ಪಾಕಿಸ್ತಾನಕ್ಕೆ 80 ಪ್ರತಿಶತ ನೀರು – 23 ಸಾವಿರ ಕೋಟಿ ರೂ. ದುರ್ಧರ ಕೊಡುಗೆ
ಅಂಕಣ – ರಾಷ್ಟ್ರಸ್ಪಂದನ
- ಮಂಜುನಾಥ ಅಜ್ಜಂಪುರ, ಗೌರವ ಸಂಪಾದಕ, “ವಾಯ್ಸ್ ಆಫ್ ಇಂಡಿಯಾ” ಕನ್ನಡ ಸರಣಿ
ನೆಹರೂ – ಲಿಯಾಖತ್ ಅಲಿ ಒಪ್ಪಂದವಾಗಲೀ, 1960ರ ನೆಹರೂ – ಅಯೂಬ್ ಖಾನ್ ಒಪ್ಪಂದವಾಗಲೀ, 1972ರ ಶಿಮ್ಲಾ ಒಪ್ಪಂದವಾಗಲೀ ಆಗಾಗ ಉಲ್ಲೇಖಿಸಲ್ಪಡುತ್ತವೆ. ಈ ಒಪ್ಪಂದಗಳ ವಿವರಗಳನ್ನು ವಿಶ್ಲೇಷಿಸಿದರೆ ಇವು ಯಾವುವೂ ಒಪ್ಪಂದಗಳಲ್ಲ, ಶರಣಾಗತಿಗಳು ಎನಿಸುತ್ತವೆ. ಈ ಎಲ್ಲ ಒಪ್ಪಂದಗಳ ಹಿಂದೆ ಭಾರತ – ವಿರೋಧೀ ಮಾನಸಿಕತೆ ಮತ್ತು ಪಾಕ್ ಪ್ರೇಮ ತಾಂಡವವಾಡಿರುವುದು ಮೇಲ್ನೋಟದಲ್ಲಿಯೇ ಕಾಣುತ್ತದೆ.
ಜವಾಹರಲಾಲರು ‘ಆಧುನಿಕ ಭಾರತದ ನಿರ್ಮಾತೃ’ ಎಂದೇ ಪಠ್ಯಪುಸ್ತಕಗಳಲ್ಲಿ ನಾವೆಲ್ಲಾ ಓದಿಕೊಂಡು ಬೆಳೆದೆವು. ಭಾರತಕ್ಕಿಂತ ಅವರು ‘ಪಾಕ್ ನಿರ್ಮಾತೃ’ ಎಂದರೆ ಸಂಗತವೆನಿಸೀತು. ಈ ಸಿಂಧೂ ನದಿಯ ಒಪ್ಪಂದದ (Indus Waters Treaty) ವಿವರಗಳನ್ನೇ ನೋಡಿ. ಅದು ಅಂದಿನ ಪಾಕ್ ಅಧ್ಯಕ್ಷ ಮೊಹಮ್ಮದ್ ಅಯೂಬ್ ಖಾನ್ ಮತ್ತು ನಮ್ಮ ಪ್ರಧಾನಮಂತ್ರಿ ಜವಾಹರಲಾಲ ನೆಹರೂ 19ನೆಯ ಸೆಪ್ಟೆಂಬರ್ 1960ರಲ್ಲಿ ಕರಾಚಿಯಲ್ಲಿ ಸಹಿ ಮಾಡಿದ ಒಪ್ಪಂದ. 1ನೆಯ ಏಪ್ರಿಲ್ 1960ರಿಂದಲೇ ಅದರ ಅನ್ವಯ ಆಯಿತು.
ಪಶ್ಚಿಮಾಭಿಮುಖವಾಗಿ ಹರಿಯುವ ಸಿಂಧೂ ನದಿ, ಚಿನಾಬ್ ನದಿ ಮತ್ತು ಝೇಲಂ (ಋಗ್ವೇದದಲ್ಲಿ ಉಲ್ಲೇಖಿತವಾಗಿರುವ ‘ವಿತಸ್ತಾ’ ನದಿ) ಈ ಮೂರೂ ನದಿಗಳ ಪೂರ್ಣ ನೀರಿನ ಅನಿರ್ಬಂಧಿತ ಬಳಕೆ ಪಾಕಿಸ್ತಾನಕ್ಕೆ, ಅಂದರೆ ಒಟ್ಟು ಜಲರಾಶಿಯ ಎಂಬತ್ತು ಪ್ರತಿಶತ ಪಾಕಿಸ್ತಾನಕ್ಕೆ ಎಂದು ತೀರ್ಮಾನವಾಯಿತು.
