ಅಕ್ಷರನಮನ
- ಕಮಲಾಕರ ಕೆ.ಆರ್. ತಲವಾಟ, ನಿವೃತ್ತ ಬ್ಯಾಂಕ್ ಉದ್ಯೋಗಿ
ತೂಗು ಸೇತುವೆಗೆ ನಮ್ಮ ದೇಶದಲ್ಲಿ ಇನ್ನೊಂದು ಹೆಸರು ಬಹುಶ: ಗಿರೀಶ್ ಭಾರದ್ವಾಜ್. ಜುಲೈ 7ರಂದು ಈ ಮಣ್ಣಿನಿಂದ ದೂರಾದ ಗಿರೀಶ್ ಭಾರದ್ವಾಜ್ ‘ತೂಗು ಸೇತುವೆಗಳ ಸರದಾರ’ ಎಂಬ ಬಿರುದಿಗೆ ಪಾತ್ರರಾಗಿದ್ದರು.
ಸುಳ್ಯ ತಾಲೂಕಿನ ಅರಂಬೂರಿನಲ್ಲಿ 1950ರ ಮೇ 2ರಂದು ಜನಿಸಿದ ಅವರು, ಮಂಡ್ಯದ ಪಿಇಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಪಡೆದವರು. ಬಹಳಷ್ಟು ಜನರಂತೆ ಅವರನ್ನು ಹೊರದೇಶ ಕೈಬೀಸಿ ಕರೆಯಲಿಲ್ಲ ಅಥವಾ ಕರೆದರೂ ಹೋಗಲಿಲ್ಲವೇನೋ.
ಗಿರೀಶ್ ಅವರು ತಂದೆಯ ಆಶಯದಂತೆ ಹುಟ್ಟೂರಿನಲ್ಲೇ ಉಳಿದುಕೊಂಡರು. ಹಳ್ಳಿಯ ಪರಿಸರದಲ್ಲಿ ಬೆಳೆದ ಅವರಿಗೆ ಹಳ್ಳಿಗರ ಕಷ್ಟ ಕಾರ್ಪಣ್ಯಗಳ ಅರಿವಿತ್ತು. ಸುಳ್ಯದಲ್ಲಿ ಸಣ್ಣ ವರ್ಕ್ ಶಾಪ್ ತೆರೆದು ಯಂತ್ರೋಪಕರಣಗಳ ದುರಸ್ತಿ, ಪಂಪ್ಸೆಟ್ ಫಿಟ್ಟಿಂಗ್, ಸ್ಟೀಲ್ ಫ್ಯಾಬ್ರಿಕೇಷನ್ ಮುಂತಾದ ಕೆಲಸಗಳನ್ನು ಶುರುಮಾಡಿದರು. ಮುಂದೆ ಇದೇ ‘ಆಯಶ್ಶಿಲ್ಪ ಎಂಜಿನಿಯರಿಂಗ್ ವರ್ಕ್ಸ್’ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.
