಈ ಹಿಂದಿನ ಪೀಳಿಗೆಯ ಹೆಣ್ಣುಮಕ್ಕಳೂ ಸ್ವಾವಲಂಬಿಗಳಾಗಿದ್ದರು. ಕಲಿಕೆ ಅವರನ್ನು ಮದಾಂಧರನ್ನಾಗಿಸಲಿಲ್ಲ, ಸಂಪಾದನೆ ಅವರನ್ನು ಕುರುಡಾಗಿಸಲಿಲ್ಲ, ಸ್ವಾತಂತ್ರ್ಯ ಅವರನ್ನು ದಾರಿ ತಪ್ಪಿಸಲಿಲ್ಲ, ಸಮಾನತೆ ಅವರಲ್ಲಿ ದುರಹಂಕಾರ ತಂದಿರಲಿಲ್ಲ. ಹಾಗಾಗಿ ಹಿಂಸಾತ್ಮಕ ಪ್ರವೃತ್ತಿಗೆ ಸ್ವಾತಂತ್ರ್ಯ ಮತ್ತು ಶಿಕ್ಷಣವನ್ನು ದೂಷಿಸುವ ಅಗತ್ಯವಿಲ್ಲವೆನಿಸುತ್ತದೆ. ಹಾಗಾದರೆ ಅಸಹನೆ, ಅಪರಾಧಗಳು ಈಗೇಕೆ?
- ಆಗಿನ ಪೀಳಿಗೆಯಲ್ಲಿ ಮಾಹಿತಿ ಕಡಿಮೆ ಇತ್ತು, ಆದರೆ ತಿಳಿವಳಿಕೆ ಹಾಗೂ ಹೊಂದಾಣಿಕೆ ಹೆಚ್ಚಾಗಿತ್ತು. ಬಹುತೇಕ ಹೆಣ್ಣುಮಕ್ಕಳು ಪತಿ, ಗೌರವ, ಘನತೆ ಮತ್ತು ಆತ್ಮಸಂಯಮದಂತಹ ಮೌಲ್ಯಗಳ ಗಟ್ಟಿಯಾದ ಅಡಿಪಾಯದ ಮೇಲೆ ನಿಂತಿದ್ದ ಕೂಡು ಕುಟುಂಬದೊಂದಿಗೆ ಬೆಳೆಯುತ್ತಿದ್ದರು. ಕ್ರೈಮ್ ಸುದ್ದಿಗಳನ್ನು ಕೇಳುತ್ತಿದ್ದುದೇ ಕಡಿಮೆ. ಡಿಜಿಟಲ್ ಯುಗದ ಹಿಂಸಾತ್ಮಕ ಗೇಮ್ಗಳ ಬದಲಾಗಿ ನೀತಿಕಥೆಗಳನ್ನು ಕೇಳಿಕೊಂಡು ಬೆಳೆದ ಪೀಳಿಗೆಯಾಗಿತ್ತು.
- ಸಣ್ಣ ಪುಟ್ಟದ್ದಕ್ಕೂ ವಿಚ್ಛೇದನದವರೆಗೂ ಹೋಗುವ ದಾಂಪತ್ಯದ ಬದಲು ಹೊಂದಿಕೊಂಡು ಪರಸ್ಪರ ಅರ್ಥ ಮಾಡಿಕೊಂಡು ಹೋಗುತ್ತಾ ಭಾವನಾತ್ಮಕವಾಗಿ ಸಮತೋಲನದ ಪಾತ್ರ ನಿರ್ವಹಣೆ ಮಾಡುತ್ತಿದ್ದ ತಾಯಿ, ಅಜ್ಜಿಯರು ಆಗಿ ಬಹುತೇಕವಾಗಿ ಕಾಣುತ್ತಿದ್ದರು.
- ಆಗೆಲ್ಲಾ ಮನೆಯವರು ಕೂಡಿ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದರು ಹಾಗೂ ಮನೆದೀಪವನ್ನು ಮನೆ ಹೆಣ್ಣೇ ಹಚ್ಚಬೇಕೆಂಬ ಅಲಿಖಿತ ನಿಯಮವಿತ್ತು. ದೀಪಗಳನ್ನು ಬೆಳಗಿಸುವುದು, ಸಾಮೂಹಿಕ ಪ್ರಾರ್ಥನೆ ಮಾಡುವುದು, ಮಂತ್ರಪಠಣ ಮಾಡುವುದು ಮುಂತಾದ ದೈನಂದಿನ ಆಚರಣೆಗಳು ಭಾವನೆಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ ಹಾಗೂ ಮಾನಸಿಕ ಶಾಂತಿಯನ್ನು ಕಾಪಾಡುತ್ತವೆ. ಅಂದಿನ ಸ್ತ್ರೀ ಈ ಎಲ್ಲಾ ಕಾರಣಗಳಿಂದಲೂ ಸ್ವಭಾವತಃ ವ್ಯತ್ಯಸ್ತಳಾಗಿದ್ದಳು.
- ಆಗೆಲ್ಲಾ ಸಾಮಾಜಿಕ ಜಾಲತಾಣದ ಗೀಳು ಇರಲಿಲ್ಲ, ಸಾಮಾಜಿಕ ಹೋಲಿಕೆ ಇರಲಿಲ್ಲ, ಲೈಕ್ಗಳು ಸಿಗಬೇಕು ಎಂಬ ಒತ್ತಡವಿರಲಿಲ್ಲ, ಯಾರೋ ಮೆಚ್ಚಲಿಲ್ಲವೆಂಬ ಅಳುಕಿರಲಿಲ್ಲ… ಹಾಗಾಗಿ ಹೆಣ್ಣಿನ ಮನಸ್ಸು ಮನೆ, ವೃತ್ತಿ ಹಾಗೂ ಕೌಟುಂಬಿಕ ಹಿತಾಸಕ್ತಿಯೆಡೆಗೇ ಹೆಚ್ಚಿತ್ತೇ ಹೊರತು ಹೊರಗಿನ ಲೆಕ್ಕಾಚಾರದ ಕಡೆಗೆ ಗಮನ ಹೋಗುತ್ತಿರಲಿಲ್ಲ.
