ಅಂಕಣ – ಸಂಘ ಸೌರಭ 49
- ಎಸ್.ಎಸ್. ನರೇಂದ್ರಕುಮಾರ್, ಲೇಖಕ
ಕುಷ್ಠರೋಗ ಪೀಡಿತರ ಜೀವನ ನರಕಸದೃಶ, ಅವರನ್ನು ಸ್ವಂತ ಪರಿವಾರದವರೂ ಹತ್ತಿರ ಸೇರಿಸುವುದಿಲ್ಲ, ಹೊಟ್ಟೆಪಾಡಿಗಾಗಿ ಅವರು ಭಿಕ್ಷೆ ಬೇಡುವ ಸ್ಥಿತಿ ತಲುಪುತ್ತಾರೆ. ಇಂತಹ ನಿರ್ಗತಿಕ ಕುಷ್ಠರೋಗಿಗಳ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಸಂಘದ ಪ್ರಚಾರಕ ವೆಂಕಟೇಶ ಗುರುನಾಯಕ್. ಈ ಕಾರ್ಯಕ್ಕಾಗಿ ಬಿಜಾಪುರದಲ್ಲಿ ವಿವೇಕಾನಂದ ಕುಷ್ಠ ಸೇವಾ ಸಮಿತಿಯನ್ನು ಅವರು ಸ್ಥಾಪಿಸಿ, ಅದರ ಮೂಲಕ ಕುಷ್ಠರೋಗಿಗಳ ಚಿಕಿತ್ಸೆ, ಅವರಿಗೊಂದು ನೆಲೆ ಮತ್ತು ಆಹಾರ, ಉಡುಪು ಇತ್ಯಾದಿಗಳ ವ್ಯವಸ್ಥೆ ಮಾಡಿದರು. ಕುಷ್ಠರೋಗಿಗಳ ಮಕ್ಕಳ ಸ್ಥಿತಿಗತಿಯೂ ಕಷ್ಟಕರವಾಗಿತ್ತು. ಆ ಮಕ್ಕಳು ಆರೋಗ್ಯವಂತರಾಗಿದ್ದರೂ, ಹೆತ್ತವರು ಕುಷ್ಠರೋಗಿಗಳೆಂಬ ಕಾರಣಕ್ಕೆ, ಮಕ್ಕಳೂ ಬೀದಿಪಾಲಾಗುತ್ತಿದ್ದರು. ತಮ್ಮದಲ್ಲದ ತಪ್ಪಿಗಾಗಿ ಶಿಕ್ಷಣದಿಂದ ವಂಚಿತರಾಗಿ, ಸರಿಯಾದ ಆರೈಕೆ, ಸಂಸ್ಕಾರ ಇತ್ಯಾದಿ ಏನೂ ಇಲ್ಲದೆ ಭಿಕ್ಷೆ ಬೇಡಿ ಪೋಲಿಗಳಾಗುತ್ತಿದ್ದವರು ಅಂತಹ ಮಕ್ಕಳು. ಮುಂದೆ ಇದೇ ಮಕ್ಕಳು ಸಮಾಜಕಂಟಕರಾಗಿ ಬೆಳೆದು ನಿಲ್ಲುವ ಸಾಧ್ಯತೆ ಇದ್ದಿತು. ಇಂತಹ ನತದೃಷ್ಟ ಮಕ್ಕಳಿಗೆ ನೆಲೆ ಒದಗಿಸಿ, ಶಿಕ್ಷಣ ನೀಡಿ, ಅವರ ಬದುಕಿಗೊಂದು ಸುಯೋಗ್ಯ ದಾರಿ ತೋರಿಸುವ ಹೊಣೆ ತನ್ನದೆಂದು ಗುರುನಾಯಕರಿಗನಿಸಿತು. ಕಲ್ಬುರ್ಗಿ ಸಮೀಪದ ದೇವಲ ಗಾಣಗಾಪುರದಲ್ಲಿ 1985ರಲ್ಲಿ ಶ್ರೀ ದತ್ತಬಾಲ ಸೇವಾಶ್ರಮ ಆರಂಭವಾದುದರ ಹಿನ್ನೆಲೆಯಿದು.
