ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-50
ತುರ್ತು ಪರಿಸ್ಥಿತಿಯ ನಂತರ ಮಾರ್ಚ್ 24, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ
ಮೀಸಾ ಯೂನಿವರ್ಸಿಟಿ, ಹಿಂಡಲಗಾ-1
[ತುರ್ತು ಪರಿಸ್ಥಿತಿಯ ಕಾಲದಲ್ಲಿ ಮೀಸಾದನ್ವಯ ಬಂಧಿಸಲ್ಪಟ್ಟ ಕರ್ನಾಟಕದ ರಾಜಕೀಯ ಬಂದಿಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರೇ ಹೆಚ್ಚು. ಇವರನ್ನೆಲ್ಲ ಬೆಂಗಳೂರು, ಬಳ್ಳಾರಿ, ಗುಲಬರ್ಗಾ ಮತ್ತು ಬೆಳಗಾವಿಗಳ ಕೇಂದ್ರ ಕಾರಾಗೃಹಗಳಲ್ಲಿರಿಸಿದ್ದರು. ಬೆಳಗಾವಿಯ ‘ಹಿಂಡಲಗಾ’ ಜೈಲಿನಲ್ಲಿ ಬೆಳಗಿನಿಂದ ರಾತ್ರಿ ಮಲಗುವವರೆಗೆ ಕೆಲವು ನಿಶ್ಚಿತ ಸಮಯಗಳಲ್ಲಿ ಆಗತಕ್ಕ ಕಾರ್ಯಕ್ರಮಗಳ ಹೊರತಾಗಿ ಬೇರೆ ಬೇರೆ ವಿಷಯಗಳಲ್ಲಿ ವರ್ಗಗಳು ನಡೆಯುತ್ತಿದ್ದವು. ಜ್ಯೋತಿಷ್ಯ, ಹಸ್ತ ಸಾಮುದ್ರಿಕ, ಶೀಘ್ರಲಿಪಿ, ಹಿಂದಿ, ಕನ್ನಡ, ಸಂಸ್ಕೃತ, ಉರ್ದು, ಭಗವದ್ಗೀತಾ, ಕುರಾನ್ ಮುುಂತಾದವುಗಳು. ಇವಲ್ಲದೇ ಶಾರೀರಿಕ ಕಾರ್ಯಗಳು – ಯೋಗಾಭ್ಯಾಸ, ಬೇರೆ ಬೇರೆ ಆಟಪಾಟಗಳು, ಅವುಗಳಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದವು. ಈ ಎಲ್ಲ ಕಾರ್ಯಕ್ರಮಗಳನ್ನು ನೋಡಿ ಒಬ್ಬರು ‘ಮೀಸಾ ಯೂನಿವರ್ಸಿಟಿ, ಹಿಂಡಲಗಾ’ ಎಂದು ಹೆಸರು ಇಟ್ಟೇ ಬಿಟ್ಟರು!. ಅದರ ಸಂಕ್ಷಿಪ್ತ ವರದಿ ಇಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ. ಮೊದಲು ಜ್ಯೋತಿಷ್ಯ ವರ್ಗದ ಕುರಿತು ಈ ಲೇಖನ.]
