ಅಂಕಣ – ಸ್ವಾಸ್ಥ್ಯ ಸಂಪದ
- ಡಾ. ಶ್ರೀವತ್ಸ ಭಾರದ್ವಾಜ, ದತ್ತಂ ಆಯುರ್ಧಾಮ, ಮಂಗಳೂರು
ಬಿಲ್ವಪತ್ರೆಯ ಮಹತ್ವವನ್ನು ಈಗಾಗಲೇ ನಿಮಗೆ ತಿಳಿಸಿದ್ದೇನೆ. ಅದೇ ಮರದಲ್ಲಿ ವರ್ಷಕ್ಕೆ ಒಮ್ಮೆ ಫಲಕೊಡುವ ಈ ಅದ್ಭುತ ಹಣ್ಣಿನ ಪರಿಚಯವನ್ನು ಮಾಡಿಕೊಳ್ಳೋಣ. ಸಾಮಾನ್ಯವಾಗಿ ಮಾರ್ಚ್ ನಿಂದ ಜೂನ್ ತಿಂಗಳ ನಡುವೆ ಬೇಲದ ಹಣ್ಣು ಸಿಗುತ್ತದೆ. ನೋಡಲು ಆಕರ್ಷಕವಾಗಿ ಇರದಿದ್ದರೂ ಇದರಲ್ಲಿರುವ ಹಲವಾರು ಆರೋಗ್ಯವರ್ಧಕ ಗುಣಗಳನ್ನು ತಿಳಿದರೆ ಆಶ್ಚರ್ಯವಾಗದಿರದು. ಅದಕ್ಕೊಂದು ಉದಾಹರಣೆ ಇಲ್ಲಿದೆ.
ಒಂದು ಘೋರವಾದ ಕಾಯಿಲೆಯಿಂದ ಆಗತಾನೇ ಗುಣಮುಖರಾಗಿದ್ದ ವೃದ್ಧರೊಬ್ಬರು ಅಕಸ್ಮಾತ್ ಆಗಿ ತೀವ್ರವಾದ ಅಜೀರ್ಣ, ರಕ್ತಭೇದಿಯಿಂದ ಒದ್ದಾಡತೊಡಗಿದರು. ತಪಾಸಣೆ ಮಾಡಿದ ವೈದ್ಯರು, “ವಿಪರೀತ ಔಷಧ ಸೇವನೆಯಿಂದಾಗಿ ಐ.ಬಿ.ಸ್ ಎನ್ನುವ ಇನ್ನೊಂದು ಕಾಯಿಲೆ ಶುರುವಾಗಿದೆ. ಇದಕ್ಕೆ ಪರಿಹಾರವಿಲ್ಲ, ನೀವು ಬದುಕಿರುವಷ್ಟು ಸಮಯ ಔಷಧ ತೆಗೆದುಕೊಳ್ಳಬೇಕು” ಎಂದು ಸೂಚಿಸಿದರು. ಶಾರೀರಿಕವಾಗಿ ಕುಗ್ಗಿದ್ದ ಅವರು ಜೀವನಪೂರ್ತಿ ಔಷಧಿ ಸೇವನೆಯ ಬಗ್ಗೆ ಕೇಳಿ ಮಾನಸಿಕವಾಗಿಯೂ ಕುಗ್ಗಿ ಹೋದರು. ಮಾನಸಿಕವಾಗಿ ಕುಗ್ಗಿದ್ದ ಅವರಿಗೆ ಹೊಸತಾಗಿ ಶುರುವಾದ ಕಾಯಿಲೆ ಚೆನ್ನಾಗಿ ಬೇರು ಬಿಟ್ಟಿತ್ತು. ಈ ಸಂದರ್ಭದಲ್ಲಿ ತಮ್ಮ ಮಕ್ಕಳ ಒತ್ತಾಯಕ್ಕೆ ನನ್ನನ್ನು ಭೇಟಿಯಾಗಲು ಬಂದಿದ್ದರು. ಅವರ ಪರಿಸ್ಥಿತಿ ನೋಡಿ, “ನಿಮಗೆ ಆಯುರ್ವೇದದ ಮೇಲೆ ನಂಬಿಕೆ ಬರುವವರೆಗೆ ಯಾವುದೇ ಔಷಧ ಬೇಡ, ಅದರ ಬದಲು ಮನೆಮದ್ದು ಮತ್ತು ಆಹಾರ ಕ್ರಮವನ್ನು ಸೂಚಿಸುವೆ” ಎಂದೆ. ಇದಕ್ಕೆ ಒಪ್ಪಿದ ಅವರಿಗೆ ನಿರ್ದಿಷ್ಟವಾದ ಪಥ್ಯಾಹಾರದೊಂದಿಗೆ ಬೇಲದ ಹಣ್ಣಿನ ಪಾನಕ ಅಥವಾ ಒಣಗಿದ ತಿರುಳಿನ ಕಷಾಯವನ್ನು ದಿನನಿತ್ಯ ಕುಡಿಯಲು ಸೂಚಿಸಿದೆ. ನಲವತ್ತೆಂಟು ದಿನಗಳ ಈ ಪ್ರಯೋಗದಿಂದ ಯಾವುದೇ ಔಷಧವಿಲ್ಲದೆ ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾದರು. ಅದೆಷ್ಟೋ ದೊಡ್ಡ ದೊಡ್ಡ ವೈದ್ಯರು ಗುಣಪಡಿಸದ ಕಾಯಿಲೆ ಒಂದು ಹಣ್ಣಿನಿಂದ ಗುಣವಾದದ್ದನ್ನು ನೋಡಿ ತಮ್ಮ ಮನೆಯ ಅಂಗಳದಲ್ಲಿ ಈ ಗಿಡವನ್ನು ನೆಟ್ಟು ಹಲವರಿಗೆ ಮಾದರಿಯಾಗಿದ್ದಾರೆ.
