ಅಂಕಣ – ಪರ್ಯಾಯ
- ಪ್ರೊ. ಎಂ.ಎಸ್. ಚೈತ್ರ
ಭಾರತೀಯ ಸಮಾಜದಲ್ಲಿ ಸಹಜವಾಗಿ ಕಾಣಸಿಗುವ ಆಚರಣೆಗಳ ಕುರಿತು ಮಾತನಾಡುವ ಸಂದರ್ಭದಲ್ಲಿ, ಸಾರ್ವಜನಿಕ ವಲಯದಲ್ಲಿ ನಡೆಯುವ ಚರ್ಚೆಗಳಲ್ಲಿ ಭಾರತೀಯ ಪರಂಪರೆಗಳ ಕುರಿತ ಎರಡು ವಿಭಿನ್ನ ಚಿತ್ರಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ. ಒಂದೆಡೆ ಕೆಲವರು ಭಾರತೀಯರ ಚರಿತ್ರೆಯೆಂದರೆ ವೈದಿಕ ಮತ್ತು ಅವೈದಿಕರ ನಡುವೆ ನಡೆದ ಸಂಘರ್ಷ. ಆ ಕಾರಣಕ್ಕಾಗಿಯೇ ಅನೇಕ ಸಾಧು ಸಂತರು ಈ ವೈದಿಕ ಪ್ರಣೀತ ಆಚರಣೆಗಳನ್ನು ಕೈಬಿಟ್ಟು ಸಮಾಜದಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಭಾರತೀಯರು ನಿರಂತರವಾಗಿ ಈ ಆಚರಣೆಗಳ ಮೌಢ್ಯ ಜಗತ್ತನ್ನು ಪೋಷಿಸುತ್ತಲೇ ಇದ್ದಾರೆ. ಆ ಕಾರಣಕ್ಕಾಗಿಯೇ ಸಮಾಜ ಸುಧಾರಣೆಯ ಅಗತ್ಯವಿದೆ ಎಂದು ವಾದಿಸುತ್ತಾರೆ. ಆದರೆ, ಇದಕ್ಕೆ ಪ್ರತಿಯಾಗಿ ಸಾಂಪ್ರದಾಯಿಕರು ಈ ವಿವರಣೆಗಳನ್ನು ಅಲ್ಲಗಳೆಯುತ್ತಾ ಸಂಪ್ರದಾಯಗಳನ್ನು ಮುಕ್ತಿ ಮಾರ್ಗವೆಂದು ಮಾತ್ರ ಗ್ರಹಿಸಬೇಕು ಮತ್ತು ವಿವಿಧ ಸಾಧು ಸಂತರ ವಾಣಿಗಳನ್ನು ಆಚರಣೆಗಳ ವಿರೋಧ ಎಂದು ಗ್ರಹಿಸದೆ, ವಿವೇಕ ಪೂರ್ಣವಾಗಿ ಆನಂದಕ್ಕಾಗಿ ಆಚಾರಗಳನ್ನು ಗ್ರಹಿಸಬೇಕು ಎಂದು ವಿವರಣೆಗಳನ್ನು ನೀಡುತ್ತಾರೆ. ಹಾಗಾದರೆ ಈ ಎರಡು ಚಿತ್ರಣಗಳ ನಡುವೆ ನಿಜವಾದ ರೀತಿ ಯಾವುದು ಮತ್ತು ಈ ಗೊಂದಲಗಳು ಉಂಟಾಗಲು ಕಾರಣವೇನು ಎನ್ನುವುದನ್ನು ವಿಮರ್ಶಿಸುವುದು ಇಲ್ಲಿ ಬಹಳ ಮುಖ್ಯ.
