ಅಂಕಣ – ಇಂದ್ರಪ್ರಸ್ಥದಿಂದ
- ಡಾ. ಎ. ಸೂರ್ಯ ಪ್ರಕಾಶ್, ಹಿರಿಯ ಪತ್ರಕರ್ತ, ಪ್ರಧಾನ ಮಂತ್ರಿಗಳ ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಸದಸ್ಯ, ನವದೆಹಲಿ
ಭೋಜಶಾಲಾ ಪ್ರಕರಣದಲ್ಲಿ ಆ ಸ್ಥಳವು ದೇವಿ ವಾಗ್ದೇವಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ಪೂಜೆ ಸಲ್ಲಿಸುವ ವಿಶೇಷ ಹಕ್ಕನ್ನು ಹಿಂದೂಗಳಿಗೆ ನೀಡಿ ಮಧ್ಯಪ್ರದೇಶ ಹೈಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು, ಸುಪ್ರೀಂ ಕೋರ್ಟ್ ನ ರಾಮ ಜನ್ಮಭೂಮಿ ಪ್ರಕರಣದ ತೀರ್ಪು ಅಂದರೆ ಅಯೋಧ್ಯೆ ತೀರ್ಪಿನಿಂದ ಸ್ಫೂರ್ತಿ ಪಡೆದು ನೀಡಿದ ತೀರ್ಪಾಗಿದೆ. ರಾಮ ಜನ್ಮಭೂಮಿ ಪ್ರಕರಣಕ್ಕೆ (ನ್ಯಾಯಾಲಯದ ದಾಖಲೆಗಳಲ್ಲಿ ಇರುವ ‘ಎಂ. ಸಿದ್ದಿಕ್ ವಿರುದ್ಧ ಮಹಂತ್ ಸುರೇಶ್ ದಾಸ್ ಮತ್ತು ಇತರರು’) ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪಿನಿಂದ ಅರ್ಥೈಸಬಹುದಾದ ಹತ್ತು ತತ್ತ್ವಗಳನ್ನು ಹೈಕೋರ್ಟ್ ನ್ಯಾಯಾಧೀಶರು ಗುರುತಿಸಿ ವಿವರಿಸಿದ್ದಾರೆ; ಏಕೆಂದರೆ ಒಂದಲ್ಲಾ ಒಂದು ಸಂದರ್ಭದಲ್ಲಿ ಈ ತೀರ್ಪನ್ನೇ ಆಧಾರವಾಗಿಟ್ಟುಕೊಂಡು ವಾದ – ಪ್ರತಿವಾದಗಳು ನಡೆದಿವೆ. ಅವುಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು:
ತತ್ತ್ವ ಒಂದು
ಅಯೋಧ್ಯೆ ತೀರ್ಪಿನಿಂದ ಹೊರಬಂದ ಪ್ರಮುಖ ತತ್ತ್ವಗಳಲ್ಲಿ ಒಂದು, ಇಂತಹ ಪ್ರಕರಣವನ್ನು ಪರೀಕ್ಷಿಸಬೇಕಾದ ಸಂದರ್ಭದಲ್ಲಿ ಪುರಾವೆಯು ಗಣಿತೀಯ ಖಚಿತತೆಯನ್ನು ಹೊಂದಿರಬೇಕಿಲ್ಲ ಅಥವಾ ನಿಖರವಾದ ಪುರಾವೆಯು ಆಗಿರಬೇಕಾಗಿಲ್ಲ, ಬದಲಿಗೆ ಅದು ಸಂಭವನೀಯತೆಯ ಪುರಾವೆಗಳೂ ಆಗಿರಬಹುದು ಎಂಬುದು ನ್ಯಾಯಾಲಯಗಳು ಪರಿಗಣಿಸಬಹುದಾದ ಮಾನದಂಡವಾಗಿದೆ. ಅಲ್ಲದೆ ಇದು ಸಿವಿಲ್ ವಿಚಾರಣೆಗಳಲ್ಲಿಯೂ ಅಂಗೀಕರಿಸಲ್ಪಟ್ಟ ಮಾನದಂಡವಾಗಿದೆ.
ತತ್ತ್ವ ಎರಡು
ಆಧುನಿಕ ನ್ಯಾಯಾಲಯಗಳ ಪರಿಶೀಲನೆಯ ಉದ್ದೇಶವು ಧಾರ್ಮಿಕ ಕಟ್ಟಡದ ಧಾರ್ಮಿಕ ಅಥವಾ ತಾತ್ತ್ವಿಕ ಪರಿಪೂರ್ಣತೆಯನ್ನು ನಿರ್ಧರಿಸುವುದಲ್ಲ. ಬದಲಾಗಿ, ನಂಬಿಕೆ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ ಸಾಕ್ಷ್ಯಗಳು, ಪೂಜೆಯ ಅಸ್ತಿತ್ವ, ಧಾರ್ಮಿಕ ದತ್ತಿಯ ಅಸ್ತಿತ್ವ ಹಾಗೂ ದತ್ತಿಯ ಸ್ವರೂಪ ಮತ್ತು ಅದು ಶಾಶ್ವತವಾಗಿ ಅಸ್ತಿತ್ವದಲ್ಲಿದೆಯೇ ಅಥವಾ ಇಲ್ಲವೇ, ಧಾರ್ಮಿಕ ಬಳಕೆ, ಆರಾಧಕರ ನಡವಳಿಕೆ, ಐತಿಹಾಸಿಕ ಪ್ರತಿಪಾದನೆ ಮತ್ತು ಧಾರ್ಮಿಕ ನಂಬಿಕೆಯ ನಿರಂತರತೆ ಮತ್ತು ಸ್ಥಿರತೆಯ ಪುರಾವೆಗಳನ್ನು ಖಚಿತಪಡಿಸಿಕೊಳ್ಳುವುದಾಗಿದೆ.
