- ಸಿ. ಕೆ. ಸಾಜಿ ನಾರಾಯಣನ್
(ಲೇಖಕರು ಭಾರತೀಯ ಮಜ್ದೂರ್ ಸಂಘದ ಮಾಜಿ ರಾಷ್ಟ್ರೀಯ ಅಧ್ಯಕ್ಷರು)
ಜುಲೈ 23, 1955 ರಂದು ಮಹಾನ್ ದಾರ್ಶನಿಕ ಮತ್ತು ಬುದ್ಧಿಜೀವಿ ದತ್ತೋಪಂತ್ ಠೇಂಗಡಿ ಅವರಿಂದ ಸ್ಥಾಪಿಸಲ್ಪಟ್ಟ ವಿಶ್ವದ ಅತಿದೊಡ್ಡ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್ ಸಂಘ (BMS) ಇಂದು ತನ್ನ 72ನೇ ಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ.
ಜಾಗತೀಕರಣ ಅಥವಾ ಹೆಚ್ಚು ನಿಖರವಾಗಿ ಹೇಳಬೇಕೆಂದರೆ ಎಲ್ಪಿಜಿ (LPG) ಸುಧಾರಣೆಗಳು ಬಂದಾಗಿನಿಂದ, ಲಕ್ಷಾಂತರ ಕೈಗಾರಿಕೆಗಳು ಮುಚ್ಚಿಹೋದವು, ಕೋಟ್ಯಂತರ ಕಾರ್ಮಿಕರು ಕೆಲಸ ಕಳೆದುಕೊಂಡರು, ಪ್ರಮುಖ ಉದ್ಯೋಗ ಕ್ಷೇತ್ರಗಳಲ್ಲಿ ನೇಮಕಾತಿಗೆ ನಿಷೇಧ ಹೇರಲಾಯಿತು ಮತ್ತು ನಮ್ಮ ಬೆಳವಣಿಗೆಯ ಪ್ರಕ್ರಿಯೆಯನ್ನೇ “ಉದ್ಯೋಗರಹಿತ ಬೆಳವಣಿಗೆ” (Jobless Growth) ಎಂದು ಕರೆಯಲಾಯಿತು. ಜಾಗತೀಕರಣವು ಕೈಗಾರಿಕಾ ಬಾಂಧವ್ಯದ ಸೂಕ್ಷ್ಮ ಚೌಕಟ್ಟನ್ನು ನಾಶಪಡಿಸಿತು. ಉದ್ಯೋಗದ ಶಾಶ್ವತತೆ ಎಂಬುದು ಹಳೆಯ ಕಥೆಯಾಯಿತು ಮತ್ತು ಗುತ್ತಿಗೆ ಪದ್ಧತಿಯು ಎಲ್ಲೆಡೆ ಹರಡುತ್ತಿದೆ. ಗುತ್ತಿಗೆ ಪದ್ಧತಿಯಲ್ಲಿ, ಉದ್ಯೋಗದಾತ ಮತ್ತು ಕಾರ್ಮಿಕ ಇಬ್ಬರಿಗೂ ಪರಸ್ಪರ ಯಾವುದೇ ಬದ್ಧತೆ, ಶಾಶ್ವತ ಸಂಬಂಧ ಅಥವಾ ಅಟ್ಯಾಚ್ಮೆಂಟ್ ಇರುವುದಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥೈಸಿಕೊಳ್ಳಲು ಭಾರತೀಯ ಕಾರ್ಮಿಕ ಸಂಘಟನೆಗಳಿಗೆ ಸುಮಾರು ಎರಡು ದಶಕಗಳು ಬೇಕಾದವು ಮತ್ತು ಕಾರ್ಮಿಕ ಕ್ಷೇತ್ರದಲ್ಲಿನ ಉಗ್ರ ಹೋರಾಟವು ಈಗ ಹೊಸ ರೂಪದಲ್ಲಿ ಮರಳಿದೆ.
ಕಾರ್ಮಿಕ ಕಾಯ್ದೆಗಳ ಉಲ್ಲಂಘನೆಯು ಕೆಲಸದ ಸ್ಥಳಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ದೆಹಲಿಯ ರಾಜಧಾನಿ ಪ್ರದೇಶದ ಸಮೀಪವಿರುವ ಮಾನೆಸರ್ ಮಾರುತಿ, ಆಲೈಡ್ ನಿಪ್ಪಾನ್, ಕೊಯಮತ್ತೂರು ಸಮೀಪದ ಪ್ರಿಕೋಲ್, ಪಾಂಡಿಚೇರಿಯ ಯಾನಾಂ, ಅಸ್ಸಾಂ ತೋಟಗಳು ಮುಂತಾದ ಕಡೆಗಳಲ್ಲಿ ನಡೆದ ವ್ಯವಸ್ಥಾಪಕರ (ಮ್ಯಾನೇಜರ್ಗಳ) ಹತ್ಯೆಗಳು ಭಾರತೀಯ ಪರಂಪರೆಗೆ ತಿಳಿದಿರದಂತಹ ಇಂತಹ “ಘೋರ ಪ್ರತಿಕ್ರಿಯೆಗಳಿಗೆ” ಉದಾಹರಣೆಗಳಾಗಿವೆ. ಈ ಎಲ್ಲಾ ಸ್ಥಳಗಳಲ್ಲಿ ಸಾಂಪ್ರದಾಯಿಕ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ದುರ್ಬಲವಾಗಿದ್ದವು ಅಥವಾ ಇರಲೇ ಇಲ್ಲ, ಮತ್ತು ಕಾರ್ಮಿಕರು ಪ್ರತಿಯಾಗಿ ಅರಾಜಕ ರೀತಿಯಲ್ಲಿ ಸ್ಪಂದಿಸಿದರು.