ಸಂಘದ ಧಾರವಾಡ ಜಿಲ್ಲಾ ಸಂಘಚಾಲಕ ಮಾ. ನಾರಾಯಣರಾಯರು ಬಳ್ಳಾರಿಯಿಂದ 1976ರ ಜೂನ್ನಲ್ಲಿ ಜ್ಯೋತಿಷ್ಯಗೆ ಬಂದರು. ಜ್ಯೋತಿಷಶಾಸ್ತ್ರದ ವಿಶೇಷ ಅಭ್ಯಾಸ ಮಾಡಿದ್ದರು; ಮಾಡುತ್ತಿದ್ದರು. ಅದಕ್ಕೆ ಸಂಬಂಧಪಟ್ಟ ‘ಭೃಗುಸಂಹಿತೆ’ ಮೊದಲಾದ ಅನೇಕ ಗ್ರಂಥಗಳನ್ನೂ ಪಂಚಾಂಗಗಳನ್ನೂ ಸಂಗ್ರಹಿಸಿದ್ದರು. ಅನೇಕ ಮೀಸಾ ವಾಸಿಗಳು ತಮ್ಮ ತಮ್ಮ ಜಾತಕ ತೋರಿಸಿ ಅವರ ಕಡೆ ಫಲ ಕೇಳುತ್ತಿದ್ದರು. ಬಂದವರಿಗೆ ಬಹು ಪ್ರೀತಿಯಿಂದ ಎಲ್ಲ ಗ್ರಹಗತಿಗಳ ವಿವರ ಹೇಳಿ ಫಲ ಹೇಳುತ್ತಿದ್ದರು. ಅವರಿಗೆ ವಿಶ್ರಾಂತಿಯೇ ಇರಲಿಲ್ಲವೆಂದರೂ ಅಡ್ಡಿಯಿಲ್ಲ. ಸಾಮಾನ್ಯ ದೇಶದ ಪರಿಸ್ಥಿತಿ ಬಗ್ಗೆ – ಅದರಲ್ಲೂ ನಮ್ಮೆಲ್ಲರ ಬಿಡುಗಡೆ ಎಂದು? ಎಂದು ಕೇಳುವವರ ಸಂಖ್ಯೆ ಕಡಿಮೆ ಇರಲಿಲ್ಲ. 1976ರ ಜೂನ್ 26ಕ್ಕೆ ಬಿಡುಗಡೆಯಾಗುತ್ತದಾಗಿ ಕೆಲವರ ಭಾವನೆ. ಆದರೆ ನಾರಾಯಣರಾಯರು ಇದರ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದರು. ಕೆಲವರಿಗೆ ಧೈರ್ಯ ನೀಡಲು ಜೂನ್ ಆಖೈರ್, ಜುಲೈ ಆಖೈರ್ ಹೀಗೆಲ್ಲ ಹೇಳುತ್ತಿದ್ದರು. ಆದರೆ ಗುಟ್ಟಿನಲ್ಲಿ ಕೇಳಿದರೆ ಕೆಲವು ತಿಂಗಳು ಹೋಗಬಹುದೆನ್ನುತ್ತಿದ್ದರು. ಜೂನ್ ದಿನಾಂಕ 14ರಂದು ಸಂಜೆ 6:05ಕ್ಕೆ ಬಿತ್ತರಿಸಲ್ಪಟ್ಟ ಸಂಸ್ಕೃತ ಸುದ್ದಿಯಲ್ಲಿ (ಮೊಟ್ಟ ಮೊದಲು) ತುರ್ತುಪರಿಸ್ಥಿತಿ ಇನ್ನೂ ಒಂದು ವರ್ಷ ಅವಧಿ ಬೆಳೆಸಿದ್ದರ ಸಮಾಚಾರ ಕೇಳಿ ಅನೇಕರಿಗೆ ನಿರಾಶೆ. ಅಂಥವರಿಗೆ ನಾರಾಯಣರಾಯರು “ಜಾತಕದ ಪ್ರಕಾರ ತುರ್ತುಪರಿಸ್ಥಿತಿ ಅಲ್ಪಾವಧಿ” ಎನ್ನುತ್ತಿದ್ದರು. ಸಂಘದ ಕುಂಡಲಿ, ಬಾಳಾ ಸಾಹೇಬರ ಕುಂಡಲಿ, ಇಂದಿರಾ ಗಾಂಧಿಯವರ ಕುಂಡಲಿ, ದೇಶ ಸ್ವತಂತ್ರವಾದ ಕಾಲಕ್ಕೆ ತಕ್ಕಂತೆ ರಚಿಸಿದ ಕುಂಡಲಿ ಇವನ್ನೆಲ್ಲ ಹಾಕಿ ಜೋಡಿಸಿ ಅದರ ಆಶಾದಾಯಕ ಫಲ ಹೇಳುತ್ತಿದ್ದರು.