ಸಮಾಜ ಸುಧಾರಣೆ ಮತ್ತು ಆಚಾರಗಳ ವಿಮರ್ಶೆ
ಪೂಜೆ – ಪುನಸ್ಕಾರ, ಮಡಿ – ಮೈಲಿಗೆ ಮೊದಲಾದ ಆಚಾರಗಳನ್ನು ಬಿಟ್ಟಾಗ ಮಾತ್ರ ನಮ್ಮ ಸಮಾಜವು ಸುಧಾರಿಸುತ್ತದೆ ಎನ್ನುವ ಮಾತುಗಳು ಆಗಾಗ ಕೇಳಿಬರುತ್ತದೆ. ಈ ರೀತಿಯ ಆಚಾರಗಳನ್ನು ಜನರಿಂದ ಬಿಡಿಸಲು ಕೆಲ ಸುಧಾರಣಾವಾದಿಗಳು ನಿರಂತರ ಪ್ರಯತ್ನಿಸುತ್ತಿರುತ್ತಾರೆ. ಪೂಜೆ – ಪುನಸ್ಕಾರ, ವೇದಪಠಣ, ಶಾಸ್ತ್ರಾಧ್ಯಯನ, ಮಡಿ – ಮೈಲಿಗೆ ಈ ರೀತಿಯ ಆಚರಣೆಗಳೇ ನಮ್ಮ ಸಮಾಜವು ಇನ್ನು ಪ್ರಗತಿಯನ್ನು ಹೊಂದದೆ ಹಿಂದುಳಿಯುವಂತೆ ಮಾಡಿದೆ, ಹಾಗಾಗಿ ಇವುಗಳನ್ನು ಬಿಟ್ಟರೆ ನಮ್ಮ ಸಮಾಜಕ್ಕೆ ಒಳಿತಾಗುತ್ತದೆ ಎನ್ನುವುದು ಇವರ ವಾದ. ಈ ಆಚಾರಗಳನ್ನು ನಾನಾವಿಧದ ತರ್ಕ, ಭಾಷಣ, ಹೋರಾಟಗಳ ಮುಖಾಂತರ ಇವರು ಬಿಡಿಸಲು ಯತ್ನಿಸಿದಷ್ಟೂ, ಜನರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು, ಈ ಸುಧಾರಣಾವಾದಿಗಳಿಗೆ ಅರ್ಥವಾಗದ ತಲೆನೋವು. ಈ ಸುಧಾರಣಾವಾದವು, ಈ ರೀತಿಯ ಸುಧಾರಣೆಯ ಚಳವಳಿಯನ್ನು ತಾವು ಮಾತ್ರವಲ್ಲ, ಇದನ್ನು ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಪೂರ್ವಜರೂ ನಡೆಸಿದ್ದಾರೆ ಎನ್ನುತ್ತಾರೆ.
ಇದಕ್ಕೆ ಸಂವಾದಿಯಾಗಿ ಬಸವಾದಿ ಶರಣರ ಕೆಲ ವಚನಗಳನ್ನು ಮತ್ತು ಕನಕಾದಿ ದಾಸರ ಪದಗಳನ್ನೋ ಉಲ್ಲೇಖಿಸುವುದನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಕೆಲ ಉದಾಹರಣೆಗಳನ್ನು ಗಮನಿಸೋಣ –
“ವೇದವನೋದಿದಡೇನು? ಶಾಸ್ತ್ರವ ಕಲಿತಡೇನು? ಮಾಘವ ಮಿಂದಡೇನು? ಮೂಗ ಹಿಡಿದಡೇನು?
ಹಲ್ಲ ಕಿರಿದಡೇನು? ಬಾಯ ಹುಯ್ದುಕೊಂಡಡೇನು? ಉಟ್ಟುದನೊಗೆದಡೇನು? ಮಟ್ಟಿಯನಿಟ್ಟಡೇನು?
ಮಂಡೆಯ ಬಿಟ್ಟಡೇನು? ತಿಟ್ಟನೆ ತಿರುಗಿದಡೇನು? ಕಣ್ಣು ಮುಚ್ಚಿದಡೇನು? ಕೈಗಳ ಮುಗಿದಡೇನು?
ಬೊಟ್ಟನಿಟ್ಟಡೇನು? ಬಯಲಿಂಗೆ ನೆನೆದಡೇನು? ಮುಸುಡ ಹಿಡಿದಡೇನು? ಮೌನದಲ್ಲಿರ್ದಡೇನು?
ಅವಕ್ಕೆ ಶಿವಗತಿ ಸಿಕ್ಕದು”.
ಈ ರೀತಿಯ ಅನೇಕ ವಚನಗಳನ್ನು ನಾವು ಕಾಣಬಹುದಾಗಿದೆ. ಈ ವಚನಗಳಲ್ಲಿ ವೇದಶಾಸ್ತ್ರಗಳ ಅಧ್ಯಯನವನ್ನು, ಪೂಜೆ – ಪುನಸ್ಕಾರಾದಿ ಆಚಾರಗಳನ್ನು ವ್ಯರ್ಥವೆಂದು ಹೇಳಿದ್ದಾರೆಂಬಂತೆ ಕಾಣುತ್ತದೆ. ಸುಧಾರಣಾವಾದಿಗಳ ಪ್ರಕಾರ ಈ ರೀತಿಯ ಇನ್ನಿತರ ಕೆಲ ವಚನಗಳು, ವಚನಕಾರರು ಮಾಡುತ್ತಿದ್ದ ಸಮಾಜ ಸುಧಾರಣಾ ಚಳವಳಿಯ ಕುರಿತಾಗಿ ತಿಳಿಸುತ್ತದೆ ಎನ್ನುವುದು ಈ ವಾದದ ಕೇಂದ್ರ. ಇದೇ ರೀತಿಯ ಕೆಲ ದಾಸರ ಪದಗಳನ್ನು ನಾವು ಕಾಣಬಹುದಾಗಿದೆ. ‘ಪರಿಪರಿಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ, ಆರು ಶಾಸ್ತ್ರ ಓದಿದರಿಲ್ಲ, ನೂರಾರು ಪುರಾಣ ಮುಗಿಸಿದರಿಲ್ಲ..’ ಇತ್ಯಾದಿ ರೀತಿಯಲ್ಲಿ ಶಾಸ್ತ್ರಗಳ ಅಧ್ಯಯನ, ಪುರಾಣ ಪ್ರವಚನ, ಸುಧಾಪಾಠ ಮೊದಲಾದವುಗಳನ್ನು ಇಲ್ಲಿ ವ್ಯರ್ಥವೆಂದು ದಾಸರು ಹೇಳಿದ್ದನ್ನು ಕಾಣಬಹುದಾಗಿದೆ. ಅಲ್ಲಲ್ಲಿ ವಚನ ಪರಂಪರೆಗಳಲ್ಲೂ ಮತ್ತು ದಾಸರ ಪರಂಪರೆಗಳಲ್ಲೂ ಆಚಾರಗಳನ್ನು ಹಳಿಯುವ ಈ ಕ್ರಮವನ್ನು ನೋಡಿ, ವಚನಕಾರರು ಮತ್ತು ದಾಸರು ವೈದಿಕ ಆಚಾರದ ಕಪಿಮುಷ್ಟಿಯಿಂದ ಜನರನ್ನು ಬಿಡಿಸುವ ಮೂಲಕ ಸಮಾಜ ಸುಧಾರಣೆಯ ಕೆಲಸದಲ್ಲಿ ತೊಡಗಿದ್ದರು ಎಂದು ಇಂದು ಭಾವಿಸಲಾಗುತ್ತದೆ.