ಭಾರತದ ಮೂಲಭೂತ ಕಾರ್ಮಿಕ ಕಾಯ್ದೆಯೆಂದರೆ 1947 ರ ‘ಕೈಗಾರಿಕಾ ವಿವಾದಗಳ ಕಾಯ್ದೆ’ (Industrial Disputes Act). ಕೈಗಾರಿಕಾ ವಿವಾದಗಳ ಕಾಯ್ದೆಯು ಯಜಮಾನ-ಸೇವಕ (Master-Servant) ಸಂಬಂಧದ ಪಾಶ್ಚಿಮಾತ್ಯ ಪರಿಕಲ್ಪನೆಯನ್ನು ಆಧರಿಸಿದ ಉದ್ಯೋಗದಾತ-ಉದ್ಯೋಗಿ ಬಾಂಧವ್ಯದ ಮಾದರಿಯನ್ನು ಹಾಕಿಕೊಟ್ಟಿದೆ. ಪಾಶ್ಚಿಮಾತ್ಯ ಇತಿಹಾಸವು ಮಾಲೀಕ-ಗುಲಾಮ ಸಂಬಂಧವಿದ್ದ ಗುಲಾಮಗಿರಿಯ ಯುಗವನ್ನು ಹಾದುಬಂದಿದೆ. ಮನುಷ್ಯ ಗುಲಾಮರನ್ನು ಪ್ರಾಣಿಗಳಂತೆ ಬಹಿರಂಗ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇಂತಹ ವ್ಯವಸ್ಥೆಯು ಭಾರತೀಯ ಇತಿಹಾಸದಲ್ಲಿ ಎಂದಿಗೂ ಇರಲಿಲ್ಲ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಕೈಗಾರಿಕಾ ಕ್ರಾಂತಿ ಪ್ರಾರಂಭವಾದಾಗ, ಕಾರ್ಖಾನೆಗಳ ಆವರಣದಲ್ಲಿ ಬೃಹತ್ ಯಂತ್ರಗಳನ್ನು ಸ್ಥಾಪಿಸಲಾಯಿತು, ಅಲ್ಲಿ ನೂರಾರು ಮತ್ತು ಸಾವಿರಾರು ಕಾರ್ಮಿಕರು ಒಟ್ಟಾಗಿ ಕೆಲಸ ಮಾಡಿದರು. ನಂತರ ಅವರು ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸಲು ಪ್ರಾರಂಭಿಸಿದರು ಮತ್ತು ತದನಂತರ “ಮಾಲೀಕ-ಗುಲಾಮ” ಸಂಬಂಧವನ್ನು “ಯಜಮಾನ-ಸೇವಕ” ಸಂಬಂಧವಾಗಿ ಪರಿಷ್ಕರಿಸಲು ಒತ್ತಾಯಿಸಲಾಯಿತು.
ಗುಲಾಮನ ಜೀವದ ಮೇಲಿದ್ದ ಯಜಮಾನನ ಹಕ್ಕನ್ನು ಬದಲಿಸಿ ಸೇವಕನನ್ನು “ಕೆಲಸಕ್ಕೆ ಬೇಕಾದಾಗ ತಗೋ, ಬೇಡವಾದಾಗ ತೆಗೆದು ಹಾಕು” (Hire and Fire) ಎಂಬ ಹಕ್ಕಿನೊಂದಿಗೆ ಜೋಡಿಸಲಾಯಿತು. ಬಂಡವಾಳಶಾಹಿ ಯುಗದ ಭಾಗವಾಗಿ ಇದು ವಿಶ್ವದಾದ್ಯಂತ ಆಧುನಿಕ ಕೈಗಾರಿಕಾ ನ್ಯಾಯಶಾಸ್ತ್ರದ ಡೀಫಾಲ್ಟ್ ಮಾದರಿಯಾಗಿ ಮುಂದುವರಿಯುತ್ತಿದೆ. ಉದ್ಯೋಗದಾತರು ಮತ್ತು ಉದ್ಯೋಗಿಗಳು ಕಾರ್ಮಿಕ ಕ್ಷೇತ್ರದಲ್ಲಿ ಈ ‘ಹೈರ್ ಆಂಡ್ ಫೈರ್’ ಸಂಬಂಧದ ಪರ ಮತ್ತು ವಿರುದ್ಧ ಸಂಘರ್ಷ ನಿರಂತರವಾಗಿ ಮುಂದುವರಿದಿದೆ. ಇಂದಿನ ಕೈಗಾರಿಕಾ ಸಂಬಂಧಗಳಲ್ಲಿ ಎದುರಾಗಿರುವ ಮೂಲಭೂತ ಸಮಸ್ಯೆಯೂ ಇದೇ ಆಗಿದೆ.
