ಅಂಕಣ – ಮಕ್ಕಳಿಗೆ ವಿಜ್ಞಾನ
- ರೋಹಿತ್ ಚಕ್ರತೀರ್ಥ, ಚಿಂತಕರು, ಲೇಖಕರು
ಒಂದು ನದಿ, ಅದರ ಮೇಲೊಂದು ಸೇತುವೆ. ಸೇತುವೆಯಲ್ಲಿ ಒಂದು ಸಲಕ್ಕೆ ಇಬ್ಬರಷ್ಟೇ ಹೋಗಬಹುದು. ರಾತ್ರಿಯ ಕತ್ತಲು, ಅಮಾವಾಸ್ಯೆ. ಸೇತುವೆಯ ಮೇಲಿಂದ ನಡೆದು ಹೋಗುವವರು ಒಂದು ಕಂದೀಲನ್ನು ಹಿಡಿದಿರುವುದು ಅನಿವಾರ್ಯ. ನದಿಯ ಈ ಬದಿಯಲ್ಲಿ ನಾಲ್ಕು ಮಂದಿ ನಿಂತಿದ್ದಾರೆ. ಅವರನ್ನು ಎ, ಬಿ, ಸಿ, ಡಿ ಎನ್ನೋಣ. ಅವರು ನದಿದಾಟಲು ತೆಗೆದುಕೊಳ್ಳುವ ಸಮಯ ಕ್ರಮವಾಗಿ 1, 2, 5 ಮತ್ತು 10 ನಿಮಿಷಗಳು. ಇಬ್ಬರು ನಡೆದುಹೋಗುವಾಗ ವೇಗವಾಗಿ ನಡೆವವನು ಕೂಡ ನಿಧಾನಗತಿಯ ವ್ಯಕ್ತಿಯ ಹೆಜ್ಜೆಗೆ ತನ್ನನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಆ ನಾಲ್ಕು ಜನರಲ್ಲಿರುವುದು ಒಂದೇ ಕಂದೀಲು. ಹಾಗಾಗಿ ಇಬ್ಬರು ಸೇರಿ ನದಿ ದಾಟಿದರೂ ಅವರಲ್ಲೊಬ್ಬ ಕಂದೀಲನ್ನು ಮರಳಿ ತರಬೇಕಾಗುತ್ತದೆ. ಈ ಎಲ್ಲ ಕಟ್ಟುಪಾಡುಗಳನ್ನಿಟ್ಟುಕೊಂಡು ಎಷ್ಟು ನಿಮಿಷಗಳಲ್ಲಿ ಅವರಷ್ಟೂ ಮಂದಿ ನದಿ ದಾಟಲು ಸಾಧ್ಯ?
ಒಮ್ಮೆ ಯೋಚಿಸೋಣ. ಎ ಕೇವಲ 1 ನಿಮಿಷದಲ್ಲಿ ನದಿ ದಾಟಬಲ್ಲ. ಎ ಮತ್ತು ಡಿ ಇಬ್ಬರೂ ಜೊತೆಯಾದರೆ ನದಿ ದಾಟಲು 10 ನಿಮಿಷ ಬೇಕು. ಡಿ-ಯನ್ನು ಆಚೆ ಬದಿ ಬಿಟ್ಟು ಎ ಈ ಕಡೆಗೆ 1 ನಿಮಿಷದಲ್ಲಿ ಧಾವಿಸುತ್ತಾನೆ. ಈಗ ಎ ಮತ್ತು ಸಿ ಜೊತೆಯಾಗಿ ಸೇತುವೆ ಮೇಲಿಂದ ಹೋದರೆನ್ನೋಣ. ಈಗ ನದಿ ದಾಟಲು 5 ನಿಮಿಷ ಸಾಕು; ಬಿ-ಯನ್ನು ಆಚೆಬದಿಗೆ ಬಿಟ್ಟು ಮತ್ತೆ ಈ ಕಡೆಗೆ ಬರಲು ಎ-ಗೆ 1 ನಿಮಿಷ ಬೇಕು. ಈಗ ಈ ಬದಿಯಲ್ಲಿರುವವರು ಎ ಮತ್ತು ಬಿ ಮಾತ್ರ. ಅವರಿಬ್ಬರೂ 2 ನಿಮಿಷದಲ್ಲಿ ನದಿ ದಾಟಿದರೆ – ಒಟ್ಟು ತೆಗೆದುಕೊಂಡ ಸಮಯ: 10+1+5+1+2 = 19 ನಿಮಿಷಗಳು. ಅಲ್ಲವೆ?