ಆಶ್ರಮವೇನೋ ಆರಂಭವಾಯಿತು. ಆದರೆ, ಅದನ್ನು ಮುನ್ನಡೆಸುವುದು ಸುಲಭದ ಕೆಲಸವಾಗಿರಲಿಲ್ಲ. ಕುಟುಂಬದಲ್ಲಿದ್ದ ರೋಗಗ್ರಸ್ತರನ್ನು ಹೊರಹಾಕಿ, ಮನೆಯಲ್ಲಿ ಒಬ್ಬರೇ ಕಷ್ಟದಿಂದ ಸಂಸಾರ ನಿರ್ವಹಿಸುತ್ತಿದ್ದರೂ, ತಮ್ಮ ಮಕ್ಕಳನ್ನು ಆಶ್ರಮಕ್ಕೆ ಸೇರಿಸಲು ಹಿರಿಯರು ಸಿದ್ಧರಿರಲಿಲ್ಲ, ಮಕ್ಕಳೂ ಆಶ್ರಮಕ್ಕೆ ಸೇರಲು ಹಿಂಜರಿಯುತ್ತಿದ್ದರು. ಆದರೆ ವೆಂಕಟೇಶ ಗುರುನಾಯಕರು ಸೋಲೊಪ್ಪಲು ಸಿದ್ಧವಿರಲಿಲ್ಲ, ಹಿಡಿದ ಕೆಲಸವನ್ನು ಸಾಧಿಸುವ ಗುಣವನ್ನು ಸಂಘದಲ್ಲಿ ಅವರು ಕಲಿತಿದ್ದರು. ಅವರ ಕಳಕಳಿಯ ಮಾತುಗಳು, ನಿಃಸ್ವಾರ್ಥ ಸೇವೆ, ಆತ್ಮೀಯತೆಯ ವ್ಯವಹಾರದಿಂದ ಪ್ರಭಾವಿತರಾಗಿ ಕೆಲವು ಹಿರಿಯರು ತಮ್ಮ ಮಕ್ಕಳನ್ನು ಅವರಲ್ಲಿಗೆ ಕಳುಹಿಸಲು ಒಪ್ಪಿದರು. ಒಂದು ಬಾಡಿಗೆ ಮನೆಯಲ್ಲಿ ಕೇವಲ 8 ಮಕ್ಕಳನ್ನು ಸೇರಿಸಿಕೊಂಡು ಆಶ್ರಮದ ಕಾರ್ಯ ಆರಂಭವಾಯಿತು. ಆ ಊರಿನ ಜನ ಈ ಆಶ್ರಮಕ್ಕೆ ಹೋಗಿದ್ದ ಮಕ್ಕಳನ್ನು ಗಮನಿಸುತ್ತಿದ್ದರು – ಅಲ್ಲಿನ ಮಕ್ಕಳಿಗೆ ಸಿಗುತ್ತಿರುವ ಅನುಕೂಲತೆಗಳು, ನೀಡಲಾಗುತ್ತಿರುವ ಉತ್ತಮ ಸಂಸ್ಕಾರಗಳು, ಇದರಿಂದ ಮಕ್ಕಳಲ್ಲಿ ಉಂಟಾಗುತ್ತಿರುವ ಪರಿವರ್ತನೆ, ಇವೆಲ್ಲವನ್ನೂ ಕಂಡು ಇನ್ನಷ್ಟು ಹಿರಿಯರು ತಮ್ಮ ಮನೆಯ ಮಕ್ಕಳನ್ನೂ ಆಶ್ರಮಕ್ಕೆ ಸೇರಿಸಲು ಮುಂದೆ ಬಂದರು. ಆಶ್ರಮವು ನಡೆಸುತ್ತಿರುವ ಕಾರ್ಯವು ಸುತ್ತಮುತ್ತಲ ಪ್ರದೇಶದಲ್ಲೆಲ್ಲಾ ಜನಜನಿತವಾಯಿತು. ಹೆಚ್ಚೆಚ್ಚು ಮಕ್ಕಳು ಸೇರುವುದರ ಜೊತೆಗೆ, ದಾನಿಗಳಿಂದ ದೇಣಿಗೆ ರೂಪದಲ್ಲಿ ನೆರವೂ ಹರಿದು ಬರಲಾರಂಭಿಸಿತು.
ಈಗ ಆಶ್ರಮದಲ್ಲಿರುವ ಮಕ್ಕಳ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಶ್ರೀ ಕ್ಷೇತ್ರ ಗಾಣಗಾಪುರದ ಅರ್ಚಕರು ತಮ್ಮ ಸ್ವಂತದ ಎರಡು ಎಕರೆಯಷ್ಟು ಭೂಮಿಯನ್ನು ಆಶ್ರಮಕ್ಕೆ ದಾನವಾಗಿ ನೀಡಿದ್ದಾರೆ. ಅಲ್ಲೀಗ ಸುಸಜ್ಜಿತ ಕಟ್ಟಡವೊಂದು ಎದ್ದುನಿಂತಿದೆ. ಅಲ್ಲಿರುವ ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ ಮತ್ತು ಶಿಕ್ಷಣದ ವ್ಯವಸ್ಥೆ ಒದಗಿಸಲಾಗುತ್ತಿದೆ. ಯಾವುದೇ ಜಾತಿ, ಮತ ಇತ್ಯಾದಿ ತಾರತಮ್ಯವಿಲ್ಲದೆ ಮಕ್ಕಳು ಸಾರ್ವಜನಿಕ ಶಾಲೆಯಲ್ಲಿ ಮುಖ್ಯವಾಹಿನಿಯ ನಿರೋಗಿ ಮಕ್ಕಳ ಜೊತೆ ಬೆರೆತು ಶಿಕ್ಷಣ ಪಡೆಯುವಂತಾಗಿದೆ. ಈ ಮಕ್ಕಳ ಆರೋಗ್ಯದ ನಿಗಾವಹಿಸಲು ವೈದ್ಯರ ತಂಡವೂ ಸಿದ್ಧವಾಗಿದೆ, ಅವರು ಮಕ್ಕಳ ಶುಶ್ರೂಶೆಗಾಗಿ ಯಾವುದೇ ಶುಲ್ಕ ಪಡೆಯುವುದಿಲ್ಲ. ಶಾಲಾ ಅವಧಿಯಲ್ಲದ ಹೊತ್ತಿನಲ್ಲಿ ಆಶ್ರಮದ ಮಕ್ಕಳಿಗೆ ಅವರ ಅಭಿರುಚಿಯ ಕ್ರೀಡೆ, ಕಲೆಗಳ ವಿಕಾಸಕ್ಕಾಗಿ ತರಬೇತಿ ನೀಡಲಾಗುತ್ತದೆ. ಯೋಗ, ಧ್ಯಾನ, ಭಜನೆ, ಶ್ಲೋಕಗಳ ಅಭ್ಯಾಸದ ಮೂಲಕ ಉತ್ತಮ ಸಂಸ್ಕಾರಗಳನ್ನು ಅವರು ಪಡೆಯುತ್ತಿದ್ದಾರೆ.
ಒಂದು ಉಲ್ಲೇಖನೀಯ ಪ್ರಸಂಗ
ಒಮ್ಮೆ ಆಶ್ರಮದ ವಾರ್ಷಿಕೋತ್ಸವಕ್ಕೆ ವೆಂಕಟೇಶ ಗುರುನಾಯಕರು ಕಲ್ಬುರ್ಗಿಯ ಪ್ರತಿಷ್ಠಿತ ವಕೀಲರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿದ್ದರು. ಅವರು ಸ್ಥಾನೀಯ ದಲಿತ ಸಂಘರ್ಷ ಸಮಿತಿಯ ಮುಖ್ಯಸ್ಥರೂ ಆಗಿದ್ದವರು. ತಾವು ಕಾರ್ಯಕ್ರಮದಲ್ಲಿ ತಮ್ಮ ವಿಚಾರವನ್ನೇ ಮುಂದಿಡುವುದಾಗಿ ತಿಳಿಸಿ, ಅದಕ್ಕೆ ಒಪ್ಪಿಗೆ ಸಿಕ್ಕ ನಂತರವೇ ಆಹ್ವಾನಕ್ಕೆ ಒಪ್ಪಿಗೆ ಸೂಚಿಸಿದ್ದರು. ಕಾರ್ಯಕ್ರಮದ ದಿನ ಸ್ವಂತದ ವಾಹನದಲ್ಲಿ ಕೆಲವು ಅನುಯಾಯಿಗಳೊಂದಿಗೆ ಸುಮಾರು ಎರಡು ತಾಸು ಮುಂಚಿತವಾಗಿ ಗಾಣಗಾಪುರ ತಲುಪಿ ಆಶ್ರಮಕ್ಕೆ ಆಗಮಿಸಿದರು. ಗುರುನಾಯಕರು ಮತ್ತು ಆಶ್ರಮದ ಅನ್ಯ ವ್ಯವಸ್ಥಾಪಕರೆಲ್ಲರೂ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದ ಕಾರಣ, ವಕೀಲರು ತಾವಾಗಿಯೇ ಆಶ್ರಮದೆಲ್ಲೆಡೆ ಓಡಾಡಿ, ಆಶ್ರಮದ ವ್ಯವಸ್ಥೆಯನ್ನೆಲ್ಲ ಹತ್ತಿರದಿಂದ ಗಮನಿಸಿ, ಮಕ್ಕಳೊಂದಿಗೆ ಬೆರೆತು ಅವರನ್ನು ಹಲವು ವಿಧದಲ್ಲಿ ಪ್ರಶ್ನಿಸಿದರು. ಆಶ್ರಮದಲ್ಲಿ ಜಾತಿಭೇದ, ಮೇಲು-ಕೀಳು ಇತ್ಯಾದಿ ಇಲ್ಲವಷ್ಟೇ ಅಲ್ಲ, ಮಕ್ಕಳು ಪಡೆಯುತ್ತಿರುವ ಉತ್ತಮ ಉದಾತ್ತ ಸಂಸ್ಕಾರ ಕಂಡು ಅವರು ಬೆಕ್ಕಸ ಬೆರಗಾದರು. ಅಂದು ಅವರಿಗೆ ನಿಜಾರ್ಥದಲ್ಲಿ ಆಗಿದ್ದುದು ಸಂಘದ ‘ಕೃತಿರೂಪದರ್ಶನ’ವೇ. ‘ಹಳಿಯಲು ಸಿದ್ಧರಾಗಿ ಬಂದವರು ಅಭಿಮಾನಿಗಳಾಗಿ ಮರಳಿದರು’.