ಆದರೆ ಇಂದು ನಾವು ಯಾವುದೇ ಸಂಪ್ರದಾಯಗಳನ್ನು ಗಮನಿಸಿದರೆ, ಈ ಸಂಪ್ರದಾಯಗಳ ಭಾಗವಾಗಿರುವ ಜನರು ಇಷ್ಟಲಿಂಗ ಪೂಜೆ, ಹರಿನಾಮ ಕೀರ್ತನೆ, ಪೂಜೆ ಇತ್ಯಾದಿ ಅನೇಕ ಆಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡೇ ಇರುವುದನ್ನು ಕಾಣಬಹುದಾಗಿದೆ. ವಚನಕಾರರು ವೇದ – ಶಾಸ್ತ್ರ, ಬ್ರಾಹ್ಮಣರನ್ನು ಹಳಿದಂತೆಯೇ ಇಷ್ಟಲಿಂಗ ಪೂಜೆಯನ್ನು ಹಳಿದದ್ದೂ ಇದೆ. ದಾಸರೇ ‘ನೀನ್ಯಾಕೋ ನಿನ್ನ ಹಂಗ್ಯಾಕೋ’ ಎಂದು ಭಗವಂತನನ್ನೇ ತೆಗಳಿದ ನಿದರ್ಶನಗಳೂ ಇವೆ. ಹಾಗಿದ್ದರೂ ಈ ಸಂಪ್ರದಾಯದ ಜನರಾರೂ ಇಷ್ಟಲಿಂಗ ಪೂಜೆಯನ್ನೋ ಅಥವಾ ಹರಿಯ ಹಂಗನ್ನೋ ಬಿಟ್ಟದ್ದು ಕಾಣಸಿಗುವುದಿಲ್ಲ. ವೈದಿಕ ಸಂಪ್ರದಾಯದ ಭಾಗವೆಂದೇ ಭಾವಿಸಲಾಗಿರುವ ಶಂಕರರೂ ಹೀಗೆ ಹೇಳುತ್ತಾರೆ, ‘ಷಡಗಾಂದಿವೇದೋ ಮುಖೇ ಶಾಸ್ತ್ರ – ವಿದ್ಯಾ, ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ…ತತಃ ಕಿಂ ತತಃ ಕಿಂ ತತಃ ಕಿಂ’, ಅಂದರೆ ಮನಸ್ಸು ಗುರುವಿನ ಪಾದಪದ್ಮಗಳಲ್ಲಿ ಸ್ಥಿರವಾಗದಿದ್ದರೆ, ವೇದ, ವೇದಾಂಗಗಳು, ಕವಿತ್ವ ಇವೆಲ್ಲವೂ ವ್ಯರ್ಥ ಎಂದಾಗಿದೆ. ಶಂಕರರು ವೇದಶಾಸ್ತ್ರಗಳನ್ನು ವ್ಯರ್ಥವೆಂದು ಹೇಳಿದ್ದಾರೆ, ಹಾಗಾಗಿ ಇನ್ನು ನಾವು ವೇದಶಾಸ್ತ್ರಗಳನ್ನು ಓದುವುದನ್ನು ನಿಲ್ಲಿಸುತ್ತೇವೆ ಎಂದು ಅದ್ವೈತ ಸಂಪ್ರದಾಯವನ್ನು ಅನುಸರಿಸುವ ಯಾರೂ ವೇದಶಾಸ್ತ್ರಗಳ ಅಧ್ಯಯನವನ್ನು ವ್ಯರ್ಥವೆಂದು ಕೈಬಿಟ್ಟದ್ದು ಕಾಣಬರುವುದಿಲ್ಲ. ಇದೇ ರೀತಿಯಲ್ಲಿ ವಚನ ಸಂಪ್ರದಾಯಕ್ಕೆ ಸೇರಿದವರಾಗಲಿ, ದಾಸ ಸಂಪ್ರದಾಯಕ್ಕೆ ಸೇರಿದವರಾಗಲಿ ಪೂಜೆ – ಪುನಸ್ಕಾರ ಮೊದಲಾದ ಆಚಾರಗಳನ್ನು ಶ್ರದ್ಧೆ ಮತ್ತು ನಿಷ್ಠೆಗಳೊಡನೆ ಮಾಡುವುದು ಕಂಡುಬರುತ್ತದೆ. ಈ ರೀತಿಯ ಜನರನ್ನು ಸುಧಾರಣಾವಾದಿಗಳ ಪ್ರಕಾರ ವಚನ, ದಾಸಪದ್ಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ದಾರಿ ತಪ್ಪಿದ ಭ್ರಷ್ಟರು ಎನ್ನಬೇಕಾಬಹುದು ಅಥವಾ ಆಚಾರಗಳನ್ನು ಹಳಿಯುವ ವಚನ, ದಾಸಪದ್ಯ, ಶ್ಲೋಕಗಳನ್ನು ಬಾಯಿಪಾಠ ಮಾಡಿಕೊಂಡು ಇದರ ಬಗ್ಗೆ ಚಿಂತನೆ ನಡೆಸುತ್ತಲೇ ಗಂಭೀರವಾಗಿ ಆಚಾರವನ್ನು ಕೈಗೊಳ್ಳುವ ಇವರನ್ನು ‘ಕಪಟಿ, ಆಷಾಢಭೂತಿ’ ಎಂದೂ ಆಧುನಿಕರು ಜರೆಯುತ್ತಾರೆ. ಆದರೆ ಈ ಎಲ್ಲ ವಚನ, ದಾಸಪದ್ಯಗಳು ಗೊತ್ತಿದ್ದೂ ಇನ್ನಷ್ಟು ಗಂಭೀರವಾಗಿ ಈ ಆಚಾರಗಳಲ್ಲಿ ತಮ್ಮನ್ನು ತಾವು ತೊಡಗಿಕೊಂಡಿರುವ ಈ ಜನರನ್ನು ಆಷಾಢಭೂತಿ ಎಂದೋ, ಅಷ್ಟೇ ಅಲ್ಲದೇ ತಲತಲಾಂತರದಿಂದ ನಡೆದುಕೊಂಡು ಬಂದು ಅನೇಕ ಜ್ಞಾನಿಗಳನ್ನು ನಮಗೆ ಕೊಟ್ಟ ಈ ರೀತಿಯ ಸಂಪ್ರದಾಯಗಳನ್ನು ಭ್ರಷ್ಟ ಪರಂಪರೆಗಳೆಂದೋ ಕರೆಯುವುದು ಅಷ್ಟು ಸೂಕ್ತವೆಂಬಂತೆ ತೋರುವುದಿಲ್ಲ. ಬದಲಾಗಿ ಇವರನ್ನು ಅರ್ಥಮಾಡಿಕೊಳ್ಳಬೇಕೆಂದರೆ ಬೇರೊಂದು ದೃಷ್ಟಿಕೋನವು ಬೇಕಾಗುತ್ತದೆ.
ಆಚಾರದ ಜಗತ್ತು ಮತ್ತು ಮುಕ್ತಿ ಮಾರ್ಗ
ಸುಧಾರಣಾವಾದಿಗಳು ಆಗಾಗ ಉಲ್ಲೇಖಿಸುವ ಈ ವಚನಗಳನ್ನು ಮತ್ತು ದಾಸ ಪದ್ಯಗಳನ್ನು ಇಲ್ಲಿ ಇನ್ನೊಮ್ಮೆ ಪರಿಶೀಲಿಸಿ ನೋಡೋಣ. ಮೇಲ್ನೋಟಕ್ಕೆ ಈ ವಚನಗಳು ಮತ್ತು ದಾಸರ ಪದಗಳು ಆಚಾರಗಳನ್ನೆಲ್ಲ ಕೈಬಿಟ್ಟುಬಿಡಿ ಎಂದು ಹೇಳುವಂತೆ ತೋರಿದರೂ, ಕೂಲಂಕಷವಾಗಿ ಪರಿಶೀಲಿಸಿದಾಗ ಇವುಗಳು ಹಾಗೆ ಹೇಳುತ್ತಿಲ್ಲ. ಶಾಸ್ತ್ರ ಪುರಾಣಗಳು, ಪೂಜೆ – ಪುನಸ್ಕಾರ ಮೊದಲಾದ ಆಚಾರಗಳು ನಿರರ್ಥಕವೆಂಬುದು ಇವರ ಅಭಿಪ್ರಾಯವಲ್ಲ. ಆದರೆ ಈ ಆಚಾರಗಳನ್ನು ಮಾಡುವ ಮುಖಾಂತರ ನಾವು ಏನನ್ನು ಪಡೆಯಬೇಕಿತ್ತು ಅದನ್ನು ಪಡೆಯದಿದ್ದರೆ ಆಗ ಅದು ವ್ಯರ್ಥವಾಗುತ್ತದೆ ಎನ್ನುವುದು ಇವರ ಆಶಯವಾಗಿದೆ. ಇದನ್ನು ಕೆಲ ಉದಾಹರಣೆಗಳ ಮುಖಾಂತರ ಇಲ್ಲಿ ಗ್ರಹಿಸಿಕೊಳ್ಳಲು ಪ್ರಯತ್ನಿಸೋಣ. ಶಾಸ್ತ್ರಗಳ ಅಧ್ಯಯನ, ಪುರಾಣ ಪ್ರವಚನವೆಲ್ಲ ಯಾವಾಗ ವ್ಯರ್ಥವಾಗುತ್ತದೆ ಎಂಬುದನ್ನು ಮುಂದೆ ಪುರಂದರ ದಾಸರು ಹೀಗೆ ವಿವರಿಸುತ್ತಾರೆ – ‘ನಾರದ ವರದ ಪುರಂದರ ವಿಟ್ಠಲನ ಸೇರಿಕೊಂಡು ತಾ ಪಡೆಯುವ ತನಕ ದೊರೆಯದಣ್ಣ ಮುಕುತಿ’, ಅಂದರೆ ವೇದ – ಪುರಾಣಗಳ ಪ್ರವಚನ, ಸುಧಾಪಾಠ ಇತ್ಯಾದಿಗಳ ಮುಖಾಂತರ ಪುರಂದರ ವಿಟ್ಠಲನನ್ನು ಸಾಕ್ಷಾತ್ಕರಿಸಿಕೊಂಡು ಅವನಲ್ಲಿ ಸೇರಿ ಒಂದಾಗುವುದು ಶಾಸ್ತ್ರಾಧ್ಯಯನ, ಪುರಾಣ ಪ್ರವಚನಗಳ ಗುರಿ. ಆದರೆ ಕೇವಲ ವೇದ – ಪುರಾಣಗಳನ್ನು ಓದಿಕೊಂಡಿದ್ದು, ಪುರಂದರ ವಿಟ್ಠಲನನ್ನು ಸೇರುವ ಗುರಿಯನ್ನೇ ಮರೆತರೆ, ಅಥವಾ ವಿಟ್ಠಲನನ್ನು ಸಾಕ್ಷಾತ್ಕರಿಸಿಕೊಳ್ಳದಿದ್ದರೆ ಆಗ ಅದು ವ್ಯರ್ಥವಾಗುತ್ತದೆ ಎನ್ನುವುದು ದಾಸರ ಅಭಿಪ್ರಾಯ. ಇಲ್ಲಿ ನೀವು ಮಾಡುತ್ತಿರುವ ಪೂಜೆ ಪುನಸ್ಕಾರಗಳು, ವೇದಶಾಸ್ತ್ರಗಳ ಅಭ್ಯಾಸವು ನಿರರ್ಥಕವೆಂದೋ ಅದನ್ನು ಕೈಬಿಡಿ ಎಂದೋ ದಾಸರು ಸೂಚಿಸುತ್ತಿಲ್ಲ. ಅದೇ ರೀತಿಯಲ್ಲಿ ವಚನಕಾರರೂ, ಶಿವಪೂಜೆಯ ಮೂಲಕ ಏನನ್ನೋ ಪಡೆಯಬೇಕೋ ಅದನ್ನು ಪಡೆಯದೇ ಕೇವಲ ಇಷ್ಟಲಿಂಗ ಪೂಜೆಯನ್ನೇ ಮಾಡಿಕೊಂಡಿದ್ದರೆ ಆಗ ಅದು ವ್ಯರ್ಥವಾಗುತ್ತದೆ ಎನ್ನುತ್ತಾರೆ. ವಚನಕಾರರೂ ಇದೇ ಹಿನ್ನೆಲೆಯಲ್ಲೇ ವೇದ ಶಾಸ್ತ್ರಗಳನ್ನು ವ್ಯರ್ಥವೆಂದು ಹೇಳುವುದನ್ನು ಕಾಣಬಹುದಾಗಿದೆ,
“ಕುಲವಳಿದು ಛಲವಳಿದು ಮದವಳಿದು ಮತ್ಸರವಳಿದು, ಗುರುಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ, ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬಲ್ಲಡೆ, ಶಿವಗತಿ ಸಿಕ್ಕುವುದು”.