- ಕೂಡು ಕುಟುಂಬದ ಬಾಂಧವ್ಯ ಅಥವಾ ಅಕ್ಕಪಕ್ಕದ ಮನೆಯವರೊಂದಿಗಿನ ಆತ್ಮೀಯ ಮಾತುಕತೆ ಹೆಚ್ಚಿದ್ದ ಕಾಲಘಟ್ಟವದು. ಇದರಿಂದ ಭಾವನಾತ್ಮಕ ಹಂಚಿಕೆ – ಅರಿವು, ಇನ್ನೊಬ್ಬರ ನೋವು ನಲಿವುಗಳಿಗೆ ಮಿಡಿವ ಮನಸ್ಥಿತಿ ಇರುತ್ತಿತ್ತು.
- ಯಶಸ್ಸು ಕೇವಲ ಹಣ ಅಥವಾ ಸ್ಥಾನದ ಬಗ್ಗೆ ಮಾತ್ರವಾಗಿರಲಿಲ್ಲ. ತನ್ನನ್ನು ಹಾಗೂ ತನ್ನ ಮನೆಯನ್ನು ಸಾಮರಸ್ಯವಾಗಿ ನಿಭಾಯಿಸಿಕೊಳ್ಳುವುದೂ ಯಶಸ್ಸೇ ಎಂಬ ಮನೋಭಾವವಿತ್ತು. ಸಮರಸತೆಯ ಭಾವದಿಂದಿದ್ದ ಮನೆಗಳಲ್ಲಿ ಅದು ಹೆಣ್ಣಿನ ಮೇಲಿನ ದೌರ್ಜನ್ಯವಲ್ಲ ಎಂಬ ಸ್ಪಷ್ಟ ಅರಿವು ಇತ್ತು.
- ಆಗ ಜೀವನ ಇಷ್ಟೊಂದು ವೇಗವಾಗಿ ಇದ್ದಿರಲಿಲ್ಲವೇನೋ. ತನ್ನದೇ ಆದ ನಿಧಾನ ಲಯವನ್ನು ಹೊಂದಿತ್ತು.
ಕುಟುಂಬದೊಂದಿಗೆ ಊಟ, ಮುಖಾಮುಖಿ ಸಂಭಾಷಣೆಗಳು ಸಾಮಾನ್ಯವಾಗಿರುತ್ತಿದ್ದವು.
ವೈಜ್ಞಾನಿಕವಾಗಿ ಸ್ತ್ರೀ
ಸಾಮಾನ್ಯವಾಗಿ ಹೆಣ್ಣುಮಕ್ಕಳನ್ನು ತಾಳ್ಮೆ, ಕಾಳಜಿ, ಪ್ರೀತಿ, ಮಮತೆ ಇತ್ಯಾದಿಗಳ ಸಂಕೇತವೆಂದು ಸಮಾಜ ಮಾತ್ರ ಗುರುತಿಸಿದ್ದಲ್ಲ, ಪ್ರಕೃತಿಯೂ ಅವಳನ್ನು ಹಾಗೇ ರೂಪಿಸಿದೆ. ವೈಜ್ಞಾನಿಕವಾಗಿಯೂ ಅವಳ ಭಾವನೆಗಳೆಲ್ಲವೂ ವಿಶಿಷ್ಟವಾದ ಹಾರ್ಮೋನ್ಸ್ ಮತ್ತು ಮೆದುಳಿನ ಆಧಾರದ ಮೇಲೆ ರೂಪುಗೊಂಡಿದೆ. ಅವಳ ಮೆದುಳಿನ ಕೆಲಭಾಗಗಳು ಆಕೆ ಹೆಚ್ಚು ಸಹನಾಮಯಿ ಆಗಿರುವಂತೆ ರಚನೆಗೊಂಡಿವೆ. ಅವೆಂದರೆ,
● ಲಿಂಬಿಕ್ ಸಿಸ್ಟಮ್ (ಭಾವನೆಗಳನ್ನು ನಿಯಂತ್ರಿಸುವ ಭಾಗ) – ಹೆಣ್ಣುಮಕ್ಕಳಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆ.
● Amygdalaದ ಚಟುವಟಿಕೆಯಲ್ಲಿ ಏರುಪೇರಾದರೆ ಇನ್ನೊಬ್ಬರ ಕಷ್ಟ ನಷ್ಟಗಳಿಗೆ ಮರುಗುವ, ಅರ್ಥ ಮಾಡಿಕೊಳ್ಳುವ ಗುಣ ಹಾಗೂ ಭಯಕ್ಕೆ ಬೇಗ ಪ್ರತಿಕ್ರಿಯಿಸುವ ಗುಣವಿರುತ್ತದೆ.
● Prefrontal cortex (PFC) ಉತ್ತಮ ತೀರ್ಮಾನ, ತಾಳ್ಮೆ, ನೈತಿಕ ಮನಃಸಾಕ್ಷಿಗೆ ಕಾರಣವಾಗುತ್ತದೆ. PFC ಹೆಣ್ಣುಮಕ್ಕಳಲ್ಲಿ ಕೊಂಚ ವಿಶಾಲವಾಗಿರುತ್ತದೆ ಮತ್ತು ಗಂಡಸರಿಗಿಂತ ಬೇಗನೇ ಇದು ಪ್ರೌಢಾವಸ್ಥೆಗೆ ಬಂದಿರುತ್ತದೆ.
● Mirror neurons: ಇತರರ ನೋವನ್ನು ಅರ್ಥಮಾಡಿಕೊಳ್ಳುವ, ಕರುಣೆ ತೋರುವುದಕ್ಕೆ ಮೂಲವಾಗಿರುವ ಇದು ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು..
● ಹಾರ್ಮೋನ್ಗಳಲ್ಲಿಯೂ ಪ್ರೀತಿ, ಬಾಂಧವ್ಯ, ತಾಳ್ಮೆಗೆ ಕಾರಣವಾಗುವ ‘ಬೋಡಿಂಗ್ ಹಾರ್ಮೋನ್’ ಓಕ್ಸಿಟೋಸಿನ್ ಹೆಣ್ಣುಮಕ್ಕಳಲ್ಲಿ ಹೆಚ್ಚು.
● ಭಾವನೆಗಳನ್ನು ಸ್ಥಿರಗೊಳಿಸಿ, ಸಹಾನುಭೂತಿ ಮತ್ತು ನಿಗಾ ಹೆಚ್ಚಿಸುವ ‘ಈಸ್ಟ್ರೋಜನ್’ ಸಹ ಆಕೆಯಲ್ಲಿಯೇ ಹೆಚ್ಚಾಗಿರುತ್ತದೆ.