ಇನ್ನು ಭಾರತಕ್ಕೆ ರಾವೀ (ಋಗ್ವೇದ ಉಲ್ಲೇಖಿತ ಪರುಷ್ಣೀ ಅಥವಾ ಇರಾವತೀ ನದಿ) ಬಿಯಾಸ್ (ವೇದವರ್ಣಿತ ‘ವಿಪಾಶಾ’ ನದಿ) ಮತ್ತು ಸತಲೂಜ್ (ವೇದವರ್ಣಿತ ‘ಶತದ್ರು’ ನದಿ) ಈ ಮೂರು ನದಿಗಳ ನೀರು ದೊರೆಯಿತು. ಇದು ಒಟ್ಟು ನೀರಿನ ಇಪ್ಪತ್ತು ಶತಾಂಶ ಮಾತ್ರ. ಹೌದು ಇಷ್ಟು ದೊಡ್ಡ ದೇಶಕ್ಕೆ ಬರೀ ಐದನೆಯ ಒಂದು ಭಾಗ ಮಾತ್ರ ದೊರೆಯಿತು. ಈ ಭಯಾನಕ ಒಪ್ಪಂದದಿಂದ ನಮ್ಮ ರಾಜಸ್ಥಾನ, ಹರಿಯಾಣ ಮತ್ತು ಗುಜರಾತ್ ರಾಜ್ಯಗಳಿಗೆ ಅನ್ಯಾಯವಾಗಿದೆ, ಇಂದಿಗೂ ಅನ್ಯಾಯವಾಗುತ್ತಿದೆ.
ಕೆಲವು ಸಂಗತಿಗಳು “ಅಸಾಧ್ಯ, ಎಲ್ಲಿಯಾದರೂ ಉಂಟೆ?” ಎನ್ನುವಂತಿರುತ್ತವೆ. ಅವುಗಳಲ್ಲಿ ಇದೂ ಒಂದು. ಪಾಕಿಸ್ತಾನದಲ್ಲಿ ಕಾಲುವೆಗಳನ್ನು, ಬ್ಯಾರೇಜುಗಳನ್ನು (ಸಣ್ಣ ಅಣೆಕಟ್ಟುಗಳು) ನಿರ್ಮಿಸಲು ನೆಹರೂ (ಇಂದಿನ ಮೌಲ್ಯದಲ್ಲಿ) ಬೃಹತ್ ಮೊತ್ತ ಎನ್ನಬಹುದಾದ 23 ಸಾವಿರ ಕೋಟಿ ರೂಪಾಯಿಗಳನ್ನು ಕೊಡಲು ಸಹ ಒಪ್ಪಿದರು. ಇದು ಹತ್ತು ವಾರ್ಷಿಕ ಕಂತುಗಳಲ್ಲಿ ಪಾವತಿಯೂ ಆಯಿತು. 1960ರ ದಶಕದಲ್ಲಿ ಭಾರತವು ತುಂಬಾ ಆರ್ಥಿಕ ದುಃಸ್ಥಿತಿಯಲ್ಲಿತ್ತು. ಆ ಅವಧಿಯಲ್ಲಿ ನೆಹರೂ ಅವರ ಇಂತಹ ಅನುಚಿತ – ಅನಪೇಕ್ಷಿತ – ಅವಿವೇಕದ ಔದಾರ್ಯದಿಂದಾಗಿ ಇಡೀ ದೇಶವೇ ಪಾಡುಪಡುವಂತಾಯಿತು. 1962ರಲ್ಲಿ ಚೀನಾ ಯುದ್ಧದ ಅತಿದುರ್ಭರ ಕಾಲದಲ್ಲಿಯೂ ವಾರ್ಷಿಕ ಕಂತು ಕೊಡಬೇಕಾಯಿತು. ವಿಷಾದದ ವಿಷಯವೆಂದರೆ, 1965ರಲ್ಲಿ ಪಾಕಿಸ್ತಾನ ಮತ್ತೊಮ್ಮೆ ಯುದ್ಧವನ್ನೇ ಸಾರಿತು. ಆ ಅವಧಿಯಲ್ಲಿಯೂ ಕಂತಿನ ಹಣದ ಪಾವತಿಯಾಯಿತು. ಇಂತಹ ಎಲ್ಲ ಮಹತ್ತ್ವದ ವಿವರಗಳು ನಮ್ಮ ಪಠ್ಯಪುಸ್ತಕಗಳಲ್ಲಿ, ಕೃಪಾಪೋಷಿತ ಮಾಧ್ಯಮಜೀವಿಗಳ ಲೇಖನಗಳಲ್ಲಿ ಉಲ್ಲೇಖವಾಗುವುದೇ ಇಲ್ಲ. ಕೊನೆಯ ಕಂತಿನ ಹಣ ಪಾವತಿಯಾದ ಮೇಲೆ, ಮತ್ತೆ 1971ರಲ್ಲಿ ಪಾಕ್ ಮಾಡಿದ ಯುದ್ಧದ ವಿಷಯ ನಮಗೆಲ್ಲ ಗೊತ್ತೇ ಇದೆ. 