- ಡಾ. ಪರಿಣಿತ ರವಿ, ಸಹಾಯಕ ಪ್ರಾಧ್ಯಾಪಕಿ, ಲೇಖಕಿ
ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ಒಂದು ನಾಗರಿಕ ಸಮಾಜದ ಸಂಸ್ಕೃತಿ, ಪರಂಪರೆ, ಇತಿಹಾಸ, ಭಾವನೆ, ನಂಬಿಕೆ, ಧರ್ಮ, ಆಚರಣೆ ಮತ್ತು ಮೌಲ್ಯಗಳ ಜೀವಂತ ಪ್ರತಿಬಿಂಬ. ಹಾಗಾಗಿ ಪದಪ್ರಯೋಗದ ಬಳಕೆ ಮಾನ್ಯವಾಗಿರಬೇಕು. ಸುಂದರವಾಗಿರಬೇಕು. ಅಷ್ಟೇ ಜವಾಬ್ದಾರಿಯುತವಾಗಿರಬೇಕು. ಅದೇ ಅಸಡ್ಡೆ ಅಥವಾ ಅವಹೇಳನಕಾರಿ ಪದಪ್ರಯೋಗಗಳು ನಿಧಾನವಾಗಿ ನಮ್ಮ ಉದಾತ್ತವಾದ ಸಂಸ್ಕೃತಿಯ ಮೌಲ್ಯವನ್ನು, ಗೌರವವನ್ನು ಕುಗ್ಗಿಸಬಹುದು. ಹಾಗಾಗಿ ಭಾಷೆಯನ್ನು, ಬಳಸುವ ಪದಪ್ರಯೋಗವನ್ನು ಕೇವಲ ಮಾತಿನ ಸಾಧನವಾಗಿ ಅಲ್ಲ ಬದಲಾಗಿ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿ ಕಾಣುವುದು ಅತ್ಯಂತ ಮುಖ್ಯ. ನಮ್ಮ ದೈನಂದಿನ ಮಾತುಕತೆಯಲ್ಲಿ ಧರ್ಮ, ದೇವರು, ವೇದ, ಪುರಾಣಗಳಿಗೆ ಸಂಬಂಧಿಸಿದ ಪದಗಳನ್ನು ಸಹಜವಾಗಿ ಬಳಸಲಾಗುತ್ತದೆ. ಆದರೆ ಅದರಲ್ಲಿ ಕೆಲವು ಪದಪ್ರಯೋಗಗಳು ನಿಧಾನವಾಗಿ ತಮ್ಮ ಮೂಲ ಪವಿತ್ರತೆಯನ್ನು ಕಳೆದುಕೊಂಡು ಅವಹೇಳನ, ಅಸಡ್ಡೆ, ಅಪಹಾಸ್ಯದ ರೂಪದಲ್ಲಿ ಬಳಕೆಯಾಗುತ್ತಿವೆ. ಇದು ಕೆಲವೊಮ್ಮೆ ಉದ್ದೇಶಪೂರ್ವಕ ಧರ್ಮನಿಂದನೆ ಆಗದೇ ಇದ್ದರೂ, ಪವಿತ್ರವಾದ ವಿಷಯಗಳ ಸಾಮಾನ್ಯೀಕರಣ ಅಥವಾ ಅಪಮೌಲ್ಯಗೊಳಿಸುವಿಕೆ ಆಗುತ್ತಿದೆ ಅನ್ನುವುದಂತೂ ಗಮನಾರ್ಹ ಸಂಗತಿ. ಕೆಲವೊಂದು ಉದಾಹರಣೆಗಳ ಮೂಲಕ ಇದನ್ನು ಅವಲೋಕಿಸೋಣ.
