ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು
- ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ
ಅದು 80ರ ದಶಕದ ಸಂಗತಿ. ಮಂಗಳೂರು ನಗರದ ಮಣ್ಣಗುಡ್ಡೆಯಲ್ಲಿರುವ ‘ಸಂಘನಿಕೇತನ’ಕ್ಕೆ ಹೋಗುವ ಡಾಮರು ರಸ್ತೆ. ಪ್ರತಿನಿತ್ಯ ಬೆಳಿಗ್ಗೆ 6.15ಕ್ಕೆ ತಪ್ಪದೆ ಅಲ್ಲೊಬ್ಬ ವ್ಯಕ್ತಿ ನಡೆದುಕೊಂಡು ಹೋಗುತ್ತಿರುತ್ತಾರೆ. ಚಡ್ಡಿ ಧರಿಸಿ, ಕಪ್ಪು ಟೋಪಿ ಇಟ್ಟು, ವಯಸ್ಸು ಎಂಬತ್ತಾರಾದರೂ ಕೋಲೂರದೆ ನೆಟ್ಟಗೆ ಇವರು ನಡೆದುಕೊಂಡು ಹೋಗುವ ದೃಶ್ಯ ಅಲ್ಲಿನ ನಿವಾಸಿಗಳಲ್ಲೆಲ್ಲ ಚೈತನ್ಯದ ಬುಗ್ಗೆ ಚಿಮ್ಮುವ ಪ್ರಸಂಗ. ನಿತ್ಯ ನೋಡುವ ವ್ಯಕ್ತಿ ಇವರಾದರೂ ‘ಮಾಮೂಲು ವ್ಯಕ್ತಿ’ ಏನಲ್ಲ.
ವೃದ್ಧಾಪ್ಯದ ಲಕ್ಷಣವಾಗಿ ತಲೆಮೇಲೆ ಬೆಳ್ಳಿ ಕೂದಲು. ಸುಕ್ಕುಗಟ್ಟಿದ ಚರ್ಮ. ಆದರೆ ತುಕ್ಕು ಹಿಡಿಯದ ಮನಸ್ಸು. ಕಂಗೊಳಿಸುವ ಕಾಂತಿಯುತ ಕಣ್ಣುಗಳು. “ನಿಮಗೆ ವಯಸ್ಸೆಷ್ಟು?” ಎಂದು ಯಾರಾದರೂ ಕುತೂಹಲದಿಂದ ಕೇಳಿದರೆ, “ಅರವತ್ತೆಂಟು” – ಫಟ್ ಎಂದು ಉತ್ತರ. ಪ್ರಶ್ನೆ ಕೇಳಿದವರು ಸುಮ್ಮನಾಗುವ ಮುನ್ನವೇ ಈ ಹಿರಿಯರಿಂದ ಇನ್ನೊಂದು ಮಾತಿನ ಬಾಂಬ್: “ನನ್ನ ವಯಸ್ಸು 68ರ ಉಲ್ಟಾ!”.
“ಅಂದರೆ ನಿಮಗೀಗ 86 ವರ್ಷ ಪ್ರಾಯವೇ?”
“ಹೌದು” ಎನ್ನುತ್ತಿರುವಂತೆ ಆ ಹಿರಿಯರ ಮುಖದಿಂದ ಹೊಮ್ಮುವ ಮುಗ್ಧ ನಗುವಿನ ಅಲೆ ಸುತ್ತಲಿದ್ದವರನ್ನು ಇನ್ನೂ ಚಕಿತಗೊಳಿಸುತ್ತದೆ.