ಹೌದು, ಇದು ನಾವೆಲ್ಲರೂ ಯೋಚಿಸುವ ಬಗೆ. ಆದರೆ ಒಮ್ಮೆ ಇನ್ನೊಂದು ಆಯಾಮದಿಂದ ಯೋಚಿಸೋಣ. ಎ ಮತ್ತು ಡಿ ಜೊತೆಯಾದಾಗ, ಎ ಕೇವಲ 1 ನಿಮಿಷದಲ್ಲಿ ನದಿ ದಾಟಬಲ್ಲವನಾದರೂ ಡಿ-ಯ ದೆಸೆಯಿಂದ 10 ನಿಮಿಷಗಳನ್ನು ವ್ಯಯಿಸಬೇಕಾಯಿತು. ಹಾಗೆಯೇ ಬಿ-ಯ ಜೊತೆಗೂಡಿದಾಗ ಆತ ಹೆಚ್ಚುವರಿ 4 ನಿಮಿಷಗಳನ್ನು ವ್ಯಯಿಸಬೇಕಾಯಿತು. ಅದರ ಬದಲಿಗೆ ಸಿ ಮತ್ತು ಡಿ ಜೊತೆಯಾದರೆ ಹೇಗೆ? ಮೊದಲಿಗೆ ಎ ಮತ್ತು ಬಿಯನ್ನು ನದಿಯ ಆ ಬದಿಗೆ ದಾಟಿಸೋಣ. ಇದಕ್ಕೆ ಬೇಕಾದದ್ದು 2 ನಿಮಿಷ. ಎ ವಾಪಸು ಬರಲಿ (1 ನಿಮಿಷ). ಮುಂದಿನ ಹಂತದಲ್ಲಿ ಸಿ ಮತ್ತು ಡಿ ಜೊತೆಯಾಗಿ ನಡೆಯಲಿ. ಅವರಿಬ್ಬರೂ ತೆಗೆದುಕೊಂಡದ್ದು 10 ನಿಮಿಷ. ಆ ಬದಿಯಲ್ಲಿದ್ದ ಬಿ ಈಗ ಈ ಕಡೆ ಬರಲಿ (2 ನಿಮಿಷ). ಎ ಮತ್ತು ಬಿ ಮತ್ತೆ ಜೊತೆಯಾಗಿ ಆ ಕಡೆಗೆ ಹೋಗಲಿ (2 ನಿಮಿಷ). ಒಟ್ಟು ಕಾರ್ಯಾಚರಣೆಗೆ ತಗುಲಿದ್ದು 2+1+10+2+2= 17 ನಿಮಿಷಗಳು! ಅಂದರೆ ಮೊದಲಿನ ಮಾದರಿಗಿಂತ 2 ನಿಮಿಷಗಳನ್ನು ಇದರಲ್ಲಿ ಉಳಿಸಿಕೊಂಡೆವು!
