ಅಂಕಣ – ಕಡೆಗೋಲು
- ನಾರಾಯಣ ಶೇವಿರೆ, ಸಂಘಟನಾ ಕಾರ್ಯದರ್ಶಿ, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ
ಅದೊಂದು ಸಂಪ್ರದಾಯಸ್ಥ ಅಂತ ಊರಮಂದಿಯಿಂದ ಗುರುತಿಸಲ್ಪಟ್ಟ ಮನೆ. ಅಲ್ಲಿ ಪ್ರತಿದಿನವೂ ಮನೆದೇವರಿಗೆ ಶುದ್ಧ ಎಳ್ಳೆಣ್ಣೆ ದೀಪ ಉರಿಸಿ ಪೂಜೆ ನಡೆಯುತ್ತದೆ. ವರ್ಷದಲ್ಲಿ ಎರಡು ಬಾರಿ ಬಗೆಬಗೆಯ ಹೋಮಹವನಗಳು ನೆರವೇರುತ್ತವೆ. ಅದಕ್ಕಾಗಿ ವರ್ಷಪೂರ್ತಿ ತಯಾರಿ ಸಾಗುತ್ತದೆ. ತಯಾರಿ ಅಂದರೆ; ಅವರೇ ಬೆಳೆಯುವ ಎಳ್ಳನ್ನು ಗಾಣಕ್ಕೆ ಒಯ್ದು ಇನ್ನಾವುದೇ ಎಣ್ಣೆ ಬೆರಕೆಗೊಳ್ಳದಂತೆ ಶುದ್ಧ ಎಳ್ಳೆಣ್ಣೆಯನ್ನು ಮಾಡಿಸಿಕೊಂಡು ಬರಲಾಗುತ್ತದೆ. ಹೀಗೆ ವರ್ಷಪೂರ್ತಿ ಬೇಕಾಗುವಷ್ಟು ಎಳ್ಳೆಣ್ಣೆಯನ್ನು ಅವರೇ ಬೆಳೆಸಿದ ಎಳ್ಳಿನಿಂದಲೇ ತಯಾರುಮಾಡುವುದು. ಗಾಣದಲ್ಲಿ ನೀವು ಮಾಡಿಸುವ ಎಳ್ಳೆಣ್ಣೆಯನ್ನು ನಿಮ್ಮ ಉಳಿದ ಬಳಕೆಗೂ ಬಳಸುತ್ತಿದ್ದೀರೆನಿಸುತ್ತದೆ ಎಂದು ಒಮ್ಮೆ ವಿಚಾರಿಸುವುದಾಯಿತು.
ಗಾಣದಲ್ಲಿ ಎಣ್ಣೆ ಮಾಡಿಸುವಾಗ ಪ್ರಾರಂಭದ ಒಂದಿಷ್ಟನ್ನು ಬಿಟ್ಟು ನಂತರದ ಭಾಗದಲ್ಲಿ ದೇವರಿಗೆ ತೆಗೆದಿಡುತ್ತೇವೆ. ದೇವರಿಗೆ ಬೇಕಾದ್ದಷ್ಟನ್ನು ಪ್ರತ್ಯೇಕ ತೆಗೆದಿಟ್ಟ ನಂತರ ಉಳಿದದ್ದು ಮನೆಬಳಕೆಗೆ ಎಂದರು ಆ ಮನೆಯ ಯಜಮಾನರು. ಅಂದರೆ, ದೇವರ ಬಳಕೆಯ ಎಣ್ಣೆಯಿಂದ ಅನ್ಯ ಬಳಕೆಗೆ ತೆಗೆಯುವ ಪ್ರಶ್ನೆಯೇ ಇಲ್ಲ. ಜತೆಗೆ; ಅನ್ಯ ಬಳಕೆಗೆ ಹೇಗಿದ್ದರೂ ನಡೆಯುತ್ತದೆ, ಆದರೆ ದೇವರ ಬಳಕೆಯ ಎಣ್ಣೆ ಪರಿಶುದ್ಧ ಇರಬೇಕು ಎಂದು ಕಟ್ಟುನಿಟ್ಟಿನ ಶ್ರದ್ಧೆಯ ಮಾತನಾಡಿದರು.