88 ವಸಂತಗಳನ್ನು ಕಂಡ (ಜನನ: 7.12.1900; ನಿಧನ: 9.02.1988) ವೆಂಕಟೇಶ ಬಾಳಿಗರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ನಿಷ್ಠಾವಂತ ಸ್ವಯಂಸೇವಕ. ಇವರ ಪೂರ್ವಜರೆಲ್ಲ ಮೂಲತಃ ಉಡುಪಿ ಬಳಿಯ ಕಲ್ಯಾಣಪುರದವರಾದರೂ ಬಾಳಿಗರು ಹುಟ್ಟಿದ್ದು ಮಂಗಳೂರಿನಲ್ಲಿ. 86ರ ಇಳಿ ವಯಸ್ಸಿನಲ್ಲೂ ತಪ್ಪದೆ ನಿತ್ಯ ಶಾಖೆಗೆ ಹೋಗುವ ಕಠೋರ ನಿಷ್ಠೆ. ಹಿರಿಕಿರಿಯರೆಲ್ಲರೊಡನೆ ಆನಂದದಿಂದ ಬೆರೆಯುವ ಆತ್ಮೀಯ ಸ್ವಭಾವ. ಸ್ವಚ್ಚ ವ್ಯವಹಾರ – ವ್ಯಾಪಾರ. ಇವು ಬಾಳಿಗರ ಬಾಳಿನ ವೈಶಿಷ್ಟ್ಯ. ಮಂಗಳೂರಿನ ಸಂಘಪ್ರೇಮಿಗಳಿಗೆಲ್ಲ ‘ಬಾಳ್ ಮಾಮ್’ರೆಂದೇ ಚಿರಪರಿಚಿತ.
“ನಿಮಗೆ ಸಂಘಕ್ಕೆ ಏಕೆ ಹೋಗಬೇಕೆನಿಸಿತು?” – 1987ರಲ್ಲಿ ಮಾಡಿದ ಒಂದು ಸಂದರ್ಶನದ ನಡುವೆ ನಾನು ಕೇಳಿದ್ದೆ.
ಬಾಳ್ ಮಾಮ ಒಂದು ನಿಮಿಷ ಏನನ್ನೋ ಯೋಚಿಸುವವರಂತೆ ಗಂಭೀರರಾದರು. ಹಿಂದಿನದೆಲ್ಲ ಜ್ಞಾಪಿಸಿಕೊಂಡು ಹೇಳತೊಡಗಿದರು: “ನಾವು ಹುಟ್ಟಿದ್ದೇ ವ್ಯಾಪಾರಿಗಳಾಗಿ. ವ್ಯಾಪಾರ ಬಿಟ್ಟು ನಮಗೆ ಇನ್ನೇನೂ ಗೊತ್ತಿರಲಿಲ್ಲ. ಬೇರೆ ಯಾರ ಪರಿಚಯವೂ ನನಗಿರಲಿಲ್ಲ. 1942ರಲ್ಲಿ ಮಂಗಳೂರಿನಲ್ಲಿ ನಾಗಪುರದ ಅಣ್ಣಾ ಶೇಷ ಎನ್ನುವವರು ಸಂಘದ ಪ್ರಚಾರಕರಾಗಿದ್ದರು. ಅವರನ್ನು ಬೇರೆ ಕ್ಷೇತ್ರಕ್ಕೆ ಕಳಿಸಿಕೊಡುವ ಒಂದು ಬೀಳ್ಕೊಡುಗೆ ಕಾರ್ಯಕ್ರಮ ಇತ್ತು. ಆ ಕಾರ್ಯಕ್ರಮಕ್ಕೆ ಬರುವಂತೆ ಬಸ್ತಿ ದಾಸಪ್ಪ ಶೆಣೈ(ಆಗ ನಗರ ಕಾರ್ಯವಾಹರು) ನನ್ನನ್ನು ಆಮಂತ್ರಿಸಿದ್ದರು. ಅಲ್ಲಿಗೆ ಕಾರ್ಕಳ ಸದಾಶಿವರಾಯರೂ ಬಂದಿದ್ದರು. ವೆಂಕಟೇಶ್ ಭಟ್ ಮತ್ತು ಕೆಲವರು ಅಲ್ಲಿ ಸೇರಿದ್ದರು. ಅವತ್ತಿನಿಂದ ಸಂಘದ ಪರಿಚಯವಾಯ್ತು. ಯಾರ ಪರಿಚಯವೂ ಅಷ್ಟಾಗಿ ಇರದಿದ್ದ ನನಗೆ ಹಲವರು ಗೆಳೆಯರಾದರು. ಕ್ರಮೇಣ ನಿತ್ಯ ಶಾಖೆಗೆ ಹೋಗಲು ಶುರು ಮಾಡಿದೆ.
