- ಸೋಮೇಶ್ವರ ಆರ್. ಗುರುಮಠ, ಸಂಶೋಧನಾ ವಿದ್ಯಾರ್ಥಿ, ಮಣಿಪಾಲ
“ಇತಿಹಾಸವನ್ನು ಕಳೆದುಕೊಂಡ ಜನಾಂಗಕ್ಕೆ ಭವಿಷ್ಯವಿರುವುದಿಲ್ಲ”. ಈ ಮಾತು ಕೇವಲ ಪುಸ್ತಕದ ಸಾಲುಗಳಲ್ಲ, ಬದಲಿಗೆ ಒಂದು ನಾಗರಿಕತೆಯ ಅಸ್ತಿತ್ವಕ್ಕೂ ಅಷ್ಟೇ ಪ್ರಮಾಣದಲ್ಲಿ ಅನ್ವಯಿಸುತ್ತದೆ. ಭಾರತೀಯ ಸಾಂಸ್ಕೃತಿಕತೆಯಲ್ಲಿ ಒಂದು ಕಲಾಕೃತಿ ಅಥವಾ ವಿಗ್ರಹ ಎನ್ನುವುದು ಕೇವಲ ಕಲ್ಲು, ಮಣ್ಣು ಅಥವಾ ಲೋಹದ ಆಕೃತಿಯಲ್ಲ; ಅದು ನಮ್ಮ ಪೂರ್ವಜರ ಅಖಂಡ ಶ್ರದ್ಧೆ, ಆಧ್ಯಾತ್ಮಿಕ ಪ್ರಜ್ಞೆ ಮತ್ತು ಇತಿಹಾಸದ ಜೀವಂತ ಸಾಕ್ಷಿ. ಶತಮಾನಗಳ ಕಾಲ ನಮ್ಮ ಮಾತೃಭೂಮಿಗೆ ವಲಸೆಯ ನೆಪದಲ್ಲಿ ಆಗಮಿಸಿದವರ ಕ್ರೌರ್ಯಕ್ಕೆ ಮತ್ತು ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರ ದುರಾಸೆಗೆ ಬಲಿಯಾಗಿ, ಕತ್ತಲ ಕೋಣೆಗಳಲ್ಲಿ ಅನಾಥವಾಗಿದ್ದ ನಮ್ಮ ಸಾಂಸ್ಕೃತಿಕ ಆಸ್ತಿಗಳು ಇಂದು ಮತ್ತೆ ಹೆತ್ತತಾಯಿಯಾದ ಭಾರತಿಯ ಮಡಿಲಿಗೆ ಮರಳುತ್ತಿವೆ. ಇತ್ತೀಚೆಗೆ ಆಸ್ಟ್ರೇಲಿಯಾದಿಂದ ಮರಳಿದ ಚೋಳರ ಕಾಲದ ಭದ್ರಕಾಳಿ ತ್ರಿಶೂಲ, ನಂದಿ ಮತ್ತು ಕಾರ್ತಿಕೇಯನ ಅಪೂರ್ವ ವಿಗ್ರಹಗಳು ಈ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವತ್ತ ಇಡಬಲ್ಲ ಪ್ರಥಮ ಹೆಜ್ಜೆಯಾಗಿದೆ. ಇದು ಕೇವಲ ಕಲಾಕೃತಿಗಳ ಭೌತಿಕ ಆಗಮನವಲ್ಲ, ಬದಲಿಗೆ ಶತಮಾನಗಳಿಂದ ಅಪಹರಿಸಲ್ಪಟ್ಟಿದ್ದ ಭಾರತದ ಸಾಂಸ್ಕೃತಿಕತೆಯೆಂಬ ಆತ್ಮಕ್ಕೆ ಮರಳಿ ತನ್ನ ಶರೀರವನ್ನು ನೀಡಬಲ್ಲಂತಹ ಪ್ರಕ್ರಿಯೆ.