ಯಾರಾದರೂ ಹೆಚ್ಚು ಮಾತನಾಡುವವರಿಗೆ “ಶುರು ಆಯ್ತು ಅವನ ರಾಮಾಯಣ” ಅನ್ನುತ್ತೇವೆ. ಎಲ್ಲಾದರೂ ದೊಡ್ಡ ಜಗಳ ನಡೆದರೆ “ಅಲ್ಲಿ ಮಹಾಭಾರತವೇ ನಡೆದು ಹೋಯ್ತು” ಎನ್ನುತ್ತೇವೆ. ನಿಲ್ಲಿಸದೇ ಮಾತನಾಡುವವನಿಗೆ “ಇವನ ಪುರಾಣ ಯಾರು ಮಾರಾಯ್ರೆ ಕೇಳುವುದು” ಎಂದು ಹೇಳುತ್ತೇವೆ. ಸ್ವಲ್ಪ ಜ್ಞಾನಿಯಂತೆ ಮಾತನಾಡಿದರೆ “ಅವನು ಬಾಯಿಬಿಟ್ರೆ ವೇದವೇ ಮಾತಾಡುದು” ಅನ್ನುತ್ತೇವೆ. ತಲೆಹರಟೆ ಮಾತನಾಡುವವನಿಗೆ “ಇವನ ಹರಿಕಥೆ ಯಾರು ಕೇಳ್ಲಿಕ್ಕೆಪ್ಪಾ” ಎಂದು ಹೇಳುತ್ತೇವೆ. ರಾಮಾಯಣ, ಮಹಾಭಾರತ, ವೇದ, ಪುರಾಣ, ಹರಿಕಥೆ ಇತ್ಯಾದಿಗಳಿಗೆ ನಮ್ಮ ಧರ್ಮದಲ್ಲಿ ಮಹತ್ತರವಾದ ಸ್ಥಾನವಿದೆ, ಗೌರವವಿದೆ. ಆದರೆ ನಾವಿದನ್ನು ಹಾಸ್ಯದ ಸರಕಾಗಿ ಬಳಸುತ್ತೇವೆ.
ಯಾರನ್ನಾದರೂ ಜೋರಾಗಿ ಬೈದರೆ “ಅವನಿಗೆ ಸರಿಯಾಗಿ ಮಂಗಳಾರತಿ ಆಯ್ತು”, ನಿರಂತರವಾಗಿ ಒಬ್ಬನನ್ನು ಬೈಯುತ್ತಿದ್ದರೆ, “ಅವನಿಗೆ ಇವತ್ತು ಸಹಸ್ರನಾಮಾರ್ಚನೆ ಮಾಡಿದ್ರು”, ಒಂದೇ ವಿಷಯವನ್ನು ಉದ್ದವಾಗಿ, ಹೆಚ್ಚು ಹೊತ್ತು ಹೇಳಿದರೆ “ಅವನ ಪಾರಾಯಣ ಮುಗಿಯುವುದೇ ಇಲ್ಲ”, ಸಿಟ್ಟಿನಿಂದ ಬೈಯುವುದಕ್ಕೆ “ಚಂದ ಪೂಜೆ ಆಯ್ತು”, ಯಾರಾದರೂ ಮೋಸ ಮಾಡಿದರೆ “ಅವನು ಮೂರು ನಾಮ ಹಾಕಿದ”, ಅತಿಯಾಗಿ ಮದ್ಯಸೇವನೆ ಮಾಡಿದವನಿಗೆ “ಅವನು ತೀರ್ಥ ಸೇವನೆ ಮಾಡಿದ್ದಾನೆ”, ಎಲ್ಲವನ್ನು ಒಟ್ಟಿಗೆ ಬಡಿಸಿದರೆ “ಇದೆಂಥಾ ಗೋಗ್ರಾಸವಾ” ಎಂದು ಕೇಳುತ್ತೇವೆ. ನೋಡಿ! ಇಲ್ಲೆಲ್ಲಾ ನಮ್ಮ ಧಾರ್ಮಿಕ ಆಚರಣೆಗಳನ್ನು, ಪದ್ಧತಿಗಳನ್ನು ತಮಾಷೆಯಾಗಿ ಉಪಯೋಗಿಸುತ್ತೇವೆ.