“ಎಲ್ಲಕ್ಕಿಂತಲೂ ಮುಖ್ಯವಾಗಿ ಸಂಘಕ್ಕೆ ಹೋಗಬೇಕೆನಿಸಿದ್ದು ಇವಳಿಂದಲೇ” ಎಂದು ತಮ್ಮ ಧರ್ಮಪತ್ನಿಯತ್ತ ಕೈ ತೋರಿದರು. ಆಕೆ ಮುಗುಳ್ನಕ್ಕರು.
“ನಿಮಗೆ ನಿತ್ಯವೂ ಶಾಖೆಗೆ ಹೋಗಬೇಕೆಂದು ಅನಿಸಿದ್ದಕ್ಕೆ ವಿಶೇಷ ಕಾರಣಗಳೇನಾದರೂ ಇವೆಯೇ?”
ಮತ್ತೆ ಬಾಳ್ ಮಾಮ ಗಂಭೀರರಾಗಿ ಹೇಳಿದರು: “ನೋಡಿ, ನನಗೆ ಮೊದಲಿನಿಂದಲೂ ಬೀಡಿ ಸೇದುವ ಚಟ ಜೋರಾಗಿತ್ತು. ಒಂದಾದ ಮೇಲೊಂದು ಸೇದುವ ಚೈನ್ ಸ್ಮೋಕರ್ ನಾನಾಗಿದ್ದೆ. ಸಂಘಕ್ಕೆ ಹೋಗಲು ಶುರುಮಾಡಿದ ಮೇಲೆ ಬಿಡಬೇಕೆಂದು ಮನಸ್ಸಾದರೂ ಸಾಧ್ಯವಾಗಲಿಲ್ಲ. ಆರೋಗ್ಯ ಕೆಟ್ಟಿತು. ಹೋಮಿಯೋಪತಿ ವೈದ್ಯರಾಗಿದ್ದ ಕುವೇ ಕೊಡಿಕರ್ ಎಂಬ ಪಂಡಿತರ ಬಳಿಗೆ ಮದ್ದಿಗೆಂದು ಹೋದೆ. ಅವರು ಆರೋಗ್ಯ ಸರಿಯಾಗಬೇಕಾದರೆ ಬೀಡಿ ಬಿಡಬೇಕೆಂದು ತಿಳಿಸಿದರು. ಆಗ ಬಿಟ್ಟೆ. ಆರೋಗ್ಯ ಸುಧಾರಿಸಿತು. ಮತ್ತೆ ಸೇದಲಾರಂಭಿಸಿದೆ. 1948ರಲ್ಲಿ ಸಂಘದ ಮೇಲಿನ ನಿಷೇಧದ ವಿರುದ್ಧ ಸತ್ಯಾಗ್ರಹ ಮಾಡಿ ನಾವೆಲ್ಲ ಜೈಲಿಗೆ ಹೋಗಿದ್ದೆವು. ಜೈಲಿನಲ್ಲಿದ್ದಾಗ ಬೀಡಿ ಅಭ್ಯಾಸ ಬಿಟ್ಟಿದ್ದೆ. ಹೊರಗೆ ಬಂದ ಮೇಲೆ ಮತ್ತೆ ಸೇದಲಾರಂಭಿಸಿದೆ. ಹೀಗೆ ಮೂರು ಬಾರಿ ಬೀಡಿ ದುರಭ್ಯಾಸ ನಿಲ್ಲಿಸಲು ಪ್ರಯತ್ನಿಸಿದರೂ ವಿಫಲನಾದೆ. ಆದರೆ 1950ರಲ್ಲಿ ಒಂದು ದಿನ. ಆ ದಿನ ಸಂಘದ ಗುರುದಕ್ಷಿಣೆ ಉತ್ಸವ. ಗುರುದಕ್ಷಿಣೆ ಅರ್ಪಿಸುವಾಗ ಭಗವಾಧ್ವಜದೆದುರು ʼಇನ್ನು ಮೇಲೆ ಬೀಡಿ ಸೇದುವುದಿಲ್ಲʼ ಎಂದು ಪ್ರತಿಜ್ಞೆ ಮಾಡಿದೆ. ಅಂದಿನಿಂದ ನಾನು ಬೀಡಿ ಮುಟ್ಟಲಿಲ್ಲ. ಒಂದು ವರ್ಷ ಬೀಡಿಯ ನೆನಪು ಪದೇ ಪದೇ ಆಗ್ತಾ ಇತ್ತು. ರಾತ್ರಿ ಕನಸಿನಲ್ಲಿ ಬೀಡಿ ಎಳೆದಂತೆ ಆಗ್ತಾ ಇತ್ತು. ಆದರೆ ಮನಸ್ಸು ಗಟ್ಟಿ ಮಾಡಿದ್ದೆ. ನಿತ್ಯ ಶಾಖೆಗೆ ಹೋಗದೆ ಇದ್ದಿದ್ದರೆ ಮನಸ್ಸು ಇಷ್ಟು ಗಟ್ಟಿ ಆಗ್ತಾ ಇರಲಿಲ್ಲವೇನೋ…”
ಅವರ ಮಾತು ಇನ್ನೂ ಮುಗಿದಿರಲಿಲ್ಲ. ಆಗಲೇ ಅವರ ಧರ್ಮಪತ್ನಿ ಪದ್ಮಾವತಿ ಬಾಳಿಗರು ಮಧ್ಯೆ ಪ್ರವೇಶಿಸಿ, “ಅದೊಂದೇ ಅಲ್ಲ ಮಾರಾಯ್ರೆ, ಇವ್ರಿಗೆ ತುಂಬಾ ಕೋಪ ಇತ್ತು. ನಿತ್ಯ ಶಾಖೆಗೆ ಹೋಗ್ಲಿಕ್ಕೆ ಶುರು ಮಾಡಿದ ಮೇಲೆ ಇವ್ರ ಕೋಪ ಸಹ ಕಡಿಮೆಯಾಗಿದೆ” ಎಂದು ನಗುತ್ತಾ ಹೇಳಿದ್ದರು.
ತಾನು ನಂಬಿದ ಧ್ಯೇಯಕ್ಕಾಗಿ ಎರಡು ಸಲ ಸೆರೆವಾಸ ಅನುಭವಿಸಿದ ಹಿರಿಮೆ ಬಾಳ್ ಮಾಮರದು. 1948ರಲ್ಲಿ ಸಂಘದ ಮೇಲಿನ ನಿಷೇಧ ವಿರೋಧಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಲಾಠಿ ಏಟು ತಿಂದರು. 4 ತಿಂಗಳು ಸೆರೆವಾಸ ಅನುಭವಿಸಿದರು. ಈ ಪೈಕಿ ಒಂದು ತಿಂಗಳು ಕಠಿಣ ಸಜೆ. ತಿನ್ನಲು ಜೋಳದ ಗಂಜಿ ಬಿಟ್ಟರೆ ಜೈಲಿನಲ್ಲಿ ಬೇರೆ ಗತಿಯಿಲ್ಲ.