ಈ ವಾತಾವರಣದಲ್ಲೇ ಕೆಲವು ಮೀಸಾ ಬಂದಿಗಳಿಗೆ ತಾವೂ ಜ್ಯೋತಿಷಶಾಸ್ತ್ರ ಕಲಿಯಬೇಕೆನಿಸಿತು. ಆ ವರ್ಗದ ಯೋಜನೆ ತಯಾರಾಯಿತು. ನಾರಾಯಣರಾಯರು 60 ದಿನಗಳ ಅಭ್ಯಾಸ ಕ್ರಮ ತಯಾರಿಸಿದರು. ಪುತ್ತೂರಿನ ಅಡ್ವಕೇಟ್ ಬಿ. ಪುರಂದರ ಭಟ್ಟರು (ಹಸ್ತ ಸಾಮುದ್ರಿಕ ಶಾಸ್ತ್ರಾಭ್ಯಾಸಿಗಳು) ನಾರಾಯಣರಾಯರಿಗೆ ನೆರವು ನೀಡಿದರು. ಬೆಳಗಿನ 9:30ರಿಂದ 10:30ರವರೆಗೆ ಜ್ಯೋತಿಷ ಪಾಠ 1976ರ ಆಗಸ್ಟ್ ನಲ್ಲಿ ಪ್ರಾರಂಭವಾಯಿತು. ವಿದ್ಯಾರ್ಥಿಗಳು (ಸುಮಾರು 18) ಬಲು ನಿಷ್ಠೆಯಿಂದ ಕಲಿಯತೊಡಗಿದರು. ಪ್ರತಿನಿತ್ಯ ಹಣಕ್ಕೆ ಬೇಕಾಗುವ ಪಟಗಳನ್ನು ದಾಂಡೇಲಿಯ ಮಿಸ್ಕಿನರು ತಯಾರಿಸುತ್ತಿದ್ದರು. ಅಂತೂ ಅಕ್ಟೋಬರ್ವರೆಗೆ ಈ ವರ್ಗ ನಡೆದು ಒಂದು ತಂಡ ಮುಗಿದು ಆ ಬಳಿಕ ಇನ್ನೊಂದು ತಂಡ ತಯಾರಾಯಿತು. ಅಷ್ಟರವರೆಗೆ ನಾರಾಯಣರಾಯರ ಮಾರ್ಗದರ್ಶನದಲ್ಲಿ ವರ್ಗಗಳನ್ನು ಸ್ವತಂತ್ರವಾಗಿ ನಡೆಸಲು ಬಿ. ಪುರಂದರ ಭಟ್ಟರು, ಧಾರವಾಡದ ಅಶೋಕ ಜೋಶಿ ಮೊದಲಾದವರು ತಯಾರಾಗಿ ಬಹುಪಾಲು ಎರಡನೇ ತಂಡದ ವಿದ್ಯಾರ್ಥಿಗಳಿಗೆ ಇವರೇ ಮಾರ್ಗದರ್ಶನ ಮಾಡುತ್ತಿದ್ದರು.
ಪ್ಲೆಂಚೆಟ್ ಭವಿಷ್ಯ
ತುರ್ತುಪರಿಸ್ಥಿತಿಯ ಅವಧಿಯನ್ನು ಒಂದು ವರ್ಷ ಬೆಳೆಸಿದಾಗ್ಯೂ 19777ರಲ್ಲಿ ಚುನಾವಣೆಗಳಾಗತಕ್ಕದಿದ್ದುದರಿಂದ 1977ನೆಯ ಜೂನ್ವರೆಗೆ ತಮ್ಮನ್ನು ಸ್ಥಾನ ಬದ್ಧತೆಯಲ್ಲಿಡಲಿಕ್ಕಿಲ್ಲವಾಗಿ ಕೆಲವರು ಹೇಳಿದರೂ 