ಹೋಮ-ಹವನಾದಿಗಳಿಗೆ ಬೇಕಾದ ತುಪ್ಪವನ್ನು ಆ ಮನೆಯಲ್ಲಿಯೇ ತಯಾರುಮಾಡುವುದು. ಆಗ ಅಲ್ಲಿ ಹೆಚ್ಚು ದೇಶೀ ದನಗಳಿದ್ದುವು. ಹಾಲಿಗಾಗಿ ಒಂದು ಜೆರ್ಸಿ ದನವನ್ನು ಸಾಕಿಕೊಂಡಿದ್ದರು. ನಿತ್ಯ ದೇವರ ಪೂಜೆಗೆ ಸಮರ್ಪಿಸುತ್ತಿದ್ದ ಹಾಲು ಅವಶ್ಯವಾಗಿ ದೇಶೀ ದನದ್ದೇ ಆಗಿತ್ತು. ಹೋಮಹವನಗಳಿಗೆ ಬೇಕಾದ ತುಪ್ಪವನ್ನು ದೇಶೀ ದನದ ಹಾಲಿನಿಂದಲೇ ಪ್ರತ್ಯೇಕವಾಗಿ ತಯಾರಿಸಲಾಗುತ್ತಿತ್ತು. ಯಾಕೆ, ಎಲ್ಲಾ ಹಾಲೂ ಒಂದೇ ಅಲ್ಲವೇ ಎಂದರೆ, “ಎಲ್ಲಾದರೂ ಉಂಟೇ! ಎಲ್ಲ ರೀತಿಯಲ್ಲೂ ದೇಶೀ ದನದ ಹಾಲೇ ಉತ್ಕೃಷ್ಟವಾದುದು. ದೇವರ ಬಳಕೆಗೆ ಅದನ್ನೇ ಬಳಸಬೇಕು. ನಮಗೆ ಯಾವುದಿದ್ದರೂ ಆಗುತ್ತದೆ” ಎಂದು ತುಸು ಜೋರಾಗಿಯೇ ಉತ್ತರಿಸಿದ್ದರು.
ದುರ್ವಾದದ ಅಬ್ಬರ
ಅಂಥ ದೈವಶ್ರದ್ಧೆ ಇರುವ ಮನೆಯಲ್ಲೀಗ ಪೀಳಿಗೆ ಬದಲಾಗಿದೆ. ಆಧುನಿಕ ಶಿಕ್ಷಣ ಪಡೆದು ಬೀಗಿರುವ ಮುಂಪೀಳಿಗೆಯ ಕಾರುಬಾರು ನಡೆದಿದೆ. ಅದಕ್ಕೂ ದೈವಶ್ರದ್ಧೆ ಇದ್ದೇ ಇದೆ. ಅದು ಮನೆಯ ಹಿನ್ನೆಲೆಯಿಂದ ಬಂದ ಭಾವಶಿಕ್ಷಣದ ಪರಿಣಾಮ. ಈ ಪರಿಣಾಮವನ್ನು ತುಸು ವಿಕಾರಗೊಳಿಸುವಷ್ಟು ಆಧುನಿಕದ ಬೌದ್ಧಿಕಶಿಕ್ಷಣದ ಪ್ರಭಾವವು ಕೆಲಸಮಾಡಿದೆ. ಈಗಲೂ ಆ ಮನೆಯಲ್ಲಿ ನಿತ್ಯಪೂಜೆ ನಡೆದಿದೆ. ಆಗಾಗ ಹೋಮಹವನಾದಿ ವಿಶೇಷ ಕಾರ್ಯಕ್ರಮಗಳು ನಿಯಮಿತವಾಗಿ ನಡೆದೇ ಇವೆ. ತುಸು ವಿಕಾರದೊಂದಿಗೆ!
ಅಂದರೆ; ಈಗ ಆ ಮನೆಯ ಗದ್ದೆಗಳೆಲ್ಲ ಅಡಕೆತೋಟಗಳಾಗಿ, ಎಳ್ಳು ಬೆಳೆಯುವ ಅವಕಾಶವೇ ಇಲ್ಲವಾಗಿ, ಎಳ್ಳೆಣ್ಣೆಯನ್ನು ಅಂಗಡಿಯಿಂದ ಖರೀದಿಸುವುದೇ ಅನಿವಾರ್ಯವಾಗಿಬಿಟ್ಟಿದೆ. ಮೊದಮೊದಲು ಖರೀದಿಸುತ್ತಿದ್ದ ಶುದ್ಧ ಎಳ್ಳೆಣ್ಣೆಯನ್ನು ದೇವರ ದೀಪಕ್ಕೂ ಅಭ್ಯಂಗ ಮತ್ತಿತರ ಮನೆಬಳಕೆಗೂ ಉಪಯೋಗಿಸುತ್ತಿದ್ದ ಕ್ರಮವು ಕ್ರಮೇಣ ವ್ಯತ್ಯಾಸಗೊಂಡು ಎಳ್ಳೆಣ್ಣೆಯು ಕೇವಲ ಮನೆಬಳಕೆಗೆ ಸೀಮಿತಗೊಂಡಿತು. ಎಳ್ಳೆಣ್ಣೆಯಂತೆ ಕಾಣುವ ದೀಪದೆಣ್ಣೆ ಎಂಬ ಹಣೆಪಟ್ಟಿಯನ್ನು ಹೊತ್ತ ಕಳಪೆ ಎಣ್ಣೆಯೇ ಈಗ ದೇವರ ದೀಪಕ್ಕೆ ನಿತ್ಯದ ಗತಿಯಾಯಿತು.