ಮತ್ತೊಮ್ಮೆ ಅವರು ಜೈಲಿಗೆ ಹೋಗಿದ್ದು 1975ರಲ್ಲಿ. ಆಗ ತುರ್ತುಪರಿಸ್ಥಿತಿ. ಇಡೀ ದೇಶದಲ್ಲಿ ಎಲ್ಲರ ಬಾಯಿಗೆ ಇಂದಿರಾಗಾಂಧಿ ಬೀಗ ಹಾಕಿದ ಭಯಾನಕ ಸ್ಥಿತಿ. ಸಂಘದ ಮೇಲೆ ಯಥಾಪ್ರಕಾರ ಮತ್ತೆ ನಿಷೇಧ. ಇದನ್ನು ವಿರೋಧಿಸಿ 74ರ ಆ ಇಳಿವಯಸ್ಸಿನಲ್ಲೂ ಸತ್ಯಾಗ್ರಹ ತಂಡದ ನೇತೃತ್ವ ವಹಿಸಿ, ಬಂಧನಕ್ಕೊಳಗಾದರು. ಮನೆಯಲ್ಲಿ ರಾಮಾ ಕೃಷ್ಣಾ ಎಂದು ಹಾಯಾಗಿ ಧ್ಯಾನ ಮಾಡುವ ಬದಲು ಈ ಪ್ರಾಯದಲ್ಲೂ ಹುಡುಗಾಟಿಕೆಯೇ? ಪೊಲೀಸ್ ಅಧಿಕಾರಿಗೆ ಸಿಟ್ಟು ತಡೆದುಕೊಳ್ಳಲಾಗಲಿಲ್ಲ. ಆತನ ಲಾಠಿ ಈ ಹಿರಿಯರ ಮೇಲೂ ಎರಗಿತು. ಬಲಗೈ ಮೂಳೆ ಮುರಿದು ರಕ್ತ ಚಿಲುಮೆಯಂತೆ ಚಿಲ್ಲನೆ ಚಿಮ್ಮಿತು. ಉಳಿದ ಬಂಧಿಗಳಿಗೆಲ್ಲ ಪಾಂಡೇಶ್ವರ ಠಾಣೆಯಲ್ಲಿ ಸತತ ಬೈಠಕ್ ಶಿಕ್ಷೆ. ಮಧ್ಯಾಹ್ನವೇ ಲಾಠಿ ಪೆಟ್ಟಿನಿಂದ ಬಲಗೈ ಮೂಳೆ ಮುರಿದಿದ್ದರೂ ಪೊಲೀಸರು ಅಪಾರ ದಯೆ ತೋರಿ ಬಾಳ್ ಮಾಮರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಿದ್ದು ಆ ದಿನ ರಾತ್ರಿ ಹನ್ನೊಂದು ಘಂಟೆಗೆ!.
ಮರುದಿನ ಸತ್ಯಾಗ್ರಹಿಗಳನ್ನು ಕೋರ್ಟಿಗೆ ಹಾಜರುಪಡಿಸಲಾಯಿತು. “ಇವರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ” ಎಂದು ಕೋರ್ಟಿನಲ್ಲಿ ಪೊಲೀಸರ ಸುಳ್ಳು ಹೇಳಿಕೆ.
ಆಗ ಬಾಳ್ ಮಾಮ ಹೇಳಿದ್ದು: “ಬಿದ್ದದ್ದು ಹೌದು. ಆದರೆ ನಾನಲ್ಲ. ಪೊಲೀಸರ ಲಾಠಿ ಏಟುಗಳು ನನ್ನ ಕೈ ಮೇಲೆ ಬಿದ್ದು ಕೈ ಮುರಿದಿದೆ”.
ಸುಳ್ಳು ಹೇಳಿಕೆ ನೀಡಿದ ಪೊಲೀಸ್ ಅಧಿಕಾರಿ ಪೆಚ್ಚುಮೋರೆ ಹಾಕಿದ!.
ಎರಡು ಬಾರಿಯೂ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದನ್ನು ಹೆಮ್ಮೆಯಿಂದ ಬಾಳ್ ಮಾಮ ಆ ಸಂದರ್ಶನದಲ್ಲಿ ಸ್ಮರಿಸಿಕೊಂಡಿದ್ದರು.
ತುಂಬು ಸಂಸಾರದಲ್ಲಿ ಸದಾ ಸಂತಸದಿಂದಿರುವ ಬಾಳ್ ಮಾಮರನ್ನು ಒಂದೇ ಒಂದು ಕೊರಗು ಮಾತ್ರ ಸದಾ ಕಾಡಿತ್ತು.