● ಆವೇಶ, ಆಕ್ರಮಣಕಾರಿ ಮನೋಭಾವಕ್ಕೆ ಕಾರಣವಾದ ‘ಟೆಸ್ಟೋಸ್ಟೆರೋನ್’ ಹೆಣ್ಣಿನಲ್ಲಿ ಕಡಿಮೆ ಇರುತ್ತದೆ.
ಹಾಗಾಗಿ ಅವಳು ಸಹನಾಮಯಿ. ಬುದ್ಧಿಯಲ್ಲಿ ಮಂತ್ರಿ ಎನ್ನಲಾಗುತ್ತದೆ. ಹಾಗಿದ್ದರೂ ಈಗ ಹೇಗೆ ಈ ಸ್ವಾಭಾವಿಕ ಗುಣಗಳು ನಶಿಸುತ್ತಿವೆ ಎಂಬ ಪ್ರಶ್ನೆ ಕಾಡುತ್ತದೆ. ಒಟ್ಟಿನಲ್ಲಿ ಇದು ಹೆಣ್ಣೊಬ್ಬಳ ಬಗೆಗಿನ ವಿಷಯವಲ್ಲ. ಪೂರ್ಣ ಸಮಾಜ ರೂಪುಗೊಳ್ಳುತ್ತಿರುವ ಕಡೆಗಿನ ಮಾತು.
ಯುವ ಪೀಳಿಗೆ ಮತ್ತು ತಪ್ಪುಗಳು
1996ರ ನಂತರ ಹುಟ್ಟಿದವರನ್ನು ಜೆನ್ ಝೀ ಪೀಳಿಗೆ ಎನ್ನುತ್ತೇವೆ. ಅದರಲ್ಲೂ 2006ರ ನಂತರ ಹುಟ್ಟಿದ ಜೆನ್ ಝೀ ಮತ್ತು ಈಗಿನ ಜೆನ್ ಆಲ್ಫಾ ಪೀಳಿಗೆಯ ಬಹುತೇಕ ಮಕ್ಕಳು ಮೊಬೈಲ್ನೊಂದಿಗೇ ಬೆಳೆದವರು. ಒಂದು ಅಧ್ಯಯನದ ಪ್ರಕಾರ, ಈ ಮೊಬೈಲ್ ಪೀಳಿಗೆಯಲ್ಲಿ ಬೆಳೆದ ಮಕ್ಕಳು (ಮೊಬೈಲ್ ಹೆಚ್ಚು ನೋಡಿ ಬೆಳೆವ ಮಕ್ಕಳು) ಸ್ವಾರ್ಥಿಗಳಾಗುತ್ತಿದ್ದಾರೆ. ಇದಕ್ಕೆ ಗಂಡು ಹೆಣ್ಣೆಂಬ ಬೇಧವಿಲ್ಲ. ಇನ್ನೊಂದು ಅಧ್ಯಯನದ ಪ್ರಕಾರ, ಈ ಪೀಳಿಗೆಯ ಮಕ್ಕಳಲ್ಲಿ ದುಡುಕುತನ ಹೆಚ್ಚು ಮತ್ತು ಆಲೋಚನಾ ಶಕ್ತಿ ಕಡಿಮೆ. ಮಾನಸಿಕ ಅಸ್ಥಿರತೆ ಹೆಚ್ಚಾಗಿ ಕಾಣುತ್ತದೆ. ದಿಢೀರ್ ಪ್ರೀತಿ, ದಿಢೀರ್ ದೇಹಸಂಬಂಧ, ರಿಸ್ಕಿ ಬಿಹೇವಿಯರ್ ಇತ್ಯಾದಿ ಇವರಿಗೆ ಒಂದು ಬಗೆಯ ಥ್ರಿಲ್ ಆಗಿ ಗೋಚರಿಸುತ್ತದೆ. “ಈ ಕ್ಷಣಕ್ಕೆ ಮನ್ನಣೆ ಬೇಕು”, “ಈಗಿನ ಆಸೆ ಈಗಲೇ ಪೂರ್ತಿ ಆಗಬೇಕು” ಎಂಬ ತಾತ್ಕಾಲಿಕ ಖುಷಿ ಬಯಸುವ ಮನಸ್ಸು, ಆಳವಾದ ಸಂಬಂಧ ಮತ್ತು ಅದರ ಸ್ಥಿರತೆಯತ್ತ ಯೋಚಿಸುವುದಾದರೂ ಹೇಗೆ?
ಈಗೀಗ ಸೋಶಿಯಲ್ ಮೀಡಿಯಾದ ಡೋಪಮೈನ್ ಸ್ಪೈಕ್ನಿಂದ ದಿಢೀರ್ ಆನಂದ ಸಿಗುತ್ತದೆ, ಆದರೆ ನೈಜ ಸಂಬಂಧಗಳಿಗೆ ಕಾರಣವಾಗುವ ಓಕ್ಸಿಟೋಸಿನ್ ಬಿಡುಗಡೆ ನಿಧಾನವಾಗುತ್ತದೆ. ಹೀಗಾದಾಗ ಸಂಬಂಧಗಳಲ್ಲಿ ಬಾಂಧವ್ಯದ ಬದಲಿಗೆ ‘attention, likes, validation’ ಎಂಬುದರ ಬಗ್ಗೆ ಹೆಚ್ಚು ಯೋಚನೆ ಮಾಡಲಾರಂಭಿಸುತ್ತಾರೆ. ಜೊತೆಗೆ ಟಿವಿ, ಮಾಧ್ಯಮ ವೆಬ್ ಸಿರೀಸ್ಗಳಲ್ಲಿ ತೋರಿಸುವ ವಿಕೃತ ಪ್ರೀತಿ, ವಿಕೃತ ಶೃಂಗಾರ ಮತ್ತು ಸೆಲೆಬ್ರಿಟಿಗಳ ಸಾಮಾನ್ಯತೆಯಿಂದ ವ್ಯತ್ಯಸ್ತವಾಗಿರುವ ಜೀವನಶೈಲಿ ಇದನ್ನೆಲ್ಲಾ ನೋಡುತ್ತಾ ಒಂದು ಬಗೆಯ ಅತಿರಂಜಿತ ಫ್ಯಾಂಟಸೀ ಆಸೆಗಳು ಸೃಷ್ಟಿಯಾಗಿ ನೈಜ ಪ್ರೀತಿ, ತಾಳ್ಮೆ, ಮೌಲ್ಯಗಳ ಬಗೆಗಿನ ಆಸಕ್ತಿ ಇಲ್ಲವಾಗುತ್ತಿದೆ.
