ಒಮ್ಮೆ “ಉದ್ಯೋಗಕ್ಕೆ ನೇರ ದಾರಿ” ಎಂದು ಹೆಸರಾಗಿದ್ದ ತಾಂತ್ರಿಕ ಶಿಕ್ಷಣ ಇಂದು ನಿಧಾನವಾಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ರಾಜ್ಯದಾದ್ಯಂತ ಇರುವ ಐಟಿಐ ಹಾಗೂ ಡಿಪ್ಲೋಮಾ ಕಾಲೇಜುಗಳಲ್ಲಿ ದಾಖಲಾತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ವಿಶೇಷವಾಗಿ ಗ್ರಾಂಟ್-ಇನ್-ಏಡ್ ಸೌಲಭ್ಯವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಗಳ ಸ್ಥಿತಿ ದಯನೀಯವಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಬೆಳಕು ನೀಡಿದ ಅನೇಕ ಸಂಸ್ಥೆಗಳು ಇಂದು ಬದುಕುಳಿಯುವ ಹೋರಾಟದಲ್ಲಿವೆ.
ಒಂದು ಕಾಲದಲ್ಲಿ ಎಸ್ಎಸ್ಎಲ್ಸಿ ಅಥವಾ ಪಿಯುಸಿ ನಂತರ ತಕ್ಷಣ ಉದ್ಯೋಗ ಪಡೆಯಬೇಕೆಂಬ ಕನಸಿನೊಂದಿಗೆ ವಿದ್ಯಾರ್ಥಿಗಳು ಐಟಿಐ ಮತ್ತು ಪಾಲಿಟೆಕ್ನಿಕ್ಗಳತ್ತ ಮುಖ ಮಾಡುತ್ತಿದ್ದರು. ವಿದ್ಯುತ್ ತಂತ್ರಜ್ಞಾನ, ಫಿಟ್ಟರ್, ಮೆಕಾನಿಕ್, ಸಿವಿಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಮೊದಲಾದ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಸ್ಪರ್ಧೆ ಇತ್ತು. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.
ಇಂಜಿನಿಯರಿಂಗ್ ಕಾಲೇಜುಗಳ ಹೆಚ್ಚಳ, ಆನ್ಲೈನ್ ಕೋರ್ಸ್ಗಳ ಆಕರ್ಷಣೆ, ಐಟಿ ಕ್ಷೇತ್ರದ ಮೆರಗು, ಹಾಗೂ “ಡಿಗ್ರಿಯೇ ಜೀವನದ ಗುರಿ” ಎಂಬ ಸಮಾಜದ ಮನೋಭಾವದಿಂದ ತಾಂತ್ರಿಕ ಶಿಕ್ಷಣ ಹಿನ್ನಡೆಯತ್ತ ತಳ್ಳಲ್ಪಡುತ್ತಿದೆ. ಪರಿಣಾಮವಾಗಿ ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಐಟಿಐ ಮತ್ತು ಡಿಪ್ಲೋಮಾ ಕಾಲೇಜುಗಳಲ್ಲಿ ತರಗತಿಗಳು ಖಾಲಿಯಾಗುತ್ತಿವೆ. ಕೆಲವು ಕಡೆ ಒಂದೇ ವಿಭಾಗದಲ್ಲಿ ಐದು ವಿದ್ಯಾರ್ಥಿಗಳೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದಕ್ಕಿಂತ ದೊಡ್ಡ ನೋವು ಖಾಸಗಿ ಸಂಸ್ಥೆಗಳದು. ಸರ್ಕಾರದಿಂದ ಯಾವುದೇ ಗ್ರಾಂಟ್ ಸಿಗದೇ, ಸಂಪೂರ್ಣವಾಗಿ ವಿದ್ಯಾರ್ಥಿಗಳ ಶುಲ್ಕದ ಮೇಲೆ ಅವಲಂಬಿತವಾಗಿರುವ ಸಂಸ್ಥೆಗಳು ಇಂದು ಆರ್ಥಿಕ ಸಂಕಷ್ಟದ ಅಂಚಿನಲ್ಲಿವೆ. ದಾಖಲಾತಿಗಳ ಕೊರತೆಯಿಂದ ಬರುವ ಆದಾಯ ಕುಸಿದಿದ್ದು, ಶಿಕ್ಷಕರು ಮತ್ತು ಸಿಬ್ಬಂದಿಗೆ ತಿಂಗಳ ಸಂಬಳ ನೀಡುವುದೇ ದೊಡ್ಡ ಸವಾಲಾಗಿದೆ. ಹಲವು ಸಂಸ್ಥೆಗಳಲ್ಲಿ ಮೂರು ತಿಂಗಳು, ಆರು ತಿಂಗಳು ಸಂಬಳ ಬಾಕಿಯಿರುವ ಘಟನೆಗಳು ಸಾಮಾನ್ಯವಾಗಿವೆ.
