ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು
- ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ
ಹಲವರು ಪ್ರಾಮಾಣಿಕತೆ, ದಕ್ಷತೆ, ಪಾರದರ್ಶಕತೆ ಬಗ್ಗೆ ಇತರರಿಗೆ ಉಪದೇಶಿಸುತ್ತಾರೆ. ಕೆಲವರು ಪ್ರಾಮಾಣಿಕತೆ, ದಕ್ಷತೆ, ಪಾರದರ್ಶಕತೆ ಕುರಿತು ಉಪದೇಶಿಸದೆ ತಮ್ಮ ನಡವಳಿಕೆಯಲ್ಲಿ ಸ್ವತಃ ತೋರಿಸಿಕೊಡುತ್ತಾರೆ. ಮಂಗಳೂರಿನ ಜನಪ್ರಿಯ ವೈದ್ಯರಾಗಿದ್ದ ಡಾ. ಮಾಧವ ಭಂಡಾರಿ ಅವರು ಎರಡನೇ ಗುಂಪಿಗೆ ಸೇರಿದವರು.
ಜನಾನುರಾಗಿ ವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದ ಮಾಧವ ಭಂಡಾರಿ ಅವರ ಜೊತೆಗೆ ಎಂಬಿಬಿಎಸ್ ಪದವಿಗಳಿಸಿ ವೈದ್ಯರಾದವರಲ್ಲಿ ಅನೇಕರು ಅಮೆರಿಕ, ಇಂಗ್ಲೆಂಡ್ ಮೊದಲಾದ ಕಡೆ ಪ್ರಖ್ಯಾತ ವೈದ್ಯರಾಗಿ ಕೈ ತುಂಬಾ ಸಂಪಾದಿಸಿದ್ದರು. ದೊಡ್ಡ ದೊಡ್ಡ ನರ್ಸಿಂಗ್ ಹೋಮ್ ಕಟ್ಟಿಸಿದ್ದರು. ಬಂಗಲೆಗಳಲ್ಲಿ ವಾಸಿಸಿದ್ದರು. ಆದರೆ ಡಾ. ಭಂಡಾರಿ ನರ್ಸಿಂಗ್ ಹೋಮ್ ಕಟ್ಟಿಸಲಿಲ್ಲ. ವಿದೇಶಕ್ಕೆ ತೆರಳಲಿಲ್ಲ. ಅಷ್ಟೇ ಯಾಕೆ, ಸ್ವಂತಕ್ಕೊಂದು ಮನೆಯನ್ನೂ ಅವರು ಕಟ್ಟಿಸಿಕೊಳ್ಳಲಿಲ್ಲ. ಸಾಯುವವರೆಗೂ ಅವರಿದ್ದದ್ದು ಮಣ್ಣಗುಡ್ಡೆ ಪ್ರದೇಶದಲ್ಲಿರುವ ಅದೇ ಹಳೆಯ ಬಾಡಿಗೆ ಮನೆಯಲ್ಲಿ. ಗಾಂಧಿನಗರದಲ್ಲಿದ್ದ ಆ ಪುಟ್ಟ ಕ್ಲಿನಿಕ್ ಮಾತ್ರ ಸ್ವಂತದ್ದಾಗಿತ್ತು.
ಜನಪ್ರಿಯ ವೈದ್ಯರಾಗಿ ಒಂದು ಸೊಗಸಾದ ಮನೆಯನ್ನು ಮಂಗಳೂರಿನಲ್ಲಿ ಕಟ್ಟಿಸಿಕೊಳ್ಳುವುದು ಅವರಿಗೇನು ಕಷ್ಟದ ಸಂಗತಿ ಆಗಿರಲಿಲ್ಲ. ಸಾಲದ್ದಕ್ಕೆ ಅವರು ಎರಡು ಬಾರಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ)ದ ಅಧ್ಯಕ್ಷರು ಆಗಿದ್ದರು. ಮೂಡಾ ಅಧ್ಯಕ್ಷರಾಗಿ ಒಂದಾದರೂ ನಿವೇಶನವನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳದವರು ತೀರಾ ವಿರಳ. ಡಾ. ಭಂಡಾರಿ ಅಂತಹ ವಿರಳರ ಗುಂಪಿಗೆ ಸೇರಿದವರು. ಮನೆಯಿಲ್ಲದ ಅದೆಷ್ಟೋ ಮಂದಿಗೆ ಅವರು ನಿವೇಶನ ಕೊಡಿಸಿ, ಅವರಿಗೊಂದು ಸೂರಿನ ಭಾಗ್ಯ ಕರುಣಿಸಿದ್ದರು. ತಾನು ಮಾತ್ರ ಸ್ವಂತಕ್ಕೆ ಒಂದು ಸೂರು ಕಟ್ಟಿಸಿಕೊಳ್ಳಲೇ ಇಲ್ಲ (ಜನನ: 8.09.1939; ನಿಧನ: 17.07.2012).