ಈ ಶೋಷಣಾತ್ಮಕ ಬಂಡವಾಳಶಾಹಿ ಮಾದರಿಗೆ ಪ್ರತಿಕ್ರಿಯೆಯಾಗಿ, ಕಮ್ಯುನಿಸ್ಟರು ‘ವರ್ಗ ಸಂಘರ್ಷ’ (Class War) ಸಿದ್ಧಾಂತವನ್ನು ಪ್ರಸ್ತಾಪಿಸಿದರು. ಅವರು ರಾಷ್ಟ್ರೀಯ ಸಮಾಜವನ್ನು ಎರಡು ವರ್ಗಗಳಾಗಿ ವಿಂಗಡಿಸಿದರು. ಬಂಡವಾಳಶಾಹಿಗಳು ಮತ್ತು ಶ್ರಮಿಕ ವರ್ಗದವರು ನಿರಂತರವಾಗಿ ಸಂಘರ್ಷದಲ್ಲಿರುವ ಎರಡು ವರ್ಗಗಳು, ಮತ್ತು ಉದ್ಯೋಗದಾತನು ಕಾರ್ಮಿಕನ ವರ್ಗ ಶತ್ರು ಎಂದು ಅವರು ಭಾವಿಸಿದರು. ಕಮ್ಯುನಿಸ್ಟ್ ಪಕ್ಷಗಳು ಅಂತಿಮವಾಗಿ ಶ್ರಮಿಕ ವರ್ಗದ ಸರ್ವಾಧಿಕಾರ ಸ್ಥಾಪನೆಯಾಗುತ್ತದೆ ಎಂಬ ಭರವಸೆಯೊಂದಿಗೆ ತಮ್ಮ ಉದ್ಯೋಗದಾತರ ವಿರುದ್ಧ ಹೋರಾಡಲು ಶ್ರಮಿಕ ವರ್ಗವನ್ನು ಪ್ರಚೋದಿಸಿದವು. ಆದ್ದರಿಂದ ಅವರು “ವಿಶ್ವದ ಕಾರ್ಮಿಕರೇ, ಒಂದಾಗಿ!” ಎಂಬ ವರ್ಗೀಯ ಘೋಷಣೆಯನ್ನು ಎತ್ತಿದರು.
ಭಾರತೀಯ ಕಾರ್ಮಿಕ ನ್ಯಾಯಶಾಸ್ತ್ರಕ್ಕೂ ಇದೇ ಅನ್ವಯಿಸುತ್ತದೆ. ಆದ್ದರಿಂದ ಪರಸ್ಪರ ಲಾಭಗಳನ್ನು “ಸಾಮೂಹಿಕ ಚೌಕಾಶಿ” (Collective Bargaining) ಎಂಬ ಪ್ರಕ್ರಿಯೆಯಿಂದ ನಿರ್ಧರಿಸಲಾಗುತ್ತದೆ, ಅಲ್ಲಿ ಹೆಚ್ಚು ಶಕ್ತಿಶಾಲಿ ಪಕ್ಷವು ಗೆಲ್ಲಲು ಸಾಧ್ಯವಾಗಿರುತ್ತದೆ. ಇದು ಪಾಶ್ಚಿಮಾತ್ಯ ಸಂಸ್ಕೃತಿಗೆ ಮೂಲಭೂತವಾಗಿರುವ “ಬಲಶಾಲಿಗಷ್ಟೇ ಉಳಿಯುವ ಹಕ್ಕು” (Survival of the fittest), “ಬಲವುಳ್ಳವನದೇ ಆಡಳಿತ” (Might is right) ಮತ್ತು “ಬಹುಸಂಖ್ಯಾತ ಪ್ರಜಾಪ್ರಭುತ್ವ” ತತ್ವಗಳನ್ನು ಆಧರಿಸಿದೆ. ಈ ಹೋರಾಟದಲ್ಲಿ ಅಂಪೈರ್ ಆಗಿ ಕೆಲಸ ಮಾಡುವುದು ಸರ್ಕಾರದ ಪಾತ್ರವಾಗಿದೆ. ಹೀಗಾಗಿ, ಮೂರನೇ ವ್ಯಕ್ತಿಯಾದ ಸರ್ಕಾರದ ಸಮ್ಮುಖದಲ್ಲಿ ಮಧ್ಯಸ್ಥಿಕೆದಾರರಾಗಿ ಇಬ್ಬರು ಕಕ್ಷಿದಾರರ ನಡುವೆ ವಿವಾದಗಳನ್ನು ಇತ್ಯರ್ಥಪಡಿಸಬೇಕು ಎಂದು ಕೈಗಾರಿಕಾ ವಿವಾದಗಳ ಕಾಯ್ದೆಯು ಕಡ್ಡಾಯಗೊಳಿಸುತ್ತದೆ. ಇದು ಕಾರ್ಮಿಕ ಕಾನೂನಿನಿಂದ ಕಲ್ಪಿಸಲ್ಪಟ್ಟ ತ್ರಿಪಕ್ಷೀಯ ಕಾರ್ಯವಿಧಾನವಾಗಿದೆ (Tripartite mechanism). ಕಾರ್ಮಿಕ ಸಂಬಂಧಗಳಲ್ಲಿ ವಿವಾದ ಪರಿಹಾರ ವ್ಯವಸ್ಥೆಗೆ ಸಂಧಾನ ಪ್ರಕ್ರಿಯೆಯು ಅತ್ಯಗತ್ಯವಾಗಿದೆ.