ಹಿಂದಿನ ಕ್ರಮವನ್ನು ನೆನಪಿಸಿಕೊಳ್ಳುತ್ತ ಬದಲಾದ ಈ ಕ್ರಮದ ಬಗೆಗೆ ಆಪ್ತವಾಗಿ ವಿಚಾರಿಸುವುದಾಯಿತು. ‘ಸಮಾಧಾನ’ ನೀಡುವ ವ್ಯಾವಹಾರಿಕ ವಿವರಗಳು ಪುಂಖಾನುಪುಂಖವಾಗಿ ಹೊರಬಂದವು.
ದೀಪವು, ದೇವರದ್ದೇ ಆದರೂ ಮತ್ತೊಂದೇ ಆದರೂ ದೀಪ ದೀಪವೇ ಅಷ್ಟೆ! ಅದನ್ನು ಉರಿಸಲು ಎಣ್ಣೆ ಯಾವುದಾದರೇನು? ದೀಪವು, ಉರಿಯುವುದು ಮುಖ್ಯವೇ ವಿನಾ ಎಣ್ಣೆ ಯಾವುದು ಎನ್ನುವುದಲ್ಲವಲ್ಲ! ಆದರೆ ದೇಹದ ಮಟ್ಟಿಗೆ ಹೀಗೆ ಯೋಚಿಸುವಂತಿಲ್ಲ. ತಲೆಗೆ ಬಳಸುವ ಎಣ್ಣೆ ಇರಬಹುದು ಇಲ್ಲವೇ ಅಡುಗೆ ಇತ್ಯಾದಿ ಖಾದ್ಯವಾಗಿ ಬಳಸುವ ಎಣ್ಣೆ ಇರಬಹುದು, ಅದು ಆರೋಗ್ಯಕ್ಕೆ ಹಾನಿಯೆಸಗದ ಹಾಗೂ ಆರೋಗ್ಯವರ್ಧಕ ಎಣ್ಣೆಯೇ ಆಗಿರಬೇಕು. ದೀಪದ ವಿಷಯಕ್ಕೆ ಬಂದರೆ ಅಲ್ಲಿ ಆರೋಗ್ಯದ ಪ್ರಶ್ನೆಯೇ ಬರುವುದಿಲ್ಲವಲ್ಲ! ಅಲ್ಲಿ ಬರುವುದು ಕೇವಲ ಉರಿಯುವ ಪ್ರಶ್ನೆ. ಯಾವ ಎಣ್ಣೆ ದೀಪವನ್ನು ಉರಿಸುವುದೋ ಅಲ್ಲಿ – ದೇವರಿಗೆ – ಅದರ ಬಳಕೆ. ಯಾವ ಎಣ್ಣೆ ಆರೋಗ್ಯಕರವೋ ಮನೆಗೆ – ಮನುಷ್ಯರಿಗೆ – ಅದರ ಬಳಕೆ. ವಾದವು ಹೀಗೆ ಸಾಗಿತ್ತು.