ಏನಾದರೂ ಹಾಳಾದಾಗ “ಗೋವಿಂದ ಆಯ್ತು”, ಮೌನವಾಗಿರುವವರಿಗೆ “ಎಂಥ ರಾಮಜಪ ಮಾಡುದಾ”, ಹೆಣ್ಣು ಮಕ್ಕಳ ಜೊತೆ ಹೆಚ್ಚು ಸಲುಗೆಯಿಂದ ಇರುವವನಿಗೆ “ಅವನು ದೊಡ್ಡ ಶ್ರೀಕೃಷ್ಣ ಮಾರಾಯ್ರೆ”, ಕೋಪ ಜಾಸ್ತಿ ಇರುವ ಮಹಿಳೆಗೆ “ಅವಳು ಭದ್ರಕಾಳಿಯಪ್ಪಾ, ಅವಳು ಚಾಮುಂಡಿಯ ಅವತಾರ” ಅನ್ನುತ್ತೇವೆ. ಇಂತಹ ಸಂದರ್ಭಗಳಲ್ಲಿ ನಮ್ಮದೇ ದೇವರುಗಳನ್ನು ನಿಂದಿಸುತ್ತಿರುವುದು ನಮ್ಮ ಅರಿವಿಗೆ ಬರುವುದೇ ಇಲ್ಲ.
ತುಂಬಾ ಸುಳ್ಳು ಹೇಳುವವನಿಗೂ, ಸತ್ಯ ಹೇಳುವವನಿಗೂ ತಮಾಷೆಯಾಗಿ “ಅವನು ಸತ್ಯ ಹರಿಶ್ಚಂದ್ರನ ಸಂತತಿಯವ”, ದಾನ ಮಾಡುವವನಿಗೂ, ಜಿಪುಣನಿಗೂ ಹಾಸ್ಯವಾಗಿ “ಅವನು ದೊಡ್ಡ ದಾನಶೂರ ಕರ್ಣ”, ಅಂತ್ಯವಿಲ್ಲದ ಸಮಸ್ಯೆ ಅಥವಾ ಕೆಲಸಕ್ಕೆ “ಅದು ಹನುಂಮತನ ಬಾಲದ ಹಾಗೆ ಬೆಳಿತಾ ಉಂಟು”, ಚಾಡಿ ಹೇಳುವವನಿಗೆ, ಜಗಳ ತಂದಿಡುವವನಿಗೆ “ಅವನು ಭಯಂಕರ ನಾರದ” ಅನ್ನುತ್ತೇವೆ. ಇಲ್ಲೆಲ್ಲಾ ಗೊತ್ತಿದ್ದೋ ಗೊತ್ತಿಲ್ಲದೆಯೋ ಗೌರಾವಾನ್ವಿತ ಪೌರಾಣಿಕ ಪಾತ್ರಗಳನ್ನು ನಾವೇ ಹಾಸ್ಯಾಸ್ಪದವಾಗಿ ಬಳಸುತ್ತೇವೆ.
