ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು
- ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ
ಹಲವರು ಹೇಗ್ಹೇಗೋ ಬದುಕುತ್ತಾರೆ. ಅವರ ಬಾಳಿಗೊಂದು ನಿಶ್ಚಿತ ಗುರಿಯೇ ಇರುವುದಿಲ್ಲ. ಇನ್ನು ಕೆಲವರು ಹೀಗೇ ಬದುಕಬೇಕೆಂದು ನಿರ್ಧರಿಸಿ ಹಾಗೇ ಬದುಕುತ್ತಾರೆ. ಅವರ ಬಾಳಿಗೆ ನಿಶ್ಚಿತ ಗುರಿ ಇರುತ್ತದೆ. ಹಾಗಾಗಿ ಅದು ಸಾರ್ಥಕ ಬಾಳೆನಿಸಿಕೊಳ್ಳುತ್ತದೆ. ಅಂಥವರ ಸಾಲಿಗೆ ಸೇರಿದ ಪ್ರಾತಃಸ್ಮರಣೀಯ ವ್ಯಕ್ತಿ ಹೊಳೆಹೊನ್ನೂರು ಅನಂತರಾಮ ನರಸಿಂಹಮೂರ್ತಿ ಅಯ್ಯಂಗಾರ್ (ಹೊ.ಅ. ನರಸಿಂಹಮೂರ್ತಿ ಅಯ್ಯಂಗಾರ್). ಬಂಧುಗಳು, ಅಭಿಮಾನಿಗಳು, ಕಾರ್ಯಕರ್ತರು, ಅವರನ್ನು ಗುರುತಿಸುತ್ತಿದ್ದುದು ‘ಗುರುಗಳು’, ‘ಅಣ್ಣ’ ಇತ್ಯಾದಿ ಅಭಿದಾನಗಳಿಂದ.
ಮುಂಡನ ಮಾಡಿದ ತಲೆಯ ನಟ್ಟ ನಡುವೆ ಬಿಟ್ಟ ಶಿಖೆ. ವಿಶಾಲ ಹಣೆ. ಹಣೆಯ ಮೇಲೆ ಮೂರು ನಾಮಗಳು. ಗಿಳಿ ಮೂಗು. ಸ್ವಲ್ಪ ಕುಳ್ಳು ಎನ್ನಬಹುದಾದ ದೇಹ ಪ್ರಕೃತಿ. ಜುಬ್ಬಾ, ಹೆಗಲ ಮೇಲೆ ನೀಟಾಗಿ ಮಡಚಿ ಹಾಕಿದ ಶಾಲು. ಸೊಗಸಾಗಿ ನೀವಿ ಕಟ್ಟಿದ ಕಚ್ಚೆ. ಕಾಲಲ್ಲಿ ಒಂದು ಸಾಮಾನ್ಯ ಪಾದರಕ್ಷೆ. ನಡಿಗೆಯೂ ಬಲು ಚುರುಕು. ಇದು ನರಸಿಂಹಮೂರ್ತಿ ಅಯ್ಯಂಗಾರರ ಹೊರರೂಪ.
ತೀಕ್ಷ್ಣಮತಿ. ಮಾತಿನಲ್ಲಿ ಅಚ್ಚುಕಟ್ಟುತನ. ವಿಚಾರದಲ್ಲಿ ಸ್ಪಷ್ಟತೆ. ಕೆಲಸ ಕಾರ್ಯಗಳಲ್ಲಿ ನಿಯತ್ತು. ಬದುಕಿನಲ್ಲಿ ಅದಮ್ಯ ವಿಶ್ವಾಸ. ಗೆಳೆಯರಿಗೆ ಸದಾ ಪ್ರೋತ್ಸಾಹ. ಹಿರಿಯರಲ್ಲಿ ಗೌರವ. ಕೇಳುಗರಲ್ಲಿ ಪರಿಣಾಮ ಬೀರಬಲ್ಲ ಹಿತಮಿತ ಮಾತುಗಾರಿಕೆ. ಹಿಂದುತ್ವದ ಕೈಂಕರ್ಯಕ್ಕಾಗಿ ಮುಡುಪಿಟ್ಟ ಬದುಕು. ಆ ದೀಕ್ಷೆ, ಆ ನಿಷ್ಠೆ, ಬದುಕಿನ ಕೊನೆಯ ಉಸಿರು ಚೆಲ್ಲುವವರೆಗೂ ಅಚಲ. ಇದು ಅಯ್ಯಂಗಾರರ ಒಳಗಿನ ರೂಪ.
