ಅಂಕಣ – ಕೃಷಿಯಿಂದ ಬದುಕು
- ಸುಧಾ ಸಂದೀಪ್, ಎಂ.ಎಸ್ಸಿ. ಕೃಷಿ, ಹುಣಸೂರು
ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಉತ್ತಮ ನಿದರ್ಶನ ಶ್ರೀಮತಿ ಸ್ನೇಹ ರವೀಶ್ ಭಟ್. ಓದಿದ್ದು ಕಂಪ್ಯೂಟರ್ ಸೈನ್ಸ್, ಆದರೆ ಮಾಡುತ್ತಿರುವುದು ಅಪರೂಪದ ಜಲ ಸಸ್ಯಗಳ ಸಂರಕ್ಷಣೆ ಹಾಗೂ ಸಂವರ್ಧನೆ. ಹೌದು, ಮಂಗಳೂರಿನ ಇವರ ಮನೆಯ ತಾರಸಿಯಲ್ಲಿ ಕೆರೆ ಕುಂಟೆಗಳಲ್ಲಿ ಬೆಳೆಯುವ ದೇಶವಿದೇಶಗಳ ಬಣ್ಣ ಬಣ್ಣದ 380ಕ್ಕೂ ಹೆಚ್ಚು ತಾವರೆ, ನೈದಿಲೆ ಮತ್ತಿತರ ಜಲಸಸ್ಯಗಳಿವೆ. ಇವರ ಈ ಸಂಗ್ರಹ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಪ್ರಯೋಗ ವಸ್ತುವಾಗಿಯೂ, ಗೃಹಿಣಿಯರಿಗೆ ಸಣ್ಣಮಟ್ಟದ ಉದ್ಯಮವಾಗಿಯೂ ಉಪಯುಕ್ತ. ಖ್ಯಾತ ನಿರ್ದೇಶಕರ ತ್ರಿಭಾಷಾ ಚಲನಚಿತ್ರದಲ್ಲೂ ಇವರ ತಾರಸಿ ತೋಟದ ಕಂಪು ಹರಡಿದೆ ಎಂದರೆ ಇವರ ಸಾಧನೆ ದೊಡ್ಡದು ಎಂದು ತಿಳಿಯುತ್ತದೆ.
ಮೂಲತಃ ಮಂಗಳೂರಿನವರಾದರೂ ತಂದೆ ಗಣೇಶ್ ಭಟ್ ಬ್ಯಾಂಕ್ ಉದ್ಯೋಗಿ ಆದ ಕಾರಣ ಕರ್ನಾಟಕದ ಮೂಲೆ ಮೂಲೆಗಳನ್ನು ನೋಡುವ ಅವಕಾಶ ಸ್ನೇಹ ಅವರಿಗೊದಗಿತ್ತು. ತಾಯಿ ವಿಜಯಾ ಗಣೇಶ್ ಅವರು ಚಂದನ ವಾಹಿನಿಯಲ್ಲಿ ನಿರೂಪಣೆ ಮಾಡುವುದನ್ನು ಬಾಲ್ಯದಿಂದಲೇ ಗಮನಿಸಿದ್ದ ಸ್ನೇಹ ಅವರಿಗೆ ಕನ್ನಡ ಭಾಷೆಯ ಮೇಲೆ ಸಾಕಷ್ಟು ಹಿಡಿತ ಬಾಲ್ಯದಿಂದಲೇ ಇತ್ತು. ಕಾಲೇಜು ವಿಧ್ಯಾರ್ಥಿಯಾಗಿದ್ದಾಗಲೇ ಚಂದನದ ಸತ್ಯದರ್ಶನ, ಬಯೋಸ್ಕೋಪ್ನಂತಹ ಉತ್ತಮ ಕಾರ್ಯಕ್ರಮಗಳ ನಿರೂಪಣೆ ಮಾಡುವ ಅವಕಾಶ ಲಭಿಸಿತು. ಎಂ.ಸಿ.ಎ ಸ್ನಾತಕೋತ್ತರ ಪದವಿ ಪಡೆದ ನಂತರ ಕೆಲ ಕಾಲ ಖಾಸಗಿ ಕಾಲೇಜುಗಳಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದರೂ, ಮದುವೆಯಾಗಿ ಮಕ್ಕಳ ಜವಾಬ್ದಾರಿ ಹೆಗಲೇರಿದಾಗ ಕೆಲಸ ಬಿಡಬೇಕಾಯಿತು. ಆದರೆ ಚೆಂದವಾಗಿ ನಿರೂಪಣೆ ಮಾಡುವ ಇವರಿಗೆ ಮಂಗಳೂರು ಆಕಾಶವಾಣಿಯಲ್ಲಿ ಉದ್ಗೋಶಕಿಯಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆತ ಕಾರಣ ಮಕ್ಕಳ ಪಾಲನೆ ಜೊತೆ ಇಷ್ಟವಾದ ನಿರೂಪಣೆಯ ಕೆಲಸವೂ ಮುಂದುವರಿದಿದೆ.