1977ರಲ್ಲಿ ಚುನಾವಣೆ ನಡೆಯದೇ ಒಂದು ವರ್ಷ ಮುಂದೆಹೋಗಬಹುದೆಂದೂ 1977ರ ಜೂನ 26ರವರೆಗೆ ‘ಮಾತಾಡಂಗಿಲ್ಲ’, ‘ಮಿಸ್ಕಾಡ್ವಾಂಗಿಲ್ಲ’, ‘ಉಸ್ರಾಡ್ವಾಂಗಿಲ್ಲ’ ಎಂದು ಕೆಲವರು ಹೇಳುತ್ತಿದ್ದರು. ಕೆಲವರಿಗೆ ‘ಪ್ಲೆಂಚೆಟ್’ದಲ್ಲಿ ಶ್ರದ್ಧೆ. ಜುಲೈದಿಂದ ‘ಪ್ಲೆಂಚೆಟ್’ ಪ್ರಯೋಗಗಳು ನಡೆದವು. ಯಾರು ಪ್ಲೆಂಚೆಟ್ ಕರೆದರೂ ದಿನಾಂಕ 9-9-1976ಕ್ಕೆ ತುರ್ತುಪರಿಸ್ಥಿತಿ ರದ್ದಾಗಿ ಎಲ್ಲರ ಬಿಡುಗಡೆಯಾಗುತ್ತದೆಯಾಗಿ ಒಂದು ತಾರೀಕು ಬಂದು ಜುಲೈ-ಆಗಸ್ಟ್ ನಲ್ಲಿ ಅದೇ ವಿಷಯ. ದಿನಾಂಕ 9-9-1976 ಬಂದರೂ ಏನೂ ವಿಶೇಷ ನಡೆಯಲಿಲ್ಲ. ಈ ದಿನಾಂಕದ ವಿಷಯ ಸಟೆಯಾದರೂ ಪ್ಲೆಂಚೆಟ್ನಲ್ಲಿ ಬಂದ ಅನೇಕ ಉತ್ತರಗಳು ನಂತರ ದಿಟವಾಗಿವೆ. (1977ರ ಮಾರ್ಚ್ನಲ್ಲಿ ಚುನಾವಣೆಗಳಾಗುತ್ತವೆ, ಇಂದಿರಾ ಗಾಂಧಿಯವರು ಪ್ರಧಾನಿಗಳಾಗಿ ಉಳಿಯುವುದಿಲ್ಲ, ವಿರೋಧಿ ಪಕ್ಷಗಳೆಲ್ಲವೂ ಒಂದಾಗುತ್ತವೆ ಮುಂತಾದ ಸಂಗತಿಗಳು.) ಇಲ್ಲಿ ಒಂದು ಮೋಜು ನಡೆಯಿತು.
ದಿನಾಂಕ 9-9-1976ರ ಮೇಲೆ ವಿಶ್ವಾಸವಿದ್ದವರಿಗೆ ನಿರಾಶೆಯಾದರೂ ವಿಶ್ವಾಸವಿಲ್ಲದ ಬಿ.ಕೆ. ಗುಡದಿನ್ನಿಯವರದು ಮಾತ್ರ ಆ ದಿನ ಬಿಡುಗಡೆಯಾಯಿತು. (9-9-1976ಕ್ಕೆ ಸ್ವಂತ ಮುಚ್ಚಳಿಕೆ ಮೇಲೆ 15 ದಿನಗಳ ಪೆರೋಲ್ ಸಿಕ್ಕಿ ಅವರು ಅಂದು ಹೊರಗೆ ಹೋದರು. ದಿ.24ಕ್ಕೆ ಅವರು ಬರಬೇಕಾಗಿತ್ತು. ಆದರೆ ಅವರ ರಿಲೀಜ್ ಆರ್ಡರ್ ಬಂತು!)