2006ರ ಫೆಬ್ರವರಿ 14ರಂದು ಈ ಲೋಕಕ್ಕೆ ವಿದಾಯ ಹೇಳಿದ ಶಿವಮೊಗ್ಗ ನರಸಿಂಹಮೂರ್ತಿ ಅಯ್ಯಂಗಾರ್ ಅಲ್ಲಿನ ಪ್ರಸಿದ್ಧ ಕೋಟೆ ಸೀತಾರಾಮ ಆಂಜನೇಯ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದವರು. ಆದರೆ ಆ ಕಾರಣಕ್ಕಾಗಿ ಅವರು ಪ್ರಸಿದ್ಧರಾಗಿರಲಿಲ್ಲ. ಆದರೆ ಒಬ್ಬ ಅರ್ಚಕರಾಗಿ ಸದ್ದು ಗದ್ದಲವಿಲ್ಲದೆ ಸಮಾಜ ಸುಧಾರಣೆಯನ್ನು ತಮ್ಮದೇ ರೀತಿಯಲ್ಲಿ ಜೀವನದುದ್ದಕ್ಕೂ ನಿರ್ವಹಿಸಿದ ರೀತಿ ಇದೆಯಲ್ಲ, ಅದು ಎಲ್ಲ ವರ್ಗದ ಜನರ ಅಂತಃಕರಣವನ್ನು ತಟ್ಟಿತ್ತು. ಅವರೆಡೆಗೆ ಪೂಜ್ಯನೋಟವನ್ನು ಬೀರುವಂತೆ ಮಾಡಿತ್ತು. (ಜನನ: 16.11.1927).
ತಂದೆ ಅನಂತರಾಮ ಅಯ್ಯಂಗಾರ್ ಅವರಿಂದ ಬಳುವಳಿಯಾಗಿ ಬಂದ ಅರ್ಚಕ ವೃತ್ತಿಯನ್ನೇ ನರಸಿಂಹಮೂರ್ತಿ ಅಯ್ಯಂಗಾರ್ ಕೂಡ ಆಯ್ಕೆ ಮಾಡಿಕೊಂಡರು. ಕ್ರಮೇಣ ಅರ್ಚಕ ವೃತ್ತಿಗೆ ಅಗತ್ಯವಾದ ವೇದಶಾಸ್ತ್ರಗಳ ಅಧ್ಯಯನವನ್ನು ಮಾಡಿದರು. ತಂದೆಯವರ ನೆರಳಲ್ಲೇ ನಡೆದು ಉತ್ತಮ ಅರ್ಚಕರೂ ಆದರು. ತಾರುಣ್ಯಕ್ಕೆ ಕಾಲಿಡುತ್ತಿದ್ದಂತೆ ಬಹುವಾಗಿ ಅವರನ್ನು ಆಕರ್ಷಿಸಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಬೆಂಗಳೂರಿನಿಂದ ಪ್ರತಿ ಶನಿವಾರ, ಭಾನುವಾರ ಬರುತ್ತಿದ್ದ ಕೃ. ಸೂರ್ಯನಾರಾಯಣರಾವ್ (ಸೂರುಜಿ) ಶಿವಮೊಗ್ಗೆಯ ಸಂಘಕಾರ್ಯಕ್ಕೆ ಭದ್ರಬುನಾದಿ ಹಾಕುತ್ತಿದ್ದ ಕಾಲವದು. ಸೂರುಜಿಯವರ ಸ್ನೇಹದ, ಆತ್ಮೀಯತೆಯ, ಸೆಳವಿಗೆ ಸಿಲುಕಿದ ನರಸಿಂಹಮೂರ್ತಿ ಅಯ್ಯಂಗಾರ್ ಮತ್ತವರ ಸೋದರರು ಸ್ವಯಂಸೇವಕರಾದರು. ಕ್ರಮೇಣ ಕೋಟೆ ಆಂಜನೇಯ ದೇವಸ್ಥಾನದ ಅವರ ಮನೆಯೇ ಸಂಘದ ಕಾರ್ಯಾಲಯ ಆಯಿತು. ಅವರ ಮನೆಯ ಒಂದು ಭಾಗ ಬಹಳ ವರ್ಷಗಳವರೆಗೆ ಸಂಘದ ಅಧಿಕೃತ ಕಾರ್ಯಾಲಯವೂ ಆಗಿತ್ತು. ಅದೇ ಜಿಲ್ಲಾ ಕಾರ್ಯಾಲಯವೂ ಆಗಿತ್ತು.