ಸ್ನೇಹ ಅವರಿಗೆ ಬಾಲ್ಯದಿಂದಲೂ ಗಿಡ – ಮರ – ಪರಿಸರ ಎಂದರೆ ಅಪಾರ ಆಸಕ್ತಿ. ಅಪ್ಪನಿಗೆ ಯಾವ ಊರಿಗೆ ವರ್ಗಾವಣೆ ಆದರೂ ಸರಿ ಕೈತೋಟದ ಕೆಲಸ ಮಾತ್ರ ಕೈ ಬಿಟ್ಟಿರಲಿಲ್ಲ. ಬಿಡುವಿನ ವೇಳೆ ಪೋಷಕರ ಜೊತೆ ಸೇರಿ ಅಂಗಳದಲ್ಲಿ ಮನೆಗೆ ಬೇಕಾದ ಸೊಪ್ಪು ತರಕಾರಿ ಬೆಳೆಯುವುದು, ಅಮ್ಮನ ಜೊತೆ ಸೇರಿ ಗುಡ್ಡದಲ್ಲಿ ಬೆಳೆಯುವ ಕಾಡು ಸಸ್ಯಗಳ ಚಿಗುರು ತಂದು ಅದರಿಂದ ತಂಬುಳಿ ಮಾಡುವುದು ಹೀಗೆ ಸದಾ ಪರಿಸರಕ್ಕೆ ಹತ್ತಿರವಾಗಿರುತ್ತಾರೆ ಸ್ನೇಹ.
ಮದುವೆಯ ನಂತರ ಪತಿಯೊಂದಿಗೆ ಮಂಗಳೂರಿನಲ್ಲಿರುವ ಇವರು ತಾರಸಿಯಲ್ಲಿ ಕೈ ತೋಟ ಮಾಡಲು ಪ್ರಾರಂಭಿಸಿದರು. ಮಂಗಳೂರಿನಿಂದ ಬೆಂಗಳೂರು – ಮೈಸೂರು ಕಡೆ ಪ್ರಯಾಣ ಮಾಡುವಾಗ ಕೆರೆಗಳಲ್ಲಿ ಅಂದವಾಗಿ ಅರಳಿರುವ ತಾವರೆ ನೋಡಿ ತಮ್ಮ ತಾರಸಿಯಲ್ಲೇಕೆ ಒಂದು ತಾವರೆ ಗಿಡ ಬೆಳೆಸಬಾರದು ಎಂದು ಆಲೋಚಿಸಿದರು. ಕಾಕತಾಳೀಯ ಎಂಬಂತೆ ಸುಮಾರು 2006-07ರ ಸಮಯದಲ್ಲಿ ಪಿರಿಯಾಪಟ್ಟಣದ ಹತ್ತಿರ ಇರುವ ಕೆರೆಯಿಂದ ಪತಿ ರವೀಶ್ ಒಂದು ಗೊಂಚಲು ಕಮಲದ ಹೂವುಗಳನ್ನು ಬಿಡಿಸಿ ತಂದು ಉಡುಗೊರೆಯಾಗಿ ನೀಡಿದ್ದರು. ಅಬ್ಬಾ ಎಷ್ಟು ಸಂತಸವಾಯಿತೆಂದರೆ ಅದನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ನೇಹ ಭಟ್.

ಒಂದು ಪ್ರಭೇದದಿಂದ ಇಂದು 380 ಜಾತಿ ಜಲಸಸ್ಯಗಳನ್ನು ಬೆಳೆದ ಬಗೆಯನ್ನು ಸ್ನೇಹಾರ ಮಾತಿನಲ್ಲೇ ಕೇಳಿ
2014ರಲ್ಲಿ ಮೊದಲ ಸಲ ಒಂದು ಕಮಲದ ಗಿಡವನ್ನು ಕೆರೆಯಿಂದ ತಂದು ತಾರಸಿಯಲ್ಲಿ ನೆಟ್ಟದ್ದು. ಎರಡು ವರ್ಷವಾಗಿ ನನ್ನಷ್ಟು ಎತ್ತರ ಬೆಳೆದರೂ ಒಂದು ಹೂವೂ ಬರಲಿಲ್ಲ. ಏಕೆ ಎಂದು ಯೋಚಿಸಿ ತಾರಸಿಯನ್ನೇ ಪ್ರಯೋಗಾಲಯವಾಗಿಸಿ ಟ್ರಯಲ್ ಆಂಡ್ ಎರರ್ ಪದ್ಧತಿಯಲ್ಲಿ ನಾನೇ ಸಂಶೋಧನೆ ನಡೆಸಿದೆ. ಕಮಲದ ಸಂಪೂರ್ಣ ಜೀವನ ಚಕ್ರ, ಸಸ್ಯ ಸಂವರ್ಧನೆ, ಯಾವಾಗ ಹೂವು ಬಿಡುತ್ತದೆ, ಯಾವ ರೀತಿ ಆರೈಕೆ ಮಾಡಬೇಕೆಂಬ ಹತ್ತು ಹಲವು ವಿಷಯಗಳ ಕುರಿತು ಅರಿಯುವ ಪ್ರಯತ್ನವಾಯಿತು.
ರಾಷ್ಟ್ರೀಯ ಹೂವು ‘ಕಮಲ’(lotus) ಮತ್ತು ‘ನೈದಿಲೆ’ (water Lilly) ಎರಡೂ ಬೇರೆ ಬೇರೆ ಪ್ರಭೇದಗಳು
ಕಮಲದ ಎಲೆಗಳು ಕೆಸುವಿನ ಎಲೆಗಳ ರೀತಿ ಇದ್ದು, ಇವು ನೀರಿನ ಮಟ್ಟದಿಂದ 2-3 ಅಡಿ ಎತ್ತರ ಬೆಳೆಯುತ್ತವೆ. ನೈದಿಲೆ ಅಥವಾ ವಾಟರ್ ಲಿಲ್ಲಿಗಳ ಎಲೆಗಳು ನೀರಿಗೆ ಅಂಟಿದಹಾಗೆ ಇದ್ದು ಕಮಲದ ಎಲೆಗಳಿಗಿಂತ ವಿಭಿನ್ನವಾಗಿರುತ್ತವೆ. ನೈದಿಲೆಯಲ್ಲಿ ರಾತ್ರಿ ಅರಳುವ ಹೂವುಗಳೂ ಕಾಣಿಸುತ್ತವೆ. ಕಮಲದ ಎಲೆಗಳ ಮೇಲೆ ನೀರಿನ ಹನಿಗಳು ನಿಲ್ಲುವುದಿಲ್ಲ. ಇದನ್ನೇ ಅಧ್ಯಾತ್ಮದಲ್ಲಿ ಜೀವನದಲ್ಲಿ ಯಾವುದಕ್ಕೂ ಅಂಟಿಕೊಂಡಿರಬಾರದು ಎಂದು ಸೂಚಿಸಲು ಬಳಸಿದ್ದಾರೆ.
ಜಲ ಸಸ್ಯಗಳಾದರೂ ಇವುಗಳನ್ನು ಬೆಳೆಸಲು ಬೇಕು ಜೇಡಿಮಣ್ಣು
ಈ ಎರಡೂ ಪ್ರಭೇದಗಳು ನೀರಿನಲ್ಲಿ ಬೆಳೆಯುತ್ತವಾದರೂ ನೀರಿನ ಜೊತೆ ಮಣ್ಣು ಬೇಕೇ ಬೇಕು. ನಾವು ಮನೆಯಲ್ಲಿ ಪ್ಲಾಸ್ಟಿಕ್ ಕುಂದ, ಟಬ್, ಸಿಮೆಂಟ್ ತೊಟ್ಟಿ ಅಥವಾ ವಿಶಾಲವಾದ ಕೊಳ ಹೀಗೆ ಯಾವುದಾದರೂ ಸರಿ ಇವುಗಳ ಅರ್ಧ ಭಾಗ ಮಣ್ಣು ಇರಬೇಕು. ನಾನು ಸಾವಯವ ಕೃಷಿ ಪದ್ಧತಿ ಅನುಸರಿಸುವ ಕಾರಣ ಮೊದಲು ಟಬ್ ಒಳಗೆ ಕಾಲು ಭಾಗ ಒಣಗಿದ ಸಗಣಿ ಪುಡಿ ಸುರಿಯುತ್ತೇನೆ. ಹಸಿ ಸಗಣಿ ಬಳಸಬಾರದು. ಒಣ ಸಗಣಿ ಪುಡಿ ಇಲ್ಲವಾದರೂ ಎರೆಹುಳು ಗೊಬ್ಬರ ಬಳಸಿದರೂ ತೊಂದರೆಯಿಲ್ಲ. ಇದರ ಮೇಲೆ ಮತ್ತೂ ಕಾಲುಭಾಗ ಕೆರೆಮಣ್ಣು ಅಥವಾ ಗದ್ದೆಯ ಜೇಡಿಮಣ್ಣು ಸಿಕ್ಕರೆ ಉತ್ತಮ. ಇಲ್ಲವಾದಲ್ಲಿ ಕೆಂಪು ಮಣ್ಣಾದರೂ ಸರಿ. ಮಣ್ಣು ಹಾಕಿದ ನಂತರ ಸ್ವಲ್ಪ ನೀರು ಹಾಕಿ ಕೆಸರು ಮಾಡಿ ಅದರಲ್ಲಿ ಕಮಲದ ಗಡ್ಡೆ/ ಬೀಜ ನೆಟ್ಟ ನಂತರ ಪೂರ್ತಿ ನೀರು ತುಂಬಿಸಬೇಕು. ಕಮಲ ನಿಂತ ನೀರಿನಲ್ಲಿ ಬೆಳೆಯುತ್ತದೆ. ಆದರೂ ಕೆಸರನ್ನು ತನಗೆ ತಾಗಿಸಿಕೊಳ್ಳುವುದಿಲ್ಲ. ಸನಾತನ ಧರ್ಮವೂ ಇದನ್ನು ಹೀಗೆ ಹೇಳುತ್ತದೆ. ನಾವು ಕೆಟ್ಟ ಪರಿಸರದಲ್ಲಿ ಇದ್ದರೂ ಆ ಹೊಲಸನ್ನು ಮೀರಿ ಬೆಳೆಯಬೇಕು ಎಂಬ ಆದರ್ಶ ಸಾರುತ್ತದೆ.
ಕಮಲ/ ನೈದಿಲೆಯ ಸಸ್ಯಾಭಿವೃದ್ಧಿ ಹೇಗೆ?
ಕಮಲವನ್ನು ಬೀಜದಿಂದ, ಗಡ್ಡೆಯಿಂದ ಮತ್ತು ಕೆಲ ಪ್ರಭೇದಗಳಲ್ಲಿ ಎಲೆಗಳಿಂದಲೂ ಸಸ್ಯಾಭಿವೃದ್ದಿ ಮಾಡಬಹುದು. ಗೆಡ್ಡೆಗಳಿಂದ ಸಸ್ಯಾಭಿವೃದ್ದಿ ಮಾಡಿದರೆ ಸಾಮಾನ್ಯವಾಗಿ 45-50 ದಿನಗಳಲ್ಲಿ ಹೂವು ಬರುವ ನಿರೀಕ್ಷೆಯಿದೆ. ಉಳಿದಂತೆ ಬೀಜಗಳಿಂದ ತಡವಾಗಿ ಹೂವಾಗುತ್ತದೆ. ಹಾಗಾಗಿ ಕಮಲ ಬೆಳೆಯ ಬಯಸುವವರು ಗಡ್ಡೆಯಿಂದ ಬೆಳೆಸಿದರೆ ಉತ್ತಮ.
