ಉಜ್ಜಯಿನಿ: ಯಂತ್ರಗಳು 170 ವರ್ಷಗಳಷ್ಟು ಹಳೆಯ ದೇವಾಲಯವನ್ನು ಕೆಡವಬಲ್ಲವು, ಆದರೆ ಅದರಲ್ಲಿದ್ದ ಆರಾಧ್ಯ ದೈವವನ್ನು ತನ್ನ ಜಾಗದಿಂದ ಇಂಚೂ ಕದಲಿಸಲು ಸಾಧ್ಯವಾಗದಿದ್ದರೆ ಏನಾಗಬಹುದು? ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಐತಿಹಾಸಿಕ ‘ಖಡೇ ಹನುಮಾನ್’ ದೇವಾಲಯವನ್ನು ಸ್ಥಳಾಂತರಿಸುವ ಕಾರ್ಯಾಚರಣೆಯು ಈಗ ಭಕ್ತಿಯ ಭಾವನಾತ್ಮಕ ಕ್ಷಣವಾಗಿ ರೂಪಾಂತರಗೊಂಡಿದೆ. ಸುಮಾರು ಎಂಟು ಅಡಿ ಎತ್ತರದ ಮಹಾಬಲಿ ಹನುಮಂತನ ಮೂರ್ತಿಯನ್ನು ಅದರ ಶತಮಾನಗಳಷ್ಟು ಹಳೆಯ ಜಾಗದಿಂದ ತೆರವುಗೊಳಿಸುವುದು ಅಧಿಕಾರಿಗಳಿಗೆ ಅಸಾಧ್ಯದ ಕೆಲಸವಾಗಿ ಪರಿಣಮಿಸಿದೆ.
ಇತ್ತೀಚೆಗಷ್ಟೇ ನೀಮ್ ಕರೋಲಿ ಬಾಬಾರವರ ಜೀವನ ಆಧಾರಿತ ‘ಹನುಮಾನ್ ಅಂಶ’ ಚಿತ್ರ ಬಿಡುಗಡೆಯಾಗಿತ್ತು. ದೇವರ ಮೇಲಿನ ಭಕ್ತಿಯು ಭಕ್ತನಿಗೆ ಪವಾಡಗಳನ್ನು ಮಾಡುವ ಶಕ್ತಿಯನ್ನು ನೀಡುತ್ತದೆ ಎಂಬುದು ಅದರ ಮುಖ್ಯ ಸಂದೇಶವಾಗಿತ್ತು. ಅಂತಹದ್ದೇ ಒಂದು ಸನ್ನಿವೇಶ ಮಧ್ಯಪ್ರದೇಶದ ಧಾರ್ಮಿಕ ನಗರಿ ಉಜ್ಜಯಿನಿಯಲ್ಲಿ ಕಳೆದ ಮೂರು ದಿನಗಳಿಂದ ತೆರೆದುಕೊಳ್ಳುತ್ತಿದೆ. ಇಲ್ಲಿನ 170 ವರ್ಷ ಹಳೆಯ ಖಡೇ ಹನುಮಾನ್ ಜಿ ಮೂರ್ತಿಯನ್ನು ತೆರವುಗೊಳಿಸಲು ಬಂದ ನಗರಪಾಲಿಕೆ ತಂಡಕ್ಕೆ ಈ ಕಾರ್ಯ ಅತ್ಯಂತ ಕಠಿಣವಾಗಿ ಪರಿಣಮಿಸಿದೆ.
ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಗರಪಾಲಿಕೆ ದೇವಾಲಯದ ಹೊರಭಾಗವನ್ನು ಕೆಡವಿತು. ಆದರೆ, ಪ್ರಮುಖ ಮೂರ್ತಿಯನ್ನು ತೆರವುಗೊಳಿಸುವ ಸಮಯ ಬಂದಾಗ ಅಧಿಕಾರಿಗಳಿಗೆ ಅಚ್ಚರಿಯ ಸವಾಲು ಎದುರಾಯಿತು. ಇದನ್ನು ಭಕ್ತರು ಕೇವಲ ತಾಂತ್ರಿಕ ತೊಡಕು ಎಂದು ಭಾವಿಸುತ್ತಿಲ್ಲ, ಬದಲಾಗಿ ಇದು ಬಜರಂಗಬಲಿಯ ಇಚ್ಛೆಯ ಸಂಕೇತ ಎಂದೇ ನಂಬಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಅನುಕೂಲವಾಗುವಂತೆ ದೇವಾಲಯವನ್ನು ಟಾಂಕಿ ಚೌಕ್ಗೆ ಸ್ಥಳಾಂತರಿಸಲು ಆಡಳಿತಾತ್ಮಕ ಪ್ರಕ್ರಿಯೆ ಪ್ರಾರಂಬಿಸಲಾಗಿತ್ತು. ಆದರೆ, ಬೃಹತ್ ಮೂರ್ತಿಯನ್ನು ಮೂಲ ಜಾಗದಿಂದ ಕದಲಿಸಲು ಹೊರಟಾಗ ಪರಿಸ್ಥಿತಿ ಸಂಕೀರ್ಣಗೊಂಡಿತು. ಮೂರ್ತಿಯು ನೆಲದಾಳದ ಕಲ್ಲುಗಳೊಂದಿಗೆ ಆಳವಾಗಿ ಬೆಸೆದುಕೊಂಡಿದ್ದು, ಬಲವಂತವಾಗಿ ತೆರವುಗೊಳಿಸಲು ಯತ್ನಿಸಿದರೆ ಹಾನಿಯಾಗುವ ಭೀತಿ ಎದುರಾಯಿತು.
ಕಟಾಂಜನ ಬಿದ್ದರೂ ಜಾಗ ಬಿಡದ ಹನುಮಂತ!
ದೇವಾಲಯದ ಹೊರಗಿನ ನಿರ್ಮಾಣಗಳನ್ನು ಕೆಡವಲಾಯಿತಾದರೂ ಮೂರ್ತಿ ಇಂಚೂ ನಗಲಿಲ್ಲ. ವರ್ಷಗಳಿಂದ ಶಿರಬಾಗಿ ನಮಿಸುತ್ತಿದ್ದ ಪವಿತ್ರ ಸ್ಥಳ ಕಣ್ಣೆದುರೇ ಧರೆಗುರುಳುತ್ತಿದ್ದುದನ್ನು ಕಂಡ ಭಕ್ತರ ಕಣ್ಣುಗಳಲ್ಲಿ ನೀರು ಜಾರಿತು. ಇನ್ನೊಂದೆಡೆ, ಅಷ್ಟು ಹಳೆಯ ಮೂರ್ತಿಯನ್ನು ಬಲವಂತವಾಗಿ ಕದಲಿಸಿದರೆ ಬಿರುಕು ಬಿಡಬಹುದು ಅಥವಾ ಹಾನಿಗೊಳಗಾಗಬಹುದು ಎಂಬ ಆತಂಕ ಆಡಳಿತ ಮಂಡಳಿಗೂ ಇತ್ತು.
