- ಪರಮಾನಂದ ಎಂ.ಎಸ್.
ಬಹುಶಃ ಮೇ 15ನೇ ತಾರೀಕಿನಂದು ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಅವರು ಪ್ರಕರಣವೊಂದರ ವಿಚಾರಣೆ ವೇಳೆ “ನಿರುದ್ಯೋಗಿಗಳು ಜಿರಳೆಗಳು (ಕಾಕ್ರೋಚ್) ಇದ್ದಂತೆ” ಎಂಬ ವಾಕ್ಯವನ್ನು ಬಳಸಿದರು ಎಂಬ ಒಂದೇ ಕಾರಣಕ್ಕೆ ಶುರುವಾದ ಕಾಕ್ರೋಚ್ ಜನತಾ ಪಾರ್ಟಿಯ ಸಾಮಾಜಿಕ ಜಾಲತಾಣದ ಕಥೆ-ವ್ಯಥೆಯನ್ನು ಅಭಿಜಿತ್ ದೀಪ್ಕೆ ಜನರೆದುರು ತೆರೆದಿಟ್ಟರು.
ಅಭಿಜಿತ್ ದೀಪ್ಕೆ ಎಂಬ ವ್ಯಕ್ತಿ ಈ ಹಿಂದೆ ಆಮ್ ಆದ್ಮಿ ಪಾರ್ಟಿಯ ಸಾಮಾಜಿಕ ಜಾಲತಾಣವನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಎಂಬುದು ಎಲ್ಲರಿಗೂ ತಿಳಿದ ಮಾಹಿತಿಯಾಗಿದೆ. ಆದರೆ ಇದೇ ರೀತಿಯಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಹೆಸರಿನಲ್ಲಿ ಇಡೀ ದೇಶದಲ್ಲಿ ಒಂದು ಚಳವಳಿ ರೂಪುಗೊಳ್ಳುತ್ತದೆ ಎಂಬ ಭ್ರಮೆ ಯಾರಿಗೂ ಇರಲಿಲ್ಲ, ಸ್ವತಃ ಕೇಂದ್ರ ಸರ್ಕಾರಕ್ಕೂ ಕೂಡ… ಆದರೆ ಒಂದು ಸಮಸ್ಯೆ ಸೃಷ್ಟಿಯಾಗುತ್ತದೆ ಎಂಬ ವಿಚಾರ ಕೇಂದ್ರ ಸರ್ಕಾರದ ಗಮನದಲ್ಲಿತ್ತು. ಇದು ಪ್ರಾಮಾಣಿಕ ಚಳವಳಿಯ ಸಂಘಟನೆಯಾಗಿರಲಿಲ್ಲ, ಬದಲಾಗಿ ಒಂದು ರಾಜಕೀಯ ಪ್ರೇರಿತ ವಿರೋಧಪಕ್ಷಗಳ ಮತ್ತು ಕಮ್ಯುನಿಸ್ಟ್ ಸಂಘಟನೆಯ ಮುಖವಾಡ ಎಂಬುದು ಎಲ್ಲರಿಗೂ ತಿಳಿದಿತ್ತು. ಕಾಕ್ರೋಚ್ ಜನತಾ ಪಾರ್ಟಿಗೆ ಸರಿಯಾದ ಸ್ಪಂದನೆ ಎಲ್ಲಾ ರಾಜ್ಯಗಳಲ್ಲಿ ಸಿಗಲಿಲಿಲ್ಲ, ಕರ್ನಾಟಕದಲ್ಲಿ ಕೂಡ.