ಪೋಷಕರ ಪೋಷಣಾ ವೈಫಲ್ಯ
ಒಂದು ಕಡೆ ಅತಿಮುದ್ದು, ಇನ್ನೊಂದು ಕಡೆ ಭಾವನಾತ್ಮಕ ಆಸರೆಯ ಕೊರತೆ ಎರಡು ಕೂಡ ಮಕ್ಕಳಲ್ಲಿ ತಾಳ್ಮೆ, ಅಕ್ಕರೆ ಹಾಗೂ ಹಠ ಇವುಗಳ ನಡುವಿನ ವ್ಯತ್ಯಾಸವನ್ನು ಮಸುಕಾಗಿಸುತ್ತದೆ. ಬಯಸಿದ್ದೆಲ್ಲಾ ತನಗೆ ಮಾತ್ರ ಬೇಕು, ಅದೂ ಈಗಲೇ ಎಂಬ ಮನೋಭಾವ ಅತಿಯಾಗಿ ಮುದ್ದಿಸುವ ಪೋಷಕತ್ವದಿಂದಲೇ ಆರಂಭವಾಗುತ್ತದೆ. ಈಗೀಗ ಮಕ್ಕಳಿಗೆ ಅವರಿಗೆ ಬೇಕು ಎಂದ ವಸ್ತುಗಳು ಸಿಗುತ್ತದಾದರೂ ನಿಜವಾಗಿ ಬೇಕಾದ ಪೋಷಕರು ನೀಡುವ ಸಮಯ, ಅಕ್ಕರೆ, ಅವರಿಂದ ಬರಬೇಕಾದ ಮಾನವೀಯ ಮೌಲ್ಯಗಳು ಸಿಗುತ್ತಿಲ್ಲ.
ಜನ್ಮಸಹಜ ವ್ಯಕ್ತಿತ್ವ ಹಾಗೂ ಅದಕ್ಕೆ ತಕ್ಕ ಮಾರ್ಗದರ್ಶನ ಇಲ್ಲದ ಬೆಳವಣಿಗೆ ಇಂದಿನ ಪೀಳಿಗೆಯನ್ನು ದಾರಿ ತಪ್ಪಿಸುವ ಕಾರಣಗಳಲ್ಲಿ ಒಂದೆಂದರೆ ತಪ್ಪಲ್ಲ. ಬಹುತೇಕವಾಗಿ ಮೊಬೈಲ್ ನೋಡುತ್ತಾ ಬೆಳೆದ ಮಕ್ಕಳಲ್ಲಿ ಅಟೆನ್ಷನ್ ಡಿಫಿಸಿಟ್ ಹೈಪರಾಕ್ಟೀವ್ ಡಿಸ್ಆರ್ಡರ್(ADHD), ಆಪೋಸಿಶನಲ್ ಡಿಫಿಯೆಂಟ್ ಡಿಸ್ಆರ್ಡರ್(ODD) ಅಥವಾ ಆಂಟಿ ಸೋಶಿಯಲ್ ಪರ್ಸನಾಲಿಟಿ(ASP) ಹೆಚ್ಚಾಗಿ ಕಂಡುಬರುತ್ತಿವೆ.
ಅಂಥ ಮಕ್ಕಳಿಗೆ ಪೋಷಕರ ಹಾಗೂ ಮನೋತಜ್ಞರ ಸ್ಪಷ್ಟ ಮಾರ್ಗದರ್ಶನ ಇಲ್ಲದಿದ್ದರೆ ಅಪಾಯಕಾರಿ ಪ್ರವೃತ್ತಿಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹೀಗಾದಾಗ ಅವರು ಮೋಸ ಮಾಡುವುದು, ದುಡುಕುತನ ಪ್ರದರ್ಶಿಸುವುದು, ಆಕ್ರಮಣಕಾರಿ, ಕ್ರೌರ್ಯ ಪ್ರವೃತ್ತಿಗಿಳಿಯುವುದು ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳಬಹುದು. ADHD, ODD, ASP ಅಥವಾ ನಾರ್ಸಿಸಿಸಮ್ ಇದ್ದಲ್ಲಿ ಸೈಕಾಲಜಿಕಲ್ Counseling ಕೊಡಿಸುವುದು ಒಳ್ಳೆಯದು.
ಒಂದು ಅಧ್ಯಯನದ ಪ್ರಕಾರ ಮೊಬೈಲ್ನಲ್ಲಿ ಬಹುಕಾಲ ಕಳೆಯುವ ಹೆಣ್ಣುಮಕ್ಕಳಲ್ಲಿ ಆಕ್ಸಿಟೋಸಿನ್ ಬಿಡುಗಡೆ ಕಡಿಮೆಯಾಗಿ, ಇನ್ನೊಬ್ಬರೊಡನೆ ಹೊಂದಿಕೊಂಡು ಬದುಕುವ ಬಾಂಡಿಂಗ್ ನಶಿಸುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವ ಜನರಲ್ಲಿ ‘ನಾರ್ಸಿಸಿಸಮ್ ಟ್ರಾಪ್’ ಅಂದರೆ ಲೈಕ್, ಕಾಮೆಂಟ್ ಇತ್ಯಾದಿಗಳ ವ್ಯಾಲಿಡೇಶನ್ ಬಲೆಗೆ ಬೀಳುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ವಾಸ್ತವ ಪ್ರಪಂಚದಲ್ಲಿ ಇರುವವರೊಡನೆ ಸಂಪರ್ಕ ಕಡಿದುಕೊಳ್ಳುತ್ತಾರೆ.