ಸ್ಥಳಕ್ಕೆ ಆಗಮಿಸಿದ ಪುರಾತತ್ವ ಇಲಾಖೆಯ ತಜ್ಞರು ಅತ್ಯಂತ ಎಚ್ಚರಿಕೆಯಿಂದ ಮುಂದುವರಿಯುವಂತೆ ಸಲಹೆ ನೀಡಿದ್ದಾರೆ. ಮೂರ್ತಿಯ ತಳಭಾಗವನ್ನು ಪರೀಕ್ಷಿಸಲು ಸುತ್ತಲೂ ಅಗೆಯಲಾಗಿದ್ದು, ಮತ್ತಷ್ಟು ಸ್ಕ್ಯಾನಿಂಗ್ ಮಾಡಲು ಯೋಜಿಸಲಾಗಿದೆ. ಆದರೆ ಭಕ್ತರಿಗೆ ಇದು ತಾಂತ್ರಿಕ ಸಮಸ್ಯೆಯಾಗಿ ಕಾಣುತ್ತಿಲ್ಲ; ಆಧುನಿಕ ಯಂತ್ರೋಪಕರಣಗಳು ಹಾಗೂ ಸತತ ಪ್ರಯತ್ನಗಳ ಹೊರತಾಗಿಯೂ ಮೂರ್ತಿ ನಗಲದಿರುವುದು ಹನುಮಂತನಿಗೆ ಈ ಜಾಗ ಬಿಟ್ಟು ಹೋಗಲು ಇಷ್ಟವಿಲ್ಲ ಎಂಬುದರ ಸಂಕೇತ ಎಂದು ಅವರು ಬಲವಾಗಿ ನಂಬಿದ್ದಾರೆ.
36 ಗಂಟೆಗಳು ಮತ್ತು ಮೂರು ವಿಫಲ ಯತ್ನಗಳು:
ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರು ಹಂಚಿಕೊಂಡಿರುವ ಮಾಹಿತಿ ಈ ಘಟನೆಗೆ ಮತ್ತಷ್ಟು ಭಾವನಾತ್ಮಕ ಆಯಾಮ ನೀಡಿದೆ. ಮೂರ್ತಿ ಸ್ಥಳಾಂತರದ ಮೊದಲ ದಿನ ವಿದ್ಯುತ್ ಸ್ಪಾರ್ಕ್ ಉಂಟಾಗಿ ಕೆಲಸ ಸ್ಥಗಿತಗೊಂಡಿತು. ಎರಡನೇ ದಿನ ಸತತ ಮಳೆಯಿಂದಾಗಿ ಕಾರ್ಯಾಚರಣೆಗೆ ಅಡಚಣೆಯಾಯಿತು. ಮೂರನೇ ದಿನ ಕ್ರೇನ್ ಮುಂತಾದ ವ್ಯವಸ್ಥೆಗಳೊಂದಿಗೆ ಬಂದರೂ ಮೂರ್ತಿಯನ್ನು ಕದಲಿಸಲು ಸಾಧ್ಯವಾಗಲಿಲ್ಲ. “ಸಾಕ್ಷಾತ್ ಬಜರಂಗಬಲಿಯೇ ಕದಲದಿರಲು ನಿರ್ಧರಿಸಿರುವಾಗ, ಮಾನವ ಶಕ್ತಿಯಿಂದ ಅದನ್ನು ಹೇಗೆ ಸರಿಸಲು ಸಾಧ್ಯ?” ಎಂಬುದು ಭಕ್ತರ ಸರಳ ಪ್ರಶ್ನೆ.
ಬಾಬಾ ದಾರಿ ಬಂದ್ ಮಾಡಿದ್ದಾರೆ:
ಮೂರ್ತಿ ಸ್ಥಳಾಂತರಕ್ಕೆ ಎದುರಾಗಿರುವ ಅಡೆತಡೆಗಳು ಹನುಮಂತನ ಇಚ್ಛೆಯನ್ನೇ ಬಿಂಬಿಸುತ್ತವೆ ಎಂಬುದು ಭಕ್ತರ ದೃಢ ನಂಬಿಕೆ. ದೇವರೆದುರು ಮಾನವ ಶಕ್ತಿ ಅತ್ಯಲ್ಪ ಎಂಬ ಭಾವನೆ ಇಲ್ಲಿ ವ್ಯಕ್ತವಾಗುತ್ತಿದೆ. ಕಷ್ಟಗಳನ್ನು ನಿವಾರಿಸುವ ‘ಸಂಕಟಮೋಚನ’ ಹನುಮಂತ ತಾನು ಇರಬಯಸುವ ಸ್ಥಳದಲ್ಲೇ ಇರುತ್ತಾನೆ ಎಂಬ ನಂಬಿಕೆ ಸಾಮಾಜಿಕ ಜಾಲತಾಣಗಳಲ್ಲಿ “ಬಾಬಾ ಪವಾಡ ಮಾಡಿದ್ದಾರೆ” ಎಂಬ ಮಾತುಗಳಿಗೆ ಪುಷ್ಟಿ ನೀಡಿದೆ.