ಅವರ ಕ್ಲಿನಿಕ್ನಲ್ಲೊಂದು ಧ್ಯೇಯವಾಕ್ಯ ಎಲ್ಲರ ಕಣ್ಣಿಗೆ ಬೀಳುತ್ತಿತ್ತು: “ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ”. ಕೇವಲ ಶೋಕಿಗಾಗಿ ಆ ಫಲಕವನ್ನು ಅವರು ತೂಗು ಹಾಕಿರಲಿಲ್ಲ. ಆ ಫಲಕದ ಘೋಷವಾಕ್ಯದಂತೆಯೇ ಜೀವನ ಪೂರ್ತಿ ಅವರು ನಡೆದುಕೊಂಡರು. ಅವರ ಕ್ಲಿನಿಕ್ಗೆ ಬರುವ ರೋಗಿಗಳಿಗೆ ಸೇವಾಶುಲ್ಕ ಅತ್ಯಂತ ಕಡಿಮೆ. ಗುರುತು ಪರಿಚಯದ, ಸಂಘ ಪರಿವಾರದ ಅನೇಕ ರೋಗಿಗಳಿಗಂತೂ ಅಲ್ಲಿ ಉಚಿತ ವೈದ್ಯಕೀಯ ಸೇವೆ ಸದಾ ಲಭ್ಯ. ಫೀಸು ಎಷ್ಟಾಯ್ತು ಡಾಕ್ಟ್ರೇ ಎಂದು ಕೇಳಿದರೆ ನಗುತ್ತಲೇ, ನಿಮ್ಮ ಫೀಸನ್ನು ಸಮಾಜ ಸೇವೆಗೆ ಅರ್ಪಿಸಿಬಿಡಿ ಎನ್ನುತ್ತ ಲೋಕಾಭಿರಾಮದ ಮಾತಾಡಿ ಕಳಿಸುತ್ತಿದ್ದ ದೃಶ್ಯವನ್ನು ಮರೆಯಲು ಸಾಧ್ಯವಿಲ್ಲ.
ಸಂಘದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ, ಮಂಗಳೂರು ವಿಭಾಗ ಸಂಘ ಚಾಲಕರಾಗಿದ್ದರು. ಸಂಘದ ಸಕ್ರಿಯ ಹಾಗೂ ಕಟ್ಟರ್ ಕಾರ್ಯಕರ್ತ ಅವರೆಂಬುದು ಇಡೀ ಮಂಗಳೂರಿಗೆ ತಿಳಿದಿತ್ತು. ಸಂಘ ವಿರೋಧಿಗಳೂ ಇದನ್ನು ಅರಿತಿದ್ದರು. ಆದರೆ ಅವರ ಕ್ಲಿನಿಕ್ಗೆ ಬರುತ್ತಿದ್ದ ರೋಗಿಗಳಲ್ಲಿ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಸಾಕಷ್ಟು ಸಂಖ್ಯೆಯಲ್ಲಿದ್ದರು. ತಮ್ಮ ದೇಹಕ್ಕೆ ಹಾಗೂ ಮನಸ್ಸಿಗೆ ಔಷಧಿ ಅಲ್ಲಿ ಸಿಗುತ್ತದೆ ಎಂಬುದು ಅವರೆಲ್ಲರ ನಂಬಿಕೆಯಾಗಿತ್ತು. ಭಂಡಾರಿ ಅವರು ದೈಹಿಕ ಕಾಯಿಲೆಗಳಿಗೆ ಔಷಧಿ ನೀಡುವುದರ ಜೊತೆಗೆ, ಅನೇಕರ ಕೌಟುಂಬಿಕ ಸಮಸ್ಯೆಗಳು, ವ್ಯಾವಹಾರಿಕ ರಗಳೆಗಳು, ಬಂಧುಗಳ ಕಿರಿಕಿರಿ ಮುಂತಾದ ಸಂಗತಿಗಳ ಬಗ್ಗೆಯೂ ಆಪ್ತವಾಗಿ ಸಮಾಲೋಚಿಸಿ, ಅದನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದುದು ಅವರ ಜನಪ್ರಿಯತೆಗೆ ಕಾರಣವಾಗಿತ್ತು.