ಮೇಲ್ನೋಟಕ್ಕೆ ಸರಳ ಜಾಣ್ಮೆಲೆಕ್ಕದಂತೆ ಕಾಣುವ ಇದು ಮಾನವ ಸಂಪನ್ಮೂಲವನ್ನು ನಿರ್ವಹಿಸುವವರಿಗೆ ಒಂದೊಳ್ಳೆಯ ಪಾಠವನ್ನೂ ಮಾಡುತ್ತದೆ. ಅದೇನೆಂದರೆ ಒಬ್ಬ ಚುರುಕು ಕೆಲಸಗಾರನ ಜೊತೆ ಮಂದ ಕೆಲಸಗಾರನನ್ನು ಜೊತೆ ಮಾಡಬಾರದು – ಆಗ ಕೆಲಸವು ಚುರುಕುತನ ಪಡೆಯುವುದಕ್ಕಿಂತ ವಿಳಂಬವಾಗುವುದೇ ಹೆಚ್ಚು. ಕಾರ್ಯಕ್ಷಮತೆಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲದ ವ್ಯಕ್ತಿಗಳನ್ನು ತಂಡದಲ್ಲಿಟ್ಟುಕೊಂಡಾಗ ಕೆಲಸ ಬೇಗ ಸಾಗುವ ಸಾಧ್ಯತೆ ಇದೆ. ಮೇಲೆ ಉಲ್ಲೇಖಿಸಿದ ಸೇತುವೆ ಪ್ರಸಂಗವು ಯುಕ್ತಿಯ ಒಂದು ಪ್ರಮುಖ ಉಪವಿಭಾಗವಾದ “ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸುವುದು” ಎಂಬುದಕ್ಕೆ ಒಂದೊಳ್ಳೆಯ ಉದಾಹರಣೆ.
ಭಾರತೀಯ ಜ್ಞಾನ ಪರಂಪರೆಯಲ್ಲಿ ನಮಗೆ ಯುಕ್ತಿಗೆ ಸಂಬಂಧಿಸಿದ ಹಲವು ಉದಾಹರಣೆಗಳು ಸಿಗುತ್ತವೆ. ರಾಜಸ್ಥಾನದ ಕಡೆ ಕಾಣಸಿಗುವ ಮೆಟ್ಟಿಲು ಬಾವಿ ಭಾರತೀಯರ ಯುಕ್ತಿಗೊಂದು ಸೂಕ್ತ ನಿದರ್ಶನ. ಉತ್ತರಭಾರತದಲ್ಲಿ, ಮುಖ್ಯವಾಗಿ ಮರುಭೂಮಿಯ ಜಾಗದಲ್ಲಿ ಅಂತರ್ಜಲಮಟ್ಟ ತೀರ ಕಡಿಮೆ. ಮಳೆನೀರನ್ನು ಹಿಡಿದಿಟ್ಟು ವರ್ಷವಿಡೀ ಅದನ್ನು ಬಳಸುವುದೊಂದೇ ಅಲ್ಲಿನ ಜನರಿಗಿರುವ ಮಾರ್ಗ. ಮಳೆನೀರನ್ನು ಸಂಗ್ರಹಿಸಬೇಕಾದರೆ ಸಂಗ್ರಾಹಕದ ಬಾಯಿ ಸಾಧ್ಯವಾದಷ್ಟು ಅಗಲವಾಗಿರಬೇಕು. ಮಳೆಗಾಲ ಕಳೆದ ಮೇಲೆ ಆರೇಳು ತಿಂಗಳು ತೀವ್ರ ಬೇಸಗೆ. ಆ ಸಮಯದಲ್ಲಿ ಸೂರ್ಯನ ಬಿಸಿಲಿಗೆ ನೀರು ಆವಿಯಾಗುತ್ತದೆ. ನೀರಿನ ಪಾತ್ರದ ಒಟ್ಟು ಮೇಲ್ಮೈ ವಿಸ್ತೀರ್ಣದ ಮೇಲೆ ನೀರಿನ ಆವಿಯಾಗುವಿಕೆ ನೇರವಾಗಿ ಅವಲಂಬಿಸಿದೆ. ಅಂದರೆ ಹೆಚ್ಚು ನೀರಿನ ಮೇಲ್ಮೈ ಇದ್ದಷ್ಟೂ ಹೆಚ್ಚು ಆವಿಯಾಗುವಿಕೆ. ಇದೊಂದು ವಿರೋಧಾಭಾಸದಂತೆ ಕಾಣುತ್ತದೆ. ಮಳೆನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸೋಣವೆಂದು ವ್ಯಾಪ್ತಿ ಇರುವ ಕೆರೆ ಕಟ್ಟಿಸಿಕೊಂಡರೆ, ಅಲ್ಲಿ ನೀರು ಸಂಗ್ರಹವಾದಷ್ಟೇ ವೇಗದಲ್ಲಿ ಸೂರ್ಯನ ಬಿಸಿಲಿಗೆ ಆವಿಯೂ ಆಗುತ್ತದೆ. ಹಾಗಾದರೆ ಏನು ಮಾಡಬೇಕು? ಇದಕ್ಕೆ ಅಲ್ಲಿನ ಸ್ಥಳೀಯರು ಕಂಡುಕೊಂಡ ಉಪಾಯವೇ ಮೆಟ್ಟಿಲುಬಾವಿ. ಇದು ಆಳದಲ್ಲಿ ಸಣ್ಣದಾಗಿರುವ, ಎತ್ತರಕ್ಕೆ ಹೋದಂತೆ ವಿಶಾಲವಾಗುತ್ತ ಹೋಗುವ ವ್ಯವಸ್ಥೆ. ಅಂದರೆ ನೀರು ಕಡಿಮೆಯಾದಷ್ಟೂ ಒಟ್ಟು ನೀರಿನ ಮೇಲ್ಮೈ ವಿಸ್ತೀರ್ಣ ಕಡಿಮೆಯಾಗುತ್ತ ಹೋಗುತ್ತದೆ. ಹಾಗಾಗಿ ಈ ಬಾವಿಯಲ್ಲಿ ನೀರಿನ ಮಟ್ಟ ತಗ್ಗುತ್ತ ಹೋದಂತೆ ಆವಿಯಾಗಿ ಹೋಗುವ ನೀರಿನ ಪ್ರಮಾಣವೂ ಕಡಿಮೆಯಾಗುತ್ತದೆ. ಇನ್ನು, ನೀರು ತುಂಬಿಕೊಳ್ಳುವಾಗ, ಮೇಲುಮೇಲಕ್ಕೆ ಹೋದಂತೆ ಬಾವಿಯ ವಿಸ್ತೀರ್ಣ ಹೆಚ್ಚುವುದರಿಂದ, ಹೆಚ್ಚು ನೀರು ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಈ ಬಾವಿಗಳಿಗೆ ಮೆಟ್ಟಿಲುಗಳಿರುವುದರಿಂದ ನೀರು ಎಷ್ಟು ಆಳಕ್ಕೆ ಕುಸಿದರೂ ಅಲ್ಲಿಗೆ ಹೋಗಿ ನೀರನ್ನು ಸಂಗ್ರಹಿಸಿಕೊಂಡು ಬರಬಹುದು. ಒಂದೇ ರಚನೆ ಹಲವು ರೀತಿಗಳಿಂದ ಹೀಗೆ ಉಪಯೋಗಿ. ಒಂದು ಕಲ್ಲಿನಿಂದ ಹಲವು ಹಣ್ಣುಗಳನ್ನು ಉದುರಿಸಿಕೊಳ್ಳುವ ಜಾಣ್ಮೆಯನ್ನು ಜನ ಇಲ್ಲಿ ತೋರಿಸಿದ್ದಾರೆ!
