ಅಭಾಸಾಪ ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯಿಂದ ಮಹಾಭಾರತದ ವಿಶಿಷ್ಟ ಚಿತ್ರಣದ ರಸದೌತಣ
ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ಅಭಾಸಾಪ) ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಪ್ರಕ್ಷುಬ್ಧ ರಾಧೇಯ’ ಏಕವ್ಯಕ್ತಿ ತಾಳಮದ್ದಲೆ ಕಾರ್ಯಕ್ರಮವು ಪ್ರೇಕ್ಷಕರ ಮನಸ್ಸಿನಲ್ಲಿ ಮಹಾಭಾರತದ ವಿಶಿಷ್ಟ ಚಿತ್ರಣವನ್ನು ಮೂಡಿಸುವ ಮೂಲಕ ಯಶಸ್ವಿಯಾಗಿ ನೆರವೇರಿತು.
ಆಗಸ್ಟ್ ತಿಂಗಳ ಮೊದಲ ಶನಿವಾರದಂದು ರಾಜಾಜಿನಗರದ ಪ್ರಸಿದ್ಧ ಕುಮಾರವ್ಯಾಸ ಮಂಟಪದಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಹನಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಆಗಮಿಸಿದ್ದ ಕಲಾಭಿಮಾನಿಗಳಿಂದ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಆಸನಗಳು ಭರ್ತಿಯಾಗಿದ್ದರಿಂದ ಅನೇಕ ಕಲಾಪ್ರೇಮಿಗಳು ನೆಲದ ಮೇಲೆಯೇ ಆಸೀನರಾಗಿ, ಕಾರ್ಯಕ್ರಮದ ಕೊನೆಯ ಕ್ಷಣದವರೆಗೂ ತದೇಕಚಿತ್ತದಿಂದ ಕಲಾಪ್ರದರ್ಶನವನ್ನು ಆಸ್ವಾದಿಸಿದ್ದು ವಿಶೇಷವಾಗಿತ್ತು.
ಕರ್ಣನ ಅಂತರಂಗದ ದ್ವಂದ್ವಗಳ ವಾಚಿಕಾಭಿನಯ:
ಮಹಾಭಾರತದ ಮಹಾನಾಯಕ ಕರ್ಣನ ಇಡೀ ಬದುಕಿನ ದ್ವಂದ್ವ, ಕೌರವನ ಜೊತೆಗಿನ ಮೈತ್ರಿ ಹಾಗೂ ಆತನ ಕರುಣಾಜನಕ ಸ್ಥಿತಿಯನ್ನು ‘ಪ್ರಕ್ಷುಬ್ಧ ರಾಧೇಯ’ ಆಖ್ಯಾನದ ಮೂಲಕ ಪ್ರಸಿದ್ಧ ಕಲಾವಿದ ಶ್ರೀ ದಿವಾಕರ ಹೆಗಡೆ ಕೆರೆಹೊಂಡ ಅವರು ಅತ್ಯಂತ ಪ್ರಬುದ್ಧವಾಗಿ ಪ್ರಸ್ತುತಪಡಿಸಿದರು. ಬದುಕಿಗೆ ಕೌರವನನ್ನು ಆಶ್ರಯಿಸಿದರೂ ಮುಕ್ತಿಗೆ ಕೃಷ್ಣನನ್ನೇ ಅವಲಂಬಿಸುವ ರಾಧೇಯನ ಮನೋವೇದನೆ, ಆತನ ಸಂಸಾರ, ದಾನಗುಣ ಹಾಗೂ ಧರ್ಮಸಂಕಟಗಳನ್ನು ಹೆಗಡೆಯವರು ತಮ್ಮ ಶಕ್ತಿಯುತ ವಾಚಿಕಾಭಿನಯದ ಮೂಲಕ ಪ್ರೇಕ್ಷಕರ ಕಣ್ಣಮುಂದೆ ಜೀವಂತವಾಗಿ ಸಾಕಾರಗೊಳಿಸಿದರು. ಕಥೆಯ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುತ್ತಾ, ಇಡೀ ಕುರುಕ್ಷೇತ್ರ ಯುದ್ಧಭೂಮಿಯ ಕಲ್ಪನೆಯನ್ನು ರಸಿಕರ ಅಂತರಂಗದಲ್ಲಿ ಮೂಡಿಸುವಲ್ಲಿ ಅವರು ಯಶಸ್ವಿಯಾದರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಪುರಸ್ಕೃತರಾದ ಪ್ರಸಿದ್ಧ ಯುವ ಭಾಗವತ ಶ್ರೀ ಅನಂತ ಹೆಗಡೆ ದಂತಳಿಗೆಯವರ ಕಂಠಸಿರಿ ಹಾಗೂ ಶ್ರೀ ಅನಂತ ಪದ್ಮನಾಭ ಫಾಟಕ್ ಕಾರ್ಕಳ ಅವರ ಮದ್ದಲೆಯ ನಾದ ಸಂಗಮವು ಪ್ರಸಂಗದ ಭಾವ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿತು.