ಅಂದರೆ ಯಾವುದನ್ನೋ ಮಾಡುತ್ತಾ ಶಿವಗತಿ ಸಿಗುವುದು ಮುಖ್ಯ. ವೇದಶಾಸ್ತ್ರಗಳನ್ನು ಪಠಿಸಿ ಶಿವಗತಿ ಸಿಗಲಿಲ್ಲವೆಂದಾಗ ವೇದಶಾಸ್ತ್ರಗಳ ಅಧ್ಯಯನ ವ್ಯರ್ಥ. ಆದರೆ ವೈದಿಕ ಮಾರ್ಗದ ಮುಖಾಂತರ ಶಿವಗತಿ ಸಿಕ್ಕರೆ ವೇದಶಾಸ್ತ್ರಗಳು ವ್ಯರ್ಥವಾಗುವುದಿಲ್ಲ. ಈ ನಿಟ್ಟಿನಲ್ಲಿಯೇ ಶಂಕರರೂ ಗುರುಭಕ್ತಿ ಸಿದ್ಧಿಸದಿದ್ದರೆ, ವೇದಶಾಸ್ತ್ರಗಳನ್ನು ಓದಿಯೂ ಅದು ವ್ಯರ್ಥವೆನ್ನುವುದು. ಅಂದರೆ ವಚನಕಾರರಾಗಲಿ, ದಾಸರಾಗಲಿ ಅಥವಾ ವೈದಿಕರಾಗಲಿ ಈ ಆಚಾರಗಳನ್ನು ಬಿಡಿ ಎಂದು ಹೇಳುತ್ತಿಲ್ಲ. ಬದಲಾಗಿ ಈ ಆಚಾರಗಳನ್ನು ಮಾಡಲೇಬೇಕು, ಆದರೆ ಈ ಆಚಾರಗಳನ್ನು ಮಾಡುವ ಮುಖಾಂತರ ಪರಮಾರ್ಥವನ್ನು ಸಾಕ್ಷಾತ್ಕರಿಸಿಕೊಂಡು ಅರಿತುಕೊಳ್ಳದಿದ್ದಲ್ಲಿ ಇದನ್ನೆಲ್ಲ ಮಾಡುವುದು ವ್ಯರ್ಥವೇ ಎಂದು ಹೇಳುತ್ತಿದ್ದಾರೆ.
ಅಂದರೆ ಆಚಾರಗಳನ್ನು ಮಾಡುವಾಗ ನಮಗೆ ಯಾವ ದೃಷ್ಟಿಯಿರಬೇಕು ಎನ್ನುವುದನ್ನು ಈ ಪರಂಪರೆಗಳು ಸೂಚಿಸುತ್ತಿವೆ. ಅಂದರೆ ಭಕ್ತನಾಗಿ ಒಬ್ಬನು ಭಕ್ತಿಪರಂಪರೆಯ ಭಾಗವಾದಾಗ ಆತನು ಇಷ್ಟಲಿಂಗ ಪೂಜೆಯನ್ನೋ, ಹರಿನಾಮ ಕೀರ್ತನೆಯನ್ನೋ ಅಥವಾ ಇನ್ನಿತರ ಪೂಜೆ-ಪುನಸ್ಕಾರಗಳನ್ನೋ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡಲೇಬೇಕು. ಹಾಗೆ ಭಕ್ತನಾದವನು ಇದೆಲ್ಲವನ್ನೂ ಮಾಡುತ್ತಾ, ಪರತತ್ತ್ವವನ್ನು ಸಾಕ್ಷಾತ್ಕರಿಸಿಕೊಳ್ಳುವತ್ತ ಸಾಗಬೇಕು, ಅದು ಸಾಧ್ಯವಾಗದಿರುವಾಗ ತನ್ನನ್ನು ತಾನು ವಿಮರ್ಶಿಸಿಕೊಳ್ಳಲು ಬೇಕಾದ ಬೌದ್ಧಿಕ ಪರಿಕರಗಳನ್ನು ಈ ವಚನಗಳು ಮತ್ತು ದಾಸಪದಗಳು ಒದಗಿಸುತ್ತವೆ. ಏಕೆಂದರೆ ದಾಸರು ಮತ್ತು ವಚನಕಾರರೂ, ಇದೇ ಅಧ್ಯಾತ್ಮದ ಮಾರ್ಗದಲ್ಲಿ ನಡೆದಿದ್ದಾರೆ. ಮುಂದೆ, ಇದೇ ದಾರಿಯಲ್ಲಿ ನಡೆಯುವ ಭಕ್ತರಿಗೂ ಈ ದಾರಿಯಲ್ಲಿ ಬರುವ ಅಡೆತಡೆಗಳ ಕುರಿತು ಆಲೋಚಿಸುವ, ವಿಮರ್ಶಿಸುವ ಸಲುವಾಗಿ, ಇಲ್ಲಿ ಬರುವ ಅಡೆತಡೆಗಳ ಕುರಿತು ಅವರಿಗಿರುವ ಅನುಭವ ಮತ್ತು ಜ್ಞಾನವನ್ನು ವಚನ ಮತ್ತು ದಾಸ ಸಾಹಿತ್ಯಗಳ ರೂಪದಲ್ಲಿ ನಮಗೆ ಕೊಟ್ಟಿದ್ದಾರೆ. ಈ ದೃಷ್ಟಿಯಲ್ಲಿ ನೋಡಿದಾಗ ವಚನಗಳೋ ಅಥವಾ ದಾಸರ ಪದ್ಯಗಳೋ ಸಮಾಜದ ಸುಧಾರಣೆಯನ್ನು ಮಾಡುವ ಸಲುವಾಗಿ ಬಂದವಲ್ಲ. ಅನೇಕ ಕಡೆಗಳಲ್ಲಿ ವಚನಕಾರರು, ದಾಸರು ಮತ್ತು ಇತರ ಭಾರತೀಯ ಸಂಪ್ರದಾಯಗಳು ‘ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ನೀವು ಸಂತೈಸಿಕೊಳ್ಳಿ’ ಎನ್ನುತ್ತಾರೆ. ಸಮಾಜಸುಧಾರಣೆಯಾದರೋ ಲೋಕದಲ್ಲೊಂದು ಡೊಂಕಿದೆ, ಅದನ್ನೇ ತಿದ್ದಬೇಕೆಂದು ಹೊರಟಿರುವುದು. ಆದರೆ ಭಾರತೀಯ ಪರಂಪರೆಗಳು ಇದಕ್ಕೆ ತದ್ವಿರುದ್ಧವಾಗಿ ಹಾಗೆ ಮಾಡದೆ, ನಮ್ಮ ನಮ್ಮ ತನುವನ್ನು, ಚಿತ್ತವನ್ನು ಮೊದಲು ಸಂತೈಸಿಕೊಳ್ಳಬೇಕು ಎನ್ನುತ್ತಿವೆ. ಹಾಗಿರುವಾಗ ಈ ಸಮಾಜ ಸುಧಾರಣೆಯ ನಿರೂಪಣೆ ನಮ್ಮ ಭಾರತೀಯ ಸಂಪ್ರದಾಯಗಳ ಮೂಲದಿಂದಾಗಲಿ, ಭಕ್ತರ ಅನುಭವದಿಂದಾಗಲಿ ಬರುತ್ತಿಲ್ಲವೆನ್ನುವುದು ಸ್ಪಷ್ಟ. ಹಾಗಿದ್ದರೆ ಈ ನಿರೂಪಣೆಯ ಮೂಲವೇನು? ವಚನಗಳು ಮತ್ತು ದಾಸರ ಪದಗಳು ಸಮಾಜಸುಧಾರಣೆಯ ನಿರೂಪಣೆಯ ಭಾಗವೇಕೆ ಆದವು? ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
ಯುರೋಪಿನ ಅನುಭವ ಮತ್ತು ನಮ್ಮ ಪರಂಪರೆಗಳ ನಿರೂಪಣೆ
ಇದನ್ನು ಗ್ರಹಿಸಿಕೊಳ್ಳಬೇಕಾದರೆ, ಅಧ್ಯಾಸಕ್ಕೆ ಮರಳದೆ ನಮಗೆ ಬೇರೆಯ ದಾರಿಯಿಲ್ಲ. ಈ ಹಿಂದೆ ಚರ್ಚಿಸಿರುವಂತೆ ಭಾರತವನ್ನು ವಸಾಹತು ಕಾಲಘಟ್ಟದಲ್ಲಿ ಯುರೋಪಿನ ಜನರು ತಮ್ಮ ಅನುಭವಕ್ಕೆ ಕಂಡಂತೆ ನಿರೂಪಿಸಿದರು. ಯುರೋಪಿಯನ್ನರ ಸಂಸ್ಕೃತಿಯನ್ನು ಮತ್ತು ಅವರ ಅನುಭವವನ್ನು ಕ್ರಿಶ್ಚಿಯಾನಿಟಿ ಎಂಬ ರಿಲಿಜನ್ ಬಹುಮುಖ್ಯವಾಗಿ ರೂಪಿಸಿದೆ. ಕ್ರಿಶ್ಚಿಯಾನಿಟಿಯಲ್ಲಿ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಎಂಬ ಎರಡು ಗುಂಪುಗಳಿದ್ದವು. ಕ್ಯಾಥೋಲಿಕ್ ಪ್ರಿಸ್ಟ್ಗಳು ಗಾಡ್ನ ವಾಣಿಯನ್ನು ಭ್ರಷ್ಟಗೊಳಿಸಿದ್ದಲ್ಲದೇ, ಜನರನ್ನು ಗಾಡ್ ಮಾರ್ಗದಿಂದ ಚ್ಯುತರನ್ನಾಗಿಸಿದ್ದಾರೆ ಎಂದು ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ನರು ವಾದಿಸಿದ್ದರು. ಹಾಗಾಗಿ ಕ್ಯಾಥೋಲಿಕ್ರ ಕಪಿಮುಷ್ಟಿಯಿಂದ ಸಮಾಜವನ್ನು ಬಿಡಿಸಿ, ಸಮಾಜವನ್ನು ಸುಧಾರಿಸಬೇಕು ಎನ್ನುವುದು ಪ್ರಾಟೆಸ್ಟೆಂಟ್ರ ಚಳವಳಿಯ ಉದ್ದೇಶವಾಗಿತ್ತು.