ಎಷ್ಟು ಹಣ ಹಾಕಿದರೂ ಸಾಕಾಗದ ಖರ್ಚಿಗೆ “ಅದು ತಿಮ್ಮಪ್ಪನ ಹುಂಡಿಗೆ ಹಾಕಿದಂತೆ”, ಒಂದು ವಿಷಯವನ್ನು ಜೋರಾಗಿ ಹೇಳುವವನಿಗೆ ಅಥವಾ ಎಲ್ಲರಿಗೂ ಹೇಳುವವನಿಗೆ “ಅವನು ಗಂಟೆ ಬಾರಿಸುವುದರಲ್ಲಿ ಭಾರೀ ಉಷಾರು”, ಮನೆಯಲ್ಲಿ ಹೊಗೆ ತುಂಬಿದರೆ “ನೀನೆಂಥಾ ಹೋಮ ಮಾಡುವುದಾ”, ಏನಾದರೂ ಒಂದು ಕೊನೆಗೊಂಡರೆ ಅಥವಾ ಆಸೆ ಕೈಗೂಡದಾಗ “ನಾನು ಅದಕ್ಕೆ ತಿಲೋದಕ ಬಿಟ್ಟೆ, ಎಳ್ಳುನೀರು ಬಿಟ್ಟೆ”, ಮನೆ ಮನೆಗೆ ಹೋಗುವವನಿಗೆ “ಕಟ್ಟೆಪೂಜೆ ಮಾಡುವುದು” ಅನ್ನುತ್ತೇವೆ. ಶ್ರದ್ಧೆಯಿಂದ ಮಾಡುವ ನಮ್ಮ ವಿಧಿವಿಧಾನಗಳನ್ನೇ ನಾವಿಲ್ಲಿ ಅಣಕಿಸುತ್ತಿದ್ದೇವೆ. ಇಂತಹ ಹಲವಾರು ಪದಗಳನ್ನು ನಾವು ಬಳಸುತ್ತೇವೆ. ಇದರಿಂದ ಮೂಲ ಧಾರ್ಮಿಕ, ಸಾಂಸ್ಕೃತಿಕ, ತಾತ್ತ್ವಿಕ ಹಾಗೂ ಆಧ್ಯಾತ್ಮಿಕ ಅರ್ಥಗಳು ಹಿನ್ನಡೆಗೆ ಹೋಗುವ ಸಾಧ್ಯತೆಗಳಿವೆ.
ಇಂದಿನ ತಂತ್ರಜ್ಞಾನ ಯುಗದ ಡಿಜಿಟಲ್ ಸಂತತಿಗಳಾಗಿರುವ ನಮ್ಮ ಮಕ್ಕಳು ಮುಂದೊಂದು ದಿನ ಇದುವೇ ಸರಿಯಾದ ಅರ್ಥ ಎಂದು ತಿಳಿದು ಉಪಯೋಗಿಸುವ ಅಪಾಯವಿದೆ. ಮುಂದೆ ನಿಘಂಟಿನಲ್ಲಿಯೂ ‘ತೀರ್ಥಸೇವನೆ’ ಎಂದರೆ ‘ಮದ್ಯಪಾನ ಮಾಡುವುದು’ ಅನ್ನುವ ಅರ್ಥ ಬಂದರೂ ಬರಬಹುದು. ಹಾಗಾಗಿ ನಮ್ಮ ಪವಿತ್ರ ಪರಂಪರೆ, ಉದಾತ್ತವಾದ ಸನಾತನ ಸಂಸ್ಕೃತಿ ಹಾಗೂ ಉತ್ಕೃಷ್ಟವಾದ ಧರ್ಮ – ದೇವರುಗಳಿಗೆ ಸಂಬಂಧಪಟ್ಟ ಪದಗಳನ್ನು ಹಾಸ್ಯ, ಬೈಗುಳ, ತಿರಸ್ಕಾರ, ಅಸಡ್ಡೆ ಹಾಗೂ ಅವಹೇಳನದ ರೂಪಕಗಳಾಗಿ, ಅನ್ವರ್ಥಕಗಳಾಗಿ ಬಳಸಬಾರದು. ಇಂಟರ್ನೆಟ್ ಯುಗದ ಡಿಜಿಟಲ್ ಗುಲಾಮರಾಗಿರುವ ನಮ್ಮ ಮುಂದಿನ ಪೀಳಿಗೆಗೆ ಅವುಗಳ ಬಗ್ಗೆ ಗೌರವ ಕಡಿಮೆಯಾಗುವ ಆತಂಕವಿದೆ. ಹಾಗಾಗಿ ಈ ಬದಲಾವಣೆ ನಮ್ಮಿಂದಲೇ ಆರಂಭವಾಗಿ ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ನಮ್ಮ ಮಕ್ಕಳಿಗೆ ಸರಿಯಾದ ಮೂಲ ಅರ್ಥಗಳನ್ನು ಹೇಳಿಕೊಟ್ಟು ನಮ್ಮ ಧರ್ಮ- ಸಂಸ್ಕೃತಿಯನ್ನು ಉಳಿಸಿ, ಗೌರವಿಸುವ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗುವುದು ಇಂದಿನ ತುರ್ತು ಅಗತ್ಯ.