ಗಣ್ಯರ ಉಪಸ್ಥಿತಿ- ಗೌರವ ಸಮರ್ಪಣೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಂಗಳೂರು ಮಹಾನಗರದ ಅಧ್ಯಕ್ಷ ಹಾಗೂ ಖ್ಯಾತ ಹಾಸ್ಯ ಸಾಹಿತಿ ಶ್ರೀ ಎಂ. ಎಸ್. ನರಸಿಂಹಮೂರ್ತಿಯವರು ಕಲಾವಿದರನ್ನು ಗೌರವಿಸಿ ಸನ್ಮಾನಿಸಿದರು.
ಸಮಾರಂಭದಲ್ಲಿ ವಿಭು ಅಕಾಡೆಮಿಯ ಸಂಸ್ಥಾಪಕಿ, ಸಂಸ್ಕೃತ ಹಾಗೂ ಭಾರತೀಯ ಸಂಸ್ಕೃತಿಯ ವಿದ್ವಾಂಸೆಯಾದ ಶ್ರೀಮತಿ ವಿ. ಬಿ. ಆರತಿ ಮತ್ತು ಚಾಣಕ್ಯ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರು ಹಾಗೂ ಪ್ರೇಕ್ಷಾ ಪ್ರತಿಷ್ಠಾನದ ರೂವಾರಿಗಳಾದ ಶ್ರೀ ಅರ್ಜುನ್ ಭಾರದ್ವಾಜ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾಹಿತ್ಯ-ಕಲಾಪ್ರಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಜ್ಯೋತಿ ಪ್ರಸಾದ್ ಅವರು ಸ್ವಾಗತಿಸಿ, ಕಲಾವಿದರನ್ನು ಪರಿಚಯಿಸಿದರು. ಸಚಿನ್ ಮುಂಗಿಲ ಕಾರ್ಯಕ್ರಮ ನಿರೂಪಿಸಿ, ಶ್ರೀ ರಮೇಶ್ ತರೂರ್ ವಂದಿಸಿದರು. ಶಾಂತಿಮಂತ್ರದ ನಂತರ ಭೋಜನದೊಂದಿಗೆ ಸಭೆ ಮುಕ್ತಾಯಗೊಂಡಿತು.
ಈ ಕಾರ್ಯಕ್ರಮಕ್ಕೆ ಶ್ರೀ ಸದ್ಯೋಜಾತ ಭಟ್ಟರ ‘ಈಶಾನಾ ಸಾಂಸ್ಕೃತಿಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ’ ಸಹಭಾಗಿತ್ವ ನೀಡಿತ್ತು. ಸಂಘಟಕರ ಶ್ರಮ ಹಾಗೂ ಕಲಾವಿದರ ಶ್ರೇಷ್ಠ ಪ್ರದರ್ಶನದಿಂದಾಗಿ ಈ ಏಕವ್ಯಕ್ತಿ ತಾಳಮದ್ದಲೆಯು ಬೆಂಗಳೂರಿನ ಸಾಂಸ್ಕೃತಿಕ ವಲಯದಲ್ಲಿ ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತಹ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿದೆ.
ವರದಿ: ಜ್ಯೋತಿ ಪ್ರಸಾದ್
ಕಾರ್ಯದರ್ಶಿ- ಅಭಾಸಾಪ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ
