ಪ್ರತಿಭಟನೆಗಳು ವಿಭಜನೆಗೆ ಕಾರಣವಾಗಬಾರದು: ಐಐಎಂಯುಎನ್ ಸಮಾವೇಶದಲ್ಲಿ ಸರಸಂಘಚಾಲಕರ ದಿಕ್ಸೂಚಿ ಮಾತುಗಳು
ಮುಂಬೈ, ಆಗಸ್ಟ್ 06, 2026: ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದಾಗ, ಸಂವಿಧಾನಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಪ್ರತಿಭಟನೆಯು ಸೂಕ್ತವಾದ ಹಾದಿಯಾಗಿದೆ. ಪ್ರತಿಭಟನೆಯು ಪ್ರಜಾಪ್ರಭುತ್ವದಲ್ಲಿ ಒಂದು ಕಾನೂನುಬದ್ಧ ಹಕ್ಕು ಹೌದಾದರೂ, ಅದನ್ನು ವಿವೇಚನೆ ಮತ್ತು ಜವಾಬ್ದಾರಿಯಿಂದ ಬಳಸಬೇಕು. ಯಾವುದೇ ಕಾರಣಕ್ಕೂ ಪ್ರತಿಭಟನೆಗಳು ಸಮಾಜದ ವಿಭಜನೆಗೆ ದಾರಿಯಾಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಜಿ ತಿಳಿಸಿದ್ದಾರೆ.
‘ಇಂಡಿಯಾಸ್ ಇಂಟರ್ನ್ಯಾಷನಲ್ ಮೂವ್ಮೆಂಟ್ ಟು ಯುನೈಟೆಡ್ ನೇಷನ್ಸ್’ (I.I.M.U.N.) ಮುಂಬೈನ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ನಲ್ಲಿ ಆಯೋಜಿಸಿದ್ದ 15 ನೇ ವಾರ್ಷಿಕ ಚಾಂಪಿಯನ್ಷಿಪ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಈ ಸಮಾವೇಶದಲ್ಲಿ ಭಾರತದ 100ಕ್ಕೂ ಹೆಚ್ಚು ನಗರಗಳಿಂದ 15 ರಿಂದ 24 ವರ್ಷದೊಳಗಿನ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯುವಜನತೆಯಲ್ಲಿ ನಾಯಕತ್ವ ಗುಣ, ಸಂವಹನ ಕೌಶಲ ಹಾಗೂ ರಾಷ್ಟ್ರೀಯ-ಜಾಗತಿಕ ವಿಷಯಗಳ ಕುರಿತು ರಚನಾತ್ಮಕ ದೃಷ್ಟಿಕೋನ ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಯುವಜನತೆ ಮತ್ತು ಪ್ರತಿಭಟನಾ ಸಂಸ್ಕೃತಿ:
ವಿದ್ಯಾರ್ಥಿ ಪ್ರತಿಭಟನೆಗಳ ಕುರಿತು ಮಾತನಾಡಿದ ಡಾ. ಭಾಗವತ್, “ಪ್ರತಿಭಟನೆಯೂ ಸಂವಾದದ ಒಂದು ರೂಪ. ‘ಜೆನ್ ಝೀ’ (Gen Z) ಜನಾಂಗದವರು ಮಾಡುವ ಪ್ರತಿಭಟನೆಯನ್ನು ದೇಶವಿರೋಧಿ ಎಂದು ಭಾವಿಸಬಾರದು. ಅವರು ನಮ್ಮ ಸಮಾಜದ ಭಾಗ. ಭಾರತದ ಪ್ರಾಚೀನ ‘ಶಾಸ್ತ್ರಾರ್ಥ’ (ವಿಚಾರ ವಿನಿಮಯ) ಪರಂಪರೆಯನ್ನು ಉಲ್ಲೇಖಿಸಿದ ಅವರು, ಯುವಜನರ ಪ್ರಶ್ನೆಗಳು ಮತ್ತು ಕಳಕಳಿಗಳನ್ನು ಸಮಾಜ ಹಾಗೂ ಆಡಳಿತ ವ್ಯವಸ್ಥೆಯು ಅನುಕಂಪ ಮತ್ತು ಸೌಹಾರ್ದತೆಯಿಂದ ಅರ್ಥೈಸಿಕೊಂಡು ಪರಿಹರಿಸಬೇಕು” ಎಂದರು. ಪ್ರಸ್ತುತ ಯುವ ಜನಾಂಗವು ಹೆಚ್ಚು ಪ್ರಾಮಾಣಿಕತೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದೆ ಎಂದೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿ
ಶಿಕ್ಷಣವು ಪ್ರತಿಯೊಬ್ಬರಿಗೂ ತಲುಪಬೇಕಾದ ಜೀವನದ ಅತ್ಯಗತ್ಯ ಅಗತ್ಯವಾಗಿದೆ. ಸರಕಾರದ ಜೊತೆಗೆ ಸಮಾಜಕ್ಕೂ ಶಿಕ್ಷಣ ನೀಡುವ ಜವಾಬ್ದಾರಿಯಿದೆ. ವಿದ್ಯಾ ಭಾರತಿಯು ಸರಕಾರದ ಯಾವುದೇ ಆರ್ಥಿಕ ನೆರವಿಲ್ಲದೆ ದೇಶದಾದ್ಯಂತ ಸುಮಾರು 23,000 ಶಾಲೆಗಳನ್ನು ನಡೆಸುತ್ತಿದೆ ಎಂದು ಉಲ್ಲೇಖಿಸಿದ ಅವರು, ಚಳವಳಿಗಳ ಅಗತ್ಯವಿಲ್ಲದೆಯೇ ಶಿಕ್ಷಣ ಕ್ಷೇತ್ರದಲ್ಲಿ ಧನಾತ್ಮಕ ಸುಧಾರಣೆ ತರಬಹುದು ಎಂದರು.
ಸಾಮಾಜಿಕ ಮಾಧ್ಯಮ ಮತ್ತು ನಾಯಕತ್ವ
ಸಾಮಾಜಿಕ ಮಾಧ್ಯಮಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಯುವಜನತೆಗೆ ಕರೆ ನೀಡಿದ ಅವರು, ಕೇವಲ ಅಧಿಕೃತ ಮೂಲಗಳ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಬೇಕು ಮತ್ತು ಹಿಂಸೆಯನ್ನು ವೈಭವೀಕರಿಸುವ ಬದಲು ಧನಾತ್ಮಕ ಮಾದರಿಗಳನ್ನು ಅನುಸರಿಸಬೇಕು ಎಂದರು. 2047 ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಸ್ವ-ನಾಯಕತ್ವ (Self-leadership) ಅತ್ಯಗತ್ಯ. ಹಿಂಬಾಲಕರನ್ನು ಸೃಷ್ಟಿಸುವುದಕ್ಕಿಂತ ಹೊಸ ನಾಯಕರನ್ನು ಬೆಳೆಸುವುದೇ ನಿಜವಾದ ನಾಯಕತ್ವ ಎಂದರು.