ಕೊಂಕಣಿ ಸಮಾಜದಲ್ಲಿ ಜನಿಸಿದ್ದರೂ ಭಂಡಾರಿ ಅವರ ಜಾತ್ಯತೀತ ಮನೋಭಾವವನ್ನು ಸಂಘೇತರ ವ್ಯಕ್ತಿಗಳೂ ಶ್ಲಾಘಿಸುತ್ತಿದ್ದರು. ದಲಿತರು, ಕ್ರಿಶ್ಚಿಯನ್ನರು, ಮುಸ್ಲಿಮರು ಇನ್ನಿತರ ಸಮುದಾಯಗಳ ನೋವು, ಸಂಕಟಗಳ ಬಗ್ಗೆ ಭಂಡಾರಿಯವರದು ಕಾಳಜಿ ಪೂರ್ವಕ ಸಮಾನಾದರ ದೃಷ್ಟಿ.‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತು ಅವರ ಮಟ್ಟಿಗೆ ಅಕ್ಷರಶಃ ನಿಜವೆನಿಸಿತ್ತು.
“ಸಂಘದ ಕಾರ್ಯವನ್ನು ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಮತ್ತು ತನುಮನ ಧನಗಳಿಂದ ಮಾಡುವೆನು ಮತ್ತು ಈ ವ್ರತವನ್ನು ನಾನು ಆಜನ್ಮ ಪಾಲಿಸುವೆನು” ಎಂಬುದು ಸಂಘದ ಸ್ವಯಂಸೇವಕನಿಗೆ ಬೋಧಿಸಲಾಗುವ ಪ್ರತಿಜ್ಞೆ. ಡಾ. ಭಂಡಾರಿ ಈ ಪ್ರತಿಜ್ಞೆಯನ್ನು ಅಕ್ಷರಶಃ ಪಾಲಿಸಿದ್ದರು. 1975ರ ತುರ್ತು ಪರಿಸ್ಥಿತಿ ವಿರುದ್ಧ ಮಂಗಳೂರಿನಲ್ಲಿ ನವೆಂಬರ್ 14ರಂದು ನಡೆದ ಮೊದಲ ಸತ್ಯಾಗ್ರಹ ತಂಡಕ್ಕೆ ಅವರೇ ಮುಂದಾಳು. ತನ್ನ ಸಂಪಾದನೆಯ ಮೂಲವಾದ ಕ್ಲಿನಿಕ್ ಅನ್ನು ಮುಚ್ಚಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು, ಮೀಸಾ ಕಾಯ್ದೆಯಡಿ 18 ತಿಂಗಳು ಸೆರೆವಾಸ ಅನುಭವಿಸಿದ್ದರು. ಆಗ ಅವರು ಮಂಗಳೂರು ನಗರದ ಸಂಘದ ನಗರ ಕಾರ್ಯವಾಹ. ಸತ್ಯಾಗ್ರಹಕ್ಕೆ ಹೊರಡುವ ಮುನ್ನ ತಮ್ಮ ಗೆಳೆಯರಿಗೆಲ್ಲ ಅವರೊಂದು ಪತ್ರ ಬರೆದಿದ್ದರು: “ನಾವು ಮಾನವರು, ಸುಸಂಸ್ಕೃತರು, ಭಾರತೀಯರು. ಕೆಲವು ಪ್ರಾಣಿಗಳು ಸಹ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟಾವೇ ಹೊರತು ದಾಸ್ಯವನ್ನು ಒಪ್ಪಲಾರವು. ಇನ್ನು ಮನುಷ್ಯರಾದ ನಾವು ಗುಲಾಮಗಿರಿಗೆ ಒಪ್ಪುವುದೇ? ನಿಮ್ಮ ಸಹಾನುಭೂತಿ ಹೇಗೆ ವ್ಯಕ್ತಪಡಿಸುವಿರಿ? ನೀವೇ ಸತ್ಯಾಗ್ರಹಿಯಾಗುವಿರಾ? ಪರಮ ಸಂತೋಷ”. ಇವರ ಈ ಪತ್ರ ಅನೇಕರಿಗೆ ಸತ್ಯಾಗ್ರಹಕ್ಕೆ ಧುಮುಕಲು ಪ್ರೇರಣೆ ನೀಡಿತ್ತು.