ಕಳೆದುಹೋದ ಅಸ್ಮಿತೆ
ಭಾರತದ ಕಲಾಕೃತಿಗಳ ಹಾಗೂ ವೈಭವಯುತ ಜ್ಞಾನಸಂಪತ್ತಿನ ಲೂಟಿಗೆ ಸಾವಿರ ವರ್ಷಗಳ ಸುದೀರ್ಘ ಹಾಗೂ ಅತ್ಯಂತ ಕರಾಳ ಇತಿಹಾಸವಿದೆ. ಜಗತ್ತಿಗೆ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬೆಳಕನ್ನು ನೀಡಿದ ಈ ಪುಣ್ಯಭೂಮಿ, ತನ್ನದೇ ಆದ ಅಪೂರ್ವ ಶಿಲ್ಪಕಲೆ ಹಾಗೂ ಕಲಾಪರಂಪರೆಯನ್ನು ಹೊಂದಿತ್ತು. ಆದರೆ, ಮಧ್ಯಕಾಲೀನ ಯುಗದಲ್ಲಿ ಭಾರತದ ಮೇಲೆ ನಿರಂತರವಾಗಿ ದಾಳಿಮಾಡಿದ ವಿದೇಶಿ ಸುಲ್ತಾನರು ಮತ್ತು ಮೊಘಲರು ಕೇವಲ ಇಲ್ಲಿನ ಭೌತಿಕ ಸಂಪತ್ತನ್ನು ಮಾತ್ರ ಕೊಳ್ಳೆ ಹೊಡೆಯಲಿಲ್ಲ. ಬದಲಿಗೆ, ಭಾರತೀಯರ ಅಸ್ಮಿತೆಯಾಗಿದ್ದ ಭವ್ಯ ದೇವಾಲಯಗಳನ್ನು ಧ್ವಂಸಗೊಳಿಸಿದರು. ಶತಮಾನಗಳ ಕಾಲ ಬೆಳೆದು ಬಂದಿದ್ದ ಕಲಾ ಸಂಪ್ರದಾಯಗಳನ್ನು ಮತ್ತು ಪವಿತ್ರ ವಿಗ್ರಹಗಳನ್ನು ನಾಶಪಡಿಸಿದರು. ಇವೆಲ್ಲವುಗಳ ಜೊತೆಗೆ ಕೊಳ್ಳೆಹೊಡೆದ ಅಪಾರ ಸಂಪತ್ತನ್ನು ತಮ್ಮ ವಿಜಯದ ಸಂಕೇತವಾಗಿ ತಮ್ಮ ದೇಶಗಳಿಗೆ ಕೊಂಡೊಯ್ದರು. ಇದು ಭಾರತೀಯ ಸಾಂಸ್ಕೃತಿಕ ಚೈತನ್ಯಕ್ಕೆ ಬಿದ್ದ ಮೊದಲ ದೊಡ್ಡ ಹೊಡೆತವಾಗಿತ್ತು. ಇದಾದ ನಂತರ ಬಂದ ಬ್ರಿಟಿಷ್ ಮತ್ತು ಯುರೋಪಿಯನ್ ವಸಾಹತುಶಾಹಿಯ ಆಡಳಿತದ ಅವಧಿಯಲ್ಲಿ ಈ ಲೂಟಿ ಮತ್ತಷ್ಟು ವ್ಯವಸ್ಥಿತ ರೂಪವನ್ನು ಪಡೆದುಕೊಂಡಿತು. ಬ್ರಿಟಿಷರು ಭಾರತದ ಕಲಾಸಂಪತ್ತನ್ನು ಕೇವಲ ಧಾರ್ಮಿಕ ದ್ವೇಷದಿಂದ ನೋಡದೆ, ಒಂದು ವಾಣಿಜ್ಯ ಸರಕನ್ನಾಗಿ ಕಂಡರು. ತಮ್ಮ ಸಾಮ್ರಾಜ್ಯದ ಗೌರವಕ್ಕೆ ಇಂಬುನೀಡುವ ಪ್ರದರ್ಶನ ವಸ್ತುವನ್ನಾಗಿ ಬಳಸಿಕೊಂಡರು. ಜಗತ್ಪ್ರಸಿದ್ಧ ‘ಕೊಹಿನೂರ್’ ವಜ್ರದಿಂದ ಹಿಡಿದು ಅಮರಾವತಿಯ ಅದ್ಭುತ ಅಮೃತಶಿಲೆಯ ಶಿಲ್ಪಗಳವರೆಗೆ ಲಕ್ಷಾಂತರ ಅಮೂಲ್ಯ ಕಲಾಕೃತಿಗಳನ್ನು ಹಡಗುಗಳ ಮೂಲಕ ಲಂಡನ್ ಮತ್ತು ಯುರೋಪಿನ ಪ್ರಮುಖ ಮ್ಯೂಸಿಯಂಗಳಿಗೆ ಸಾಗಿಸಲಾಯಿತು. ನಮ್ಮ ಪೂರ್ವಜರ ಕಲಾನೈಪುಣ್ಯವು ಪಾಶ್ಚಿಮಾತ್ಯರ ವಸ್ತುಸಂಗ್ರಹಾಲಯಗಳ ಗಾಜಿನ ಪೆಟ್ಟಿಗೆಗಳಲ್ಲಿ ಕೇವಲ ಪ್ರದರ್ಶನದ ವಸ್ತುಗಳಾದವು.
