ನವದೆಹಲಿ/ಪ್ಯಾರಿಸ್: ಪ್ಯಾರಿಸ್ ಸಮೀಪದ ಬಸ್ಸಿ-ಸೇಂಟ್-ಜಾರ್ಜಸ್ನಲ್ಲಿ ನಿರ್ಮಿಸಲಾದ ಭವ್ಯ ‘ಬಿಎಪಿಎಸ್ ಸ್ವಾಮಿನಾರಾಯಣ ಹಿಂದೂ ಮಂದಿರ’ದ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 6 ರಂದು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಈ ಪ್ರಮುಖ ಮಂದಿರವು ಭಾರತ ಮತ್ತು ಫ್ರಾನ್ಸ್ ನಡುವಿನ ಸಾಂಸ್ಕೃತಿಕ ಸಂಬಂಧಗಳಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ವರ್ಚುವಲ್ (ಆನ್ಲೈನ್) ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಈ ಉದ್ಘಾಟನೆಯು ಉಭಯ ದೇಶಗಳ ಸಾಂಸ್ಕೃತಿಕ ಬಾಂಧವ್ಯದಲ್ಲಿ “ಹೊಸ ಯುಗದ” ಆರಂಭವಾಗಿದೆ ಎಂದು ಹೇಳಿದರು. ಈ ದೇವಾಲಯವು ಭಾರತದ ಪ್ರಾಚೀನ ಆಧ್ಯಾತ್ಮಿಕ ಪರಂಪರೆ ಹಾಗೂ “ವಸುಧೈವ ಕುಟುಂಬಕಂ” ಎಂಬ ಜಾಗತಿಕ ಸಂದೇಶದ ಸಂಕೇತವಾಗಲಿದೆ ಎಂದು ಅಭಿಪ್ರಾಯಪಟ್ಟರು.
“ಇಂದು ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿ ಭವ್ಯವಾದ ಸ್ವಾಮಿನಾರಾಯಣ ಮಂದಿರ ಉದ್ಘಾಟನೆಯಾಗುತ್ತಿದೆ. ಇದು ಭಾರತ ಮತ್ತು ಫ್ರಾನ್ಸ್ ನಡುವಿನ ಸಾಂಸ್ಕೃತಿಕ ಸಂಬಂಧಗಳ ಹೊಸ ಯುಗವಾಗಿದೆ,” ಎಂದು ಮೋದಿ ತಮ್ಮ ವೀಡಿಯೊ ಸಂದೇಶದಲ್ಲಿ ತಿಳಿಸಿದರು.
ನೇರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಈ ಪವಿತ್ರ ಸಂದರ್ಭದೊಂದಿಗೆ ತಮಗೆ ಆಳವಾದ ಭಾವನಾತ್ಮಕ ನಂಟಿದೆ ಎಂದ ಅವರು, ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ತಮ್ಮ ಸೌಭಾಗ್ಯ ಎಂದು ಹೇಳಿದರು.
ಫ್ರಾನ್ಸ್ನ ಮೊದಲ ಕಲ್ಲಿನ ಹಿಂದೂ ದೇವಾಲಯ:
ಸೆನ್-ಎಟ್-ಮಾರ್ನ್ ಪ್ರದೇಶದ ಬಸ್ಸಿ-ಸೇಂಟ್-ಜಾರ್ಜಸ್ನಲ್ಲಿರುವ ಈ ಬಿಎಪಿಎಸ್ ಸ್ವಾಮಿನಾರಾಯಣ ಹಿಂದೂ ಮಂದಿರವು ಸಾಂಪ್ರದಾಯಿಕ ಶೈಲಿಯಲ್ಲಿ ಕಲ್ಲಿನಿಂದ ನಿರ್ಮಿಸಲಾದ ಫ್ರಾನ್ಸ್ನ ಮೊದಲ ಹಿಂದೂ ದೇವಾಲಯವಾಗಿದೆ. ಅಲ್ಲದೆ, ಇದು ಯುರೋಪ್ ಖಂಡದ ಮುಖ್ಯಭೂಮಿಯಲ್ಲಿ ಈ ಮಾದರಿಯಲ್ಲಿ ನಿರ್ಮಿಸಲಾದ ಅತಿ ದೊಡ್ಡ ಸಾಂಪ್ರದಾಯಿಕ ಹಿಂದೂ ದೇವಾಲಯ ಎಂದೆನಿಸಿಕೊಂಡಿದೆ.