ಐಎಲ್ಒ (ILO) ಜನನ
1917 ರಲ್ಲಿ ರಷ್ಯಾದ ಕಮ್ಯುನಿಸ್ಟರು ನಡೆಸಿದ ‘ಅಕ್ಟೋಬರ್ ಕ್ರಾಂತಿ’ಯು ವಿಶ್ವದ ಬಂಡವಾಳಶಾಹಿ ದೇಶಗಳಲ್ಲಿ ಭಯದ ವಾತಾವರಣವನ್ನು ಉಂಟುಮಾಡಿತು. ಕಮ್ಯುನಿಸಂ ಯುವಕರಲ್ಲಿ ಒಂದು ಫ್ಯಾಷನ್ನಂತೆ ಜಗತ್ತಿನಾದ್ಯಂತ ಹರಡಬಹುದು ಮತ್ತು ತಮ್ಮ ದೇಶಗಳಲ್ಲಿ ಸ್ಥಾಪಿತವಾಗಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ಮೆಟ್ಟಿನಿಲ್ಲಬಹುದು ಎಂದು ಅವರು ಅಂಜಿದರು. ಆದ್ದರಿಂದ ಅವರು ಕಾರ್ಮಿಕರ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವ ಮೂಲಕ ಜಗತ್ತಿನಾದ್ಯಂತ ಇರುವ ಕಾರ್ಮಿಕರನ್ನು ಓಲೈಸಲು ಯೋಚಿಸಿದರು. ಈ ಉದ್ದೇಶಕ್ಕಾಗಿ ಲೀಗ್ ಆಫ್ ನೇಷನ್ಸ್ (ವಿಶ್ವಸಂಸ್ಥೆಯ ಪೂರ್ವರೂಪ) ಆಶ್ರಯದಲ್ಲಿ 1919 ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO) ಯನ್ನು ಸ್ಥಾಪಿಸಲಾಯಿತು.
ಐಎಲ್ಒ ಕಾರ್ಮಿಕರಿಗೆ ಕನಿಷ್ಠ ಕೆಲಸದ ಪರಿಸ್ಥಿತಿಗಳನ್ನು ನಿಗದಿಪಡಿಸಿತು ಮತ್ತು ತನ್ನ ಫಿಲಡೆಲ್ಫಿಯಾ ಸಮ್ಮೇಳನದಲ್ಲಿ “ಕಾರ್ಮಿಕ ಎಂಬುದು ಮಾರಾಟದ ಸರಕಲ್ಲ” (Labour is not a Commodity) ಎಂದು ಘೋಷಿಸಿತು. ಕಾರ್ಮಿಕ ಅಶಾಂತಿ ಮತ್ತು ಕಮ್ಯುನಿಸಂ ವಿಶ್ವದ ಪ್ರಮುಖ ಭಾಗಗಳಿಗೆ ಹರಡದಂತೆ ತಡೆದ ಒಂದು ಮಾಧ್ಯಮ ಎಂದರೆ ಐಎಲ್ಒ. ಭಾರತವು ಐಎಲ್ಒನ ಸ್ಥಾಪಕ ಸದಸ್ಯರಲ್ಲಿ ಒಂದಾಗಿದ್ದರಿಂದ, ಬ್ರಿಟಿಷ್ ಸರ್ಕಾರವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದಲ್ಲಿ ಮೊದಲ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟವಾಗಿ ಎಐಟಿಯುಸಿ (AITUC) ರಚನೆಯನ್ನು ಉತ್ತೇಜಿಸಬೇಕಾಯಿತು. ಭಾರತದಲ್ಲಿನ ಅನೇಕ ಕಾರ್ಮಿಕ ಶಾಸನಗಳು ಐಎಲ್ಒ ವಿಧಿಸಿದ ಅಂತರರಾಷ್ಟ್ರೀಯ ಕಟ್ಟುಪಾಡುಗಳ ಪರಿಣಾಮವಾಗಿವೆ.
ಕಾರ್ಮಿಕ ಸುಧಾರಣೆಗಳಲ್ಲಿ ಮುಂಚೂಣಿಯಲ್ಲಿದ್ದ ಡಾ. ಅಂಬೇಡ್ಕರ್ ಅವರಂತಹ ಮಹಾನ್ ಕಾನೂನು ದಿಗ್ಗಜರ ಉಪಸ್ಥಿತಿಯನ್ನು ಹೊಂದಲು ಭಾರತವು ಅದೃಷ್ಟ ಮಾಡಿತ್ತು. ವೈಸ್ರಾಯ್ ಕೌನ್ಸಿಲ್ನಲ್ಲಿ ಅವರು ಮೊದಲ ಕಾರ್ಮಿಕ ಸಚಿವರಾಗಿ ನೇಮಕಗೊಂಡಾಗ 1942 ರಲ್ಲಿ ಇದು ಪ್ರಾರಂಭವಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಸ್ವತಂತ್ರೋತ್ತರ ಸರ್ಕಾರದಲ್ಲಿ ನೆಹರೂ ನೇತೃತ್ವದ ಪ್ರಬಲ ಬಣದಿಂದ ತೀವ್ರ ಅಸಹಕಾರವಿದ್ದರೂ ಅವರು ತಮ್ಮ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕಾಯಿತು.