ಶಿಕ್ಷಕರು ತಮ್ಮ ಬದುಕನ್ನು ಸಾಗಿಸಲು ಸಾಲ ಮಾಡುತ್ತಿರುವುದು, ಕುಟುಂಬದ ಖರ್ಚು ನಿರ್ವಹಿಸಲು ಪರದಾಡುತ್ತಿರುವುದು ನೋವಿನ ಸಂಗತಿ. ಶಿಕ್ಷಣ ಸೇವೆಯನ್ನು ಒಂದು ಮಿಷನ್ ಎಂದು ನಂಬಿ ಬದುಕನ್ನು ಮೀಸಲಿಟ್ಟ ಅನೇಕ ಉಪನ್ಯಾಸಕರು ಇಂದು ಮಾನಸಿಕ ಒತ್ತಡದಲ್ಲಿ ದಿನ ಕಳೆಯುತ್ತಿದ್ದಾರೆ.
ಇನ್ನೊಂದು ಕಳವಳಕರ ಸಂಗತಿ ಎಂದರೆ, ಸರ್ಕಾರದ ನೀತಿಗಳಲ್ಲಿ ತಾಂತ್ರಿಕ ಶಿಕ್ಷಣಕ್ಕೆ ದೊರೆಯುತ್ತಿರುವ ನಿರ್ಲಕ್ಷ್ಯ. ಹೊಸ ಹೊಸ ಯೋಜನೆಗಳ ಘೋಷಣೆಗಳಾಗುತ್ತವೆ; ಆದರೆ ನೆಲಮಟ್ಟದಲ್ಲಿ ಖಾಸಗಿ ತಾಂತ್ರಿಕ ಸಂಸ್ಥೆಗಳ ಸಮಸ್ಯೆಗಳನ್ನು ಆಲಿಸುವವರೇ ಕಾಣಿಸುತ್ತಿಲ್ಲ. ಅನೇಕ ಕಾಲೇಜುಗಳು ಕಟ್ಟಡ ಬಾಡಿಗೆ, ವಿದ್ಯುತ್ ಬಿಲ್, ಪ್ರಯೋಗಾಲಯ ನಿರ್ವಹಣೆ, ಯಂತ್ರೋಪಕರಣಗಳ ನವೀಕರಣ ಮುಂತಾದ ಮೂಲಭೂತ ವೆಚ್ಚಗಳನ್ನು ಭರಿಸಲು ಸಾಧ್ಯವಾಗದೆ ಕುಸಿಯುತ್ತಿವೆ.
ತಾಂತ್ರಿಕ ಶಿಕ್ಷಣ ಎಂದರೆ ಕೇವಲ ಪುಸ್ತಕದ ಜ್ಞಾನವಲ್ಲ; ಅದು ಕೈಗೆ ಕೆಲಸ ಕಲಿಸುವ ಜೀವನ ಕೌಶಲ್ಯ. ಒಂದು ರಾಷ್ಟ್ರದ ಕೈಗಾರಿಕಾ ಬೆಳವಣಿಗೆಯ ಬೆನ್ನೆಲುಬು ತಾಂತ್ರಿಕ ಶಿಕ್ಷಣವೇ ಆಗಿದೆ. ಇಂದು ದೊಡ್ಡ ದೊಡ್ಡ ಕಂಪನಿಗಳು ನುರಿತ ತಾಂತ್ರಿಕ ಪರಿಣಿತರ ಕೊರತೆಯನ್ನು ಎದುರಿಸುತ್ತಿರುವಾಗ, ಅದೇ ಸಮಯದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿರುವುದು ದೊಡ್ಡ ವಿರೋಧಾಭಾಸ.
