ಅಂಕಣ – ಸ್ವಾಸ್ಥ್ಯ ಸಂಪದ
- ಡಾ. ಶ್ರೀವತ್ಸ ಭಾರದ್ವಾಜ, ದತ್ತಂ ಆಯುರ್ಧಾಮ, ಮಂಗಳೂರು
ಕರ್ಪೂರ ಎಂದರೆ ನಮಗೆಲ್ಲಾ ದೇವಸ್ಥಾನಗಳಲ್ಲಿ ಮಾಡುವ ಆರತಿಯ ನೆನಪಾಗುತ್ತದೆ. ಮಹಾಭಾರತದ ಕಾಲದಿಂದಲೂ ಕರ್ಪೂರದ ಉಪಯೋಗ ನಮ್ಮಲ್ಲಿ ಕಂಡುಬರುತ್ತದೆ. ಹಿಂದೆಲ್ಲಾ ಕರ್ಪೂರದ ಮರದಿಂದ ಕರ್ಪೂರವನ್ನು ತೆಗೆಯುತ್ತಿದ್ದರೆ, ಈಗಿನ ಕಾಲದಲ್ಲಿ ಹೆಚ್ಚಾಗಿ ರಾಸಾಯನಿಕಯುಕ್ತ ಕರ್ಪೂರವನ್ನೇ ಬಳಸಲಾಗುತ್ತಿದೆ. ಶುದ್ಧ ಕರ್ಪೂರವು ಹಲವಾರು ಅದ್ಭುತ ಗುಣಗಳನ್ನು ಹೊಂದಿದೆ. ಶುದ್ಧವಾಗಿ ಸಿಗುವ ಕರ್ಪೂರಕ್ಕೆ ಭೀಮಸೇನಿ ಕರ್ಪೂರ, ಪಚ್ಚೆ ಕರ್ಪೂರ ಎಂದೆಲ್ಲಾ ಕರೆಯಲಾಗುತ್ತದೆ. ಕರ್ಪೂರ ತನ್ನ ಹಲವಾರು ರೋಗನಾಶಕ ಗುಣಗಳಿಂದಾಗಿ ಪ್ರಾಚೀನ ಕಾಲದಿಂದಲೂ ವಿವಿಧ ಔಷಧಗಳಲ್ಲಿ ಬಳಕೆಯಾಗುತ್ತಿದೆ. ಒಮ್ಮೆ ಹಳ್ಳಿಯ ತಮ್ಮ ಮನೆಗೆ ಹೋಗಿದ್ದ ಯುವಕ ಸಣ್ಣಪುಟ್ಟ ಕೆಲಸ ಮಾಡುತ್ತಿರುವಾಗ ಕಾಲು ಉಳುಕಿ ತುಂಬಾ ನೋವು ಅನುಭವಿಸುತ್ತಾ ನನಗೆ ಕರೆ ಮಾಡಿದ. ಹಳ್ಳಿಯ ಮನೆ ಎಂದರೆ ಮನೆಮದ್ದಿಗೆ ಅತ್ಯಂತ ಸೂಕ್ತವಾದ ಜಾಗ. ಹಾಗಾಗಿ ಆತನಿಗೆ ಸ್ವಲ್ಪ ಎಳ್ಳೆಣ್ಣೆಯನ್ನು ಬಿಸಿಮಾಡಿ ಶುದ್ಧಕರ್ಪೂರವನ್ನು ಅದರಲ್ಲಿ ಮಿಶ್ರಣ ಮಾಡಿ ಕಾಲಿಗೆ ಹಚ್ಚಲು ಸಲಹೆ ನೀಡಿದೆ. ಸಮಸ್ಯೆಯಿಂದ ಶೀಘ್ರ ಪರಿಹಾರ ಕಂಡುಕೊಂಡ ಆತನಿಗೆ ಕರ್ಪೂರದಲ್ಲಿರುವ ಶಕ್ತಿಯನ್ನು ಕಂಡು ಆಶ್ಚರ್ಯವಾಯಿತು. ಇದೊಂದೇ ಉದಾಹರಣೆಯಲ್ಲ, ಕರ್ಪೂರದಿಂದಾಗುವ ಹಲವಾರು ಉಪಯೋಗಗಳನ್ನು ತಿಳಿಯೋಣ ಬನ್ನಿ.