ಕಾರ್ಮಿಕ ಮತ್ತು ಕೈಗಾರಿಕಾ ಸಂಬಂಧಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತಕ್ಕೆ ಸಾಂಸ್ಕೃತಿಕ ಪರಿವರ್ತನೆಯ ಅಗತ್ಯವಿದೆ. ಬಂಡವಾಳಶಾಹಿ ಯುಗದಲ್ಲಿ, ವಾಣಿಜ್ಯ ಸಂಸ್ಕೃತಿಯು ಪ್ರತಿಯೊಂದರಲ್ಲೂ ಲಾಭವನ್ನು ಪ್ರೇರಕ ಶಕ್ತಿಯಾಗಿ ಬಿಂಬಿಸುತ್ತದೆ. ಬಂಡವಾಳಶಾಹಿಯು ಕಾರ್ಮಿಕ, ಮಹಿಳೆ, ಪರಿಸರ, ಭೂಮಿ ಮುಂತಾದವುಗಳನ್ನು ಕೇವಲ ವ್ಯಾಪಾರ ಮಾಡಬಹುದಾದ ಸರಕುಗಳಾಗಿ ನೋಡಿದಾಗ ಸಂಘರ್ಷ ಉಂಟಾಗುತ್ತದೆ. ಆಧುನಿಕವಾಗಿ ಹೆಚ್ಚಾಗಿ ಬಳಸಲಾಗುವ ಬಂಡವಾಳಶಾಹಿ ಪದವಾದ “ಕಾರ್ಮಿಕ ಮಾರುಕಟ್ಟೆ” (Labour market) ತೀವ್ರ ಆಕ್ಷೇಪಾರ್ಹವಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಯೇ ಸರಕು; ಆದರೆ ಕಾರ್ಮಿಕ ಮಾರುಕಟ್ಟೆಯಲ್ಲಿ ಕಾರ್ಮಿಕನನ್ನು ಸರಕು ಎಂದು ಪರಿಗಣಿಸುವುದು ಹಾಸ್ಯಾಸ್ಪದ.
ಹೀಗಾಗಿ, ಕಾರ್ಮಿಕ ಕ್ಷೇತ್ರದಲ್ಲಿ ಪುನರುತ್ಥಾನಗೊಳ್ಳುತ್ತಿರುವ ಭಾರತದ ದೃಷ್ಟಿಕೋನವು ಬಂಡವಾಳಶಾಹಿ ಮತ್ತು ಕಮ್ಯುನಿಸ್ಟ್ ಕಾರ್ಮಿಕ ಸಂಬಂಧಗಳ ಜಂಜಾಟದ ಜಾಲದಲ್ಲಿ ಸಿಲುಕಿಕೊಂಡಿದೆ. ಕಾರ್ಮಿಕ ಸಂಬಂಧಗಳ ಕುರಿತು ಭಾರತವು ಜಗತ್ತಿಗೆ ನೀಡಬಹುದಾದ ಪರ್ಯಾಯವೇನು? ನಮ್ಮ ದಾರ್ಶನಿಕರು ಕಲ್ಪಿಸಿದ ಕಾರ್ಮಿಕ ಸಂಬಂಧಗಳು ಮತ್ತು ಕೆಲಸದ ಸಂಸ್ಕೃತಿಯ ದೃಷ್ಟಿಕೋನದ ಮೂಲಕ ನಾವು ಸಾಗೋಣ.
ಕಾರ್ಮಿಕ ಸಂಬಂಧಗಳ ಭಾರತೀಯಕರಣ:
ಭಾರತೀಯ ಎಥೋಸ್ (ಮೌಲ್ಯಗಳಲ್ಲಿ) ಬೇರೂರಿರುವ ಏಕೈಕ ಕಾರ್ಮಿಕ ಸಂಘಟನೆಯಾದ ಬಿಎಂಎಸ್, ಪ್ರಸ್ತುತ ಇರುವ ಶತ್ರುತ್ವದ ವ್ಯವಸ್ಥೆಯನ್ನು ವಿರೋಧಿಸುತ್ತದೆ ಮತ್ತು ಸಂಘರ್ಷದ ಆಡಳಿತದಿಂದ ಸಮನ್ವಯದ ವಾತಾವರಣಕ್ಕೆ ಹೋಗಲು ಬಯಸುತ್ತದೆ. ಕೈಗಾರಿಕಾ ಸಂಬಂಧಗಳಲ್ಲಿ ಸಾಮರಸ್ಯದ ವಾತಾವರಣವಿರಬೇಕು, ಅಲ್ಲಿ ಪ್ರತಿಯೊಂದು ಸಮಸ್ಯೆಯನ್ನು ಮಾಲೀಕರು ಮತ್ತು ಕಾರ್ಮಿಕರು ಒಟ್ಟಿಗೆ ಕುಳಿತು ಮಾತನಾಡಿಕೊಂಡು ಕೆಲಸದ ಸ್ಥಳದಲ್ಲೇ ಇತ್ಯರ್ಥಪಡಿಸಿಕೊಳ್ಳಬೇಕು. ಇದೇ ದ್ವಿಪಕ್ಷೀಯತೆ (Bipartism). ದ್ವಿಪಕ್ಷೀಯತೆ ವಿಫಲವಾದಾಗ ಮಾತ್ರ ತ್ರಿಪಕ್ಷೀಯತೆ ಪ್ರವೇಶಿಸಬೇಕು. ಒಳ್ಳೆಯವರನ್ನು ಮತ್ತು ದುರ್ಬಲರನ್ನು ರಕ್ಷಿಸುವುದು ಸರ್ಕಾರದ ಪಾತ್ರವೆಂದರೆ “ಪರಿತ್ರಾಣಾಯ ಸಾಧೂನಾಮ್”. ಇದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತು.
ಸರ್ಕಾರ, ಉದ್ಯೋಗದಾತರ ಸಂಘಟನೆಗಳು ಮತ್ತು ಟ್ರೇಡ್ ಯೂನಿಯನ್ಗಳು ಇಂತಹ ಸಮನ್ವಯದ ವಾತಾವರಣವನ್ನು ಸಾಧಿಸಲು ಒಟ್ಟಾಗಿ ಶ್ರಮಿಸುವ ಅನ್ವೇಷಣೆಯನ್ನು ನಮ್ಮ ಕಾರ್ಮಿಕ ಕಾನೂನು ಸುಧಾರಣೆಗಳು ಅನುಸರಿಸಬೇಕು. ಸಂಘರ್ಷದಲ್ಲಿರುವ ಪಕ್ಷಗಳ ಪರಿಕಲ್ಪನೆಯ ಬದಲಿಗೆ, ಬಿಎಂಎಸ್ ತನ್ನ ಉದಯದಿಂದಲೂ “ಕೈಗಾರಿಕಾ ಕುಟುಂಬ” (Industrial Family) ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿದೆ. ಆದ್ದರಿಂದ ಎಚ್ಆರ್ ಎಂಬುದು ಮಾನವ ಸಂಪನ್ಮೂಲ- “Human Resources” (ಇನ್ನೂ ವಾಣಿಜ್ಯಿಕ ಪದ) ಆಗಿರಬಾರದು; ಅದು ಮಾನವ ಸಂಬಂಧಗಳು- “Human Relations” ಆಗಿರಬೇಕು. ಇದು ಕಾರ್ಮಿಕನ ಘನತೆಯನ್ನು ಅತ್ಯಂತ ಗೌರವಿಸುವ ಕೆಲಸದ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಐಎಲ್ಒ ಈ ವಿಧಾನವನ್ನು ಒಪ್ಪಿಕೊಂಡಿದೆ ಮತ್ತು ಕಾರ್ಮಿಕ ನಿರ್ವಹಣೆಯಲ್ಲಿ ಟ್ರೇಡ್ ಯೂನಿಯನ್ಗಳು, ಉದ್ಯೋಗದಾತರ ಸಂಘಟನೆಗಳು ಮತ್ತು ಸರ್ಕಾರಕ್ಕೆ ಸಮಾನ ಸ್ಥಾನಮಾನ ಮತ್ತು ಪಾತ್ರವನ್ನು ನೀಡುವ “ಸಾಮಾಜಿಕ ಭಾಗಿದಾರರು” (Social Partners) ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿದೆ. ಹೀಗಾಗಿ ಮೂರು ವಿಭಿನ್ನ ಪಕ್ಷಗಳ (ತ್ರಿಪಕ್ಷೀಯತೆ) ಆಲೋಚನೆಯಿಂದ ನಾವು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಮೂರು ಭಾಗಿದಾರರು ಎಂಬ ಪರಿಕಲ್ಪನೆಯತ್ತ ಸಾಗಬೇಕಾಗಿದೆ.
ಮೂಲಭೂತ ಕಾಯ್ದೆಯ ಹೆಸರನ್ನು ‘ಕೈಗಾರಿಕಾ ವಿವಾದಗಳ ಕಾಯ್ದೆ’ಯಿಂದ ‘ಕೈಗಾರಿಕಾ ಸಂಬಂಧಗಳ ಕಾಯ್ದೆ’ ಎಂದು ಬದಲಾಯಿಸುವಂತೆ ಬಿಎಂಎಸ್ ಮತ್ತು ಅನೇಕ ಸುಧಾರಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇದು ದೇಶದ ಕಾರ್ಮಿಕ ಸಂಬಂಧಗಳಿಗೆ ಸಕಾರಾತ್ಮಕ ವಿಧಾನದ ಆರಂಭವನ್ನು ತಿಳಿಸುತ್ತದೆ. ಅದೃಷ್ಟವಶಾತ್ ಪ್ರಸ್ತುತ ಸರ್ಕಾರ ಇದನ್ನು ಒಪ್ಪಿಕೊಂಡಿದೆ ಮತ್ತು ಹೊಸ ಕರಡು ಕಾಯ್ದೆಗೆ “ಕೈಗಾರಿಕಾ ಸಂಬಂಧಗಳ ಕಾರ್ಮಿಕ ಸಂಹಿತೆ” (Labour Code on Industrial Relations) ಎಂದು ಹೆಸರಿಸಲಾಗಿದೆ.
ರಾಷ್ಟ್ರೀಯ ಭಾವನೆಯಲ್ಲಿ ಕಾರ್ಮಿಕ:
ಋಗ್ವೇದವು ವಿಶ್ವದ ಅತ್ಯಂತ ಹಳೆಯ ಮಾನವ ಸಾಹಿತ್ಯವಾಗಿದ್ದು, ಇತಿಹಾಸದಲ್ಲಿ ಮಾನವ ಪ್ರತಿಭೆಯ ಉದಯವನ್ನು ಗುರುತಿಸುತ್ತದೆ. ಇಡೀ ಜಗತ್ತನ್ನು ನಿರ್ಮಿಸಿದ ಕಾರ್ಮಿಕನ ಪರಿಕಲ್ಪನೆಯನ್ನು ಋಗ್ವೇದದಲ್ಲಿ “ವಿಶ್ವಕರ್ಮ” ಎಂದು ಸಾಕಾರಗೊಳಿಸಲಾಗಿದೆ. ಋಗ್ವೇದ (10.81-82) ವಿಶ್ವಕರ್ಮನೇ ಎಲ್ಲದರ ಸೃಷ್ಟಿಕರ್ತ ಎಂದು ಹೇಳುತ್ತದೆ. ಜಗತ್ತನ್ನು ಸೃಷ್ಟಿಸಲು ಮಾಡಿದ ತ್ಯಾಗಕ್ಕಾಗಿ ಅವರನ್ನು ದೇವರ ಸ್ಥಾನಕ್ಕೆ ಏರಿಸಲಾಗಿದೆ. ಮಹತ್ಕಾರ್ಯವನ್ನು ಸಾಧಿಸಲು ದೇವತೆಗಳ ಶಕ್ತಿಯನ್ನು ಪಡೆಯಲು, ಸರ್ವ ಮೇಧ ಯಜ್ಞದ ಬೆಂಕಿಯಲ್ಲಿ ಬಲಿಯಾಗಲು ವಿಶ್ವಕರ್ಮನೇ ಸ್ವತಃ ಹವಿಸ್ಸು ಆಗಲು ಆಯ್ಕೆ ಮಾಡಿಕೊಂಡನು ಎಂದು ಋಗ್ವೇದ (10.81.6) ಹೇಳುತ್ತದೆ.