ಗಿರೀಶ್ ಹೊರದೇಶದೆಡೆಗೆ ಮುಖ ಮಾಡಿದ್ದರೆ ಬಹಳಷ್ಟು ಹಳ್ಳಿಯ ಜನರು ಇಂದು ಗಿರೀಶ್ ಅವರು ಕಟ್ಟಿಕೊಟ್ಟ ತೂಗುಸೇತುವೆಯಿಂದ ವಂಚಿತರಾಗುತ್ತಿದ್ದರು. ಎರಡು ಫೋನುಗಳ ನಡುವೆ ಸಂಪರ್ಕ ಏರ್ಪಡಲು ನೆಟ್ವರ್ಕ್ ಕಾರ್ಯನಿರ್ವಹಿಸಿದಂತೆ ಇವರು ಕಟ್ಟಿಕೊಟ್ಟ ತೂಗುಸೇತುವೆಗಳು ಊರುಗಳ ನಡುವೆ ಸಂಪರ್ಕ ಸಾಧನವಾದವು. ಹೃದಯಗಳನ್ನು ಬೆಸೆಯುವ ಸೇತುವೆಯಾಯಿತು. ಅಂದು ತೂಗು ಸೇತುವೆ ನಿರ್ಮಿಸಿದಾಗ ಹಳ್ಳಿಗರ ಮುಖದಲ್ಲಿ ಯಾವ ಖುಷಿ ಲಾಸ್ಯವಾಡಿತ್ತೋ ಇಂದು ಭಾರಧ್ವಾಜ್ ನಿಧನದಿಂದ ಅವರೆಲ್ಲರ ಕಣ್ಣು ಕಂಬನಿಯಿಂದ ಒದ್ದೆಯಾಗಿ ಹೃದಯ ‘ಭಾರ’ವಾಗಿದೆ. ಇವರು ಕಟ್ಟಿಕೊಟ್ಟ ಸೇತುವೆಗಳಿಲ್ಲದಿದ್ದರೆ ಇನ್ನೆಷ್ಟು ವರ್ಷಗಳು ಆ ಹಳ್ಳಿಗಳು ಸರ್ಕಾರದ ವಿವಿಧ ಇಲಾಖೆಗಳ, ಎಂಪಿ, ಎಂಎಲ್ಎಗಳ ಕೈಕಾಲು ಹಿಡಿದು ಗೋಗರೆಯಬೇಕಿತ್ತೊ ಗೊತ್ತಿಲ್ಲ. ಸಣ್ಣಪುಟ್ಟ ಹಳ್ಳಿಗಳ ಗೋಳು ವಿಧಾನಸೌಧದ ಕೋಣೆಗಳನ್ನು ತಲುಪುವುದು ದೂರದ ಮಾತು. ಈ ತರಹದ ವಿಷಯಗಳಲ್ಲಿ ಹಳ್ಳಿಗಳಿಗೂ ವಿಧಾನಸೌಧದ ಒಳಗೆ ಕುಳಿತಿರುವವರಿಗೆ ಸದಾ ನೆಟ್ವರ್ಕ್ ಸಮಸ್ಯೆ!.
ನಾಡಿಗೆ ಬೆಳಕು ಕೊಟ್ಟು ತಮ್ಮ ಮನೆಮಠ ಕಳೆದುಕೊಂಡು ಶರಾವತಿ ಹಿನ್ನೀರಿನ ಸಿಂಗದೂರು ಸೇತುವೆ ಸಾಕಾರಗೊಳ್ಳಲು ಎಷ್ಟು ವರ್ಷ ಬೇಕಾಯಿತು ಎಂದು ನಾಡು ಕಂಡಿದೆ. ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಿದ್ದು 1964ರಲ್ಲಿ. ಸಿಗಂದೂರು ಸೇತುವೆ ಕಟ್ಟಲು ಶುರುಮಾಡಿದ್ದು 2019ರಲ್ಲಿ ಮತ್ತು ಲೋಕಾರ್ಪಣೆ ಆಗಿದ್ದು ಜುಲೈ 2025ರಲ್ಲಿ. ಅಣೆಕಟ್ಟು ಕಟ್ಟಿ ಬರೊಬ್ಬರಿ 61 ವರ್ಷಗಳ ನಂತರ!. ಕಟ್ಟಲು ತೆಗೆದುಕೊಂಡ ಸಮಯ ಕೂಡ 6 ವರ್ಷಗಳು!. ಮೂಲ ಯೋಜನಾ ವೆಚ್ಚ 450 ಕೋಟಿ ರೂ. ಮತ್ತು ಕೊನೆಗೆ ತಗುಲಿದ್ದು ಸುಮಾರು 472 ಕೋಟಿ. ರೂ. ಬಹುಶಃ ಇಂತಹ ಯೋಜನೆಗಳ ಎಸ್ಕಲೇಷನ್ ಕಾಸ್ಟ್ ನಲ್ಲಿ ಗೀರೀಶ್ ಸಾಕಷ್ಟು ತೂಗು ಸೇತುವೆಯನ್ನು ನಿರ್ಮಿಸಿದರು!.