ಗ್ರಾಮೀಣ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉದ್ಯೋಗಮುಖಿ ಶಿಕ್ಷಣ ನೀಡುತ್ತಿದ್ದ ಐಟಿಐ ಮತ್ತು ಡಿಪ್ಲೋಮಾ ಸಂಸ್ಥೆಗಳು ಉಳಿಯದಿದ್ದರೆ, ಮುಂದಿನ ದಿನಗಳಲ್ಲಿ ತಾಂತ್ರಿಕ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲದ ಕೊರತೆ ಎದುರಾಗುವುದು ಖಚಿತ.
ಈ ಪರಿಸ್ಥಿತಿಗೆ ತುರ್ತು ಪರಿಹಾರ ಅಗತ್ಯವಾಗಿದೆ. ಸರ್ಕಾರ ಖಾಸಗಿ ತಾಂತ್ರಿಕ ಸಂಸ್ಥೆಗಳಿಗಾಗಿ ವಿಶೇಷ ನೆರವು ಯೋಜನೆ ರೂಪಿಸಬೇಕು. ದಾಖಲಾತಿ ಹೆಚ್ಚಿಸಲು ವಿದ್ಯಾರ್ಥಿವೇತನ, ಕೈಗಾರಿಕಾ ತರಬೇತಿ ಜೋಡಣೆ, ಉದ್ಯೋಗ ಭರವಸೆ ಕಾರ್ಯಕ್ರಮಗಳು, ಆಧುನಿಕ ತಂತ್ರಜ್ಞಾನ ಕೋರ್ಸ್ಗಳ ಪರಿಚಯ ಹಾಗೂ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಬೇಕು.
ಹಾಗೆಯೇ ಶಾಲಾ ಹಂತದಲ್ಲೇ ತಾಂತ್ರಿಕ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಅಗತ್ಯ. “ಡಿಗ್ರಿಯೇ ಯಶಸ್ಸಿನ ಏಕೈಕ ದಾರಿ ಅಲ್ಲ” ಎಂಬ ಮನೋಭಾವ ಸಮಾಜದಲ್ಲಿ ಮೂಡಬೇಕಿದೆ. ಕೈಗೆ ಕೌಶಲ್ಯ ಇದ್ದರೆ ಬದುಕಿಗೆ ಭದ್ರತೆ ಇದೆ ಎಂಬ ಅರಿವು ಪುನಃ ಬೇರೂರಬೇಕು.ಇಂದು ಸಂಕಷ್ಟದಲ್ಲಿರುವ ಐಟಿಐ ಮತ್ತು ಡಿಪ್ಲೋಮಾ ಸಂಸ್ಥೆಗಳು ಕೇವಲ ಕಟ್ಟಡಗಳಲ್ಲ; ಅವು ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಕನಸುಗಳ ನೆಲೆಗಳು. ಆ ಕನಸುಗಳು ಮರೀಚಿಕೆಯಾಗುವ ಮೊದಲು ಸರ್ಕಾರ, ಸಮಾಜ ಮತ್ತು ಕೈಗಾರಿಕಾ ವಲಯ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ “ತಾಂತ್ರಿಕ ಶಿಕ್ಷಣದ ಬಾಗಿಲುಗಳು” ಶಾಶ್ವತವಾಗಿ ಮುಚ್ಚಿಕೊಳ್ಳುವ ಅಪಾಯ ದೂರದಲ್ಲಿಲ್ಲ.