ವಿಕಾರಗೊಂಡ ಶ್ರದ್ಧೆ
ಈ ಧಾಟಿಯಲ್ಲಿ ಇದೀಗ ದೈವಶ್ರದ್ಧೆಯ ಅಭಿವ್ಯಕ್ತಿ ನಡೆದಿದೆ. ಈ ನಿಟ್ಟಿನಲ್ಲಿ ಅದೊಂದು ಮನೆ ಸಂಕೇತವಷ್ಟೆ. ವ್ಯಾಪಕವಾಗಿ ನಾವು ನೋಡಬಹುದಾದುದು ಇದೇ ದೃಶ್ಯವನ್ನೇ. ಇದೇ ಭಾವ-ಬೌದ್ಧಿಕತೆಯನ್ನೇ. ಈಗಂತೂ ಆರೋಗ್ಯದ ಬಗೆಗೆ ಕಾಳಜಿಯು ತೀವ್ರಗೊಂಡಿರುವ ಸಂದರ್ಭ. ಆರೋಗ್ಯವನ್ನು ಯದ್ವಾತದ್ವಾ ಕೆಡಿಸಿಕೊಳ್ಳುತ್ತಿರುವ ಸಂದರ್ಭವೂ ಹೌದು. ಬಹುಶಃ ವ್ಯತಿರಿಕ್ತವಾಗಿರುವ ಇವೆರಡನ್ನೂ ಆಧುನಿಕ ನಾಗರಿಕತೆಯು ಪೂರಕವಾಗಿಸಿದೆ. ನಾಲಿಗೆಯ ಚಪಲವನ್ನು ಪೂರೈಸಲು ಆರೋಗ್ಯಕ್ಕೆ ಹಾನಿಕರವಾದ ತಿಂಡಿತೀರ್ಥಗಳನ್ನು ಆವಿಷ್ಕರಿಸಿ ಯಥೇಚ್ಛವಾಗಿ ಮೊಗೆಮೊಗೆದು ನೀಡುತ್ತಿರುವ ಈ ನಾಗರಿಕತೆಯು ಕೆಡುವ ಆರೋಗ್ಯದ ಕುರಿತ ಆತಂಕವನ್ನೂ ಅದಕ್ಕೆ ಬೇಕಾದ ಮಾರ್ಗೋಪಾಯಗಳನ್ನೂ ವಿಧವಿಧ ಬಗೆಗಳಲ್ಲಿ ಮೊಗೆಮೊಗೆದು ನೀಡುತ್ತಿದೆ. ಅಲ್ಲೂ ವ್ಯಾಪಾರ, ಇಲ್ಲೂ ವ್ಯಾಪಾರ. ಮತ್ತವೆರಡು ಪರಸ್ಪರ!
ಈ ಒಟ್ಟು ಚಿತ್ರಣವನ್ನು ಅಂದಾಜಿಸಲಾಗದ ಪೀಳಿಗೆಗೆ ಆಗುವುದು ಗಾಣಕ್ಕೆ ಒಡ್ಡಿಕೊಂಡ ಕಬ್ಬಿನ ಅನುಭವವಷ್ಟೆ. ಕಬ್ಬು ಒಮ್ಮೆ ಗಾಣಕ್ಕೆ ಒಡ್ಡಿಕೊಂಡುಬಿಟ್ಟರೆ ಮುಗಿಯಿತು, ಮತ್ತೆ ಆಲೋಚಿಸಿ ಪ್ರಯೋಜನವಿಲ್ಲ, ಹಿಂದೆ ಬರಲು ಸಾಧ್ಯವಿಲ್ಲ, ಮುಂಬರಿದು ತನ್ನತನವನ್ನು ಪೂರ್ತಿ ಕಳಕೊಂಡು ಜೊಳ್ಳಾಗಿ ಬಿಡುವುದೊಂದೇ ದಾರಿ. ಆಧುನಿಕ ನಾಗರಿಕತೆಯು ಹೀಗೆ ತನ್ನತನವನ್ನೇ ಕಳಕೊಳ್ಳುವಂಥ ಶುದ್ಧ ವ್ಯಾವಹಾರಿಕತೆಯುಳ್ಳ ಬೌದ್ಧಿಕತೆಯನ್ನು ಉದ್ದೀಪಿಸುತ್ತಿದೆಯೇ!