ಈ ಭವ್ಯ ರಚನೆಯು ಭಾರತದಿಂದ ತರಲಾದ ಕಲಾತ್ಮಕವಾಗಿ ಕೆತ್ತಲಾದ ಕಲ್ಲುಗಳು ಮತ್ತು ಫ್ರೆಂಚ್ ಎಂಜಿನಿಯರಿಂಗ್ ತಂತ್ರಜ್ಞಾನದ ಸಮ್ಮಿಲನವಾಗಿದೆ. ಬಿಎಪಿಎಸ್ನ ಆಧ್ಯಾತ್ಮಿಕ ಗುರು ಮಹಂತ್ ಸ್ವಾಮಿ ಮಹಾರಾಜ್ ಅವರು 13 ದಿನಗಳ ಸಾಂಸ್ಕೃತಿಕ ಮಹೋತ್ಸವದ ನಡುವೆ ಈ ದೇವಾಲಯದ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದರು.
ಜಾಗತಿಕ ಸಾಂಸ್ಕೃತಿಕ ಕೊಡುಗೆ:
ಪ್ರಧಾನಿ ಮೋದಿ ಅವರು ದಿವಂಗತ ಪ್ರಮುಖ್ ಸ್ವಾಮಿ ಮಹಾರಾಜರ ದೂರದೃಷ್ಟಿಯನ್ನು ಸ್ಮರಿಸಿದರು. ಭಾರತದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಮಾನವೀಯ ಪರಂಪರೆಯನ್ನು ಜಗತ್ತಿನಾದ್ಯಂತ ಪಸರಿಸಲು ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. 2024 ರಲ್ಲಿ ಅಬುಧಾಬಿಯಲ್ಲಿ ಉದ್ಘಾಟನೆಗೊಂಡ ಬಿಎಪಿಎಸ್ ಹಿಂದೂ ಮಂದಿರವನ್ನು ಉಲ್ಲೇಖಿಸಿದ ಅವರು, ಇಂತಹ ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರದೆ, ಭಾರತದ ಪ್ರಾಚೀನ ತತ್ತ್ವಶಾಸ್ತ್ರ ಮತ್ತು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ತಲುಪಿಸುವ ಕೇಂದ್ರಗಳಾಗಿವೆ ಎಂದರು.
ಫ್ರಾನ್ಸ್ ಜೊತೆಗಿನ ನಿಕಟ ಬಾಂಧವ್ಯ ಹಾಗೂ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗಿನ ಗೆಳತಿಯನ್ನು ಸ್ಮರಿಸಿದ ಪ್ರಧಾನಿ, ಈ ದೇವಾಲಯವು ಫ್ರಾನ್ಸ್ನ ವೈವಿಧ್ಯತೆಯನ್ನು ಹೆಚ್ಚಿಸುವುದಲ್ಲದೆ, ಉಭಯ ದೇಶಗಳ ರಕ್ಷಣೆ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಶಕ್ತಿ ನೀಡಲಿದೆ ಎಂದರು.
ಕೊನೆಯಲ್ಲಿ, ಸಮಯ ಸಿಕ್ಕಾಗ ಪ್ಯಾರಿಸ್ನ ಈ ಹೊಸ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರಕ್ಕೆ ಖುದ್ದಾಗಿ ಭೇಟಿ ನೀಡುವುದಾಗಿ ಪ್ರಧಾನಿ ಮೋದಿ ಇಚ್ಛೆ ವ್ಯಕ್ತಪಡಿಸಿದರು.