ನಿಯಮಗಳ ಭಾರದಲ್ಲಿ ನಲುಗುತ್ತಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳು:
ಒಂದು ಕಡೆ ವಿದ್ಯಾರ್ಥಿಗಳ ದಾಖಲಾತಿ ಕುಸಿತ, ಮತ್ತೊಂದು ಕಡೆ ಆರ್ಥಿಕ ಸಂಕಷ್ಟ – ಈ ಎರಡು ದೊಡ್ಡ ಸಮಸ್ಯೆಗಳ ನಡುವೆ ಈಗ ಐಟಿಐ ಹಾಗೂ ಡಿಪ್ಲೋಮಾ ಸಂಸ್ಥೆಗಳ ಮೇಲೆ ಹೊಸ ಹೊಸ ಕಾನೂನುಗಳು ಮತ್ತು ಮಾರ್ಗಸೂಚಿಗಳ ಭಾರ ಹೆಚ್ಚುತ್ತಲೇ ಇದೆ. ವಿಶೇಷವಾಗಿ “ಸ್ಕಿಲ್ ಇಂಡಿಯಾ” ಎಂಬ ಮಹತ್ವಾಕಾಂಕ್ಷಿ ಯೋಜನೆಯ ಹೆಸರಿನಲ್ಲಿ ಪ್ರತಿದಿನ ಹೊಸ ಆದೇಶಗಳು, ಹೊಸ ನಿಯಮಗಳು, ಹೊಸ ದಾಖಲೆಪತ್ರಗಳ ಬೇಡಿಕೆಗಳು ಶಿಕ್ಷಣ ಸಂಸ್ಥೆಗಳ ಮೇಲೆ ಮಳೆಹನಿಗಳಂತೆ ಸುರಿಯುತ್ತಿವೆ. ಕೌಶಲ್ಯಾಭಿವೃದ್ಧಿಯ ಉದ್ದೇಶ ಶ್ಲಾಘನೀಯವಾದರೂ, ನೆಲಮಟ್ಟದಲ್ಲಿ ಅದರ ಅನುಷ್ಠಾನ ಮಾತ್ರ ಸಂಪೂರ್ಣ ಬೇರೆ ಕಥೆಯನ್ನು ಹೇಳುತ್ತಿದೆ. ಖಾಸಗಿ ಮತ್ತು ಸರ್ಕಾರಿ ಐಟಿಐಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಕ್ಕಿಂತ ವರದಿಗಳು ತಯಾರಿಸುವುದು, ಪೋರ್ಟಲ್ ಅಪ್ಲೋಡ್ಗಳು, ದಾಖಲೆ ಪರಿಶೀಲನೆಗಳು, ಸಮಿತಿಗಳ ರಚನೆ, ಪಠ್ಯೇತರ ಚಟುವಟಿಕೆಗಳ ವರದಿಗಳು, ವಿವಿಧ ದಿನಾಚರಣೆಗಳ ಆಚರಣೆಗಳಲ್ಲಿ ಹೆಚ್ಚು ಸಮಯ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಇತ್ತೀಚಿನ ವರ್ಷಗಳಲ್ಲಿ “ಅನಿವಾರ್ಯ ಚಟುವಟಿಕೆ” ಎಂಬ ಹೆಸರಿನಲ್ಲಿ ಪರಿಸರ ದಿನ, ಯೋಗ ದಿನ, ಮತದಾನ ಜಾಗೃತಿ, ಸ್ವಚ್ಛತಾ ಅಭಿಯಾನ, ಡಿಜಿಟಲ್ ಅಭಿಯಾನ, ಕೈಗಾರಿಕಾ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ, ಉದ್ಯಮಶೀಲತಾ ಶಿಬಿರ, ಆನ್ಲೈನ್ ವೆಬಿನಾರ್ಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ. ಇವುಗಳ ಉದ್ದೇಶ ಉತ್ತಮವಾದರೂ, ಈಗಾಗಲೇ ಶಿಕ್ಷಕರ ಕೊರತೆ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗಳಿಗೆ ಇದು ಹೆಚ್ಚುವರಿ ಹೊರೆ ಆಗುತ್ತಿದೆ.ಒಬ್ಬ ಉಪನ್ಯಾಸಕ ಇಂದು ಪಾಠ ಹೇಳುವ ಶಿಕ್ಷಕರಿಗಿಂತ ಹೆಚ್ಚು “ಡೇಟಾ ಎಂಟ್ರಿ ಆಪರೇಟರ್” ಆಗಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂಬುದು ಶಿಕ್ಷಕರ ನೋವು. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಕೈಚಳಕ ತರಬೇತಿ ನೀಡಬೇಕಾದ ಶಿಕ್ಷಕರು ದಿನದ ಅರ್ಧ ಸಮಯವನ್ನು ಸರ್ಕ್ಯುಲರ್ ಓದುವುದರಲ್ಲಿ, ಫೋಟೋ ಅಪ್ಲೋಡ್ ಮಾಡುವುದರಲ್ಲಿ, ವರದಿಗಳನ್ನು ಸಿದ್ಧಪಡಿಸುವುದರಲ್ಲಿ ಕಳೆಯುತ್ತಿದ್ದಾರೆ.