ಉತ್ತಮವಾದುದು, ಶ್ರೇಷ್ಠವಾದುದು, ದೊಡ್ಡದು ದೇವರಿಗೆ; ಅನುತ್ತಮವಾದುದು, ಕನಿಷ್ಠವಾದುದು, ಚಿಕ್ಕದು ತನಗೆ ಎಂಬ ಭಾವ ಹಿಂದೆ ವ್ಯಾಪಕವಾಗಿ ಅದೆಷ್ಟು ಸಹಜವಿತ್ತು! ದೇವರೆಂದರೆ ಇನ್ನಿಲ್ಲದಷ್ಟು ಉತ್ತಮ, ಇನ್ನಿಲ್ಲದಷ್ಟು ಶ್ರೇಷ್ಠ, ಇನ್ನಿಲ್ಲದಷ್ಟು ದೊಡ್ಡದು ಎಂಬ ತಾತ್ತ್ವಿಕ ಭಾವ. ಉತ್ತಮವಾದುದು ಸಲ್ಲಬೇಕಾದುದು ಇನ್ನಿಲ್ಲದಷ್ಟು ಉತ್ತಮವಾದುದಕ್ಕೇ, ದೊಡ್ಡದು ಸಲ್ಲಬೇಕಾದುದು ಇನ್ನಿಲ್ಲದಷ್ಟು ದೊಡ್ಡದಾದುದಕ್ಕೇ ಎಂಬುದು ಕೆಲಸ ಮಾಡುತ್ತಿದ್ದ ಶ್ರದ್ಧೆ. ಈ ಶ್ರದ್ಧೆಯ ಹಿಂದೆ ಅದೆಷ್ಟು ಎತ್ತರದ ತಾತ್ತ್ವಿಕ ವಿವರವಿದೆ! ಇಂದು ಈ ತಾತ್ತ್ವಿಕ ವಿವರವನ್ನು ಭಾವವಿಕಾರವುಳ್ಳ ಬೌದ್ಧಿಕತೆಯ ಬೆಂಬಲದೊಂದಿಗೆ ವ್ಯಾವಹಾರಿಕತೆಯು ಬುಡಮೇಲು ಮಾಡಿಟ್ಟಿದೆ.
ದೇವರ ದೀಪಕ್ಕೆ ಎಣ್ಣೆಯನ್ನು ಕೊಡುವ ಶ್ರದ್ಧೆ ಇದೆ, ಕಳಪೆ ಎಣ್ಣೆಯನ್ನು ನೀಡುವ ಶ್ರದ್ಧಾವಿಕಾರವದು. ಹೋಮಹವನಾದಿಗಳಿಗೆ ಯಾವ್ಯಾವುದೋ ತುಪ್ಪವನ್ನು ನೀಡುವ ಶ್ರದ್ಧೆ ಇದೆ, ಆರೋಗ್ಯಕರವಲ್ಲದ ತುಪ್ಪ ಸಾಕೆನ್ನುವ ಕಳಪೆ ಶ್ರದ್ಧೆ ಅದು. ಹಣ್ಣುಕಾಯಿಗೆ ಅತಿಸಣ್ಣ ತೆಂಗಿನಕಾಯಿ ಆಯ್ದುಕೊಂಡು ಒಯ್ಯುವ ಶ್ರದ್ಧೆ ಇದೆ, ಅತಿ ಕನಿಷ್ಠ ದರದ ಚಿಕ್ಕ ತೆಂಗಿನಕಾಯಿಯನ್ನು ಖರೀದಿಸುವ ಸಣ್ಣತನದ ಶ್ರದ್ಧೆ ಅದು.
ಯಜ್ಞಸಂಸ್ಕೃತಿ

ವ್ಯಾಸರಿಗೆ ಜನ್ಮನೀಡಿದ ನಾಡಿದು. ಅವರ ತ್ಯಾಗ – ಸಮರ್ಪಣೆಗಳ ಬದುಕು – ಸಂದೇಶಗಳಿಂದ ಪ್ರೇರಣೆ ಪಡೆದ ಮಣ್ಣಿದು. ಅದರಿಂದಲೇ ಇಲ್ಲಿಯ ಸಂಸ್ಕೃತಿ ಸಂಪನ್ನಗೊಂಡದ್ದು. ಅರೆ! ಸಂಪನ್ನ ಎಂಬ ಪದವನ್ನು ಎರಡು ರೀತಿಯಲ್ಲಿ ಬಳಸುತ್ತಿರುವೆವಲ್ಲ! ಸಮೃದ್ಧ ಎಂಬುದು ಒಂದು ಅರ್ಥ. ಪೂರ್ಣವಾಯಿತು ಎಂಬುದೂ ಅದರ ಇನ್ನೊಂದರ್ಥ. ಸಮೃದ್ಧವಾಗಿ ತುಂಬಿದಾಗ ತಾನೇ ಪೂರ್ಣವಾಗುವುದು. ಪೂರ್ಣವಾಯಿತು ಅಂದರೆ ಮುಗಿಯಿತು, ಇನ್ನಿಲ್ಲವಾಯಿತು ಎಂಬ ಅರ್ಥವನ್ನೂ ಹಚ್ಚಬಹುದು. ಕಾರ್ಯಕ್ರಮ ಮುಗಿಯಿತು ಎನ್ನಲು, ಹಾಗೆ ಮುಗಿದುದನ್ನು ಸಮೃದ್ಧ ಧ್ವನಿಯಲ್ಲಿ ಅರುಹಲು ಸಂಪನ್ನವಾಯಿತು ಎಂದು ಹೇಳುವೆವಲ್ಲ!