ಕಮಲದಲ್ಲಿವೆ ನೂರಾರು ಪ್ರಭೇದಗಳು
ಕಮಲ ಮತ್ತು ನೈದಿಲೆಯ ಹೂವುಗಳಿಗೆ ಜೇನುನೊಣಗಳು, ದುಂಬಿಗಳು ಮಕರಂದ ಹೀರಲು ಆಗಮಿಸಿ ಪರಾಗಸ್ಪರ್ಶ ಮಾಡುತ್ತವೆ. ಅಡ್ಡ ಪರಾಗಸ್ಪರ್ಶದಿಂದ ನೈಸರ್ಗಿಕವಾಗಿಯೇ ಹೊಸ ಪ್ರಭೇದ ಸೃಷ್ಟಿಯಾಗುತ್ತವೆ. ಇನ್ನು ಕಮಲದ ಮೇಲೆ ಕೆಲಸ ಮಾಡುವ ಆಸಕ್ತರು ಕೃತಕವಾಗಿ ಪರಾಗಸ್ಪರ್ಶ ಮಾಡುವ ಮೂಲಕ ಹೊಸ ಹೊಸ ಹೈಬ್ರಿಡ್ ಕಮಲದ ತಳಿಗಳನ್ನು ಹೆಚ್ಚು ಕಾಲ ಹೂವು ನೀಡುವ ಪ್ರಭೇದಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಇದರಿಂದ ಚಿಕ್ಕ ಜಾಗದಲ್ಲೂ ಹೆಚ್ಚು ಹೂವು ಪಡೆಯಬಹುದಾಗಿದೆ. ನನ್ನಲಿರುವ ಹೆಸರಾಂತ ತಳಿಗಳೆಂದರೆ ಲಕ್ಷ್ಮೀ, ಕರ್ಣ, ಪಿಂಕ್ ಕ್ಲೌಡ್, ಬಿಳಿ ಮತ್ತು ಕೆಂಪು ಪಿಯೋನಿ, ಕೆಂಪು ಶಾಂಗೈ, ಅಖಿಲ, ಜೂಲಿಯಟ್, ಸೆರಾ ಹೀಗೆ 380ಕ್ಕೂ ಅಧಿಕ ಜಲ ಸಸ್ಯಗಳಿವೆ.
ಕಮಲ ನೆಟ್ಟ ಮೇಲೆ ‘ಗಪ್ಪಿ ಮೀನು’ ಬಿಡುವುದನ್ನು ಮರೆಯಬಾರದು
ನಿಂತ ನೀರು ಇರುವ ಕಾರಣ ಸೊಳ್ಳೆಗಳು ಸುಲಭವಾಗಿ ಬೆಳೆಯುತ್ತವೆ. ಇದನ್ನು ತಪ್ಪಿಸಲು ಪ್ರತಿಯೊಂದು ಟಬ್ ಒಳಗೆ 2-3 ಗಪ್ಪಿ ಮೀನು ಬಿಡಬೇಕು. ಮೀನುಗಳು ಸೊಳ್ಳೆ ಮರಿಗಳನ್ನು ತಿಂದು ಸೊಳ್ಳೆ ನಿಯಂತ್ರಿಸುತ್ತವೆ ಮತ್ತು ಅವುಗಳ ಓಡಾಟ ನೋಡುವುದೇ ಮನಸ್ಸಿಗೆ ಆನಂದ ನೀಡುತ್ತದೆ.