ಭಂಡಾರಿ ಅವರನ್ನು ಸತ್ಯಾಗ್ರಹಕ್ಕೆ ಮುಂಚೆಯೇ ಬಂಧಿಸಬೇಕೆಂದು ಪೊಲೀಸರು ಹೆಣಗಾಡುತ್ತಿದ್ದರು. ನವೆಂಬರ್ 14ರಂದು ಸತ್ಯಾಗ್ರಹ ನಡೆಯುವ ಸ್ಥಳವನ್ನೂ ಸುತ್ತುವರೆದಿದ್ದರು. ಸತ್ಯಾಗ್ರಹದ ನಿಗದಿತ ವೇಳೆ ಬಂತು. ಅಷ್ಟರಲ್ಲೇ ಅಲ್ಲಿಗೆ ಗಕ್ಕನೆ ಒಂದು ಕಾರು ಬಂದು ನಿಂತಿತು. ಅದರಲ್ಲಿ ಹೆಂಗಸರು, ಮಕ್ಕಳು ಜೊತೆಗೆ ಮಾಧವ ಭಂಡಾರಿ. ಅವರು ಚುಟುಮ್ಮನೆ ಕಾರಿನಿಂದ ಹೊರಗೆ ಹಾರಿ ಇಳಿದ ಕೂಡಲೇ ಯುವಕರ ಗುಂಪೊಂದು ಬಂದು ಅವರನ್ನು ಸೇರಿಕೊಂಡಿತು. ಭಂಡಾರಿ ಕೈಯೆತ್ತಿ ಜಯಕಾರ ಹಾಕಿದರು. ಎಲ್ಲರ ಕೊರಳಲ್ಲಿ ಹೂಮಾಲೆ. ಬಾಯಲ್ಲಿ ಸರ್ವಾಧಿಕಾರದ ವಿರುದ್ಧ ಘೋಷಣೆ. ಈ ದೃಶ್ಯ ನೋಡಲು ಸಾವಿರಾರು ಜನರು ಪೊಲೀಸ್ ಠಾಣೆಯವರೆಗೂ ನಡೆದರು. ಅದು ಮೊದಲ ತಂಡದ ಸತ್ಯಾಗ್ರಹ ಆಗಿತ್ತು. ಆ ತಂಡದ ನೇತೃತ್ವ ವಹಿಸಲು ಬೇರೆ ಯಾರನ್ನೂ ಕಳಿಸದೆ ತಾನೇ ಮುಂದಾಗಿ ನೇತೃತ್ವ ವಹಿಸಿದ್ದು ಭಂಡಾರಿಯವರ ದೇಶಪ್ರೇಮ ಮತ್ತು ಸಾಮಾಜಿಕ ಕಾಳಜಿಯ ದ್ಯೋತಕವಾಗಿತ್ತು. ಅನಂತರ 2 ವರ್ಷ ಜೈಲಿನಲ್ಲಿದ್ದರು. ಕ್ಲಿನಿಕ್ ಮುಚ್ಚಿತ್ತು. ಮನೆಯನ್ನು ಮುನ್ನಡೆಸುವವರು ಯಾರೂ ಇರಲಿಲ್ಲ. ಹಾಗಿದ್ದರೂ ಭಂಡಾರಿಯವರು ತಾವು ಸ್ವೀಕರಿಸಿದ ಧ್ಯೇಯಪಥದಿಂದ ಹಿಂದೆ ಸರಿದಿರಲಿಲ್ಲ.
