ಗೀತನಮನ
- ಎನ್.ಎಸ್. ಶ್ರೀಧರ ಮೂರ್ತಿ, ಹಿರಿಯ ಸಿನೆಮಾ ಪತ್ರಕರ್ತ
‘ಮೈಸೂರು ಮಲ್ಲಿಗೆ’ ಚಿತ್ರದ ಗೀತೆಗಳ ಧ್ವನಿಮುದ್ರಣ ಅರವಿಂದ್ ಸ್ಟುಡಿಯೋದಲ್ಲಿ, ಎರಡನೆಯ ಮಹಡಿಯಲ್ಲಿ ರೆಕಾರ್ಡಿಂಗ್ ಲಿಫ್ಟ್ ಇಲ್ಲ ಎಂದ ಕೂಡಲೇ ಜಾನಕಿ ಪತಿ ರಾಮಪ್ರಸಾದ್ ಕಿಡಿ ಕಿಡಿಯಾದರು. ಹಾಡುವುದು ಸಾಧ್ಯವೇ ಇಲ್ಲ ಎಂದರು. ಸಿ. ಅಶ್ವತ್ಥ್ ಉಪಾಯದಿಂದ ಕರೆದುಕೊಂಡು ಹೋಗಿ ಹಾಡಿಸಿದರು. ‘ದೀಪವು ನಿನ್ನದೆ, ಗಾಳಿಯೂ ನಿನ್ನದೆʼ, ಜಾನಕಿ ಅವರು ಹಾಡಿದ ಹಾಡು. ನಾನು ಅವರನ್ನು ನೋಡಿದ್ದು ಅದೇ ಮೊದಲು. ಅಲ್ಲಿಂದ ಮುಂದೆ ಮೂವತ್ತು ವರ್ಷಗಳ ಸಂಪರ್ಕ. ಹತ್ತು ದಿನಗಳ ಹಿಂದೆ ಮಾತನಾಡಿದಾಗ ಏಕೋ ಈ ಘಟನೆ ನೆನಪು ಮಾಡಿಕೊಂಡಿದ್ದರು. ಧರ್ಮಸ್ಥಳ, ಉಡುಪಿ, ಕೊಲ್ಲೂರಿಗೆ ಹೋಗಿ ಬರುತ್ತೇನೆ ಎಂದರು. ಅದೇ ಕೊನೆಯ ಮಾತುಕತೆ ಆದೀತು ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ. ಈ ಕ್ಷಣ ಎನ್ನಿಸುವುದು ಜಾನಕಿ – ರಾಮಪ್ರಸಾದ್ ಎಂತಹ ಜೋಡಿ. ಜಾನಕಿ ಇಷ್ಟು ಎತ್ತರಕ್ಕೆ ಏರಲು ರಾಮ ಪ್ರಸಾದ್ ನೀಡಿದ ಕೊಡುಗೆ ಎಷ್ಟೊಂದು ಅಪಾರ…ಅವರು ಹೋದ ಮೇಲೆ ಜಾನಕಿ ಶ್ವೇತ ವಸ್ತ್ರಧಾರಿಣಿ ಆಗಿ ಬಿಟ್ಟರು. ಅಲೌಕಿಕದ ಹಾದಿಯಲ್ಲಿ ಸಾಗಿದರು. ಕಳೆದ ಹತ್ತು ವರ್ಷವಂತೂ ಅವರು ಅಲೌಕಿಕದಲ್ಲಿಯೇ ಇದ್ದರು.