ತತ್ತ್ವ ಮೂರು
ಅಯೋಧ್ಯೆ ಪ್ರಕರಣದಿಂದ ಅರ್ಥೈಸಬಹುದಾದ ಮೂರನೇ ತತ್ತ್ವವೇನೆಂದರೆ ದೇವರು, ದೇವಸ್ಥಾನಕ್ಕೆ ಮೀಸಲಾದ ಆಸ್ತಿ ಮತ್ತು ಅದರ ಹಿಂದಿರುವ ಪವಿತ್ರ ಉದ್ದೇಶವನ್ನು ರಕ್ಷಿಸುವುದೇ ಆಧುನಿಕ ನ್ಯಾಯಾಲಯಗಳ ಪ್ರಮುಖ ಆದ್ಯತೆಯಾಗಿರಬೇಕು. ಅಲ್ಲದೆ ಬಾಹ್ಯವ್ಯಕ್ತಿಗಳಿಂದ ದೇವರ ಮೇಲಿನ ಶ್ರದ್ಧೆ ಮತ್ತು ಧಾರ್ಮಿಕ ಹಿತಾಸಕ್ತಿಗಳಿಗೆ ಉಂಟಾಗುವ ಅಪಾಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಕ್ತರಿಗೆ ಕಾನೂನಾತ್ಮಕ ಮಾನ್ಯತೆಯನ್ನು ನ್ಯಾಯಾಲಯ ನೀಡಬಹುದಾಗಿದೆ.
ತತ್ತ್ವ ನಾಲ್ಕು
ಹಿಂದೂಧರ್ಮದಲ್ಲಿ ದೇವರಿಗೆ ಅರ್ಪಿಸಲಾದ ದತ್ತಿಯು ಒಂದು ಪವಿತ್ರ ಉದ್ದೇಶವನ್ನು ಒಳಗೊಂಡಿರುತ್ತದೆ. ಈ ಉದ್ದೇಶವು ಸಾರ್ವತ್ರಿಕ, ಅನಂತ ಮತ್ತು ಸರ್ವವ್ಯಾಪಿಯಾಗಿದ್ದು, ಅದನ್ನು ಭೌತಿಕ ಅಥವಾ ಕಾನೂನುಬದ್ಧ ಮಿತಿಗಳಿಗೆ ಒಳಪಡಿಸಲು ಸಾಧ್ಯವಿಲ್ಲ. ವಿಗ್ರಹದ ನಾಶ ಅಥವಾ ವಿಗ್ರಹವು ಇಲ್ಲದಿದ್ದಾಗಲೂ ಆ ಪವಿತ್ರ ಉದ್ದೇಶವು ಕೊನೆಯಾಗುವುದಿಲ್ಲ. ವಿಗ್ರಹವು ನಾಶವಾದ ಸಂದರ್ಭದಲ್ಲಿಯೂ ಅಥವಾ ಅದರ ಅಸ್ತಿತ್ವವು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಇಲ್ಲದ ಸಮಯದಲ್ಲಿಯೂ ದತ್ತಿಯಿಂದಾಗಿ ಮಾಡಲ್ಪಟ್ಟ ಧಾರ್ಮಿಕ ಉದ್ದೇಶವು ಮುಂದುವರಿಯುತ್ತದೆ. ಏಕೆಂದರೆ ಕಾನೂನು ರಕ್ಷಿಸುವುದು ಭೌತಿಕ ವಿಗ್ರಹವನ್ನು ಮಾತ್ರವಲ್ಲ; ಬದಲಿಗೆ ನಿರಂತರ ಪೂಜೆಯ ಮೂಲಭೂತ ಧಾರ್ಮಿಕ ಉದ್ದೇಶವನ್ನು. ಈ ಧಾರ್ಮಿಕ ಶ್ರದ್ಧೆಯ ಉದ್ದೇಶದ ರಕ್ಷಣೆಯನ್ನು ಮಾಡುವುದು ಆಧುನಿಕ ನ್ಯಾಯಾಲಯಗಳ ಅತ್ಯಗತ್ಯ ಕಾರ್ಯವಾಗಿದೆ.