ಭವಿಷ್ಯದ ನಿಶ್ಚಿತ ದಿಗ್ದರ್ಶನ
ನವೆಂಬರ್ನಲ್ಲಿ 2ನೇ ಹಂತದ ವರ್ಗ ಪ್ರಾರಂಭ. ಮೊದಲನೇ ತಂಡದವರದು ವಿಶೇಷ ಅಭ್ಯಾಸ – ಮೇಲೆ ಹೇಳಿದ ರಾಷ್ಟ್ರದ ಕುಂಡಲಿ, ಪ್ರಧಾನಿ ಇಂದಿರಾರ ಕುಂಡಲಿ, ಪ.ಪೂ. ಬಾಳಾಸಾಹೇಬರ ಕುಂಡಲಿ, ತುರ್ತು ಪರಿಸ್ಥಿತಿ ಘೋಷಿಸಿದಾಗಿನ ಕುಂಡಲಿ ಮತ್ತು ಸಂಘದ ಕುಂಡಲಿ ಈ ಐದು ಕುಂಡಲಿಗಳ ಅಭ್ಯಾಸ. ಅದರಲ್ಲಿ ಒಂದು ನಿಶ್ಚಿತ ಫಲದ ದಿಗ್ದರ್ಶನ. ದಿನಾಂಕ 23-12-1976ರಿಂದ ಗ್ರಹಮಾನಗಳು ಶ್ರೀಮತಿಯವರಿಗೆ ವಿರುದ್ಧವಾಗಿವೆಯೆಂದೂ ಅಲ್ಲಿಂದ ಒಂದು ತಿಂಗಳೊಳಗೆ ದೇಶದ ಪರಿಸ್ಥಿತಿಯಲ್ಲಿ ಮಹತ್ವದ ಬದಲಾವಣೆಗಳಾಗುತ್ತವೆ, ನಮ್ಮೆಲ್ಲರ ಬಿಡುಗಡೆ ಈ ಅವಧಿಯಲ್ಲಿ (ಅಂದರೆ ದಿನಾಂಕ 23ನೇ ಡಿಸೆಂಬರ್ನಿಂದ ಒಂದು ತಿಂಗಳೊಳಗೆ ಆಗಬಹುದು. ಇಂದಿರಾ ಗಾಂಧಿ ಪದಚ್ಯುತಳಾಗುತ್ತಾಳೆ, ಚುನಾವಣೆಗಳಾಗುತ್ತವೆ. (ನವಂಬರ್ನಲ್ಲಿ ಚುನಾವಣೆಗಳು ಒಂದು ವರ್ಷ ಮುಂದೂಡಿದ ಸುದ್ದಿ ಬಂದಿತ್ತು) ಮುಂತಾಗಿ ಆಶಾದಾಯಕ ಫಲಗಳು. ನವಂಬರ್ ಅಂತ್ಯದವರೆಗೆ ಇವುಗಳ ಚಿಹ್ನೆಗಳು ಕಾಣಸಿಗಬಹುದೆಂದು ಹೇಳಲಾಯಿತು. ಈ ವಿಶ್ವಾಸದಿಂದ ಅಶೋಕ ಜೋಶಿ ತಮ್ಮ ಅಚ್ಚುಮೆಚ್ಚಿನ ಡಾ|| ದಯಾನಂದ ಶಾನಭಾಗರಿಗೆ ಬಳ್ಳಾರಿ ಜೈಲಿಗೆ ಬರೆದೇ ಬಿಟ್ಟರು- “ನವಂಬರ್ ಅಂತ್ಯದೊಳಗೆ ಏನಾದರೂ ಆಗುತ್ತದೆ. ನೋಡರ ನೋಡ್ರಿ” ಎಂದು!.
ದಿನಾಂಕ 15-12-1976ಕ್ಕೆ ಕರುಣಾನಿಧಿ ವಿರೋಧಿ ಪಕ್ಷದ ನಾಯಕರ ಸಭೆ ಕರೆದ ಸುದ್ದಿ. 13-12-1976ಕ್ಕೆ ಅಟಲಜೀಯವರ ಬಿಡುಗಡೆಯ ಸುದ್ದಿ. 15, 16, 17 ಈ ದಿನಗಳಲ್ಲಿ ವಿರೋಧಿ ಪಕ್ಷಗಳ ನಾಯಕರು ಸೇರಿ ಸರ್ಕಾರದೊಡನೆ ಮಾತುಕತೆ ನಡೆಸಬೇಕೆಂದು ಕೈಕೊಂಡ ನಿರ್ಣಯ ಎಲ್ಲವೂ ಪ್ರಕಟವಾಯಿತು.