ಅಂತಹ ಬೇಲದ ಹಣ್ಣಿನ ಗುಣಗಳ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ.
● ಬೇಲದ ಹಣ್ಣು ರಕ್ತವನ್ನು ಶುದ್ಧಗೊಳಿಸಲು ಸಹಾಯ ಮಾಡುತ್ತದೆ.
● ಈ ಹಣ್ಣು ತಿಂದವರಿಗೆ ಯಾವರೀತಿಯ ಪೋಷಕಾಂಶಗಳ ಕೊರತೆಯೂ ಆಗುವುದಿಲ್ಲ.
● ಈ ಹಣ್ಣಿನಲ್ಲಿ ಕಣ್ಣುಗಳ ಶಕ್ತಿಯನ್ನು ವೃದ್ಧಿಸುವ ಶಕ್ತಿಯಿದೆ.
● ಈ ಹಣ್ಣು ತಿಂದವರಿಗೆ ಮಲಶೋಧನೆ ಸರಿಯಾಗಿ ಆಗುತ್ತದೆ.
● ಕಾಲರಾ ಎನ್ನುವ ಘೋರವಾದ ಕಾಯಿಲೆಯನ್ನು ಸುಲಭವಾಗಿ ಪರಿಹರಿಸುವ ಶಕ್ತಿ ಈ ಹಣ್ಣಿನಲ್ಲಿದೆ.
● ಮಕ್ಕಳಲ್ಲಿ ಭೇದಿ, ರಕ್ತಭೇದಿಯಾದಾಗ ಈ ಹಣ್ಣು ತುಂಬಾ ಬೇಗ ಪರಿಹಾರ ನೀಡುತ್ತದೆ.
● ಹೊಟ್ಟೆಯಲ್ಲಿ ಹುಳಗಳು ಆಗದಂತೆ ಈ ಹಣ್ಣು ನೋಡಿಕೊಳ್ಳುತ್ತದೆ.
● ಹೊಟ್ಟೆಹುಣ್ಣು ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ.
● ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
● ಬಡಕಲಾಗಿ ಕಾಣುವ ಮಕ್ಕಳನ್ನು ಆರೋಗ್ಯವಂತರಾಗಿಸುವಲ್ಲಿ ಈ ಹಣ್ಣು ಸಹಾಯ ಮಾಡುತ್ತದೆ.
● ಮೂಲವ್ಯಾಧಿ ಸಮಸ್ಯೆಯನ್ನು ಪರಿಹರಿಸುತ್ತದೆ.
● ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆ ಇದ್ದವರು ನಿತ್ರಾಣದಿಂದ ಬಳಲುತ್ತಿದ್ದಾಗ ಈ ಹಣ್ಣನ್ನು ತಿಂದರೆ ಉತ್ತಮ.
● ರಕ್ತದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
● ಹೊಟ್ಟೆಗೆ ಬಿದ್ದ ವಿಷವನ್ನು ತೆಗೆಯಲು ಈ ಹಣ್ಣು ಸಹಾಯ ಮಾಡುತ್ತದೆ.
● ಈ ಹಣ್ಣಿನಿಂದ ತಯಾರಿಸಿದ ಎಣ್ಣೆಯನ್ನು ಮೈಗೆ ಹಚ್ಚಿದರೆ ಕೀಟಾಣುಗಳ ಬೆಳವಣಿಗೆ ಆಗುವುದಿಲ್ಲ.
● ಬೇಲದ ಕಾಯಿಯನ್ನು ಅರೆದು ಮೈಗೆ ಸೋಪ್ ರೀತಿಯಾಗಿ ಉಪಯೋಗಿಸಬಹುದು, ಬಟ್ಟೆಗಳನ್ನೂ ತೊಳೆಯಬಹುದು.
● ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಲು ಈ ಹಣ್ಣು ತುಂಬಾ ಸಹಾಯಕಾರಿ.
● ಹಾಲುಣಿಸುವ ತಾಯಂದಿರ ಹಾಲಿನ ಉತ್ಪಾದನೆ ಜಾಸ್ತಿ ಮಾಡುತ್ತದೆ.
● ಈ ಹಣ್ಣನ್ನು ನಿಯಮಿತವಾಗಿ ಉಪಯೋಗಿಸಿದಲ್ಲಿ ಕ್ಯಾನ್ಸರ್ನಂತಹ ಘೋರವಾದ ಕಾಯಿಲೆಗಳು ನಮ್ಮನ್ನು ಕಾಡುವುದಿಲ್ಲ.
ಬೇಲದ ತಾಜಾಹಣ್ಣಿನ ತಿರುಳನ್ನು ಪಾನಕ ಮಾಡಲು ಉಪಯೋಗಿಸಬಹದು ಅಥವಾ ಅದನ್ನು ಒಣಗಿಸಿ ಇಟ್ಟುಕೊಂಡರೆ ನಮಗೆ ಬೇಕಾದಾಗ ಕಷಾಯವನ್ನು ಮಾಡಿ ಕುಡಿಯಬಹುದು. ಇಂತಹ ಹಲವು ಪ್ರಯೋಜನಗಳನ್ನು ಹೊಂದಿರುವ ಬೇಲದ ಹಣ್ಣನ್ನು ಉಪಯೋಗಿಸಿ ಉತ್ತಮ ಆರೋಗ್ಯವನ್ನು ಹೊಂದಬಹುದು.