ದತ್ತಿಯ ಉದ್ದೇಶವು ನಿರಂತರ ಪೂಜೆಯ ಮೂಲಕ ಸಮರ್ಪಣೆಯ ಉದ್ದೇಶವನ್ನು ಪೂರೈಸುವುದಾಗಿರಬೇಕು. ಇದರಿಂದ ಭಕ್ತರು ಪ್ರಾರ್ಥನೆಯ ಮೂಲಕ ಆಧ್ಯಾತ್ಮಿಕ ತೃಪ್ತಿಯನ್ನು ಹೊಂದಲು ಸಾಧ್ಯವಾಗುತ್ತದೆ. ಹಿಂದೂ ವಿಗ್ರಹಗಳ ವಿಷಯದಲ್ಲಿ, ಕಾನೂನುಬದ್ಧ ಮಹತ್ವವನ್ನು ಕೇವಲ ವಿಗ್ರಹಕ್ಕೆ ನೀಡಲಾಗುವುದಿಲ್ಲ, ಬದಲಾಗಿ, ವಿಗ್ರಹದಲ್ಲಿ ಅವತರಿಸಿರುವ ದೇವತೆಯ ನಿರಂತರ ಆರಾಧನೆಯ ಹಿಂದಿರುವ ಧಾರ್ಮಿಕ ಉದ್ದೇಶಕ್ಕೆ ನೀಡಲಾಗುತ್ತದೆ. ಇದಲ್ಲದೆ, ಅಂತಹ ಧಾರ್ಮಿಕ ಉದ್ದೇಶಗಳಿಗೆ ಆದ್ಯತೆ ಮತ್ತು ಭದ್ರತೆಯನ್ನು ನೀಡಲು, ಹಿಂದೂ ಭಕ್ತರ ನಂಬಿಕೆ ಮತ್ತು ವಿಶ್ವಾಸವು ಅವರ ಆತ್ಮಸಾಕ್ಷಿಗೆ ಸಂಬಂಧಿಸಿದ ವಿಷಯವಾಗಿದೆ. ಅಲ್ಲದೆ ಅಂತಹ ನಂಬಿಕೆಗಳು ಸದ್ಭಾವನೆಯನ್ನು ಹೊಂದಿವೆಯೇ ಎಂಬುದನ್ನು ಮೇಲ್ನೋಟಕ್ಕೆ ಪರಿಶೀಲಿಸುವುದನ್ನು ಹೊರತುಪಡಿಸಿ, ಅವರ ನಂಬಿಕೆಯ ಬಲ ಅಥವಾ ತರ್ಕಬದ್ಧತೆಯನ್ನು ಪರಿಶೀಲಿಸುವುದು ನ್ಯಾಯಾಲಯದ ಕರ್ತವ್ಯವಲ್ಲ ಎಂದು ಕೋರ್ಟ್ ಹೇಳಿದೆ.
ತತ್ತ್ವ ಐದು
ಶ್ರದ್ಧೆ ಮತ್ತು ನಂಬಿಕೆಗಳಿಗೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಆದಾಗ್ಯೂ, ನ್ಯಾಯಾಲಯಗಳು ಅವುಗಳನ್ನು ಯಾವಾಗಲೂ ನೇರ ದಾಖಲೆ, ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಲು ಸಾಧ್ಯವಿಲ್ಲ ಹಾಗೂ ಅವು ಯಾವಾಗಲೂ ಜಾತ್ಯತೀತ ತರ್ಕದ ಮಾನದಂಡಗಳಿಗೆ ಬದ್ಧವಾಗಿರಬೇಕಿಲ್ಲ ಎಂಬುದನ್ನು ನ್ಯಾಯಾಲಯಗಳು ಮನಗಾಣಬೇಕು. ನಂಬಿಕೆ ಮತ್ತು ವಿಶ್ವಾಸವು ವ್ಯಕ್ತಿಯ ವೈಯಕ್ತಿಕ ಅಂತಃಕರಣದ ವ್ಯಾಪ್ತಿಗೆ ಸೇರಿದ್ದು, ಅವುಗಳ ನೈಜತೆಯನ್ನು ಧರ್ಮಗ್ರಂಥಗಳ ವ್ಯಾಖ್ಯಾನ ಅಥವಾ ತರ್ಕಬದ್ಧ ಪರಿಶೀಲನೆಯ ಮೂಲಕ ಪರೀಕ್ಷಿಸಲು ಸಾಧ್ಯವಿಲ್ಲ. ಪರೀಕ್ಷೆಯ ಮಾನದಂಡವು ನೈಜವಾಗಿರಬೇಕು ಹೊರತು ತರ್ಕಬದ್ಧವಲ್ಲ ಎಂಬುದನ್ನು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಶ್ರದ್ಧೆ, ನಂಬಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ, ಸಾಕ್ಷ್ಯವು ಇಲ್ಲದೇ ಇರುವುದನ್ನು ನಂಬಿಕೆಯುಳ್ಳವರ ವಿರುದ್ಧವಾದ ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲ. ಮಾಲೀಕತ್ವದ ಹಕ್ಕುಗಳನ್ನು ನಿರ್ಧರಿಸುವಾಗ ನಂಬಿಕೆ ಮತ್ತು ವಿಶ್ವಾಸದ ಸ್ಥಿರತೆ ಹಾಗೂ ನಿರಂತರತೆಯು ಪ್ರಮುಖ ಅಂಶಗಳಾಗಿರುತ್ತವೆ. ಯಾವುದೇ ಒಂದು ಧಾರ್ಮಿಕ ಪಂಥವು ಆಧ್ಯಾತ್ಮಿಕ ಕ್ಷೇತ್ರದಲ್ಲಿನ ನಿರ್ದಿಷ್ಟ ಸತ್ಯವೊಂದರ ಅಸ್ತಿತ್ವವನ್ನು ನಿರಂತರವಾಗಿ ಮತ್ತು ಸ್ಥಿರವಾಗಿ ನಂಬಿಕೊಂಡಿದ್ದು, ಆ ಪ್ರತಿಪಾದನೆಗೆ ದಾಖಲೆಗಳಲ್ಲಿರುವ ಇತರೆ ಸಂಬಂಧಿತ ವಸ್ತುಗಳು ಪುಷ್ಟಿಯನ್ನು ನೀಡುವಂತಿದ್ದರೆ, ನ್ಯಾಯಾಲಯಗಳು ಸ್ಪರ್ಧಾತ್ಮಕ ನಂಬಿಕೆಗಳ ಬಲವನ್ನು ಹೋಲಿಕೆ ಮಾಡಿ ವಿಷಯವನ್ನು ತೀರ್ಮಾನಿಸಬಾರದು. ಬದಲಾಗಿ, ಆ ನಂಬಿಕೆಯ ನೈಜತೆಯನ್ನು ಪರಿಗಣಿಸಿ ನಿರ್ಣಯವನ್ನು ತೆಗೆದುಕೊಳ್ಳಬೇಕು.
ತತ್ತ್ವ ಆರು
ಅಯೋಧ್ಯೆ ತೀರ್ಪಿನ ಮೂಲಕ ಗಮನಿಸಬಹುದಾದ ಮುಂದಿನ ತತ್ತ್ವವು ನ್ಯಾಯಾಲಯವು ಅಧಿಕೃತ ಗೆಜೆಟ್ಗಳು (Official Gazettes) ಅಥವಾ ಗೆಜೆಟಿಯರ್ಗಳ (Gazetteers) ಸಾಕ್ಷ್ಯಾತ್ಮಕ ಮೌಲ್ಯವನ್ನು ಹೇಗೆ ಪರಿಗಣಿಸಬೇಕು ಎಂಬುದಕ್ಕೆ ಸಂಬಂಧಿಸಿದೆ. ತೀರ್ಪು ಸ್ಪಷ್ಟಪಡಿಸುವಂತೆ, ಅಧಿಕೃತ ಗೆಜೆಟ್ಗಳು ಅಥವಾ ಗೆಜೆಟಿಯರ್ಗಳು ಅಮಾನ್ಯ ಅಥವಾ ಅಪ್ರಸ್ತುತ ದಾಖಲೆಗಳಲ್ಲ. ಅವುಗಳನ್ನು ನ್ಯಾಯಾಲಯವು ಐತಿಹಾಸಿಕ ಹಿನ್ನೆಲೆಯನ್ನು ಒದಗಿಸುವ ಉದ್ದೇಶಕ್ಕಾಗಿ ಪರಿಗಣಿಸಬಹುದು ಹಾಗೂ ಇತರ ದಾಖಲೆಗಳಿಂದ ಪುಷ್ಟೀಕರಣ ದೊರೆತಲ್ಲಿ ದೃಢೀಕರಣಾತ್ಮಕ ಸಾಕ್ಷ್ಯವಾಗಿಯೂ ಪರಿಗಣಿಸಬಹುದು. ಆದಾಗ್ಯೂ, ಅವುಗಳನ್ನು ಮಾಲೀಕತ್ವ, ಧಾರ್ಮಿಕ ಸ್ವರೂಪ, ಕಾನೂನುಬದ್ಧ ಹಕ್ಕು ಅಥವಾ ವಿವಾಧಿತ ಐತಿಹಾಸಿಕ ಸಂಗತಿಯ ಅಂತಿಮ ಮತ್ತು ನಿರ್ಣಾಯಕ ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲ. ಅವುಗಳಲ್ಲಿನ ಮಾಹಿತಿಯನ್ನು ಸಮಕಾಲೀನ ದಾಖಲೆಗಳು, ಅಧಿಕೃತ ದಾಖಲೆಗಳು, ಪುರಾತತ್ತ್ವದ ವಸ್ತುಗಳು, ಸಂಬಂಧಿತ ವ್ಯಕ್ತಿಗಳ ಆಚಾರ – ವಿಚಾರ ಹಾಗೂ ಇತರೆ ಸಂಬಂಧಿತ ಸನ್ನಿವೇಶಗಳನ್ನು ಒಳಗೊಂಡಂತೆ ಲಭ್ಯವಿರುವ ಸಂಪೂರ್ಣ ದಾಖಲೆಗಳೊಂದಿಗೆ ಅತ್ಯಂತ ಸೂಕ್ಷ್ಮವಾಗಿ ಎಚ್ಚರಿಕೆಯಿಂದ ಪರಿಶೀಲಿಸಬೇಕು.
ತತ್ತ್ವ ಏಳು
ಇಂತಹ ಸೂಕ್ಷ್ಮ ಧಾರ್ಮಿಕ ಪಂಥಗಳ ನಡುವಿನ ವಿವಾದಗಳಲ್ಲಿ, ಅಧಿಕೃತ ಸರ್ಕಾರಿ ದಾಖಲೆಗಳನ್ನು ಆಧುನಿಕ ನ್ಯಾಯಾಲಯಗಳು ಹೇಗೆ ಮೌಲ್ಯಮಾಪನ ಮಾಡಬೇಕು ಎಂಬುದಕ್ಕೆ ಅಯೋಧ್ಯೆ ತೀರ್ಪು ಮಾರ್ಗದರ್ಶಕವಾಗಿದೆ. ಅಧಿಕೃತ ವಿವರಣೆಗಳು, ಆಡಳಿತಾತ್ಮಕ ನಾಮಕರಣ, ಸರ್ಕಾರಿ ಪತ್ರವ್ಯವಹಾರಗಳು ಮತ್ತು ಸಮಕಾಲೀನ ಅಧಿಕೃತ ದಾಖಲೆಗಳು, ವಿವಾದಿತ ಸ್ಥಳವನ್ನು ಅದರ ಧಾರ್ಮಿಕ ಅಥವಾ ಐತಿಹಾಸಿಕ ಸಂಬಂಧದ ಆಧಾರದ ಮೇಲೆ ನಿರಂತರವಾಗಿ ಗುರುತಿಸಿದ್ದರೆ, ಅವು ಮಹತ್ವದ ಸಾಕ್ಷ್ಯಾಧಾರಿತ ಮೌಲ್ಯವನ್ನು ಹೊಂದಿರುತ್ತವೆ. ಇಂತಹ ದಾಖಲೆಗಳು ಮಾಲೀಕತ್ವ ಅಥವಾ ಅಂತಿಮ ಕಾನೂನುಬದ್ಧ ಸ್ವರೂಪವನ್ನು ನಿರ್ಧರಿಸದಿದ್ದರೂ, ಇತರ ದಾಖಲೆಗಳು, ಐತಿಹಾಸಿಕ ಮಾಹಿತಿಗಳು, ಪುರಾತತ್ತ್ವದ ಸಾಕ್ಷ್ಯಗಳು ಹಾಗೂ ಪೂಜೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಗಣನೀಯವಾಗಿ ಪರಿಗಣಿಸಲು ಸಹಕಾರಿಯಾಗುತ್ತವೆ.
ತತ್ತ್ವ ಎಂಟು
ಬಳಕೆಯ ಆಧಾರದ ಮೇಲೆ ಸ್ಥಳವು ವಕ್ಫ್ ಗೆ ಸೇರಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ, ಅಯೋಧ್ಯೆ ತೀರ್ಪಿನಿಂದ ಹೊರಹೊಮ್ಮುವ ಪ್ರಮುಖ ಅಂಶವೆಂದರೆ, ಸಾಕ್ಷ್ಯವನ್ನು ಮೌಲ್ಯೀಕರಿಸುವ ಹೊಣೆಗಾರಿಕೆ ಹೇಗಿರಬೇಕು ಎಂಬುದಾಗಿದೆ. ಅಯೋಧ್ಯೆ ತೀರ್ಪು ತೋರಿಸುವುದೇನೆಂದರೆ, ಆಂತರಿಕ ಧಾರ್ಮಿಕ ಸಿದ್ಧಾಂತಗಳಲ್ಲಿ ಭೂಮಿಯೇ ನ್ಯಾಯಸ್ಥಾನದ ವ್ಯಕ್ತಿ ಎಂಬ ಹಿಂದೂ ಪಕ್ಷದ ವಾದವನ್ನಾಗಲಿ ಅಥವಾ ಸಂಪೂರ್ಣ ವಿವಾದಿತ ಆಸ್ತಿಯು ಬಳಕೆಯ ಆಧಾರದ ಮೇಲೆ ವಕ್ಫ್ ಗೆ ಸಂಬಂಧಿಸಿದ್ದು ಆಗಿದೆ ಎಂಬ ಮುಸ್ಲಿಂ ಪಕ್ಷದ ವಾದವನ್ನಾಗಲಿ ಪುಷ್ಟೀಕರಿಸಲು ಸಾಧ್ಯವಿಲ್ಲ. ಅವು ಇತರೆ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಸ್ವಯಂಪ್ರೇರಿತವಾಗಿ ನಾಶಪಡಿಸುತ್ತವೆ ಎಂಬುದನ್ನು ಕೂಡ ಅಂಗೀಕರಿಸಲಾಗುವುದಿಲ್ಲ. ನ್ಯಾಯಾಲಯವು, ರಾಮ ಜನ್ಮಭೂಮಿ ಎಂಬ ಸ್ಥಳವೇ ನ್ಯಾಯ ಆಕಾಂಕ್ಷಿತ ವ್ಯಕ್ತಿ ಎಂಬ ವಾದವನ್ನು ತಿರಸ್ಕರಿಸಿತು. ಅದೇ ರೀತಿ, ಸಂಪೂರ್ಣ ವಿವಾದಿತ ಆಸ್ತಿಯು ಬಳಕೆಯ ಆಧಾರದ ಮೇಲೆ ವಕ್ಫ್ ಗೆ ಸೇರಿದೆ ಎಂಬ ವಾದವನ್ನೂ ತಿರಸ್ಕರಿಸಿತು. ಏಕೆಂದರೆ, ಅಂತಹ ಮಾನ್ಯತೆಯನ್ನು ನೀಡಿದ್ದರೆ, ಅದೇ ಆಸ್ತಿಯ ಮೇಲೆ ಹಿಂದೂಗಳ ಧಾರ್ಮಿಕ ಹಕ್ಕುಗಳು ಸಂಪೂರ್ಣವಾಗಿ ನಾಶವಾಗುತ್ತಿದ್ದವು.