ಕೌಟಿಲ್ಯರಿಗಿಂತ ಹಿಂದೆಯೂ ಭಾರತದಲ್ಲಿ ರಾಜ್ಯಗಳಿದ್ದವು. ಆದರೆ ಕೌಟಿಲ್ಯರು ಚಂದ್ರಗುಪ್ತನನ್ನು ಇಟ್ಟುಕೊಂಡು ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದ ಮೇಲೆ ಭಾರತದ ರಾಜಕೀಯ ಚಿತ್ರಣ ಬದಲಾಯಿತು. ಅಂಥದ್ದೇನಾಯಿತು? ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಮೊದಲು ರಾಜ್ಯಗಳು ಪರಸ್ಪರ ಕಚ್ಚಾಡುತ್ತಿದ್ದವು. ಒಮದು ರಾಜ್ಯ 10,000 ಸೈನಿಕರನ್ನು ನಿಯೋಜಿಸಿಕೊಂಡರೆ ಇನ್ನೊಂದು 15,000 ಸೈನಿಕರನ್ನು ತರಬೇತಿಗೊಳಿಸುತ್ತಿತ್ತು. ಯುದ್ಧಗಳೆಂದರೆ ಅಪಾರ ಪ್ರಮಾಣದ ಸಾವುನೋವಿನ ಸಂಗತಿಗಳಾಗಿದ್ದವು. ಯಾರು ಹೆಚ್ಚು ಯುದ್ಧಗಳಲ್ಲಿ ಹೋರುತ್ತಾನೋ, ಯಾರು ನಿರಂತರವಾಗಿ ತನ್ನ ಅಕ್ಕಪಕ್ಕದ ರಾಜ್ಯಗಳ ಜೊತೆ ಕಾದಾಡುತ್ತ ಗಡಿರೇಖೆಯ ವಿಸ್ತರಣೆ ಮಾಡಿಕೊಳ್ಳುತ್ತ ಇರುತ್ತಾನೋ ಅವನೇ ರಾಜರ ರಾಜ, ಶೂರರ ಶೂರ ಎಂಬ ಭಾವನೆ ಇತ್ತು. ಆದರೆ ಕೌಟಿಲ್ಯರು ಅದನ್ನು ಬದಲಾಯಿಸಿದರು. ಅತ್ಯಂತ ಪರಿಣಾಮಕಾರಿ ಯುದ್ಧವೆಂದರೆ ‘ಯುದ್ಧರಂಗದಲ್ಲಿ ನಡೆಯದೇ ಇರುವ ಯುದ್ಧ’ ಎಂಬ ಹೊಸ ತಂತ್ರಗಾರಿಕೆಯನ್ನು ಅವರು ಹೆಣೆದರು. ಅತಿದೊಡ್ಡ ಸಂಖ್ಯೆಯಲ್ಲಿ ಬೇಹುಗಾರರ ನಿಯೋಜನೆ ಮಾಡಿದರು. ಈ ಬೇಹುಗಾರರು ರಾಜ್ಯದ ಒಳಗೆ ಮತ್ತು ಸುತ್ತಮುತ್ತಲಿನ ಎಲ್ಲ ರಾಜ್ಯಗಳಲ್ಲಿ ಸಕ್ರಿಯರಾಗಿದ್ದರು. ಅವರ ಮೂಲಕ ಸುತ್ತಮುತ್ತಲಿನ ಎಲ್ಲ ರಾಜ್ಯಗಳ ಸುದ್ದಿಗಳನ್ನೂ ಸಂಗ್ರಹಿಸಲಾಗುತ್ತಿತ್ತು. ಆ ಮೂಲಕ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತ, ಎಲ್ಲ ರಾಜರೂ ತಂತಮ್ಮ ಕಾರ್ಯಾಚರಣೆಗಳ ಪ್ರಾರಂಭದ ಹಂತದಲ್ಲಿಯೇ ವ್ಯಸ್ತರಾಗಿರುವಂತೆ ನೋಡಿಕೊಳ್ಳಲಾಯಿತು. ಅಂದರೆ ಅವರ್ಯಾರೂ ಪೂರ್ಣಪ್ರಮಾಣದ ಯುದ್ಧವನ್ನು ಮೌರ್ಯ ರಾಜ್ಯದ ಮೇಲೆ ಘೋಷಣೆ ಮಾಡುವುದಕ್ಕೇ ಆಗದಿರುವಂತೆ ತಂತಮ್ಮ ಸಮಸ್ಯೆಗಳಲ್ಲಿ ಮುಳುಗಿಹೋದರು. ಕೌಟಿಲ್ಯರ ಈ ತಂತ್ರವನ್ನು ಔಶನಸ ತಂತ್ರವೆಂದೂ ಕರೆಯಲಾಗುತ್ತದೆ. ಹೀಗಾಗಿ ಮೌರ್ಯ ಸಾಮ್ರಾಜ್ಯ ಅನಿವಾರ್ಯವೆನ್ನಿಸುವ ಮುಖ್ಯ ಯುದ್ಧಗಳನ್ನು ಬಿಟ್ಟರೆ ಯಾವೊಂದೂ ಸಣ್ಣಪುಟ್ಟ ಯುದ್ಧಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿಲ್ಲ. “ಯುದ್ಧವನ್ನು ಮಾಡದೆಯೇ ಶತ್ರುವನ್ನು ಗೆಲ್ಲಬೇಕು” ಎಂಬುದು ಆಚಾರ್ಯ ಚಾಣಕ್ಯರು ಹಾಕಿಕೊಟ್ಟಿರುವ ಮಾರ್ಗ (ಅದನ್ನು ಇಂದು ಅಶೋಕನ ಹೆಸರಿನಲ್ಲಿ ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ! “ಯಾವುದೇ ರಾಜ್ಯದ ಮೇಲೆ ಯುದ್ಧವನ್ನೇ ಮಾಡಬಾರದು; ಅಹಿಂಸೆಯನ್ನು ಪಾಲಿಸಬೇಕು” ಎಂಬುದು ಸರಿಯಾದ ರಾಜತಂತ್ರವಲ್ಲ. ಅಶೋಕನ ಹೆಸರಿನಲ್ಲಿ ಪ್ರಚಾರದಲ್ಲಿರುವ ಸಂಗತಿ ಕಾರ್ಯಸಾಧುವಲ್ಲ. ಆದರೆ “ಯುದ್ಧವನ್ನು ಮಾಡದೆ ಹೋದರೂ ಶತ್ರುಗಳನ್ನು ಹೆಡೆಮುರಿಕಟ್ಟಿ ಕೂರಿಸಿರಬೇಕು” ಎಂಬ ಕೌಟಿಲ್ಯರ ಕಾರ್ಯನೀತಿ ಸಾಧುವೂ ಹೌದು; ಅಗತ್ಯವೂ ಹೌದು).
ಒಟ್ಟಿನಲ್ಲಿ ಯುಕ್ತಿಯನ್ನು ಹೀಗೆ ಸಂಗ್ರಹಿಸಿ ಹೇಳಬಹುದು: ಯುಕ್ತಿ ಎಂಬುದೇ ಗಣಿತದ ವಿಷಯವಲ್ಲ; ಯುಕ್ತಿಯಲ್ಲಿ ಗಣಿತವೂ ಒಂದು ವಿಷಯ ಎಂದು ಹೇಳಬಹುದು. ಯಾಕೆಂದರೆ ಯುಕ್ತಿಯು ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗೆ ಪರಿಹಾರ ಹುಡುಕುವಾಗ ಇರಬೇಕಾದ ಬೌದ್ಧಿಕ ಶಿಸ್ತನ್ನು ಕಲಿಸುವ ಒಂದು ಜ್ಞಾನವಿಭಾಗ. ಇಲ್ಲಿ ಗಣಿತ, ವಿಜ್ಞಾನಗಳಿಗೆ ಸಂಬಂಧಿಸಿದಂತೆ: ಪಟ್ಟಿ ಮಾಡುವುದು, ಪರೀಕ್ಷಿಸಿ ನೋಡುವುದು, ಕೋಷ್ಟಕದಲ್ಲಿ ಬರೆಯುವುದು, ಚಿತ್ರ ಮಾಡುವುದು, ಕೊನೆಯಿಂದ ಮೊದಲಿಗೆ ಉತ್ತರವನ್ನು ತೆಗೆಯುತ್ತ ಬರುವುದು (ವರ್ಕ್ ಬ್ಯಾಕ್ವರ್ಡ್ಸ್), ಸೂತ್ರವನ್ನು ಉಪಯೋಗಿಸುವುದು, ವಿಭಿನ್ನವಾಗಿ ಆಲೋಚಿಸುವುದು, ಒಂದು ವಿಷಯದ ಅಧ್ಯಯನವನ್ನು ಬಳಸಿಕೊಂಡು ಇನ್ನೊಂದು ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸುವುದು, ಸರಳ ಮಾದರಿಯನ್ನು ಬಳಸಿಕೊಂಡು ಸಂಕೀರ್ಣ ವ್ಯವಸ್ಥೆಗೆ ಉತ್ತರ ಹುಡುಕುವುದು – ಹೀಗೆ ಹಲವು ತಂತ್ರಗಳಿವೆ. ಯಾವ ಸಮಸ್ಯೆಗೆ ಯಾವ ತಂತ್ರವನ್ನು ಬಳಸಬೇಕೆಂಬುದು ಕೂಡ ಯುಕ್ತಿಯೇ. ವಾಸ್ತವದಲ್ಲಿ ಅದೇ ಅತಿ ಮುಖ್ಯವಾದ ಯುಕ್ತಿ.
ಯುಕ್ತಿಯಲ್ಲಿ ಸಾಮಾನ್ಯವಾಗಿ: ವಿಷಯವನ್ನು ಆಮೂಲಾಗ್ರ ಪರಿಶೀಲಿಸಬೇಕು; ತಪ್ಪು ಉತ್ತರಗಳು/ನಿರ್ಧಾರಗಳು ಹೊರಡುವಂತೆ ಇರಬಾರದು; ಅತಿ ಕಡಿಮೆ ಶ್ರಮದಿಂದ ಹೆಚ್ಚಿನ ಫಲಿತಾಂಶ ಸಿಗುವಂತೆ ಇರಬೇಕು; ಮಾಡಹೊರಟ ಕಾರ್ಯವು ನೂರಕ್ಕೆ ನೂರು ತರ್ಕಬದ್ಧವಾಗಿರಬೇಕು; ಎಲ್ಲೂ ವೈಜ್ಞಾನಿಕಾಂಶಗಳಿಗೆ ಅವು ವ್ಯತಿರಿಕ್ತವಾಗಿರಬಾರದು ಮತ್ತು ಯಾವುದೇ ಸಂದಿಗ್ಧವಿಲ್ಲದೆ ಪ್ರಶ್ನೆಗೆ ಅತ್ಯಂತ ಖಚಿತವಾದ ಉತ್ತರವು ಸಿಗುವಂತೆ ಇರಬೇಕು. ಇವಿಷ್ಟು – ಬದುಕಿನ ಯಾವುದೇ ಸಮಸ್ಯೆಗೂ ಹೊಂದುವ ಮಾರ್ಗಸೂಚಿಗಳಾದ್ದರಿಂದ ಯುಕ್ತಿಯು ಕೇವಲ ಹಾಳೆ-ಪೆನ್ನುಗಳನ್ನು ಬಳಸಿ ಮಾಡುವ ಲೆಕ್ಕಗಳಿಗೆ ಮಾತ್ರವಲ್ಲದೆ ಜೀವನದ ಎಲ್ಲ ಸಮಸ್ಯೆಗಳಿಗೂ ಅಳವಡಿಸಿಕೊಳ್ಳಬಹುದಾದ ಸಂಗತಿಯೇ ಆಗಿದೆ.