ಸಂಘದ ಕಾರ್ಯಕ್ರಮಗಳಿಗೆ ಮಂಗಳೂರಿನ ಕೆಲವು ಕ್ರೈಸ್ತ ಪಾದ್ರಿಗಳು, ಮುಸಲ್ಮಾನ ಬಂಧುಗಳು ಹಾಗೂ ಸಂಘವನ್ನು ಅಷ್ಟಾಗಿ ಇಷ್ಟಪಡದ ಇನ್ನಿತರ ಗಣ್ಯರನ್ನು ತಮ್ಮ ಕುಶಲ ಸಂಭಾಷಣೆಯ ಮೂಲಕ, ನಗುಮುಖದ ಸ್ನೇಹದ ಮೂಲಕ ಕರೆ ತರುವುದರಲ್ಲಿ ಡಾ. ಭಂಡಾರಿ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಮಾತೃಭಾಷೆ ಕೊಂಕಣಿಯಷ್ಟೇ ಸೊಗಸಾಗಿ ನಿರರ್ಗಳವಾಗಿ ಕನ್ನಡ, ತುಳು, ಇಂಗ್ಲಿಷ್ ಭಾಷೆಗಳಲ್ಲೂ ಮಾತನಾಡುತ್ತಿದ್ದ ಅವರು ಸರ್ವಜನಾದರಣೀಯರಾಗಿದ್ದರು. ಅವರಿದ್ದಲ್ಲಿ ಒಂದಿಷ್ಟು ಅಭಿಮಾನಿಗಳ ಗುಂಪು ಹೂವಿಗೆ ದುಂಬಿ ಮುತ್ತುವಂತೆ ಸದಾ ಮುತ್ತಿಕೊಂಡಿರುತ್ತಿದ್ದರು.
ಸಂಘಟನೆಯ ಕಾರ್ಯಕ್ಕೆ ಅಗತ್ಯವಾದ ಸಮಾಧಾನಚಿತ್ತ, ಸ್ನೇಹ ವಾತ್ಸಲ್ಯದ ಸ್ವಭಾವ ಅವರಿಗೆ ಸಹಜವಾಗಿಯೇ ಒಲಿದಿತ್ತು. ಜೊತೆಗೆ ವಿನೋದ ಸ್ವಭಾವವೂ ಇದ್ದುದರಿಂದ ಅವರನ್ನು ಪ್ರೀತಿಸದಿರಲು, ಅವರ ಮಾತುಗಳಿಗೆ ಸಮ್ಮತಿಸದಿರಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ಸುರತ್ಕಲ್ ಕೆಆರ್ಇಸಿ ಕಾಲೇಜಿನ ಆವರಣದಲ್ಲಿ ನಡೆದ ಸಂಘದ ಕಾರ್ಯಕ್ರಮವನ್ನು ಮುಗಿಸಿಕೊಂಡು ಆಗ ಮಂಗಳೂರು ನಗರ ಪ್ರಚಾರಕ್ ಆಗಿದ್ದ ಶ್ರೀನಾಥ ಹಾಗೂ ನಾನು ಮಂಗಳೂರಿಗೆ ರಾತ್ರಿ ಬರುತ್ತಿದ್ದೆವು. ಉರ್ವಾ ಸ್ಟೋರ್ ಬಳಿ ಹೊಂಡ ಒಂದು ಕಾಣಿಸದೆ ಸ್ಕೂಟರ್ನಲ್ಲಿ ಬರುತ್ತಿದ್ದ ನಾವಿಬ್ಬರು ಸ್ಕಿಡ್ ಆಗಿ ಬಿದ್ದುಬಿಟ್ಟೆವು. ಸ್ಕೂಟರ್ ರೈಡ್ ಮಾಡುತ್ತಿದ್ದ ಶ್ರೀನಾಥ್ಗೆ ಹೆಚ್ಚಿನ ಗಾಯಗಳೇನೂ ಆಗಿರಲಿಲ್ಲ. ಹಿಂದೆ ಕುಳಿತಿದ್ದ ನನಗೆ ಮಾತ್ರ ಕೈಕಾಲುಗಳಲ್ಲಿ ಅಲ್ಲಲ್ಲಿ ತರಚಿದ ಗಾಯ, ಮೂಗಿನ ಬಳಿ ರಕ್ತಸ್ರಾವ, ಜೊತೆಗೆ ಹಲ್ಲೊಂದು ಮುರಿದು ತೀವ್ರ ನೋವಾಗಿತ್ತು. ಅಲ್ಲಿಂದ ಹೇಗೋ ಎದ್ದು ಸಂಘನಿಕೇತನಕ್ಕೆ ತಲುಪಿದೆವು. ನಮ್ಮ ಸ್ಥಿತಿಯನ್ನು ನೋಡಿ ಕಾರ್ಯಾಲಯದಲ್ಲಿದ್ದ ಪ್ರಮುಖರು ಡಾ. ಭಂಡಾರಿ ಅವರಿಗೆ ಫೋನ್ ಮಾಡಿ ಕರೆಸಿದರು. ತಕ್ಷಣ ಅಲ್ಲಿಗೆ ಬಂದ ಭಂಡಾರಿ ಅವರು ಕಾರ್ಯಾಲಯದ ಜಮಖಾನದ ಮೇಲೆ ರಕ್ತಸುರಿಸುತ್ತಾ ಮಲಗಿದ್ದ ನನ್ನನ್ನು ನೋಡಿ, “ಹೌ ವಂಡರ್ಫುಲ್, ಫೆಂಟಾಸ್ಟಿಕ್” ಎಂದು ನಕ್ಕರು. ಆಕ್ಸಿಡೆಂಟ್ನಿಂದಾದ ಗಾಯದ ನೋವಿನಿಂದ ಒದ್ದಾಡುತ್ತಿದ್ದ ನನಗೆ ಡಾ. ಭಂಡಾರಿ ಅವರ ಮಾತು ಒಳಗೊಳಗೆ ಸಿಟ್ಟು ತರಿಸಿತ್ತು. ಆದರೆ ಭಂಡಾರಿ ಅವರು ಒಮ್ಮೆ ತಪಾಸಣೆ ಮಾಡಿ “ನಥಿಂಗ್ ಟು ವರಿ. ಸಣ್ಣಪುಟ್ಟ ಗಾಯಗಳಾಗಿವೆ, ಅಷ್ಟೇ” ಎನ್ನುತ್ತಾ ಗಾಯಕ್ಕೆ ಬ್ಯಾಂಡೇಜ್ ಸುತ್ತಿ ನೋವು ಶಮನಕ್ಕೆ ಮಾತ್ರೆ ಬರೆದುಕೊಟ್ಟರು. ತೀವ್ರ ನೋವು ಕಾಡುತ್ತಿದ್ದರೂ ಅವರ ಆ ಅಭಯವಾಣಿ ನನಗೆ ನೋವು ಮರೆಯುವಂತೆ ಮಾಡಿತ್ತು.