● ಶುದ್ಧ ಕರ್ಪೂರವನ್ನು ಬಿಸಿ ಮಾಡಿದ ತೆಂಗಿನ ಎಣ್ಣೆಯಲ್ಲಿ ಕರಗಿಸಿ ಶೇಖರಣೆ ಮಾಡಿ ದಿನನಿತ್ಯ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
● ಶುದ್ಧ ಕರ್ಪೂರವನ್ನು ಮುಲ್ತಾನಿ ಮಣ್ಣಿನಲ್ಲಿ ಮಿಶ್ರಣ ಮಾಡಿ ಬಿಸಿನೀರಿನಲ್ಲಿ ಕಲಸಿ ಮುಖಕ್ಕೆ ಹಚ್ಚಿದರೆ ಮೊಡವೆಗಳು ಶಮನವಾಗುತ್ತದೆ.
● ಶುದ್ಧ ಕರ್ಪೂರವನ್ನು ಅರಶಿನ ಮತ್ತು ಲೋಳೆಸರದ ರಸದಲ್ಲಿ ಕಲಸಿ ಮೈಗೆ ಹಚ್ಚಿದರೆ ಕಲೆಗಳ ನಿವಾರಣೆಯಾಗುತ್ತದೆ.
● ಶುದ್ಧ ಕರ್ಪೂರದ ಎಣ್ಣೆಯನ್ನು ಎರಡು ಹನಿಗಳಷ್ಟು ಕಿವಿಗೆ ಬಿಡುವುದರಿಂದ ಕಿವಿನೋವು ಕಡಿಮೆಯಾಗುತ್ತದೆ.
● ಶೀತದಿಂದ ಮೂಗು ಕಟ್ಟಿದಾಗ ಸ್ವಲ್ಪ ಅರಶಿಣವನ್ನು ಸುಟ್ಟು ಅದಕ್ಕೆ ಕರ್ಪೂರದ ಪುಡಿಯನ್ನು ಸಿಂಪಡಿಸಿ ಹೊಗೆಯನ್ನು ತೆಗೆದುಕೊಂಡರೆ ಪರಿಹಾರವಾಗುತ್ತದೆ.
● ಸ್ವಲ್ಪ ನೀಲಗಿರಿ ಎಣ್ಣೆಗೆ ಕರ್ಪೂರವನ್ನು ಮಿಶ್ರಣ ಮಾಡಿ ಮಲಗುವಾಗ ಹಣೆಗೆ ಮತ್ತು ಕೆನ್ನೆಗೆ ಸವರಿದರೆ ತಲೆನೋವು, ತಲೆಭಾರ ಕಡಿಮೆಯಾಗುತ್ತದೆ.
● ಸ್ವಲ್ಪ ಶುದ್ಧ ಕರ್ಪೂರವನ್ನು ಜೀರಿಗೆಯೊಂದಿಗೆ ಮಿಶ್ರಣ ಮಾಡಿ ತಿಂದರೆ ಹೊಟ್ಟೆ ಉಬ್ಬರಿಕೆ ಕಡಿಮೆಯಾಗುತ್ತದೆ.
● ಶುದ್ಧ ಕರ್ಪೂರವನ್ನು ಅರಶಿನದೊಂದಿಗೆ ಕಲಸಿ ಚರ್ಮದ ಮೇಲೆ ಲೇಪಿಸಿದರೆ ತುರಿಕಜ್ಜಿಗಳು ನಿವಾರಣೆಯಾಗುತ್ತವೆ.