ಪ್ರತಿಯೊಬ್ಬರಲ್ಲಿಯೂ ಮಾರಲ್ ಬ್ರೈನ್(ventromedial prefrontal cortex) ಎಂಬುದಿರುತ್ತದೆ. ಅದನ್ನೇ ಆತ್ಮಸಾಕ್ಷಿ ಎನ್ನುತ್ತೇವೆ. ಅದು ಚಿಕ್ಕಂದಿನಲ್ಲಿ ತೋರುವ ನಿರ್ಲಕ್ಷ್ಯ, ಅತೀವ ಡಿಜಿಟಲ್ ಉಪಕರಣಗಳ ಬಳಕೆ, ಮಾನಸಿಕ ಒತ್ತಡ ಮುಂತಾದವುಗಳಿಂದ ಮುಚ್ಚಿಹೋಗುವ ಸಾಧ್ಯತೆಗಳಿರುತ್ತದೆ. ಅದನ್ನು ತಡೆಯಲು ಮಕ್ಕಳಿಗೆ ಚಿಕ್ಕಂದಿನಿಂದಲೇ ಅಗತ್ಯವಿದ್ದಾಗ ಮಾತ್ರ ಡಿಜಿಟಲ್ ಸ್ರ್ಕೀನ್ ನೋಡಲು ಸಮಯ ನೀಡಬೇಕು. ಅದು ಅನಿವಾರ್ಯ ಕಾರ್ಯವಲ್ಲ ಎಂಬ ಮನಸ್ಥಿತಿಯನ್ನು ತರಿಸಬೇಕು. ಇದರಿಂದ ಡೋಪಮೈನ್ ತನ್ನ ಸಹಜ ಸ್ಥಿತಿಗೆ ಬರುತ್ತದೆ ಮತ್ತು ಓಕ್ಸಿಟೋಸಿನ್ ಮತ್ತೆ ಯಥಾಸ್ಥಿತಿಗೆ ಮರಳುತ್ತದೆ. ಪೋಷಕತ್ವ ಎಂದರೆ ಕೇಳಿದ್ದೆಲ್ಲಾ ಕೊಡಿಸುವುದಲ್ಲ ಅಥವಾ ತೀರಾ ಭೀತಿ ಇಟ್ಟು ಬೆಳೆಸುವುದೂ ಅಲ್ಲವಲ್ಲವೇ?. ಇವೆರೆಡರ ನಡುವಿನ ಹೊಣೆಗಾರಿಕೆ. ಮಕ್ಕಳಿಗೆ ಏನೇ ಕೊಡಿಸುವ ಮುನ್ನ ಕೊಂಚ ಕಾಯುವ ಗುಣ ಕಲಿಸಿ ನಂತರ ಕೊಡಿಸಿದರೆ ನಮಗೂ ಸದವಕಾಶ, ಅವರಿಗೂ ಉತ್ತಮ.
ಮದುವೆಗೆ ಅವಸರವಿರದಿರಲಿ
ಬೆಳೆದ ಮಕ್ಕಳನ್ನು ಮದುವೆ ಮಾಡಿಕೊಡುವಾಗ ಮಗನಿಗೆ /ಮಗಳಿಗೆ ತಾವು ನೋಡಿದ ಸಂಬಂಧ ಇಷ್ಟ ಇದೆಯೇ, ಇಲ್ಲವಾದರೂ ಮುಂದೆ ಹೊಂದಿಕೊಳ್ಳುತ್ತಾರೆ ಎಂದುಕೊಂಡು ಬಲವಂತವಾಗಿ ಮದುವೆ ಮಾಡಿಬಿಡುವುದು ಪೋಷಕರ ದುಡುಕಿನ ನಿರ್ಧಾರವೇ ಸರಿ. ಪರಸ್ಪರ ಒಪ್ಪಿದರೂ ಮದುವೆ ಮಾಡಿಕೊಡುವಾಗ ತಾಳ್ಮೆ, ಸಹನೆ, ಹೊಂದಾಣಿಕೆಯ ಬಗ್ಗೆ ಅವರಲ್ಲಿ ಎಷ್ಟು ಮಟ್ಟಿಗಿನ ಅರಿವು ಇದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಹಿಂದೂಧರ್ಮದ ಮದುವೆಯಲ್ಲಾದರೆ ಸಂಸ್ಕೃತದ ಶ್ಲೋಕಗಳ ಅರ್ಥವನ್ನು ವಿವರಣೆ ಸಮೇತ ತಿಳಿಸುವುದು ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ. ಮದುವೆಯ ಪದ್ಧತಿಯಲ್ಲಿನ ಪ್ರತೀ ಆಚರಣೆಯಲ್ಲೂ, ಮಂತ್ರದಲ್ಲೂ, ಸಹಬಾಳ್ವೆ – ಸಾಮರಸ್ಯ – ಹೊಂದಾಣಿಕೆಯ ಬಗ್ಗೆ ವಿವರಗಳಿವೆ. ಅದನ್ನು ತಿಳಿದು ಮದುವೆಯಾಗುವವರು ಅತಿವಿರಳ.
ಮದುವೆ ಇಷ್ಟವಿಲ್ಲದಿದ್ದರೆ ಹೇಳಿಬಿಡುವುದು ಒಳಿತು. ಅಲ್ಲಿ ಕೆಟ್ಟವರಾಗುವುದು ಇನ್ನೊಬ್ಬರನ್ನು ಜೀವನವಿಡೀ ಕಾಡಿಸುವುದು ಅಥವಾ ಸಾಯಿಸುವುದಕ್ಕಿಂತ ಉತ್ತಮ. ಇನ್ನು ಮಾತಾಡದೇ ಇರುವುದು, ಅವಾಯ್ಡ್ ಮಾಡುವುದು, ಬಲವಂತದ ನಗೆನಗುವುದು, ನಿಮ್ಮೊಂದಿಗೆ ಮಾತ್ರ ತೀರಾ ಚುಟುಕು ಮಾತಾಡುವುದು, ಹೊರಗೆ ಬರಲು ಆಸಕ್ತಿ ತೋರಿಸದೇ ಇರುವುದು, ಬಂದರೂ ಬೇರಾವುದೋ ಲೋಕದಲ್ಲಿ ಇರುವಂತೆ ಇರುವುದು ಇತ್ಯಾದಿ ಗುಣಗಳಿರುವ ರೆಡ್ಫ್ಲಾಗ್ ವ್ಯಕ್ತಿಗಳಿಂದ ದೂರವಿರುವುದೇ ಲೇಸು.
ಪರಿಹಾರವೇನಿದೆ?
ಪೋಷಕರು, ಶಿಕ್ಷಣ ನೀಡುವ ಶಾಲೆಗಳು, ಸಾಮಾಜಿಕ ಮಾಧ್ಯಮ ಇವೆಲ್ಲಾ ಒಟ್ಟಾಗಿ ಸಮಾಜದ ತಳಹದಿಯಿಂದ ಬದಲಾವಣೆ ತಂದರೆ ಮಾತ್ರವೇ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಮನೆ, ಶಾಲೆ, ಮಾಧ್ಯಮ ಈ ಮೂರೂ ಒಟ್ಟಾಗಿ ಒಂದು ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಬೇಕಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಭಾವನಾತ್ಮಕ ಅನುಬಂಧದ ಅಭ್ಯಾಸ ಮಾಡಿಸಬೇಕಿದೆ. ಇತರರ ಕಷ್ಟಗಳನ್ನು ಅರಿವ ಮನಸ್ಸು ಬೆಳೆಸಬೇಕಿದೆ. ತನ್ನ ಭಾವನೆಗಳನ್ನು ಹೇಗೆ ನಿರ್ವಹಿಸುವುದು ಎಂಬುದನ್ನೂ ಕಲಿಸುವ ಅವಶ್ಯಕತೆಯಿದೆ. ಸಂಬಂಧಗಳ ಪ್ರಾಮುಖ್ಯತೆ, ಅದನ್ನು ನಿಭಾಯಿಸುವ ಧೈರ್ಯ, ಸಮಸ್ಯೆಯಿಂದ ಹೆದರಿ ಓಡಿಹೋಗುವುದು ಪರಿಹಾರವಲ್ಲ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಬೇಕಾಗಿದೆ.
ಪ್ರತಿಯೊಬ್ಬರೊಳಗೂ ಒಂದು ಕರಾಳ ಮುಖ ಇದ್ದೇ ಇರುತ್ತದೆ. ಆದರೆ ಅದನ್ನು ನಿಯಂತ್ರಿಸಲು ಯಾರು ಶಕ್ತರೋ ಅವರು ಮನುಷ್ಯರಾಗುತ್ತಾರೆ. ನಿಯಂತ್ರಣವನ್ನು ಕಳೆದುಕೊಂಡವರು ರಾಕ್ಷಸರಾಗುತ್ತಾರೆ. ಮನುಷ್ಯನಾಗುವುದು ಮತ್ತು ಇತರರನ್ನೂ ಮನುಷ್ಯರಾಗಿ ಬದುಕಲು ಬಿಡುವುದು ನಮ್ಮಿಂದಲೇ ಆರಂಭವಾಗುತ್ತದೆ.
ಹಳೆಯದೆಲ್ಲವೂ ಹಳಿಯುವಂತಹುದಲ್ಲ
ಕೂಡು ಕುಟುಂಬ ಇಲ್ಲವಾದರೂ, ಒಂದೇ ಮಗುವಾದರೂ ಆ ಮಗುವಿಗೆ ಸಹಕಾರ ಮನೋಭಾವ, ಹೊಂದಿಕೊಂಡು ಹೋಗುವ ಗುಣ, ಸವಾಲುಗಳನ್ನು ಧನಾತ್ಮಕವಾಗಿ ಎದುರಿಸುವ ಗುಣಗಳನ್ನು ಕಲಿಸಬೇಕು.
ಮಕ್ಕಳನ್ನು ಮೊಬೈಲ್ ಗೇಮ್ನಿಂದ ಹೊರಗಡೆ ತಂದು ಗುಂಪು ಕ್ರೀಡೆ ಆಡಲು ಹೆಚ್ಚು ಪ್ರೋತ್ಸಾಹಿಸಬೇಕು.
ಸೋಶಿಯಲ್ ಮೀಡಿಯಾ ಪ್ರಪಂಚದಿಂದ ವಾಸ್ತವ ಪ್ರಪಂಚಕ್ಕೆ ಕರೆತರಬೇಕು.
ಹಳೆಯದೆಲ್ಲಾ ಹಳಿಯುವಂತಹುದಲ್ಲ. ಅವು ಚಿನ್ನವೂ ಆಗಿರಬಹುದು. ಆದ್ದರಿಂದ ಹಿಂದಿನ ಪೀಳಿಗೆ ಹೇಳಿದ್ದ ಉತ್ತಮ ವಿಚಾರಗಳನ್ನು ಆಯ್ದುಕೊಂಡು ಮೈಗೂಡಿಸಿಕೊಳ್ಳಬೇಕು. ಭಗವದ್ಗೀತೆ, ರಾಮಾಯಣ, ಮಹಾಭಾರತದಂತಹ ಗ್ರಂಥಗಳ ಪಾತ್ರಗಳು, ಕಥೆಗಳ ಅರಿವನ್ನು ಮೂಡಿಸಬೇಕು. ಇನ್ನು ಮಕ್ಕಳು ನೋಡುವ ರೀಲ್, ಸಿನಿಮಾ, ಯುಟ್ಯೂಬ್ಗಳು ಯಾವ ಬಗೆಯದು ಎಂದು ಗಮನಿಸಿ ಸರಿಯಾದ ಮಾರ್ಗದರ್ಶನ ನೀಡುವುದು ಮುಖ್ಯ. ಮಗನಾಗಲೀ ಮಗಳಾಗಲೀ ಅವರಲ್ಲಿ ಹಿಂಸಾತ್ಮಕ ಅಥವಾ ಸಮಾಜಘಾತುಕ ವರ್ತನೆ ಇದ್ದಕ್ಕಿದ್ದಂತೆ ಬಂದುಬಿಡುವುದಿಲ್ಲ. ಅವರ ವರ್ತನೆಯಲ್ಲಿ ಏರುಪೇರುಗಳಿದ್ದಾಗ ಮುಚ್ಚಿಡದೇ, ಸಮರ್ಥಿಸದೇ ಅದನ್ನು ತಿದ್ದುವುದರತ್ತ ಗಮನ ಕೊಟ್ಟರೆ ಎಷ್ಟೋ ಸಮಸ್ಯೆಗಳು ಮೂಲದಲ್ಲೇ ಪರಿಹಾರ ಕಾಣುತ್ತವೆ.
ಸಂಬಂಧಗಳ ಸುಳಿಗೆ ಜೀವಶಾಸ್ತ್ರದ ನೆಪವೇಕೆ? ಕೊಲೆ ಮತ್ತು ಕೌಟುಂಬಿಕ ಹಿಂಸೆಯ ಹಿಂದಿನ ಕಹಿಸತ್ಯ
- ಡಾ. ಪುಣ್ಯವತಿ ಸಿ. ನಾಗರಾಜ್, ಲ್ಯಾಪರೋಸ್ಕೋಪಿಕ್ ಸರ್ಜನ್
ಮದುವೆಯಾಗಬೇಕಿದ್ದ ಹುಡುಗಿ ನಿಶ್ಚಿತ ವರನನ್ನು ಕೊಂದಳು, ಗಂಡ ಹೆಂಡತಿಯನ್ನು ಮುಗಿಸಿದ… ಇತ್ತೀಚಿನ ದಿನಗಳಲ್ಲಿ ಇಂಥ ಸುದ್ದಿಗಳು ಮಾಧ್ಯಮಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಇವೆಲ್ಲ ನೋಡಿದಾಗ ಜನ ಆಡುವ ಮಾತುಗಳೇನು ಗೊತ್ತಾ? “ಈಗಿನ ಹುಡುಗಿಯರಿಗೆ ಮೂಡ್ಸ್ವಿಂಗ್ಸ್ ಜಾಸ್ತಿ”, “ಹಾರ್ಮೋನ್ಸ್ ಬ್ಯಾಲೆನ್ಸ್ ತಪ್ಪಿ ಹೀಗಾಗುತ್ತಿದೆ”, ಇಲ್ಲವೇ “ಪ್ರೌಢಾವಸ್ಥೆಯ ಹದಿಹರೆಯದ ರಕ್ತ, ಅದಕ್ಕೆ ಹಿಂಸೆಗಿಳಿದಿದ್ದಾರೆ”. ಆದರೆ ನಿಜ ಹೇಳಬೇಕೆಂದರೆ, ಇಂಥ ಕ್ರೂರ ಅಪರಾಧಗಳಿಗೂ ಹಾರ್ಮೋನುಗಳಿಗೂ ಅಥವಾ ಹುಡುಗಿಯರ ಸಹಜ ದೈಹಿಕ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತದೆ ವಿಜ್ಞಾನ ಮತ್ತು ಅಪರಾಧಶಾಸ್ತ್ರ. ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವ ಸಂಗಾತಿಯನ್ನು ಕೊಲ್ಲಲು ಬಯಸುತ್ತಾನೆ ಎಂದರೆ ಅದರ ಹಿಂದೆ ಹಠಾತ್ ದೈಹಿಕ ಬದಲಾವಣೆ ಇರುವುದಿಲ್ಲ. ಬದಲಿಗೆ, ಮನಸ್ಸಿನ ವಿಕೃತಿ ಮತ್ತು ಸಂಬಂಧಗಳೊಳಗಿನ ಬಿರುಕು ಕಾರಣವಾಗಿರುತ್ತದೆ. ಹಾಗಾದರೆ, ಈ ಘೋರ ಅಪರಾಧಗಳ ಹಿಂದೆ ಅಡಗಿರುವ ಅಸಲಿ ಮುಖಗಳಾದರೂ ಯಾವುವು? ಸಂಶೋಧಕರು ಮುನ್ನೆಲೆಗೆ ತರುವ ಕೆಲವು ಕಟುಸತ್ಯಗಳು ಇಲ್ಲಿವೆ.
ಅತಿಯಾದ ನಿರೀಕ್ಷೆ ಮತ್ತು ವಾಸ್ತವದ ಆಘಾತ
ಹೊಸದಾಗಿ ಮದುವೆಯಾದಾಗ ಅಥವಾ ನಿಶ್ಚಿತಾರ್ಥವಾದಾಗ ಎಲ್ಲವೂ ರಂಗುರಂಗಾಗಿ ಕಾಣುತ್ತದೆ. ಆದರೆ ದಿನ ಕಳೆದಂತೆ ಜವಾಬ್ದಾರಿಗಳು ಹೆಗಲೇರುತ್ತವೆ. ಹಣಕಾಸಿನ ಸಮಸ್ಯೆ, ಅತ್ತೆ – ಮಾವಂದಿರ ಹಸ್ತಕ್ಷೇಪ, ವೃತ್ತಿಜೀವನದಲ್ಲಿ ಬದಲಾವಣೆ ಅಥವಾ ಪರಸ್ಪರರ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ನಿರಾಸೆ ಶುರುವಾಗುತ್ತದೆ. ಈ ನಿರಾಸೆಯನ್ನು ಪ್ರಬುದ್ಧವಾಗಿ ನಿಭಾಯಿಸಲು ತಿಳಿಯದ ವ್ಯಕ್ತಿಗಳು ವಿಪರೀತ ಕೋಪ ಅಥವಾ ಹಿಂಸೆಯ ದಾರಿ ಹಿಡಿಯುತ್ತಾರೆ. ಇದು ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಯೇ ಹೊರತು ಹಾರ್ಮೋನ್ಗಳ ಆಟವಲ್ಲ.
ಪ್ರೀತಿಯ ಹೆಸರಿನಲ್ಲಿ ಕಣ್ಗಾವಲು ಮತ್ತು ಮಾಲಿಕತ್ವದ ಮನಸ್ಥಿತಿ
ಅಪರಾಧ ಜಗತ್ತಿನ ಇತಿಹಾಸವನ್ನು ಕೆದಕಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಸಾಮಾನ್ಯ ಜಗಳಗಳು ಕೊಲೆಯಲ್ಲಿ ಕೊನೆಗೊಳ್ಳುವುದಿಲ್ಲ. ಆದರೆ, ಎಲ್ಲಿ ಸಂಗಾತಿಯನ್ನು ತನ್ನ ‘ಆಸ್ತಿ’ ಎಂದು ಭಾವಿಸುವ ಮನಸ್ಥಿತಿ ಇರುತ್ತದೋ ಅಲ್ಲಿ ಅಪಾಯ ಹೆಚ್ಚು. ಸಂಗಾತಿಯ ಪ್ರತಿ ಹೆಜ್ಜೆಯ ಮೇಲೂ ಕಣ್ಗಾವಲು ಇಡುವುದು, ಅತಿಯಾದ ಅಸೂಯೆ ಮತ್ತು ಸಂಶಯ, ಮಾತಿನಲ್ಲೇ ಅವಮಾನಿಸುವುದು, ಬೆದರಿಕೆ ಹಾಕುವುದು, ಎಲ್ಲಕ್ಕಿಂತ ಮುಖ್ಯವಾಗಿ, ಯಾರಾದರೂ ತನ್ನನ್ನು ‘ರಿಜೆಕ್ಟ್’ (ತಿರಸ್ಕಾರ) ಮಾಡಿದ್ದನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಇರುವುದು – ಇವೇ ಕೊಲೆಗೆ ಪ್ರಮುಖ ಪ್ರೇರಣೆಗಳು.