ಜೈಲಿನಲ್ಲಿದ್ದಾಗಲೂ ಡಾ. ಭಂಡಾರಿ ಅವರದ್ದು ಇದೇ ಬಗೆಯ ವಿನೋದ ಸ್ವಭಾವ. ಜೈಲಲ್ಲಿ ಕಾಲ ಕಳೆಯಬೇಕಾಯಿತಲ್ಲ ಎಂದು ಅರೆಕ್ಷಣವೂ ಅವರು ಕೊರಗಿದವರಲ್ಲ. ಜೈಲಿನಲ್ಲಿ ಅವರ ಜೊತೆಗಿದ್ದ ಸಂಸ್ಕಾರ ಭಾರತಿಯ ಪ್ರಮುಖರಾಗಿದ್ದ ಚಕ್ರವರ್ತಿ ತಿರುಮಗನ್ ಅವರ ಜೊತೆಗೂಡಿ ‘ವೀರಪಾಂಡ್ಯ ಕಟ್ಟಬೊಮ್ಮನ್’ ಎಂಬ ನಾಟಕವನ್ನು ಆಡಿದ್ದರು. ಅದರಲ್ಲಿ ಭಂಡಾರಿಯವರು ಬ್ಯಾನರ್ಮ್ಯಾನ್ ಹಾಗೂ ಚಕ್ರವರ್ತಿ ಕಟ್ಟಬೊಮ್ಮನ್ ಪಾತ್ರವಹಿಸಿದ್ದರು. ಭಂಡಾರಿಯವರು ಬ್ಯಾನರ್ಮ್ಯಾನ್ ಮಾತುಗಳನ್ನು ಇಂಗ್ಲಿಷ್ನಲ್ಲಿ ಪೂರ್ತಿಯಾಗಿ ಹೇಳಿದ್ದರು. ಚಕ್ರವರ್ತಿ ಕಟ್ಟಬೊಮ್ಮನ್ ಮಾತನ್ನು ತಮಿಳಿನಲ್ಲಿ ಹೇಳಿದ್ದರು. ಆ ನಾಟಕ ಅತ್ಯಂತ ಜನಪ್ರಿಯವಾಗಿ ಮೂಡಿಬಂದಿತ್ತು. ತುರ್ತು ಪರಿಸ್ಥಿತಿ ಮುಗಿದ ಬಳಿಕ ಯಾವುದಾದರೂ ಬೈಠಕ್ನಲ್ಲಿ ಚಕ್ರವರ್ತಿ ತಿರುಮಗನ್ ಭೇಟಿಯಾದರೆ “ಹಲೋ ಕಟ್ಟಬೊಮ್ಮನ್… ಹೌ ಆರ್ ಯು?” ಎಂದು ಡಾ. ಭಂಡಾರಿ ಕಿಚಾಯಿಸುತ್ತಿದ್ದರು!.
ಡಾ. ಭಂಡಾರಿ ಅವರ ಮನೆಗೆ ಸಂಘದ ಕಾರ್ಯಕರ್ತರಿಗೆ, ಪ್ರಚಾರಕರಿಗೆ ಸದಾ ಮುಕ್ತ ಪ್ರವೇಶ. ಮನೆಗೆ ಹೋದವರಿಗೆ ಅವರು ಉಪಚರಿಸದೆ ಹಾಗೇ ಕಳಿಸಿದ ನಿದರ್ಶನವಿಲ್ಲ. ಮೊದಲೇ ತಿಳಿಸಿ ಹೋದಲ್ಲಿ ಆತ್ಮೀಯ ಉಪಚಾರ. ಹೊಟ್ಟೆ ತುಂಬಾ ಊಟ, ತಿಂಡಿ ಲಭ್ಯ. ಒಮ್ಮೆ ಯಾವುದೋ ಊರಿನಿಂದ ಪ್ರವಾಸ ಮುಗಿಸಿ ನಾನು ಮಂಗಳೂರಿಗೆ ಬಂದಾಗ ಮಧ್ಯಾಹ್ನವಾಗಿತ್ತು. ಹೊಟ್ಟೆ ತೀರ ಹಸಿದಿತ್ತು. ಸಂಘನಿಕೇತನಕ್ಕೆ ಹತ್ತಿರವಿರುವ ಮನೆ ಎಂದರೆ ಅದು ಡಾ. ಭಂಡಾರಿ ಅವರದು. ಸೀದಾ ಅಲ್ಲಿಗೆ ನಡೆದೆ. ಆಗಷ್ಟೇ ಮಧ್ಯಾಹ್ನದ ಊಟಕ್ಕೆ ಅವರ ಪತ್ನಿ ತಯಾರಿ ನಡೆಸಿದ್ದರು. ನಾನು