ಈ ರೀತಿಯಾದ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಯುರೋಪಿಯನ್ನರು ಭಾರತೀಯ ಸಂಪ್ರದಾಯಗಳನ್ನೂ ಇದೇ ಮಾದರಿಯಲ್ಲಿಯೇ ಗ್ರಹಿಸಿಕೊಂಡರು. ಯುರೋಪಿಯನ್ನರು ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ರ ಮಾದರಿಯಲ್ಲಿ ಭಾರತದಲ್ಲೂ ಕಿತ್ತಾಟಗಳಿದ್ದವು ಎಂದು ಭಾವಿಸಿಕೊಂಡರು. ಬ್ರಾಹ್ಮಣರನ್ನು ಮತ್ತು ವೈದಿಕ ಸಂಪ್ರದಾಯವನ್ನು ಕ್ಯಾಥೋಲಿಕ್ ಗುಂಪಿನಂತೆ ಕಂಡು, ಬ್ರಾಹ್ಮಣರು ಶುದ್ಧ ಮೂಲ ಹಿಂದೂ ರಿಲಿಜನ್ ಅನ್ನು ಭ್ರಷ್ಟಗೊಳಿಸಿದ್ದಾರೆ ಎಂದುಕೊಂಡರು. ಇನ್ನು ವೈದಿಕ ಬ್ರಾಹ್ಮಣರ ವಿರುದ್ಧವಾಗಿ ಬೌದ್ಧ, ಜೈನ, ಶರಣರು ಮೊದಲಾದವರು ಪ್ರಾಟೆಸ್ಟೆಂಟರ ಮಾದರಿಯಲ್ಲಿ ಬಂಡಾಯವೆದ್ದರು ಎಂದು ಗ್ರಹಿಸಿದರು. ಇದಕ್ಕೆ ಪೂರಕವಾಗುವಂತೆ ಭಾಸವಾಗುವ ಕೆಲ ವಚನಗಳನ್ನೋ ದಾಸರ ಪದಗಳನ್ನೋ ಉಲ್ಲೇಖಿಸುತ್ತಾ ಯುರೋಪಿನ ಅನುಭವವನ್ನು ಕ್ರಮೇಣ ದೃಢಪಡಿಸಲಾಯಿತು. ಯುರೋಪಿಯನ್ನರಿಂದ ಭಾರತೀಯರು ಈ ಕಥೆಯನ್ನು ಕ್ರಮೇಣ ತಮ್ಮದಾಗಿಸಿಕೊಂಡರು. ಆದರೆ ಹಗ್ಗವನ್ನು ಹಾವೆಂದು ಭಾವಿಸುವ ಅಧ್ಯಾಸದಂತೆಯೇ, ಭಕ್ತನೊಬ್ಬನು ಅಧ್ಯಾತ್ಮ ಮಾರ್ಗದಲ್ಲಿ ತನ್ನ ಅಡತಡೆಗಳ ಕುರಿತು, ತಾನು ಮಾಡುತ್ತಿರುವ ಆಚಾರಗಳ ಕುರಿತು ವಿಮರ್ಶಿಸಿಕೊಳ್ಳಲು ಇರುವ ಬೌದ್ಧಿಕ ಪರಿಕರಗಳನ್ನು ಸಮಾಜ ಸುಧಾರಣೆಯ ಮಾತುಗಳೆಂದು ಯುರೋಪಿನವರು ಗ್ರಹಿಸಿದ್ದು ಅಧ್ಯಾಸವೇ ಆಗಿದೆ. ಈ ಅಧ್ಯಾಸದಿಂದ ಹೊರಗೆ ಬಂದಾಗ ಮಾತ್ರ ಸಾವಿರಾರು ಭಕ್ತರು ಭಕ್ತಿಯೆಂದಾಗ ಏನನ್ನು ಮಾಡುತ್ತಿದ್ದಾರೆ ಮತ್ತು ವಚನ, ದಾಸರ ಪದ್ಯಗಳು ಇತ್ಯಾದಿಗಳು ಏನನ್ನು ಹೇಳುತ್ತಿವೆ ಎನ್ನುವುದು ನಮಗೆ ಅರ್ಥವಾಗಲು ಸಾಧ್ಯ.
- ಪ್ರೊ. ಎಂ.ಎಸ್. ಚೈತ್ರ
ನಿರ್ದೇಶಕ ಮತ್ತು ಸೀನಿಯರ್ ಫೆಲೋ, ಫೌಂಡೇಶನ್ ಫಾರ್ ಸ್ಟಡಿ ಆಫ್ ಇಂಡಿಯನ್ ಕಲ್ಚರ್, ಬೆಂಗಳೂರು.
ಸಹಪ್ರಾಧ್ಯಾಪಕ, ಯುನಿವರ್ಸಿಟಿ ಆಫ್ ಟ್ರಾನ್ಸ್-ಡಿಸಿಪ್ಲಿನರಿ ಹೆಲ್ತ್ ಸೈನ್ಸ್ ಮತ್ತು ಟೆಕ್ನಾಲಜಿ, ಬೆಂಗಳೂರು