ದಿನಾಂಕ 23-12-1976ರಂದು ಇಂದಿರಾ ಗಾಂಧಿ ತಮಗೆ ವಿರೋಧಿಪಕ್ಷದ ನಾಯಕರು ಬರೆದ ಪತ್ರಕ್ಕೆ ಮೊಟ್ಟ ಮೊದಲು ಉತ್ತರ ಕಳಿಸಿದರು. (ತುರ್ತು ಪರಿಸ್ಥಿತಿ ಜಾರಿಯಾದಂದಿನಿಂದ ದೇಶದ ಅನೇಕ ನಾಯಕರು ಅವಳಿಗೆ ಅನೇಕ ಪತ್ರಗಳನ್ನು ಬರೆದಾಗ ಒಂದಕ್ಕೂ ಅವರು ಉತ್ತರ ಕೊಟ್ಟಿರಲಿಲ್ಲ. ಮೊದಲನೇ ಉತ್ತರವೆಂದರೆ ದಿನಾಂಕ 23-12-76ಕ್ಕೆ. ಅದು ಅಶೋಕ ಮೆಹತಾ ನವೆಂಬರ್ ನಲ್ಲಿ ಬರೆದ ಪತ್ರಕ್ಕೆ.) ಈ ಉತ್ತರದಲ್ಲಿ, ತುರ್ತು ಪರಿಸ್ಥಿತಿ ಘೋಷಣೆಗೆ ವಿರೋಧಿ ಪಕ್ಷಗಳು ಬಿಹಾರ ಮತ್ತು ಗುಜರಾತ್ಗಳಲ್ಲಿ ನಡೆಸಿದ ಹಿಂಸಾಕೃತಿಗಳು ಕಾರಣವೆಂದೂ ಆ ಬಗ್ಗೆ ಅವರು ತಪ್ಪೊಪ್ಪಿದರೆ ಮಾತ್ರ ಮಾತುಕತೆಗೆ ತಾವು ಸಿದ್ಧಳೆಂದೂ ಬರೆದಿದ್ದಳು. ಈ ಉತ್ತರ ಬರುವವರೆಗೆ ತುರ್ತುಪರಿಸ್ಥಿತಿಯನ್ನು ರದ್ದುಗೊಳಿಸಿಕೊಳ್ಳಲು ಒಂದೇ ದಿಕ್ಕಿನಿಂದ ಪ್ರಯತ್ನ ನಡೆಯುತ್ತಿದ್ದವು. ದಿನಾಂಕ 23-12-1976ಕ್ಕೆ ಇನ್ನೊಂದು ಬದಿಯಿಂದ ಅದಕ್ಕೆ ಪ್ರತಿಕ್ರಿಯೆ ಬರಲು ಪ್ರಾರಂಭ. ಇದು ಒಂದು ಶುಭಸೂಚನೆ. ನಾರಾಯಣ ರಾಯರು ಹೇಳಿದ ಮಾತು ದಿಟವಾಗುತ್ತದೆಂದು ಅನಿಸಿತು!.
‘ಭಾರತ ಮಾತಾಕೀ ಜೈ’
ಆ ಬಳಿಕ ತೀವ್ರಗತಿಯ ಘಟನೆಗಳು ನಡೆದವು. ಬಲ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ಗಳಲ್ಲಿ ತುಷ್ಟತೆ, ಅಲ್ಲಲ್ಲಿ ಕೆಲವರ ಬಿಡುಗಡೆ. ನಮ್ಮಲ್ಲಿಯ ಕೆಲವು ಸರ್ವೋದಯ ಕಾರ್ಯಕರ್ತರ ಬಿಡುಗಡೆ. 17-1-1977ಕ್ಕೆ ಸಮಾಜವಾದಿ ಕಾರ್ಯಕರ್ತರಾದ ರಾಮಭಾವು ಅಪಟೆಯವರ ಬಿಡುಗಡೆ. 