ಋಗ್ವೇದವು ಸ್ವಯಂ ತ್ಯಾಗದ ಮಾದರಿಯಾಗಿದ್ದ ಹಲವಾರು ಮಹಾನ್ ವ್ಯಕ್ತಿಗಳ ಬಗ್ಗೆ ಉಲ್ಲೇಖಿಸುತ್ತದೆ. ವಿಶ್ವಕರ್ಮ ಮಾಡಿದಂತೆಯೇ ಪರಂಪುರುಷ, ಬೃಹಸ್ಪತಿ, ದಧೀಚಿ ಮತ್ತು ಯಮ ಅವರು ಪ್ರಪಂಚದ ಒಳಿತಿಗಾಗಿ ವಿವಿಧ ಯಜ್ಞಗಳಲ್ಲಿ ಸ್ವಯಂ ಆಹುತಿಯಾಗಿದ್ದಾರೆ. ಹೀಗಾಗಿ, ಭಾರತೀಯ ಕೆಲಸದ ಸಂಸ್ಕೃತಿಯು ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರೂ ಪರಸ್ಪರ ಮತ್ತು ರಾಷ್ಟ್ರದ ಕಾರಣಕ್ಕಾಗಿ ತ್ಯಾಗ ಮಾಡುವ ತಳಹದಿಯ ಮೇಲೆ ನಿಂತಿದೆ. ತ್ಯಾಗ ಎಂಬುದು ಒನ್ವೇ ಟ್ರಾಫಿಕ್ ಅಲ್ಲ, ಕೆಲಸದ ಸಂಸ್ಕೃತಿಯೂ ಅಷ್ಟೇ. ಇದು ರಾಷ್ಟ್ರೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಭಾರತೀಯ ಮಜ್ದೂರ್ ಸಂಘವು ತನ್ನ ಸಮಗ್ರ ವಿಧಾನವನ್ನು “ರಾಷ್ಟ್ರ ಹಿತ, ಉದ್ಯೋಗ ಹಿತ ಮತ್ತು ಮಜ್ದೂರ್ ಹಿತ” ಅಂದರೆ ರಾಷ್ಟ್ರ, ಉದ್ಯಮ ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಎಂದು ರೂಪಿಸಿದೆ. ಮೂರೂ ಒಟ್ಟಿಗೆ ಪ್ರಗತಿ ಹೊಂದಬೇಕು. ಇನ್ನೊಂದರ ವೆಚ್ಚದಲ್ಲಿ ಯಾವುದೋ ಒಂದರ ಪ್ರಗತಿಯ ಆಲೋಚನೆಯು ಈ ಮಾದರಿಗೆ ಹೊಂದುವುದಿಲ್ಲ. ಇದು ಭಾರತ ಪ್ರಪಂಚಕ್ಕೆ ಪ್ರಸ್ತಾಪಿಸುವ ಸಮಗ್ರ ತ್ರಿಪಕ್ಷೀಯ ಸಂಸ್ಕೃತಿಯಾಗಿದೆ.
ಭಾರತಕ್ಕೆ ರಾಷ್ಟ್ರೀಯತಾವಾದಿ ಟ್ರೇಡ್ ಯೂನಿಯನ್ಗಳ ತೀವ್ರ ಅಗತ್ಯವಿದೆ. ಬಿಎಂಎಸ್ ಹೊರತುಪಡಿಸಿ ಇತರ ಟ್ರೇಡ್ ಯೂನಿಯನ್ಗಳು ಎರಡು ವರ್ಗಗಳ ಅಡಿಯಲ್ಲಿ ಬರುತ್ತವೆ. ಕಮ್ಯುನಿಸ್ಟ್ ಯೂನಿಯನ್ಗಳು ದೇಶವಿರೋಧಿ ಶಕ್ತಿಗಳ ಪರ ನಿಲ್ಲುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆದಾಗ ಕಮ್ಯುನಿಸ್ಟೇತರ ಯೂನಿಯನ್ಗಳು ತಟಸ್ಥ ನಿಲುವು ತಳೆಯುತ್ತವೆ. ಕಾರಣವೆಂದರೆ ಇಂತಹ ಟ್ರೇಡ್ ಯೂನಿಯನ್ಗಳು ನೀತಿ ವಿಷಯಗಳಲ್ಲಿ ತಮ್ಮ ರಾಜಕೀಯ ಮೇಲಧಿಕಾರಿಗಳಿಗೆ ವರದಿ ಮಾಡಬೇಕಾಗುತ್ತದೆ. ಇತ್ತೀಚೆಗೆ ಚೀನಾದಲ್ಲಿ ನಡೆದ ಬ್ರಿಕ್ಸ್ (BRICS) ಟ್ರೇಡ್ ಯೂನಿಯನ್ ಫೋರಂ ಸಭೆಯಲ್ಲಿ ಐದು ದೇಶಗಳ ಕೇಂದ್ರೀಯ ಟ್ರೇಡ್ ಯೂನಿಯನ್ಗಳು ಭಾಗವಹಿಸಿದ್ದವು. ಭಾರತ-ಚೀನಾ ಬಾಂಧವ್ಯ ಹರಿದುಬಿದ್ದ ಸಮಯದಲ್ಲಿ ಈ ಸಭೆ ನಡೆದಿತ್ತು. ಚೀನಾ ಸರ್ಕಾರ ಪ್ರಾಯೋಜಿತ ಏಕೈಕ ಚೀನೀ ಕೇಂದ್ರೀಯ ಟ್ರೇಡ್ ಯೂನಿಯನ್ ಆದ ಎಸಿಎಫ್ಟಿಯು (ACFTU), ಬಿಆರ್ಐ (BRI) ಉಪಕ್ರಮವನ್ನು ಅಭಿನಂದಿಸುವ ಪ್ಯಾರಾಗ್ರಾಫ್ ಅನ್ನು ಕರಡು ಘೋಷಣೆಗೆ ಸೇರಿಸಲು ಬಯಸಿತು. ಬಿಎಂಎಸ್ ಪ್ರತಿನಿಧಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಸುರೇಂದ್ರನ್ ಅವರು ಮಾತ್ರ ಇದಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಿ, ಇದರ ಬಗ್ಗೆ ತೀವ್ರ ಆಕ್ಷೇಪಣೆ ಹೊಂದಿರುವ ಭಾರತ ಸರ್ಕಾರವು ಚೀನೀ ಉಪಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಹೇಳಿದರು.