ದುರಂತವೆಂದರೆ, ಈ ಸಾಂಸ್ಕೃತಿಕ ದೌರ್ಜನ್ಯವು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ನಿಲ್ಲಲಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವ್ಯವಸ್ಥಿತ ಕಳ್ಳಸಾಗಣೆ ಜಾಲಗಳು ತಲೆಯೆತ್ತಿದವು. ಸುಭಾಷ್ ಕಪೂರ್ನಂತಹ ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರ ವಕ್ರದೃಷ್ಟಿ ಭಾರತದ ಗ್ರಾಮೀಣ ಭಾಗದ, ರಕ್ಷಣೆಯಿಲ್ಲದ ಪ್ರಾಚೀನ ದೇವಾಲಯಗಳ ಮೇಲೆ ಬಿದ್ದಿತು. ಇದರ ಪರಿಣಾಮವಾಗಿ ನಮ್ಮ ಪವಿತ್ರ ದೇವತಾ ವಿಗ್ರಹಗಳನ್ನು ಕಟುವಾಗಿ ಕಡಿದು, ಕದ್ದು, ಪಾಶ್ಚಿಮಾತ್ಯ ದೇಶಗಳ ಕಲಾ ಮಾರುಕಟ್ಟೆಗೆ ಕೋಟಿಗಟ್ಟಲೆ ಹಣಕ್ಕೆ ಮಾರುವ ವ್ಯವಸ್ಥಿತ ಜಾಲ ನಿರ್ಮಾಣವಾಯಿತು. ಹೀಗೆ ಶತಮಾನಗಳ ಕಾಲ ನಡೆದ ನಿರಂತರ ಧ್ವಂಸ ಮತ್ತು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲೂ ಜರುಗಿದ ಕಳ್ಳತನವು ಕೇವಲ ಕಲಾಕೃತಿಗಳ ನಷ್ಟಕ್ಕೆ ಕಾರಣವಾಗಲಿಲ್ಲ, ಬದಲಿಗೆ ಇವೆಲ್ಲವೂ ಭಾರತೀಯ ನಾಗರಿಕತೆಯ ಆತ್ಮ ಮತ್ತು ಇತಿಹಾಸದ ಜೀವಂತ ಸಾಕ್ಷ್ಯಗಳನ್ನೇ ಅಳಿಸಿಹಾಕುವ ಕ್ರೂರ ಪ್ರಯತ್ನಗಳಾಗಿದ್ದವು.
ಮತ್ತೆ ಭರತಖಂಡಕ್ಕೆ ಮರಳುತ್ತಿರುವ ಕಲಾಕೃತಿಗಳು
ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ರಾಜತಾಂತ್ರಿಕ ರಂಗದಲ್ಲಿ ಸಾಂಸ್ಕೃತಿಕ ರಾಜತಾಂತ್ರಿಕತೆ ಎನ್ನುವುದು ಕೇವಲ ಮಾತುಕತೆಯ ವಿಷಯವಾಗಿ ಉಳಿದಿಲ್ಲ. ಬದಲಿಗೆ ಇದೊಂದು ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸುತ್ತಿರುವ ವಿನೂತನ ಪ್ರಕ್ರಿಯೆಯಾಗಿದೆ. ಒಂದು ಕಾಲದಲ್ಲಿ ವಸಾಹತುಶಾಹಿ ಆಕ್ರಮಣ ಹಾಗೂ ಅಕ್ರಮ ಕಳ್ಳಸಾಗಣೆಯ ಮೂಲಕ ಭಾರತದಿಂದ ಪರಭಾರೆಯಾಗಿದ್ದ ಅಮೂಲ್ಯ ದೇವತಾ ವಿಗ್ರಹಗಳನ್ನು ಮತ್ತು ಐತಿಹಾಸಿಕ ಶಾಸನಗಳನ್ನು ಇಂದು ವಿಶ್ವದ ಪ್ರಮುಖ ರಾಷ್ಟ್ರಗಳು ಅತ್ಯಂತ ಗೌರವಪೂರ್ವಕವಾಗಿ ಹೆತ್ತತಾಯಿಯ ಮಡಿಲಿಗೆ ಮರಳಿ ಒಪ್ಪಿಸುತ್ತಿವೆ. ಈ ರಾಜತಾಂತ್ರಿಕ ಪ್ರಕ್ರಿಯೆ ಕೇವಲ ಒಂದು ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಉದಾಹರಣೆಗೆ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯು ಇದಕ್ಕೆ ಅತ್ಯಂತ ಬಲವಾದ ಮತ್ತು ಹೃದಯಸ್ಪರ್ಶಿ ಆಧಾರವನ್ನು ಒದಗಿಸಿದಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಸ್ಟ್ರೇಲಿಯಾ ಭೇಟಿಯ ಸಂದರ್ಭದಲ್ಲಿ, ಅಲ್ಲಿನ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ತಮಿಳುನಾಡಿನ ಚೋಳರ ಕಾಲದ ದೇವಸ್ಥಾನಗಳಿಗೆ ಸೇರಿದ 11 ಮತ್ತು 12ನೇ ಶತಮಾನದ ಮೂರು ಅಪೂರ್ವ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದ್ದಾರೆ. ಇವುಗಳಲ್ಲಿ ತಿರುವಾರೂರಿನ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನದಿಂದ ಕಳ್ಳತನವಾಗಿದ್ದ ಭದ್ರಕಾಳಿ ದೇವಿಯ ಪವಿತ್ರ ಕಂಚಿನ ತ್ರಿಶೂಲ ಮತ್ತು ಭವ್ಯ ಗ್ರಾನೈಟ್ನ ನಂದಿ ವಿಗ್ರಹ ಹಾಗೂ ತಂಜಾವೂರಿನ ನಾಗನಾಥಸ್ವಾಮಿ ದೇವಸ್ಥಾನಕ್ಕೆ ಸೇರಿದ ಷಣ್ಮುಖ ಕಾರ್ತಿಕೇಯನ (ಮುರುಗನ್) ಶಿಲ್ಪ ಸೇರಿವೆ. ಆಸಕ್ತಿಕರ ವಿಷಯವೇನೆಂದರೆ, ಈ ಸಾಂಸ್ಕೃತಿಕ ವಿನಿಮಯವು ಪರಸ್ಪರ ಗೌರವದ ಆಧಾರದ ಮೇಲೆ ನಡೆದಿದೆ. ಇದಕ್ಕೆ ಪ್ರತಿಯಾಗಿ ಭಾರತವು 1935ರಿಂದ ಚೆನ್ನೈ ಮ್ಯೂಸಿಯಂನಲ್ಲಿದ್ದ ಆಸ್ಟ್ರೇಲಿಯಾದ ಮೂಲ ನಿವಾಸಿಗಳ ಅಂದರೆ ಅವರ ಪೂರ್ವಜರ ಪವಿತ್ರ ದೇಹದ ಅವಶೇಷಗಳನ್ನು ಅತ್ಯಂತ ಗೌರವಯುತವಾಗಿ ಮರಳಿ ನೀಡಿದೆ.