ಈ ಹಿಂದೆ ರೂಪಿಸಿದ ಹಲವಾರು ಹೋರಾಟಗಳಲ್ಲಿ ಕೇಂದ್ರ ಸರ್ಕಾರವನ್ನು ಉರುಳಿಸುವಲ್ಲಿ ವಿಫಲವಾದ ವಿರೋಧಪಕ್ಷಗಳು ಮತ್ತು ಕಮ್ಯುನಿಸ್ಟರಿಗೆ ಕೇಂದ್ರ ಸರ್ಕಾರವನ್ನು ಮಣಿಸಲು ನಮ್ಮಿಂದ ಸಾಧ್ಯವಿಲ್ಲ, ಹಾಗಾಗಿ ಈ ರೀತಿಯ ಒಂದು ಅಡ್ಡದಾರಿಯನ್ನು ಹಿಡಿಯಬೇಕೆಂಬುದು ಸ್ಪಷ್ಟವಾಗಿ ತಿಳಿದಿತ್ತು. ಇದೇ ಸಂದರ್ಭದಲ್ಲಿ ಬಯಲಾದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಮಸ್ಯೆಯನ್ನು ಬೃಹತ್ ಆಗಿ ಚಿತ್ರಿಸುವ ಒಂದು ಹುನ್ನಾರ ಮತ್ತು ಅದನ್ನು ಜನರ ಮುಂದೆ ತರುವ ಕುತಂತ್ರವನ್ನು ವಿರೋಧ ಪಕ್ಷಗಳೊಂದಿಗೆ ಸೇರಿ ಎಡಪಕ್ಷಗಳು ಸ್ಪಷ್ಟವಾಗಿಯೇ ಹೆಣೆದಿದ್ದವು.
ಕೇವಲ ಕಾಕ್ರೋಚ್ ಜನತಾ ಪಾರ್ಟಿಯ ಹೆಸರಿಗೆ ಯುವಕರು ಬರುವುದಿಲ್ಲ ಎಂಬುದನ್ನು ತಿಳಿದಿದ್ದ ಕಾಂಗ್ರೆಸ್, ಎಡಪಂಥೀಯರು ಹಾಗೂ ವಿವಿಧ ವಿರೋಧ ಪಕ್ಷಗಳು ಯುವಜನತೆಯನ್ನು ಆ ಪ್ರತಿಭಟನೆಗೆ ತರುವ ತಂತ್ರವನ್ನು ರೂಪಿಸಿದರು. ಅದರಂತೆ ವಿದ್ಯಾರ್ಥಿ ಸಂಘಟನೆಗಳಾದ SFI, AIDSO, NSUI, JNUನ ಹಳೆಯ ಮತ್ತು ಈಗಿನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಲ್ಲದವರನ್ನು ತಂದು ಈ ಪ್ರತಿಭಟನೆಯಲ್ಲಿ ತುಂಬಿಸಿದರು.
ಜೂನ್ 6ರಂದು ಶುರುವಾದ ಈ ಪ್ರತಿಭಟನೆಗೆ ಸೋನಂ ವಾಂಗ್ಚುಕ್ ಬಂದು ಉಪವಾಸ ಕುಳಿತುಕೊಂಡರು. ಇವರ ಮೂಲ ಉದ್ದೇಶ ಇದ್ದುದು ಮುಂಗಾರು ಅಧಿವೇಶನ ಶುರುವಾಗುವ ವೇಳೆಯಲ್ಲಿ ಸಂಸತ್ತಿನ ಸುತ್ತಮುತ್ತ ಹರತಾಳ ಸೃಷ್ಟಿಸಬೇಕೆಂಬುದು. ಹಾಗಾಗಿಯೇ 20ನೇ ತಾರೀಕಿನಂದು ಸಂಸತ್ ಅಧಿವೇಶನ ಶುರುವಾಗುವ ದಿನ ‘ಸಂಸತ್ ಚಲೋ’ ಎಂಬ ಘೋಷವಾಕ್ಯದೊಂದಿಗೆ ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದಲ್ಲಿ ವಿದ್ಯಾರ್ಥಿಗಳಿಂದಲೇ ಸೃಷ್ಟಿಯಾದ ಅರಾಜಕತೆಯಂತೆ ಭಾರತದಲ್ಲೂ ಸೃಷ್ಟಿಸಬೇಕೆಂಬ ಹುನ್ನಾರ ಇವರ ಮೂಲ ಉದ್ದೇಶವಾಗಿತ್ತು. ಆದರೆ ಇವರು ಕೇಳುತ್ತಿದ್ದುದು ಮಾತ್ರ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ.
ಇದು ನಿಜವಾಗಿಯೂ ನೀಟ್ ಪ್ರಶ್ನೆ ಪತ್ರಿಕೆ ಹಗರಣದಲ್ಲಿ ವಿದ್ಯಾರ್ಥಿಗಳಿಗೆ ಆದ ಅನ್ಯಾಯ ಮತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಪರವಾಗಿ ಕೇಳಲು ಬಂದ ನ್ಯಾಯವೇ? ಅಥವಾ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರವೇ?