ಸಣ್ಣ ಜಾಗವಿದ್ದರೆ ಬೇಕು ರೀಪಾಟಿಂಗ್
ತಾವರೆ ಜಾತಿಯ ಗಿಡಗಳು ಬಹುಬೇಗ ಬೆಳೆಯುತ್ತವೆ. ನೀವು ಬೇಸಿಗೆಯಲ್ಲಿ ಕೆರೆಗಳನ್ನು ಗಮನಿಸಿದರೆ ಇಡೀ ಕೆರೆ ಕಮಲದಿಂದ ತುಂಬಿರುವುದನ್ನು ಕಾಣಬಹುದು. ಆದರೆ ನಾವು ಟಬ್ ಅಲ್ಲಿ ಬೆಳೆಸುವ ಕಾರಣ ಅದರ ಬೇರುಗಳಲ್ಲಿ ಗೆಡ್ಡೆಗಳಾಗಿ ಪೂರ್ಣ ಟಬ್ ತುಂಬಿಹೋಗಿರುತ್ತದೆ. ನಂತರ ಹರಡಲು ಸ್ಥಳ ಮತ್ತು ಪೋಷಕಾಂಶ ಸಿಗದೆ ಹೂವು ಬಿಡುವುದನ್ನು ನಿಲ್ಲಿಸುತ್ತದೆ. ಇನ್ನು ಚಳಿಗಾಲದಲ್ಲಿ ಬಹುತೇಕ ಎಲ್ಲ ಪ್ರಭೇದಗಳು ಸುಪ್ತಾವಸ್ಥೆಗೆ ತೆರಳುವ ಕಾರಣ ಆ ಸಮಯದಲ್ಲಿ ಹೂವು ಆಗುವುದಿಲ್ಲ. ನಮ್ಮಲ್ಲಿ ದೊಡ್ಡ ಕೊಳ ಇದ್ದರೆ ತೊಂದರೆ ಇಲ್ಲ. ಚಿಕ್ಕ ಟಬ್ ಇದ್ದರೆ ವರ್ಷಕ್ಕೆ ಒಮ್ಮೆ ರೀಪಾಟಿಂಗ್ ಅಗತ್ಯವಾಗಿದೆ.
ದೇವರ ಪೂಜೆಗೂ ಸೈ ಅಡುಗೆಗೂ ಜೈ
ಲಕ್ಷ್ಮೀ ಪೂಜೆಗೆಷ್ಟೇ ಅಲ್ಲದೆ ಕಮಲದ ಗೆಡ್ಡೆ, ಕಾಂಡ, ಬೀಜ ಎಲ್ಲವೂ ಖಾದ್ಯಯೋಗ್ಯವಾಗಿದೆ. ಈಶಾನ್ಯ ಭಾರತದಲ್ಲಿ ಕಮಲವನ್ನು ಅತಿಹೆಚ್ಚು ಸೇವಿಸುತ್ತಾರೆ. ಕಮಲದ್ದೇ ಒಂದು ಪ್ರಭೇದ ಬೀಜಗಳಿಂದ ಮಖಾನ ತಯಾರಿಸುತ್ತಾರೆ. ಆರೋಗ್ಯ ಕಾಳಜಿ ಇರುವವರು ಇದನ್ನು ಸಾಕಷ್ಟು ಸೇವಿಸುತ್ತಾರೆ.

ಕಮಲ ಇದ್ದರೆ ಜೀವವೈವಿಧ್ಯತೆ ತಾಣವಾಗುತ್ತದೆ ನಮ್ಮ ಮನೆ
ಕಮಲ ಇದ್ದರೆ ಅದರ ಕೆಳಗೆ ನೀರಿರುತ್ತದೆ. ನೀರು ಕುಡಿಯಲು ಸಾಕಷ್ಟು ಪಕ್ಷಿಗಳು ಬರುತ್ತವೆ. ಟಬ್ ಒಳಗೆ ಮುಳುಗಿ ರೆಕ್ಕೆಗಳನ್ನು ಬಡಿದರೆ ಆಹಾ…ಆ ದೃಶ್ಯ ನೋಡವುದೇ ಆನಂದ. ಸೊಳ್ಳೆ ನಿಯಂತ್ರಣಕ್ಕೆ ಬಿಟ್ಟ ಮೀನುಗಳು ಸಹ ಆಗಾಗ್ಗೆ ಮರಿ ಹಾಕುತ್ತಿರುತ್ತವೆ. ಅವುಗಳ ಓಡಾಟ, ಚಲನವಲನ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಎಲ್ಲಾ ಬಗೆಯ ಕಮಲಗಳಿಗೆ ಅದರದ್ದೇ ಆದ ಪರಿಮಳವಿರುತ್ತದೆ. ಜೇನು ಮತ್ತು ದುಂಬಿಗಳು ಮಕರಂದ ಹೀರಲು ಆಗಮಿಸುತ್ತವೆ. ಒಟ್ಟಿನಲ್ಲಿ ಒಂದು ಕೆರೆಯ ವಾತಾವರಣವನ್ನು ನಮ್ಮ ಮನೆಯಲ್ಲೇ ನಿರ್ಮಿಸಬಹುದಾಗಿದೆ. ಸೂರ್ಯೋದಯದ ವೇಳೆ ನಾವು ತಾರಸಿಗೆ ಹೋದರೆ ಸ್ವರ್ಗವೇ ಧರೆಗಿಳಿದಂತ ಅನುಭೂತಿಯಾಗುವುದರಲ್ಲಿ ಸಂಶಯವಿಲ್ಲ.
