ಅಂಕಣ – ದೃಶ್ಯ
● ಕರ್ನಾಟಕದ ದೃಶ್ಯ ಸಮುದಾಯ ಕಂಡ ನಿಷ್ಠುರ ವ್ಯಕ್ತಿತ್ವದ ಕಲಾವಿದ
● ರೈತ, ದಲಿತ ಚಳವಳಿಯಲ್ಲಿ ಕಲಾವಿದರ ಧ್ವನಿಯಾದ ‘ಕುಂಚಬ್ರಹ್ಮ’!
- ಗಣಪತಿ ಅಗ್ನಿಹೋತ್ರಿ, ದೃಶ್ಯ ಕಲಾವಿದ, ಕಲಾವಿಮರ್ಶಕ, ಪತ್ರಕರ್ತ
ಮನೆಯವರ ಒತ್ತಾಯಕ್ಕೆ ಮಣಿದು ತಮಗಿಷ್ಟವಿಲ್ಲದಿದ್ದರೂ ತಾವು ಸೇರಿಕೊಂಡಿದ್ದ ಇಂಜಿನಿಯರಿಂಗ್ ಕಾಲೇಜಿನಲ್ಲೇ ಓದು ಮುಂದುವರಿಸಿದ್ದರೆ ಕಲಾವಿದರಾಗಿ ಗುರುತಿಸಿಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲವೇನೋ. ಕಲಾವಿದರಾಗಿ ದಲಿತ ಚಳವಳಿ ಅಥವಾ ರೈತ ಚಳವಳಿಯಂತಹ ಹೋರಾಟದ ಭಾಗ ಆಗಿರುತ್ತಿದ್ದರಾ ಎನ್ನುವ ಪ್ರಶ್ನೆ ಮೂಡುವುದುಂಟು. ಅಷ್ಟೇ ಅಲ್ಲ ಕಲಾಕ್ಷೇತ್ರಕ್ಕೆ ಒಬ್ಬ ನಿಷ್ಠುರವಾದಿ ವ್ಯಕ್ತಿತ್ವದ ಕಲಾವಿದ ಸಿಗುತ್ತಿರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕಲಾವಿದರಾಗಿ ಗುರುತಿಸಿಕೊಳ್ಳುವಂತಹ ಪ್ರತಿಭೆ, ಇಂಜಿನಿಯರಿಂಗ್ ಕೆಲಸವನ್ನೇನೋ ಆಯ್ಕೆ ಮಾಡಿಕೊಂಡು ಇರಬೇಕಾಗಿರುತ್ತಿತ್ತು!.

ಯಾವ ಕಲಾವಿದರ ಬಗ್ಗೆ ಹೇಳುತ್ತಿದ್ದಾರೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಹೌದು, ಕಳೆದವಾರವಷ್ಟೇ ಕಲಾ ಸಮುದಾಯವನ್ನು ಅಗಲಿದ ಕೆ.ಟಿ. ಶಿವಪ್ರಸಾದ್ ಅವರ ಕುರಿತಾದ ಸಂಗತಿ ಇದು. ಕರ್ನಾಟಕ ಕಂಡ ನಿಷ್ಠುರ ಕಲಾವಿದ ಕೆಟಿಎಸ್ ಅವರ ವ್ಯಕ್ತಿತ್ವ ಇದು. ಖ್ಯಾತ ಉದ್ಯಮಿ, ರಾಜಕಾರಣಿ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯುಳ್ಳ ಎಲ್.ಟಿ. ಕಾರ್ಲೆ ಅವರ ಪುತ್ರ ಎನ್ನುವ ವಿಚಾರವೇ ಸಾಕಷ್ಟು ಮಂದಿಗೆ ಗೊತ್ತಿಲ್ಲ. ಕೆ.ಟಿ.ಎಸ್. ಕೂಡ ಈ ಕುರಿತಾದ ಮಾಹಿತಿಯನ್ನು ಹೆಚ್ಚು ಹಂಚಿಕೊಳ್ಳಲು ಬಯಸುತ್ತಿರಲಿಲ್ಲ. ಹೀಗಾಗಿ ಕೆ.ಟಿ.ಎಸ್. ಅವರ ಕುರಿತಾದ ಅನೇಕ ಸಂಗತಿಗಳು ಅಂತರ್ಜಾಲಗಳಲ್ಲಿ ಲಭ್ಯವಾಗದೇ ಇರಬಹುದು. ಎಂಜಿನಿಯರಿಂಗ್ ಓದಲು ಸ್ವಲ್ಪವೂ ಇಚ್ಛಿಸಿದ ಕೆ.ಟಿ.ಎಸ್. ಅವರು ಇಂಜಿನಿಯರಿಂಗ್ ಓದಬಯಸಿದರೂ, ತಮ್ಮ ಆಸಕ್ತಿ ಕ್ಷೇತ್ರವಾದ ಚಿತ್ರಕಲಾ ಶಿಕ್ಷಣದಲ್ಲಿ ಮುಂದುವರಿಯಲು ಅವರ ಮನಸ್ಸು ತವಕಿಸುತ್ತಿತ್ತು. ಉದ್ಯಮಿ ಪುತ್ರ ಇಂಜಿನಿಯರ್ ಆಗಲಿಲ್ಲ. ಬದಲಾಗಿ ತನ್ನೊಡಲಲ್ಲಿರುವ ಕಲಾವಿದನನ್ನು ಬೆಳೆಸಿಕೊಂಡರು. ಮನೆಯವರ ಲೆಕ್ಕಾಚಾರ ಬುಡಮೇಲು ಮಾಡಿದರು. ಯಾರ ಒತ್ತಾಯಕ್ಕೂ ಮಣಿಯಲಿಲ್ಲ ಎನ್ನುವುದಕ್ಕಿಂತ ಅವರೊಳಗಿನ ಕಲಾವಿದ ಬೇರೆ ಕ್ಷೇತ್ರದತ್ತ ಕಣ್ಣಾಯಿಸಲು ಬಿಡಲಿಲ್ಲ. ಇಂಜಿನಿಯರಿಂಗ್ ಶಿಕ್ಷಣಕ್ಕೆ ಬ್ರೇಕ್ ಹಾಕಿ ಮುಂಬೈನ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ ಸೇರಿಕೊಂಡರು. ಚಿತ್ರಕಲಾ ಕ್ಷೇತ್ರದಲ್ಲೇ ಓದಿ, 1973ರಲ್ಲಿ ಪದವಿ ಪಡೆದುಕೊಂಡರು. ಮುಂದೆ ಏನಾದರೆನ್ನುವುದು ಕರ್ನಾಟಕದ ಬಹುತೇಕ ಮಂದಿಗೆ ಗೊತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು, ಭಾರತೀಯ ಆಧುನಿಕ ಪಂರಂಪರೆಯ ಪುಟದಲ್ಲಿ ಹೊಸ ಅಧ್ಯಾಯ ಬರೆದು ಮೆಚ್ಚುಗೆ ಗಳಿಸಿಕೊಂಡರು. ಸೈದ್ಧಾಂತಿಕವಾಗಿ ಅನೇಕರನ್ನು ಎದುರು ಹಾಕಿಕೊಂಡಿದ್ದ ಕೆಟಿಎಸ್ ಕಲೆಯ ವಿಚಾರದಲ್ಲಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು.
ಮೇರು ಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ಈಗ ನಮ್ಮೊಂದಿಗಿಲ್ಲ. ಇಹಲೋಕ ತ್ಯಜಿಸಿದ್ದಾರೆ. ಕಲಾವಿದರ ಬಳಗದ ಅನೇಕ ಕಲಾವಿದರಿಗೆ ಗುರುವಿನಂತೆ ಇದ್ದವರು ಕೆಟಿಎಸ್. ತಮ್ಮ ಕಲಾಕೃತಿಗಳು ಮತ್ತು ವ್ಯಕ್ತಿತ್ವದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದವರು. ಕರ್ನಾಟಕದ ಆಧುನಿಕ ಕಲಾ ಪರಂಪರೆಗೆ ಕೆಟಿಎಸ್ ಅವರ ಕೊಡುಗೆ ಅಪಾರ. ಹಾಸನ ಮೂಲದವರಾದ ಕೆಟಿಎಸ್, ಅಪ್ಪಟ ಸಿದ್ಧಾಂತಿ. ಬುದ್ಧನ ತತ್ತ್ವಗಳಿಂದ ಪ್ರಭಾವಿತರಾದವರು. ಮೂಢನಂಬಿಕೆಗಳ ವಿರುದ್ಧ ಗಟ್ಟಿಯಾದ ಧ್ವನಿ ಇರಿಸಿಕೊಂಡು ಬೆಳೆದವರು. ಆ ಬಗ್ಗೆ ಸ್ಪಷ್ಟತೆ ಹೊಂದಿರುವ ಅಪರೂಪದ ಕಲಾವಿದ, ಚಿಂತಕರಾಗಿದ್ದರು. ಕಲಾವಿದರಾಗಿ ಹೋರಾಟದ ಮನಸ್ಸು ಬೆಳೆಸಿಕೊಂಡಿರುವ ಅಪರೂಪದ ವ್ಯಕ್ತಿಗಳಲ್ಲಿ ಕೆಟಿಎಸ್ ಅವರು ಒಬ್ಬರು. ದಲಿತ ಮತ್ತು ರೈತ ಹೋರಾಟಗಾರರ ನೇರ ಒಡನಾಟ ಹೊಂದಿದ್ದ ಕೆಟಿಎಸ್ ಅವರು ಅನೇಕ ವರ್ಷಗಳ ಕಾಲ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಾಮಾಜಿಕ ಹೋರಾಟಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವುದಲ್ಲದೇ, ಅವರ ಕಲಾಕೃತಿಗಳಲ್ಲಿಯೂ ಇಂತಹ ಆಲೋಚನೆಗಳ ಪ್ರಭಾವ ಇರುವುದನ್ನು ಕಾಣಬಹುದಾಗಿತ್ತು. ಸಮಾಜನ ಅನೇಕ ವಿಚಾರಗಳನ್ನು ಕ್ಯಾನ್ವಾಸ್ ಮೇಲೆ ತರುವ ಮೂಲಕ ಆ ವರ್ಗದವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಫೊಟೋ ರಿಯಾಲಿಸಂ, ಪಾಪ್ ಆರ್ಟ್ ಮತ್ತು ಅಮೂರ್ತ ನೆಲೆಯಲ್ಲಿ ತಮಗೆ ಸ್ಫೂರ್ತಿಯಾಗುವ ಅಂಶಗಳನ್ನು, ವಿಚಾರಗಳನ್ನು ನೇರವಾಗಿ ಕಲಾಕೃತಿಗಳಲ್ಲಿ ಮೂಡಿಸಿರುವ ಕೆಟಿಎಸ್ ಅವರು ಕರ್ನಾಟಕದ ಆಧುನಿಕ ಕಲಾ ಪರಂಪರೆಯ ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ಹೊಸ ಛಾಪು ಒತ್ತಿದ್ದಾರೆ. ಅವರ ಕಲಾಕೃತಿಗಳಲ್ಲಿನ ಸಂಯೋಜನೆಯೇ ವಿಭಿನ್ನ, ಚಿಂತನೆ-ಆಲೋಚನೆಯೇ ಬೇರೆಯಾಗಿ ಕಾಣಿಸುತ್ತವೆ. ಕಲಾಕೃತಿಗಳಲ್ಲೇ ತಮ್ಮ ಸಿದ್ಧಾಂತದ ಒಳಹರಿವು ಹೇಳುವ ಸಾಮರ್ಥ್ಯ ಬೆಳೆಸಿಕೊಂಡಿದ್ದರು. ದಲಿತ ಹೋರಾಟ ಮತ್ತು ಸಾಮಾಜಿಕ ನ್ಯಾಯದ ಮಾತನಾಡುವ ಸಂದರ್ಭದಲ್ಲೆಲ್ಲಾ ಇವರೊಂದು ಮಾತು ಹೇಳುತ್ತಿದ್ದರು. ಕೆಲವು ಕಡೆ ಇವು ದಾಖಲಾಗಿವೆ ಕೂಡ. “ಡಾ.ಅಂಬೇಡ್ಕರ್ ಅವರ ನಂತರ ಶೋಷಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರ ಸಬಲೀಕರಕ್ಕಾಗಿ ದೊಡ್ಡ ಮಟ್ಟದ ಧ್ವನಿ ಎತ್ತಿದ ಶ್ರೇಷ್ಠ ನಾಯಕರೆಂದರೆ ಅವರು ಕಾನ್ಸಿರಾಮ್. ಅವರೊಬ್ಬ ರಾಜತಾಂತ್ರಿಕ ನಾಯಕ” ಎನ್ನುತ್ತಿದ್ದರು.