ಜೂನ್ 9ರಿಂದ ಜಂತರ್ ಮಂತರ್ ನಲ್ಲಿ ಶುರುವಾದ ಹೋರಾಟದಲ್ಲಿ ಮೊದಲು ಅಭಿಜಿತ್ ದೀಪ್ಕೆ ಹೇಳಿದಂತೆ ”ಇದು ಯಾವುದೇ ರಾಜಕೀಯ ಪ್ರೇರಿತ ಹೋರಾಟವಲ್ಲ, ಕೇವಲ ವಿದ್ಯಾರ್ಥಿಗಳ ಪರವಾದ ಹೋರಾಟ…” ಎಂಬ ಮಾತನ್ನು ಮೊದಲು ಜನರು ನಂಬಿದ್ದರು. ನಂತರ ದಿನದಿಂದ ದಿನಕ್ಕೆ ರಾಜಕಾರಣಿಗಳು ಆ ವೇದಿಕೆಯನ್ನು ಹತ್ತಿ ಇಳಿಯಲು ಶುರು ಮಾಡಿದರು. ಕೇವಲ ರಾಜಕಾರಣಿಗಳು ಮಾತ್ರವಲ್ಲ, ದೇಶದ್ರೋಹಿ ಹೇಳಿಕೆಗಳನ್ನು ಕೊಡುತ್ತಿದ್ದ ಮುಂದಾಳುಗಳೂ ಬರಲಾರಂಭಿಸಿದರು. ಅಲ್ಲಿಗೆ ಇಡೀ ದೇಶಕ್ಕೆ ಇದೊಂದು ಕುತಂತ್ರದ ಹೋರಾಟ ಎಂಬುದು ಸ್ಪಷ್ಟವಾಯಿತು.
ಮೊಹಮ್ಮದ್ ಜುನೈದ್ ಎಂಬ ವ್ಯಕ್ತಿ ತಿಂಗಳಿಗೆ ಕೇವಲ 20 ಸಾವಿರ ರೂ. ಗಳಿಸುತ್ತಿದ್ದು, ಪ್ರತಿಭಟನೆ ವೇಳೆ ದಿನವೊಂದಕ್ಕೆ 10-12 ಲಕ್ಷ ರೂ. ಖರ್ಚು ಮಾಡಿ ಆಹಾರ ವಿತರಣೆ ಮಾಡಿದ್ದ. ಆತನಿಗೆ ಅಷ್ಟು ಹಣ ಎಲ್ಲಿಂದ ಬಂತು ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕು ಎಂದು ಜುನೈದ್ ನೆರೆಮನೆಯವರು ಎಂದು ಹೇಳಿಕೊಂಡಿರುವ ವ್ಯಕ್ತಿ ಆರೋಪಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಸಂಸತ್ ಚಲೋ ಎಂಬ ಹೆಸರಿನಲ್ಲಿ ಜಂತರ್ ಮಂತರ್ ನಲ್ಲಿ ಸೇರಲಾದ ಸಾವಿರಾರು ಜನರಲ್ಲಿ ನಿಜವಾಗಿಯೂ ನೀಟ್ ಹಗರಣದಲ್ಲಿ ನೊಂದ ವಿದ್ಯಾರ್ಥಿಗಳ ಪರವಾಗಿ ಬಂದವರೆಷ್ಟು…? ಪ್ರತಿಭಟನೆ ವೇಳೆ ಪೊಲೀಸ್ v/s ಯುವಜನತೆಯ ನಡುವೆ ನಡೆದ ಘರ್ಷಣೆಯಲ್ಲಿ ಯುವಜನತೆಗಿಂತ ಹೆಚ್ಚು ಗಾಯಗಳಾಗಿದ್ದು ರಕ್ಷಣೆಗೆ ನಿಂತ ಪೊಲೀಸರಿಗೇ. ಇದಕ್ಕೆ ಪುಷ್ಠಿ ನೀಡುವಂತೆ ಈ ಹೋರಾಟದಲ್ಲಿ ದೆಹಲಿ ಪೊಲೀಸರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರಲ್ಲಿ 2873 ಕ್ರಿಮಿನಲ್ಗಳನ್ನು ಗುರುತಿಸಿದ್ದಾರೆ. ಕ್ರಿಮಿನಲ್ಗಳ ವಿವರ ಇಲ್ಲಿದೆ.