ವ್ಯಾಸರ ತ್ಯಾಗದ ಬದುಕಿನಿಂದ ಸಮೃದ್ಧದ ಅರ್ಥದಲ್ಲಿ ಸಂಪನ್ನಗೊಂಡ ಇಲ್ಲಿಯ ಸಂಸ್ಕೃತಿಯು ಮುಗಿತಾಯದ ಅರ್ಥದಲ್ಲಿ ಸಂಪನ್ನಗೊಳ್ಳಬಾರದಷ್ಟೆ! ಅವರದು ಜ್ಞಾನಕ್ಕಾಗಿ ತ್ಯಾಗ – ಸಮರ್ಪಣೆ. ಮತ್ತದು ಜ್ಞಾನವನ್ನು ವಿಶ್ವಕ್ಕೇ ಮೊಗೆಮೊಗೆದು ನೀಡುವುದಕ್ಕಾಗಿ ಕೂಡಾ. ಜ್ಞಾನದ ಲಕ್ಷಣವೇ ಅದಲ್ಲವೆ, ಪಡೆದುದನ್ನು ಎಲ್ಲರಿಗೂ ನೀಡುವುದು. ಪಡೆದುದನ್ನು ತನ್ನದಲ್ಲವೆಂದು ನೀಡುವ ಜ್ಞಾನವನ್ನು ಪಡೆದವರು ವ್ಯಾಸರು. ಜ್ಞಾನದ ನಿಟ್ಟಿನಲ್ಲಿ, ತಲುಪಲಾಗದವರನ್ನೂ ತಲುಪುವುದೆಂತು ಎಂಬ ಚಿಂತೆ ವ್ಯಾಸರನ್ನು ಕಾಡಿದ್ದನ್ನು ಭಾಗವತವು ಪ್ರಾರಂಭದಲ್ಲಿಯೇ ದಾಖಲಿಸಿದೆ.
ಪಡೆದ ವಸ್ತುವನ್ನು ತನ್ನದಲ್ಲ ಎಂದುಕೊಂಡಾಗ ಸಲ್ಲಬೇಕು ಯಾರಿಗೆ ಎಂಬ ಪ್ರಶ್ನೆ ಉದಿಸುತ್ತದೆ. ಸಲ್ಲಬೇಕಾದಲ್ಲಿಗೆ ಒಪ್ಪಿಸುವ ಶ್ರದ್ಧೆ ಮೂಡುತ್ತದೆ. ತ್ಯಾಗ ಮತ್ತು ಸಮರ್ಪಣೆಯ ಎರಡು ಸ್ಥಿತಿಗಳಿವು. ಬಿಟ್ಟುಬಿಡುವುದು ತ್ಯಾಗ. ಕೊಟ್ಟುಬಿಡುವುದು ಸಮರ್ಪಣೆ. ಯಾವುದೇ ವಸ್ತುವನ್ನು ಅಥವಾ ಸ್ಥಿತಿಯನ್ನು ಬಿಟ್ಟುಬಿಡದೆ ಕೊಟ್ಟುಬಿಡಲು ಸಾಧ್ಯವಿಲ್ಲ. ಅಂದರೆ; ತ್ಯಾಗದ ಪರಿಣಾಮ ಕಾಣಬೇಕಾದುದು ಸಮರ್ಪಣೆಯಲ್ಲಿ. ಸಮರ್ಪಣೆಯ ಆಧಾರಬಿಂದು ತ್ಯಾಗ.