ಅದೇನು ಶ್ರೀಮಂತ ಮನೆತನವಾಗಿರಲಿಲ್ಲ. ಮಧ್ಯಮ ವರ್ಗದ ಕುಟುಂಬ ಎನ್ನಬಹುದಿತ್ತು, ಅಷ್ಟೇ. ಆದರೆ ಹೃದಯ ಶ್ರೀಮಂತಿಕೆಗೆ ಯಾವ ಕೊರತೆಯೂ ಇರುತ್ತಿರಲಿಲ್ಲ. ಅವರ ಮನೆಗೆ ಹೋದವರು ಕಾಫಿ ಕುಡಿಯದೆ, ತಿಂಡಿ ತಿನ್ನದೆ, ಊಟ ಮಾಡದೆ, ಕೊನೆಗೆ ಒಂದಿಷ್ಟು ದೇವರ ಪ್ರಸಾದವನ್ನಾದರೂ ಸೇವಿಸದೆ ಹಾಗೆಯೇ ಬಂದವರಲ್ಲ. ಅರ್ಚಕರೆಂದರೆ ಮನೆಯಲ್ಲಿ ಮಡಿವಂತಿಕೆ ಸಹಜ. ಆದರೆ ಅಯ್ಯಂಗಾರರ ಮನೆ ಅದಕ್ಕೆ ಅಪವಾದವಾಗಿತ್ತು. ಎಲ್ಲ ಜಾತಿ, ಮತ, ಪಂಥದವರಿಗೂ ದೇವಸ್ಥಾನ ಹಾಗೂ ಅವರ ಮನೆಯಲ್ಲಿ ಮುಕ್ತ ಪ್ರವೇಶ. ಆ ದೇವಸ್ಥಾನ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದಂತೆ ಸಾಮಾಜಿಕ ಸಾಮರಸ್ಯದ ಕೇಂದ್ರವೂ ಆಗಿತ್ತು. ಹಳ್ಳಿಗಳ ಸಾಧಾರಣ ಅರ್ಚಕರನ್ನು ಒಟ್ಟಿಗೆ ಸೇರಿಸಿ, ಅವರಿಗೆ ತಮ್ಮ ವೃತ್ತಿಯ ಉದ್ದೇಶ, ಅದನ್ನು ಸಾಧಿಸಲು ಬೇಕಾದ ಸಿದ್ಧತೆ, ಭಕ್ತವೃಂದಕ್ಕೆ ರವಾನಿಸಬೇಕಾದ ಹಿಂದೂಧರ್ಮದ ಸಂದೇಶ ಇತ್ಯಾದಿ ಸಂಗತಿಗಳನ್ನು ಅಭ್ಯಾಸ ವರ್ಗಗಳ ಮೂಲಕ ತಿಳಿಸಿದರು. ಹೀಗೆ ಆ ದೇವಸ್ಥಾನ ಒಂದು ಪ್ರಯೋಗ ಶಾಲೆಯೇ ಆಯಿತು.