1972ರ ಮತ್ತೊಂದು ಶರಣಾಗತಿಯಂತಹ ಒಪ್ಪಂದದ ಅನಂತರ, ಪಾಕಿಸ್ತಾನದ 93 ಸಾವಿರ ಯುದ್ಧಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಆದರೆ, ಅಂದಿನ ನಮ್ಮ ನಾಯಕರು ಪಾಕ್ ಜೈಲುಗಳಲ್ಲಿದ್ದ ನಮ್ಮ ಮೀನುಗಾರರ, ಸೈನಿಕರ, ಬೇಹುಗಾರರ ಬಗೆಗೆ ಯಾವ ಕಳಕಳಿಯನ್ನೂ ತೋರಿಸಲಿಲ್ಲ. ಇದು – ಇಂತಹುದು ಒಂದೋ ಎರಡೋ ಎನ್ನುವಂತಹ ಅಪರೂಪದ ಸಂಗತಿಗಳಲ್ಲ. ಕಾಂಗ್ರೆಸ್ ಮತ್ತು ಆ ಬಗೆಯ ಹುಸಿ – ಸೆಕ್ಯುಲರ್ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಎಲ್ಲ ಕಾಲಘಟ್ಟಗಳಲ್ಲಿ ಪಾಕ್ ಪರವಾದ ಧೋರಣೆಗಳನ್ನೇ ಅನುಸರಿಸಿಕೊಂಡು ಬರಲಾಯಿತು.
ಪಾಕಿಸ್ತಾನಕ್ಕೆ ಹರಿಯುವ ನಮ್ಮ ನದಿಗಳ ನೀರು ನಿಲ್ಲಿಸುವ ಕಾರ್ಯವು ಸುಲಭಸಾಧ್ಯದ ಕೆಲಸವಲ್ಲ. ಅಣೆಕಟ್ಟುಗಳು, ಕಾಲುವೆಗಳು ಮತ್ತು ಆ ಬಗೆಯ ನಿರ್ಮಾಣಗಳಿಗೆ ಹಣವೂ ಬೇಕು, ಅತಿದೀರ್ಘ ಸಮಯವೂ ಬೇಕು. ಹರಿಯಾಣ, ರಾಜಸ್ಥಾನ, ಇತ್ಯಾದಿಗಳು ಸಮೃದ್ಧಿಯತ್ತ ದಾಪುಗಾಲು ಹಾಕಲು ನೀರಿಗಾಗಿ ಕಾಯುತ್ತಿವೆ. ಪಾಕಿಸ್ತಾನದಂತಹ ಭಯೋತ್ಪಾದಕ ಶತ್ರುರಾಷ್ಟ್ರದ ಪರವಾಗಿ ಸಿಂಧೂ ಒಪ್ಪಂದವನ್ನು ನೆನಪಿಸುವ ದ್ರೋಹಿ ದೇಶಗಳು ಬೇಕಾದಷ್ಟಿವೆ. ಅಂತಹ ವಿದೇಶೀ ಒತ್ತಡಗಳೆದುರು ಅಮೆರಿಕದಂತೆ, ಚೀನಾದಂತೆ ತಮ್ಮ ತಮ್ಮ ದೇಶದ ಪರವಾಗಿ ಗಟ್ಟಿತನದ ನಿರ್ಧಾರವನ್ನು ನಮ್ಮ ನಾಯಕರು ತೆಗೆದುಕೊಳ್ಳಬೇಕು ಅಷ್ಟೆ.
1999ರಲ್ಲಿ ನಾನು ವೃತ್ತಿನಿಮಿತ್ತ ದಾವಣಗೆರೆಯಲ್ಲಿದ್ದೆ. ಅವು ಪಾಕ್ ಆಕ್ರಮಣದ ದುರ್ಭರ ದಿನಗಳು. ಸಭೆಯೊಂದರಲ್ಲಿ ನಾವೆಲ್ಲಾ ಇದು ಪಾಕಿಸ್ತಾನದ 4ನೆಯ ಆಕ್ರಮಣ ಎಂದೆಲ್ಲಾ ಮಾತನಾಡುತ್ತಿದ್ದೆವು. ಆಗ ನಿವೃತ್ತ ಸೇನಾಧಿಕಾರಿಯೊಬ್ಬರು ಮಾತನಾಡಿದರು. ಅವರು ನಾಡಿನ ಸಂರಕ್ಷಣೆಗಾಗಿ ಸ್ವತಃ ಯುದ್ಧದಲ್ಲಿ ಪಾಲ್ಗೊಂಡವರು ಮತ್ತು ಗಾಯಾಳುವಾದವರು. ಊರುಗೋಲಿನ ಆಧಾರದಿಂದಲೇ ಬಂದಿದ್ದರು. ಅವರ ಮಾತುಗಳು ಇಪ್ಪತ್ತೇಳು ವರ್ಷಗಳಿಂದಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ; “ನೋಡಿ, ನೀವೆಲ್ಲಾ ಇದು ಮೂರನೆಯ ಯುದ್ಧ, ನಾಲ್ಕನೆಯ ಯುದ್ಧ ಎಂದೆಲ್ಲಾ ಮಾತನಾಡುತ್ತಿದ್ದೀರಿ. ಸ್ವತಃ ಯುದ್ಧಗಳಲ್ಲಿ ಪಾಲ್ಗೊಂಡ ನಾನು ಈ ಮಾತನ್ನು ಹೇಳಬೇಕಾಗಿದೆ; ಪಾಕಿಸ್ತಾನ ಹುಟ್ಟಿದಂದಿನಿಂದಲೂ ಆಕ್ರಮಣ ಮಾಡುತ್ತಲೇ ಇದೆ. ಅದು ಅವರ ನಿರಂತರ ಯುದ್ಧ. 52 ವರ್ಷಗಳಿಂದಲೂ ಅದು ನಿಂತೇ ಇಲ್ಲ. ದಿನದಿನವೂ ನಮ್ಮ ಗಡಿಯಲ್ಲಿ ಪಾಕ್ ಪ್ರಾಯೋಜಿತ ಸೇನಾ ಆಕ್ರಮಣ ಇಲ್ಲವೇ ಭಯೋತ್ಪಾದಕರ ದಾಳಿ ಆಗುತ್ತಲೇ ಇದೆ”. ಹೌದು. ನಾವು ಜನಸಾಮಾನ್ಯರು ಇಂತಹ ಸೈನಿಕರಿಂದಲೇ ಸುರಕ್ಷಿತರು, ಸಂರಕ್ಷಿತರು. ಪಾಕಿಸ್ತಾನದ ಆಕ್ರಮಣಗಳು ಎಂದೆಂದಿಗೂ ಮುಗಿಯದ ಮತೀಯ ಜಿಹಾದ್ ಎಂಬುದನ್ನು ನಾವೆಲ್ಲಾ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಪಾಕ್ ಆಕ್ರಮಣ ಎಂದಿಗೂ ನಿಲ್ಲುವುದೂ ಇಲ್ಲ ಎಂಬುದನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಯಾವುದೇ ಪತ್ರಕರ್ತರಿಗಿಂತ, ವಿಶ್ಲೇಷಕರಿಗಿಂತ, ವಿದೇಶಾಂಗ ಇಲಾಖೆಯ ಅಧಿಕಾರಿಗಳಿಗಿಂತ, ನೇರಾನೇರ ಯುದ್ಧದಲ್ಲಿ ಪಾಲ್ಗೊಂಡ ಇಂತಹ ಸೇನಾಧಿಕಾರಿಗಳ ಮಾತು ನಮ್ಮೆಲ್ಲರ ಕಣ್ತೆರೆಸಬೇಕಾಗಿದೆ. ಪಾಕಿಸ್ತಾನವೆಂಬುದು ಒಂದು ದೇಶವಲ್ಲ, ಒಂದು ನಾಗರಿಕ ಸಮಾಜವಲ್ಲ. ಅದು ಒಂದೂವರೆ ಸಾವಿರ ವರ್ಷಗಳಿಂದ ಜಗತ್ತಿನಾದ್ಯಂತ ನಡೆಯುತ್ತಿರುವ ಕಾಫಿರರ ಮೇಲಿನ ನಿರಂತರ ಸಮರ. ಕಳೆದ ಕೆಲವು ವರ್ಷಗಳ ಘಟನಾವಳಿಯನ್ನೇ ಗಮನಿಸಿ. ಪ್ರವಾಹಗಳಿಂದ ಅದು ತತ್ತರಿಸಿತು. ಕ್ಷಾಮದಿಂದ ನರಳಿತು. ಇತ್ತೀಚೆಗೆ ತೀವ್ರವಾದ ಆರ್ಥಿಕ ದುಃಸ್ಥಿತಿಯನ್ನು ಎದುರಿಸುತ್ತಿದೆ. ಆದರೆ, ಸರಿಯಾಗಿ ಗಮನಿಸಿ, ಅದು ಇಂದಿಗೂ ಭಾರತವನ್ನು ಸಹಾಯಕ್ಕಾಗಿ ಅಂಗಲಾಚಿಲ್ಲ. ಆದರೂ, ವಿಪರೀತ ಪ್ರತಿಕೂಲವಾಗಿರುವ ಆರ್ಥಿಕ ದುಃಸ್ಥಿತಿಯ ಪ್ರಸಕ್ತ ವಾತಾವರಣದಲ್ಲಿಯೂ ಪಾಕಿಸ್ತಾನದ ಭಯೋತ್ಪಾದಕ ದಾಳಿಗಳಾಗಲೀ, ISI ಚಟುವಟಿಕೆಗಳಾಗಲೀ ನಿಂತಿಲ್ಲ. ಕಳೆದ ಏಳೆಂಟು ದಶಕಗಳಲ್ಲಿ ಭಾರತ ಸರ್ಕಾರವು ಮೊದಲ ಬಾರಿಗೆ ಭಯೋತ್ಪಾದಕ ಚಟುವಟಿಕೆಗಳು ನಿಲ್ಲುವವರೆಗೆ ಯಾವ ಮಾತುಕತೆಯೂ ಇಲ್ಲ, ಎಂದು ಘೋಷಿಸಿದೆ. ಇದು ಸೂಕ್ತ ನಿರ್ಧಾರ. ಪಾಕಿಸ್ತಾನವನ್ನು, ಅದರ ಸೃಷ್ಟಿಯನ್ನು, ಅದರ ಹಿಂದಿನ ಇಸ್ಲಾಮೀ ಜಿಹಾದೀ ಮಾನಸಿಕತೆಯನ್ನು, ಗತಿಸಿದ ಇತಿಹಾಸವನ್ನು ಅರ್ಥ ಮಾಡಿಕೊಳ್ಳದೇ ಯಾರಾದರೂ ಶಾಂತಿ ಮಾತುಕತೆಯ ಪ್ರಸ್ತಾಪ ಮಾಡಿದರೆ, ಅದು ಅವರ ಭಾರತ ವಿರೋಧೀ ಮನಃಸ್ಥಿತಿಯನ್ನು ರುಜುವಾತುಪಡಿಸುತ್ತದೆ, ಬೇರೇನಿಲ್ಲ. ಬ್ರಿಟಿಷರಿಂದ ಪ್ರಾಯೋಜಿತರಾದ ರಾಜಕೀಯ ಪಕ್ಷದವರು, ಕಮ್ಯುನಿಸ್ಟರು, ಅಲಿಗಢದ ಜಿಹಾದೀ ಮಾನಸಿಕತೆಯವರು, ಚಿತ್ರರಂಗದ ಹಿಂದೂ ವಿರೋಧೀ ಮಾಫಿಯಾ, ಕೃಪಾಪೋಷಿತ ಪತ್ರಕರ್ತರು ಮತ್ತು ಆ ಬಗೆಯವರು ಮತ್ತೆ ಮತ್ತೆ ಭಾರತವು ಶಾಂತಿ ಮಾತುಕತೆಯನ್ನು ಮುಂದುವರಿಸಬೇಕು ಎಂದು ಒದರುತ್ತಲೇ ಇರುತ್ತಾರೆ. ಇಂತಹವರನ್ನು ಭಾರತೀಯ ಸಮಾಜವು ಎಚ್ಚರಿಕೆಯಿಂದ ಗಮನಿಸುತ್ತಿರಬೇಕಾಗಿದೆ.