- ತೀವ್ರತರ ಅಪರಾಧಗಳನ್ನು ಮಾಡಿದ ಹಿನ್ನೆಲೆಯುಳ್ಳವರು- 989 ಜನರು.
- ಕೊಲೆ ಮತ್ತು ಕೊಲೆ ಯತ್ನಮಾಡಿದವರು – 101 ಕೊಲೆ ಆರೋಪಿಗಳು ಹಾಗೂ 62 ಕೊಲೆ ಯತ್ನ ಪ್ರಕರಣಗಳು
- ದರೋಡೆ ಮತ್ತು ಹಲ್ಲೆ – ದರೋಡೆ ಹಾಗೂ ಸುಲಿಗೆಗೆ ಸಂಬಂಧಿಸಿದ 284 ಮಂದಿ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ 229 ಪ್ರಕರಣಗಳು;
- ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು – 61 ಅತ್ಯಾಚಾರ ಆರೋಪಿಗಳು
- 25 ಲೈಂಗಿಕ ದೌರ್ಜನ್ಯ ಪ್ರಕರಣಗಳು ಹಾಗೂ POCSO ಕಾಯ್ದೆಯಡಿ 6 ಪ್ರಕರಣಗಳು
- ಇತರ ದಾಖಲಾದ ಅಪರಾಧಗಳು – 135 ಸರಗಳ್ಳತನ ಪ್ರಕರಣಗಳು
- 67 NDPS (ಮಾದಕ ವಸ್ತು) ಪ್ರಕರಣಗಳು ಹಾಗೂ 19 ಅಪಹರಣ ಪ್ರಕರಣಗಳು.
ಇದರೊಂದಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನಾಯಕರೊಂದಿಗೆ ಪ್ರಧಾನಿ ನಿವಾಸದ ಬಳಿ ಪ್ರತಿಭಟನೆ ನಡೆಸಿದ್ದೇಕೆ? ಆ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂಬುದನ್ನು ವಿಶ್ವಕ್ಕೆ ತೋರಿಸುವ ಹುನ್ನಾರ ಅಡಗಿತ್ತೇ? ಎಂಬ ಪ್ರಶ್ನೆಗಳೂ ಕಾಡುತ್ತಿವೆ.
ಈ ವೇಳೆಗೆ ಉಪವಾಸ ಕುಳಿತಿದ್ದ ಸೋನಂ ವಾಂಗ್ಚುಕ್ ಜೊತೆ ಮಾತುಕತೆ ಆರಂಭಿಸಿದ ಕೇಂದ್ರ ಸರ್ಕಾರ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಸರ್ಕಾರ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಕುರಿತು ತಿಳಿಸುವಲ್ಲಿ ಯಶಸ್ವಿಯಾಯಿತು. ಸಂಸತ್ ಚಲೋ ಹೆಸರಿನಲ್ಲಿ ನಡೆಯಬಹುದಾದ ಅನಾಹುತಗಳ ಬಗ್ಗೆ ಸ್ವತಃ ಆತಂಕ ವ್ಯಕ್ತಪಡಿಸಿದ ಸೋನಮ್ ವಾಂಗ್ಚುಕ್ ಪ್ರತಿಭಟನಾ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನೆ ಮಾಡಲು ಮನವಿ ಮಾಡಿಕೊಂಡರು. ಆದರೂ ಪ್ರತಿಭಟನೆ ಹಿಡಿತಕ್ಕೆ ಬರಲಿಲ್ಲ…