ತತ್ತ್ವ ಒಂಬತ್ತು
ರಾಮ ಜನ್ಮಭೂಮಿ ತೀರ್ಪು ಪ್ರತಿಪಾದಿಸಿದ ಇನ್ನೊಂದು ಪ್ರಮುಖ ಅಂಶವೆಂದರೆ, ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ, ASIಯು ಮಾನ್ಯತೆ ಪಡೆದ ವಿಶ್ವಾಸಾರ್ಹ ಮತ್ತು ಪರಿಣತಿಯನ್ನು ಹೊಂದಿರುವ ಸಂಸ್ಥೆಯಾಗಿದ್ದು, ಆಧುನಿಕ ನ್ಯಾಯಾಲಯಗಳು ಹೊಂದಿರದ ತಾಂತ್ರಿಕ ಪರಿಣತಿಯನ್ನು ಅದು ಹೊಂದಿದೆ. ಆದ್ದರಿಂದ, ಅದರ ವರದಿಗಳನ್ನು ಸೂಕ್ತವಾದ ಪುರಾವೆಗಳು ಎಂದು ಪರಿಗಣಿಸಬಹುದು. ರಾಮ ಜನ್ಮಭೂಮಿ ಪ್ರಕರಣದಲ್ಲಿ, ಎಎಸ್ಐ ವರದಿಯನ್ನು ಸಮರ್ಪಕವಾಗಿ ಮೌಲ್ಯಮಾಪನ ಮಾಡದೇ ಇದ್ದ ಹೈಕೋರ್ಟ್ ನ ವಿಧಾನವನ್ನು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ. ಜೊತೆಗೆ ಎಎಸ್ಐಯ ಕಾರ್ಯವಿಧಾನ ಮತ್ತು ಸಂಶೋಧನೆಗಳ ವಿರುದ್ಧ ಮಾಡಲಾದ ಟೀಕೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಕೂಡ ಅಗತ್ಯವೆಂದು ನ್ಯಾಯಾಲಯ ತಿಳಿಸಿತು. ನ್ಯಾಯಾಲಯವು ಆರ್ಡರ್ 26, ನಿಯಮ 10(2) ದ ಪ್ರಕಾರ, ಆಯುಕ್ತರ ವರದಿ ಮತ್ತು ಅವರು ದಾಖಲಿಸಿದ ಸಾಕ್ಷ್ಯಗಳು “ವ್ಯಾಜ್ಯದಲ್ಲಿನ ಸಾಕ್ಷ್ಯವಾಗಿರಬೇಕು” ಹಾಗೂ “ದಾಖಲೆಯ ಭಾಗವಾಗಿರಬೇಕು” ಎಂದು ಹೇಳಿತು. ಈ ತತ್ತ್ವದ ಪ್ರಕಾರ, ನ್ಯಾಯಾಲಯವು ತಾನೇ ಪರಿಣಿತನಂತೆ ವರ್ತಿಸಿ, ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದಂತೆ ಪ್ರಾಮಾಣಿಕವಾಗಿ ಅತ್ಯಂತ ಎಚ್ಚರಿಕೆಯಿಂದ ಆಯುಕ್ತರು ಸಿದ್ಧಪಡಿಸಿರುವ ವರದಿಯನ್ನು ಅಲ್ಲದೆ ಅವರ ಶ್ರದ್ಧೆ ಮತ್ತು ಶ್ರಮವನ್ನು ಪ್ರತಿಬಿಂಬಿಸುವ ವಿಸ್ತೃತ ಮಂಡನೆಯನ್ನು ತಳ್ಳಿಹಾಕುವುದು ಸೂಕ್ತ ಕ್ರಮವಲ್ಲ ಎಂದು ಹೇಳಿದೆ. ಆದಾಗ್ಯೂ, ಅಂತಹ ತಜ್ಞರ ಅಭಿಪ್ರಾಯವನ್ನು ನ್ಯಾಯಾಲಯವು