ನರಸಿಂಹಮೂರ್ತಿಗಳು ತಾರುಣ್ಯದಲ್ಲಿ ಕೆಲವು ವರ್ಷ ಸಂಘದ ಪ್ರಚಾರಕರಾಗಿ ನಂಜನಗೂಡು ಮುಂತಾದೆಡೆ ಕಾರ್ಯನಿರ್ವಹಿಸಿದ್ದರು. ಶಿವಮೊಗ್ಗ ತಾಲೂಕು ಕಾರ್ಯವಾಹರಾಗಿ ಶ್ರಮಿಸಿದ್ದರು. ಶಿವಮೊಗ್ಗದಲ್ಲಿ ಜನಸಂಘ ಪ್ರಾರಂಭವಾದಾಗ ಆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಜಿಲ್ಲೆಯಾದ್ಯಂತ ಪಕ್ಷದ ಬೆಳವಣಿಗೆಗೆ ಟೊಂಕ ಕಟ್ಟಿದ್ದರು. ವಿಶ್ವ ಹಿಂದೂ ಪರಿಷದ್ ಆರಂಭಗೊಂಡಾಗ, ಅದರ ಬೆಳವಣಿಗೆಗೂ ಕೈಜೋಡಿಸಿದ್ದರು. ಕರ್ನಾಟಕ ಪ್ರಾಂತ ಧರ್ಮಚಾರ್ಯ ಪ್ರಮುಖರಾಗಿ ವಿವಿಧ ಪಂಥ, ಜಾತಿ, ನಿಲುವುಗಳ ಮಠಾಧೀಶರ ಮನವೊಲಿಸಿ, ಒಂದೇ ವೇದಿಕೆಯ ಮೇಲೆ ಎತ್ತರ ತಗ್ಗುಗಳಿಲ್ಲದ ಒಂದೇ ಬಗೆಯ ಕುರ್ಚಿಗಳಲ್ಲಿ ಸಮಾನವಾಗಿ ಕುಳಿತುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಶೃಂಗೇರಿ ಮಠಾಧೀಶರು, ಪೇಜಾವರ ಶ್ರೀಗಳು, ಆದಿಚುಂಚನಗಿರಿ ಮಠಾಧೀಶರು, ಕಾಗಿನೆಲೆ ಪೀಠಾಧೀಶರು, ಹುಬ್ಬಳ್ಳಿ ಮೂರು ಸಾವಿರ ಜಗದ್ಗುರುಗಳು, ಲಂಬಾಣಿ ಜನಾಂಗದ ಸೇವಾಲಾಲ್ ಸ್ವಾಮೀಜಿ, ಬೇಲಿ ಮಠಾಧೀಶರು, ಸಿರಿಗೆರೆ ಶ್ರೀಗಳು…ಹೀಗೆ ಎಲ್ಲಾ ಮಠಾಧೀಶರ ಗೌರವಕ್ಕೆ ಪಾತ್ರರಾದ ವಿ.ಹಿಂ.ಪ. ಕಾರ್ಯಕರ್ತ ಅವರಾಗಿದ್ದರು. ‘ಗುರುಗಳ ಗುರು’ ಅವರಾಗಿದ್ದರು ಎನ್ನುವ ಮಾತು ಖಂಡಿತ ಉತ್ಪ್ರೇಕ್ಷೆಯದಾಗಿರಲಿಲ್ಲ.
ಹಿಂದೂಧರ್ಮ ಎಲ್ಲ ಸದ್ಧರ್ಮಗಳ ಮೂಲ. ಅದು ಸಂಕುಚಿತ ದೃಷ್ಟಿ ಕಿಂಚಿತ್ತೂ ಇಲ್ಲದ ಔದಾರ್ಯದ ಸಾಗರ ಎಂಬುದನ್ನು ತೋರಿಸಿಕೊಟ್ಟವರು ಈ ‘ಗುರುಗಳ ಗುರು’. ಒಮ್ಮೆ ತಾವು ಪೂಜೆ ಮಾಡುತ್ತಿದ್ದ ಕೋಟೆ ಸೀತಾರಾಮ ಆಂಜನೇಯ ದೇವಸ್ಥಾನಕ್ಕೆ ಶೇಕ್ ಚಿನ್ನ ಮೌಲಾನ ಎಂಬ ಖ್ಯಾತ ಗಾಯಕರನ್ನು ಕರೆಸಿ, ಅವರ ಗಾನಾಮೃತದಿಂದ ಆಂಜನೇಯ ಸ್ವಾಮಿಗೆ ಅಭಿಷೇಕ ಮಾಡಿಸಿ, ತೀರ್ಥ ಪ್ರಸಾದ ನೀಡಿ ಸನ್ಮಾನಿಸಿದ್ದು ಶಿವಮೊಗ್ಗದಲ್ಲಿ ಹಲವರ ಹುಬ್ಬೇರುವಂತೆ ಮಾಡಿತ್ತು.