ಬಂದಿದ್ದನ್ನು ಗಮನಿಸಿದ ಡಾ. ಭಂಡಾರಿ, “ಬನ್ನಿ ಒಳಗೆ” ಎಂದವರೇ ನನಗೊಂದು ಪ್ರತ್ಯೇಕ ಸಾಲಿನಲ್ಲಿ ತಟ್ಟೆ ಹಾಕಿ ಕೂರಿಸಿದರು. ಯಾವಾಗಲೂ ನನ್ನ ಜೊತೆಗೆ ಊಟಕ್ಕೆ ಕುಳಿತುಕೊಳ್ಳುತ್ತಿದ್ದ ಅವರು ಅಂದು ಮಾತ್ರ ಎದುರು ಸಾಲಿನಲ್ಲಿ ಪ್ರತ್ಯೇಕವಾಗಿ ಕುಳಿತಿದ್ದರು. ಊಟ ಬಡಿಸಿದ ನಂತರ “ಓಂ ಸಹನಾವವತು…” ಎಂದು ಮಂತ್ರ ಹೇಳಿ ಊಟ ಆರಂಭಿಸುವುದು ಅವರ ಮನೆಯ ರೂಢಿ. ನಾನು ಮಂತ್ರ ಇನ್ನೇನು ಶುರು ಮಾಡಬೇಕೆಂದು ಬಾಯಿ ತೆರೆಯುತ್ತಿದ್ದಂತೆಯೇ ಡಾ. ಭಂಡಾರಿ “ಇವತ್ತು ಮಂತ್ರ ಬೇಡ. ಇವತ್ತಿನ ಮೆನುಗೆ ಅದು ಸೂಟ್ ಆಗುವುದಿಲ್ಲ” ಎಂದರು. ಆ ದಿನ ಅವರ ಮನೆಯಲ್ಲಿ ಮೀನಿನ ಪದಾರ್ಥ ಮಾಡಿದ್ದರು. ಮೀನಿಗೂ ಮಂತ್ರಕ್ಕೂ ಸರಿ ಹೋಗುವುದಿಲ್ಲ ಎಂಬುದು ಭಂಡಾರಿಯವರ ಅಭಿಮತವಾಗಿತ್ತು! ಇಂತಹ ವಿನೋದ ಪ್ರಸಂಗಗಳು ಅದೆಷ್ಟೋ!.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಇತರರಂತೆ ಅವರೂ ಸಂತೋಷಪಟ್ಟಿದ್ದರು. ಆದರೆ ಅನಂತರ ಬಿಜೆಪಿ ತುಳಿದ ದಾರಿಯ ಬಗ್ಗೆ ಅವರಿಗೆ ತೀವ್ರ ದುಃಖವಾಗಿತ್ತು. ಆದರೆ ತಮ್ಮ ಮನಸ್ಸಿನ ಸಂಕಟವನ್ನು ಹೊರಗೆ ಹಾಕದೆ ಸಹಿಸಿಕೊಂಡಿದ್ದರು. ಇವೆಲ್ಲ ಸರಿಯಾಗುವುದು ಹೇಗೆ ಎಂಬುದೊಂದೇ ಅವರ ಚಿಂತೆಯಾಗಿತ್ತು.
ತಮಗೆ ಗೊತ್ತಿರದ ಅನೇಕ ವಿಷಯಗಳನ್ನು ತಜ್ಞರಿಂದ ತಿಳಿದುಕೊಳ್ಳುವಲ್ಲಿ ಡಾಕ್ಟರ್ ಭಂಡಾರಿ ಆಸ್ಥೆ ವಹಿಸುತ್ತಿದ್ದರು. ಸಮಾಜಮುಖಿ ಜೀವನ ನಡೆಸಬೇಕೆಂದು ತಮ್ಮ ಬಳಿ ಬಂದವರಿಗೆ ತಿಳಿ ಹೇಳುತ್ತಿದ್ದರು. ಅವರಂತೂ ಕೊನೆಯ ತನಕ ಸಮಾಜಮುಖಿಯಾಗಿಯೇ ಬದುಕು ಸವೆಸಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