“ಸಂಘದ ಎಲ್ಲ ದೊಡ್ಡ ಶಿಬಿರಗಳಿಗೆ ಹೋಗಿದ್ದೇನೆ. ‘ಹಿಂದೂ ಸಂಗಮ’ಕ್ಕೂ ಹೋಗಿದ್ದೇನೆ. ಮೊನ್ನೆ ಡಿಸೆಂಬರ್ 24ರಂದು ನಡೆದ ಪಥಸಂಚಲನದಲ್ಲೂ ಭಾಗವಹಿಸಿದ್ದೇನೆ. ಆದರೆ ಸಂಘದ ಕೇಂದ್ರ ನಾಗಪುರಕ್ಕೆ ಮಾತ್ರ ಒಮ್ಮೆಯೂ ಹೋಗಲಾಗಲಿಲ್ಲ. ಒಮ್ಮೆ ಹೋಗುವುದೆಂದೂ ಆಗಿತ್ತು. ವಾಸು ಮಾಮರಿಂದ (ಪಂಚಮಾಲ್ ವಾಸುದೇವ ಕಾಮತ್ – ಆಗಿನ ವಿಭಾಗ ಸಂಘಚಾಲಕರು) ಪರಿಚಯ ಪತ್ರವನ್ನೂ ಪಡೆದುಕೊಂಡಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಹೋಗಲು ಸಾಧ್ಯವಾಗಲೇ ಇಲ್ಲ” ಎಂದು ಹೇಳುವಾಗ ಅವರ ಮುಖ ಬಾಡಿತ್ತು.
“ಸಂಘದ ಬಗ್ಗೆ ನಿಮಗೇನು ಅನಿಸುತ್ತೆ ಬಾಳ್ ಮಾಮರೆ?” ಸಹಜವಾಗಿ ಕೇಳಿದ್ದೆ.
“ಸಂಘಕ್ಕೆ ಮೊದಲು ನಾನು ಹೋಗುವಾಗ ರಥಬೀದಿಯಲ್ಲಿ ನಮಗೆಲ್ಲ ‘ಕಪ್ಪು ಟೋಪಿಯ ಕಾಗೆಗಳೇ, ಸಂಘಕ್ಕೆ ಹೋಗುವ ಮಂಗಗಳೇ’ ಎಂದು ಹಲವರು ಮಕ್ಕರ್ ಮಾಡ್ತಾ ಇದ್ರು. ಆದರೆ ಆಗ ನನಗೇನೂ ಬೇಸರವಾಗಲಿಲ್ಲ. ಮಕ್ಕರ್ ಮಾಡುವವರಿಗೆ ಸಂಘ ಗೊತ್ತಿಲ್ಲ, ಪಾಪ, ಹಿಂದೂಸ್ಥಾನದಲ್ಲಿ ಸಂಘ ಇಲ್ಲದೆ ಇರುತ್ತಿದ್ರೆ ಇನ್ನೂ ಅನರ್ಥ ಆಗ್ತಾ ಇತ್ತು. ಆಡಳಿತ ಪಕ್ಷ ಬಾಯಲ್ಲಿ ಹೇಳದಿದ್ರೂ ಮನಸ್ಸಿನಲ್ಲಿ ಅದಕ್ಕೂ ಸಂಘ ಬೇಕೆಂದೇ ಉಂಟು. ಸಂಘ ಇಲ್ಲದಿದ್ರೆ ನಮ್ಮ ದೇಶಕ್ಕೆ ಭವಿಷ್ಯವೇ ಇಲ್ಲ”. – ಬಾಳ್ ಮಾಮರ ಮನದಾಳದಿಂದ ಹೊರಹೊಮ್ಮಿದ ನಿಷ್ಕಪಟ ಮಾತುಗಳಾಗಿತ್ತು.
