ಕಲಬುರಗಿ: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ ಸಂಚಾಲಿತ ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ ಸ್ಮೃತಿ ಸಂಸ್ಕೃತ ಪಾಠಶಾಲೆ, ಸೇಡಂನಲ್ಲಿ ಸೆಪ್ಟೆಂಬರ್ 8, 2026ರಂದು ಸಂಸ್ಕೃತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ರಾಷ್ಟ್ರದ ಪ್ರಸಿದ್ಧ ಗಣಿತ ತಜ್ಞರಾದ ಶ್ರೀಯುತ ಡಾ. ವೇಣುಗೋಪಾಲ್ ಹೇರೂರು ಅವರು ಆಗಮಿಸಿ ಮಾತನಾಡುತ್ತಾ,
ಚಿಕ್ಕ ವಯಸ್ಸಿನಲ್ಲಿ ಸಂಸ್ಕೃತ ಭಾಷೆಯನ್ನು ಅಭ್ಯಾಸ ಮಾಡುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಬೌದ್ಧಿಕ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗುತ್ತದೆ ಎಂದರು.
ವಿದ್ಯಾಮಂದಿರ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಶೋಭಾರಾಣಿ ಅವರು ಮಾತನಾಡುತ್ತಾ, ಸಂಸ್ಕೃತ ಅಧ್ಯಯನದ ಮಹತ್ವವನ್ನು ವಿವರಿಸುತ್ತಾ, ವಿದ್ಯಾರ್ಥಿಗಳು ಈ ಹಂತದಲ್ಲಿಯೇ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಬೇಕೆಂದರು.
ಶ್ರೀ ಸಂಗಮೇಶ ಮೂಡಬೂಳ, ಪ್ರಧಾನ ಆಚಾರ್ಯರು, ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ ಸ್ಮೃತಿ ಸಂಸ್ಕೃತ ಪಾಠಶಾಲೆ, ಪ್ರಾಸ್ತಾವಿಕ ನುಡಿಯಲ್ಲಿ ಸಂಸ್ಕೃತ ಭಾಷೆಯ ಮಹತ್ವ, ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಸಂಸ್ಕೃತದ ಸ್ಥಾನ ಮತ್ತು ವಿದ್ಯಾರ್ಥಿಗಳು ಸಂಸ್ಕೃತ ಅಧ್ಯಯನದ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವಬಹುದೆಂದರು.
ಸಂಸ್ಕೃತ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಶ್ರೀಮತಿ ಅನುರಾಧಾ ಪಾಟೀಲ್ ಅವರು ಅಧ್ಯಕ್ಷೀಯ ಮಾತುಗಳನ್ನಾಡಿದರು.
ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಉತ್ಸಾಹ ಮತ್ತು ಆತ್ಮವಿಶ್ವಾಸ ಮೂಡಿಸಿತು.
ಮುಖ್ಯ ಗುರುಗಳಾದ ನಿಂಗಪ್ಪ ಬಿ ಮತ್ತು ಮನ್ಸೂರ್ ಆವಂಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಕೃತ ಪಾಠಶಾಲೆಯ ಶಿಕ್ಷಕರಾದ ಹೊನ್ನಪ್ಪ ಅವರು ಸ್ವಾಗತಿಸಿ ವಂದಿಸಿದರೆ, ವಿದ್ಯಾರ್ಥಿನಿ ಅಭಿನಯ ನಿರೂಪಣೆಗೈದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಸಂಸ್ಕೃತ ಭಾಷೆಯ ಪ್ರಚಾರ ಮತ್ತು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸಂದೇಶದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