ಹನುಮಾನ್ ಚಾಲೀಸಾ ಪಠಣದೊಂದಿಗೆ ಪ್ರತಿಭಟನೆ:
ದೇವಾಲಯದ ಸ್ಥಳಾಂತರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಆಗಸ್ಟ್ 30 ರಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿ, ಸ್ಥಳದಲ್ಲೇ ಕುಳಿತು ಹನುಮಾನ್ ಚಾಲೀಸಾ ಪಠಿಸಿದರು. ಇದರಿಂದಾಗಿ ಆಡಳಿತ ಮಂಡಳಿ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಮುಂದೂಡಬೇಕಾಯಿತು. ನಂತರ, ನಗರದ ಅಭಿವೃದ್ಧಿ ಮತ್ತು ರಸ್ತೆ ಅಗಲೀಕರಣದ ಹಿತದೃಷ್ಟಿಯಿಂದ ಮೂರ್ತಿಯನ್ನು ಗೌರವಪೂರ್ವಕವಾಗಿ ಹೊಸ ಸ್ಥಳದಲ್ಲಿ ಪ್ರತಿಷ್ಠಾಪಿಸುವುದಾಗಿ ಆಡಳಿತ ಭರವಸೆ ನೀಡಿತು.
ಇಲ್ಲಿ ಒಂದೆಡೆ ನಗರದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಚಾರ ನಿಯಂತ್ರಣದ ಅಗತ್ಯವಿದ್ದರೆ, ಇನ್ನೊಂದೆಡೆ 170 ವರ್ಷಗಳ ಧಾರ್ಮಿಕ ಭಾವನೆ ಮತ್ತು ಜನರ ಅಪಾರ ಶ್ರದ್ಧೆ ಮುಖಾಮುಖಿಯಾಗಿದೆ.
ಕಣ್ಣೀರ ವಿದಾಯ:
ಮೂರ್ತಿ ತೆರವುಗೊಳಿಸುವ ಪ್ರಕ್ರಿಯೆ ಮುಂದುವರಿದಂತೆ ನೂರಾರು ಭಕ್ತರು ಸ್ಥಳದಲ್ಲಿ ಜಮಾಯಿಸಿ ಪ್ರಾರ್ಥನೆ ಸಲ್ಲಿಸಿದರು. ನೆರೆದಿದ್ದ ಹಲವರ ಕಣ್ಣುಗಳಲ್ಲಿ ಕಣ್ಣೀರು ಕೋಡಿಹರಿಯಿತು. ಅಭಿವೃದ್ಧಿಯ ಓಟದಲ್ಲಿ ನಮ್ಮ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯನ್ನು ಹೇಗೆ ಜಾಗರೂಕತೆಯಿಂದ ನಿರ್ವಹಿಸಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
1857ರ ಭವ್ಯ ಇತಿಹಾಸ, 5 ತಲೆಮಾರುಗಳ ಸೇವೆ:
ಈ ದೇವಾಲಯದ ಇತಿಹಾಸವು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅವಧಿಗೆ ಅಥವಾ ಅದಕ್ಕೂ ಹಿಂದಿನ ಕಾಲಕ್ಕೆ ಸೇರಿದ್ದಾಗಿದೆ ಎಂದು ಹೇಳಲಾಗುತ್ತದೆ. ಒಂದೇ ಕುಟುಂಬದ ಐದು ತಲೆಮಾರುಗಳು ಈ ದೇವಾಲಯದ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಿವೆ. ಹೀಗಾಗಿ ಸ್ಥಳೀಯರಿಗೆ ಇದು ಕೇವಲ ಧಾರ್ಮಿಕ ಕಟ್ಟಡವಲ್ಲ, ಅವರ ಕುಟುಂಬ ಮತ್ತು ಸಾಮಾಜಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಮೂರ್ತಿಯನ್ನು ಮೂಲಸ್ಥಳದಲ್ಲೇ ಉಳಿಸಿ, ಅಲ್ಲೇ ಭವ್ಯ ದೇವಾಲಯ ನಿರ್ಮಿಸಬೇಕೆಂದು ಭಕ್ತರು ಒತ್ತಾಯಿಸುತ್ತಿದ್ದಾರೆ.