1989ರಲ್ಲಿ ಕೊಡಗು ಜಿಲ್ಲೆಯ ನಿಸರ್ಗಧಾಮದಲ್ಲಿ ಅಲ್ಲಿಯ ಅರಣ್ಯ ಇಲಾಖೆಯ ರೇಂಜ್ ಫಾರೆಸ್ಟ್ ಅಧಿಕಾರಿ ಒಂದು ಸಣ್ಣ ತೂಗು ಸೇತುವೆ ನಿರ್ಮಿಸಲು ಸಾಧ್ಯವೇ ಎಂದು ಇವರನ್ನು ಸಂಪರ್ಕಿಸಿದರು. ಆದರೆ ಗಿರೀಶ್ ಅವರಿಗೆ ಆಗ ಸೇತುವೆ ನಿರ್ಮಾಣದ ಬಗೆಗೆ ಯಾವುದೇ ಅನುಭವ ಇರಲಿಲ್ಲವಂತೆ. ಆದರೂ ಅದನ್ನು ಒಂದು ಸವಾಲಾಗಿ ಸ್ವೀಕರಿಸಿ ಗಿರೀಶ್ ಗೆದ್ದರು. ಅದೇ ಮುಂದಿನ ತೂಗು ಸೇತುವೆಗಳ ನಿರ್ಮಾಣಕ್ಕೆ ನಾಂದಿ ಹಾಡಿತು. ತಮ್ಮ ಊರಿನವರು ಸುಳ್ಯಕ್ಕೆ ಅದೂ ಮಳೆಗಾಲದಲ್ಲಿ ತಲುಪಲು ಹರಸಾಹಸ ಪಡಬೇಕಿತ್ತು. ಸಂಪರ್ಕ ಕಡಿದು ಹೋಗುತ್ತಿತ್ತು. ಗರ್ಭಿಣಿಯರು, ಹುಷಾರಿಲ್ಲದವರು ಹತ್ತಿರದ ಪಟ್ಟಣಕ್ಕೆ ಹೋಗಲು ಪಡಬಾರದ ಕಷ್ಟ ಪಡುತ್ತಿದ್ದರು. ಊರಿನ ಜನರ ವಿನಂತಿಯಂತೆ ಗಿರೀಶ್ ನಲವತ್ತು ಜನರ ಉತ್ಸಾಹಿ ಯುವಕರ ತಂಡ ಕಟ್ಟಿಕೊಂಡು ಕೆಲವೇ ದಿನಗಳಲ್ಲಿ ಗಟ್ಟಿಯಾದ ತೂಗು ಸೇತುವೆ ನಿರ್ಮಿಸಿಯೇ ಬಿಟ್ಟರು. ಈ ಸೇತುವೆ 35 ವರ್ಷಗಳಾದರೂ ಗಟ್ಟಿಯಾಗಿ ನಿಂತಿದೆ. ಆಗಿನ ಅದರ ವೆಚ್ಚ ಕೇವಲ ಒಂದು ಲಕ್ಷ ರೂಪಾಯಿ. ಅವರ ಫೀಜ್ ಎಂದು ಗಿರೀಶ್ ಏನೂ ತೆಗೆದುಕೊಳ್ಳಲಿಲ್ಲ. ಇನ್ನೂ ಹಲವು ತೂಗುಸೇತುವೆ ನಿರ್ಮಾಣದ ಸಂದರ್ಭಗಳಲ್ಲಿ ಅವರೇ ತಮ್ಮ ಹಣವನ್ನು ವ್ಯಯಿಸಿದ್ದಾರಂತೆ. ಇವರು ಕಟ್ಟಿದ ಸೇತುವೆಗಳು ಮೇಲೆ ಜನರಲ್ಲದೆ ದ್ವಿಚಕ್ರ ವಾಹನಗಳೂ ಸಲೀಸಾಗಿ ತಿರುಗಾಡುತ್ತಿವೆ.