18ರ ರಾತ್ರಿ ಕನ್ನಡ ಸಮಾಚಾರದಲ್ಲಿ ಕೊನೆಗೆ ಪ್ರಧಾನಿ ದೇಶವನ್ನು ಉದ್ದೇಶಿಸಿ 8-30ಕ್ಕೆ ಮಾತನಾಡುತ್ತಾಳೆಂದು ಸುದ್ದಿ ಬಿತ್ತರಿಸಿದ ಕೂಡಲೇ ಅನೇಕರು ಆಶಾಭರಿತರಾದರು. ಚುನಾವಣೆಗಳನ್ನು ಘೋಷಿಸುತ್ತಾಳೆಂದು – ಡಾ| ಪ್ರಭಾಕರ ಭಟ್ಟ, ರಾಮಚಂದ್ರ ಜೋಶಿ ಮೊದಲಾದವರು ತರ್ಕ ಮಾಡಿದರು. 8-30ಕ್ಕೆ ಅವಳ ಭಾಷಣದಲ್ಲಿ ಲೋಕಸಭೆಯನ್ನು ವಿಸರ್ಜಿಸಿ ಚುನಾವಣೆಗಳನ್ನು ನಡೆಸುವಂತೆ ತಾನು ರಾಷ್ಟ್ರಾಧ್ಯಕ್ಷರಿಗೆ ವಿನಂತಿ ಮಾಡಿಕೊಂಡಿದ್ದೇನೆಂದು ಹೇಳಿದ ಮಾತು ಕೇಳಿ ಎಲ್ಲರೂ ಸಂತೋಷಭರಿತರಾಗಿ ‘ಭಾರತ ಮಾತಾಕೀ ಜೈ’ ಎಂದು ಮುಂತಾಗಿ ಜೈಜೈಕಾರ ಹಾಕಿ ಕೇಕೆ ಹಾಕುತ್ತ ಕುಣಿದಾಡತೊಡಗಿದರು!.
ದಿ.23 ಜನವರಿ 1977ರೊಳಗೆ ಮೀಸಾವಾಸಿಗಳಲ್ಲಿ ಅರ್ಧದಷ್ಟು ಜನರ ಬಿಡಗಡೆಯಾಯಿತು. ಈ ಬಿಡುಗಡೆಯ ಸತ್ರ ದಿನಾಂಕ 6-2-1977ರವರೆಗೆ ಹಂತ ಹಂತವಾಗಿ ನಡೆದು ನಮ್ಮ ಸಂಖ್ಯೆ 114ರಿಂದ 31ಕ್ಕೆ ಇಳಿಯಿತು. ದಿನಾಂಕ 19 ಜನರಿ 1977ರಿಂದಲೇ ಎಲ್ಲ ವರ್ಗಗಳೂ ಶಿಥಿಲಗೊಂಡವು. ಬರೇ ಬಿಡುಗಡೆಯ ಸಮಾಚರ, ಜನತಾಪಕ್ಷ ನಿರ್ಮಾಣದ ಸುದ್ದಿ, ನಾಯಕರ ಹೇಳಿಕೆಗಳು, ಚುನಾವಣೆಯ ಸಿದ್ಧತೆಯ ದೃಷ್ಟಿಯಿಂದ ಕೈಕೊಂಡ ಕ್ರಮಗಳು ಅನೇಕ ಸಂಗತಿಗಳನ್ನು ಓದುವಲ್ಲಿ, ಚರ್ಚಿಸುವಲ್ಲಿ, ಆಪ್ತಾಲೋಚಿಸುವಲ್ಲಿ ಚಕ್ರದಂತೆ ದಿನಗಳು ಸರಿದುಹೋದವು. ದಿನಾಂಕ 21-3-1977ರಂದು ಬೆಳಿಗ್ಗೆ 6 ಘಂಟೆಯ ಆಕಾಶವಾಣಿಯಲ್ಲಿ “Internal Emergency is lifted, Smt. Indira Gandhi is defeated” ಎಂದು ಕೇಳುವವರೆಗಿನ ಕಾಲ ಹೇಗೆ ಭರಭರನೆ ಕಳೆಯಿತೆಂದೇ ತಿಳಿಯಲಿಲ್ಲ. ಆಗಲೇ ನಾರಾಯಣರಾಯರು ಹೇಳಿದ ಭವಿಷ್ಯ ನಿಜವಾಯಿತೆಂದೆನಿಸಿತು. ಮರುದಿನವೇ ನಮ್ಮೆಲ್ಲರ ಬಿಡುಗಡೆಯೂ ಆಯಿತು!.
- ವೆಂಕಟೇಶ ನರಸಿಂಹ ಶಾನಭಾಗ, ವಕೀಲ, ಕುಮಟಾ