ಶ್ರದ್ಧೆ ಮತ್ತು ಅಭಿವೃದ್ಧಿಯ ನಡುವಿನ ಮಹತ್ವದ ಪ್ರಶ್ನೆ:
ಉಜ್ಜಯಿನಿಯು ಮಹಾಕಾಲನ ನಗರಿ. ಇಲ್ಲಿನ ಧಾರ್ಮಿಕ ತಾಣಗಳು ಕೇವಲ ಕಾಂಕ್ರೀಟ್ ನಿರ್ಮಾಣಗಳಲ್ಲ, ಅವು ನಗರದ ಗುರುತು ಮತ್ತು ಜನರ ಆತ್ಮಸಾಕ್ಷಿ. ‘ಖಡೇ ಹನುಮಾನ್’ ದೇವಾಲಯದ ಈ ಪ್ರಸಂಗವು ಅಭಿವೃದ್ಧಿ ಮತ್ತು ಧಾರ್ಮಿಕ ಶ್ರದ್ಧೆಯ ನಡುವಿನ ಹಳೆಯ ಸಂಘರ್ಷವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ರಸ್ತೆಗಳನ್ನು ಅಗಲಗೊಳಿಸಬಹುದು, ನಗರಗಳನ್ನು ಆಧುನಿಕಗೊಳಿಸಬಹುದು; ಆದರೆ ಶತಮಾನಗಳಿಂದ ಜನರ ಹೃದಯದಲ್ಲಿ ನೆಲೆಯೂರಿರುವ ಧಾರ್ಮಿಕ ತಾಣಗಳ ವಿಷಯದಲ್ಲಿ ಸೂಕ್ಷ್ಮತೆ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ ಎಂಬ ಸಂದೇಶವನ್ನು ಈ ಘಟನೆ ನೀಡಿದೆ.
ಆಡಳಿತ ಮಂಡಳಿಗೆ ಇದು ತಾಂತ್ರಿಕ ಸವಾಲಾಗಿರಬಹುದು, ಇತಿಹಾಸಕ್ಕೆ ಇದು ಪರಂಪರೆಯ ಭಾಗವಾಗಿರಬಹುದು; ಆದರೆ ಭಕ್ತರಿಗೆ ಮಾತ್ರ ಇದು ಸಾಕ್ಷಾತ್ ಪವಾಡ. “ಬಜರಂಗಬಲಿ ಎಲ್ಲ ಕೈಜೋಡಿಸಿ ಇರಲು ಬಯಸುತ್ತಾನೋ, ಅದೇ ಅವನ ನೈಜ ಸ್ಥಾನ” ಎನ್ನುತ್ತಾರೆ ಭಾವುಕ ಭಕ್ತರು.
ಸದ್ಯಕ್ಕೆ ಆಡಳಿತ ಮಂಡಳಿ ಸ್ಥಳಾಂತರಕ್ಕೆ ಪ್ರಯತ್ನಿಸುತ್ತಿದ್ದರೆ, ಭಕ್ತರು “ಜೈ ಬಜರಂಗಬಲಿ, ಜೈ ಶ್ರೀರಾಮ್” ಜಯಘೋಷಗಳೊಂದಿಗೆ ಹನುಮಂತನ ಭಕ್ತಿಯಲ್ಲಿ ಲೀನವಾಗಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