ಇಂತಹ ಉತ್ತಮ ಕಾರ್ಯದಲ್ಲಿ ಕೇವಲ ಆಸ್ಟ್ರೇಲಿಯಾ ಮಾತ್ರವಲ್ಲದೆ, ಈ ರೀತಿಯ ಪ್ರಕ್ರಿಯೆಗಳ ಮರುಸ್ಥಾಪನೆಯ ಚಟುವಟಿಕೆಯಲ್ಲಿ ಅಮೆರಿಕ ಕೂಡ ಅತಿದೊಡ್ಡ ಪಾತ್ರವಹಿಸಿದೆ. ನ್ಯೂಯಾರ್ಕ್ನ ಮ್ಯಾನ್ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿ ಮತ್ತು ಹೋಮ್ಲ್ಯಾಂಡ್ ಸೆಕ್ಯೂರಿಟಿ ಇನ್ವೆಸ್ಟಿಗೇಷನ್ ಜಂಟಿಯಾಗಿ ನಡೆಸಿದ ತನಿಖೆಗಳ ಫಲವಾಗಿ, ಸುಭಾಷ್ ಕಪೂರ್ ಮತ್ತು ನ್ಯಾನ್ಸಿ ವೀನರ್ನಂತಹ ಕುಖ್ಯಾತ ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರ ಜಾಲಗಳಿಂದ ವಶಪಡಿಸಿಕೊಳ್ಳಲಾದ 657 ಕಲಾಕೃತಿಗಳನ್ನು ಅಮೆರಿಕವು ಭಾರತಕ್ಕೆ ಇತ್ತೀಚೆಗೆ ಮರಳಿ ನೀಡಿದೆ. ಸುಮಾರು 14 ಮಿಲಿಯನ್ ಡಾಲರ್ ಮೌಲ್ಯದ ಈ ಬೃಹತ್ ನಿಧಿಯಲ್ಲಿ 1952ರಲ್ಲಿ ಛತ್ತೀಸ್ಗಢದ ರಾಯ್ಪುರ ಮ್ಯೂಸಿಯಂನಿಂದ ಕದ್ದಿದ್ದ 2 ಮಿಲಿಯನ್ ಡಾಲರ್ ಮೌಲ್ಯದ ಅಪರೂಪದ ಕಂಚಿನ ‘ಅವಲೋಕಿತೇಶ್ವರ’ ವಿಗ್ರಹ, ಮಧ್ಯಪ್ರದೇಶದ ನೃತ್ಯ ಗಣೇಶ ಮತ್ತು ಕೆಂಪು ಮರಳುಗಲ್ಲಿನ ವಿಶಿಷ್ಟ ಬುದ್ಧನ ಶಿಲ್ಪಗಳು ಕೂಡ ಸೇರಿವೆ. ಇದಕ್ಕೂ ಮುನ್ನ 2024ರಲ್ಲೂ ಅಮೆರಿಕ 297 ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಿತ್ತು.
ಇದೇ ಹಾದಿಯಲ್ಲಿ ನಡೆದ ಕೆನಡಾ ದೇಶವು, ವಾರಣಾಸಿಯ ದೇವಾಲಯದಿಂದ ಸುಮಾರು 100 ವರ್ಷಗಳ ಹಿಂದೆ ಕಳ್ಳತನವಾಗಿ ಜಾಗತಿಕ ಮಾರುಕಟ್ಟೆ ಸೇರಿದ್ದ ಪವಿತ್ರ ‘ಅನ್ನಪೂರ್ಣೇಶ್ವರಿ’ ದೇವಿಯ ವಿಗ್ರಹವನ್ನು ಪತ್ತೆಹಚ್ಚಿ ಕಾಶಿಗೆ ತಲುಪಿಸಿದೆ. ಇತ್ತ ಸಿಂಗಾಪುರ ಮತ್ತು ಬ್ರಿಟನ್ ದೇಶಗಳೂ ತಮ್ಮ ಮ್ಯೂಸಿಯಂ ಮತ್ತು ಖಾಸಗಿ ಸಂಗ್ರಹಾಲಯಗಳಲ್ಲಿದ್ದ 15ನೇ ಶತಮಾನದ ವಿಜಯನಗರ ಕಾಲದ ಪವಿತ್ರ ಹನುಮಂತನ ವಿಗ್ರಹ ಹಾಗೂ ಹತ್ತಾರು ತಾಮ್ರಶಾಸನಗಳನ್ನು ಕಾನೂನುಬದ್ಧವಾಗಿ ಭಾರತಕ್ಕೆ ಮರಳಿಸಿದೆ. ಈ ರೀತಿಯಾಗಿ ಜಗತ್ತಿನಾದ್ಯಂತ ನಡೆಯುತ್ತಿರುವ ಈ ಜಾಗತಿಕ ಸಾಂಸ್ಕೃತಿಕ ಕಲಾಕೃತಿಗಳ ವಾಪಾಸಾತಿಯು ಭಾರತದ ಜಾಗತಿಕ ಸಾರ್ವಭೌಮತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಪತನದತ್ತ ಮುಖಮಾಡಲಿ ವಸಾಹತುಶಾಹಿ ಮನಸ್ಥಿತಿ