ಖಾಸಗಿ ಐಟಿಐಗಳ ಸ್ಥಿತಿ ಇನ್ನೂ ಕಠಿಣವಾಗಿದೆ. ಸರ್ಕಾರದ ಯಾವುದೇ ಆರ್ಥಿಕ ನೆರವಿಲ್ಲದೆ ಸಂಸ್ಥೆಗಳನ್ನು ನಡೆಸುತ್ತಿರುವ ಆಡಳಿತ ಮಂಡಳಿಗಳು ಪ್ರತಿಯೊಂದು ಹೊಸ ನಿಯಮಕ್ಕೆ ಹೊಸ ವೆಚ್ಚ ಭರಿಸಬೇಕಾಗಿದೆ. ಕೆಲವೊಮ್ಮೆ ಹೊಸ ಯಂತ್ರೋಪಕರಣ ಖರೀದಿ, ಕೆಲವೊಮ್ಮೆ ಹೊಸ ಲ್ಯಾಬ್ ಮಾನದಂಡ, ಮತ್ತೊಮ್ಮೆ ಹೊಸ ಸಾಫ್ಟ್ವೇರ್ ಅಥವಾ ಡಿಜಿಟಲ್ ವ್ಯವಸ್ಥೆ — ಹೀಗೆ ನಿರಂತರ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಸಣ್ಣ ಹಾಗೂ ಗ್ರಾಮೀಣ ಭಾಗದ ಸಂಸ್ಥೆಗಳಿಗೆ ಅಸಾಧ್ಯವಾಗುತ್ತಿದೆ.
ಇದರಿಂದ ಶಿಕ್ಷಣದ ಮೂಲ ಉದ್ದೇಶವೇ ಮಸುಕಾಗುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಜ್ಞಾನ ಮತ್ತು ಕೈಚಳಕ ಕೌಶಲ್ಯ ನೀಡುವ ಬದಲು, “ನಿಯಮ ಪಾಲನೆ”ಯೇ ಪ್ರಮುಖ ಕಾರ್ಯವಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಕಲಿಕೆಯ ಕೇಂದ್ರಗಳಿಗಿಂತ ಆಡಳಿತಾತ್ಮಕ ಕಚೇರಿಗಳಂತೆ ಕಾಣುವ ಸ್ಥಿತಿ ಬಂದಿದೆ.
ತಾಂತ್ರಿಕ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಬೇಕಾದರೆ ಕೇವಲ ಹೊಸ ನಿಯಮಗಳು ಸಾಕಾಗುವುದಿಲ್ಲ; ನೆಲಮಟ್ಟದ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳುವ ನೀತಿಗಳು ಅಗತ್ಯ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಸಾಮರ್ಥ್ಯ, ಆರ್ಥಿಕ ಪರಿಸ್ಥಿತಿ ಮತ್ತು ಸಿಬ್ಬಂದಿ ಲಭ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸರಳ ಮತ್ತು ಪ್ರಾಯೋಗಿಕ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ.ಇಲ್ಲವಾದರೆ ಈಗಾಗಲೇ ದಾಖಲಾತಿ ಕೊರತೆಯಿಂದ ಬಳಲುತ್ತಿರುವ ಐಟಿಐ ಹಾಗೂ ಡಿಪ್ಲೋಮಾ ಸಂಸ್ಥೆಗಳು, ನಿಯಮಗಳ ಮತ್ತು ಆಡಳಿತಾತ್ಮಕ ಒತ್ತಡದ ಭಾರಕ್ಕೆ ಕುಸಿದು ಬೀಳುವ ದಿನ ದೂರವಿಲ್ಲ. ತಾಂತ್ರಿಕ ಶಿಕ್ಷಣ ಉಳಿದರೆ ಮಾತ್ರ ಕೌಶಲ್ಯಭರಿತ ಭಾರತ ನಿರ್ಮಾಣ ಸಾಧ್ಯ ಎಂಬ ಸತ್ಯವನ್ನು ನೀತಿ ರೂಪಿಸುವವರು ಮರೆಯಬಾರದು.
-ಪ್ರವೀಣ್ ಅಯ್ಯರ್, ಉಪನ್ಯಾಸಕರು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