ಸರ್ಕಾರದ ಪರವಾಗಿ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಕಾಕ್ರೋಚ್ ಜನತಾ ಪಾರ್ಟಿಯ ವಕ್ತಾರರಾದ ಸೌರವ್ ದಾಸ್ ಅವರೊಂದಿಗೆ ಮಾತುಕತೆ ನಡೆಸಿ ಅವರ ನಾಲ್ಕು ಷರತ್ತುಗಳನ್ನು ಒಪ್ಪಿಕೊಂಡರು. ಅದರಂತೆ ಜುಲೈ 25ರಂದು ಸಚಿವ ಸ್ಥಾನದಿಂದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಪಡೆಯಲಾಯಿತು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಫೈವ್ ಸ್ಟಾರ್ ಹೋಟೆಲ್ ನಲ್ಲಿ CJP ಸದಸ್ಯರು ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿದರು. ಇದೇ ವೇಳೆ ಸರ್ಕಾರ ತಾನು ಕೊಟ್ಟ ಮಾತಿನಂತೆ ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ-2026 (Public Examinations (Prevention of Unfair Means) Amendment Bill, 2026) ಮಸೂದೆಯನ್ನು ಮಂಡಿಸಿ ಅಂಗೀಕರಿಸಿ ಕಾಯ್ದೆಯಾಗಿಸಿತು. ಆದರೆ ವಿರೋಧ ಪಕ್ಷಗಳು ಈ ಮಸೂದೆಯನ್ನು ವಿರೋಧಿಸಿದವು. ಈ ವಿಷಯವಾಗಿ ಪ್ರತಿಭಟನೆ ಆರಂಭಿಸಿದ್ದ ಕಾಕ್ರೋಚ್ ಜನತಾ ಪಾರ್ಟಿಯೂ ಮಸೂದೆ ಅಂಗೀಕಾರವಾದ ಕುರಿತು ಒಂದು ಹೇಳಿಕೆಯನ್ನೂ ಮಾಧ್ಯಮಗಳಿಗೆ ನೀಡಲಿಲ್ಲ. ಸಂಸತ್ತಿನಲ್ಲಿ ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ-2026 ಪಾಸಾದ ನಂತರ ನಿಜವಾಗಿಯೂ ಅವರು ಪಾರ್ಟಿ ಮಾಡಬೇಕಾಗಿದ್ದುದು ಜಂತರ್ ಮಂತರ್ ನಲ್ಲಿ ಅಲ್ಲವೇ. ಆದರೆ ಅವರು ಪಾರ್ಟಿ ಮಾಡಿದ್ದು ಧರ್ಮೇಂದ್ರ ಪ್ರಧಾನ ರಾಜೀನಾಮೆ ಪಡೆದಿದ್ದಕ್ಕಾಗಿ. ಅಂದರೆ ಇದು ರಾಜಕೀಯ ಪ್ರೇರಿತ ಗೂಂಡಾ ಹೋರಾಟವೋ…? ಅಥವಾ ವಿದ್ಯಾರ್ಥಿಗಳಿಗಾದ ಅನ್ಯಾಯವನ್ನು ವಿರೋಧಿಸಿ ಮಾಡಿದ ಹೋರಾಟವೋ…?
ಜೆನ್ ಝಿ ಪೀಳಿಗೆಯವರು ಎಲ್ಲರೂ ಎಚ್ಚರಗೊಳ್ಳುವ ಮೊದಲೇ ದಾರಿ ತಪ್ಪಿದ್ದಾರೆ, ಬಹುಶಃ ಸಾಮಾಜಿಕ ಜಾಲತಾಣದ ಹಾವಳಿ, ಲೈಕ್ಸ್ – ಕಾಮೆಂಟ್ಸ್ ಗಳ ಉನ್ಮಾದ ಇದಕ್ಕೆ ಕಾರಣವಿರಬಹುದು… ಹಣಗಳಿಸುವ ಮಾಧ್ಯಮ ದೊರೆತಿರುವುದಕ್ಕೆ ಬಳಸುತ್ತಲೂ ಇರಬಹುದು. ಈ ಬಗ್ಗೆ ತುರ್ತಾಗಿ ಸರ್ಕಾರಗಳು, ಪೋಷಕರು ಹಾಗೂ ಪರಿಣಿತರು ಎಚ್ಚರವಹಿಸುವುದು ಸಾಮಾಜಿಕ ದೃಷ್ಟಿಯಿಂದ ಒಳಿತು. ಯುವಜನತೆ ಹೋರಾಟ ಮಾಡುವುದು ನಿಜವಾಗಿಯೂ ಒಂದು ಆದರ್ಶದ ಸಂಗತಿ ಆದರೆ ಅವರ ಹೋರಾಟದ ರೀತಿ – ನೀತಿ ಅವರ ಗುಣವನ್ನು ಮತ್ತು ರಾಜ್ಯವನ್ನು ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುತ್ತದೆ.