ಒಬ್ಬ ಭಾರತೀಯನಾಗಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಈ ಸಾಂಸ್ಕೃತಿಕತೆಯ ಮರುಸ್ಥಾಪನೆಯ ಮಹಾಚಳವಳಿಯನ್ನು ಕೇವಲ ಎರಡು ದೇಶಗಳ ನಡುವಿನ ಸಾಮಾನ್ಯ ರಾಜತಾಂತ್ರಿಕ ಯಶಸ್ಸು ಎಂದು ಭಾವಿಸುವುದಲ್ಲ. ಬದಲಿಗೆ, ಇದು ಶತಮಾನಗಳ ಕಾಲ ಜಗತ್ತನ್ನು ಆಳಿದ ಪಾಶ್ಚಿಮಾತ್ಯ ದೇಶಗಳ ‘ವಸಾಹತುಶಾಹಿ ಮನಸ್ಥಿತಿ’ಯ ಭದ್ರಕೋಟೆ ಕುಸಿಯುತ್ತಿರುವುದರ ಸ್ಪಷ್ಟ ಸಂಕೇತ. ಯುರೋಪಿಯನ್ ರಾಷ್ಟ್ರಗಳು ದಶಕಗಳ ಕಾಲ ಜಗತ್ತಿನೆದುರು ಒಂದು ಸುಳ್ಳು ಸಿದ್ಧಾಂತವನ್ನು ಬಿತ್ತುತ್ತಾ ಬಂದಿದ್ದವು. “ಭಾರತೀಯರಿಗೆ ಅಥವಾ ಏಷ್ಯಾದ ಜನರಿಗೆ ತಮ್ಮದೇ ಆದ ಭವ್ಯ ಇತಿಹಾಸ ಮತ್ತು ಕಲಾಕೃತಿಗಳನ್ನು ಜಾಗರೂಕತೆಯಿಂದ ಕಾಯ್ದುಕೊಳ್ಳುವ ಯೋಗ್ಯತೆ ಇಲ್ಲ, ಹಾಗಾಗಿ ನಮ್ಮ ಸುಸಜ್ಜಿತ ಲಂಡನ್ ಅಥವಾ ನ್ಯೂಯಾರ್ಕ್ ಮ್ಯೂಸಿಯಂಗಳಲ್ಲಿ ಇವು ಸುರಕ್ಷಿತವಾಗಿವೆ” ಎಂಬ ಅಹಂಕಾರದ ವಾದ ಅವರದಾಗಿತ್ತು. ಆದರೆ ಇಂದು ಭಾರತವು ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಜಾಗತಿಕ ಮಟ್ಟದಲ್ಲಿ ತಲೆಯೆತ್ತಿ ನಿಂತಾಗ, ಆ ದೇಶಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಂದು ಅವರು ರೀಸ್ಟೊರೇಟಿವ್ ಜಸ್ಟಿಸ್ ತತ್ತ್ವದಡಿ ಕಲಾಕೃತಿಗಳನ್ನು ಮರಳಿ ನೀಡುತ್ತಿರುವುದು ಅವರ ಉದಾರತೆಯಲ್ಲ, ಬದಲಿಗೆ ಇದು ಭಾರತದ ನೈತಿಕ ಶಕ್ತಿಗೆ ಸಂದ ಜಯ.
ಪಾಶ್ಚಿಮಾತ್ಯ ಜಗತ್ತಿಗೂ ಭಾರತೀಯ ಸನಾತನ ಚಿಂತನೆಗೂ ಕಲಾಕೃತಿಗಳನ್ನು ನೋಡುವ ದೃಷ್ಟಿಕೋನದಲ್ಲೇ ಬಹುದೊಡ್ಡ ವ್ಯತ್ಯಾಸವಿದೆ. ದೇವಾಲಯದ ಪವಿತ್ರ ಗರ್ಭಗುಡಿಯಲ್ಲಿದ್ದು ನಿತ್ಯ ಕೋಟ್ಯಂತರ ಭಕ್ತರಿಂದ ಪೂಜಿಸಲ್ಪಡಬೇಕಾದ ನಮ್ಮ ದೇವತಾ ವಿಗ್ರಹಗಳನ್ನು ಪಾಶ್ಚಿಮಾತ್ಯರು ಕೇವಲ ಲಿವಿಂಗ್ ರೂಂನ ಅಲಂಕಾರಿಕ ವಸ್ತುವಾಗಿಯೋ ಅಥವಾ ಮ್ಯೂಸಿಯಂನ ಪ್ರದರ್ಶನ ವಸ್ತುವಾಗಿಯೋ ನೋಡಿದರು. ಅವರ ಪಾಲಿಗೆ ಅದು ಕೇವಲ ಕಲ್ಲು ಅಥವಾ ಲೋಹದ ಭೌತಿಕ ‘ಕಲೆ’ (Art). ಆದರೆ ನಮ್ಮ ಪಾಲಿಗೆ ಅವು ಕೇವಲ ಕಲೆಯಲ್ಲ; ಅವು ನಮ್ಮ ಸಂಸ್ಕೃತಿಯ ಜೀವಂತ ಉಸಿರು ಮತ್ತು ದೈವೀ ಚೈತನ್ಯದ ಪ್ರತೀಕವಾಗಿವೆ. ಶತಮಾನಗಳ ಕಾಲ ಪರಕೀಯರ ಕತ್ತಲ ಕೋಣೆಯಲ್ಲಿ ಬಂಧಿಯಾಗಿದ್ದ ತಾಯಿ ಅನ್ನಪೂರ್ಣೇಶ್ವರಿಯ ವಿಗ್ರಹವು ವಾರಾಣಸಿಗೆ ಮರಳಿದಾಗ, ಅಲ್ಲಿನ ಸಹಸ್ರಾರು ಭಕ್ತರ ಕಣ್ಣಾಲಿಗಳು ಆನಂದಬಾಷ್ಪದಿಂದ ತುಂಬಿ ಬಂದವು. ಆ ಭಾವುಕ ಕ್ಷಣ ಕೇವಲ ಒಂದು ಕಲ್ಲಿನ ಮೂರ್ತಿಯನ್ನು ನೋಡಿ ಬಂದದ್ದಲ್ಲ. ಬದಲಿಗೆ, ತಮ್ಮ ಇತಿಹಾಸದ ಬೇರುಗಳಿಂದ ಕತ್ತರಿಸಲ್ಪಟ್ಟಿದ್ದ ಹೆತ್ತ ತಾಯಿಯ ಚೈತನ್ಯವು ನೂರು ವರ್ಷಗಳ ನಂತರ ಮತ್ತೆ ಸ್ವಗೃಹಕ್ಕೆ ಮರಳಿ ಬಂದಾಗ ಮೂಡಿದ ಪರಮಾನಂದವದು.
ಭವಿಷ್ಯದ ಸವಾಲುಗಳೊಂದಿಗೆ ಮುಂದಿನ ಹಾದಿ
ಯುನೆಸ್ಕೋ (UNESCO) ವರದಿಯ ಪ್ರಕಾರ, ಇಷ್ಟೆಲ್ಲಾ ಸಕಾರಾತ್ಮಕ ಬೆಳವಣಿಗೆಗಳ ನಡುವೆಯೂ ಭಾರತದ ಲಕ್ಷಾಂತರ ಅಮೂಲ್ಯ ಕಲಾಕೃತಿಗಳು ಇಂದಿಗೂ ವಿದೇಶಿ ನೆಲದಲ್ಲಿಯೇ ಉಳಿದುಕೊಂಡಿವೆ. ನಮ್ಮ ಇತಿಹಾಸದ ಈ ಉಳಿದ ಭಾಗಗಳನ್ನು ಮರಳಿ ತರಲು ಮತ್ತು ಇರುವ ಸಂಪತ್ತನ್ನು ರಕ್ಷಿಸಲು ನಮ್ಮ ಮುಂದೆ ಹಲವು ಪ್ರಮುಖ ಸವಾಲುಗಳಿವೆ. ಪ್ರಥಮವಾಗಿ, ಭಾರತದಲ್ಲಿ ಡಿಜಿಟಲ್ ದಾಖಲೀಕರಣದ ತೀವ್ರ ಕೊರತೆಯಿದೆ. ದೇಶದ ಗ್ರಾಮೀಣ ಭಾಗದ ಶೇ.70ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳಲ್ಲಿರುವ ವಿಗ್ರಹಗಳ ಯಾವುದೇ ಅಧಿಕೃತ ದಾಖಲೆ, ಅಳತೆ ಅಥವಾ ಹೈ-ರೆಸಲ್ಯೂಷನ್ ಫೊಟೋಗಳು ನಮ್ಮ ಬಳಿ ಲಭ್ಯವಿಲ್ಲ. ದುರಾದೃಷ್ಟವಶಾತ್ ಯಾವುದಾದರೂ ವಿಗ್ರಹ ಕಳ್ಳತನವಾದರೆ, ಅದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪತ್ತೆಯಾದಾಗಲೂ ಅದು ನಮ್ಮದೇ ಎಂದು ಕಾನೂನುಬದ್ಧವಾಗಿ ಸಾಬೀತುಪಡಿಸಲು ಈ ಡಿಜಿಟಲ್ ಇನ್ವೆಂಟರಿ ಅತ್ಯಗತ್ಯವಾಗಿದೆ. ಎರಡನೆಯದಾಗಿ, ಕಲಾಕೃತಿಗಳ ರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಗ್ರಾಮೀಣ ಮಟ್ಟದಲ್ಲಿ ಸ್ಥಳೀಯ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದು ಅತಿಮುಖ್ಯವಾಗಿದೆ. ಹಳ್ಳಿಗಳ ತರುಣ ಜನಾಂಗಕ್ಕೆ ತಮ್ಮೂರಿನ ಇತಿಹಾಸ, ಶಾಸನಗಳು ಮತ್ತು ಸ್ಮಾರಕಗಳ ಸಾಂಸ್ಕೃತಿಕ ಮಹತ್ವವನ್ನು ತಿಳಿಸಿಕೊಡಬೇಕಿದೆ. ಕೊನೆಯದಾಗಿ, ನಮ್ಮ ದೇವಾಲಯಗಳ ಸುರಕ್ಷತೆಗೆ ಕಠಿಣ ಕಾನೂನುಗಳು ಮತ್ತು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. ಸಿಸಿಟಿವಿ ಕಣ್ಗಾವಲು, ಕಲಾಕೃತಿಗಳಿಗೆ ಜಿಪಿಎಸ್ ಟ್ಯಾಗಿಂಗ್ ತಂತ್ರಜ್ಞಾನ ಅಳವಡಿಕೆ ಮತ್ತು ಗಡಿ ಭದ್ರತೆಯನ್ನು ಬಿಗಿಗೊಳಿಸಿದರೆ ಮಾತ್ರ ಮುಂದಿನ ಕಳ್ಳತನಗಳನ್ನು ತಡೆಯಲು ಸಾಧ್ಯ. ಈ ಸವಾಲುಗಳನ್ನು ಮೆಟ್ಟಿ ನಿಂತಾಗಷ್ಟೇ ನಮ್ಮ ಸಾಂಸ್ಕೃತಿಕ ಪರಂಪರೆಗೆ ಪೂರ್ಣ ರಕ್ಷಣೆ ಸಿಗುತ್ತದೆ. ಕಲಾಕೃತಿಗಳು ನಮ್ಮ ನಾಗರಿಕತೆಯ ಬೇರುಗಳು. ಬೇರುಗಳು ಗಟ್ಟಿಯಾಗಿದ್ದಾಗ ಮಾತ್ರ ಮರವು ಎತ್ತರವಾಗಿ ಬೆಳೆಯಲು ಸಾಧ್ಯ. ಇಂದು ಅಮೆರಿಕ, ಆಸ್ಟ್ರೇಲಿಯಾ, ಯುರೋಪಿನಿಂದ ಮರಳಿ ಬರುತ್ತಿರುವ ಪ್ರತಿಯೊಂದು ವಿಗ್ರಹವೂ ಭಾರತದ ಜಾಗತಿಕ ಗೌರವ ಮತ್ತು ಸಾಂಸ್ಕೃತಿಕ ಸಾರ್ವಭೌಮತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕದ್ದ ವಸ್ತುವನ್ನು ಮ್ಯೂಸಿಯಂನಲ್ಲಿಟ್ಟು ‘ಸಂಸ್ಕೃತಿಯ ರಕ್ಷಕರು’ ಎಂದು ಬೀಗುತ್ತಿದ್ದ ದೇಶಗಳಿಗೆ ಇಂದು ಭಾರತವು ತನ್ನ ನೈತಿಕ ಶಕ್ತಿಯ ಮೂಲಕ ಉತ್ತರ ನೀಡುತ್ತಿದೆ. ಕಲಾಕೃತಿಗಳೆಂಬ ರಾಷ್ಟ್ರದ ಚಲನಾಚೈತನ್ಯ ಮರಳಿತನ್ನೂರಿನತ್ತ ಸಾಗುತ್ತಿದೆಯೆಂಬುದೇ ಮನಸ್ಸಿಗೆ ನೆಮ್ಮದಿ.