ಸೂಕ್ಷ್ಮವಾಗಿ ಪರಿಶೀಲಿಸಿ ಮೌಲ್ಯಮಾಪನ ಮಾಡಬೇಕು; ಅದನ್ನು ಸ್ವತಃ ಅಂತಿಮ ಮತ್ತು ನಿರ್ಣಾಯಕ ಸಾಕ್ಷ್ಯವೆಂದು ಪರಿಗಣಿಸಬಾರದು. ಆಧುನಿಕ ನ್ಯಾಯಾಲಯಗಳು ತಮ್ಮ ಮುಂದೆ ಇರುವ ವಿವಾದವನ್ನು ನಿರ್ಣಯಿಸುವಾಗ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, ಪುರಾತತ್ತ್ವ ಶಾಸ್ತ್ರವು ಅನೇಕ ಶಾಖೆಗಳು ಹಾಗೂ ಅಂತರ್ಶಿಸ್ತೀಯ ವಿಧಾನಗಳನ್ನು ಒಳಗೊಂಡಿರುವ ಕ್ಷೇತ್ರವಾಗಿದ್ದು, ಅದರಲ್ಲಿನ ಪರಿಣಿತರು ಅಧ್ಯಯನ ನಡೆಸಿ ಕಂಡುಕೊಂಡ ಅಂಶಗಳು ವರದಿಯಲ್ಲಿವೆ. ಆದ್ದರಿಂದ, ಅದನ್ನು ದುರ್ಬಲ ಸಾಕ್ಷ್ಯವೆಂದು ಕರೆಯಲಾಗುವುದಿಲ್ಲ. ಪುರಾತತ್ತ್ವದ ಸಂಶೋಧನೆಗಳನ್ನು ಸಂಪೂರ್ಣ ಸತ್ಯ ಎಂಬ ಮಾನದಂಡದ ಆಧಾರದ ಮೇಲೆ ಅಲ್ಲ; ಸಂಭವನೀಯತೆಯ ಸಾಧ್ಯತೆಯನ್ನು ಪರಿಗಣಿಸಿ ಮೌಲ್ಯಮಾಪನ ಮಾಡಬೇಕು. ಸಂಭವನೀಯತೆಯ ಸಾಧ್ಯತೆಯನ್ನು ಸ್ವೀಕಾರಾರ್ಹ ಮಾನದಂಡವೆಂದು ಪರಿಗಣಿಸಬೇಕು. ವಿವಾದಿತ ಕಟ್ಟಡಕ್ಕೆ ಸ್ವಂತ ಅಡಿಪಾಯವಿಲ್ಲದೆ ಈಗಾಗಲೇ ಇದ್ದ ಗೋಡೆಗಳ ಮೇಲೆಯೇ ಅದನ್ನು ನಿರ್ಮಿಸಿರುವುದು ಕಂಡುಬಂದರೆ ಅಥವಾ ಅದರ ನೆಲವು ಹಿಂದಿನ ಕಟ್ಟಡದ ನೆಲದ ಮೇಲೆಯೇ ನಿರ್ಮಾಣವಾಗಿರುವುದು ಕಂಡುಬಂದರೆ, ಕಟ್ಟಡವನ್ನು ಬಲವಂತವಾಗಿ ಧ್ವಂಸಗೊಳಿಸಲಾಗಿದೆ ಎಂಬ ನಿರ್ಣಯವು ಸಂದರ್ಭೋಚಿತ ತಾರ್ಕಿಕ ನಿರ್ಣಯ ಆಗಿರಬಹುದು. ನ್ಯಾಯಾಲಯವು ತಜ್ಞರ ವರದಿಯನ್ನು ಸಂಪೂರ್ಣವಾಗಿ ಓದಬೇಕು, ಅದರ ಸಂಶೋಧನಾತ್ಮಕ ಅಂಶಗಳನ್ನು ಸಂದರ್ಭಾನುಸಾರವಾಗಿ ಮೌಲ್ಯಮಾಪನ ಮಾಡಬೇಕು, ಆಕ್ಷೇಪಣೆಗಳನ್ನು ವಾಸ್ತವಿಕ ದೃಷ್ಟಿಯಿಂದ ಪರಿಶೀಲಿಸಬೇಕು ಹಾಗೂ ವರದಿಯಲ್ಲಿನ ತೀರ್ಮಾನಗಳಿಗೆ ದಾಖಲೆಯಲ್ಲಿರುವ ಸಾಕ್ಷ್ಯಗಳು ಪುಷ್ಟಿ ನೀಡುತ್ತವೆಯೇ ಎಂಬುದನ್ನು ಪರಿಗಣಿಸಬೇಕು.
ತತ್ತ್ವ ಹತ್ತು
ವಿವಾದವು ಧಾರ್ಮಿಕ ಸ್ವರೂಪ, ಐತಿಹಾಸಿಕ ಬಳಕೆ, ನಿರಂತರ ಪೂಜೆ ಅಥವಾ ಸಂರಕ್ಷಿತ ಅಥವಾ ವಿವಾಧಿತ ಧಾರ್ಮಿಕ ಸ್ಥಳದ ಮೇಲಿನ ಹಕ್ಕುಗಳಿಗೆ ಸಂಬಂಧಿಸಿದ್ದಾದರೆ, ನಿರ್ದಿಷ್ಟ ಧರ್ಮಕ್ಕೆ ಸೇರಿದ ಪೂರ್ವ ಅಸ್ತಿತ್ವದಲ್ಲಿದ್ದ ರಚನೆಯನ್ನು ತೋರಿಸುವ ಧಾರ್ಮಿಕ ಚಿಹ್ನೆಗಳು, ಕಲಾಕೃತಿಗಳು, ಪೂಜಾ ಉಪಕರಣಗಳು, ಶಿಲ್ಪಗಳು, ಶಾಸನಗಳು ಹಾಗೂ ವಾಸ್ತುಶಿಲ್ಪ ಕಲಾಕೃತಿಗಳ ಕುರಿತ ಪುರಾತತ್ತ್ವ ತಜ್ಞರ ಸಂಶೋಧನೆಯು ಅತ್ಯುನ್ನತ ಸಾಕ್ಷ್ಯಾಧಾರಿತ ಮೌಲ್ಯವನ್ನು ಹೊಂದಿದೆ. ಆದ್ದರಿಂದ ಧಾರ್ಮಿಕ ಚಿಹ್ನೆಗಳು, ಅವುಗಳ ಸ್ಥಳ ಹಾಗೂ ಅವುಗಳನ್ನು ಎದುರಾಳಿ ಪಕ್ಷವೂ ಒಪ್ಪಿಕೊಂಡಿರುವುದು – ಇವೆಲ್ಲವೂ ಸೇರಿ ಕೇವಲ ಅಮೂರ್ತ ನಂಬಿಕೆಯನ್ನಷ್ಟೇ ಅಲ್ಲ, ನಿಜವಾದ ಧಾರ್ಮಿಕ ಆರಾಧನೆ ಮತ್ತು ಅದರ ನಿರಂತರತೆಯನ್ನೂ ಸೂಚಿಸುವ ತಾರ್ಕಿಕ ನಿರ್ಣಯಕ್ಕೆ ತೀರ್ಪು ಆಧಾರವಾಗಬಹುದು ಎಂಬುದನ್ನು ಅಯೋಧ್ಯೆ ತೀರ್ಪು ಹೇಳಿದೆ. ಕಟ್ಟಡವು ಧ್ವಂಸಗೊಂಡಿದ್ದರೂ, ಶಿಥಿಲಗೊಂಡಿದ್ದರೂ ಅಥವಾ ನಿರ್ದಿಷ್ಟ ಸಂದರ್ಭದಲ್ಲಿ ಬೇರೆ ಮತಕ್ಕೆ ಪರಿವರ್ತನೆಯಾಗಿದ್ದರೂ ಸಹ, ನಂಬಿಕೆಯ ನಿರಂತರತೆ ಮತ್ತು ಸ್ಥಿರತೆಗೆ ಸುಪ್ರೀಂ ಕೋರ್ಟ್ ಹೆಚ್ಚಿನ ಮಹತ್ವ ನೀಡಿದೆ.
ಭೋಜಶಾಲಾ ಪ್ರಕರಣವನ್ನು ಹಿಂದೂಗಳ ಪರವಾಗಿ ನಿರ್ಣಯಿಸುವಲ್ಲಿ, ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಬೀರಿದ ಅಸಾಧಾರಣ ಪ್ರಭಾವವನ್ನು ಮಧ್ಯಪ್ರದೇಶ ಹೈಕೋರ್ಟ್ ತನ್ನ ಅಂತಿಮ ಅಭಿಪ್ರಾಯದಲ್ಲಿ ಅತ್ಯುತ್ತಮವಾಗಿ ವಿವರಿಸಿದೆ. “ವಿವಾದಿತ ಭೂ ಪ್ರದೇಶದ ಸ್ವರೂಪವನ್ನು ನಿರ್ಧರಿಸುವ ಸಂದರ್ಭದಲ್ಲಿ, ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪ್ರತಿಪಾದಿಸಿರುವ ಮೇಲಿನ ಹತ್ತು ತತ್ತ್ವಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು,”ಎಂದು ಹೈಕೋರ್ಟ್ ಹೇಳಿದೆ.
ವಿಕ್ರಮಕ್ಕಾಗಿ ಬರೆದ ಇಂಗ್ಲಿಷ್ ಲೇಖನದ ಕನ್ನಡಾನುವಾದ – ಸಂಧ್ಯಾ ಶಾಸ್ತ್ರಿ