ಕಮ್ಯುನಿಸ್ಟ್ ಟ್ರೇಡ್ ಯೂನಿಯನ್ಗಳಾದ ಸಿಐಟಿಯು (CITU), ಎಐಟಿಯುಸಿ (AITUC) ಮತ್ತು ಎಐಸಿಸಿಟಿಯು (AICCTU) ಪ್ರತಿನಿಧಿಗಳು ಚೀನಾದ ಮಣ್ಣಿನಲ್ಲಿ ಚೀನಾದ ನಿಲುವನ್ನು ಬೆಂಬಲಿಸಿದರು. ಐಎನ್ಟಿಯುಸಿ (INTUC) ತಟಸ್ಥ ನಿಲುವು ತಳೆಯಿತು. ಆದರೆ ಬಿಎಂಎಸ್ ಪ್ರತಿನಿಧಿಯ ತೀವ್ರ ಆಕ್ಷೇಪಣೆಯಿಂದಾಗಿ, ಬ್ರಿಕ್ಸ್ ಟ್ರೇಡ್ ಯೂನಿಯನ್ ಫೋರಂ ಆ ಪ್ಯಾರಾಗ್ರಾಫ್ ಅನ್ನು ತೆಗೆದುಹಾಕಬೇಕಾಯಿತು. ಬಿಎಂಎಸ್ ಹೊರತುಪಡಿಸಿ ಇತರ ಟ್ರೇಡ್ ಯೂನಿಯನ್ಗಳಿಗೆ ಭಾರತದ ಹೊರಗೆ, ವಿಶೇಷವಾಗಿ ಚೀನಾದ ಮಣ್ಣಿನಲ್ಲಿ ರಾಜಕೀಯ ಮಾಡಲು ಯಾವುದೇ ನಾಚಿಕೆ ಅನಿಸಲಿಲ್ಲ! ಇದೊಂದು ಅಪಾಯಕಾರಿ ಪ್ರವೃತ್ತಿ. ಆದ್ದರಿಂದ ಬಿಎಂಎಸ್ ಎತ್ತಿದ “ಕಾರ್ಮಿಕರ ರಾಷ್ಟ್ರೀಕರಣ” (Nationalise the Labour) ಎಂಬ ಘೋಷಣೆಯು ಮಹತ್ವವನ್ನು ಪಡೆದುಕೊಳ್ಳುತ್ತದೆ.
ಪುನರುತ್ಥಾನಗೊಳ್ಳುತ್ತಿರುವ ಭಾರತದತ್ತ:
ಭಾರತದಲ್ಲಿ ತೀವ್ರವಾಗಿ ಅನುಸರಿಸಲಾಗುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ವಿಶೇಷವಾಗಿ ಕಾರ್ಪೊರೇಟ್ ಬಂಡವಾಳಶಾಹಿಯ ತೀವ್ರ ರೂಪದಲ್ಲಿ, ಟ್ರೇಡ್ ಯೂನಿಯನ್ಗಳು ಪ್ರಸ್ತುತ ಸ್ಪರ್ಧೆ, ಹೋರಾಟ, ಶಕ್ತಿ ಪ್ರದರ್ಶನ ಇತ್ಯಾದಿಗಳ ಆಟದ ನಿಯಮಗಳಿಗೆ ಬದ್ಧವಾಗಿರಲು ಕಡ್ಡಾಯಗೊಳಿಸಲಾಗಿದೆ. ಆದರೆ ಕಾರ್ಮಿಕ, ಸಾಮಾನ್ಯ ಮನುಷ್ಯ, ರೈತ, ಬುಡಕಟ್ಟು ಜನಾಂಗದವರು, ಅಂಚಿನಲ್ಲಿರುವವರು ತಮ್ಮ ಸ್ವಂತ ವಿಧಿಯನ್ನು ತಾವೇ ನಿರ್ಧರಿಸುವ ಮತ್ತು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಸಮಯ ಬರುತ್ತದೆ. ಆ ಸುಂದರ ಸಮಯ ಬರಲು ನಾವು ಕೆಲಸ ಮಾಡೋಣ.