ಇತರ ಪ್ರಮುಖ ವಿಷಯಗಳ ಕುರಿತು ಅವರ ವಿಚಾರಗಳು:
ಎಲ್ಜಿಬಿಟಿಕ್ಯೂ (LGBTQ) ಮತ್ತು ವಿವಾಹ ಸಂಸ್ಥೆ: ಎಲ್ಜಿಬಿಟಿಕ್ಯೂ ಸಮುದಾಯದವರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಗೌರವಕ್ಕೆ ಅರ್ಹರು. ಆದರೆ ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಎಂಬುದು ಕೇವಲ ಇಬ್ಬರು ವ್ಯಕ್ತಿಗಳು ಜೊತೆಯಾಗಿ ಬಾಳುವ ಒಪ್ಪಂದವಲ್ಲ, ಅದು ಮುಂದಿನ ತಲೆಮಾರನ್ನು ಬೆಳೆಸುವ ಸಾಮಾಜಿಕ ವ್ಯವಸ್ಥೆ. ಹೀಗಾಗಿ, ಸಲಿಂಗ ಸಂಬಂಧಗಳನ್ನು ಸಾಂಪ್ರದಾಯಿಕ ವಿವಾಹ ಎನ್ನುವ ಬದಲು ‘ಸಹಜೀವನ’ (Companionship) ಎಂದು ಗುರುತಿಸಬಹುದು ಎಂದು ಅಭಿಪ್ರಾಯಪಟ್ಟರು.
ಆರ್ಎಸ್ಎಸ್ನಲ್ಲಿ ಮಹಿಳೆಯರ ಭಾಗವಹಿಸುವಿಕೆ: ಆರ್ಎಸ್ಎಸ್ನ ಮೂಲ ಸಂಸ್ಥೆಯಲ್ಲಿ ಮಹಿಳೆಯರಿಲ್ಲ ಎಂಬುದು ಅಪೂರ್ಣ ಮಾಹಿತಿಯಿಂದ ಬಂದದ್ದು. ಸಂಘದಿಂದ ಪ್ರೇರಿತವಾದ ರಾಷ್ಟ್ರ ಸೇವಿಕಾ ಸಮಿತಿ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಹಾಗೂ ಅಖಿಲ ಭಾರತೀಯ ಪ್ರತಿನಿಧಿ ಸಭಾದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಉದ್ಯೋಗ ಮತ್ತು ಶ್ರಮದ ಗೌರವ: ಉದ್ಯೋಗ ಎಂದರೆ ಕೇವಲ ಸಂಬಳದ ಕೆಲಸವಲ್ಲ. ಉದ್ಯಮಶೀಲತೆ ಮತ್ತು ಕೌಶಲಾಧಾರಿತ ವೃತ್ತಿಗಳಿಗೂ ಸಮಾನ ಗೌರವ ನೀಡಬೇಕು. ಶ್ರಮದ ಗೌರವವನ್ನು ಹೆಚ್ಚಿಸಿದಾಗ ಮಾತ್ರ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಮೀಸಲಾತಿ: ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಯನ್ನು ಪ್ರತಿಪಾದಿಸಿದ್ದರು. ಇದು ರಾಜಕೀಯ ವಿಷಯವಾಗಬಾರದು. ಸಾಮಾಜಿಕ ನ್ಯಾಯಕ್ಕಾಗಿ ಪ್ರಾಮಾಣಿಕ ಪ್ರಯತ್ನಗಳು ನಡೆದಾಗ ಮೀಸಲಾತಿಯ ಅಗತ್ಯತೆ ಭವಿಷ್ಯದಲ್ಲಿ ಕ್ರಮೇಣ ಕಡಿಮೆಯಾಗಬಹುದು.
ರಾಷ್ಟ್ರೀಯ ಭದ್ರತೆ ಮತ್ತು ಪರಿಸರ: ಸಂಘರ್ಷದ ಸಮಯದಲ್ಲಿ ಪೌರರು ಸರಕಾರ ಮತ್ತು ರಾಷ್ಟ್ರೀಯ ಭದ್ರತೆಯ ನಿರ್ಧಾರಗಳ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು. ಹಾಗೆಯೇ ಪರ್ಯಾವರಣ ಸಂರಕ್ಷಣೆಯನ್ನು ಪ್ರತಿಯೊಬ್ಬರೂ ತಮ್ಮ ಮನೆಗಳಿಂದಲೇ ಆರಂಭಿಸಿ ದಿನನಿತ್ಯದ ಜೀವನದ ಭಾಗವಾಗಿಸಿಕೊಳ್ಳಬೇಕು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