ಎಸ್. ಜಾನಕಿ ಕನ್ನಡದಲ್ಲಿ ಮೊದಲು ಧ್ವನಿಮುದ್ರಿಸಿದ ಗೀತೆ ‘ಶ್ರೀಕೃಷ್ಣಗಾರುಡಿ’ ಚಿತ್ರಕ್ಕೆ ‘ಭಲೇ ಭಲೇ ಗಾರಡಿ’ ಆದರೆ ಮೊದಲು ಬಿಡುಗಡೆ ಕಂಡಿದ್ದು ‘ರಾಯರ ಸೊಸೆ’ ಚಿತ್ರದ ‘ತಾಳಲೆಂತು ಶೋಕವೇಗ’. ವಿಶೇಷವೆಂದರೆ ಎಲ್ಲಾ ಭಾಷೆಗಳಲ್ಲಿಯೂ ಶೋಕಗೀತೆಗಳಿಂದಲೇ ಅವರ ಗಾನಯಾನ ಆರಂಭವಾದರೂ ಅವರು ರಸಿಕರನ್ನು ಸಂತೋಷದ ಅಲೆಗಳಲ್ಲಿಯೇ ಕರೆದುಕೊಂಡು ಹೋದರು. ಜಾನಕಿ ತಮ್ಮ ವೃತ್ತಿ ಜೀವನದ ಆರಂಭದಲ್ಲಿಯೇ ‘ಯಾವ ಜನ್ಮದ ಮೈತ್ರಿ’, ‘ದೋಣಿ ಸಾಗಲಿ ಮುಂದೆ ಹೋಗಲಿ’, ‘ಯುಗ ಯುಗಾದಿ ಕಳೆದರೂ’ ಅಂತಹ ಕವಿಗೀತೆಗಳನ್ನು ಭಾವಪೂರ್ಣವಾಗಿ ಹಾಡಿದ್ದರು. ಅವರು ಯಾವ ಭಾಷೆಯಲ್ಲಿಯೇ ಹಾಡಲಿ ಅರ್ಥ ತಿಳಿದು ಸನ್ನಿವೇಶವನ್ನು ಅರಿತು ಹಾಡುತ್ತಿದ್ದರು. ಮಲೆಯಾಳಂನಲ್ಲಿ ಸಲೀಲ್ ಚೌಧರಿಯವರ ಸಂಗೀತ ಸಂಯೋಜನೆಯಲ್ಲಿ ಅರ್ಥ ಬದಲಾಗಿದ್ದ ಸರಿ ಪಡಿಸಿದ್ದ ಘಟನೆಯನ್ನು ಅವರೇ ನೆನಪು ಮಾಡಿಕೊಳ್ಳುತ್ತಿದ್ದರು. ಒಂಬತ್ತು ವರ್ಷದ ಮಗುವಿನಿಂದ ಹಿಡಿದು ತೊಂಬತ್ತು ವರುಷದವರವರೆಗೂ ಒಗ್ಗುವಂತೆ ಹಾಡುವುದು ಜಾನಕಿಯವರಿಗೆ ಮಾತ್ರ ಒಲಿದು ಬಂದಂತಹ ಕಲೆ.
‘ಹೇಮಾವತಿ’ ಚಿತ್ರದಲ್ಲಿ ಹಾಡಿದ ‘ಶಿವ ಶಿವ ಎನ್ನದ ನಾಲಿಗೆ ಏಕೆ’ ಅವರಿಗೆ ಬಹಳ ಚಾಲೆಂಜಿಂಗ್ ಎನ್ನಿಸಿತ್ತಂತೆ, ಅದು ತೋಡಿ – ಅಭೋಗಿ ರಾಗಗಳ ಕಾಂಬಿನೇಷನ್. ಎಲ್. ವೈದ್ಯನಾಥನ್ ಸಂಗೀತ ನಿರ್ದೇಶಕರು. “ಅಮ್ಮ ನೀವು ಹಾಡುತ್ತೀರಿ ಎಂದೇ ಸಂಯೋಜನೆ ಮಾಡಿದ್ದೇನೆ” ಎಂದು ಒತ್ತಾಯಿಸಿದಾಗ ತ್ಯಾಗರಾಜರನ್ನು ಮತ್ತು ರಾಘವೇಂದ್ರ ಸ್ವಾಮಿಗಳನ್ನು ನೆನಪು ಮಾಡಿಕೊಂಡರಂತೆ. ಅವರಿಬ್ಬರೇ ಈ ಹಾಡನ್ನು ನನ್ನಿಂದ ಹಾಡಿಸಿದ್ದಾರೆ ಎಂದು ಜಾನಕಿ ಸದಾ ಹೇಳುತ್ತಿದ್ದರು. ಬಿಸ್ಮಿಲ್ಲ ಖಾನ್ ಅವರ ಶೆಹನಾಯಿಗೆ ಸರಿಸಮನಾಗಿ ಹಾಡಿದ ‘ಕರೆದರೂ ಕೇಳದೆ’ ಅವರಿಗೆ ಪ್ರಿಯವಾದ ಇನ್ನೊಂದು ಗೀತೆ. ಜಿ.ಕೆ. ವೆಂಕಟೇಶ್ ಸದಾ ಅದನ್ನು ಅದ್ಭುತ ಎಂದು ಕರೆಯುತ್ತಿದ್ದರು.
ಬಹುಷ: ನಾವು ಜಾನಕಿಯವರನ್ನು ನೆನಪಿಟ್ಟುಕೊಳ್ಳಬೇಕಾಗಿದ್ದು ಅವರ ಹೋರಾಟದ ಮನೋಭಾವಕ್ಕೆ. ಕನ್ನಡ ರಾಜ್ಯ ಪ್ರಶಸ್ತಿಗಳಲ್ಲಿ ಹಿನ್ನೆಲೆ ಗಾಯಕ ಗಾಯಕಿಯರಿಗೆ ಪ್ರಶಸ್ತಿಗಳನ್ನು ಕೊಡುತ್ತಿರಲಿಲ್ಲ. ಇದನ್ನು ವಿರೋಧಿಸಿ ಜಾನಕಿ ಕನ್ನಡದಲ್ಲಿ ಹಾಡುವುದನ್ನು ನಿಲ್ಲಿಸಿದರು. ಸರಿ ಸುಮಾರು ಆರು ವರ್ಷಗಳ ಅವರ ಹೋರಾಟದ ಫಲವಾಗಿ ರಾಜ್ಯ ಪ್ರಶಸ್ತಿಗಳನ್ನು ನೀಡಲು ಆರಂಭಿಸಲಾಯಿತು. (ಜಾನಕಿಯವರಿಗೆ ಅದು ಕೊನೆಗೂ ಸಿಕ್ಕಲಿಲ್ಲ ಎನ್ನುವುದು ಮಾತ್ರ ವಿಪರ್ಯಾಸಕರ ಸಂಗತಿ). ಅವರಿಗೆ ಪದ್ಮಭೂಷಣ ಬಂದಾಗ ದಕ್ಷಿಣ ಭಾರತೀಯರಿಗೆ ಪ್ರಶಸ್ತಿಗಳಲ್ಲಿ ತಾರತಮ್ಯವಾಗುತ್ತಿದೆ ಎಂದು ನಿರಾಕರಿಸಿದರು. ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತರ ಪಟ್ಟಿ ನೋಡಿದರೆ ಜಾನಕಿಯವರ ಹೋರಾಟದಲ್ಲಿ ಎಷ್ಟು ಅರ್ಥವಿದೆ ಎನ್ನುವುದು ಗೊತ್ತಾಗುತ್ತದೆ. ಅವರು ಗುಣಮಟ್ಟದ ವಿಷಯದಲ್ಲಿ ಎಂದಿಗೂ ರಾಜಿ ಮಾಡಕೊಳ್ಳಲಿಲ್ಲ.
ಅವರು ಹಾಡಲು ಆರಂಭಿಸಿ ಐವತ್ತನೇ ವರ್ಷಕ್ಕೆ ಅವರ ಕುರಿತು ‘ಮಲ್ಲಿಗೆ’ ವಿಶೇಷಾಂಕ ಮಾಡಿದೆ. ಆತ್ಮೀಯರಿಂದ ಲೇಖನಗಳನ್ನು ಬರೆಸಿದೆ. ಅವರ ಸುದೀರ್ಘ ಸಂದರ್ಶನ ಮಾಡಿದೆ. ಜಾನಕಿಯವರಿಗೆ ಸಂಚಿಕೆ ತಲುಪಿಸಬೇಕು. ಒಂದು ರೀತಿಯಲ್ಲಿ ಆತಂಕ, ಭಯ ಕಾಡಿತು. ನಾನು ಭಯಪಟ್ಟಂತೆ ಆಗಲಿಲ್ಲ. ಜಾನಕಿಯವರು ಸಂಚಿಕೆಯನ್ನು ಇಷ್ಟಪಟ್ಟರು… ಪ್ರತಿ ಪುಟವನ್ನೂ ನೋಡಿದರು. ಕಣ್ಣಿಗೊತ್ತಿಕೊಂಡರು. ಕೊನೆಗೆ ನುಡಿದಿದ್ದು ಒಂದೇ ಮಾತು “ಇದನ್ನು ನೋಡಲು ಅವರಿರಬೇಕಿತ್ತು” (ನೆನಪು ಮಾಡಿಕೊಂಡಿದ್ದು ಅವರ ಪತಿ ರಾಮಪ್ರಸಾದ್ ಅವರನ್ನು).
ಸುಖದೊಳಗೆ ನಿಮ್ಮನು ನೆನದರು ತಾಯಿ ಗುಣವಂತೆ
ಸೆರಗಿನಲಿ ಕಣ್ಣೀರನೊರಸಿ…