ಹೋಮಹವನಗಳಲ್ಲಿ ದೇವತೆಗಳನ್ನು ಕರೆದು ಪ್ರತಿಯೊಂದು ಸುವಸ್ತುವನ್ನೂ ಅರ್ಪಿಸುವಾಗ ಹೇಳುವ ಮಂತ್ರದ ಸಾಲುಗಳನ್ನು ನೋಡಿರಂತೆ; “ಇಂದ್ರಾಯ ಸ್ವಾಹಾ ಇಂದ್ರಾಯ ಇದಂ ನ ಮಮ, ಅಗ್ನಯೇ ಸ್ವಾಹಾ ಅಗ್ನಯೇ ಇದಂ ನ ಮಮ”. ಇದು ಇಂದ್ರನದು, ಇದು ಅಗ್ನಿಯದು, ಇದು ವರುಣನದು, ನನ್ನದಲ್ಲ ಎಂದೇ ನಮ್ಮದೆಲ್ಲವನ್ನೂ ಹೋಮಿಸುವುದು. ಹಾಗೆ ಹೋಮಿಸಿದಾಗಲೇ ಅದು ಹೋಮವಾದೀತು. ಇಲ್ಲದೇ ಹೋದರೆ, ಅಂದರೆ ನನ್ನದನ್ನು ನೀಡುತ್ತಿರುವೆ ಎಂಬ ಭಾವದಲ್ಲಿ ತೊಡಗಿದರೆ ಅದು ಅಹಂಕಾರವಷ್ಟೆ ಆದೀತು. ನೀಡುವ ಪ್ರಕ್ರಿಯೆ ಮುಖ್ಯವಲ್ಲ, ನೀಡುವ ಭಾವ ಮುಖ್ಯ ಎನ್ನುವುದನ್ನು ಇಲ್ಲಿಯ ಯಜ್ಞಸಂಸ್ಕೃತಿ ಮತ್ತೆ ಮತ್ತೆ ಒತ್ತಿಹೇಳುತ್ತಿದೆ.
ಅಮೃತತ್ತ್ವಸಿದ್ಧಿಯ ತ್ಯಾಗ
ಗಳಿಸಿದ್ದು ನನ್ನದೇ ಎನ್ನುವುದು ವ್ಯವಹಾರ. ಗಳಿಸಿದ್ದು ನಾನೇ ಆದರೂ ನನ್ನದಲ್ಲ ಎನ್ನುವುದು ಶ್ರದ್ಧೆ. ಭಾರತವು ಜಗತ್ತಿಗೆ ನೀಡಿದ ದೊಡ್ಡ ಕೊಡುಗೆ ಬೌದ್ಧಿಕತೆಯಲ್ಲ, ಶ್ರದ್ಧೆ. ಬೌದ್ಧಿಕತೆಯನ್ನು ಕೊಟ್ಟಿದೆ, ಮತ್ತದನ್ನು ವಿಶಿಷ್ಟವಾಗಿಯೇ ಕೊಟ್ಟಿದೆ. ಅದರ ಮಿತಿಗಳನ್ನು ಅರುಹಿಯೇ ಕೊಟ್ಟಿದೆ. ಬುದ್ಧಿಗೆ ಬಲ ಬರಲು ಶ್ರದ್ಧೆ ಅವಶ್ಯ. ಶ್ರದ್ಧೆ ಇಲ್ಲದ ಬುದ್ಧಿಗೆ ಅಹಂಕಾರ ಬರುವ ಸಾಧ್ಯತೆಯೇ ಅಧಿಕ. ಬುದ್ಧಿಯಲ್ಲವೇ ಜ್ಞಾನವನ್ನು ಹೊಂದುವ ಪರಿಕರ ಎಂದು ಅಂದುಕೊಂಡರೆ, ಗೀತೆ ಹೇಳುತ್ತದೆ; ಶ್ರದ್ಧೆಯುಳ್ಳವ ಜ್ಞಾನವನ್ನು ಪಡೆದಾನು – ಶ್ರದ್ಧಾವಾನ್ ಲಭತೇ ಜ್ಞಾನಮ್. ಅದು ಅಂತಿಂಥ ಜ್ಞಾನವಲ್ಲ, ಮಾಹಿತಿಯ ಚೌಕಟ್ಟಿನ ಲೌಕಿಕ ಜ್ಞಾನವಲ್ಲ, ಅಮೃತತ್ವವನ್ನು ಅನುಭವಕ್ಕೆ ತಂದೊಡ್ಡಬಲ್ಲ ಜ್ಞಾನ.