ಇಷ್ಟೊಂದು ಸ್ಪಷ್ಟವಾದ ಅಭಿಪ್ರಾಯ ಮಂಡಿಸುವ ಕೆಟಿಎಸ್ ಅವರ ಹೋರಾಟದ ಗಟ್ಟಿತನ ಎಷ್ಟೆನ್ನುವುದಕ್ಕೆ ಇದೊಂದು ಪ್ರಹಸನ ಸಾಕ್ಷಿಯಾಗಿ ನಿಲ್ಲುತ್ತದೆ. ಸರ್ಕಾರಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ ಸಾಂಕೇತಿಕವಾಗಿ ಪ್ರತಿಭಟಿಸಬೇಕೆನ್ನುವ ಕಾರಣಕ್ಕಾಗಿ ಸರ್ಕಾರ ತಮಗೆ ನೀಡಿದ ಪ್ರತಿಷ್ಠಿತ ವೆಂಕಟಪ್ಪ ಪ್ರಶಸ್ತಿ ಮತ್ತು ನಗದು ಮೊತ್ತವನ್ನು ಸರ್ಕಾರಕ್ಕೆ ಮರಳಿಸಿದ್ದರು. ಕಲಾಕೃತಿಗಳ ರಚನೆ ವಿಚಾರದಲ್ಲೂ ಅತ್ಯಂತ ಸ್ಪಷ್ಟ ನಿಲುವು ಹೊಂದಿರುತ್ತಿದ್ದರು ಎನ್ನುವುದಕ್ಕೆ ಇನ್ನೊಂದು ಸಾಕ್ಷಿ ನೀಡುವುದಾದರೆ, ಅವರ ‘ಮೇಲ್ ನ್ಯೂಡ್ಸ್’ (Male nudes) ಸರಣಿ ಕಲಾಕೃತಿಗಳು. 1970-80ರ ದಶಕದ ಸಂದರ್ಭದಲ್ಲಿ ಪುರುಷರ ನಗ್ನ ಚಿತ್ರಣಗಳನ್ನು ಕ್ಯಾನ್ವಾಸ್ ಮೇಲೆ ಯಾವುದೇ ಮುಲಾಜಿಲ್ಲದೆ ಚಿತ್ರಿಸಿ ಗಮನ ಸೆಳೆದಿದ್ದರು. ಅಮೆರಿಕದ ಪ್ರಸಿದ್ಧ ಕಲಾವಿದ ಆಂಡಿ ವಾರ್ಹೋಲ್ ಅವರ ಕಲಾಕೃತಿಗಳ ಪ್ರಭಾವಕ್ಕೆ ಒಳಗಾಗಿದ್ದ ಕೆಟಿಎಸ್ ಅವರ ಕಲಾಕೃತಿಗಳಲ್ಲಾದ ಬದಲಾವಣೆ ಕಂಡ ಭಾರತದ ಅನೇಕ ಕಲಾವಿದರು, ಕಲಾವಿಮರ್ಶಕರು ಮತ್ತು ಕಲಾಪ್ರಿಯರು ಇವರನ್ನು ಬ್ರಿಟನ್ ಕಲಾವಿದ ಲುಸಿಯನ್ ಫ್ರಾಯ್ಡೆಗೆ ಹೋಲಿಸಿ ನೋಡಿದ್ದನ್ನೂ ಗಮನಿಸಬಹುದಾಗಿದೆ.
ಹೀಗೆ ವಿಭಿನ್ನ ಮತ್ತು ವಿಶಿಷ್ಟ ದೃಶ್ಯಾಲೋಚನೆಗಳಿಂದ ಕೆಟಿಎಸ್ ಅವರು ಕಳೆದ ಐದಾರು ದಶಕಗಳ ಅನೇಕ ಯುವ ಕಲಾವಿದರ ಕಣ್ಣರಳಿಸುವಂತೆ ಮಾಡಿದ್ದರು. ತಮ್ಮ ಕಲಾಕೃತಿಗಳ ಪ್ರಭಾವಕ್ಕೊಳಗಾಗುವಂತೆ ಮಾಡಿದ್ದರು. ಬಹಳ ಮಂದಿ ಕಲಾವಿದರಿಗೆ ಮಾರ್ಗದರ್ಶಕರಾಗಿ ದಾರಿದೀಪವಾದರು ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ನೇರ ಮತ್ತು ನಿಷ್ಠುರ ಮಾತುಗಳಿಂದ ಅನೇಕರಿಗೆ ಸಿಂಹಸ್ವಪ್ನವಾಗಿದ್ದೂ ಉಂಟು. ಕರ್ನಾಟಕ ಕಂಡ ಮೇರು ಕಲಾವಿದ, ಲಲಿತಕಲಾ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ. ಶಿವಪ್ರಸಾದ್ ಅವರು ಇನ್ನು ನೆನಪು ಮಾತ್ರ.