ಮಹಿಳೆಯರಿಗೆ ಸ್ವಉದ್ಯೋಗ ನೀಡುತ್ತದೆ ಕಮಲ ಕೃಷಿ
ಕೊರೊನಾ ನಂತರ ಅನೇಕರಿಗೆ ಪರಿಸರ ಕಾಳಜಿ ಸಾವಯವ ಕೃಷಿ, ಕೈ ತೋಟದ ಕುರಿತು ಸಾಕಷ್ಟು ಅರಿವು ಮೂಡಿದೆ. ಹಾಗೇ ಕಮಲ ಬೆಳೆಸುವ ಆಸಕ್ತಿ ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮಲ್ಲಿ ಅನೇಕರಿಗೆ ಸಸ್ಯಾಭಿವೃದ್ಧಿ ಕುರಿತು ಮಾಹಿತಿ ಇಲ್ಲ. ಸರಿಯಾಗಿ ಮಾಡಿದರೆ ಕಮಲದ ಸಸಿಗಳನ್ನು ಮನೆಯಲ್ಲೇ ಅಭಿವೃದ್ಧಿಪಡಿಸಿ ಗೃಹಿಣಿಯರು ಸಾಮಾಜಿಕ ಜಾಲತಾಣಗಳ ಮೂಲಕ ಇವುಗಳನ್ನು ಮಾರಾಟ ಮಾಡಬಹುದು. ಬಳ್ಳಾರಿ ಮತ್ತು ಚಿಕ್ಕಮಗಳೂರಿನ ಕೆಲ ಮಹಿಳೆಯರು ನಮ್ಮ ಮನೆಗೆ ಬಂದು ಕಮಲದ ಕುರಿತು ಪೂರ್ಣ ಮಾಹಿತಿ ಪಡೆದು ಪ್ರಸ್ತುತ ವಾಣಿಜ್ಯ ಮಟ್ಟದ ನರ್ಸರಿ ಪ್ರಾರಂಭಿಸಿದ್ದಾರೆ.
ಹೆಚ್ಚು ಹೂವು ಬಿಟ್ಟರೆ ಹತ್ತಿರದ ಹೂವಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ನವರಾತ್ರಿ ಸಮಯದಲ್ಲಿ ಒಂದು ಹೂವಿಗೆ 50-100ರೂ ಇರುತ್ತದೆ. ಹವ್ಯಾಸವಾಗಿ ಪ್ರಾರಂಭವಾದ ನಮ್ಮ ಕಮಲ ಕೃಷಿ ಇಂದು ವಾಣಿಜ್ಯ ರೂಪ ಪಡೆಯುತ್ತಿದೆ. ನಗರೀಕರಣದಿಂದ ಗದ್ದೆ ಕೆರೆಗಳೆಲ್ಲಾ ಮಾಯವಾಗುತ್ತಿರುವ ಈ ಸಮಯದಲ್ಲಿ ಕಮಲ ಪ್ರಭೇದಗಳನ್ನು ಉಳಿಸಬೇಕೆಂಬ ನಮ್ಮ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿ ಸಾಕಷ್ಟು ರೆಸಾರ್ಟ್, ಹೊಟೇಲ್, ದೇವಸ್ಥಾನ ಮತ್ತು ಆಸಕ್ತರು ನಮ್ಮ ಬಳಿ ವಿವಿಧ ಬಗೆಯ ಕಮಲ ಪ್ರಭೇದಗಳನ್ನು ಖರೀದಿಸುತ್ತಾರೆ. ಹುಟ್ಟು ಕುರುಡಿಯಾದ ಒಬ್ಬ ಮಹಿಳೆಗೆ ಕೃಷಿಯಲ್ಲಿ ಅಪಾರ ಆಸಕ್ತಿ ಇರುತ್ತದೆ. ಕಣ್ಣು ಕಾಣಿಸದಿದ್ದರೂ ಕೇವಲ ಸ್ಪರ್ಶದಿಂದ ಗಿಡಗಳನ್ನು ಗುರುತಿಸುತ್ತಾರೆ ಅವರು. ನನ್ನ ಕಮಲ ಕೃಷಿಯ ಕುರಿತು ತಿಳಿದ ಅವರು ಗಿಡ ಖರೀದಿಸಲು ಸಂಪರ್ಕಿಸಿದರು. ಅವರ ಈ ಜೀವನೋತ್ಸಾಹ ನೋಡಿ ಅವರಿಗೆ ಉಚಿತವಾಗಿ ಗಿಡಗಳನ್ನು ಕೊಟ್ಟು ಎಲ್ಲ ರೀತಿಯ ಮಾರ್ಗದರ್ಶನ ನೀಡಿದೆ. ಕೆಲವೇ ದಿನಗಳಲ್ಲಿ ಅವರ ಮನೆಯಲ್ಲಿ ಒಂದೇ ಸಲ 5-6 ಹೂವುಗಳಾಯಿತು. ಅವರ ಆನಂದಕ್ಕೆ ಪಾರವೇ ಇಲ್ಲ. ಕೇವಲ ಮಾರಾಟವಷ್ಟೇ ನಮ್ಮ ಗುರಿ ಅಲ್ಲ. ಹೂವು ಬಿಡುವವರೆಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. ನಾವು ಕಳುಹಿಸಿದ ಗಿಡದಲ್ಲಿ ಹೂವಾಗಿದೆ ಎಂದು ಅವರು ಫೊಟೋ ಕಳುಹಿಸಿದಾಗ ನಮಗೆ ಒಂದು ರೀತಿ ಆನಂದದ ಭಾವ ಮೂಡುತ್ತದೆ ಎನ್ನುತ್ತಾರೆ ಕಮಲಾಕ್ಷಿ ಸ್ನೇಹ ಭಟ್.
ನಾಡಿನ ಖ್ಯಾತ ಸಿನಿಮಾ ನಟ, ನಿರ್ದೇಶಕರಾದ ಸುಚೇಂದ್ರಪ್ರಸಾದ್ ಅವರ ತ್ರಿಭಾಷಾ ಸಿನಿಮಾ ‘ಪದ್ಮಗಂಧಿ’ಯಲ್ಲಿ ಇವರ ಮನೆಯ ತಾರಸಿ ತೋಟದ ತುಣುಕನ್ನು ಚಿತ್ರೀಕರಿಸಲಾಗಿದೆ. ಅನೇಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ ಕಮಲದ ಕುರಿತು ಅಧ್ಯಯನ ಮಾಡಿದ್ದಾರೆ. ಮಂಗಳೂರಿನ ಸಾವಯವ ಸಂತೆಯಲ್ಲಿ ಕಮಲದ ಗಿಡಗಳ ಪ್ರದರ್ಶನ ಮಾರಾಟ ಮಾಡುತ್ತಿದ್ದಾರೆ. ಇನ್ನೇನು ವರಮಹಾಲಕ್ಷ್ಮೀ ಹಬ್ಬ ಸಮೀಪಿಸುತ್ತಿದೆ. ಮಾರುಕಟ್ಟೆಯಿಂದ ಕಮಲದ ಹೂವು ಖರೀದಿಸುವ ಬದಲು ಸ್ನೇಹ ಭಟ್ ಅವರಿಂದ ಪ್ರೇರಣೆ ಪಡೆದು ನಿಮ್ಮ ಮನೆಯಲ್ಲೇ ಕಮಲ ಬೆಳೆಸಿ ಅದರ ಹೂವುಗಳನ್ನು ದೇವರಿಗೆ ಸಮರ್ಪಿಸಿದರೆ ಎಷ್ಟು ಚೆಂದ ಅಲ್ಲವೇ? ಸ್ನೇಹ ಭಟ್ ಅವರನ್ನು ಅಭಿನಂದಿಸಲು, ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಕಮಲದ ಸಸಿಗಳಿಗಾಗಿ ಸಂಪರ್ಕಿಸಿ +91 98446 43231.