ಮನುಷ್ಯನ ಬದುಕಿನ ಆತ್ಯಂತಿಕ ಲಕ್ಷ್ಯವು ಅದೇ ಎನ್ನುವುದು ಭರತಖಂಡದ ಶ್ರದ್ಧೆ. ಇಲ್ಲಿಯ ಮಣ್ಣಿಗೆ ಜ್ಞಾನ ಬೇರೆಯಲ್ಲ, ಅಮೃತತ್ವ ಬೇರೆಯಲ್ಲ, ಬದುಕಿನ ಆತ್ಯಂತಿಕ ಗುರಿ ಬೇರೆಯಲ್ಲ. ಇಲ್ಲಿ ಅದೆಷ್ಟು ರಾಜರು ಆಳಿಹೋದರು, ಅದೆಷ್ಟು ಧನಿಕರು ಬೀಗಿಹೋದರು, ಅದೆಷ್ಟು ಮಂದಿ ವಿಲಾಸೀ ಬದುಕನ್ನು ಬಾಳಿಹೋದರು! ಇಲ್ಲಿಯ ಮಣ್ಣು ಅವರಾರನ್ನೂ ನೆನಪಿನಲ್ಲಿಟ್ಟುಕೊಂಡಿಲ್ಲ, ಗೋತ್ರದ ಹೆಸರಿನಲ್ಲಿ ತನ್ನ ಪೂರ್ವಜರೆಂದು ಹೆಮ್ಮೆಪಟ್ಟುಕೊಂಡಿಲ್ಲ. ಹೆಮ್ಮೆಪಡುವುದೇನಿದ್ದರೂ ಎಲ್ಲವನ್ನೂ ಬಿಟ್ಟುಕೊಟ್ಟ ಋಷಿಮುನಿಗಳ ಬಗೆಗೆ, ಸಾಧುಸಂತರ ಬಗೆಗೆ. ಅಂಥವರು ತ್ಯಾಗ – ಸಮರ್ಪಣೆಗಳಿಗೂ ಪ್ರತೀಕವಾಗುತ್ತಾರೆ, ಜ್ಞಾನ – ಅಮೃತತ್ವಗಳಿಗೂ ಪ್ರತೀಕವಾಗುತ್ತಾರೆ. ಅಂಥ ದೃಷ್ಟಿಯನ್ನು ನೀಡಿದ ಉಪನಿಷತ್ತಿನ ಸಾಲುಗಳನ್ನು ವ್ಯಾಸರು ನಮಗೆ ಮತ್ತೆ ಮತ್ತೆ ನೆನಪಿಸುತ್ತಿದ್ದಾರೆ, ಹೇಗೆಂದರೆ – “ಕರ್ಮದಿಂದಲ್ಲ, ಸಂತತಿಯಿಂದಲ್ಲ, ಧನದಿಂದಲ್ಲ; ತ್ಯಾಗದಿಂದಲೇ ಕೆಲವರು ಅಮೃತತ್ವವನ್ನು ಪಡೆದರು – ನ ಕರ್ಮಣಾ ನ ಪ್ರಜಯಾ ನ ಧನೇನ ತ್ಯಾಗೇನೈಕೇ ಅಮೃತತ್ವಮಾನಶುಃ”.
ಯಾವುದನ್ನು ಬಿಟ್ಟುಬಿಡಲು, ನನ್ನದೇ ಆಗಿರುವುದನ್ನು ನನ್ನದಲ್ಲವೆಂದು ಕೊಟ್ಟುಬಿಡಲು ಸಾಧ್ಯವಾಗುವುದೋ ಆಗ ನಿಜ ಅರಿವು ತನ್ನನ್ನು ನಮ್ಮ ಮುಂದೆ ತೆರೆದುಕೊಂಡೀತು. ಅಂಥ ಅರಿವು ಗುರು ಆದೀತು. ಅಂಥ ಗುರುವಿಗೆ ನಮ್ಮ ಸಮರ್ಪಣೆಯು ಸಂದೀತು. ಕೊಡುವುದು ಒಪ್ಪ – ಓರಣವಾಗಿ ಆದಾಗ ಅಂದರೆ ಸಮ್ಯಕ್ ಆಗಿ ಆದಾಗ ತಾನೇ ಸಮರ್ಪಣೆ. ಕಾಯಿ, ಎಣ್ಣೆ, ತುಪ್ಪಗಳ ಹಂತದಲ್ಲೇ ನಮಗೆ ಅರ್ಪಣೆಯನ್ನು ಸಮ್ಯಕ್ ಆಗಿಸಲು ಅದೆಷ್ಟು ಕಷ್ಟವಾಗುತ್ತಿದೆ! ಅದೆಂಥ ಭೀಕರ ಬೌದ್ಧಿಕ ಸಮರ್ಥನೆ ಪ್ರಕಟಗೊಳ್ಳುತ್ತಿದೆ! ಅವುಗಳಿಗಿಂತ ಆಚಿನದನ್ನು ಕುರಿತ ನಮ್ಮ ಸ್ಥಿತಿ ದೇವರಿಗೆ ಪ್ರೀತಿ! ಅರ್ಪಣೆ ಸಮ್ಯಕ್ ಆಗುವುದು ಬೇಡವೇ?.