ಇವರು ಕಟ್ಟಿದ ತೂಗು ಸೇತುವೆಗಳು ನಮ್ಮ ರಾಜ್ಯದ ಎಲ್ಲೆಯನ್ನು ದಾಟಿ ಕೇರಳ, ಒಡಿಶಾ, ಆಂಧ್ರಪ್ರದೇಶಕ್ಕೂ ಹಬ್ಬಿದೆ. ದೇಶಾದ್ಯಂತ ಸುಮಾರು 160ಕ್ಕೂ ಹೆಚ್ಚು ತೂಗು ಸೇತುವೆಗಳ ನಿರ್ಮಾಣಕ್ಕೆ ಇವರು ಕಾರಣಕರ್ತರು. ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪೂಂಚ್ ವಲಯದಲ್ಲಿ ಸೇತುವೆ ನಿರ್ಮಿಸಲು ಖುದ್ದು ಭಾರತೀಯ ಸೇನೆ ಇವರ ತಾಂತ್ರಿಕ ಮಾರ್ಗದರ್ಶನ ಪಡೆದಿತ್ತು ಎಂಬುದನ್ನು ಕೇಳಿದಾಗ ಅವರ ಬುದ್ಧಿವಂತಿಕೆ, ಕಾರ್ಯಕ್ಷಮತೆ ಮತ್ತು ತೂಗುಸೇತುವೆ ನಿರ್ಮಾಣದ ಬಗೆಗಿನ ಅವರ ನೈಪುಣ್ಯತೆಯ ಅರಿವಾಗದೇ ಇರದು. ಇವರ ಸೇತುಬಂಧ ಕಾರ್ಯ ಕಾವೇರಿ, ತುಂಗೆ, ನೇತ್ರಾವತಿ ಘಟಪ್ರಭಾ ಮೊದಲಾದ ನದಿಗಳ ದಂಡೆಗಳಿಗೆ ಹಬ್ಬಿದೆ.
ಇನ್ನೊಂದು ವಿಶೇಷವೆಂದರೆ ಸಾಮಾನ್ಯ ಸೇತುಗಳಿಗಿಂತ ಕಡಿಮೆ ವೆಚ್ಚದಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಇವರು ತೂಗು ಸೇತುವೆ ನಿರ್ಮಿಸುತ್ತಿದ್ದರು. ಸೇತುವೆ ಕಟ್ಟುವ ಕೆಲಸದಲ್ಲಿ ಸ್ಥಳೀಯ ಜನರನ್ನು ಸೇರಿಸಿಕೊಳ್ಳುತ್ತಿದ್ದರು. ಹಾಗಾಗಿ ಕಾರ್ಮಿಕ ವೆಚ್ಚವೂ ಸ್ವಲ್ಪ ಕಡಿಮೆ. ಅವರಿಗೂ ತಮ್ಮ ಊರಿಗಾಗಿ ಸೇತುವೆಯಾಗುವುದರಿಂದ ಖುಷಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಕೆಲಸಗಳಲ್ಲಿ ಆಚೆ ಈಚೆಯ ಭೂಮಿಗಾಗಲಿ, ಸುತ್ತಲಿನ ಮರ ಗಿಡಗಳಿಗಾಗಲಿ ಹೆಚ್ಚಿನ ತೊಂದರೆ ಆಗದಂತೆ ಯಥಾಸ್ಥಿತಿ ಉಳಿಸಿಕೊಂಡು ಸೇತುವೆ ನಿರ್ಮಿಸಿದ್ದಾರೆ. ಕಾಂಕ್ರೀಟ್ ಸೇತುವೆಗಳಂತೆ ಸಿಕ್ಕಾಪಟ್ಟೆ ಕಾಂಕ್ರೀಟ್ ಮುಂತಾದ ಕಸಗಳನ್ನು ನದಿಯಲ್ಲಿ ಚೆಲ್ಲುವ ಪ್ರಮೇಯ ತೂಗುಸೇತುವೆ ನಿರ್ಮಾಣದಲ್ಲಿ ಕಡಿಮೆ. ಇವರು ಕಟ್ಟಿದ್ದು ಕಡಿಮೆ ವೆಚ್ಚದ ಪರಿಸರ ಸ್ನೇಹಿ, ಆದರೆ ಸಾಕಷ್ಟು ಗಟ್ಟಿಮುಟ್ಟಾದ ಸೇತುವೆಗಳು. ಸರ್ಕಾರ ಯಾವಾಗಲೂ ಕಡಿಮೆ ಜನಸಂಖ್ಯೆಯುಳ್ಳ ಹಳ್ಳಿಗಳಿಗೆ ಇಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಮನಸ್ಸು ಮಾಡುವುದಿಲ್ಲ. ಏಕೆಂದರೆ ಯಾವುದೇ ರಾಜಕೀಯ ಪಕ್ಷವಾಗಲಿ, ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಒಂದು ಪ್ರದೇಶದ ಮತದ ಸಂಖ್ಯೆ ಹೆಚ್ಚಿಲ್ಲದಿದ್ದರೆ ಅಥವಾ ಕಾಂಚಾಣದ ಸದ್ದು ಜೋರಾಗಿ ಕೇಳಿಸದಿದ್ದರೆ ಅಲ್ಲಿನ ಯೋಜನೆಗಳಿಗೆ ಆಸಕ್ತಿ ವಹಿಸುವುದು ಕಡಿಮೆ. ತಾಂತ್ರಿಕವೋ, ಆರ್ಥಿಕವೋ ಮತ್ತೊಂದೋ ಎಂದು ನೂರಾರು ಕಾರಣ ಕೊಟ್ಟು ಯೋಜನೆ ಕಾರ್ಯಗತವಾಗದಂತೆ ನೋಡಿಕೊಳ್ಳುವ ಕುಶಲತೆ ತೋರುತ್ತಾರೆ.
ಇಂತಹ ಗ್ರಾಮೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಗಿರೀಶ್ ಭಾರದ್ವಾಜ್ ಅವರನ್ನು ‘ಪದ್ಮಶ್ರೀ’ ಪ್ರಶಸ್ತಿ ಅರಸಿಬಂತು. ಇಂತಹ ಪ್ರಶಸ್ತಿಗಳಿಗೆ ದೇಶದ ಮೂಲೆಮೂಲೆಗಳಿಂದ ಶೋಧಿಸಿ ಅರ್ಹರನ್ನು ಗುರುತಿಸುವ ಈಗಿನ ಕೇಂದ್ರ ಸರ್ಕಾರ ಸ್ವಲ್ಪ ತಡವಾಗಿಯಾದರೂ ಇವರನ್ನು ಗುರತಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಪ್ರಶಸ್ತಿ ಪತ್ರದಲ್ಲಿ ಗಿರೀಶ್ ಮತ್ತು ಅವರ ಕಾರ್ಯವನ್ನು ಹೀಗೆ ಪ್ರಶಂಸಿಲಾಗಿದೆ:
“ಅವರು ಕೆಲಸ ಮಾಡುವ ರೀತಿಯಿಂದಾಗಿ ಕೈಗೊಂಡ ಕೆಲಸ ಕೊನೆಗೊಂಡಾಗ ಅವರ, ತಂಡದ ಮತ್ತು ಫಲಾನುಭವಿಗಳ ಮುಖದಲ್ಲಿ ಮಂದಹಾಸ ತಂದಿದೆ. ಅವರ ಯಶಸ್ಸನ್ನು ಅವರ ಸರಳತೆಯಲ್ಲಿ ಮತ್ತು ಕೆಲಸಗಾರರೊಂದಿಗೆ ಬೆರೆತು ಕೆಲಸ ಮಾಡಿದ ರೀತಿಯಲ್ಲಿ ಕಾಣಬಹುದು. ಪ್ರಾಜೆಕ್ಟ್ ಮುಗಿಯುವವರೆಗೆ ತಿಂಗಳಾನುಗಟ್ಟಲೆ ಟೆಂಟಿನಲ್ಲೇ ಮಲಗಿ, ಅಲ್ಲಿಯೇ ಊಟ, ತಿಂಡಿ ಮಾಡಿದ್ದು ಅವರ ಕೆಲಸದ ಬದ್ಧತೆಗೆ ಸಾಕ್ಷಿ. ಇಂತಹ ಬಹಳಷ್ಟು ಪ್ರದೇಶಗಳು ನಾಗರಿಕರ ಸಂಪರ್ಕಕ್ಕೆ ಮತ್ತು ಮೊಬೈಲ್ ಸಿಗ್ನಲ್ ಸಿಗದ ಪ್ರದೇಶಗಳಾಗಿದ್ದವು. ಅಲ್ಲಿ ಅವರಿಗೆ ಪ್ರಾಕೃತಿಕ, ಕಾಡು ಪ್ರಾಣಿಗಳಿಂದ ಮತ್ತು ಮಾವೋವಾದಿಗಳಿಂದಲೂ ಅಪಾಯಗಳಿದ್ದವು”.
ಬಿಹಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೇತುವೆ ಕಟ್ಟಿದ ಒಂದೆರಡು ವರ್ಷಗಳಲ್ಲಿ, ಕೆಲವಂತೂ ಲೋಕಾರ್ಪಣೆಗೂ ಮೊದಲೇ ಕುಸಿತವಾಗಿದ್ದನ್ನು ಕಾಣಬಹುದು. ಬಾಗಲ್ಪುರ ಸೇತುವೆ, ಬೇಗುಸರಾಯ್ ಸೇತುವೆ, ಪೂರ್ಣಿಯಾ ಸೇತುವೆ, ಅರೇಬಿಯಾ ಸೇತುವೆಗಳು ಕುಸಿದಿದ್ದು ಕಳಪೆ ಸಾಮಗ್ರಿ, ವಸ್ತುಗಳ ಬಳಕೆ, ವ್ಯಾಪಕ ಭ್ರಷ್ಟಾಚಾರದಿಂದಾಗಿ ಎಂಬುದು ನಿರ್ವಿವಾದ. ಇವುಗಳ ಯೋಜನಾ ವೆಚ್ಚವು ನೂರಾರು ಕೋಟಿ. ಸೇತುವೆ ಕಟ್ಟಿದವರೂ ದೊಡ್ಡದೊಡ್ಡ ಹೆಸರಾಂತ ಕಂಪನಿಗಳೇ. ಇದೆಲ್ಲಾ ನೋಡಿದಾಗ ಗಿರೀಶ್ ಕಟ್ಟಿದ ಕಡಿಮೆ ವೆಚ್ಚದ ತಾಂತ್ರಿಕವಾಗಿ ದೋಷರಹಿತವಾದ ತೂಗು ಸೇತುವೆಗಳು ಬಹು ಎತ್ತರದ ಸ್ಥಾನದಲ್ಲಿ ನಿಲ್ಲುತ್ತವೆ. ಹಾಗೆಯೇ ಗಿರೀಶ್ ಕೂಡ ಅವರು ಮಾಡಿದ ಒಳ್ಳೆಯ ಕೆಲಸಗಳಿಂದಾಗಿ ಜನಮಾನಸದಲ್ಲಿ ನೆನಪಾಗಿ ಉಳಿಯುತ್ತಾರೆ.
ಗಿರೀಶ್ ಅವರನ್ನು ನಾಡು ಕಳೆದುಕೊಂಡರೂ ಸಿವಿಲ್ ಇಂಜಿನಿಯರ್ ಆಗಿರುವ ಅವರ ಮಗ ಪತಂಜಲಿ ಭಾರದ್ವಾಜ್ ತಂದೆಯ ಹಾದಿಯಲ್ಲಿ ಮುಂದುವರಿದಿದ್ದಾರಂತೆ. ಅವರೂ ತಂದೆಯ ಹಾಗೆ ನಾಡಿಗೆ ಉತ್ತಮ ಕೊಡುಗೆಯಾಗುವ ನಿರೀಕ್ಷೆಯಿದೆ.