ತುರ್ತು ಪರಿಸ್ಥಿತಿ ವೇಳೆ 18 ತಿಂಗಳ ಕಾರಾಗೃಹವಾಸ ಅನುಭವಿಸುವ ‘ಭಾಗ್ಯ’ದಿಂದ ನರಸಿಂಹಮೂರ್ತಿಗಳು ವಂಚಿತರಾಗಿರಲಿಲ್ಲ! ಆದರೆ ಅವರಿದ್ದ ಬೆಳಗಾವಿ ಸೆರೆಮನೆಯನ್ನು ಗುರುಮನೆಯಾಗಿ ಬದಲಾಯಿಸಿದ್ದು ಅವರದ್ದೇ ಹೆಚ್ಚುಗಾರಿಕೆ. ಯೋಗಾಸನ, ಧ್ಯಾನ, ಭಜನೆ, ಪ್ರವಚನಗಳ ಮೂಲಕ ಅಲ್ಲಿದ್ದ ಜೊತೆಗಾರರನ್ನು ಖುಷಿಯಾಗಿಟ್ಟಿದ್ದರು. ಮುಖ್ಯವಾಗಿ ಉತ್ಸಾಹ ಕಡಿಮೆಯಾಗಿ ನಿರಾಶರಾಗಿದ್ದವರಿಗೆ ವ್ಯಕ್ತಿಗತ ಮಾತುಕತೆಯ ಮೂಲಕ ಸಾಂತ್ವನ ನೀಡಿ, ಧೈರ್ಯ ತುಂಬುವ ಕೆಲಸವನ್ನು ನಿರಂತರವಾಗಿ ನಡೆಸಿದ್ದರು.
ಭದ್ರಾವತಿಯಲ್ಲೊಮ್ಮೆ ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ 31 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಏರ್ಪಾಡಾಗಿತ್ತು. ಆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿರಿಗೆರೆ ಮಠಾಧಿಪತಿಗಳು ಆಶೀರ್ವಚನ ನೀಡುತ್ತಾ, “ವಿಶ್ವ ಹಿಂದೂ ಪರಿಷದ್ ಜಾತಿ ಭೇದವಿಲ್ಲದೆ ಈ ಸಾಮೂಹಿಕ ವಿವಾಹ ನಡೆಸುತ್ತಿರುವುದೇನೋ ಸರಿ. ಆದರೆ ನರಸಿಂಹಮೂರ್ತಿ ಅಯ್ಯಂಗಾರ್ ತಮ್ಮ ಮಗಳ ಮದುವೆಯನ್ನು ಇದೇ ಸಾಮೂಹಿಕ ಕಾರ್ಯಕ್ರಮದಲ್ಲಿ ಏಕೆ ನೆರವೇರಿಸಲಿಲ್ಲ? ಜಾತಿಭೇದ ನಿವಾರಣೆಯನ್ನು ನಮ್ಮ ಮನೆಯಿಂದಲೇ ಶುರು ಮಾಡುವುದು ಅಗತ್ಯವಲ್ಲವೇ?” ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದರು. ಅಯ್ಯಂಗಾರರು ಮಠಾಧಿಪತಿಗಳ ಬಳಿಯೇ ಕುಳಿತಿದ್ದರು. ಮಠಾಧಿಪತಿಗಳ ಈ ಮಾರ್ಮಿಕ ಮಾತುಗಳಿಗೆ ಅವರು ಕೂಡಲೇ ಅಲ್ಲಿಯೇ ಪ್ರತಿಕ್ರಿಯಿಸಬಹುದೆಂಬುದು ನಮ್ಮೆಲ್ಲರ ನಿರೀಕ್ಷೆಯಾಗಿತ್ತು (ನಾನೂ ಆ ಕಾರ್ಯಕ್ರಮದಲ್ಲಿದ್ದೆ). ಆದರೆ ಅವರು ಈ ಬಗ್ಗೆ ಚಕಾರ ಕೂಡ ಎತ್ತದೆ ಸುಮ್ಮನಿದ್ದುದು ನಮಗೆಲ್ಲ ಸೋಜಿಗವೆನಿಸಿತ್ತು. ಅದಾಗಿ ಒಂದು ವರ್ಷದಲ್ಲಿ ನರಸಿಂಹಮೂರ್ತಿಗಳ ಮಗಳು ಭಾರ್ಗವಿಯ ವಿವಾಹ ಕೋಟೆ ಆಂಜನೇಯ ದೇವಸ್ಥಾನದಲ್ಲಿ ನೆರವೇರಿತು. ಆ ವಿವಾಹಕ್ಕೆ ವಧು – ವರರನ್ನು ಹರಸಲು ಬಂದವರು ಆದಿ ಜಾಂಬವ ಮಠದ ಸ್ವಾಮೀಜಿ ಮತ್ತು ಬೆಕ್ಕಿನ ಕಲ್ಮಠದ ಸ್ವಾಮೀಜಿ. ಬ್ರಾಹ್ಮಣ ವರ್ಗದ ವಧು – ವರರು ದಲಿತರೆನಿಸಿದ ಆದಿ ಜಾಂಬವ ಮಠದ ಸ್ವಾಮೀಜಿಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ದೃಶ್ಯ ಅಲ್ಲಿದ್ದವರನ್ನೆಲ್ಲ ಚಕಿತಗೊಳಿಸಿತ್ತು. ಒಂದು ವರ್ಷದ ಹಿಂದೆ ಸಿರಿಗೆರೆ ಸ್ವಾಮೀಜಿಗಳೆಸೆದ ಮಾರ್ಮಿಕ ಪ್ರಶ್ನೆಗೆ ನರಸಿಂಹಮೂರ್ತಿ ಅಯ್ಯಂಗಾರ್ ಮಾತಿನಿಂದಲ್ಲ, ಕೃತಿಯ ಮೂಲಕ ಮಾರ್ಮಿಕ ಉತ್ತರ ನೀಡಿದ್ದರು. ಇಂಥವರು ಸಮಾಜ ಸುಧಾರಕರಲ್ಲದೆ ಮತ್ತೇನು?
“ಶರಣರ ಬಾಳನ್ನು ಮರಣದಲ್ಲಿ ನೋಡು” ಎನ್ನುವ ಪ್ರಸಿದ್ಧ ನಾಣ್ಣುಡಿಗೆ ನರಸಿಂಹಮೂರ್ತಿ ಅಯ್ಯಂಗಾರ್ ಅವರ ಸಾವು ಒಂದು ದಿವ್ಯ ನಿದರ್ಶನ. ಅವರು ಮರಣಿಸಿದ ದಿನ ಅವರ ಆರಾಧ್ಯ ದೈವವಾಗಿದ್ದ ಕೋಟೆ ಆಂಜನೇಯ ಸ್ವಾಮಿ ರಥೋತ್ಸವ. ಮುಂಜಾನೆಯಿಂದಲೇ ಅವರು ಕಂಕಣಧಾರಿಯಾಗಿದ್ದು ರಥೋತ್ಸವದ ಎಲ್ಲಾ ಕಲಾಪಗಳಲ್ಲಿ ಭಾಗಿಯಾದರು. ಆಗಲೇ ಅವರಿಗೆ 79ರ ಇಳಿ ವಯಸ್ಸು. ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶರೀರ. ಇದ್ಯಾವುದೂ ಅವರ ಸೇವಾ ಕೈಂಕರ್ಯಕ್ಕೆ ಅಡ್ಡಿಯಾಗಲಿಲ್ಲ. ರಾತ್ರಿ 12ರವರೆಗೆ ಎಲ್ಲ ಕಲಾಪ ಮುಗಿಸಿ ಮನೆಯಲ್ಲಿ ಒಬ್ಬೊಬ್ಬರದ್ದು ಹೆಸರು ಹಿಡಿದು ಕರೆದು, ಎಲ್ಲರದೂ ಊಟವಾಯಿತೆ? ಎಂದು ವಿಚಾರಿಸಿಕೊಂಡು ಹಾಸಿಗೆಯ ಮೇಲೆ ಮಲಗಿದರು. ಬಂಧು ಬಳಗದವರೊಂದಿಗೆ ಖುಷಿಯಾಗಿ ಮಾತಾಡುತ್ತಲೇ ಪಕ್ಕಕ್ಕೆ ಹೊರಳಿದರು. ಆದರೆ ಮತ್ತೆ ಮೇಲೆ ಏಳಲಿಲ್ಲ. ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಅವರು ಕೊನೆಯುಸಿರೆಳೆದಿದ್ದರು. ಅಂದು ತಾವು ಉಟ್ಟಿದ್ದ ಮಡಿ ಪಂಚೆಯನ್ನೂ ಅವರು ಬಿಚ್ಚಿರಲಿಲ್ಲ. ಮಡಿಬಟ್ಟೆಯಲ್ಲೇ ಶರೀರ ತ್ಯಜಿಸಿದರು. ಪುಣ್ಯಜೀವಿ ಅಲ್ಲದವರಿಗೆ ಇಂತಹ ಸಾವು ಸಾಧ್ಯವೇ?