“ಮೊದಲಿನಿಂದಲೂ ಸಂಘದಲ್ಲಿ ನಾನು ಬೇಜವಾಬ್ದಾರಿ ವ್ಯಕ್ತಿ (ಯಾವುದೇ ವಿಶಿಷ್ಟ ಹೊಣೆಯ ಸ್ಥಾನವಿಲ್ಲ). ಯಾವ ಐಟಿಸಿ, ಓಟಿಸಿ ಶಿಕ್ಷಣಗಳನ್ನೂ ನಾನು ಮುಗಿಸಲಿಲ್ಲ” ಎಂದು ಬಾಳ್ ಮಾಮ ಹೇಳುತ್ತಾರಾದರೂ ಸಂಘ, ಹಿಂದೂ ಸಮಾಜದ ಮೇಲಿನ ಅವರ ನಿತಾಂತ ನಿಷ್ಠೆ, ದೃಢವಿಶ್ವಾಸದ ಅವರ ಉತ್ತಮ ಬದುಕಿನ ಬಗೆ – ಇವೆಲ್ಲ ಯಾವ ಓಟಿಸಿ ಶಿಕ್ಷಣ ಪಡೆದ ಸ್ವಯಂಸೇವಕನಿಗಿಂತ ಕಡಿಮೆಯದೇನಲ್ಲ. ಹಲವು ಕಾರ್ಯಕರ್ತರಿಗೆ ಪ್ರೇರಣೆ ನೀಡಿದ ಚೈತನ್ಯಸ್ರೋತ ಬಾಳ್ ಮಾಮರ ಬಾಳು.
ಸಂಘದ ಬಗ್ಗೆ ಅತೀವ ಶ್ರದ್ಧೆ ಹೊಂದಿದ್ದ ಬಾಳ್ ಮಾಮರು ಕೊನೆಯ ದಿನಗಳಲ್ಲಿ ತಮ್ಮ ಮನೆಯ ಎಲ್ಲರೂ ಸಂಘದ ಪ್ರಾರ್ಥನೆ ಪ್ರತಿನಿತ್ಯ ಮಾಡಬೇಕು. ಅನಂತರವೇ ನಾನು ಊಟ, ತಿಂಡಿ ಮಾಡುವುದು. ನೀವು ಪ್ರಾರ್ಥನೆ ಮಾಡದಿದ್ದರೆ ನಾನು ಆ ದಿನ ಊಟ, ತಿಂಡಿ ಮಾಡುವುದೇ ಇಲ್ಲ ಎಂದು ಖಡಕ್ ಆಗಿ ತಿಳಿಸಿದ್ದರಂತೆ! ತಪ್ಪದೆ ಶಾಖೆಗೆ ಹೋಗುತ್ತಿದ್ದ ಅವರು ಇಳಿವಯಸ್ಸಿನಲ್ಲಿ ದಂಡ ಊರಿಕೊಂಡು, ದಾರಿಯಲ್ಲಿ ಒಂದೆರಡು ಬಾರಿ ಕುಳಿತು ಸುಧಾರಿಸಿಕೊಂಡು ಶಾಖೆಗೆ ಹೋಗುತ್ತಿದ್ದರಂತೆ.
ಅಂಥ ಕಠೋರ ನಿಷ್ಠೆ ಅವರದಾಗಿತ್ತು. ಸಂಘಕ್ಕೆ ನೂರು ದಾಟುತ್ತಿರುವ ಈ ಸಂದರ್ಭದಲ್ಲಿ, ಬಾಳ್ ಮಾಮರಂತಹ ಅದೆಷ್ಟೋ ಅನಾಮಿಕ ಸ್ವಯಂಸೇವಕರು ನೆನಪಾಗುತ್ತಾರೆ. ಅವರನ್ನು ಯಾರೂ ಗುರುತಿಸದಿರಬಹುದು. ಆದರೆ ಅವರೆಲ್ಲ ಸಂಘ ಸೌಧದ ಒಂದೊಂದು ಗಟ್ಟಿ ಇಟ್ಟಿಗೆಯಾಗಿದ್ದಾರೆ ಎಂಬುದನ್ನು ಮರೆಯುವುದು ಹೇಗೆ?