ಬೇರ್ಪಡುವಿಕೆಯ ಭಯ: ಅತ್ಯಂತ ಅಪಾಯಕಾರಿ ಘಟ್ಟ
ಅಪರಾಧಶಾಸ್ತ್ರದಲ್ಲಿ ಒಂದು ಆಶ್ಚರ್ಯಕರ ವಿಷಯವಿದೆ. ಸಂಬಂಧಗಳ ನಡುವೆ ಹಿಂಸೆ ತಾರಕಕ್ಕೇರುವುದು ಯಾವಾಗ ಗೊತ್ತಾ? ಒಬ್ಬರು ಆ ಸಂಬಂಧದಿಂದ ಹೊರಬರಲು ನಿರ್ಧರಿಸಿದಾಗ. ನಿಶ್ಚಿತಾರ್ಥ ಮುರಿದುಬಿದ್ದಾಗ ಅಥವಾ ವಿಚ್ಛೇದನದ ಮಾತು ಬಂದಾಗ, ಎದುರಿಗಿರುವ ವ್ಯಕ್ತಿಗೆ ತನ್ನ ಅಧಿಕಾರ ಕೈತಪ್ಪಿ ಹೋಗುತ್ತಿದೆ ಎಂಬ ಅಹಂ ಕಚಗುಳಿ ಇಡುತ್ತದೆ. ಕಳೆದುಕೊಳ್ಳುವ ಭೀತಿಯಲ್ಲಿ ಅವರು ಕ್ರೂರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ಇದ್ದಕ್ಕಿದ್ದಂತೆ ಯಾರೂ ಕೊಲೆಗಾರರಾಗುವುದಿಲ್ಲ!
ಸುದ್ದಿಗಳಲ್ಲಿ ನೋಡುವಾಗ “ಎಲ್ಲವೂ ಚೆನ್ನಾಗಿತ್ತು, ಇದ್ದಕ್ಕಿದ್ದಂತೆ ಹೀಗಾಯಿತು” ಎಂದು ಅನಿಸಬಹುದು. ಆದರೆ ವಾಸ್ತವ ಹಾಗಿರುವುದಿಲ್ಲ. ಇಂಥ ಬಹುತೇಕ ಹತ್ಯೆಗಳ ಹಿಂದೆ ದೊಡ್ಡದೊಂದು ಇತಿಹಾಸವಿರುತ್ತದೆ. ಈ ಹಿಂದೆಯೇ ನಡೆದ ಸಣ್ಣಪುಟ್ಟ ದೈಹಿಕ ದೌರ್ಜನ್ಯಗಳು, ಆಯುಧ ತೋರಿಸಿ ಹೆದರಿಸಿದ್ದು, ನಿರಂತರವಾಗಿ ಬ್ಲಾಕ್ಮೇಲ್ ಮಾಡಿದ್ದು ಅಥವಾ ತೀವ್ರವಾಗಿ ನಿಯಂತ್ರಿಸಲು ಯತ್ನಿಸಿದ ಘಟನೆಗಳು ನಡೆದೇ ಇರುತ್ತವೆ. ಈ ಹಿಂದಿನ ಹಿಂಸಾಚಾರವೇ ಮುಂದೆ ದೊಡ್ಡ ದುರಂತಕ್ಕೆ ಮುನ್ಸೂಚನೆಯಾಗಿರುತ್ತದೆ.
ಮಾನಸಿಕ ಕಾಯಿಲೆ ಮತ್ತು ಅಪರಾಧ ಪ್ರವೃತ್ತಿ ಬೇರೆ ಬೇರೆ
ಇಂಥ ಘಟನೆ ನಡೆದ ತಕ್ಷಣ “ಅವನಿಗೆ/ಅವಳಿಗೆ ಹುಚ್ಚು ಹಿಡಿದಿತ್ತೇನೋ” ಎಂದು ಸಬೂಬು ನೀಡುತ್ತೇವೆ. ಆದರೆ ಫೋರೆನ್ಸಿಕ್ ಸೈಕಿಯಾಟ್ರಿ ಇದನ್ನು ಒಪ್ಪುವುದಿಲ್ಲ. ಮಾನಸಿಕ ಕಾಯಿಲೆ (Psychosis) ಬೇರೆ, ಕ್ರಿಮಿನಲ್ ಬುದ್ಧಿಯೇ ಬೇರೆ. ಮಾನಸಿಕ ಅಸ್ವಸ್ಥತೆ ಇರುವ ಶೇ.90ಕ್ಕೂ ಹೆಚ್ಚು ಜನರು ಹಿಂಸಾಪ್ರವೃತ್ತಿ ಉಳ್ಳವರಲ್ಲ. ಆದರೆ ಕೊಲೆ ಮಾಡುವವರಲ್ಲಿ ಕೋಪ, ಸೇಡು, ಹಣದ ಆಸೆ, ವಂಚನೆ ಮತ್ತು ಅಹಂಕಾರದಂತಹ ಗುಣಗಳಿರುತ್ತವೆಯೇ ಹೊರತು ಕೇವಲ ಹುಚ್ಚುತನವಲ್ಲ.
ಮಾಧ್ಯಮಗಳು ಸೃಷ್ಟಿಸುವ ಭ್ರಮೆ
“ಕಾಲ ಕೆಟ್ಟುಹೋಗಿದೆ, ಎಲ್ಲೆಡೆ ಹೀಗೆಯೇ ನಡೆಯುತ್ತಿದೆ” ಎಂಬ ಆತಂಕ ಸಮಾಜದಲ್ಲಿ ಮೂಡಲು ಮಾಧ್ಯಮಗಳೂ ಕಾರಣ. ಇತ್ತೀಚೆಗೆ ಮದುವೆಯಾದವರ ಅಥವಾ ಸಮಾಜಕ್ಕೆ ಆಘಾತ ನೀಡುವ ಅಪರೂಪದ ಪ್ರಕರಣಗಳನ್ನು ಮೀಡಿಯಾಗಳು ದಿನಗಟ್ಟಲೆ ವೈಭವೀಕರಿಸುತ್ತವೆ. ಇದು ಜನರಲ್ಲಿ ಇಂದಿನ ತಲೆಮಾರಿನ ಯುವಕ-ಯುವತಿಯರಲ್ಲಿ ಏನೋ ದೊಡ್ಡ ಜೈವಿಕ ಬದಲಾವಣೆಯಾಗಿದೆ ಎಂಬ ತಪ್ಪು ಕಲ್ಪನೆ ಮೂಡಿಸುತ್ತದೆ. ಆದರೆ, ಅಂಕಿ-ಅಂಶಗಳನ್ನು ನೋಡಿದರೆ ಇವು ಸಮಾಜದ ಶೇ.1ರಷ್ಟು ಜನರ ವಿಕೃತ ಮನಸ್ಥಿತಿಯಷ್ಟೇ ಹೊರತು ಇಡೀ ತಲೆಮಾರಿನ ಕಥೆಯಲ್ಲ.