ವಿವಿಧ ಮಠಗಳ ಪೀಠಾಧಿಪತಿಗಳು, ಸಾಧು ಸಂತ ಮಹಂತರಲ್ಲದೆ, ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ, ನ್ಯಾ.ಮೂ. ವೆಂಕಟಾಚಲಯ್ಯ, ಜಗನ್ನಾಥ ರಾವ್ ಜೋಶಿ, ವಾಜಪೇಯಿ, ಆಡ್ವಾಣಿ, ಫೀಲ್ಡ್ ಮಾರ್ಷಲ್ ಕಾರಿಯಪ್ಪ, ರಾಜಮಾತಾ ವಿಜಯರಾಜೆ ಸಿಂಧಿಯಾ, ಶೃಂಗೇರಿ ಶ್ರೀಗಳು, ಆದಿ ಜಾಂಬವ ಶ್ರೀಗಳು, ಮೋರೋಪಂತ ಪಿಂಗಳೆ, ಶೇಖ್ ಮೌಲಾನ ಸಾಹೇಬರು, ಏರ್ಯಾ ಲಕ್ಷ್ಮೀನಾರಾಯಣ ಆಳ್ವ…. ಹೀಗೆ ಅಯ್ಯಂಗಾರರ ಸ್ನೇಹ ಸಂಪರ್ಕವಲಯ ವಿಸ್ತಾರವಾದುದು. ಎಲ್ಲರನ್ನೂ ಸಮಾಜಮುಖಿ ಕಾರ್ಯಗಳಿಗೆ ಜೋಡಿಸುವ, ಒಂದುಗೂಡಿಸುವ ಅವರ ಸಂಘಟನಾ ಕೌಶಲ್ಯ ಅನ್ಯಾದೃಶ. ನರಸಿಂಹಮೂರ್ತಿ ಅಯ್ಯಂಗಾರರ ನಿಧನದ ನಂತರ ಅಭಿಮಾನಿಗಳು ‘ಸಿಂಹ ಸ್ಮೃತಿ’ ಎಂಬ ನೆನಪಿನ ಸಂಪುಟ ಹೊರತಂದರು. ಮುನ್ನುಡಿ ಬರೆದ ಶ್ರೀ ಶ್ರೀ ರಂಗಪ್ರಿಯ ಶ್ರೀಗಳು ಹೇಳಿದ ಮಾತು ಮನನೀಯ: “ತಮ್ಮ ಸಮಾಜಸೇವೆಯ ಉತ್ಸವದಲ್ಲಿ ಅವರು ದೇವರ ಸೇವೆಯನ್ನು ಮರೆಯಲಿಲ್ಲ. ದೇವರ ಸೇವೆಯ ಉತ್ಸಾಹದಲ್ಲಿ ಸಮಾಜ ಸೇವಾಕಾರ್ಯಗಳನ್ನು ಮರೆಯಲಿಲ್ಲ. ಎರಡನ್ನೂ ಸಮರಸವಾಗಿಸಿ ಸಾಧಿಸಿ ತೋರಿಸಿದ ಅದ್ಭುತ ಸೇವಾ ದುರಂಧರ ಅವರು”.