● ಲಿಂಬೆಹಣ್ಣಿನ ಪಾನಕದಲ್ಲಿ ಸ್ವಲ್ಪ ಶುದ್ಧ ಕರ್ಪೂರವನ್ನು ಮಿಶ್ರಣ ಮಾಡಿ ಕುಡಿದರೆ ಅಜೀರ್ಣ, ಮಲಬದ್ಧತೆ, ಮೂಲವ್ಯಾಧಿಯ ನಿವಾರಣೆಯಾಗುತ್ತದೆ.
● ಶುದ್ಧ ಕರ್ಪೂರದ ಪರಿಮಳವನ್ನು ದಿನನಿತ್ಯ ಆಸ್ವಾದಿಸಿದರೆ ಮಾನಸಿಕ ದುರ್ಬಲತೆ, ಖಿನ್ನತೆಯ ನಿವಾರಣೆಯಾಗುತ್ತದೆ.
● ಎಳ್ಳೆಣ್ಣೆಯನ್ನು ಬಿಸಿಮಾಡಿ ಅದಕ್ಕೆ ಸ್ವಲ್ಪ ಜೇನುಮೇಣ ಮತ್ತು ಶುದ್ಧ ಕರ್ಪೂರವನ್ನು ಸೇರಿಸಿ ಮುಲಾಮಿನ ರೀತಿಯಲ್ಲಿ ಬಾವು, ನೋವಿರುವ ಜಾಗಕ್ಕೆ ಲೇಪಿಸಿದರೆ ನಿವಾರಣೆಯಾಗುತ್ತದೆ.
● ಕರ್ಪೂರದ ಎಣ್ಣೆಯನ್ನು ಮಲಗುವಾಗ ತಲೆದಿಂಬಿಗೆ ಸವರಿ ಮಲಗಿದರೆ ಚನ್ನಾಗಿ ನಿದ್ರೆ ಬರುತ್ತದೆ.
● ಕರ್ಪೂರದ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಹೇನು ನಿವಾರಣೆಯಾಗುತ್ತದೆ.
● ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿರುವವರು ಸ್ವಲ್ಪ ಹಿಂಗು ಮತ್ತು ಚಿಟಿಕೆ ಶುದ್ಧಕರ್ಪೂರವನ್ನು ದಿನನಿತ್ಯ ತಿಂದಲ್ಲಿ ಮುಟ್ಟು ಸರಿಯಾದ ಸಮಯಕ್ಕೆ ಆಗುತ್ತದೆ.
● ಶ್ರೀಗಂಧವನ್ನು ಹಾಲಿನಲ್ಲಿ ಅರೆದು ಸ್ವಲ್ಪ ಶುದ್ಧ ಕರ್ಪೂರವನ್ನು ಸೇರಿಸಿ ಬೆಳಗ್ಗೆ ಹಸಿ ಹೊಟ್ಟೆಗೆ ಸೇವಿಸಿದರೆ ವೀರ್ಯಾಣು ವೃದ್ಧಿಯಾಗುತ್ತದೆ.
● ಶುದ್ಧ ಕರ್ಪೂರದಿಂದ ಆರತಿಯನ್ನು ಬೆಳಗಿದರೆ ಮನೆಯಲ್ಲಿ ಧನಾತ್ಮಕ ಕಂಪನವು ಹೆಚ್ಚುತ್ತದೆ ಮತ್ತು ನಮ್ಮ ಕಾಂತಿ, ತೇಜಸ್ಸು ಹೆಚ್ಚುತ್ತದೆ.
ಇಷ್ಟೆಲ್ಲಾ ಉಪಯೋಗವಿರುವ ಶುದ್ಧ ಕರ್ಪೂರವನ್ನು ದಿನನಿತ್ಯ ಉಪಯೋಗಿಸಿ. ಆರೋಗ್ಯವನ್ನು ವೃದ್ಧಿಸಿರಿ.
